ಜನವರೀ ಮೊದಲನೇ ವಾರಕ್ಕೆ ಪ್ರಶಾಂತ ಸುಲತಾ ಅಮೇರಿಕೆಗೆ ಹಾರಿದರು. ಒಂದೆರಡು ದಿನ ಅವನು ಮನೆಯಲ್ಲೇ ಇದ್ದ. ಅವಳಿಗೆ ಆದಷ್ಟು ಮನೆಯ ಬಗ್ಗೆ ತಿಳಿಹೇಳಿದ. ದೊಡ್ಡ ಮನೆ. ಅಕ್ಕಪಕ್ಕ ಕಣ್ಣು ಹಾಯಿಸುವ ಅಳತೆಗೆ ಒಂದೂ ಮನೆಯಿರಲಿಲ್ಲ. ಅವರು ತಲುಪಿದ್ದು ರಾತ್ರಿಯ ಸಮಯ ಹಾಗಾಗಿ ಏನೂ ಕಾಣುತ್ತಿರಲಿಲ್ಲ. ಪ್ರಶಾಂತ ಮದುವೆಗೆಂದು ಭಾರತಕ್ಕೆ ಬಂದಾಗ, ಅವನ ಕಂಪೆನಿಯಲ್ಲಿ ಮೀಟಿಂಗ್ ನಡೆದು ಅವನಿಗೆ ಹೆಚ್ಚಿನ ಜವಾಬ್ದಾರಿಯುತ ಕೆಲಸ ಕೊಟ್ಟು ವೇತನ ಕೂಡ ಜಾಸ್ತಿ ಮಾಡಲಾಗಿತ್ತು. ಆ ದೆಸೆಯಿಂದ ಅವನು ಇನ್ನು ಎರಡು ದಿನಕ್ಕೇ ಇನ್ನೊಂದು ಸ್ಥಳಕ್ಕೆ ಪ್ರಾಜೆಕ್ಟ್ ಸೈಟ್ ಭೇಟಿ ನೀಡಲು ಹೋಗಲೇ ಬೇಕಿತ್ತು.
ಸುಲತಾಳಿಗೆ ತನ್ನ ಹಳ್ಳಿಯೊಂದು ಬಿಟ್ಟು ಯಾವುದೇ ದೊಡ್ಡ ಊರು ನೋಡಿ ಸಹ ಗೊತ್ತಿರಲಿಲ್ಲ. ತಲುಪಿದ ಮಾರನೇ ದಿನ ಅವನು ಸೂಪರ್ ಸ್ಟೋರ್ ಗೆ ಹೋಗಿ ಮನೆಗೆ ಬೇಕಾಗುವ ಸಾಮಾನು ತರಕಾರಿಗಳನ್ನು ತಂದು ಹಾಕಿದ್ದ. ಉಳಿದ ಇನ್ನೊಂದು ದಿನ ಅವನು ಮನೆಯ ಹತ್ತು ಹಲವಾರು ಉಪಕರಣಗಳನ್ನು ಹೇಗೆ ಉಪಯೋಗಿಸುವುದು, ಮನೆಗೆ ಹೇಗೆ ಬೀಗ ಹಾಕುವುದು, ಅಡುಗೆ ಮನೆಯ ಸ್ಮೋಕ್ ಡಿಟೆಕ್ಟರ್ ಬಗ್ಗೆ ಮುಂತಾದ ಕೆಲವು ಮಾಹಿತಿ ನೀಡಿದ. ಮೂರನೇ ದಿನ ಫುರ್ ಅಂತ ಹಾರಿ ಹೋದ.
ಸುಲತಾಗೆ ಏನೂ ಮಾಡ ಬೇಕೆಂಬುದೇ ತೋಚಲಿಲ್ಲ. ಕಿಟಕಿಯ ಪರದೆಯನ್ನು ಸರಿಸಿದರೆ ಏನಿದೆ ಅಲ್ಲಿ ನೋಡಲು? ಎಲ್ಲೆಲ್ಲೂ ಹಿಮದ ರಾಶಿ. ಕಣ್ಣು ನೋವಾಗುವಷ್ಟು ಬಿಳಿ. ಒಂದು ನರಪಿಳ್ಳೆಯ ಸುಳಿವು ಕೂಡ ಸಿಗದಷ್ಟು ಹಿಮದ ರಾಶಿ. ಪುನ: ಒಳಗೆ ಬಂದು ಟಿ ವಿ ನಾದರೂ ನೋಡುವ ಅಂದರೆ ಹಲವಾರು ಇಂಗ್ಲಿಷ್ ಚ್ಯಾನೆಲ್ ಗಳು. ಅವಳ ಕಲಿತ ಹಳ್ಳಿಯ ಇಂಗ್ಲಿಷ್ ಗೂ ಇದಕ್ಕೂ ತಾಳೆಯಾಗಲಿಲ್ಲ ಅರ್ಥಕೂಡ ಆಗಲಿಲ್ಲ. ಸುಮ್ಮನೆ ಚಿತ್ರಗಳನ್ನು ನೋಡುತ್ತ ಕುಳಿತಳು. ಅಡಿಗೆ ಮನೆಗೆ ಹೋದರೆ ಯಾವ್ ಯಾವುದು ಎಲ್ಲಿದೆ ಅಂತ ಹುಡುಕುವುದೇ ಅರ್ಧ ದಿನ ಆಯಿತು. ಅಷ್ಟರಲ್ಲಿ ಒಗ್ಗರಣೆಯ ಹೊಗೆ ತುಂಬಿ ಸ್ಮೋಕ್ ಸೈರನ್ ಶುರು ಹಚ್ಚಿಕೊಂಡಿತು. ಸುಲತಾ ತಬ್ಬಿಬ್ಬಾಗಿ ನೋಡುತ್ತ ನಿಂತಿರಬೇಕಾದರೆ ಹೊರಗಡೆ ಬಾಗಿಲು ದಬ ದಬನೆ ಸದ್ದು ಮಾಡಿತು. ಬಾಗಿಲು ತೆಗೆದಾಗ ಮೂರು ನಾಲ್ಕು ಸಮವಸ್ತ್ರಧಾರಿಗಳು ಇಂಗ್ಲಿಷ್ ನಲ್ಲಿ ಏನೇನೋ ಕೇಳುತ್ತ ಅವಳಿಂದ ಉತ್ತರ ಬಾರದೆ ಅವಳನ್ನು ದೂಡಿಕೊಂಡು ಅಡಿಗೆ ಮನೆ ಕಡೆ ಓಡಿದರು. ಅವರು ಸ್ಮೋಕ್ ಅಲಾರಾಂ ಅನ್ನು ಬಂದ್ ಮಾಡಿ ಹೊರಹೊರಟರು. ಆಮೇಲೆ ಅಡಿಗೆ ಮನೆಗೆ ಹೋಗುವ ದುಸ್ಸಾಹಸ ಮಾಡಲಿಲ್ಲ ಸುಲತಾ. ಫ್ರಿಜ್ ನಲ್ಲಿದ್ದ ಚಾಕೋಲೇಟ್ ಹಣ್ಣುಗಳನ್ನು ತಿಂದಳು. ಎರಡು ದಿನದ ನಂತರ ಬರಲಿರುವ ಪ್ರಶಾಂತ್ ನ ದಾರಿ ಕಾಯುತ್ತ. ಆದರೆ ಅವನು ಹೋದ ಊರಲ್ಲಿ ಹಿಮದ ಜತೆ ಧಾರಾಕಾರವಾಗಿ ಮಳೆ ಸುರಿದು ಆ ಊರಿನಿಂದ ಅಲ್ಲಾಡಲು ಆಗದಷ್ಟು ವಿಪರೀತ ಪರಿಸ್ಥಿತಿ ಹುಟ್ಟಿಕೊಂಡಿತು. ಅವನು ಫೋನ್ ಮಾಡಿ ಸುಲತಾಗೆ ಸಧ್ಯಕ್ಕೆ ಬರಲು ಆಗಲಿಕ್ಕಿಲ್ಲ, ಆದರೆ ನೀನು ವರಿ ಮಾಡಬೇಡ ವೀಕ್ ಎಂಡ್ ನನ್ನ ಕನ್ನಡಿಗ ಫ್ರೆಂಡ್ ಮತ್ತು ಅವನ ಹೆಂಡತಿ ನಮ್ಮಲ್ಲಿಗೆ ಬಂದಿರುತ್ತಾರೆ. ಅವನು ಸೋಮವಾರ ಹೊರಡುತ್ತಾನೆ, ಅವನ ಹೆಂಡತಿ ರಮಾ ನಿನಗೆ ಈ ದೇಶದ ರೀತಿ ನೀತಿ ತಿಳಿಸುತ್ತಾಳೆ. ನಾನು ಬರುವುದು ವಿಳಂಬ ವಾಗುತ್ತದೆ ಸ್ವಲ್ಪ ತಡಕೋ ಚಿನ್ನ ಎಂದಾಗ ಅವಳಿಗೆ ಅಳು ಉಕ್ಕಿ ಬಂತು.
ಸ್ಮೋಕ್ ಸೈರನ್ ಆಫ್ ಮಾಡಿದ್ದು ನೋಡಿಟ್ಟುಕೊಂಡಿದ್ದಳು ಸುಲತಾ. ಹಾಗಾಗಿ ಪ್ರಶಾಂತನ ಮಿತ್ರರ ಕುಟುಂಬ ಕನ್ನಡದವರೆಂದು ಕೇಳಿ ಸಂತಸದಿಂದ ಅವಳು ಅಡಿಗೆ ಮಾಡಲು ಆರಂಭಿಸಿದಳು. ಅಮ್ಮ ಊರಿನಿಂದ ಬರುವಾಗ ಕಟ್ಟಿಕೊಟ್ಟ ಸಾಂಬಾರ್, ಹುಳಿ ಪೌಡರ್, ಉಪ್ಪಿನಕಾಯಿ ಹಪ್ಪಳ, ಸಂಡಿಗೆ ಎಲ್ಲ ಟೇಬಲ್ ಮೇಲೆ ಅಣಿಮಾಡಿಟ್ಟುಕೊಂಡಳು. ಸ್ವಲ್ಪ ರಸಂ, ಒಂದು ಮಿಶ್ರ ತರಕಾರಿಗಳ ಹುಳಿ, ಹಪ್ಪಳ ಸಂಡಿಗೆ ಕರಿದಿಟ್ಟು ಪುನ: ಸ್ಮೋಕ್ ಸೈರನ್ ಆನ್ ಮಾಡಿಟ್ಟಳು. ಪ್ರಶಾಂತ ತಂದ ಸಾಮಾನುಗಳಲ್ಲಿ ಒಂದು ದೊಡ್ಡ ಪ್ಯಾಕೆಟ್ ಅಕ್ಕಿಯನ್ನು ನೋಡಿದಳು. ಪೊಟ್ಟಣದ ಹಿಂಬದಿಯಿದ್ದ ಅನ್ನ ತಯಾರು ಮಾಡುವ ಬಗೆ ಓದಿ, ಗ್ಯಾಸ್ ಸ್ಟವ್ ಮೇಲೆ 'ಬಸಿದು ಹಾಕಿದ ಅನ್ನ' ಮಾಡಿಟ್ಟಳು. ಅನ್ನ ಬಿಡಿ ಬಿಡಿಯಾಗಿ ಮಲ್ಲಿಗೆ ತರಹ ಸಿದ್ದವಾಯಿತು. ಇನ್ನೂ ಅವಳು ಮೈಕ್ರೋವೇವ್ ಡಿಶ್ ವಾಶರ್ ಬಗ್ಗೆ ಕಲಿಯಬೇಕಿತ್ತಷ್ಟೆ. ಶುಕ್ರವಾರ ಸಂಜೆ ಪ್ರಶಾಂತ ನ ಮಿತ್ರರು ಪರಶು- ರಮಾ- ಮನೆಗೆ ತಲುಪುವಾಗ ತಡ ರಾತ್ರಿ. ಹಿಮದ ದೆಸೆಯಿಂದ ಜಾರದಂತೆ ನಿಧಾನಕ್ಕೆ ಗಾಡಿ ಚಲಾಯಿಸಿಕೊಂಡು ಬಂದಿದ್ದರು. ಹಲವಾರು ದಿನಗಳ ನಂತರ ಕನ್ನಡ ಮಾತನಾಡಲು ಸಿಕ್ಕಿದ್ದು ಸುಲತಾಗೆ ತುಂಬ ಖುಶಿ. ಅಡಿಗೆಯನ್ನು ಮೈಕ್ರೋವೇವ್ ಪಾತ್ರೆಯಲ್ಲಿ ಬಿಸಿ ಮಾಡಿಕೊಡುವ ಮೊದಲ ಪಾಠ ರಮಾಳಿಂದ ಸುಲತಾಗೆ. ಅಡಿಗೆಯನ್ನು ಹೊಗಳಿ ಹೊಗಳಿ, ಸುಲತಾಳ ಸ್ಮೋಕ್ ಅಲರಾಂ ಕತೆ ಕೇಳಿ ನಕ್ಕು, ಅವಳು ಅಡಿಗೆ ಮಾಡುವಾಗ ಅದನ್ನು ಬಂದ್ ಮಾಡಿಟ್ಟಿದ್ದಕೆ ಹೊಗಳಿ ಇಬ್ಬರೂ ಊಟ ಮಾಡಿ ಬೇಗನೆ ಮಲಗಿ ಬಿಟ್ಟರು. ಸುಲತಾ ಅಡಿಗೆ ಮನೆ ಚೊಕ್ಕ ಮಾಡಿಟ್ಟು, ರಮಾ ತನಗೋಸ್ಕರ ತಂದಿದ್ದ ಹೂ ಗುಚ್ಛ ನೋಡಿದಳು. ಅದರಲ್ಲಿನ ಹೂ ಗಳನ್ನು ಬಿಡಿಸಿಟ್ಟು ದೊಡ್ಡ ಅಲಂಕಾರಿಕ ಪಾತ್ರೆಯಲ್ಲಿ ಅದನ್ನು ಸುಂದರವಾಗಿ ಜೋಡಿಸಿಟ್ಟಲು. ಆಮೇಲೆ ಮಾಡಲು ಏನೂ ಕೆಲಸವಿಲ್ಲದಿದ್ದುರರಿಂದ ಅವಳು ತನ್ನ ಕೋಣೆಗೆ ಹೋಗಿ ಮಲಗಿ ಬಿಟ್ಟಳು.
ಭಾನುವಾರ ಬೆಳಿಗ್ಗೆ ರಮಾ ಎದ್ದಿದ್ದವಳೆ, ಸುಲತಾ ಒಳಗೆ ಕಾಫಿ ಹೇಗೆ ಮಾಡುವುದೆಂದು ತಲೆ ಕೆರೆದುಕೊಳ್ಳುತ್ತಿದ್ದರೆ, ಹೊರಗಿನಿಂದ ವಾವ್ ಎನ್ನುವ ಉದ್ಗಾರ ಕೇಳಿಸಿತು. ಹೊರಗಡೆ ಬಂದು ನೋಡಿದಾಗ, ಹಿಂದಿನ ರಾತ್ರಿ ಸುಲತಾ ಜೋಡಿಸಿಟ್ಟ ಹೂಗಳ ಸಾಲುಗಳನ್ನು ಬಿಟ್ಟ ಬಾಯಿಯಿಂದ ತದೇಕಚಿತ್ತಳಾಗಿ ನೋಡುತ್ತಿದ್ದ ರಮಾ ಕಾಣಿಸಿದಳು. ಅರೇ ಯಾರ್ ತುಂಬಾ ಚೆನ್ನಾಗಿದೆ ಹೂಗಳ ಜೋಡನೆ, ಇದನ್ನೆ ಬಿಸಿನೆಸ್ ಆಗಿ ಮಾಡಿದರೆ ತುಂಬ ದುಡ್ಡು ಮಾಡಬಹುದು ನೀನು ಎಂದಳು.
ನಂತರ ಸುಲತಾಳನ್ನು ಬೇಸ್ಮೆಂಟ್ ಕೆ ಕರೆದುಕೊಂಡು ಹೋಗಿ ವಾಶಿಂಗ್ ಮಶೀನ್ ಹೇಗೆ ನಡೆಸುವುದು, ಡಿಶ್ ವಾಶರ್ ಹೇಗೆ ಉಪಯೋಗಿಸುವುದು ಮುಂತಾದನ್ನು ಕಲಿಸಿದಳು. ಸೋಮವಾರ ಬೆಳಿಗ್ಗೆ ಅವಳನ್ನು ಹತ್ತಿರದ ಮಾಲ್, ಆಸ್ಪತ್ರೆ, ಲೈಬ್ರರಿ, ಶಾಲೆ ಗಳನೆಲ್ಲ ಪರಿಚಯಿಸಿದಳು ರಮಾ. ಮೊದಲಿಗೆ ನೀನು ಡ್ರೈವಿಂಗ್ ಕಲೀಬೇಕು ಇಲ್ಲದಿದ್ದರೆ ನೀನು ಸಿಕ್ಕಾಕೋತೀಯಾ ಇಲ್ಲಿ ಬಸ್ ಗಳು ತುಂಬಾ ಕಡಿಮೆ. ನೀನಿರುವ ಊರಿಗೆ ಸಬ್ಅರ್ಬ್ಸ್ ಅನ್ನುತ್ತಾರೆ. ಸಿಟಿಯಾದರೆ ನಿನಗೆ ಬಸ್ ಗಳು ಮಾತ್ರವಲ್ಲ ಎಲ್ಲ ಸಾಮಾನು ಸರಂಜಾಮುಗಳು ಅಕ್ಕಪಕ್ಕದಲ್ಲೇ ಸಿಗುತ್ತವೆ. ಆ ಮೇಲೆ ಅವಳಿಗೆ ಅಲ್ಲಿನ ಹವಾಮಾನಕ್ಕನುಗುಣವಾದ ಬಟ್ಟೆಗಳನ್ನು ಕೊಡಿಸಿದಳು. ಎಲ್ಲ ಕಾರ್ಡ್ ಮೂಲಕ ಖರೀದಿ. ನೀನೇನು ಚಿಂತೆ ಮಾಡಬೇಡ ಸುಲ್ಲ್ (ಆಗಲೇ ಅವಳ ಹೆಸರು ಕೂಡ ಚಿಕ್ಕಾದಾಯಿತು) ಪ್ರಶಾಂತ ಬಂದ ಮೇಲೆ ದುಡ್ಡು ನನ್ನ ಎಕೌಂಟ್ ಗೆ ಟ್ರಾನ್ಸ್ಫರ್ ಮಾಡುತ್ತಾನೆ. ನೀನು ನಿಶ್ಚಿಂತೆಯಿಂದ ಏನೇನು ಬೇಕೋ ಅದನ್ನು ತೆಗೆದುಕೋ. ಆದರೆ ಸುಲತಾಗೆ ಏನು ತೆಗೆದುಕೊಳ್ಳಬೇಕೆಂದು ಒಂದೂ ತೋಚಲಿಲ್ಲ.
ಮುಂದಿನ ಮೂರು ವರ್ಷ ಕಳೆಯುವುದರಲ್ಲಿ ಕಾರ್ ಚಲಾಯಿಸುವುದನ್ನು ಕಲಿತುಕೊಳ್ಳುವುದರಿಂದ ಅಲ್ಲಿನ ಜನರ ಹಾಗೆ ಆಂಗ್ಲ ಭಾಷೆಯನ್ನು ಮಾತನಾಡುವ ಕೋರ್ಸ್ ಮಾಡಿಕೊಂಡು, ಹಳ್ಳಿ ಗೌರಮ್ಮನ ತರಹ ಆಗಿರದೇ, ಅಲ್ಲಿನ ಜನರ ಹಾಗೇ ಉಡುಗೆ ತೊಡುಗೆಗಳನ್ನು ರೂಢಿಮಾಡಿಕೊಂಡು ಸ್ಮಾರ್ಟ್ ಆಗಿ ಪರಿವರ್ತನೆಗೊಂಡಳು, ಚುರುಕು ಬುದ್ದಿಯ ಸುಲತಾ. ಹಾಗೇ ಅವಳು ಇಂಗ್ಲಿಷ್ ನ ಉನ್ನತ ವ್ಯಾಸಂಗಕ್ಕೆ ಕಲಿಯಲಾರಂಭಿಸಿದಳು. ಕಂಪ್ಯೂಟರ್ ಇಂಟರ್ನೆಟ್ ಗಳಲ್ಲಿಯೂ ತಕ್ಕಮಟ್ಟಿಗೆ ಪರಿಣಿತಿ ಸಾಧಿಸಿದಳು. ಈಗ ಅವಳು ಚೊಚ್ಚಿಲ ಬಸುರಿ.
ಆದರೆ ವಿಧಿಯಾಟ ಬೇರೆ ನೆ ಆಗಿತ್ತು. ಒಂದು ಸಂಜೆ ಆಫಿಸ್ ನಿಂದ ಮರಳುವಾಗ ಪ್ರಶಾಂತ ನ ಕಾರಿಗೆ, ನಿಯಂತ್ರಣ ತಪ್ಪಿದ ಟ್ರಕ್ ಒಂದು ಬಡಿದು, ಪ್ರಶಾಂತ ಜೀವಾಪಾಯದಿಂದೇನೋ ಪಾರಾದ ಆದರೆ ಮೈ ಮೇಲಿನ ನಿಯಂತ್ರಣ ಕಳೆದುಕೊಂಡು ಮಲಗಿದ್ದಲ್ಲಾದ. ಸ್ನೇಹಿತರು ಆಪ್ತೇಷ್ಟರು, ಆಫೀಸಿನ ಸಹೋದ್ಯೋಗಿಗಳೆಲ್ಲ ತುಂಬ ನೆರವಾದರು. ಆದರೆ ಅವನು ಅಲ್ಲಿನ ಕೆಲಸ ಕಳೆದುಕೊಳ್ಳಬೇಕಾಯಿತು. ಸಾಕಷ್ಟು ದುಡ್ಡು, ಇನ್ಸೂರೆನ್ಸ್ ಹಾಗೂ ಅಪಘಾತ ಮಾಡಿದ್ದ ಟ್ರಕ್ ಕಂಪೆನಿ ವತಿಯಿಂದ ದೊಡ್ಡ ಜುಲ್ಮಾನೆಯ ಮೊತ್ತ ಇವರ ಕೈಗೆ ಬಂದಿತ್ತು. ಆದರೆ ಸುಮ್ಮನೆ ಕೂತು ತಿಂದರೆ ಕೂಡಿಟ್ಟ ದುಡ್ಡು ಬೇಗನೆ ಖರ್ಚಾಗುತ್ತೆಂದು, ಹಾಗೂ ಬೇರೆ ದಾರಿಗಾಣದೆ ಇಬ್ಬರೂ ಭಾರತಕ್ಕೆ ಬರುವ ಹಾಗಾಯಿತು.
ಭಾರತಕ್ಕೆ ಬಂದ ಮೇಲೆ ಬೆಂಗಳೂರಿನಲ್ಲಿ ನೆಲೆಸುವುದಂತಾಯಿತು. ಅವರು ಮಾಡಿದ ಮೊದಲ ಕೆಲಸ ಒಂದು ದೊಡ್ಡ ಎರಡಂತಸ್ತಿನ ಮನೆ ಖರೀದಿ ಮಾಡಿದ್ದು. ಮನೆ ಹೊಸದಾಗೇ ಇತ್ತು ಆದುದರಿಂದ ಮನೆಯಲ್ಲಿ ವ್ಹೀಲ್ ಚೇರ್ ಓಡಾಡುವ ಹಾಗೆ ಸ್ವಲ್ಪ ಬದಲಾವಣೆ ಮಾಡಲಾಯಿತು. ಮೇಲಂತಸ್ಥಿನ ಮನೆಯನ್ನು ಬ್ರಿಗೆಡಿಯರ್ ಒಬ್ಬರಿಗೆ ಬಾಡಿಗೆಗೆ ನೀಡಲಾಯಿತು. ಬ್ರಿಗೇಡಿಯರ್ ಅವರು ನಿವೃತ್ತಿ ಪಡೆದುಕೊಂಡಿದ್ದರು. ಮಗಳು ಬೆಂಗಳೂರಿನ ಕಾಲೇಜು ಒಂದರಲ್ಲಿ ಮೆಡಿಕಲ್ ಓದುತ್ತಿದ್ದರಿಂದ, ದೂರದ ಅಂಬಾಲಾದಿಂದ ಬೆಂಗಳೂರಿನಲ್ಲಿ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಬಂದು ಬಾಡಿಗೆ ಮನೆಯಲ್ಲಿದ್ದರು. ಸುಲತಾಳ ಬಾಣಂತನಕ್ಕೆ ತುಂಬಾನೇ ಸಹಾಯ ಮಾಡಿದ್ದರು ದಂಪತಿಗಳು. ಹಾಗೂ ಅವರ ಮನೆಯಲ್ಲಿ ಕೆಲಸಕ್ಕಿದ್ದವಳು ಇವರ ಮನೆಯಲ್ಲೂ ಕೆಲಸ ಮಾಡಿಕೊಡುತ್ತಿದ್ದಳು.
ಬ್ರಿಗೆಡಿಯರ್ ಅವರಿಗೆ ಕೆಲ ಜನ ಪ್ಂಜಾಬಿ ಸ್ನೇಹಿತರಿದ್ದರು. ಅವರಿಗೆ ಆವಾಗಾವಾಗ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗುತ್ತಿತ್ತು. ಒಂದು ಸಲ ಸುಲತಾ ಅವರಿಗೆ ಚಂದದ ಹೂವಿನ ಎರೆಂಜ್ ಮೆಂಟ್ ಮಾಡಿಕೊಟ್ಟಿದ್ದಳು. ಎಲ್ಲರಿಂದ ವಾಹ್ ವಾಹ ಶಭಾಸ್ ಗಿರಿ ಪಡೆದ ಹಿನ್ನಿಲೆಯಲ್ಲೇ ಬ್ರಿಗೆಡಿಯರ್ ಆಂಟಿ (ಸುಲತಾ ಅವರನ್ನು ಹಾಗೇ ಸಂಬೊಧಿಸುತ್ತಿದ್ದಳು) ನೀನ್ಯಾಕೆ ಜನರಿಗೆ ಹೂವಿನ ವಿನ್ಯಾಸ ಮಾಡಿ ಕೊಡಬಾರದು ಅಂತ. ಅವಳಿಗೆ ಆ ಉಪಾಯ ತುಂಬ ಇಷ್ಟ ವಾಯಿತು.
ಅವರ ಸ್ನೇಹಿತರಲ್ಲೆ ಮೊದಲು ಮೊದಲು ಹೋಗಿ ಹೂವಿನ ವಿನ್ಯಾಸಗಳನ್ನು, ಪಾರ್ಟಿ ರೂಮ್ ಅನ್ನು ಚೆಂದವಾಗಿ ವಿನೂತನ ರೀತಿಯಲ್ಲಿ. ಎಲ್ಲೂ ರಿಪೀಟ್ ಆಗದಂತೆ ಸಿಂಗರಿಸುವುದನ್ನು ಕಲಿತು ದುಡ್ಡು ಮಾಡತೊಡಗಿದಳು. ಮಗು ಹುಟ್ಟಿ ದ ಸಮಯ ಮಲಗಿದ್ದಲ್ಲಿ ಸುಮ್ಮನಿರದೆ ನೆಟ್ ನಲ್ಲಿ ಫ್ಲವರ್ ಎರೆಂಜ್ಮೆಂಟ್ನಲ್ಲಿ ಬಳಸುವ ಹೊಸ ಹೊಸ ಪರಿಕರಗಳ ಬಗ್ಗೆ ಓದಿ ತಿಳಿದುಕೊಂಡಳು. ಮಗುವಿಗೆ ಒಂದು ವರೆ ತಿಂಗಳು ಆಗುವಷ್ಟರಲ್ಲಿ ಅವಳು ಒಂದು ದಿನ ಕಮರ್ ಶಿಯಲ್ ಸ್ಟ್ರೀಟ್ ಗೆ ಹೋಗಿ ಬಗೆ ಬಗೆಯ ಅಲಂಕಾರಿಕ ಸಾಮಗ್ರಿಗಳನ್ನು ತಂದು ಇಡಲಾರಂಭಿಸಿದಳು. ಮನೆಯ ಒಂದು ಕೊಠಡಿ ಅವಳ ಈ ಕಿರು ಉದ್ಯಮಕ್ಕೆ ಮೀಸಲಿಟ್ಟು ಕೊಂಡಳು. ಎರಡು ಮೂರು ಹೂವಿನ ವ್ಯಾಪಾರಿಗಳ ಬಳಿ ಒಪ್ಪಂದ ಮಾಡಿಕೊಂಡಳು. ಅವರ ಬಳಿ ತಾನು ಆಗಷ್ಟೆ ಮಾಡಿಟ್ಟು ಕೊಂಡ ಚೆಂದದ ವಿಸಿಟಿಂಗ್ ಕಾರ್ಡ್ ಗಳನ್ನು ಕೊಟ್ಟಿದ್ದಳು. ಅವಳು ಹೊರಗೆ ಹೋದಾಗಲೆಲ್ಲ ಬ್ರಿಗೆಡಿಯರ್ ಆಂಟಿ ಮಗುವನ್ನು ನೋಡಿಕೊಳ್ಳುತ್ತಿದ್ದಳು. ಹೀಗೆ ವಾರಕ್ಕೆ ಮೂರು ನಾಲ್ಕು ಮನೆ/ಹಾಲ್ ಗಳನ್ನು ಸಿಂಗರಿಸುವ ಅವಳಿಗೆ ಈಗ ಬಿಡುವಿಲ್ಲದ ಕೆಲಸ. ಮೌಖಿಕವಾಗಿ ಅವಳ ಈ ಕಲಾ ಕೌಶ್ಯಲ್ಯದ ಮಾತು ಹಬ್ಬಿ ಈಗ ಅವಳು ಹೊರದೇಶದಲ್ಲೂ ಬೇಡಿಕೆಯಿರುವ ಹೂವಿನ ವಿನ್ಯಾಸಕಿ. ಈ ಸಲ ಅವಳು ಮೊದಲ ಬಾರಿಗೆ ಒಬ್ಬಳೆ ವಿದೇಶಕ್ಕೆ ಹೊರಟಿದ್ದಾಳೆ. ಅಲ್ಲಿ ಒಬ್ಬರ ಮನೆಯ ಮದುವೆಗೆ ಹೂವಿನ ಅಲಂಕಾರ ಎಲ್ಲ ಸುಲತಂದ್ದೆ. ಪ್ರಶಾಂತ ಗೆ ಅವಳ ಬಗ್ಗೆ ತುಂಬ ಹೆಮ್ಮೆ. ತನ್ನ ಕೊನೆಯ ಶಸ್ತ್ರ ಚಿಕಿತ್ಸೆಯ ನಂತರ ವೈದ್ಯರು ಅವನ ದೇಹದ ಸ್ಥಿತಿ 90 % ಸರಿಯಾಗುವ ಭರವಸೆ ನೀಡಿದ್ದಾರೆ. ತಾನು ಓಡಾಡುವಂತಾದ ಮೇಲೆ ಅವಳಿಗೆ ತನ್ನ ಪೂರ್ಣ ಸಹಕಾರ ನೀಡುವ ನಿಟ್ಟಿನಲ್ಲಿ ಆಲೋಚಿಸುತ್ತಿದ್ದಾನೆ. ಮೋಡ ಕವಿದ ವಾತಾವರಣದಲ್ಲಿ ಮೂಡಿದ ಸೂರ್ಯಕಿರಣಗಳಿಂದ ಮನೆಯೊಳಗೆ ಹೊಂಬೆಳಕು ಹರಡಿತು.
ಒಟ್ಟು ಜೀವನದ ಬಂಡಿ ಸಾಗುತ್ತಿದ್ದೆ. ಈಗ ಸುಲತಾ ಳ ಮುಂದಿನ ಯೋಚನೆ ಮಗಳ ಭವಿಷ್ಯ. ಕೂಡಿಟ್ಟಿದ ಹಣದಿಂದ ಸಣ್ಣದೊಂದು ತರಬೇತಿ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿದ್ದಾಳೆ. ಅಲ್ಲದೇ ಕೆಲ ಅನಾಥಾಶ್ರಮದ ಹುಡುಗಿಯರಿಗೆ ತನ್ನ ಅಸಿಸ್ಟೆಂಟ್ ಆಗಿ ತರಬೇತು ಗೊಳಿಸಿ ಅವರ ಜೀವನೋಪಾಯಕ್ಕೆ ದಾರಿ ಮಾಡಿದ್ದಾಳೆ.
ತನ್ನ ಆಲೋಚನೆಯನ್ನು ಮೊಟಕುಗೊಳಿಸಿ ಬೇಗ ಬೇಗ ತಯಾರಾಗಿ ಎರಡು ಕಡೆ ಹೂವಿನ ವಿನ್ಯಾಸ ಮಾಡಿ ಮಧ್ಯಾಹ್ನದ ನಂತರ ಹೊರ ದೇಶಕ್ಕೆ ಹೊರಡಲು ಕೆಲವು ಲಾಸ್ಟ್ ಮಿನಿಟ್ ಎರೆಂಜ್ ಮೆಂಟ್ ಮಾಡಲಿಕ್ಕಿದೆ. ಅವಳು ಬರುವ ತನಕ ಅವಳ ಅಮ್ಮ ಹಾಗೂ ಅತ್ತೆ ,ಇಬ್ಬರೂ ಸೇರಿ ಮನೆಯನ್ನು ನೋಡುಕೊಳ್ಳುತ್ತಿದ್ದಾರಾದ್ದರಿಂದ ಅವಳು ಪ್ರಶಾಂತ ಹಾಗೂ ಪುಟ್ಟ ಕಂದಮ್ಮಳನ್ನು ಅವರಿಗೊಪ್ಪಿಸಿ ನಿಶ್ಚಿಂತೆಯಿಂದ ಹೋಗಿ ಬರಲು ಅನುವಾಗುತ್ತಿದ್ದಾಳೆ.
(ಕಥೆ ಅಲ್ಲ ಕೇಸ್ ಸ್ಟಡಿ ಅಂತ ಓದಲೇನಡ್ಡಿಯಿಲ್ಲ)
:-)