September 26, 2013

ಲಂಚ್ ಬಾಕ್ಸ್ / lunch box

Kabhi kabhi galat train bhi sahi jagah pahuncha deti hai” (Sometimes even a wrong train can get you to the right destination). ಕೆಲವೊಮ್ಮೆ ತಪ್ಪು ಟ್ರೈನ್ ಕೂಡ ನಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದೊಯ್ಯುವುದು. ಇದು ಲಂಚ್ ಬಾಕ್ಸ್ ಸಿನಿಮಾದ tag ಲೈನ್.
ಏನಿದು ಲಂಚ್ ಬಾಕ್ಸ್ ಅಂದು ಕೊಂಡಿರಾ?? ಹೌದು ನಾನು ಬ್ಲಾಗ್ ನಲ್ಲಿ ಆವಾಗಾವಾಗ ನಿಹಾಳ ಲಂಚ್ ಬಾಕ್ಸ್ ಬಗ್ಗೆ ಕೊರಿತಾ ಇರ್ತೀನಿ. ಆದರೆ ಇದು ಸಧ್ಯಕ್ಕೆ ಹೆಸರು ಮಾಡ್ತಾ ಇರುವ ಸಿನಿಮಾ ಲಂಚ್ ಬಾಕ್ಸ್ ಬಗ್ಗೆ.
ಸರಳ ಸುಂದರ, ಅಚಾನಕ್ಕಾದ ತಿರುವು ಮುರುವುಗಳಿಲ್ಲದ ಸಿನಿಮಾ, ನಿಮ್ಮನ್ನು ಎರಡು ಚಿಲ್ಲರೆ ಗಂಟೆ ಹಿಡಿತದಲ್ಲಿರಿಸುವ ಕಥಾನಕ ಇದರಲ್ಲಿದೆ. ಇಲ್ಲಿ ಸಿನಿಮಾದ ಪೂರ್ಣ ಕತೆ ಹೇಳಲ್ಲ. ಯಾಕಂದ್ರೆ ನೀವೆಲ್ಲ ಇದನ್ನು ನೋಡ ಬೇಕು. ಮುಖ್ಯವಾಗಿ ಇದರಲ್ಲಿ ಹಾಡಿಲ್ಲ.  mushy mushy ಲವ್ ಸ್ಟೋರಿ ಇಲ್ಲ. 
ಗಂಡನ ಹೃದಯಕ್ಕೆ ಹೊಟ್ಟೆಯೇ ದಾರಿ ಅಂದುಕೊಂಡು ರುಚಿರುಚಿಯಾದ ಅಡಿಗೆ ಮಾಡಿ ಕಳಿಸುವ ಇಳಾ. ಆದರೆ ಡಬ್ಬ್ಬಾವಾಲಾನ (ಮುಂಬೈ ಮತ್ತು ಡಬ್ಬಾವಾಲ ಬಗ್ಗೆ ಗೊತ್ತಿಲ್ಲದವರಿಗೆ- ಡಬ್ಬಾವಾಲ ಅಂತ ಸರ್ಚ್ ಕೊಟ್ಟರೆ ಇವರ ಬಗ್ಗೆ ನಿಮಗೆ ಗೂಗಲ್ ನಲ್ಲಿ ಧಾರಾಳವಾದ ಮಾಹಿತಿ ಸಿಗುತ್ತೆ) ಕೃಪೆ ಅದು ತಪ್ಪು ಮನುಷ್ಯನಿಗೆ ತಲುಪುತ್ತದೆ. ಅವನ ಹೆಸರು ಸಾಜನ್ ಫರ್ನಾಂಡಿಸ್.  ಆ ಸಂಸ್ಥೆಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ, ರಿಟೈರ್ ಮೆಂಟ್ ಗೆ ಕೆಲವೇ ತಿಂಗಳು ಇರುವ ವಿದುರ. ಇವರ ಮಧ್ಯೆ ಶುರುವಾಗುವ ಪತ್ರವ್ಯವಹಾರವೆ ಸಿನಿಮಾದ ತಿರುಳು.ಈ ಪತ್ರವನ್ನು ಲಂಚ್ ಬಾಕ್ಸ್ ಮೂಲಕ ಆ ಕಡೆಯಿಂದ ಈ ಕಡೆ and vice versa ರವಾನಿಸಲ್ಪಡುತ್ತದೆ. ಏಕತಾನತೆಯಿಂದ ಕೂಡಿದ ಬದುಕಿನಲ್ಲಿ ಸ್ವಲ್ಪ ರಂಗು ಬರಿಸುತ್ತದೆ ಈ ಪತ್ರವ್ಯವಹಾರ. ಇದೆಲ್ಲದರ ಮಧ್ಯೆ ಒಂದು ಇಂಟೆರೆಸ್ಟಿಂಗ್ ಪಾತ್ರ ಅಸ್ಲಮ್ ಶೇಕ್ ಮತ್ತು ಕೇವಲ ದನಿಮಾತ್ರದಿಂದ ಪರಿಚಯವಾಗುವ ಇಳಾನ ಮೇಲಿನ ಮನೆ flat ನಿವಾಸಿ ಶ್ರೀಮತಿ ದೇಶಪಾಂಡೆಯವರದ್ದು. ಸಿನಿಮಾದ ಮುಕ್ತಾಯವನ್ನು ನಮ್ಮ ನಿಮ್ಮ ಊಹೆಗೆ  imagination ಗೆ ಬಿಟ್ಟಿದ್ದಾರೆ. :-)
ನಂಗಿಷ್ಟ ಆಯಿತು. review ಎಲ್ಲ ಬರೆಯುವ ಕಲೆ ನನಗಿಲ್ಲ. ನೀವೆ ನೋಡಿ ಬಂದು ಹೇಗಿತ್ತು ಅಂತ ಹೇಳಿ.
ಈ ವೀಕ್ ಎಂಡ್ ನೀವು ನೋಡಿ ಬರಬಹುದು ಅಂತ ಇಲ್ಲಿ ಹಾಕ್ತಿದ್ದೇನೆ. ಏನೂ expectations ಇಟ್ಟುಕೊಳ್ಳದೇ ಹೋಗಿ
ಎಂಜಾಯ್.
ನನಗಿಷ್ಟವಾದ ಪೋಸ್ಟರ್

P.S: the lunch looked absolutely delicious........mmmmm
:-)

September 24, 2013

ನಿನ್ನೆ ಏನಾಯ್ತು ಗೊತ್ತಾ??

ಆಫಿಸ್ ನ ಸ್ವಲ್ಪ ಕೆಲಸ ಮತ್ತು ಮಿತ್ರರೊಬ್ಬರು ಹೇಳಿದ editing ಕೆಲಸ ಮುಗಿಸಿದಾಗ ಮಧ್ಯಾಹ್ನದ 3.30 ಗಂಟೆ. ಏನಾದರೂ ಓದುವ ಅಂದರೆ ಸಿಕ್ಕಿದ್ದು ತೀರ್ಥರಾಮ ವಳಲಂಬೆಯವರ 'ಮೃತ ಸಂಜೀವಿನಿ'. ನಮ್ಮ ರಾಯರು ತೀರ್ಥರಾಮ ಅವರ ಫ್ಯಾನ್. ಅವರ ಎಲ್ಲ ಪುಸ್ತಕಗಳು ನಮ್ಮಲ್ಲಿದೆ. (ಒಂದನ್ನು ಮಾತ್ರ ಸ್ನೇಹಿತೆಯ ಮೂಲಕ ಚಕ್ರವರ್ತಿ ಸೂಲಿಬೆಲೆ ಯವರಿಗೆ ಕೊಟ್ಟಿದ್ದು ಅವರಿಗೆ ತುಂಬಾ ಇಷ್ಟ ಆಗಿದ್ದಕ್ಕೆ ಅವರಿಗೇ ಅದನ್ನು ಉಡುಗೊರೆ  ಆಗಿ ಕೊಟ್ಟು ಬಿಟ್ಟೆ- ಇದನ್ನು ಬರೆಯುವಾಗ ನೆನಪಾಯ್ತು. ಇನ್ನೊಂದು ಪ್ರತಿಯನ್ನು  ತಂದು replace ಮಾಡಬೇಕು :-)) ಮೊನ್ನೆ ಅಂಕಿತಾಗೆ ಹೋದಾಗ ಇನ್ನೊಂದಿಷ್ಟು ಪುಸ್ತಕ ತಂದಿದ್ವಿ. ಅದರಲ್ಲೊಂದು ಈ ಪುಸ್ತಕ.
ತೀರ್ಥರಾಮ ಅವರ ಪುಸ್ತಕ ತಂದ ಕೂಡಲೆ ನಾನು ಅದರ ಹಿಂಪುಟ ಓದಿ, ಅದರೊಳಗಿನ ಚಿತ್ರಗಳನ್ನು ನೋಡಿ ಇಡುವುದು ಮಾಮೂಲು.ಅವರ ಬರಹಗಳಿಗೆ ಅವರೇ ರೇಖಾಚಿತ್ರ, ಮುಖಪುಟ ಎಲ್ಲ ಸಿದ್ದಪಡಿಸುತ್ತಾರೆ. ಸಿಕ್ಕಾಪಟ್ಟೆ ಟ್ಯಾಲೆಂಟಡ್ ಮಾತ್ರ ಅಲ್ಲ ಬರಹದ ಕಲೆ ತುಂಬಾ ಚೆನ್ನಾಗಿ ಸಾಧಿಸಿದೆ. ಸುಮ್ನೆ diagonal reading ಮಾಡಿ impress ಆಗಿದ್ದೇನೆ. ಅವರ ಪುಸ್ತ್ಕಕಗಳನ್ನೆಲ್ಲ ನನಗೆ 45 ಆದ ನಂತರ ಓದಲು ಪ್ರಾರಂಭಿಸುತ್ತೇನೆಂದುಕೊಂಡಿದ್ದೇನೆ . ಆದರೆ ಈ ಪುಸ್ತಕ ಓದಿಸಿಕೊಂಡು ಹೋಯ್ತು. ಓದ್ತಾ ಮಧ್ಯದಲ್ಲಿ ಮಕ್ಕಳಿಗೆ ಬಾಸುಂದಿ ಮಾಡಿಕೊಡುತ್ತೇನೆಂದು ಪ್ರಾಮಿಸ್ ಮಾಡಿದ್ದು ನೆನಪಾಗಿ ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಗ್ಯಾಸ್ ಮೇಲಿಟ್ಟು ಬಂದೆ. ಇನ್ನು ಕೆಲವು ಪುಟಗಳನ್ನು ಓದುವಷ್ಟರಲ್ಲಿ ಅಲ್ಲೆ ಕುಳಿತಿದ್ದ ನಿಹಾ, 'ಅಮ್ಮ, ನನಗೆ ಪೆಡಿಕ್ಯೂರ್ ಮಾಡ್ತೀಯಾ ಅಂತ ಕೇಳಿದ್ಲು. ನನಗೆ ಇಷ್ಟ ನನ್ನ ಮನೆಯವರಿಗೆಲ್ಲ ಪೆಡಿಕ್ಯೂರ್ ಮಾಡೋದು. ಸರಿ  ಟಬ್ ನ ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಶ್ಯಾಂಪು ಹಾಕಿ ಅದರಲ್ಲಿ ಸ್ವಲ್ಪ ಬಾತ್ salt ಬೆರೆಸಿ ನಿಹಾಗೆ ಅದರಲ್ಲಿ ಕಾಲು ಇಳಿಬಿಡಲು ಹೇಳಿದೆ. ಸಿಸ್ಟಮ್ ನಲ್ಲಿ ಕಿಶೋರಿ ಅಮೋನ್ಕರ್ ಅವರ 'ಸಹೆಲಾ ರೆ' ಹಾಕ್ಕೊಂಡಿದ್ದೆ.
"ಅಮ್ಮ, ನಿನಗೆ ಕಿಶೋರಿ ಅಮೋನ್ಕರ್ ಇಷ್ಟ ಆಗುತ್ತಾರಾ?"
ನಾನು - ಹೂಂ. ನಿನಗೆ??
"ಅವರದ್ದು nasal ವಾಯ್ಸ್. ನನಗದು ಅಷ್ಟು ಇಷ್ಟ ಆಗಲ್ಲ'
ನಾನು- 'ನೀಹಾ ಮೊನ್ನೆ ಅಶ್ವಿನಿ ಭಿಡೆ ಕಾರ್ಯಕ್ರಮ ಚೆನ್ನಾಗಿತ್ತಂತೆ, ರವೀಂದ್ರ ಫೋನ್ ಮಾಡಿದ್ರು. ನಾವು ಆ ಬಂಡಲ್ ನಾಟಕಕ್ಕೆ ಹೋಗುವುದಕ್ಕಿಂತ ಅಶ್ವಿನಿ ಭಿಡೆ ಕಾನ್ ಸರ್ಟ್ ಎಟೆಂಡ್ ಮಾಡಬಹುದಿತ್ತು ನೋಡು."
ನಿಹಾ ತನ್ನ economics assignment ಮಾಡ್ತಾ ಕೂತಳು.
ನಾವು ಹೋಗಿದ್ದು the gossips of 47 ಎನ್ನುವ ಹಿಂದಿ ನಾಟಕಕ್ಕೆ. ಸದತ್ ಹಸನ್ ಮಾಂಟೋ ರವರ ಸಣ್ಣ ಕತೆಗಳನ್ನು ಆಧರಿಸಿದ ನಾಟಕ. ಆದರೆ ಕತೆಗಳಲ್ಲಿನ ಪಂಚ್ ನಾಟಕದ ಮುಖೇನ ನೀಡುವಲ್ಲಿ ಆ ತಂಡ ವಿಫಲವಾಯಿತು. ಯಾವುದೇ ಹಿಂದಿ ಶೋ ನಾವು ರಂಗಶಂಕರದಲ್ಲಿ ಈ ಹಿಂದೆ ನೋಡಿರಲಿಲ್ಲ. ಅದಕ್ಕೆ ಹೋಗಿದ್ವಿ. ಪ್ಲಸ್, ನಿಹಾಳ ಫ್ರೆಂಡ್ ಮತ್ತು ತಂದೆ ತಾಯಿ ಕೂಡ ಬರುವವರಿದ್ದರು. ಖುಶಿಯಾಯ್ತು ನನಗೆ ಅವರ ಜತೆ ಹಿಂದಿಯಲ್ಲಿ ಸಂಭಾಷಿಸಲು. ಫ್ರೆಂಡ್ ತಂದೆಗೆ Geological survey of India ದಲ್ಲಿ  ಕೆಲಸ. ಕುಮಾರಕೄಪಾ ರೋಡ್ ನಲ್ಲಿ ಮನೆಯಂತೆ. ಹಿಂದಿನ ಸಲ ಅವರು 'ಬಿಖರೆ ಬಿಂಬ್' ನಾಟಕಕ್ಕೆ ಬಂದು ಟಿಕೆಟ್ ಸಿಗದೆ, ಮಳೆರಾಯನ ಕೃಪೆಯಿಂದಾಗಿ, ನಾಟಕ ನೋಡುವವರು ನಾಟಕ ನೋಡಿ ಹೊರಗೆ ಬಂದರೂ, ಇವರು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದನ್ನು ಶೇರ್ ಮಾಡಿದರು.
'ಆಪನೆ 'ಪಾ' ಫಿಲ್ಮ್ ದೇಖಿ ಹೈ? ಉಸ್ಮೆ ಜೋ ಮಾ ಕಾ ರೋಲ್ ಕಿಯಾ ಹೈ ನಾ, ಮೈನೆ ಉನ್ಹೆ ಯಹಾಂ ದೇಖಾ' ಅಂತ ತುಂಬ excite ಆಗಿ ನಿಹಾ ನ ಫ್ರೆಂಡ್ ಅಮ್ಮ ಹೇಳಿದರು. ಅವರು ಮಾತು ಮುಗಿಸಿದ ಮೇಲೆ, ರಂಗ ಶಂಕರ ಅವರದ್ದೆ ಸಂಸ್ಥೆ ,ಅವರ ದಿವಗಂತ ಪತಿಯ ಹೆಸರಿನಲ್ಲಿ ಸಂಸ್ಥಾಪಿಸಿದ್ದು ರಂಗ ಶಂಕರ ಅಂತ ಹೇಳಿದೆ. ಅವರು ತೀರಾ ಇತ್ತೀಚಿಗೆ ಜೈಪುರ್ ದಿಂದ ಬೆಂಗಳೂರಿಗೆ ವರ್ಗವಾಗಿ ಬಂದಿದ್ದಾರೆ. 
 ಅದರಲ್ಲಿನ ಪಾತ್ರ ಮಾಡಿದ ಒಬ್ಬ ಹುಡುಗನ ಮಿಮಿಕ್ರಿ ಮಾಡಿ ನಿಹಾ ನ ನಗಿಸಿದೆ. ಪೆಡಿಕ್ಯೂರ್ ಮುಗಿಸಿ, ಕಿಶೋರಿ ತಾಯಿ ಯ ಇನ್ನೊಂದೆರಡು ಹಾಡು- ಅವಘಾ ರಂಗ್ ಎಕ್ ಝಾಲಾ', ಆಯಿ ರೆ ಬದರಿಯಾ ಕಾರಿ ಕಾರಿ, ಕೇಳುವಷ್ಟರಲ್ಲಿ , ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಸಮಯ ನೋಡಿದ್ರೆ 9.15. ಬಾಸುಂದಿ ರೆಡಿಯಾಗಿತ್ತು. ಅದಕ್ಕೆ ಸಕ್ಕರೆ ಬೆರೆಸಿ, ಸ್ತ್ಟವ್ ಆಫ್ ಮಾಡಿ, ಏಲಕ್ಕಿ ಕುಟ್ಟಿ, ದ್ರಾಕ್ಷಿ ಗೋಡಂಬಿ ಮೈಕ್ರೋವೇವಿಸಿ ಹಾಕಿ, ಫೋಟೊ ತೆಗೆದು, ಮಕ್ಕಳು ಊಟದ ನಂತರ ಅದನ್ನು ತಿನ್ನುವ ಹಾಗೆ ಫ್ರಿಜ್ ನಲ್ಲಿಟ್ಟೆ. ಅನ್ನದ ಪಾತ್ರೆ ಬಿಸಿ ಮಾಡಲು ತೆರೆದರೆ ಅದರಲ್ಲಿ ತುಂಬ ಕಡಿಮೆ ಅನ್ನ ಇತ್ತು. ಅನ್ನ ಮಾಡಿಕೊಳ್ಳುವಷ್ಟು ವ್ಯವಧಾನ ಇರಲಿಲ್ಲ.

ಆಗ ಆಪತ್ಬಾಂಧವ ಮ್ಯಾಗಿಯ ನೆನಪಾಯ್ತು. ಕೂಡಲೆ ಒಂದು ಚಿಕ್ಕ ನೀರುಳ್ಳಿ ಕಚಕಚನೆ ಚಕಚಕನೆ ಕಟ್ ಮಾಡಿದೆ, ಎರಡು ಬೆಳ್ಳುಳ್ಳಿ ಜಜ್ಜಿದೆ, ಫ್ರಿಜ್ ನಲ್ಲಿ ಫ್ರೋಜನ್ ಸ್ವೀಟ್ ಕಾರ್ನ್ ನೋಡಿದೆ. ಅದನ್ನು ಹೊರ ತೆಗೆದೆ. ಎಣ್ಣೆ ಬಿಸಿ ಮಾಡಿ ನೀರುಳ್ಳಿ - ಬೆಳ್ಳುಳ್ಳಿ ಹಾಕಿ ಕೈ ಆಡಿಸಿದೆ. ನಾಲ್ಕು ಹಸಿಮೆಣಸು ಹಾಕಿದೆ. ಅದಕ್ಕೆ ಒಂದು ಹಿಡಿ ಸ್ವೀಟ್ ಕಾರ್ನ್ ಬೆರೆಸಿ ಘಂ ಅನ್ನುವ ಪರಿಮಳ ಬರುತ್ತಿದ್ದ ಹಾಗೆ ನೀರು ಹಾಕಿದೆ. ಇಂಡಕ್ಷನ್ ಸ್ಟವ್ ಆದ್ದರಿಂದ ಅರ್ಧ ನಿಮಿಷಕ್ಕೆ ನೀರು ಕುದಿಯಲು ಶುರು. ಅದಕ್ಕೆ ಮ್ಯಾಗಿ ಮಸಲಾ ಪ್ಯಾಕ್ ನಿಂದ ಮಸಾಲೆ ಹಾಕಿದೆ. ಆಮೇಲೆ ನೂಡಲ್ಸ್ ಸೇರಿಸಿದೆ. ಫೋಟೊಗೋಸ್ಕರ ಕೊತ್ತಂಬರಿ ಸೊಪ್ಪಿನ ಶೋ off ಮಾಡಿದೆ. ತುಂಬಾ ಟೇಸ್ಟೀಯಾಗಿತ್ತು. ನನ್ನ ಬ್ಯಾಚಲರ್ ಬ್ಲಾಗ್ ಓದುಗ ತಮ್ಮಗೋಳ್ ಇದನ್ನು ಆರಾಮಾಗಿ ತಯಾರಿಸಿ ತಿನ್ನಬಹುದು.
ರಾಯರಂತು ಎರೆಡೆರಡು ಸಲ ಹಾಕಿಸಿಕೊಂಡು ತಿಂದ್ರು. ಎಷ್ಟು ಎಂಜಾಯ್ ಮಾಡಿದ್ವಿ ನಿನ್ನೆಯ ಡಿನ್ನರ್.

ರಾತ್ರಿ ನಿದ್ರೆ ಇಲ್ಲದೆ ಒಂದು ನ್ಯಾನೋ ಕತೆ ಹುಟ್ಟಿಕೊಂಡಿತು :
ಮಿತ್ರರಿಬ್ಬರು ಮಾತುಕತೆ ಆಡುತ್ತ ನಗುತ್ತ ಇದ್ದ ಹಾಗೆ ಬಾಗಿಲು ದಡದಡ ಸದ್ದು ಮಾಡಿತು. ಇವರ ರೂಂ ಗೆ ಆವಾಗಾವಾಗ ಮಿತ್ರರು ಭೇಟಿ ನೀಡುತ್ತಿದ್ದರಾದ್ದರಿಂದ ಆ ರಾತ್ರಿ ಅವರು ಯಾವತ್ತಿನ ಹಾಗೆ ಬಾಗಿಲು ತೆರೆದರು. ಬಂದೂಕು ಧಾರಿಯೊಬ್ಬ ಬಾಗಿಲು ತೆಗೆದವನನ್ನು ನೂಕಿ ಒಳಗೆ ಬಂದ
"ನಿನ್ನ ಹೆಸರೇನು?'
"ಪದ್ಮನಾಭ"
" ಸರಿ. ಆ ಕಡೆ ಸರಿ"
ಇನ್ನೊಬ್ಬ ರೂಂ ಮೇಟ್ ನನ್ನು ಉದ್ದೇಶಿಸಿ
'ನಿನ್ನ ಹೆಸರು'?
"ಸಾಹಿಲ್ ಖುರ್ಶೀದ್"
ಆಗ ಪದ್ಮನಾಭ "ಏನಲೇ ನೀನು ಮುಸ್ಲಿಮ್ ಆ? ಐದು ವರ್ಷ ಒಟ್ಟಿಗಿದ್ದರೂ ಇವತ್ತೆ ಗೊತ್ತಾಗಿದ್ದು ಅಂತ ಆಶ್ಚರ್ಯದಿಂದ ಕೇಳಿದ
ಬಂದೂಕುಧಾರಿ ಸಾಹಿಲ್ ನ ಎದೆಗೆ ಬಂದೂಕು ಗುರುಯಿಟ್ಟ. ಕೂಡಲೆ ಪದ್ಮನಾಭ ಸಾಹಿಲ್ ಗೆ ಎದುರಾಗಿ ನಿಂತು ನನ್ನ ಸ್ನೇಹಿತನನ್ನು ಕೊಲ್ಲುವ ಮೊದಲು ನಾನು ಸಾಯಬೇಕು
ಬಂದೂಕುಧಾರಿ ಗುಂಡಿ ಒತ್ತಿಯೇ ಬಿಟ್ಟ. ಒಂದೆ ಬುಲೆಟ್ ಇಬ್ಬರ ಹೃದಯ ಸೀಳಿ ಹಿಂದಿನ ಗೋಡೆಗೆ ಬಡಿಯಿತು. ಮಿತ್ರರಿಬ್ಬರೂ ಕುಸಿದರು. ಇಬ್ಬರ ರಕ್ತ ಕೂಡಿ ಕೋಡಿಯಾಗಿ ಹರಿಯಿತು, ಯಾವ್ ರಕ್ತ ಯಾರದ್ದು ಅನ್ನುವುದರ ಪರಿವೆಯೇ ಇಲ್ಲದೆ.
moral of the story is: ರಾತ್ರಿ ಮ್ಯಾಗಿಯಲ್ಲಿನ ಹಸಿಮೆಣಸು ತಿಂದು ಹೊಟ್ಟೆ ಉರಿದು ಇಂತಹ ಕತೆಗಳು ಹುಟ್ಟುವ ಸಂಭವವಿದೆ ಆದ್ದರಿಂದ ಹಸಿಮೆಣಸು ತಿನ್ನಬಾರದು.
ಅಷ್ಟೆ ಕಣ್ರೀssss........ನನ್ನ ಬ್ಲಾಗ್ ಗೊಂದು ಹೂರಣ ಕೂಡ ಸಿಕ್ಕಿತ್ತು
ನಿನ್ನೆಯ ದಿನಚರಿ

September 21, 2013

ನನಗಿಷ್ಟವಾದ ಕೆಲ ಮಾರಾಠಿ ಸಿನಿಮಾಗಳ ಪಟ್ಟಿ

ಗಂಧ (the Smell) ಇದನ್ನು ಮೊದಲಿಗೆ ನೋಡಬಹುದು. ಮೂರು ಕತೆಗಳು ಸೇರಿ ಒಂದು ಸಿನಿಮಾ. ಮೂರು ಕತೆಗಳಿಗೆ common factor (ಸು)-ವಾಸನೆ ಇದಕ್ಕೆ English ಸಬ್ ಟೈಟಲ್ ಇದೆ
http://www.youtube.com/watch?v=3HtsY7kAjoE

ಏಕ ಕಪ್ ಚ್ಯಾ (ಒಂದು ಕಪ್ ಚಹಾ)- ಮಾಹಿತಿ ಹಕ್ಕು ಕಾಯ್ದೆ (Right to Information Act)ವಿಷಯವನ್ನು ನೆಯ್ದು ಕೊಂಡು ಹಣೆದ ಒಂದು ಚೆಂದದ ಕತೆ.
http://www.youtube.com/watch?v=6fR0ZW9Z2lk

ನಿಜಕ್ಕೂ ಒಂದು ಫೀಲ್ ಗುಡ್ ಮೂವಿ - ಮಸಾಲಾ. ಮನಸ್ಸಿದ್ದರೆ ಮಾರ್ಗ ಅಥವಾ try until you succeed ಎಂಬ ನಾನ್ನುಡಿಯನ್ನು ನಿಜವಾಗಿಸುತ್ತದೆ 'ಮಸಾಲಾ'. ಸ್ವಲ್ಪ ಕನ್ನಡ ಕೂಡ ಇದೆ ಇದರಲ್ಲಿ
http://www.youtube.com/watch?v=sluLNpgJmSU

ಆಜ್ ಚಾ ದಿವಸ್ ಮಾಝಾ: (ಇವತ್ತಿನ ದಿನ ನನ್ನದು). ಮುಖ್ಯ ಮಂತ್ರಿಯ ಜೀವನದಲ್ಲಿ ನಡೆದ ಒಂದು ದಿನದ ಘಟನೆ.
http://www.youtube.com/watch?v=Rm7Iy_gauig

ಮಾಟಿಚ್ಯಾ ಚುಲಿ (ಮಣ್ಣಿನ ಒಲೆ) ಅತ್ತೆ ಸೊಸೆಯ ಕಹಾನಿ ಬಟ್ with a twist........100% enjoyment, ಸಖತ್ ಸಂಭಾಷಣೆಗಳು :-)
http://www.youtube.com/watch?v=o6JIxBJdXR0

ಮುಂಬೈ-ಪುಣೆ-ಮುಂಬೈ (mumbai-pune-mumbai) ಅಂಥ ಇಂಥ ಲವ್ ಸ್ಟೋರಿ ಅಲ್ಲ ಇದು :( just an idea: Bangalore-Mysore-Bangalore ಅನ್ನುವ ಸಿನಿಮಾ ಮಾಡಬಹುದು ಅನ್ನಿಸುತ್ತೆ)
http://www.youtube.com/watch?v=jblvKuq_a_k

ಪ್ರೇಮಾಚಿ ಗೋಶ್ಟ್ (ಒಂದು ಪ್ರೇಮದ ಕತೆ) ಇನ್ನೊಂದು ಲವ್ ಸ್ಟೋರಿ ನೇ but zara haT ke: dekho to jano:
http://www.youtube.com/watch?v=jTa0UTbbI0U

ಮೊದಲೆಲ್ಲ ತಮ್ಮಂದಿರಿಗೆ ಮರಾಠಿ ಸಿನಿಮಾಗಳ ಸಿಡಿ/ಡಿವಿಡಿ ಕಳಿಸಲು ಪೀಡಿಸುತ್ತಿದ್ದೆ. ಬೆಂಗಳೂರು ಅಂತರ್ ರಾಷ್ಟ್ರೀಯ ಸಿನಿಮಹೋತ್ಸವದಲ್ಲಿ ನನಗೆ ನಿಹಾ ಗೆ 'ಸಂಹಿತಾ' ಎನ್ನುವ ಸಿನಿಮಾ ನೋಡುವುದು ಮಿಸ್ ಆಗಿತ್ತು. ಆ ಸಿನಿಮಾ ಬಗ್ಗೆ ಗೂಗಲ್ ಸರ್ಚ್ ನಲ್ಲಿ ಹುಡುಕುತ್ತಿದ್ದಾಗ ನನಗೆ you-tube ನಲ್ಲಿ ಈ ಸಿನಿಮಾಗಳ online ಕೊಂಡಿ ಸಿಕ್ಕಿತು. ಆಮೇಲೆ ನಿಹಾ ಕಾಲೇಜ್ ಹೋಗುವ ಮುನ್ನ 'ಅಮ್ಮ ಎಂಜಾಯ್ ಯುವರ್ ಮರಾಠಿ ಫಿಲ್ಮ್ ಫೆಸ್ಟಿವಲ್' ಅಂತ ಹಾರೈಸಿ ಹೋಗುತ್ತಿದ್ದಳು. ಮರಾಠಿ ಸಿನಿಮಾ has grown in recent times.   ರಜೆಯನ್ನು ಎಂಜಾಯ್ ಮಾಡಿ. ದಸರಾ- ದೀಪಾವಳಿ ರಜೆಯಲ್ಲಿ ನೋಡಬಹುದು. ಮೇಲೆ ಕೊಟ್ಟಿರುವ ಎಲ್ಲ ಸಿನಿಮಾ happy ending ಗಳೇ......
:-)

September 15, 2013

ಆಲೂ ಪರಾಠಾ

ನೀರುಳ್ಳಿ price rise ಇದ್ದಾಗ ಮಾತ್ರವಲ್ಲ, ಯಾವಾಗ ಬೇಕು ಆವಾಗ ಮಾಡಬಹುದು. ಲಂಚ್ ಬಾಕ್ಸ್, ಟ್ರಿಪ್/ಪಿಕ್ ನಿಕ್ ಗಳಿಗೆಲ್ಲ ಮಾಡಿ ಒಯ್ಯಬಹುದು. 
ನೀರುಳ್ಳಿ ಅಂದಾಗ ನನಗೆ ನೆನಪಿಗೆ ಬರುವುದು: ನಾನು ಮುದುವೆಯಾಗಿ ಮುಂಬೈನಿಂದ ತೀರ್ಥಹಳ್ಳಿಗೆ ಬಂದಾಗ, ತೀರ್ಥಹಳ್ಳಿಯಲ್ಲಿ ನೀರುಳ್ಳಿ ಬೆಳ್ಳುಳ್ಳಿ ತಿನ್ನಲ್ಲ ಅಂದಾಗ ನಾನು ಫುಲ್ ಟೆನ್ಸ್. 365 ದಿನ , ದಿನದ ಮೂರು ಮೀಲ್ಸ್ (ತೀರ್ಥಹಳ್ಳಿಯಲ್ಲಿ ಸಂಜೆ ತಿಂಡಿಯ ಪರೀಪಾಠ ಕೂಡ ಇತ್ತು) without ನೀರುಳ್ಳಿ ಬೆಳ್ಳುಳ್ಳಿ, ಹೇಗೆ ಮಾಡ್ತಾರಪ್ಪ, ಹೇಗೆ ಇರ್ತಾರಪ್ಪ ಅಂದುಕೊಂಡಿದ್ದೆ. ಪ್ಲಸ್ ಮನೆಯಲ್ಲಿ ಖಾರ ಬಳಸುವುದು ಕಡಿಮೆ. ನನಗೆ ಮುಂಬೈನಲ್ಲಿ ಅಮ್ಮ ಅಡಿಗೆ ಖಾರ ಮಾಡಿದ್ದಷ್ಟು ಸಾಕಾಗ್ತಿರಲಿಲ್ಲ. ಕಿವಿಯಿಂದ ಹೊಗೆ ಬರಬೇಕು ಅಷ್ಟು ಖಾರದ ಪದಾರ್ಥತಿನ್ನುವ ನನಗೆ, ಪೂರ್ತಿ ಮೂರು ನಾಲ್ಕು ತಿಂಗಳು ಹಿಡಿತು ಶ್ರೀಕಾಂತರ ಮನೆ ಅಡಿಗೆಗೆ ಹೊಂದಿಕೊಳ್ಳಲು. ಸುಮ್ಮನೆ ಶೇರ್ ಮಾಡಿದೆ.ಈಗ ಈರುಳ್ಳಿ ಬೆಳ್ಳುಳ್ಳಿ ಹಾಕದೆ ಅಡಿಗೆ ಮಾಡುವುದರಲ್ಲಿ ನಾನು 'ಎತ್ತಿದ ಕೈ'....:-)
ಆಲೂ ಪರಾಠಾ ಮಾಡಲು:
ಬೇಯಿಸಿದ್ದ ಆಲೂಗಡ್ಡೆ- 4
ಸಣ್ಣಕ್ಕೆ ಕೊಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಮೇಲಿನ ಕೊಚ್ಚಲು, ಅರಿಸಿನ ಪುಡಿ ಮತ್ತು ಹಿಂಗು ಪುಡಿ

ಮಾಡುವ ವಿಧಾನ:
ಆಲುಗಡ್ದೆಯ ಸಿಪ್ಪೆ ಸುಲಿದು, ತುರಿದಿಟ್ಟು ಕೊಳ್ಳಿ.
ಎಣ್ಣೆ ಒಗ್ಗರಣೆಗೆ ಇಟ್ಟು, ಅದಕ್ಕೆ ಸಾಸಿವೆ ಕರಿಬೇವು+ಹಸಿಮೆಣಸಿಕಾಯಿ+ ಕರಿಬೇವು ಕೊಚ್ಚಲು ಸೇರಿಸಿ, ಆಮೇಲೆ ಹಿಂಗಿನ ಪುಡಿ, ಅರಿಸಿನ ಪುಡಿ ಬೆರೆಸಿ.

ಇದನ್ನು ತುರಿದಿಟ್ಟ ಆಲೂಗಡ್ಡೆಗೆ , ಉಪ್ಪಿನ ಜತೆ ಬೆರೆಸಿಟ್ಟುಕೊಂಡು stuffing ತಯಾರಿಸಿಟ್ಟುಕೊಳ್ಳಿ.

ಗೋದಿ ಹಿಟ್ಟಿನಿಂದ ಮೃದುವಾದ ಹಿಟ್ಟು ಕಲಸಿಟ್ಟುಕೊಳ್ಳಿ.
ಚಪಾತಿಯನ್ನು ಚಿಕ್ಕದಾಗಿ ಲಟ್ಟಿಸಿ, ಒಂದು ಸ್ಪೂನ್ ಸ್ಟಫಿಂಗ್ ಇಟ್ಟು ಪುನ: ಉರುಟು ಮಾಡಿ, ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿ, ಎಣ್ಣೆ ಹಾಕಿ ಎರಡೂ ಬದಿ ಕೆಂಪಗಾಗುವ ತರಹ ಬೇಯಿಸಿ.

ಇದನ್ನು ಬಿಸಿಯಿದ್ದಾಗಲೇ ಯಾವುದೇ ಸೈಡ್ ಸ ಇಲ್ಲದೇ ತಿನ್ನಬಬಹುದು. or ಇದಕ್ಕೆ ಬೆಣ್ಣೆ, ಲಿಂಬೆ ಹಣ್ಣಿನ ಉಪ್ಪಿನ ಕಾಯಿ ಚೆನ್ನಾಗಿರುತ್ತೆ.
ನಾನು ಕೊತ್ತಂಬರಿ ಸೊಪ್ಪು+ ಪುದಿನಾ ಸೊಪ್ಪಿನ ಡಿಪ್ ತಯಾರಿಸಿದೆ
ಇದನ್ನು ಮಾಡುವ ವಿಧಾನ:
ಸ್ವಲ್ಪ ಮೊಸರನ್ನು ಮಲ್ ಬಟ್ಟೆಯಲ್ಲಿ ಕಟ್ಟಿಡಿ. ನೀರೆಲ್ಲ ಬಸಿದು ಹೋಗಲಿ.
ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ನೈಸ್ ಆಗಿ ರುಬ್ಬಿ, ಇದಕ್ಕೆ ಗಟ್ಟಿಯಾದ ಮೊಸರು(ಕಟ್ಟಿಟ್ಟ ಮೊಸರು) ಬೆರೆಸಿ ಇನ್ನೊಂದು ಸುತ್ತು ರುಬ್ಬಿ. ಉಪ್ಪು ಸಕ್ಕರೆ ಬೆರೆಸಿ. ನಿಮ್ಮ ಡಿಪ್ ತಯಾರ್.
ಎಂಜಾಯ್
:-)

September 12, 2013

ಜೀವನ (ವೈ) ಚಿತ್ರಗಳು


ಚಿತ್ರ- 1
ಊರಲ್ಲಿ ಕುಟುಂಬದಲ್ಲಿ ಮದುವೆ. 'ಅಮ್ಮ ನೀನು, ಅಪ್ಪ ತಂಗಿ ಎರಡು ದಿನ ಮೊದಲೇ ಹೋಗಿರಿ. ನಾನು ಮದುವೆ ದಿನ ತಲುಪುತ್ತೀನಿ. ನನಗೆ ಹೆಚ್ಚಿನ ರಜೆಯಿಲ್ಲ' ಅಂದ ಹುಡುಗ. ಅಲ್ಲಿ ಮದುವೆಯಮೂಹೂರ್ತದ ಸಮಯದಲ್ಲೂ ಮಗ ನಾಪತ್ತೆ. ಬಂದಿದ್ದು ಬೆಂಗಳೂರಿನಿಂದ ಕರೆ 'ನಿಮ್ಮ ಮಗ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಅಂತ. ಪ್ರೇಮ ವೈಫಲ್ಯ ಕಾರಣವಂತೆ. ಅವನು ಸತ್ತು ಯಾರಿಗೆ ಎನು ಉಪಯೋಗ ವಾಯ್ತು. ಜೀವದಿಂದಿದ್ದು ತನಗೋಸ್ಕರ ಅಲ್ಲದಿದ್ದರೂ ಇತರರಿಗೆ ಉಪಯೋಗವಾಗುವಂತಹದ್ದು ಏನಾದರೂ ಮಾಡಿ ಬದುಕಬಹುದಿತ್ತು. ಛೆ.

ಚಿತ್ರ-2
ಅವರಿಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ಅತ್ಯಂತ ಪ್ರೇಮ. ಆಗಲೇ ಒಂದು ದಿನ ಅವನಿಗೆ ಮಾರಣಾಂತಿಕ ಹೃದಯ ಸಂಬಂಧಿ ಕಾಯಿಲೆ ಅಂತ ಗೊತ್ತಾಗಿದ್ದು. ಟಿಕ್ಕಿಂಗ್ (ticking) ಟೈಮ್ ಬಾಂಬ್ ತರಹ ಹೃದಯ ಯಾವಾಗ ಸ್ಪೋಟಗೊಳ್ಳುತ್ತೋ ಗೊತ್ತಿಲ್ಲ ಅಂತ ಹೇಳಿದರು ಡಾಕ್ಟರ್. ವಿಷಯ ತಿಳಿದ ಅವಳ ಅಪ್ಪ'ಅವನಿಗೆ ನಿನ್ನನ್ನ ಮದುವೆ ಮಾಡಿ ಕೊಡುವುದರ ಬದಲು ನಿನ್ನ ಕುತ್ತಿಗೆ ಹಿಚುಕಿ ಕೊಲ್ಲುವುದು ಲೇಸು, ಅಂತ ಅಬ್ಬರಿಸಿದ. ಇವಳಿಗೀಗ ನಿದ್ದೆಯಿಲ್ಲ ಅಂತ ಅವನಿಗೆ ಚಿಂತೆ, ಅವಳಿಗೆ ಅವನು ಮಲಗಿ ಇನ್ನು ಏಳದಿದ್ದರೆ ಎನ್ನುವ ಚಿಂತೆಯಿಂದ ಇಬ್ಬರೂ ಹೈರಾಣು.

ಚಿತ್ರ-3
ನಾವು ಆ ಊರಲ್ಲಿ 5 ವರ್ಷಗಳ ಕಾಲ ಇದ್ದೆವು. ಅವರು ದಿನಾ ಸಂಜೆ ನಮ್ಮ ಮನೆಗೆ. ಬಂದು ಮಾಲವಿಕಾಳ ಜತೆ ಆಟ. ಅವರ ಮನೆ ಮಾತು ತುಳು ಆದರೂ ಅವರಿಗೆ ಗೊತ್ತಿದ್ದ ಕೊಂಕಣಿಯಲ್ಲಿ ಮಾಲವಿಕ ಜತೆ ಮಾತಾಡಿ ಮಾತಾಡಿ ಮಾಲವಿಕ ಕೊಂಕಣಿ ಕಲಿಯುವ ಹಾಗಾಯ್ತು. ಆಫಿಸ್ ಬಿಟ್ಟ ಕೂಡಲೆ (ಅವರು ಶ್ರೀಕಾಂತ ಕಲೀಗ್) ಅವರು ನಮ್ಮ ಮನೆಗೆ ಬಂದು ಮಾಲು ಜತೆ ಕಿಚ ಪಿಚ ಮಾತು ನಡೆಸ್ತಿದ್ದರೆ ನಾನು ನನ್ನ ಬ್ಯಾಚುಲರ್ಸ್ ಡಿಗ್ರೀ (?) ಪರೀಕ್ಷೆಗೆ ಓದುತ್ತಿದ್ದೆ. ಮಾಲವಿಕಾಗೆ ಅವರ ಹೆಸರು ಪೂರ್ತಿ ಹೇಳಲು ಬಾರದೆ ಅವರಿಗೆ ಪೇ ಆಂಟಿ ಅಂತ ಸಂಭೋಧಿಸುತ್ತಿದ್ದಳು. ಅವರು ಅವಳಿಗೆ 'ಪುಟ್ಟಮ್ಮ' ಅಂತ ಕರೆಯುವರು. 5.30 - 6.00 ಆಗುತ್ತಿದ್ದಂತೆ ಶ್ರೀಕಾಂತ ಮತ್ತು ಅವರ ಹಲವಾರು ಮಿತ್ರರು ನಮ್ಮ ಮನೆಗೆ. ನನಗೆ ಓದಿನಿಂದ ಬ್ರೇಕ್. ಅವರೆಲ್ಲರ ರಾತ್ರಿ ಊಟ ಹೆಚ್ಚು ಕಡಿಮೆ ನಮ್ಮ ಮನೆಯಲ್ಲೇ. ನನಗೆ ಅವರೆಲ್ಲ ಮೇಲೆ ನನ್ನ ಅಡಿಗೆ ಪ್ರಯೋಗಗಳಿಗೆ ಬಲಿಪಶು ಮಾಡುವುದರಲ್ಲಿ ಇನ್ನಿಲ್ಲದ ಖುಶಿ. ಆಮೇಲೆ ಮಾತು, ಕತೆ, ನಗು ಅಂತ ಹತ್ತು ಗಂಟೆಯವರೆಗೆ ಅವರೆಲ್ಲ ನಮ್ಮ ಮನೆಯಲ್ಲೆ. ಇದೇ ದಿನಚರಿಯಾಗಿತ್ತು. 5 ವರ್ಷದ ನಂತರ ನಮಗೆ ಅಲ್ಲಿಂದ ಟ್ರಾನ್ಸಫರ್ ಆಯ್ತು. ನಾವು ಹೊರಡುವ ಒಂದು ದಿನ ಮುಂಚೆ ಪೇ ಆಂಟಿ ಮಾಲವಿಕಾಳನ್ನು ತಬ್ಬಿ ಅತ್ತಿದ್ದೆ ಅತ್ತಿದ್ದು. 'ಮಾಲತಿ, 5 ವರ್ಷದಿಂದ ನಾನು ದಿನಾ ನಿಮ್ಮ ಮನೆಗೆ ಬರ್ತಿದ್ದೇನೆ. ಆದರೂ ಒಂದು ಸಲವೂ ಕುತೂಹಲಗೋಸ್ಕರ ನನ್ನ ಬಗ್ಗೆ ನೀವು ಕೇಳಲೆ ಇಲ್ಲ'? ಎಲ್ಲರಿಗೂ ಎಷ್ಟೊಂದು ಕೂತುಹಲ ನನ್ನ ಬಗ್ಗೆ. ಇಷ್ಟು ವಯಸ್ಸಾದರೂ ಒಬ್ಬಳೆ ಇದ್ದೀನಿ, ಮತ್ತು ನನ್ನ ಬಗ್ಗೆ ಚಿತ್ರ ವಿಚಿತ್ರವಾಗಿ ಮಾತನಾಡುತ್ತಾರೆಂದೂ ಗೊತ್ತಿದೆ. ನೀವೊಬ್ಬರು ಬೇರೆ ತರಹ ಪಾ".
ನನಗೊಂದು ಅಭ್ಯಾಸ. ಯಾರಾದರೂ ನನಗೆ ಇಷ್ಟ ಆದರೆ ಅವರು ಹೇಗಿರುತ್ತಾರೆ ಅವರನ್ನು ಹಾಗೇ (accept) ಸ್ವೀಕರಿಸುವುದು. ಅವರನ್ನು ಬದಲಾಯಿಸುವ ಪ್ರಯತ್ನ, ಅವರ ಬಗ್ಗೆ ವಿಶೇಷ ಕುತೂಹಲ, ಅನಾವ್ಯಶಕ ಉಪದೇಶ ಮಾಡುವುದು ಇತ್ಯಾದಿಗಳು ನನಗಿಲ್ಲ. ಅವರೇನಾದರೂ ಹೇಳಿದ್ದಲ್ಲಿ ಸುಮ್ಮನೆ ಕೇಳಿಸಿಕೊಳ್ಳುತ್ತೇನೆ. ಹಾಗೆ ಅವರು ಈ ಕತೆ ಹೇಳಿದರು.
ಪೇ ಅವರದ್ದು ಚಿಕ್ಕಂದಿನಲ್ಲಿ ಅಂದರೆ ತೊಟ್ಟಿಲಲ್ಲೆ ಮದುವೆ ಆಗಿತ್ತಂತೆ. ಆ ಹುಡುಗನ ಫ್ಯಾಮಿಲಿ ಸಿಕ್ಕಾಪಟ್ಟೆ rich . ಅವನು ಇಂಜಿನೀಯರಿಂಗ್ ಓದುತ್ತಿದ್ದಾಗ ಓದುವುದಕ್ಕಿಂತ ಬರೀ ದುಂದುವೆಚ್ಚ ಮಾಡುವುದೇ ಹೆಚ್ಚಿತ್ತಂತೆ. ಹಾಗೇ ಒಂದು ಸಲ ದುಡ್ಡು ಬೇಕೆಂದಾಗ ಮನೆಯವರು ಕೊಡಲು ಒಪ್ಪಲಿಲ್ಲ ಅಂತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ. ಆಗ ಪೇ ಗೆ ಕೇವಲ 10 ರ ವಯಸ್ಸಂತೆ. ಆಗಲೇ ಅವಳಿಗೆ ವಿಧವೆಯ ಪಟ್ಟ ಕಟ್ಟಿದರು. ಬ್ಯಾಂಕ್ ನಲ್ಲಿ ಉದ್ಯೋಗ ಏನೋ ಇದೆ. ಆದರೆ ಅವರು ಒಂಟಿ. ಅವರಿಗೆ ಹಲವಾರು ಅಕ್ಕ ಅಣ್ಣಂದಿರು, ಓದಿ, ಎಲ್ಲ ದೇಶ ವಿದೇಶದಲ್ಲಿಕೆಲಸದಲ್ಲಿದ್ದಾರೆ. ಯಾರಿಗೂ ಅವಳಿಗೆ ಮರು ಮದುವೆ ಮಾಡಿಕೋ ಅನ್ನಲು  ತೋಚಲಿಲ್ಲವೇ? ಅವರ ಮಕ್ಕಳ ಬಾಣಂತನ, ಅವರಿಗೆ ಬೇಕಾದಾಗ ಅವರ ಕೆಲಸಗಳು , ಊರಲ್ಲಿ ಕಟ್ಟಿದ ದೊಡ್ಡ ಮನೆಯ ಉಸ್ತುವಾರಿ ನೋಡಿಕೊಳ್ಳಲು ಅವರು ಬೇಕು. ಈಗೀಗ ಅವರು ತುಂಬ ಒಂಟಿ.

ಚಿತ್ರ-4
ಆತನಿಗೆ ಆ ಮಾರಣಾಂತಿಕ ಕಾಯಿಲೆಯಿದೆಯೆಂದು ಆತನ 15 ವರ್ಷ ವಯಸ್ಸಿದ್ದಾಗ ಗೊತ್ತಾಗಿತ್ತು. 19 ರ ತನಕ ಜೀವನದಿಂದುಳುವುದು ಕಷ್ಟ ಅಂದಿದ್ದರು ವೈದ್ಯರು. ಆದರೂ ಆ ವಿಷಯವನ್ನು ಮುಚ್ಚಿಟ್ಟು ಒಂದು ಬಡಕುಟುಂಬದ ಹೆಣ್ಣನ್ನು ಆತನಿಗೆ ಕಟ್ಟಿದರು. ಇಬ್ಬರು ನಾದಿನಿಯರಿಗೆ ಅಂವ ಜೀವದಿಂದಿರುವುದಕ್ಕಿಂತ ,ಅವನು ಹೇಗೂ ಬೆಕ್ಕಿನ ತಲೆ ಮೇಲೆ ಇಟ್ಟ ದೀಪ- ಅವನು ಸತ್ತ ಮೇಲೆ ಅವನ ಹೆಂಡತಿಯನ್ನು ಮನೆಕೆಲಸಕ್ಕೆ ಇಡಬಹುದು' ಅನ್ನುವಂತಹ ದುರಾಲೋಚನೆ. ಆ ಹೃದಯಸಂಬಂಧಿ ಕಾಯಿಲೆ ಎಷ್ಟೊ ಲಕ್ಷ ಜನರಲ್ಲಿ ಒಬ್ಬರಿಗೆ ಬರುವುದಂತ ಇತ್ತೀಚಿಗಿನ ಮೆಡಿಕಲ್ ಶೋಧ. ಆಗ ಇದು ಗೊತ್ತಿರಲಿಲ್ಲ. ಅವರ ಮಾತನ್ನು ಕೇಳಿದ ಹೆಣ್ಣು ಕಂಗಾಲು. ನಿಟ್ಟುಸಿರು ಬಿಟ್ಟು ನನ್ನ ತಾಳಿಭಾಗ್ಯ ಇದ್ದಂತೆ ಆಗುವುದು ಎಂದುಕೊಂಡಳು.
ಆದರೆ ಅವನು ನಾಲ್ಕು ಮಕ್ಕಳ ತಂದೆ, 7 ಜನ ಮೊಮ್ಮಕ್ಕಳು ಆತನಿಗೆ ಮತ್ತು ಮೊನ್ನೆಯಷ್ಟೆ 73 ರ ಹುಟ್ಟಿದ ಹಬ್ಬ ಆಚರಿಸಿದ ಹೇಗಿದೆ? ಇದು miracle ಅಲ್ಲದೇ ಮತ್ತೇನು? ಡಾಕ್ಟರ್ ಕೂಡ ಹುಬ್ಬೇರಿಸಿದ್ದಾರೆ. :-)

( Painting by me:i tried to paint using ArtRage. Friend said its nice so putting it up here)
:-)

September 10, 2013

ಗಣಪ 2013 etc in pictures only

ನಮ್ಮ ಪರಿಸರ ಪ್ರೇಮಿ ಗಣಪ. ಈ ವರ್ಷ ಸಮರ್ಪಣ ಟ್ರಸ್ಟ್ ನಿಂದ ದುಪ್ಪಟ್ಟು ದುಡ್ಡು ಕೊಟ್ಟು ತಂದಿದ್ದು. ಕಳೆದ ನಾಲ್ಕು ವರ್ಷಗಳಿಂದ ನಾವು ಒಬ್ಬ ತಮಿಳು ಮಹಿಳೆಯಿಂದ ಮಣ್ಣಿನ ಗಣಪ ತರುತ್ತಿದ್ದದ್ದು. ನಮಸ್ಗೋಸ್ಕರ ಅವಳು ಮಾಡಿ ತರುತ್ತಿದ್ದಳು. ಯಾಕೋ ನನಗೆ ಬೇಸರ ಆಯ್ತು ಅವಳ ನೆನಪು ಆಗಿ. ಆ ಮೂರ್ತಿ ಕೂಡ ತರಬಹುದಿತ್ತ್ತು
ಕ್ಲಾಸ್ ರೂಮ್ ನಲ್ಲಿ ಪಾಠ ಕೇಳ್ತಾ ಕೇಳ್ತಾ ನಿಹಾ ಪುಸ್ತಕದಲ್ಲಿ ಮೂಡಿದ note-book ಗಣಪ. ಅವಳ ಎಲ್ಲ ನೋಟ್ ಪುಸ್ತಕಗಳಲ್ಲಿ ಇಂತದ್ದೆ ಡೂಡಲ್ಸ್.
Modern ಗಣಪ
copy-cat ಗಣಪ, ಅಂದ್ರೆ copy-cat ನಾನು. ಮದುವೆಯ ಆಮಂತ್ರಣ ಪತ್ರದಲ್ಲಿದ್ದುದ್ದನ್ನು ನೋಡಿಕೊಂಡು ನಾನು ಬಿಡಿಸಿದ್ದು

ಕ್ಲಾಸ್ ರೂಂ ಗಣಪ. ಪಾಠ ಕೇಳುವಾಗ ಇಂತದ್ದು ಮಾಡುತ್ತಾಳಾದ್ರೂ ಕ್ಲಾಸಿಗೆ ಮೊದಲ rank ಅವಳಿಗೇ. ಎಲ್ಲಾ ಆ ಗಣಪನ ಕೃಪೆ
ನೈವೇದ್ಯಂ ಸಮರ್ಪಯಾಮೀ......:-) ಅಲ್ಲಿಂದ ಇಲ್ಲೀವರೆಗೆ. ನಮ್ಮಲ್ಲ್ಲಿ ಇಡೀ ತಪ್ಪಲೆಯನ್ನೇ ದೇವರಿದಿರಿಗೆ ಇಟ್ಟು ನೈವೇದ್ಯ. ನಮ್ಮ ರಾಯರು ಇನ್ ಪುರೋಹಿತರ get-up..:-)

ಒಂದು ಪೂಜಾ ಪೋಸ್
ಮಿತ್ರ ಶ್ರೀವತ್ಸ ಜೋಶಿಯವರು Washington D C ಯಿಂದ ಕಳುಹಿಸಿದ ಪರಿಸರ ಪ್ರೇಮಿ ಗಣಪ. ಉಡುಪಿಯ ಹರಿದಾಸ ಲಹರಿಯವರು ಜೋಳದ ಹುಲ್ಲು , ಗೋಣಿಚೀಲ ಮತ್ತು ಜೇಡಿಮಣ್ಣು (clay) ಉಪಯೋಗಿಸಿ ಮಿತ್ರರೊಂದಿಗೆ ಸೇರಿ ಮಾಡಿದಂತಹ 100% eco friendly ಗಣಪನ ಚಿತ್ರಗಳು ಕೆಳಗಿವೆ. ಎಷ್ಟು ಚೆನ್ನಾಗಿ ಮೂಡಿಬಂದಿದೆ Ganesha's features. ನನಂತೂ ಟೋಟಲೀ ಫೀದಾ........ನೀವು ನೋಡಿ



ಒಂದು ವಾರ ಪೂಜೆ ಸಲ್ಲಿಸಿ ವಿಸರ್ಜನೆ ನಡೆಸಿ , ಮೆರವಣಿಗೆಯಲ್ಲಿ ಗಣಪನನ್ನು ಅಲ್ಲಿನ ದೊಡ್ಡ ಲೇಕ್ ಗೆ ಕರೆದೊಯ್ದು ಬಿಡಲಾಗುವುದಂತೆ.
:-)

September 6, 2013

ಕಣಿಲೆ ಪ್ರಿಯ ಕೊಂಕಣೀಯರು ನಾವು

ಕೊಂಕಣಿಗಳಿಗೂ ಕಣಿಲೆಗೂ ಅವಿನಾಭಾವ ಸಂಬಂಧ. ವಾಸನೆ ಅನ್ನುವವರು ಪರಿಮಳ ಎನ್ನುವವರೂ ಇದ್ದಾರೆ. ಮಳೆಗಾಲದ  ಆಹಾರವಾದ ಮರಕೆಸುವಿನ ಎಲೆ , ತಗಟೆ ಸೊಪ್ಪು ಇದರ ಜೊತೆ ಎಳೆ ಬಿದಿರು ಅಥವಾ ಕಣಿಲೆಗೆ ಮುಖ್ಯ ಸ್ಥಾನ.
ನಮ್ಮ ತೋಟದ ಬಿದಿರ ಹಿಂಡು ಚಿತ್ರದಲ್ಲಿರುವವರು ಶ್ರೀಕಾಂತರ ಅಣ್ಣ, ನಾಗರಾಜ ಶೆಣೈ


ಕಣಿಲೆಯನ್ನು ಅದರ ಗಟ್ಟಿಯಾದ (ಕಪ್ಪು ಮಿಶ್ರಿತ ನೇರಳೆ ಬಣ್ಣದ) ಹೊರ ಕವಚದಿಂದ ಬಿಡಿಸಿ ಕೆಳಗಿನ ಚಿತ್ರದಲ್ಲಿನ ತರಹ ಚೂರುಗಳನ್ನಾಗಿ ಮಾಡಿ ನೀರಲ್ಲಿ ಹಾಕಿಡಬೇಕು. ಮೂರು ದಿನ ನೀರನ್ನು ಬದಲಾಯಿಸಿ ಬದಲಾಯಿಸಿ ಆದ ಮೇಲೆ ನಾಲ್ಕನೆ ದಿನ ಅದನ್ನು ಅಡಿಗೆಯಲ್ಲಿ ಬಳಸ ಬಹುದು. ನನ್ನ ಅಜ್ಜಿ ಹೇಳುವ ಪ್ರಕಾರ ಅವರು ಕಣಿಲೆಯನ್ನು ತೊಳೆದು, ಮಲ್ಲ್ ಬಟ್ಟೆಯಲ್ಲಿ ಅದನ್ನು ಕಟ್ಟಿ, ಅದನ್ನು ಹಗ್ಗದ ಸಹಾಯದಿಂದ ಬಾವಿಯೊಳಗೆ ಬಿಡುತ್ತಿದ್ದರಂತೆ. ಮೂರು ದಿನದ ಬಳಿಕವೇ ಅದನ್ನು ಹೊರಗೆ ತೆಗೆದು ಅಡಿಗೆಯಲ್ಲಿ ಬಳಸುತ್ತಿದ್ದರಂತೆ. ಹರಿಯುವ ನದಿ ಇದ್ದಲ್ಲಿ ಈ ಐಡಿಯ ಪ್ರಶಸ್ತವಾದುದು. ಕಣಿಲೆ ಅಮ್ಟೆಕಾಯಿ ಉಪ್ಪಿನಕಾಯಿಯಂತೂ ನಮ್ಮಲ್ಲಿ ಫೇಮಸ್. ಬಿಸಿ ಬಿಸಿ ಒತ್ತು ಶ್ಯಾವಿಗೆ ಜತೆ ಸಖತ್ ಟೇಸ್ಟಿ combination. :-)


1. ನಾವು ಕಾಳುಗಳೊಂದಿಗೆ ಕಣಿಲೆಯನ್ನು ಬಳಸಿ ಪದಾರ್ಥಗಳನ್ನು ಮಾಡುತ್ತೇವೆ. ಕೆಳಗಡೆ ತಿಂಗಳವರೆ ಮತ್ತು ಕಣಿಲೆಯ ಘಶಿ. ತಿಂಗಳವರೆ ಕಾಳನ್ನು ಹಿಂದಿನ ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಕಣಿಲೆಯೊಂದಿಗೆ ಬೇಯಿಸುವುದು. ಆಮೇಲೆ ತೆಂಗಿನ ತುರಿ, ಕೆಂಪು ಮೆಣಸು, ಹುಣಸೆ ಹಣ್ಣಿನ ಮಸಾಲೆ ರುಬ್ಬಿ ಬೆಂದ ಕಾಳಿಗೆ ಬೆರೆಸಿ, ಉಪ್ಪು ಹಾಕಿ, ಕುದಿ ಬಂದ ಮೇಲೆ ಬೆಳ್ಳುಳ್ಳಿ ಒಗ್ಗರಣೆ ಕೊಡುವುದು. ತಿಂಗಳವರೆ ಮಾತ್ರವಲ್ಲ ಅಲಸಂದೆ ಕಾಳು, ತೊಗರಿಕಾಳು, ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಅವರೆಕಾಳಿನ ಜತೆ ಕೂಡ ಕಣಿಲೆ ಸೆಟ್ ಆಗುತ್ತೆ.
ವಿವೇಕ ಶಾನಭಾಗರ ಈ ಕಾದಂಬರಿ ಓದಲಿಕ್ಕೆ ಪ್ರಯತ್ನ ಪಟ್ಟೆ. i think i like his short stories better :-) ಅರ್ಧ ಓದಿ ಅಲ್ಲಿಟ್ಟಿದ್ದೆ ನಿಹಾಳ ಕ್ಲಿಕ್ ಇದು. 

2. ತೊಗರಿ ಬೆಳೆಗೆ ಕಣಿಲೆ ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಆಂಬಟ್ ಮಾಡುತ್ತೇವೆ . ಮಸಾಲೆ ಮೇಲಿನ ತರಹ ನೇ ಆದರೆ ಒಗ್ಗರಣೆ ಸಾಸಿವೆ ಕರಿಬೇವು. ಬೇಕಿದ್ದಲ್ಲಿ ಒಂದು ಚೂರು ಬೆಲ್ಲ ಸೇರಿಸಬಹುದು

3. ಕಣಿಲೆಯ ಎಳೆ ಭಾಗಗಳನ್ನು (ಇದಕ್ಕೆ ನೀಲೀ ಅಂತಲೂ ಹೇಳುತ್ತೇವೆ) ಚಿಕ್ಕದಾಗಿ ತುಂಡರಿಸಿ ಅದರ ಜತೆ ಹಲಸಿನ ಬೀಜ ಹಾಕಿ ಸುಕ್ಕೆ ಮಾಡುತ್ತೇವೆ ಇದಕ್ಕೆ ಒಂಚೂರು ಬೆಲ್ಲ ಹಾಕ ಬೇಕು . ಮತ್ತು ಡ್ರೈ ಪದಾರ್ಥ. ಮಸಾಲೆ ಮೇಲಿನಂತೆಯೇ. ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಅರ್ಧ ಟೀ ಸ್ಪೂನ್ ಕೊತ್ತಂಬರಿ ಬೀಜ + ಕಾಲು ಚಾ ಚಮಚ ಉದ್ದಿನ ಬೇಳೆ ಹಾಕಿ  ಮಸಾಲೆಯೊಂದಿಗೆ ರುಬ್ಬಬೇಕು. ಒಗ್ಗರಣೆಗೆ ಸಾಸಿವೆ ಕರಿಬೇವು.
the tip of the bamboo shoot is soft and delicate to the palate. Abundantly used in Chinese cuisine

(ಮೇಲಿನ ಎಲ್ಲ ಪದಾರ್ಥಕ್ಕೂ ಹುಣಸೆಹುಳಿ ಬದಲಿಗೆ ಜಜ್ಜಿದ ಆಮ್ಟೆಕಾಯಿಯನ್ನು ಸೇರಿಸಬಹುದು)

4. ಇದು ನನ್ನ ಹೊಸ ಪ್ರಯೋಗ. ಚಿಕ್ಕದಾಗಿ ಕತ್ತರಿಸಿದ ಕಣಿಲೆ + ಕಡಲೆ ಹಿಟ್ಟು, ಪುಡಿ ಹಿಂಗು, ಅಕ್ಕಿ ಹಿಟ್ಟು, ಉಪ್ಪು ಮಿಶ್ರಣಮಾಡಿ ಹತ್ತು ನಿಮಿಷ ಇಟ್ಟು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದ್ದೆ . ಒಳ್ಳೆ ಪಕೋಡಾ ತರಹ ಕುರುಂ ಆಗಿತ್ತು. :-)

ಶ್ರೀಕಾಂತ ಗೆ ಈ ಚುಕ್ಕು ಬುಕ್ಕುವಿನ ಡೆಸ್ಕ್ ಟಾಪ್ ಕ್ಯಾಲೆಂಡರ್ appointment ಫಿಕ್ಸ್ ಮಾಡಲಿಕ್ಕೆ ತುಂಬಾ ಸಹಾಯಕ. ಮನೆಯಲ್ಲಿದ್ದಾಗ ಆಂಬೋಡೆಯ ಪ್ಲೇಟ್ ಜಾಗದಲ್ಲಿ  ಶ್ರೀಕಾಂತರ ಲ್ಯಾಪ್ ಟಾಪ್ ಇರುತ್ತೆ ಅದಕ್ಕೆ ಡೆಸ್ಕ್ ಟಾಪ್ ಕ್ಯಾಲೆಂಡರ್ ಕೂಡ ಫೋಟೊದಲ್ಲಿ ಇಣುಕಿದೆ. ನನ್ನ ಕ್ಲಿಕ್

ಮತ್ತು ಉಪ್ಪಿಗೆ ಹಾಕಿಟ್ಟ ಕಣಿಲೆಯಂತೂ..ಕ್ಯಾ ಬಾತ್ ಹೈ..........

ಉಪ್ಪಿಗೆ ಹಾಕಿಡುವ ವಿಧಾನ.ಉಪ್ಪಿಗೆ only ಬಲಿತ ಭಾಗಗಳನ್ನು ಹಾಕಬೇಕು. ಮೊದಲು ಒಂದು ಲೇಯರ್ ಹರಳುಪ್ಪು ಅದರಮೇಲೆ ಒಂದು ಮುಷ್ಠಿಯಷ್ಟು ಕಣಿಲೆ ಅದರ ಮೇಲೆ  spread maaDi. ಪುನ: ಉಪ್ಪು. ಮಧ್ಯ ಮಧ್ಯ ಗಟ್ಟಿಯಾಗಿ ಒತ್ತ ಬೇಕು. ಹೀಗೆ ಪೂರ್ತಿ ಕಣಿಲೆಯ ಚೂರುಗಳನ್ನು ಯೂಸ್ ಮಾಡಿದ ಮೇಲೆ ಕೊನೆಯಲ್ಲಿ ಎರಡು ಲೇಯರ್ ಉಪ್ಪು ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿ. ಎರಡು ಮೂರು ದಿನದಲ್ಲಿ ಉಪ್ಪು ದ್ರವರೂಪ ಪಡೆದುಕೊಂಡುರಿತ್ತೆ. ಇದು ಮೂರು ನಾಲ್ಕು ವರ್ಷ ಇಡಬಹುದು. ಉಪಯೋಗ ಮಾಡುವಾಗ ಸ್ವಚ್ಛ ನೀರಲ್ಲಿ ಹಾಕಿ ಚೆನ್ನಾಗಿ ತೊಳೆದು, ಬಳಸಿ. ನಾನು ಉಪ್ಪಿಗೆ ಹಾಕಿಟ್ಟ ಕಣಿಲೆಯನ್ನು ಮೂರು ನಾಲ್ಕು ಗಂಟೆ ನೀರಿನಲ್ಲಿ ಇಟ್ಟು ಉಪಯೋಗಿಸುತ್ತೇನೆ. ರುಚಿ ನೋಡಿ ಉಪ್ಪು ಬೆರೆಸಿ.

ಇದನ್ನು ನಾವು ಜಜ್ಜಿ ನೀರಲ್ಲಿ ಹಾಕಿಟ್ಟು, ಇಂಗು, ಮೆಣಸಿನಪುಡಿ ಹಚ್ಚಿಟ್ಟು ಕರಿಯುವ ಟೈಮ್ ಗೆ ಅಕ್ಕಿ ಹಿಟ್ಟಲ್ಲಿ ಹೊರಳಾಡಿಸುತ್ತೇವೆ. ಮತ್ತು ಸಾನ್ನಾ ಪೋಳೊ ಎಂಬ ಖಾರದ ದೋಸೆ ಕೂಡ ಮಾಡುತ್ತೇವೆ. ಅಕ್ಕಿ ಯನ್ನು ಅರ್ಧ ಗಂಟೆ ನೆನೆಹಾಕಿ. ಕಾಯಿ ತುರಿ, ಕೆಂಪು ಮೆಣಸು, ಹುಣಸೆ ಹುಳಿ, ಇಂಗನ್ನು ನುಣ್ಣಗೆ ರುಬ್ಬಿ ಇದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿ ತರಿತರಿಯಾಗಿ ರುಬ್ಬಿ. ಇದಕ್ಕೆ ಸಣ್ಣಕ್ಕೆ ಕೊಚ್ಚಿದ ಕಣಿಲೆಯನ್ನು ಹಾಕಿ, ದೋಸೆ ಕಾವಲಿಯ ಮೇಲೆ ತಟ್ಟಿ ಅಥವಾ ದೋಸೆ ಹುಯ್ಯಿರಿ. ದಾಲಿ ತೊವ್ವೆ ಜತೆ ಸಖತ್deadly  ಕಾಂಬಿನೇಷನ್, ಮಾಲವಿಕಳ ಪ್ರಕಾರ

ಕಣಿಲೆಯಲ್ಲಿ ಪೌಷ್ಟಿಕಾಂಶ ಇದೆಯಾ ಗೊತ್ತಿಲ್ಲ. ಸಯಾನಿನ್ ಎಂಬ ವಿಷ ಪದಾರ್ಥ ಇರುವುದರಿಂದ ಮತ್ತು ಇದರಿಂದ ಅದಕ್ಕೆ ಕಹಿ ರುಚಿ ಬರುವುದರಿಂದ, ಅದನ್ನು ಮೂರು ದಿನ ನೀರಲ್ಲಿ ಹಾಕಿಡಲೇ ಬೇಕು. (ಆಹ್ the stuffs we Konkanis eat!!!) ದಿನಾ ನೀರು ಬದಲಾಯಿಸಬೇಕು. ಮೂರು ದಿನಗಳನಂತರ, ಗಟ್ಟಿ ಮುಚ್ಚಳದ ಡಬ್ಬಿಯಲ್ಲಿ ಹಾಕಿಟ್ಟು ಫ್ರಿಜ್ ನಲ್ಲಿ ಸಹಾ ಇಡಬಹುದು. ಸಧ್ಯಕ್ಕಂತೂ ಮನೆಯಲ್ಲಿ ಮಾಡುತ್ತೇನೆ. ಬಹುಶ: ನನ್ನ ಜತೆ ಇದು ಕೊನೆಗೊಳ್ಳುತ್ತದೆ ಅನ್ನಿಸುತ್ತೆ. ಮಕ್ಕಳಿಗಿದಿಷ್ಟ ಆದರೂ ಮನೆಯಲ್ಲಿ ಮಾಡಿ ತಿನ್ನುವುದು ನನಗೆ doubtu ಮಾರಾಯ್ರೆ..:-) ವಾಸನೆ ವಾಸನೆ ಎನ್ನುತ್ತಲೇ ಗುಳುಂ ಮಾಡುತ್ತಾರೆ. ನಮ್ಮ ಅಮ್ಮ ಹಾಗೂ ನನ್ನ ತಮ್ಮ ಪಾಂಡುವಿನ ಹೆಂಡತಿ ಪದ್ಮಳಿಗೆ ಇದು ಇಷ್ಟ. ಬೆಳಗಾವಿಯಲ್ಲಂತೂ ರಾಶಿ ಕಣಿಲೆ ಮಾರುವವರನ್ನು ಮಾರುಕಟ್ಟೆಯಲ್ಲಿ ನೋಡಬಹುದು. ಆದರೆ ಮನೆಗೆ ತಂದರೆ ಅವನು ಮತ್ತು ನನ್ನ ತಂದೆ ವಾಸನೆ ವಾಸನೆ ಎಂದು ಅದನ್ನು ಮನೆಗೆ ತರಲು ಬಿಡುವುದಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ esp ಮಂಗಳೂರು ಸ್ಟೊರ್ಸ್ ನಲ್ಲಿ ರೆಡಿ ಟು ಈಟ್ ಪದಾರ್ಥಗಳು ದೊರೆಯುತ್ತವೆ.

ನಿಜ ಹೇಳಬೇಕೆಂದರೆ ಇದು extinct ಆಗ್ತಾ ಇರುವ forest produce ಅಂತ ಪರಿಗಣಿಸಿ ಇದರ ಕಟಾವು ನಿಷೇಧಿಸಲಾಗಿದೆ. ಆದರೂ ಮಾರುಕಟ್ಟೆಯಲ್ಲಿ ಇದು ಧಾರಾಳವಾಗಿ ಲಭ್ಯ ಮತ್ತು what are konkanis without ಕಣಿಲೆ, ಐ ಸೇ???:-) ತೀರ್ಥಹಳ್ಳಿ ಯಲ್ಲಿ ಸೈಕಲ್ ಮೇಲೆ ರಾಶಿ ರಾಶಿ ಕಣಿಲೆಗಳನ್ನು ಹೇರಿ ಮಾರಲಿಕ್ಕೆ ಕೊಂಡು ಹೋಗುವುದನ್ನು ಕಂಡಿದ್ದೇನೆ.

ಕಣಿಲೆ ಗೆ ಕಳಲೆ ಅಂತಲೂ ಹೇಳುತ್ತಾರೆ. ನನ್ನ ಪ್ರೆಂಡ್ (ದಿ) ವಿನಿತಾ tender bamboo shoots and jack-fruit seed curry ಅಂತ ಫೆಮಿನಾ ಮ್ಯಾಗಝಿನ್ ಗೆ ಕಳುಹಿಸಿ ಅದು ಪ್ರಕಟವಾಗಿ ಅವಳ ಗಂಡ ಅವಳನ್ನು ತಮಾಷೆ ಮಾಡಿ ಗೋಳು ಹೊಯ್ದುಕೊಂಡದ್ದು ಈಗಲೂ ನಿನ್ನೆ ಮೊನ್ನೆಯ ತರಹ ನೆನಪು. ಆಕೆ ದೈವಾಧೀನಳಾಗಿ 23 ವರ್ಷಗಳೇ ಕಳೆದುಹೋದವು. ಈಗಲೂ ಕಣಿಲೆ ಪದಾರ್ಥ ಮಾಡಿದಾಗಲೆಲ್ಲ ಆಕೆಯನ್ನು ನೆನಸಿಕೊಳ್ಳುತ್ತೇನೆ.

from the cradle to the cremation Bamboo is an intrinsic part of our lives. ತೊಟ್ಟಿಲು, ಸೌದೆ, ಗೃಹೋಪಯೋಗಿ ವಸ್ತುಗಳು, ಮನೆ ನಿರ್ಮಾಣದಲ್ಲಿ, ಅಲಂಕಾರಿಕ ಸಾಮಗ್ರಿ, ಕೊನೆಗೆ ಚಟ್ಟಕ್ಕೂ -ಬಹುಪಯೋಗಿ ಈ ಬಿದಿರು.

ಒಂದು ಪುಟ್ಟ ಕೊಂಕಣಿ ಕತೆ ನನ್ನ ಅಜ್ಜಿ (ತಂದೆಯ ತಾಯಿ) ಹೇಳಿದ್ದು
ಒಮ್ಮೆ ಅಜ್ಜಿ ತನ್ನ ಮೊಮ್ಮಗನಿಗೆ ಬಿಸಿ ಬಿಸಿ ಗಂಜಿ ಉಣ್ಣಲಿಕ್ಕೆ ಇಕ್ಕಿದಳಂತೆ. ಮೊಮ್ಮಗ ಬಿಸಿ ಗಂಜಿಗೆ ಕೈ ಹಾಕಿ, ಕೈ ಸುಟ್ಟು 'ಹಾ! ಅಜ್ಜಿ ಇಷ್ಟು ಬಿಸಿ ಗಂಜಿಊಟ ಬಡಸಿದರೆ ನಾನು ಬೇಗ ಬೇಗ ಉಂಡು ತೋಟಕ್ಕೆ ಹೋಗುವುದು ಹೇಗೆ ಅಂತ ಸಿಟ್ಟಾದನಂತೆ. ಈ ಮೊಮ್ಮಗ ಮಹಾರಾಜನಿಗೆ ಕಣಿಲೆ ಎಂದ್ರೆ ವಿಶೇಷ ಪ್ರೀತಿ. ಅಜ್ಜಿ ಆತನಿಗೆ 'ಪುತ್ತಾ (ಮಗಾ) ನೀನು ಬಿದಿರಿನ ಹಿಂಡಿನಿಂದ ಕಣಿಲೆಯನ್ನು ಹೇಗೆ ತರುತ್ತಿಯಾ ಅಂತ ಕೇಳಿದಳು? ಅದಕ್ಕೆ ಮೊಮ್ಮಗ 'ಅಜ್ಜಿ, ಮೊದಲಿಗೆ ಬಿದಿರಿನ ಅಕ್ಕ ಪಕ್ಕ ಸುತ್ತಲಿರುವ ಮುಳ್ಳನ್ನು ನಿಧಾನವಾಗಿ ಸವರಿ ಆಮೇಲೆ ಕೈ ಹಾಕಿ ಕಣಿಲೆಯನ್ನು ಅಗೆದು ತೆಗೆಯುತ್ತೇನೆ ಅಂದನಂತೆ. ಅದಕ್ಕೆ ಅಜ್ಜಿ 'ಹಾಗೆಯೇ ಪುತ್ತಾ, ಬಿಸಿ ಗಂಜಿಯನ್ನು ತಟ್ಟೆಯಲ್ಲಿ ಹಾಕಿದಾಗ ನೀನು ನಿಧಾನವಾಗಿ ತಟ್ಟೆಯ ಬದಿಗಿರುವ ಗಂಜಿಯನ್ನು ಮೊದಲು ಊಟ ಮಾಡಬೇಕು' ಅಂದರಂತೆ. ಒಳ್ಳೆ ಅಂತೆ ಕಂತೆ ಗಳ ಸಂತೆ........

ಇತ್ತೀಚಿಗೆ ಸಾವು ಸಂಭವಿಸಿದ ಮನೆಗೆ ಹೋಗಿದ್ದೆ. ಅಲ್ಲಿನ ಸಂಭಾಷಣೆ ಹೀಗಿತ್ತು,ಸೊಸೆ:  'ಮಾಯಿ, ನೀವು ಕೊಟ್ಟ ಕಣಿಲೆ ತಿಂದೆsss ತೀರಿಕೊಂಡರು'. ಮಾಯಿಗೆ ಶಾಕ್!! (ಮಾಯಿ = ಮಾಮಿ/Aunt) can u guess what she was trying to say?? ನಾನಂತೂ ಜೋರಾಗಿ ನಕ್ಕುಬಿಟ್ಟೆ. ಸಾರಿ. ಸೊಸೆಗೆ ತನ್ನ ಮಾತಿನಲ್ಲಿದ್ದ ತಪ್ಪಿನ ಅರಿವಾಯ್ತು ಸೊಸೆಯ ಮಾತಿನ ಅರ್ಥ ಏನಿತ್ತೆಂದರೆ,' ಸಾಯೋ ಎರಡು ದಿನ ಮುಂಚೆ, ಈ ಸಲ ಕಣಿಲೆ ತಿನ್ನಲೇ ಇಲ್ಲ ಅಂತ ಹೇಳಿದ್ದಳು ಆಕೆ ಯ 75 ರ ಅತ್ತೆ' ಈ ಮಾಯಿ ತಂದ ಕಣಿಲೆ ತಿಂದು , ಎಂಜಾಯಿಸಿ, ಸಂತೃಪ್ತರಾಗಿ ಮರುದಿನ ಹೃದಯಘಾತಕ್ಕೆ ಒಳಗಾಗಿ ತೀರಿಕೊಂಡಿದ್ದರು ಅತ್ತೆ. ಸಾಯುವ ಮುನ್ನ ಅವರ ಕೊನೆಯ ಆಸೆಯಾದ ಕಣಿಲೆ ತಿನ್ನಲು ಸಿಕ್ಕಿದ್ದು ಸಂತಸ ಅಂತ ಹೇಳ ಹೊರಟಿದ್ದು ಈ ಮೀನಿಂಗ್ ಬಂತು ಅಷ್ಟೆ.........:-)

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಮರಕೆಸುವಿನ ಎಲೆಯ ಫೋಡಿ in the following link
http://malathisanchiyinda.blogspot.in/2011/07/blog-post_15.html

:-)


September 4, 2013

ಶಿಕ್ಷಕರ ದಿನಾಚರಣೆಗೆ : ಅರುಣಿ ಎಂಬ ಬಾಲಕ ಉದ್ದಾಲಕನಾದ ಕತೆ

ಧೌಮ್ಯ ಎಂಬ ಋಷಿಯ ಆಶ್ರಮದಲ್ಲಿ ಅರುಣಿ ಎಂಬ ಬಾಲಕ ಕೂಡ ಇದ್ದ. ಆಗಿನ ಕಾಲದಲ್ಲಿ ಮಕ್ಕಳಿಗೆ ಅದೂ ಗಂಡು ಮಕ್ಕಳಿಗೆ ಗುರುಕುಲ ಪದ್ದತಿಯಲ್ಲಿ ಪಾಠಗಳನ್ನು ಕಲಿಸಲಾಗುತ್ತಿತ್ತು. ಪಾಠದ ಜತೆ ಗುರು ಹಾಗೂ ಗುರುಮಾತೆ ಹೇಳಿದ ಕೆಲಸಗಳನ್ನೆಲ್ಲ ಈ ಮಕ್ಕಳು ಮಾಡಲೇ ಬೇಕಿತ್ತು. ಮಕ್ಕಳೂ ಬೇಸರಿಸದೆ ಆಟ ಪಾಠದ ಜತೆ ಗುರುಕುಲದ ಕೆಲಸ - ದನದ ಕೊಟ್ಟಿಗೆ ತೊಳೆಯುವುದು, ದನಗಳನ್ನು ಮೇಯಿಸಲು ಕರೆದುಕೊಂಡು ಹೋಗುವುದು, ಮನೆಗೆ ಬೇಕಾದ ಸೊಪ್ಪು ಸದೆಗಳನ್ನು ಹೊತ್ತು ತರುವುದು ಇತ್ಯಾದಿ. ಒಂದು ದಿನ ಗುರುಪತ್ನಿ ನೋಡುತ್ತಾಳೆ ಅಡುಗೆಗೆ ಸೌದೆ ಕಡಿಮೆಯಿತ್ತು. ಧೌಮ್ಯ ಋಷಿಗಳು ಅರುಣಿಯನ್ನು ಸೌದೆ ತರಲು ಕಾಡಿಗೆ ಹೊರಡಿಸಿದರು. ಅರುಣಿಗೆ ಖುಷಿ. 'ಗುರುಗಳಿಗೆ ಅವರು ತನಗೆ ಒಪ್ಪಿಸಿದ ಕೆಲಸ ಸರಿಯಾಗಿ ನಿಭಾಯಿಸುತ್ತೇನೆಂಬುದು ನನ್ನ ಮೇಲೆ ವಿಶ್ವಾಸ ಅದಕ್ಕೆ ನನ್ನನ್ನು ಕಳುಹಿಸುತ್ತಾರೆ' ಎಂದು ತನ್ನಷ್ಟಕ್ಕೆ ಅಂದುಕೊಂಡು ಗುರುಗಳು ಕಲಿಸಿದ ಶ್ಲೋಕಗಳನ್ನು ಮನನ ಮಾಡುತ್ತ ಕಾಡಿಗೆ ಹೋಗುತ್ತಾನೆ. ಅಲ್ಲಿ ಒಣ ಸೌದೆಯನ್ನು ರಾಶಿ ಹಾಕಿ ಸಾಕಷ್ಟು ಸೌದೆ ಆಯ್ದುಕೊಂಡಾದ ಮೇಲೆ ಅವನ್ನು ಸೆಣಬಿನಿಂದ ಕಟ್ಟಿ ತಲೆ ಮೇಲಿಟ್ಟುಕೊಂಡು ಇನ್ನೇನೂ ಆಶ್ರಮಕ್ಕೆ ಹೊರಡಬೇಕು, ಅನ್ನುವಷ್ಟರಲ್ಲಿ ಆಕಾಶದಲ್ಲೆಲ್ಲ ಕಪ್ಪು ಮೋಡಗಳು. ಬೇಗ ಬೇಗ ಹೆಜ್ಜೆ ಹಾಕಿದ ಅರುಣಿ ಆದರೆ ಅಷ್ಟರಲ್ಲೇ ಜೋರಾಗಿ ಗಾಳಿ ಮಳೆ ಶುರುವಾಗಿ ಬಿಡ್ತು. ಆಶ್ರಮದ ದಾರಿಯಲ್ಲೇ ಧೌಮ್ಯ ಋಷಿಗಳ ಗದ್ದೆ, ಅಲ್ಲಿ ಸುಮಾರಾಗಿ ಮೇಲೆ ಬಂದ ಬತ್ತದ ಪೈರು. ಗದ್ದೆ ಸುತ್ತ ಒಡ್ಡಿದ ಕಟ್ಟೆ. ಅರುಣಿ ಗದ್ದೆಯ ಬಳಿಗೆ ಬರಲಿಕ್ಕೂ ಕಟ್ಟೆಗೆ/ ದಂಡೆಗೆ (ಬದುವು) ಒಂದು ಬಿರುಕು ಮೂಡಿದುದು ಕಾಣಿಸಿತು. ಅದರಿಂದ ನೀರು ಗದ್ದೆಯ ಒಳ ಹೊಕ್ಕಲು ಪರಿಕ್ರಮಿಸಿತು. ನೋಡನೋಡುತ್ತ ಬಿರುಕು ದೊಡ್ಡದಾಗುತ್ತ ಹೋಯಿತು. 'ಅಯ್ಯೋ ಪೈರು ಎಲ್ಲ ನಾಶವಾದರೆ ಋಷಿಗಳು ಏನನ್ನು ಊಟ ಮಾಡುತ್ತಾರೆ ಅಂತ ಸೌದೆಯ ರಾಶಿಯನ್ನು ನೆಲಕ್ಕೆ ಕೆಡವಿ ಕಲ್ಲು ಮಣ್ಣುಗಳಿಂದ ಆ ಬಿರುಕನ್ನು ತುಂಬುವ ಪ್ರಯತ್ನ ಮಾಡುತ್ತಾನೆ ಅರುಣಿ. ಅವನ ಕೈ, ಬೆರಳು ಸೋತು ಹೋಯಿತೆ ವಿನ: ಧಾರಾಕಾರ ಮಳೆಗೆ ಅವನು ಬಿರುಕು ತುಂಬುವ ಪ್ರಯತ್ನದಲ್ಲಿ ವಿಫಲನಾದ. ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು ಆ ಬಿರುಕಿಗೆ ತನ್ನ ಬೆನ್ನನ್ನು ಒತ್ತಿ ಕೊಂಡು ಅಡ್ಡಡ್ಡಲಾಗಿ ಮಲಗಿಕೊಂಡ.
ಇತ್ತ ಎಷ್ಟು ಹೊತ್ತ್ತಾದರೂ ಅರುಣಿ ಬಾರದೆ ಇದ್ದದ್ದು ಋಷಿ ಧೌಮ್ಯರಿಗೆ ಚಿಂತೆಗೆ ಹಚ್ಚಿಕೊಂಡಿತು. ಹೇಳಿದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುವುದು ಅರುಣಿಯ ಸ್ವಭಾವ. ಆಶ್ರಮಕ್ಕೆ ಮರಳದೇ ಇರಲು ಬಲವಾದ ಕಾರಣ ಇರಲೇಬೇಕು. ಬಹುಶ: ಬಿದ್ದು ಗಿದ್ದು ಏಟಾಗಿರ ಬಹುದು ಅಂತ ಭಾವಿಸಿ ಆಶ್ರಮದ ಇತರೇ 5 ದೊಡ್ಡ ಹುಡುಗರ ಸಂಗಡ ಅವರು ಅರುಣಿಯನ್ನು ಹುಡುಕುತ್ತ ಕಾಡಿಗೆ ಹೊರಟರು. ಅವರೂ ತಮ್ಮ ಗದ್ದೆಯ ಬಳಿಗೆ ಬರುತ್ತಿದ್ದಂತೆ ಮಳೆಯ ರಭಸ ಹಾಗೂ ಧೋ ಎನ್ನುವ ಅದರ ಸದ್ದನ್ನು ಆಲಿಸಿ ಈ ವರ್ಷ ನಮ್ಮ ಗದ್ದೆ ಹೋದಂತೆಯೇ ಅಂತ ತುಂಬ ದು:ಖದಿಂದ ನಿಡುಸುಯ್ದು ಹಾಗೆ ಮುಂದಕ್ಕೆ ಹೋಗಿ ನೋಡುತ್ತಾರೆ ಏನಾಶ್ಚರ್ಯ ಗದ್ದೆಯಲ್ಲಿ ಅಷ್ಟು ನೀರು ತುಂಬದೆ ಫಸಲು ಸುರಕ್ಷಿತವಾಗಿ ರಾರಾಜಿಸುತ್ತಿತ್ತು. ಯಾಕೋ ಅನುಮಾನಗೊಂಡು 'ಅರುಣೀssssss' ಎಂದು ಕೂಗು ಹಾಕಿದರು. ದೂರದಿಂದ ಅಸ್ಪಷ್ಟವಾಗಿ 'ಗುರುಗಳೇ' ಅಂತ ಪ್ರತ್ಯುತ್ತರ ಸಿಕ್ಕ ಹಾಗೆ ಅನಿಸಿ ಧೌಮ್ಯರಿಗೆ. ಆ ದನಿಯ ಜಾಡನ್ನು ಅರಿಸಿ ಹೊರಟರೆ ಬಿರುಕನ್ನು ಮುಚ್ಚುವ ಪ್ರಯತ್ನದಲ್ಲಿ ದಂಡೆಗೆ ಅಡ್ಡ ಮಲಗಿದ  ಅರುಣಿ ಕಾಣಿಸಿದ. ಕೂಡಲೇ ದೊಡ್ಡ ಹುಡುಗರನ್ನು ಕಟ್ಟೆಯ ಅಂಚಿನ ದುರಸ್ತಿಗೆ ಹಚ್ಚಿ ಅರುಣಿಯನ್ನು ಎತ್ತಿಕೊಂಡು ಆಶ್ರಮಕ್ಕೆ ನಡೆದರು ಧೌಮ್ಯ ಋಷಿ.
ಅವನ ಶುಶ್ರೂಷೆ ಮಾಡಿ ಅವನಿಗೆ ಪ್ರೀತಿಯಿಂದ ಉದ್ದಾಲಕ-ಅರುಣಿ (ಉದ್ದಾಲಕ ಎಂದರೆ ದಂಡೆ/ಬದುವಿನಿಂದ ಎಬ್ಬಿಸಲ್ಪಟ್ಟವನು ಅಂತ) ಎಂಬ ಬಿರುದನ್ನು ದಯಪಾಲಿಸಿದರು ಗುರುಗಳು. ಮುಂದೆ ಉದ್ದಾಲಕನೂ ಉಪನಿಶತ್ತುಗಳನ್ನು ಕಲಿತು ಪಾಂಡಿತ್ಯದಿಂದ ಕೂಡಿದ ಋಷಿಯಾದನು. ಅವರಿಗೆ ಪಂಡಿತೋತ್ತಮರಾದ ಶ್ವೇತಕೇತು ಎಂಬ ಮಗನೂ  ಅಷ್ಟಾವಕ್ರ ಎಂಬ ಮೊಮ್ಮಗನೂ ಹುಟ್ಟಿದ.
ಆಗಿನ ಕಾಲದಲ್ಲಿ ಗುರು ಶಿಷ್ಯರ ನಡುವೆ  ಪ್ರೀತಿ ಗೌರವ ಸೌಹಾರ್ದದಿಂದ ಕೂಡಿದ ಸಂಬಂಧವಿತ್ತು. ಈಗ ಗುರುಗಳು ಏನಾದರೂ ಬೈದಲ್ಲಿ ಕೂಡಲೆ ಪಾಲಕರಿಗೆ ಸುದ್ದಿ ಮುಟ್ಟಿ - ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಬದಲು ಅವರು ಗುರುಗಳಿಗೆ ಗುರ್ರ್sss ಅನ್ನುವವರೇ ಜಾಸ್ತಿ.
ಬೇರೆಲ್ಲೂ ಕೆಲಸ ಸಿಕ್ಕದವರೂ ಕೊನೆಗೆ ಟೀಚರ್ ಆಗಿ ಮನಸ್ಸಿಲ್ಲದ ಮನಸ್ಸಿನಿಂದ ಮಕ್ಕಳನ್ನು ಕಲಿಸುವುದಕ್ಕಿಂತ ದಂಡಿಸುವುದನ್ನೆ ಹೆಚ್ಚಾಗಿ ಮಾಡುವವರು ಇದ್ದಾರೆ. ನಮಗೆ ನಮ್ಮ ಶಿಕ್ಷಕರ ಕುರಿತು ಇದ್ದ ಗೌರವ ಈಗಿನ ಮಕ್ಕಳಲ್ಲಿ ಖಂಡಿತ ಇಲ್ಲ. ಇದಕ್ಕೆ ಗುರುಗಳೂ ಕಾರಣರು ಹೌದು.
ಇವತ್ತು ಎಂ. ಜಿ ರೋಡ್ ಕಡೆ ಹೋಗ್ತಾ ಅಜ್ಜ ಹೇಳಿದ ಈ ಕತೆ ನೆನಪಾಯ್ತು. ನಿಮಗೂ ಈ ಕತೆ ಗೊತ್ತಿರಬಹುದು. ಸುಮ್ನೆ ನಿಮ್ಮ ಮನಸ್ಸನ್ನು ನೆನಪನ್ನು ರಿಫ್ರೆಶ್ ಮಾಡಿಕೊಳ್ಳಿ. ಇನ್ನೇನಾದರೂ ಈ ಕತೆ ಬಗ್ಗೆ ಗೊತ್ತಿದ್ದಲ್ಲಿ ಪ್ಲೀಸ್ ಶೇರ್ ಮಾಡಿ. ಕತೆ Pure ಕನ್ನಡದಲ್ಲೇ ಬರೆದಿದ್ದೀನಿ.
ಅಲ್ಲಿ ರೂಮ್ ನಲ್ಲಿ ನಿಹಾ ತನ್ನ ಶಿಕ್ಷಕರಿಗೋಸ್ಕರ ಚಿಕ್ಕ ಪುಟ್ಟ ಕಾಣಿಕೆ( ಕೈಯಾರೆ) ತಯಾರಿಸುವುದರಲ್ಲಿ ನಿರತಳಾಗಿದ್ದಾಳೆ. ಅವರಿಗೋಸ್ಕರ ವಿವಿಧ ಆಟಗಳನ್ನು ರೂಪಿಸಿದ್ದಾಳೆ. ಫೋಟೊ ತೆಗೆದರೆ ಇಲ್ಲಿ ನಂತರ ಹಾಕುತ್ತೇನೆ.

ಸುಮ್ನೆ ಶೇರಿಂಗ್: ನಾವು ಬೆಂಗಳೂರಿಗೆ ಬಂದ ಹೊಸತರಲ್ಲಿ ಒಂದು ಸಂಗೀತ ಕಾರ್ಯಕ್ರಮಕ್ಕೆ ಹೋಗಿದ್ದೆವು. ಹಿಂದಿನಿಂದ ನನಗೆ 'ಮಾಲತಿ ಶೆಣೈ' ಅಂತ ಕರೆದ ಹಾಗೆ ಅನ್ನಿಸಿ ತಿರುಗಿ ನೋಡಿದರೆ ನಾನು ಮಣಿಪಾಲದಲ್ಲಿ ಕೆಲಸಕ್ಕಿದ್ದಾಗ ನನ್ನ ಜತೆಯ ಹುಡುಗಿ. ಕೂಡಲೆ ಅವಳ ಹೆಸರು ನೆನಪಿಗೆ ಬರಲಿಲ್ಲ. ಕಾರ್ಯಕ್ರಮ ಮುಕ್ತಾಯದ ನಂತರ ಮಾತನಾಡುವ ಅಂದಳು ನಾನು ಸರಿ ಅಂದೆ. ತಟ್ಟನೆ ಅವಳ ಹೆಸರು ರಕ್ಷಿತಾ, ಮದುವೆ ಆದ ಮೇಲೆ ಅವಳು ಬೆಂಗಳೂರಿಗೆ ಬಂದಿದ್ದು ನೆನಪಾಯಿತು. ಕಾರ್ಯಕ್ರಮದ ನಂತರ ನಾನು ಅವರಿಗಾಗಿ ಕಾದೆ. ಅವಳ ಮಾವ ನವರನ್ನು ಪರಿಚಯಿಸಬೇಕಾದರೆ ಶ್ರೀಕಾಂತ 'ಅರೇ ನಮ್ಮ ಮೇಸ್ಟ್ರು ಅಂತ ಸಂಭ್ರಮ ಪಟ್ಟು ಅವರ ಕಾಲಿಗೆ ಎರಗಿದರು. ನಾನು ಹಾಗೆ ಮಾಡಿದ್ದರಿಂದಲೋ ಏನೋ ಮಾಲವಿಕಾ ನಿಹಾರಿಕಾ ಕೂದ ಅಲ್ಲೆ ಹಾಲ್ ನಲ್ಲಿ ಅವರ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿದರು. ನೋಡುಗರಿಗೆ ಕುತೂಹಲ. ಶ್ರೀಕಾಂತ ಅವರನ್ನು 'ನಮ್ಮ ಮೇಷ್ಟ್ರು, ಅವರಿಗೆ ನೆನಪಿರಲಿಕ್ಕಿಲ್ಲ , ಇವರ ಹೆಸರು ಶ್ರೀನಿವಾಸ ಉಡುಪ ಅಂತ ನನ್ನ ಬಳಿ ಪರಿಚಯ್ರ ಮಾಡಿಕೊಟ್ಟರು. ಅವರಿಗೂ ಸಂತಸ ಅವರ ಮಗ ಕೂಡ ಶ್ರೀಕಾಂತ, ರಕ್ಷಿತಾನ ಮಾವ ಹಾಗೂ ಪತಿ ಅಂತ ತಿಳಿದು ಖುಶಿ. ಶ್ರೀಕಾಂತ ಬ್ಯಾಂಕ್ ಬಿಟ್ಟು ನಮ್ಮದೆ ಸಂಸ್ಥೆ ಎಲ್ಲ ಆರಂಭಿಸಿದ್ದು ಕೇಳಿ ತುಂಬಾ ಹೆಮ್ಮೆ ಪಟ್ಟರು ಶ್ರೀ ಉಡುಪರು. ಈ ಮೈಲ್, ಫೋನ್ ನಂಬರ್ ಎಲ್ಲ  ವಿನಿಮಯ ಮಾಡಿಕೊಂಡೆವು. ಆದರೆ ನಾವು ಮನೆ ಬದಲಾಯಿಸಿದಾಗ ಎಲ್ಲ ಕಳೆದುಹೋಗಿದೆ. ಮಿತ್ರ ರಘು ಅವರೊಂದಿಗೆ ಸಂಪರ್ಕದಿಂದಿರುವುದರಿಂದ ಅವರ ಬಗ್ಗೆ ನನಗೆ ತಿಳಿಸುತ್ತಿರುತ್ತಾರೆ.

ನನ್ನ ಹಳೇ ಪೋಸ್ಟ್ ಗಳಿಗೆ ಕೊಂಡಿ



Happy teachers day ಎಲ್ಲರಿಗೂ
:-) :-)

September 1, 2013

ಆಶಾ ದೀಪ

ಜನವರೀ ಮೊದಲನೇ ವಾರಕ್ಕೆ  ಪ್ರಶಾಂತ ಸುಲತಾ ಅಮೇರಿಕೆಗೆ ಹಾರಿದರು. ಒಂದೆರಡು ದಿನ ಅವನು ಮನೆಯಲ್ಲೇ ಇದ್ದ. ಅವಳಿಗೆ ಆದಷ್ಟು ಮನೆಯ ಬಗ್ಗೆ ತಿಳಿಹೇಳಿದ. ದೊಡ್ಡ ಮನೆ. ಅಕ್ಕಪಕ್ಕ ಕಣ್ಣು ಹಾಯಿಸುವ ಅಳತೆಗೆ ಒಂದೂ ಮನೆಯಿರಲಿಲ್ಲ. ಅವರು ತಲುಪಿದ್ದು ರಾತ್ರಿಯ ಸಮಯ ಹಾಗಾಗಿ ಏನೂ ಕಾಣುತ್ತಿರಲಿಲ್ಲ. ಪ್ರಶಾಂತ ಮದುವೆಗೆಂದು ಭಾರತಕ್ಕೆ ಬಂದಾಗ, ಅವನ ಕಂಪೆನಿಯಲ್ಲಿ ಮೀಟಿಂಗ್ ನಡೆದು ಅವನಿಗೆ ಹೆಚ್ಚಿನ ಜವಾಬ್ದಾರಿಯುತ ಕೆಲಸ ಕೊಟ್ಟು ವೇತನ ಕೂಡ ಜಾಸ್ತಿ ಮಾಡಲಾಗಿತ್ತು. ಆ ದೆಸೆಯಿಂದ ಅವನು ಇನ್ನು ಎರಡು ದಿನಕ್ಕೇ ಇನ್ನೊಂದು ಸ್ಥಳಕ್ಕೆ ಪ್ರಾಜೆಕ್ಟ್ ಸೈಟ್ ಭೇಟಿ ನೀಡಲು ಹೋಗಲೇ ಬೇಕಿತ್ತು.

ಸುಲತಾಳಿಗೆ ತನ್ನ ಹಳ್ಳಿಯೊಂದು ಬಿಟ್ಟು ಯಾವುದೇ ದೊಡ್ಡ ಊರು ನೋಡಿ ಸಹ ಗೊತ್ತಿರಲಿಲ್ಲ. ತಲುಪಿದ ಮಾರನೇ ದಿನ ಅವನು ಸೂಪರ್ ಸ್ಟೋರ್ ಗೆ ಹೋಗಿ ಮನೆಗೆ ಬೇಕಾಗುವ ಸಾಮಾನು ತರಕಾರಿಗಳನ್ನು ತಂದು ಹಾಕಿದ್ದ. ಉಳಿದ ಇನ್ನೊಂದು ದಿನ ಅವನು ಮನೆಯ ಹತ್ತು ಹಲವಾರು ಉಪಕರಣಗಳನ್ನು ಹೇಗೆ ಉಪಯೋಗಿಸುವುದು, ಮನೆಗೆ ಹೇಗೆ ಬೀಗ ಹಾಕುವುದು, ಅಡುಗೆ ಮನೆಯ ಸ್ಮೋಕ್ ಡಿಟೆಕ್ಟರ್ ಬಗ್ಗೆ ಮುಂತಾದ ಕೆಲವು ಮಾಹಿತಿ ನೀಡಿದ. ಮೂರನೇ ದಿನ ಫುರ್ ಅಂತ ಹಾರಿ ಹೋದ. 

ಸುಲತಾಗೆ ಏನೂ ಮಾಡ ಬೇಕೆಂಬುದೇ ತೋಚಲಿಲ್ಲ. ಕಿಟಕಿಯ ಪರದೆಯನ್ನು ಸರಿಸಿದರೆ ಏನಿದೆ ಅಲ್ಲಿ ನೋಡಲು? ಎಲ್ಲೆಲ್ಲೂ ಹಿಮದ ರಾಶಿ. ಕಣ್ಣು ನೋವಾಗುವಷ್ಟು ಬಿಳಿ. ಒಂದು ನರಪಿಳ್ಳೆಯ ಸುಳಿವು ಕೂಡ ಸಿಗದಷ್ಟು ಹಿಮದ ರಾಶಿ. ಪುನ: ಒಳಗೆ ಬಂದು ಟಿ ವಿ ನಾದರೂ ನೋಡುವ ಅಂದರೆ ಹಲವಾರು ಇಂಗ್ಲಿಷ್ ಚ್ಯಾನೆಲ್ ಗಳು. ಅವಳ ಕಲಿತ ಹಳ್ಳಿಯ ಇಂಗ್ಲಿಷ್ ಗೂ ಇದಕ್ಕೂ ತಾಳೆಯಾಗಲಿಲ್ಲ  ಅರ್ಥಕೂಡ ಆಗಲಿಲ್ಲ. ಸುಮ್ಮನೆ ಚಿತ್ರಗಳನ್ನು ನೋಡುತ್ತ ಕುಳಿತಳು. ಅಡಿಗೆ ಮನೆಗೆ ಹೋದರೆ ಯಾವ್ ಯಾವುದು ಎಲ್ಲಿದೆ ಅಂತ ಹುಡುಕುವುದೇ ಅರ್ಧ ದಿನ ಆಯಿತು. ಅಷ್ಟರಲ್ಲಿ ಒಗ್ಗರಣೆಯ ಹೊಗೆ ತುಂಬಿ ಸ್ಮೋಕ್ ಸೈರನ್ ಶುರು ಹಚ್ಚಿಕೊಂಡಿತು. ಸುಲತಾ ತಬ್ಬಿಬ್ಬಾಗಿ ನೋಡುತ್ತ ನಿಂತಿರಬೇಕಾದರೆ ಹೊರಗಡೆ ಬಾಗಿಲು ದಬ ದಬನೆ ಸದ್ದು ಮಾಡಿತು. ಬಾಗಿಲು ತೆಗೆದಾಗ ಮೂರು ನಾಲ್ಕು ಸಮವಸ್ತ್ರಧಾರಿಗಳು ಇಂಗ್ಲಿಷ್ ನಲ್ಲಿ ಏನೇನೋ ಕೇಳುತ್ತ ಅವಳಿಂದ ಉತ್ತರ ಬಾರದೆ ಅವಳನ್ನು ದೂಡಿಕೊಂಡು ಅಡಿಗೆ ಮನೆ ಕಡೆ ಓಡಿದರು. ಅವರು ಸ್ಮೋಕ್ ಅಲಾರಾಂ ಅನ್ನು ಬಂದ್ ಮಾಡಿ ಹೊರಹೊರಟರು. ಆಮೇಲೆ ಅಡಿಗೆ ಮನೆಗೆ ಹೋಗುವ ದುಸ್ಸಾಹಸ ಮಾಡಲಿಲ್ಲ ಸುಲತಾ. ಫ್ರಿಜ್ ನಲ್ಲಿದ್ದ ಚಾಕೋಲೇಟ್ ಹಣ್ಣುಗಳನ್ನು ತಿಂದಳು. ಎರಡು ದಿನದ ನಂತರ ಬರಲಿರುವ ಪ್ರಶಾಂತ್ ನ ದಾರಿ ಕಾಯುತ್ತ. ಆದರೆ ಅವನು ಹೋದ ಊರಲ್ಲಿ ಹಿಮದ ಜತೆ ಧಾರಾಕಾರವಾಗಿ ಮಳೆ ಸುರಿದು ಆ ಊರಿನಿಂದ ಅಲ್ಲಾಡಲು ಆಗದಷ್ಟು ವಿಪರೀತ ಪರಿಸ್ಥಿತಿ ಹುಟ್ಟಿಕೊಂಡಿತು. ಅವನು ಫೋನ್ ಮಾಡಿ ಸುಲತಾಗೆ ಸಧ್ಯಕ್ಕೆ ಬರಲು ಆಗಲಿಕ್ಕಿಲ್ಲ, ಆದರೆ ನೀನು ವರಿ ಮಾಡಬೇಡ ವೀಕ್ ಎಂಡ್ ನನ್ನ ಕನ್ನಡಿಗ ಫ್ರೆಂಡ್ ಮತ್ತು ಅವನ ಹೆಂಡತಿ ನಮ್ಮಲ್ಲಿಗೆ ಬಂದಿರುತ್ತಾರೆ. ಅವನು ಸೋಮವಾರ ಹೊರಡುತ್ತಾನೆ, ಅವನ ಹೆಂಡತಿ ರಮಾ ನಿನಗೆ ಈ ದೇಶದ ರೀತಿ ನೀತಿ ತಿಳಿಸುತ್ತಾಳೆ. ನಾನು ಬರುವುದು ವಿಳಂಬ ವಾಗುತ್ತದೆ ಸ್ವಲ್ಪ ತಡಕೋ ಚಿನ್ನ ಎಂದಾಗ ಅವಳಿಗೆ ಅಳು ಉಕ್ಕಿ ಬಂತು.

ಸ್ಮೋಕ್ ಸೈರನ್ ಆಫ್ ಮಾಡಿದ್ದು ನೋಡಿಟ್ಟುಕೊಂಡಿದ್ದಳು ಸುಲತಾ. ಹಾಗಾಗಿ ಪ್ರಶಾಂತನ ಮಿತ್ರರ ಕುಟುಂಬ ಕನ್ನಡದವರೆಂದು ಕೇಳಿ ಸಂತಸದಿಂದ ಅವಳು ಅಡಿಗೆ ಮಾಡಲು ಆರಂಭಿಸಿದಳು. ಅಮ್ಮ ಊರಿನಿಂದ ಬರುವಾಗ ಕಟ್ಟಿಕೊಟ್ಟ ಸಾಂಬಾರ್, ಹುಳಿ ಪೌಡರ್, ಉಪ್ಪಿನಕಾಯಿ ಹಪ್ಪಳ, ಸಂಡಿಗೆ ಎಲ್ಲ ಟೇಬಲ್ ಮೇಲೆ ಅಣಿಮಾಡಿಟ್ಟುಕೊಂಡಳು. ಸ್ವಲ್ಪ ರಸಂ, ಒಂದು ಮಿಶ್ರ ತರಕಾರಿಗಳ ಹುಳಿ, ಹಪ್ಪಳ ಸಂಡಿಗೆ ಕರಿದಿಟ್ಟು ಪುನ: ಸ್ಮೋಕ್ ಸೈರನ್ ಆನ್ ಮಾಡಿಟ್ಟಳು. ಪ್ರಶಾಂತ ತಂದ ಸಾಮಾನುಗಳಲ್ಲಿ ಒಂದು ದೊಡ್ಡ ಪ್ಯಾಕೆಟ್ ಅಕ್ಕಿಯನ್ನು ನೋಡಿದಳು. ಪೊಟ್ಟಣದ ಹಿಂಬದಿಯಿದ್ದ ಅನ್ನ ತಯಾರು ಮಾಡುವ ಬಗೆ ಓದಿ, ಗ್ಯಾಸ್ ಸ್ಟವ್ ಮೇಲೆ 'ಬಸಿದು ಹಾಕಿದ ಅನ್ನ' ಮಾಡಿಟ್ಟಳು. ಅನ್ನ ಬಿಡಿ ಬಿಡಿಯಾಗಿ ಮಲ್ಲಿಗೆ ತರಹ ಸಿದ್ದವಾಯಿತು. ಇನ್ನೂ ಅವಳು ಮೈಕ್ರೋವೇವ್ ಡಿಶ್ ವಾಶರ್ ಬಗ್ಗೆ ಕಲಿಯಬೇಕಿತ್ತಷ್ಟೆ. ಶುಕ್ರವಾರ ಸಂಜೆ ಪ್ರಶಾಂತ ನ ಮಿತ್ರರು ಪರಶು- ರಮಾ- ಮನೆಗೆ ತಲುಪುವಾಗ ತಡ ರಾತ್ರಿ. ಹಿಮದ ದೆಸೆಯಿಂದ ಜಾರದಂತೆ ನಿಧಾನಕ್ಕೆ ಗಾಡಿ ಚಲಾಯಿಸಿಕೊಂಡು ಬಂದಿದ್ದರು. ಹಲವಾರು ದಿನಗಳ ನಂತರ ಕನ್ನಡ ಮಾತನಾಡಲು ಸಿಕ್ಕಿದ್ದು ಸುಲತಾಗೆ ತುಂಬ ಖುಶಿ. ಅಡಿಗೆಯನ್ನು ಮೈಕ್ರೋವೇವ್ ಪಾತ್ರೆಯಲ್ಲಿ ಬಿಸಿ ಮಾಡಿಕೊಡುವ ಮೊದಲ ಪಾಠ ರಮಾಳಿಂದ ಸುಲತಾಗೆ. ಅಡಿಗೆಯನ್ನು ಹೊಗಳಿ ಹೊಗಳಿ, ಸುಲತಾಳ ಸ್ಮೋಕ್ ಅಲರಾಂ ಕತೆ ಕೇಳಿ ನಕ್ಕು, ಅವಳು ಅಡಿಗೆ ಮಾಡುವಾಗ ಅದನ್ನು ಬಂದ್ ಮಾಡಿಟ್ಟಿದ್ದಕೆ ಹೊಗಳಿ ಇಬ್ಬರೂ ಊಟ ಮಾಡಿ ಬೇಗನೆ ಮಲಗಿ ಬಿಟ್ಟರು. ಸುಲತಾ ಅಡಿಗೆ ಮನೆ ಚೊಕ್ಕ ಮಾಡಿಟ್ಟು, ರಮಾ ತನಗೋಸ್ಕರ ತಂದಿದ್ದ ಹೂ ಗುಚ್ಛ ನೋಡಿದಳು. ಅದರಲ್ಲಿನ ಹೂ ಗಳನ್ನು ಬಿಡಿಸಿಟ್ಟು ದೊಡ್ಡ ಅಲಂಕಾರಿಕ ಪಾತ್ರೆಯಲ್ಲಿ ಅದನ್ನು ಸುಂದರವಾಗಿ ಜೋಡಿಸಿಟ್ಟಲು. ಆಮೇಲೆ ಮಾಡಲು ಏನೂ ಕೆಲಸವಿಲ್ಲದಿದ್ದುರರಿಂದ ಅವಳು ತನ್ನ ಕೋಣೆಗೆ ಹೋಗಿ ಮಲಗಿ ಬಿಟ್ಟಳು.

ಭಾನುವಾರ ಬೆಳಿಗ್ಗೆ ರಮಾ ಎದ್ದಿದ್ದವಳೆ, ಸುಲತಾ ಒಳಗೆ ಕಾಫಿ ಹೇಗೆ ಮಾಡುವುದೆಂದು ತಲೆ ಕೆರೆದುಕೊಳ್ಳುತ್ತಿದ್ದರೆ, ಹೊರಗಿನಿಂದ ವಾವ್ ಎನ್ನುವ ಉದ್ಗಾರ ಕೇಳಿಸಿತು. ಹೊರಗಡೆ ಬಂದು ನೋಡಿದಾಗ, ಹಿಂದಿನ  ರಾತ್ರಿ ಸುಲತಾ ಜೋಡಿಸಿಟ್ಟ ಹೂಗಳ ಸಾಲುಗಳನ್ನು ಬಿಟ್ಟ ಬಾಯಿಯಿಂದ ತದೇಕಚಿತ್ತಳಾಗಿ ನೋಡುತ್ತಿದ್ದ ರಮಾ ಕಾಣಿಸಿದಳು. ಅರೇ ಯಾರ್ ತುಂಬಾ ಚೆನ್ನಾಗಿದೆ ಹೂಗಳ ಜೋಡನೆ, ಇದನ್ನೆ ಬಿಸಿನೆಸ್ ಆಗಿ ಮಾಡಿದರೆ ತುಂಬ ದುಡ್ಡು ಮಾಡಬಹುದು ನೀನು ಎಂದಳು. 
ನಂತರ ಸುಲತಾಳನ್ನು ಬೇಸ್‌ಮೆಂಟ್ ಕೆ ಕರೆದುಕೊಂಡು ಹೋಗಿ ವಾಶಿಂಗ್ ಮಶೀನ್ ಹೇಗೆ ನಡೆಸುವುದು, ಡಿಶ್ ವಾಶರ್ ಹೇಗೆ ಉಪಯೋಗಿಸುವುದು ಮುಂತಾದನ್ನು ಕಲಿಸಿದಳು. ಸೋಮವಾರ ಬೆಳಿಗ್ಗೆ ಅವಳನ್ನು ಹತ್ತಿರದ ಮಾಲ್, ಆಸ್ಪತ್ರೆ, ಲೈಬ್ರರಿ, ಶಾಲೆ ಗಳನೆಲ್ಲ ಪರಿಚಯಿಸಿದಳು ರಮಾ. ಮೊದಲಿಗೆ ನೀನು ಡ್ರೈವಿಂಗ್ ಕಲೀಬೇಕು ಇಲ್ಲದಿದ್ದರೆ ನೀನು ಸಿಕ್ಕಾಕೋತೀಯಾ ಇಲ್ಲಿ ಬಸ್ ಗಳು ತುಂಬಾ ಕಡಿಮೆ. ನೀನಿರುವ ಊರಿಗೆ ಸಬ್‌ಅರ್ಬ್ಸ್ ಅನ್ನುತ್ತಾರೆ. ಸಿಟಿಯಾದರೆ ನಿನಗೆ ಬಸ್ ಗಳು ಮಾತ್ರವಲ್ಲ ಎಲ್ಲ ಸಾಮಾನು ಸರಂಜಾಮುಗಳು ಅಕ್ಕಪಕ್ಕದಲ್ಲೇ ಸಿಗುತ್ತವೆ. ಆ ಮೇಲೆ ಅವಳಿಗೆ ಅಲ್ಲಿನ ಹವಾಮಾನಕ್ಕನುಗುಣವಾದ ಬಟ್ಟೆಗಳನ್ನು ಕೊಡಿಸಿದಳು. ಎಲ್ಲ ಕಾರ್ಡ್ ಮೂಲಕ ಖರೀದಿ. ನೀನೇನು ಚಿಂತೆ ಮಾಡಬೇಡ ಸುಲ್ಲ್ (ಆಗಲೇ ಅವಳ ಹೆಸರು ಕೂಡ ಚಿಕ್ಕಾದಾಯಿತು) ಪ್ರಶಾಂತ ಬಂದ ಮೇಲೆ ದುಡ್ಡು ನನ್ನ ಎಕೌಂಟ್ ಗೆ ಟ್ರಾನ್ಸ್ಫರ್ ಮಾಡುತ್ತಾನೆ. ನೀನು ನಿಶ್ಚಿಂತೆಯಿಂದ ಏನೇನು ಬೇಕೋ ಅದನ್ನು ತೆಗೆದುಕೋ. ಆದರೆ ಸುಲತಾಗೆ ಏನು ತೆಗೆದುಕೊಳ್ಳಬೇಕೆಂದು ಒಂದೂ ತೋಚಲಿಲ್ಲ. 

ಮುಂದಿನ ಮೂರು ವರ್ಷ ಕಳೆಯುವುದರಲ್ಲಿ ಕಾರ್ ಚಲಾಯಿಸುವುದನ್ನು  ಕಲಿತುಕೊಳ್ಳುವುದರಿಂದ ಅಲ್ಲಿನ ಜನರ ಹಾಗೆ ಆಂಗ್ಲ ಭಾಷೆಯನ್ನು ಮಾತನಾಡುವ ಕೋರ್ಸ್ ಮಾಡಿಕೊಂಡು, ಹಳ್ಳಿ ಗೌರಮ್ಮನ ತರಹ ಆಗಿರದೇ, ಅಲ್ಲಿನ ಜನರ ಹಾಗೇ ಉಡುಗೆ ತೊಡುಗೆಗಳನ್ನು ರೂಢಿಮಾಡಿಕೊಂಡು ಸ್ಮಾರ್ಟ್ ಆಗಿ ಪರಿವರ್ತನೆಗೊಂಡಳು, ಚುರುಕು ಬುದ್ದಿಯ ಸುಲತಾ. ಹಾಗೇ ಅವಳು ಇಂಗ್ಲಿಷ್ ನ ಉನ್ನತ ವ್ಯಾಸಂಗಕ್ಕೆ  ಕಲಿಯಲಾರಂಭಿಸಿದಳು. ಕಂಪ್ಯೂಟರ್ ಇಂಟರ್ನೆಟ್ ಗಳಲ್ಲಿಯೂ ತಕ್ಕಮಟ್ಟಿಗೆ ಪರಿಣಿತಿ ಸಾಧಿಸಿದಳು. ಈಗ ಅವಳು ಚೊಚ್ಚಿಲ ಬಸುರಿ.

ಆದರೆ ವಿಧಿಯಾಟ ಬೇರೆ ನೆ ಆಗಿತ್ತು. ಒಂದು ಸಂಜೆ ಆಫಿಸ್ ನಿಂದ ಮರಳುವಾಗ ಪ್ರಶಾಂತ ನ ಕಾರಿಗೆ, ನಿಯಂತ್ರಣ ತಪ್ಪಿದ ಟ್ರಕ್ ಒಂದು ಬಡಿದು, ಪ್ರಶಾಂತ ಜೀವಾಪಾಯದಿಂದೇನೋ ಪಾರಾದ ಆದರೆ ಮೈ ಮೇಲಿನ ನಿಯಂತ್ರಣ ಕಳೆದುಕೊಂಡು ಮಲಗಿದ್ದಲ್ಲಾದ. ಸ್ನೇಹಿತರು ಆಪ್ತೇಷ್ಟರು, ಆಫೀಸಿನ ಸಹೋದ್ಯೋಗಿಗಳೆಲ್ಲ ತುಂಬ ನೆರವಾದರು. ಆದರೆ ಅವನು ಅಲ್ಲಿನ ಕೆಲಸ ಕಳೆದುಕೊಳ್ಳಬೇಕಾಯಿತು. ಸಾಕಷ್ಟು ದುಡ್ಡು, ಇನ್ಸೂರೆನ್ಸ್ ಹಾಗೂ ಅಪಘಾತ ಮಾಡಿದ್ದ ಟ್ರಕ್ ಕಂಪೆನಿ ವತಿಯಿಂದ ದೊಡ್ಡ ಜುಲ್ಮಾನೆಯ ಮೊತ್ತ ಇವರ ಕೈಗೆ ಬಂದಿತ್ತು. ಆದರೆ ಸುಮ್ಮನೆ ಕೂತು ತಿಂದರೆ ಕೂಡಿಟ್ಟ ದುಡ್ಡು ಬೇಗನೆ ಖರ್ಚಾಗುತ್ತೆಂದು, ಹಾಗೂ ಬೇರೆ ದಾರಿಗಾಣದೆ ಇಬ್ಬರೂ ಭಾರತಕ್ಕೆ ಬರುವ ಹಾಗಾಯಿತು.

ಭಾರತಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿ ನೆಲೆಸುವುದಂತಾಯಿತು. ಅವರು ಮಾಡಿದ ಮೊದಲ ಕೆಲಸ ಒಂದು ದೊಡ್ಡ ಎರಡಂತಸ್ತಿನ ಮನೆ ಖರೀದಿ ಮಾಡಿದ್ದು. ಮನೆ ಹೊಸದಾಗೇ ಇತ್ತು ಆದುದರಿಂದ ಮನೆಯಲ್ಲಿ ವ್ಹೀಲ್ ಚೇರ್ ಓಡಾಡುವ ಹಾಗೆ ಸ್ವಲ್ಪ ಬದಲಾವಣೆ ಮಾಡಲಾಯಿತು. ಮೇಲಂತಸ್ಥಿನ ಮನೆಯನ್ನು ಬ್ರಿಗೆಡಿಯರ್ ಒಬ್ಬರಿಗೆ ಬಾಡಿಗೆಗೆ ನೀಡಲಾಯಿತು. ಬ್ರಿಗೇಡಿಯರ್ ಅವರು ನಿವೃತ್ತಿ ಪಡೆದುಕೊಂಡಿದ್ದರು. ಮಗಳು ಬೆಂಗಳೂರಿನ ಕಾಲೇಜು ಒಂದರಲ್ಲಿ ಮೆಡಿಕಲ್ ಓದುತ್ತಿದ್ದರಿಂದ, ದೂರದ ಅಂಬಾಲಾದಿಂದ ಬೆಂಗಳೂರಿನಲ್ಲಿ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಬಂದು ಬಾಡಿಗೆ ಮನೆಯಲ್ಲಿದ್ದರು. ಸುಲತಾಳ ಬಾಣಂತನಕ್ಕೆ ತುಂಬಾನೇ ಸಹಾಯ ಮಾಡಿದ್ದರು ದಂಪತಿಗಳು. ಹಾಗೂ ಅವರ ಮನೆಯಲ್ಲಿ ಕೆಲಸಕ್ಕಿದ್ದವಳು ಇವರ ಮನೆಯಲ್ಲೂ ಕೆಲಸ ಮಾಡಿಕೊಡುತ್ತಿದ್ದಳು.

ಬ್ರಿಗೆಡಿಯರ್ ಅವರಿಗೆ ಕೆಲ ಜನ ಪ್ಂಜಾಬಿ ಸ್ನೇಹಿತರಿದ್ದರು. ಅವರಿಗೆ ಆವಾಗಾವಾಗ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗುತ್ತಿತ್ತು. ಒಂದು ಸಲ ಸುಲತಾ ಅವರಿಗೆ ಚಂದದ ಹೂವಿನ ಎರೆಂಜ್ ಮೆಂಟ್ ಮಾಡಿಕೊಟ್ಟಿದ್ದಳು. ಎಲ್ಲರಿಂದ ವಾಹ್ ವಾಹ ಶಭಾಸ್ ಗಿರಿ ಪಡೆದ ಹಿನ್ನಿಲೆಯಲ್ಲೇ ಬ್ರಿಗೆಡಿಯರ್ ಆಂಟಿ (ಸುಲತಾ ಅವರನ್ನು ಹಾಗೇ ಸಂಬೊಧಿಸುತ್ತಿದ್ದಳು) ನೀನ್ಯಾಕೆ ಜನರಿಗೆ ಹೂವಿನ ವಿನ್ಯಾಸ ಮಾಡಿ ಕೊಡಬಾರದು ಅಂತ. ಅವಳಿಗೆ ಆ ಉಪಾಯ ತುಂಬ ಇಷ್ಟ ವಾಯಿತು.

ಅವರ ಸ್ನೇಹಿತರಲ್ಲೆ ಮೊದಲು ಮೊದಲು ಹೋಗಿ ಹೂವಿನ ವಿನ್ಯಾಸಗಳನ್ನು, ಪಾರ್ಟಿ ರೂಮ್ ಅನ್ನು ಚೆಂದವಾಗಿ ವಿನೂತನ ರೀತಿಯಲ್ಲಿ. ಎಲ್ಲೂ ರಿಪೀಟ್ ಆಗದಂತೆ ಸಿಂಗರಿಸುವುದನ್ನು ಕಲಿತು ದುಡ್ಡು ಮಾಡತೊಡಗಿದಳು. ಮಗು ಹುಟ್ಟಿ ದ ಸಮಯ ಮಲಗಿದ್ದಲ್ಲಿ ಸುಮ್ಮನಿರದೆ ನೆಟ್ ನಲ್ಲಿ ಫ್ಲವರ್ ಎರೆಂಜ್‌ಮೆಂಟ್‌ನಲ್ಲಿ ಬಳಸುವ ಹೊಸ ಹೊಸ ಪರಿಕರಗಳ ಬಗ್ಗೆ ಓದಿ ತಿಳಿದುಕೊಂಡಳು. ಮಗುವಿಗೆ ಒಂದು ವರೆ ತಿಂಗಳು ಆಗುವಷ್ಟರಲ್ಲಿ ಅವಳು ಒಂದು ದಿನ ಕಮರ್ ಶಿಯಲ್ ಸ್ಟ್ರೀಟ್ ಗೆ ಹೋಗಿ ಬಗೆ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ತಂದು ಇಡಲಾರಂಭಿಸಿದಳು. ಮನೆಯ ಒಂದು ಕೊಠಡಿ ಅವಳ ಈ ಕಿರು ಉದ್ಯಮಕ್ಕೆ ಮೀಸಲಿಟ್ಟು ಕೊಂಡಳು. ಎರಡು ಮೂರು ಹೂವಿನ ವ್ಯಾಪಾರಿಗಳ ಬಳಿ ಒಪ್ಪಂದ ಮಾಡಿಕೊಂಡಳು. ಅವರ ಬಳಿ ತಾನು ಆಗಷ್ಟೆ ಮಾಡಿಟ್ಟು ಕೊಂಡ ಚೆಂದದ ವಿಸಿಟಿಂಗ್ ಕಾರ್ಡ್ ಗಳನ್ನು ಕೊಟ್ಟಿದ್ದಳು. ಅವಳು ಹೊರಗೆ ಹೋದಾಗಲೆಲ್ಲ ಬ್ರಿಗೆಡಿಯರ್ ಆಂಟಿ ಮಗುವನ್ನು ನೋಡಿಕೊಳ್ಳುತ್ತಿದ್ದಳು. ಹೀಗೆ ವಾರಕ್ಕೆ ಮೂರು ನಾಲ್ಕು ಮನೆ/ಹಾಲ್ ಗಳನ್ನು ಸಿಂಗರಿಸುವ ಅವಳಿಗೆ ಈಗ ಬಿಡುವಿಲ್ಲದ ಕೆಲಸ. ಮೌಖಿಕವಾಗಿ ಅವಳ ಈ ಕಲಾ ಕೌಶ್ಯಲ್ಯದ ಮಾತು ಹಬ್ಬಿ ಈಗ ಅವಳು ಹೊರದೇಶದಲ್ಲೂ ಬೇಡಿಕೆಯಿರುವ ಹೂವಿನ ವಿನ್ಯಾಸಕಿ. ಈ ಸಲ ಅವಳು ಮೊದಲ ಬಾರಿಗೆ ಒಬ್ಬಳೆ ವಿದೇಶಕ್ಕೆ ಹೊರಟಿದ್ದಾಳೆ. ಅಲ್ಲಿ ಒಬ್ಬರ ಮನೆಯ ಮದುವೆಗೆ ಹೂವಿನ ಅಲಂಕಾರ ಎಲ್ಲ ಸುಲತಂದ್ದೆ. ಪ್ರಶಾಂತ ಗೆ ಅವಳ ಬಗ್ಗೆ ತುಂಬ ಹೆಮ್ಮೆ. ತನ್ನ ಕೊನೆಯ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ಅವನ ದೇಹದ ಸ್ಥಿತಿ 90 % ಸರಿಯಾಗುವ ಭರವಸೆ ನೀಡಿದ್ದಾರೆ. ತಾನು ಓಡಾಡುವಂತಾದ ಮೇಲೆ ಅವಳಿಗೆ ತನ್ನ ಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದಾನೆ. ಮೋಡ ಕವಿದ ವಾತಾವರಣದಲ್ಲಿ ಮೂಡಿದ ಸೂರ್ಯಕಿರಣಗಳಿಂದ ಮನೆಯೊಳಗೆ ಹೊಂಬೆಳಕು ಹರಡಿತು.

ಒಟ್ಟು ಜೀವನದ ಬಂಡಿ ಸಾಗುತ್ತಿದ್ದೆ. ಈಗ ಸುಲತಾ ಳ ಮುಂದಿನ ಯೋಚನೆ ಮಗಳ ಭವಿಷ್ಯ. ಕೂಡಿಟ್ಟಿದ ಹಣದಿಂದ ಸಣ್ಣದೊಂದು ತರಬೇತಿ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿದ್ದಾಳೆ. ಅಲ್ಲದೇ ಕೆಲ ಅನಾಥಾಶ್ರಮದ ಹುಡುಗಿಯರಿಗೆ ತನ್ನ ಅಸಿಸ್ಟೆಂಟ್ ಆಗಿ ತರಬೇತು ಗೊಳಿಸಿ ಅವರ ಜೀವನೋಪಾಯಕ್ಕೆ ದಾರಿ ಮಾಡಿದ್ದಾಳೆ. 

ತನ್ನ ಆಲೋಚನೆಯನ್ನು ಮೊಟಕುಗೊಳಿಸಿ ಬೇಗ ಬೇಗ ತಯಾರಾಗಿ ಎರಡು ಕಡೆ ಹೂವಿನ ವಿನ್ಯಾಸ ಮಾಡಿ ಮಧ್ಯಾಹ್ನದ ನಂತರ ಹೊರ ದೇಶಕ್ಕೆ ಹೊರಡಲು ಕೆಲವು ಲಾಸ್ಟ್ ಮಿನಿಟ್ ಎರೆಂಜ್ ಮೆಂಟ್ ಮಾಡಲಿಕ್ಕಿದೆ. ಅವಳು ಬರುವ ತನಕ ಅವಳ ಅಮ್ಮ ಹಾಗೂ ಅತ್ತೆ ,ಇಬ್ಬರೂ ಸೇರಿ ಮನೆಯನ್ನು ನೋಡುಕೊಳ್ಳುತ್ತಿದ್ದಾರಾದ್ದರಿಂದ ಅವಳು ಪ್ರಶಾಂತ ಹಾಗೂ ಪುಟ್ಟ ಕಂದಮ್ಮಳನ್ನು ಅವರಿಗೊಪ್ಪಿಸಿ ನಿಶ್ಚಿಂತೆಯಿಂದ ಹೋಗಿ ಬರಲು ಅನುವಾಗುತ್ತಿದ್ದಾಳೆ.
(ಕಥೆ ಅಲ್ಲ ಕೇಸ್ ಸ್ಟಡಿ ಅಂತ ಓದಲೇನಡ್ಡಿಯಿಲ್ಲ)
:-)