can u believe it? i cannot....love u readers my hits have crossed 36000 mark without any effort from my side..
ನನ್ನ 200 ನೆ ಪೋಸ್ಟ್ ಇನ್ನೊಂದು ನೆನಪು...ಕುಛ್ ಖಟ್ಟಿ ಕುಛ್ ಮೀಠಿ
ಮೇ 4, 2012. ಗೀತಾ ದತ್ ಹಾಡು ಗಟ್ಟಿಯಾಗಿ ಹಾಕಿಕೊಂಡು ಮನೆ ಕ್ಲೀನ್ ಮಾಡ್ತಾ ಇದ್ದೆ. ಮನೆ ಕ್ಲೀನ್ ಯಾಕಪ್ಪ ಅಂದ್ರೆ ಯು ಎಸ್ ನಲ್ಲಿರೋ ನನ್ನ ಆತ್ಮೀಯ ಗೆಳೆಯರಾದ ಶ್ರೀವತ್ಸ ಜೋಶಿ, ಸಹನಾ ಜೋಶಿ ಮತ್ತು ನನ್ನ ಬೆಂಗಳೂರಿನ ಮಿತ್ರರಾದ ವೇದಾ ಮತ್ತು ಜ್ಯೋತಿ- ಇವರನ್ನು 6 ನೇ ತಾರೀಕಿಗೆ ಊಟಕ್ಕೆ ಕರೆದಿದ್ದೆ.ಮತ್ತು ಊಟಕ್ಕೆ ಕರೆದ ಎರಡು ದಿನ ಮುಂಚೆ ಮನೆ ಕ್ಲೀನ್ ಆ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಅದಕ್ಕೂ ಉತ್ತರ ಇದೆ. ನಮ್ಮ ಮನೆಯ ಬಳಿ ಮೂರು ನಾಲ್ಕು ಮನೆ ರಿಪೇರಿ, ಮಹಡಿ ಕಟ್ಟಿಸುವುದು, ಬೀಳಿಸಿ ಕಟ್ಟಿಸುವುದು ಮುಂತಾದ ಕೆಲಸಗಳು, ಅದಕ್ಕೆ ಬೇಕಾದ ಸಿಮೆಂಟ್ ಮರಳು ಅದರ ಧೂಳು ನಮ್ಮ ಮನೆಯೊಳಗೆ ಹಾಗಾಗಿ ನನ್ನದೊಂದು ಕ್ಲೀನಿಂಗ್ ಪ್ರೋಗ್ರಾಮು.
ಇದರ ಮಧ್ಯ ನನ್ನ ತಂಗಿ ಜತೆ ಚ್ಯಾಟ್ ಮತ್ತು ಇಲ್ಲಿ ಊಟಕ್ಕೆ ಬರಲಾಗದ, ನನ್ನ ಹೈದರಾಬಾದ್ ನಲ್ಲಿರೋ ಸ್ನೇಹಿತೆ ಸಂಧ್ಯಾ ಹಾಗು ಮಧ್ಯಪ್ರದೇಶದಲ್ಲಿರೋ ನಾಗಮಣಿಯವರಿಗೆ ನನ್ನ ಮೆನ್ಯೂ ಬಗ್ಗೆ ಹೇಳಿ ಆಸೆ ತೋರಿಸ್ತಾ ಇದ್ದೆ. ಶೋ ಕೇಸ್ ಬಳಿ ಕ್ಲೀನ್ ಮಾಡ್ತಿದ್ದಾಗ ಅಲ್ಲೇ ಬಳಿಯಿರುವ ನನ್ನ ಫಿಶ್ ಬೌಲ್ ನಲ್ಲಿರುವ ಮೀನು ನನ್ನನ್ನು ನೋಡಿ ತಿಪ್ಪರಲಾಗ ಹಾಕುತ್ತ ನೀರನ್ನು ಎಲ್ಲ ಕಡೆ ಸಿಂಪಡಿಸುತ್ತಿದ್ದರು. ಅವರಿಗೆ ಸುಮ್ಮನಿರದಿದ್ದರೆ ಬೆಕ್ಕಿಗೆ ಆಹಾರವಾಗಿ ಕೊಡುವುದಾಗಿ ಗದರಿಸಿ ನನ್ನಷ್ಟಕ್ಕೆ ನಗುತ್ತ, ಇನ್ನೇನೂ ಈ ಕಡೆ ತಿರುಗಬೇಕು ಎನ್ನುವಾಗ ನನ್ನ ಸೆಲ್ ಫೋನ್ ಬ್ಲಿಂಕ್ ಆಗುವುದನ್ನು ನೋಡಿದೆ. ನನಗೂ ನನ್ನ ಸೆಲ್ ಫೋನ್ ಗೂ ಅಂತಹ ಗಳಸ್ಯ-ಕಂಠಸ್ಯ ಏನಿಲ್ಲ. ನನ್ನ ತಮ್ಮ ಬೆಳಿಗ್ಗೆ ಫೋನ್ ಮಾಡಿದ ಮೇಲೆ ಅದು ಎಲ್ಲೆಲ್ಲೋ ಇರುತ್ತೆ. ಒಂದು ಸಲ ಹಾಸಿಗೆ ಮಡಚುವಾಗ ಅದರ ಒಳಗಿದ್ದು ಅದನ್ನು ಹುಡುಕಿ ಹೊರತೆಗೆದಾಗ ಎರಡು ದಿನ ದಾಟಿತ್ತು. ಶ್ರೀಕಾಂತ ಟೂರ್ ಅಥವ ಹೊರದೇಶಕ್ಕೆ ಹೋದಾಗ ಮಾತ್ರ ನನ್ನ ಸೆಲ್ ಫೋನ್ ನನ್ನ ಡ್ರೆಸ್ ಪೊಕೆಟ್ ನಲ್ಲಿರುತ್ತೆ. ನನ್ನ ಈ ಅಭ್ಯಾಸ ಬಲ್ಲ ಆತ್ಮೀಯರು ಕುಟುಂಬ ಸದಸ್ಯರು ಆದಷ್ಟು ನನಗೆ ಲ್ಯಾಂಡ್ ಲೈನ್ ಗೆ ಫೋನ್ ಮಾಡುವುದು.
ಹಾಂ! ಎಲ್ಲಿದ್ದೆ? ಮಿಸ್ಡ್ ಕಾಲ್ ನೋಡಿದೆ..ಅರೇ ಮುನ್ನ ಳದ್ದು (ಮುನ್ನ ನನ್ನ ಭೈಯ್ಯ ಅಂದರೆ ಶ್ರೀಕಾಂತರ ಹಿರಿಯಣ್ಣನ ಮಗಳು) . ಭೈಯ್ಯನವರಿಗೆ ಹುಷಾರು ತಪ್ಪಿದ್ದ ದಿನದಿಂದ ಅವಳು ಫೋನ್ ಮಾಡಿದರೆ ಶ್ರೀಕಾಂತಗೆ ಮಾಡೋದು. ನನಗೆ ಬಂದಿರೋದು ಆಶ್ಚರ್ಯ ಪಡುತ್ತ ಅವಳಿಗೆ ಫೋನಾಯಿಸಿದೆ.. 'ಅಪ್ಪ ಹೋಗಿ ಬಿಟ್ಟರು-ಏನು ಮಾಡ್ಲಿ, ಚಿಕ್ಕಪ್ಪ ಫೋನ್ ಎತ್ತತಾ ಇಲ್ಲ' ಅಂದಾಗ ಒಂದು ಕ್ಷಣ ನನಗೆ disorient ಆದ ಭಾವನೆ ಬಂತು. ಕೂಡಲೇ ಸಾವರಿಸಿ, 'ಧೈರ್ಯ ತೆಗೆದುಕೋ' ಸ್ವಲ್ಪ ಹೊತ್ತಿಗೆ ಫೋನ್ ಮಾಡ್ತೇನೆ ಅಂದೆ. ಶ್ರೀಕಾಂತ ಗೆ ಫೋನ್ ಹಚ್ಚಿದಾಗ ಸ್ವಿಚ್ ಆಫ್ ಆಗಿತ್ತು. ಹೌದು ಆ ದಿನ ಬ್ಯಾಂಕಿನ ವರಿಷ್ಟರೊಬ್ಬರ ಭೇಟಿ ಇತ್ತು ಅಂತ ಹೇಳಿದ್ದ ನೆನಪು. ಶ್ರೀಕಾಂತ ಗೆ ಸೆಲ್ಲ್ ಫೋನ್ ಅನ್ನು ಸೈಲೆಂಟ್ ನಲ್ಲಿ ಇಡಕ್ಕೆ ಗೊತ್ತಿಲ್ಲ ಅದಕ್ಕೆ ಅದನ್ನು ಸ್ವಿಚ್ ಆಫ್ ಮಾಡಿಡೋದು. ಅವರ ಜತೆ ಇರುವ ಸಾಲಿಮಠರಿಗೆ ಫೋನ್ ಮಾಡಿದೆ. ಅವರು ವರಿಷ್ಠರ ಕೊಟಡಿಯಿಂದ ಹೊರಗೆ ಬಂದು ನನ್ನ ಜತೆ ಮಾತನಾಡಿದರು. ಶ್ರೀಕಾಂತಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ ಅಲ್ಲಿಂದ ಮನೆಗೆ ಕಳುಹಿಸಲು ಹೇಳಿದೆ.
ಒಂದು ವರ್ಷದ ಹಿಂದೆಯೆ ಭೈಯ ನವರಿಗೆ ಲೀವರ್ ನ ಸಿರ್ರೊಸಿಸ್ (Cirrhosis) ಅಂತ ಡಯಗ್ನೈಸ್ ಮಾಡಿದ್ದರು. ಅತ್ಯಂತ ಕ್ಲೀನ್, ಸಾಧು life style ನಡೆಸುವ, ಕುಡಿತದಿಂದ ದೂರವಿರುವ ಭೈಯ್ಯನವರಿಗೆ ಈ ರೋಗ ಬಂದಿದ್ದು ನಮಗೆಲ್ಲ ತುಂಬ ಆಶ್ಚರ್ಯದ ಸಂಗತಿ. ಆ ಮೇಲೆ ಗೊತ್ತಯಿತು ಇದು ಬಿ ಪಿ ಮಾತ್ರೆಯ ಸತತ ಬಳಕೆಯಿಂದಾದ ದುಷ್ಪರಿಣಾಮ ಅಂತ. ಹದಿನೈದು ದಿನದ ಹಿಂದೆ ನಾನು ಶ್ರೀಕಾಂತ ತೀರ್ಥಹಳ್ಳಿಯಿಂದ ಉಡುಪಿಗೆ ಹೋಗಿ ಅವರನ್ನು ನೋಡಿಕೊಂಡು ಬಂದಿದ್ದೆವು. ನಾನು ಅಲ್ಲಿಂದ ಹೊರಡುವ ಮುಂಚೆ ಅವರ ಕಾಲಿಗೆರಗಿದ್ದಾಗ ಅವರ ಕಣ್ಣೋಟ ಸಂಜ್ಞೆಯಿಂದಲೆ ನನಗೆ ಗೊತ್ತಾಯಿತು ಅದು ನಮ್ಮ ಕೊನೆಯ ಭೇಟಿ ಅಂತ. ಆದರೂ ನಾನು ,ಇನ್ನು ಸ್ವಲ್ಪ ದಿನದಲ್ಲೆ ನಿಹಾನ ಪರೀಕ್ಷೆ ಮುಗಿಯುತ್ತೆ, ನಾನು ಅವಳು ಇಲ್ಲಿ ಬಂದು ಸ್ವಲ್ಪ ದಿನ ಇರುತ್ತೇವೆ 'ಅಂದಿದ್ದೆ. ಈಗ ಈ ಸುದ್ದಿ.
ನಾನು ಚಿಕ್ಕವಯಸ್ಸಿಗೆ ಮದುವೆಯಾಗಿ ಆ ಮನೆಗೆ ಹೋದಾಗ ಅವರೆ ನನ್ನಲ್ಲಿ ಧೈರ್ಯ ತುಂಬಿದ್ದು ಹಿರಿಯರಂತಿರದೆ ನನ್ನ ಸ್ನೇಹಿತರ ತರಹ ಇದ್ದಿದ್ದು. ಆವಾಗಿನ ದಿನಗಳನ್ನೆಲ್ಲ ನೆನೆಸಿ ಸ್ವಲ್ಪ ಹೊತ್ತು ಅತ್ತೆ. ಆದರೆ ಹಲವಾರು ಕೆಲಸಗಳಿದ್ದವು ಈಗ ಮಾಡಲು. ಮೊದಲಿಗೆ ನನ್ನ ತಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆ ಮೇಲೆ ತೀರ್ಥಹಳ್ಳಿಯಲ್ಲೆಲ್ಲ ಸುದ್ದಿ ಮುಟ್ಟಿಸಲು ನೀಲೇಶ ಜವಳಿಗೆ ಫೋನ್ ಮಾಡಿದೆ. ಅದಾದ ನಂತರ ಶ್ರೀವತ್ಸ ಜೋಶಿಯವರಿಗೆ. ಅವರು ಚಂದದ ನಾಲ್ಕು ಸಾಂತ್ವನದ ಮಾತು ಹೇಳಿದರು. ಜ್ಯೋತಿ ವೇದಾ ರ ಫೋನ್ ಹೋಗಲಿಲ್ಲ ಅದಕ್ಕೆ ತಕ್ಷಣ ಅವರಿಗೊಂದು ಮೈಲ್ ಹಾಕಿದೆ.
ನಿಹಾ ಆ ದಿನ ಬೆಳಿಗ್ಗೆ 'ಸಂವಾದ' ತಂಡ ಆಯೋಜಿಸಿರುವ ಎರಡು ದಿನದ ಸಿನಿಮ appreciation ಕೋರ್ಸ್ ಗೆ ಅಂತ ತುಮಕೂರಿಗೆ ಹೊರಟಿದ್ದಳು. ಅವಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅವಳಿಗೆ ನಮ್ಮ ತುಮಕೂರಿನ ಆಫಿಸ್ ನಲ್ಲಿ ಕಾಯಲು ಹೇಳಿದೆ. ಮಾಲವಿಕ ಬರಬೇಕು ಅಂತ ನನಗೆ ಆಸೆ ಇತ್ತು. ಯಾಕೆಂದರೆ ಅವಳು ಭೈಯ್ಯ ಅವರನ್ನು ನೋಡಿ ಎರಡು ವರ್ಷಗಳೇ ಸಂದಿದ್ದವು. ಕೆಲಸಕ್ಕೆ ಸೇರಿದ ಮೇಲೆ ಅವಳು ಅವರನ್ನು ನೋಡಿರಲಿಲ್ಲ. ಅವಳಿಗೆ ಫೋನ್ ಮಾಡಿ ಏನು ಮಾಡ್ತೀಯಾ? ನಮ್ಮ ಜತೆ ಬರುತ್ತೀಯಾ ಅಂತ ಕೇಳಿದೆ, ಅವಳು ಒಂಚೂರು ಆಲೋಚಿಸದೆ, ಈಗಲೇ ಹೊರಡುತ್ತೇನೆ ಅಂದಳು. ಇಷ್ಟರಲ್ಲಿ ಶ್ರೀಕಾಂತ ನನಗೆ ಫೋನ್ ಮಾಡಿ ಎರಡು ಗಂಟೆಗೆ ಗಾಡಿ ಬರುತ್ತೆ ರೆಡಿಯಾಗಿರು ಅಂದಿದ್ದರು. ನಾನು ಬೇಗ ಬೇಗ ನಮಗೆ ಬೇಕಾಗಿರುವ ಬಟ್ಟೆ ಬರೆ ಮತ್ತು ಇತರೇ ಅಗತ್ಯದ ಸಾಮಾನುಗಳನ್ನು ಸ್ಯೂಟ್ ಕೇಸ್ ಒಳಗೆ ಹಾಕಿಟ್ಟೆ. ಶ್ರೀಕಾಂತ ಬಂದ ಮೇಲೆ ಮೊದಲು ಅವರು ಊಟ ಮಾಡಿದರು. ಆಮೇಲೆ ಹಣಕಾಸಿನ ವ್ಯವಸ್ಥೆ ಮುಂತಾದವುಗಳನ್ನು ಮಾಡಲು ಆಫಿಸ್ ಗೆ ಹೋದರು. ಮಾಲವಿಕ ಬಂದ ಮೇಲೆ ನಾನು ಅವಳು ಊಟ ಮಾಡಿ ಉಳಿದ ಪದಾರ್ಥಗಳನ್ನು ಕಸದ ಬುಟ್ಟಿಗೆ ಚೆಲ್ಲಿ ಮನೆ ಕಿಟಕಿಗಳು, ಹಿಂದಿನ ಬಾಗಿಲು ಭದ್ರ ಪಡಿಸುವಷ್ಟರಲ್ಲಿ ಗಾಡಿ ಬಂದಿತ್ತು. ನಮ್ಮ ಮನೆಯ ಔನರ್ ಗೆ ಹೇಳ್ಬಿಟ್ಟು, ಒಂದು ಜತೆ ಬೀಗದ ಕೈ ಅವರಿಗೆ, ಇನ್ನೊಂದು ಆಫಿಸ್ ಗೆ ಕೊಟ್ಟು, ಮಲ್ಲೇಶ್ವರಂ ನಲ್ಲಿ ಶ್ರೀಕಾಂತರ ಕಸಿನ್ ಸತೀಶರನ್ನು ಪಿಕ್ ಮಾಡಿ ಹೊರಟ್ವಿ. ಉಡುಪಿಯಿಂದ ಅಲ್ಲಿನ ವ್ಯವಸ್ಥೆ ಬಗ್ಗೆ ಫೋನ್ ಮಾಡಿ ಆಗಾಗ ಶ್ರೀಕಾಂತ ವಿಚಾರಿಸುತ್ತಿದ್ದರು. ನಾವು ಹೊರಟಾಗ ಆಗಲೇ ಮೂರು ದಾಟಿತ್ತು. ಅಲ್ಲಿಂದ ಟ್ರಾಫಿಕ್ ಎಲ್ಲ ದಾಟಿಕೊಂಡು ಊರ ಹೊರಗಡೆ ಬರಲು 2 ತಾಸುಗಳಾದವು. ದಹನ ಕ್ರಿಯೆ ರಾತ್ರಿ 10 ಕ್ಕೆ ಅಂತ ತೀರ್ಮಾನಿಸಲಾಯಿತು. ನಮ್ಮ ಗಾಡಿಯ ಚಾಲಕ ನನಗೆ 'ನೀವು ಏನೂ ಚಿಂತೆ ಮಾಡಿಬೇಡಿಯಮ್ಮ, ನಿಮಗೆಲ್ಲ 10 ಗಂಟೆಯೊಳಗೆ ಉಡುಪಿಗೆ ತಲುಪಿಸೋದು ನನ್ನ ಜವಾಬ್ದಾರಿ' ಅಂದರು. ನೀಹಾಳನ್ನು ದಾರಿಯಲ್ಲಿ ಪಿಕ್ ಮಾಡಿ ಹೊರಟೆವು. ಸಕಲೇಶಪುರ್ ತಲುಪುವಾಗ ಉಡುಪಿಯಿಂದ ಶ್ರೀಕಾಂತರ ಭಾವ ಫೋನ್ ಮಾಡಿದರು' ರುದ್ರಭೂಮಿ ಸಂಜೆ 7 ಗಂಟೆಗೆ ಕ್ಲೋಸ್, ಮತ್ತು body ಯನ್ನು ಸಾಯಂಕಾಲ 5 ರ ನಂತರ ಆಸ್ಪತ್ರೆಯಲ್ಲಿರಗೂಡುವುದಿಲ್ಲ' ಅಂತ. ಹಾಗಾಗಿ ಭೈಯನವರ ದೇಹವನ್ನು ಮಣಿಪಾಲದ ಶೈತ್ಯಾಗಾರದಲ್ಲಿಡಲಾಯಿತು.ನಾನೂ 'ಡ್ರೈವರ್ ಗೆ, ಗಡಿಬಿಡಿಯಿಂದ ಏನೂ ಹೋಗುವುದು ಬೇಡ, ಘಟ್ಟ ಪ್ರದೇಶ..ಸಾವಕಾಶವಾಗಿ ತಲುಪಿದರಾಯಿತೆಂದು. ನೀಲೇಶ ಮತ್ತು ಊರಿನ ದೇವಸ್ಥಾನದ ಕಡೆಯವರು ಗಾಡಿ ಮಾಡಿ ಹೊರಡುವ ಮುಂಚೆ ಅವನು ನನಗೆ ಎಸ್ ಎಮ್ ಎಸ್ ಮಾಡಿದ. ನಾನು ಕೂಡಲೆ, ಬೇಡ ದಹನ ಕ್ರಿಯೆ ನಾಳೆ. ನೀವೀಗ ಹೋದರೂ ಅಲ್ಲಿ ಭೈಯ್ಯನವರು ಕಾಣ ಸಿಗಲ್ಲ ಅಂತ ಹೇಳಿದೆ. ಹಾಗೂ ಮಿತ್ರ ವಸುಧೇಂದ್ರ ಹಾಗೂ ಸಂದೀಪ ಕಾಮತ್ ಗೆ ವಿಷಯ ತಿಳಿಸಿ ಎಸ್ ಎಮ್ ಎಸ್ ಮಾಡಿ ನನ್ನ ಸೆಲ್ ಫೋನ್ ಅನ್ನು ಬ್ಯಾಗ್ ಒಳssssಗಡೆ ತುರುಕಿಸಿಟ್ಟೆ. ಇನ್ನು ಯಾರ ಜತೆನೂ ಯಾವ ಮಾತೂ ಎಸ್ ಎಮ್ ಎಸ್ ನನಗೆ ಬೇಕಿರಲಿಲ್ಲ.
ಶ್ರೀಕಾಂತ-ಸತೀಶ ಸಮಯ ಕಳೆಯಲು ಲೋಕಾರೂಢಿಯ ಮಾತುಗಳನ್ನಾಡುತ್ತಿದ್ದರೆ, ನಿಹಾ ಅವಳ ಪುಸ್ತಕ ಓದುತ್ತಿದ್ದಳು, ಮಾಲವಿಕ ನಿದ್ದೆಗೆ ಜಾರಿದ್ದಳು. ನನಗೋ ಮೌನ ಮಾತ್ರ ಬೇಕಾಗಿತ್ತು. ಆವಾಗಾವಾಗ ಒಸರುತ್ತಿದ್ದ ಕಂಬನಿ ಕಿಟಕಿಯಿಂದ ಬೀಸುತ್ತಿದ ಗಾಳಿಗೆ ಹಾಗೇ ಆವಿಯಾಗುತ್ತಿತ್ತು. ನನ್ನ ಪರಿವಾರದವರು ನಾನು ಅಳುವುದು ನೋಡುವುದು ನನಗೆ ಬೇಕಾಗಿರಲಿಲ್ಲ.
ಹಾಗೆ ಹಳೆ ನೆನಪುಗಳೆಲ್ಲ ಒತ್ತಿಕೊಂಡು ಬಂದವು:
ಚಿಕ್ಕ ಪ್ರಾಯಕ್ಕೆ ಮದುವೆಯಾಗಿ ನಾನು ನನ್ನ ಮುಂಬೈ ನ ಪುಟ್ಟ ಕುಟುಂಬದಿಂದ ಈ ಕೂಡು ಕುಟುಂಬಕ್ಕೆ ಹಾರಿದ್ದೆ. ನಗರದಿಂದ ಹಳ್ಳಿಗೆ. ನನಗೊಂದೂ ತೋಚುತ್ತಿರಲಿಲ್ಲ. ಮದುವೆಯಾದ ಎರಡು ದಿನದ ನಂತರ, ತೀರ್ಥಹಳ್ಳಿಯಲ್ಲಿ ಆಯೋಜಿಸಿದ ಸತ್ಯನಾರಾಯಣ ಪೂಜೆ ಮುಗಿಸಿ ನನ್ನ ತಂದೆ ತಾಯಂದಿರು, ತಮ್ಮಂದಿರು, ತಂಗಿ ಹೋದ ಮೇಲೆ ನನಗೆ ಅನಾಥ ಪ್ರಜ್ಞೆ ಕಾಡಿತ್ತು. ನನಗೆ ಹಳ್ಳಿ ಜೀವನದ ಪರಿಚಯವಿರಲಿಲ್ಲ. ಶ್ರೀಕಾಂತ ಬೆಳಿಗ್ಗೆ 9 ಕ್ಕೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ. ಮನೆಯಲ್ಲಿ ಮುನ್ನ (ಸುಮತಿ) ಬಿಟ್ಟರೆ ಎಲ್ಲರೂ ನನಗಿಂತ ಹಲವಾರು ವರ್ಷ ಹಿರಿಯರೇ. ಬೇಗ ಎದ್ದು ಅಕ್ಕ (ಓರಗಿತ್ತಿ) ನಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೆ. ಆ ಮೇಲೆ ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆಗೆ ಓದುತ್ತಿದ್ದೆ. ಸ್ವಲ್ಪ ಹೊತ್ತು ಅತ್ತೆಯವರ ಜತೆ ಸಮಯ ಕಳೆಯುತ್ತಿದ್ದೆ. ಅವರಿಗೆ ಕಣ್ಣಲ್ಲಿ ದೃಷ್ಟಿಯಿರಲಿಲ್ಲ ಹಾಗೂ ಕಿವಿ ಮಂದವಾಗಿ ಕೇಳಿಸುತ್ತಿತ್ತು. ಅವರ ತವರುಮನೆಯ ಕತೆಗಳನ್ನು ಹೇಳಿ ನನ್ನನ್ನು ರಂಜಿಸುತ್ತಿದ್ದರು. ಮಧ್ಯಾಹ್ನ ಮಾವ ಅಂಗಡಿ ನೋಡಿಕೊಳ್ಳುತ್ತಿದ್ದರೆ ಭೈಯ್ಯ ಊಟಕ್ಕೆ ಬರುತ್ತಿದ್ದರು. ಅವರದ್ದು ಸಾವಕಾಶ ಊಟ. ಅಕ್ಕ ಮತ್ತು ಭಯ್ಯ ಅವರನ್ನು ಬಡಿಸುತ್ತ ಅವರ ಮಾತುಗಳನ್ನು ಕೇಳಲು ಉತ್ಸುಕಳಾಗುತ್ತಿದೆ. ಅವರು ಓದುವುದರಲ್ಲಿ, ಅದರಲ್ಲೂ ಲೆಕ್ಕದಲ್ಲಿ ತುಂಬ ಬುದ್ದಿವಂತರಿದ್ದರಂತೆ, ಆದರೆ ಮಾವನವರಿಗೆ ಅಂಗಡಿಯಲ್ಲಿ ಸಹಾಯ ಮಾಡಬೇಕಾಗಿ ಬಂದು ಅವರು 8 ನೇ ಈಯತ್ತೆ ಮುಗಿಯುತ್ತಿದ್ದ ಹಾಗೆ ಅವರನ್ನು ಶಾಲೆಯಿಂದ ಬಿಡಿಸಿದ್ದರಂತೆ. ಈ ಬಗ್ಗೆ ಅವರು ಬೇಜಾರಿನಿಂದ ಹಲವಾರು ಬಾರಿ ನನ್ನಲ್ಲಿ ಹೇಳಿಕೊಂಡಿದ್ದರು. ಮನೆಯಲ್ಲಿ ಹಿರಿಯ ಮೂವರು ಗಂಡಸಿದ್ದರೂ (ನನ್ನ ಮಾವನವರ ಇಬ್ಬರು ತಮ್ಮಂದಿರು ಮತ್ತು ಶ್ರೀಕಾಂತರ ಇನ್ನೊಬ್ಬ ಅಣ್ಣ) ಅವರೆಲ್ಲ ಬೇರೆ ಬೇರೆ ಕೆಲಸ ಮಾಡುತ್ತಿದ್ದರಿಂದ ಅಂಗಡಿಯ ಜವಾಬ್ದಾರಿ ನನ್ನ ಭೈಯ್ಯನವರ ಮೇಲೆ. ಭಾರವಾದ ಮೂಟೆಗಳನ್ನು ಹೊರುವುದರಿಂದ ಅಂಗಡಿಯ ಸಾಮಾನುಗಳನ್ನು ಅದರ ಸ್ಥಾನದಲ್ಲಿಡುವುದು, ಸೇಲ್ಸ್, ಆರ್ಡರ್ ಕೊಡುವುದು, ತಿಂಗಳಿಗೆ ಒಂದು ಸಲ ಶಿವಮೊಗ್ಗಕ್ಕೆ ಹೋಗಿ ಖಾಲಿಯಾದ ಸಾಮಾನಿನ ಪಟ್ಟಿ ಕೊಟ್ಟು ಬರುವುದು ಮುಂತಾದ ಹತ್ತು ಹಲವು ಕೆಲಸಗಳು. ನಮ್ಮ 25 ವರ್ಷದ ಒಡನಾಟದಲ್ಲಿ ಅವರು ಕಾಯಿಲೆ ಬಿದ್ದದ್ದು ಆ ಒಂದೇ ಸಲ. ಭಾನುವಾರ ಅಂಗಡಿ ಬಾಗಿಲು ಹಾಕಿದ್ದರೂ ಓಣಿ ಬಾಗಿಲಿನಿಂದ ಬರುವ ಗ್ರಾಹಕರು. ಹಾಗಾಗಿ ರವಿವಾರ ಕೂಡ ಕೆಲಸವೇ ಆಗುತ್ತಿತ್ತು.

ನಮ್ಮ ತೀರ್ಥಹಳ್ಳಿಯ ಜೀನಸಿ ಅಂಗಡಿಗೆ 100 ವರ್ಷಕ್ಕಿಂತ ಹಳೆಯ ಇತಿಹಾಸ..ಎಲ್ಲ ಸಿಗುತ್ತಿತ್ತು. ಊರಿನಲ್ಲಿ ಒಂದು ಮಾತು ಇತ್ತು ;ಎಲ್ಲೂ ಸಿಗದಿದ್ದರೆ ಬಾಲಕೃಷ್ಣ ಶಣೈ ಅವರ ಅಂಗಡಿಯಲ್ಲಿ ಸಿಗುತ್ತೆ ಅಂತ. ಬಾಣಂತಿ ಔಷಧಗಳು, ಬೇರು-ಕಾಷ್ಟಗಳು etc etc..:-)
ಬೆಳಿಗ್ಗೆ ಅವರು ಹೋಮ್ ಗಾರ್ಡ್ಸ್ ಸೇವೆ ಗೆ ಹೋಗುತ್ತಿದ್ದರು. ಅವರು ಹೋಮ್ ಗಾರ್ಡ್ ಕ್ಯಾಂಪ್ ಗೆ ಎಲ್ಲ ಹೋದಾಗ ಕ್ರೀಯಾಶೀಲತೆಯಿಂದ ಪಡೆದ ಬಹುಮಾನಗಳ ಬಗ್ಗೆ, ಅವರು ಕಲಿತ ಬೇರೆ ಬೇರೆ knots ಬಗ್ಗೆ ಹೇಳೊದು ಅದರ ಪ್ರಾತ್ಯಕ್ಷಿಕತೆ ಕೂಡ ಮಾಡಿ ತೋರಿಸುವುದು, ಫರ್ಸ್ಟ್ ಎಇಡ್ ಬಗ್ಗೆ ಎಲ್ಲ ಹೇಳುತ್ತಿದ್ದರು. ಯಾವುದೇ ಪದಾರ್ಥ/ಸಾಮಾನು ಅವರು ವೇಸ್ಟ್ ಮಾಡುತ್ತಿರಲಿಲ್ಲ ನಮಗೂ ಹಾಗೇ ಹೇಳುತ್ತಿದ್ದರು, 'ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ' ಅಂತ.
ವಿಷ್ಣುವರ್ಧನ್ ಅವರ ನೆಚ್ಚಿನ ಸಿನಿಮಾ ತಾರೆ. ಅವರ ಆಪ್ತಮಿತ್ರ ಸಿನಿಮಾವನ್ನು ರಾತ್ರಿ ಅಂಗಡಿ ಬಾಗಿಲು ಮುಚ್ಚಿದ ಮೇಲೆ ಲಾಸ್ಟ್ ಶೋ ಹೋಗಿ ಮೂರು ಸಲ ಹೋಗಿ ನೋಡಿ ಬಂದವರು. ಮತ್ತು ತೀರ್ಥಹಳ್ಳಿಗೆ ವಿಷ್ಣುವರ್ಧನ್ ಅವರು ಭೇಟಿ ನೀಡಿದಾಗ ಬೆಳಿಗ್ಗಿನಿಂದ ಸಂಜೆ ತನಕ ಬಿಸಿಲನ್ನೂ ಲೆಕ್ಕಿಸದೆ ಕಾದು, ಅವರಿಗೆ ಹಸ್ತಲಾಘವ ನೀಡಿದ್ದು ಅದು ಟಿ.ವಿ ಯವರು ರೆಕಾರ್ಡ್ ಮಾಡಿದ್ದು, ಮನೆಗೆ ಬಂದು ಬೆಂಗಳೂರಿನಲ್ಲಿದ್ದ ನನಗೆ ಫೋನಾಯಿಸಿದ್ದು ಇನ್ನು ನಿನ್ನೆ ಮೊನ್ನೆ ತರಹ ಹಸಿ ಹಸಿ ನೆನಪು.
ಮಾಲು-ನಿಹಾ 10 ನೇ ಮತ್ತು PUC 2 ನಲ್ಲಿ ಒಳ್ಳೆ ಅಂಕಗಳಿಂದ ಪಾಸ್ ಆದಾಗ, ಲೆಕ್ಕದಲ್ಲಿ ನೂರಕ್ಕೆ ನೂರು ಪಡೆದಾಗಲೆಲ್ಲ ಅವರಿಗೆ ಮೊದಲಿಗೆ ಫೋನಾಯಿಸುತ್ತಿದೆ. ಇಬ್ಬರಲ್ಲಿ ಒಬ್ಬರಾದರೂ ಡಾಕ್ಟರ್ ಆಗಬೇಕೆಂದು ಅವರು ಬಯಸಿದ್ದರು. :-)
ತುಂಬ ಕಷ್ಟ ಪಟ್ಟಿದ ಜೀವ. ಮನೆಯ ಹಿರಿಯರೆಲ್ಲ ಅವರ ಕೊನೆ ಸಮಯದಲ್ಲಿ ಹಾಸಿಗೆ ಹಿಡಿದಾಗ ಅವರ ಮಲ ಮೂತ್ರಕೂಡ clean ಮಾಡಿದವರು. ಹಿರಿಯರೆಲ್ಲ ಕಾಲವಾದ ಮೇಲೆ, ಒಬ್ಬಳೆ ಮಗಳು 'ಮುನ್ನ' (ಸುಮತಿ) ಳ ಮದುವೆಯ ಬಳಿಕ ಅವರು ಸ್ವಲ್ಪ ನೆಮ್ಮದಿಯಿಂದಿದ್ದರು. ಹಲವಾರು ಬಾರಿ ನಾನು ಅವರಿಗೆ ಕೆಲಸಕ್ಕೆ ಸಣ್ಣ ಹುಡುಗರನ್ನು ಇಟ್ಟುಕೊಳ್ಳಿ, ಎಲ್ಲ ನೀವೆ ಮಾಡುವುದನ್ನು ಇನ್ನು ಸಾಕು ನಿಲ್ಲಿಸಿ ಅಂತ ಗಿಣಿಗೆ ಹೇಳಿದ ಹಾಗೆ ಹೇಳಿದ್ದೆ. ಆದಷ್ಟು ದಿನ ನಿರ್ವಹಿಸುತ್ತೇನೆ ಆಮೇಲೆ ಅದೆಲ್ಲ ಇದ್ದದ್ದೆ ಅಲ್ಲವಾ ಅಂತ ಹೆಳುತ್ತಿದ್ದರು. ಅಷ್ಟರಲ್ಲಿ ಊರಿನಲ್ಲಿ ಕೊಂಕಣಿಯವರು ಶ್ರೀ ವೆಂಕಟರಮಣ ದೇವಸ್ಥಾನ ಕಟ್ಟುವುದೆಂದು ನಿರ್ಧರಿಸಿದರು. ಆ ಸಲುವಾಗಿ ಅವರು ಓಡಾಡಿದ್ದು.ಊರೂರು ತಿರುಗಿದ್ದು ಅಷ್ಟಿಷ್ಟಲ್ಲ. ಆದರೂ ತುಂಬ ಎಂಜಾಯ್ ಮಾಡುತ್ತಿದ್ದರು. ಅವರು ತುಂಬ jovial ಮನುಷ್ಯ. ಎದುರಿಗೆ ಸಿಕ್ಕ ಯಾರನ್ನೂ ಮಾತನಾಡಿಸದೇ ಯಾವತ್ತೂ ಕಳಿಸಿದವರಲ್ಲ.
'ದೇವರ ಕೆಲಸ ಶುರು ಹಚ್ಚಿಕೊಂಡ ಮೇಲೆ ನನಗೆ ಆದಾಯ ಕೂಡ ಹೆಚ್ಚಾಗಿದೆ, ಎಲ್ಲ ಸ್ವಾಮಿ ದೇವನ ಕೃಪೆ' ಅಂತ ಎಷ್ಟೊಂದು ಬಾರಿ ನನ್ನ ಬಳಿ ಹೇಳಿದ್ದರು. ರಾತ್ರಿ ಊಟ ವಾದ ಮೇಲೆ ಅವರು, ಯಾರ್ಯಾರು ದೇವಸ್ಥಾನಕ್ಕೆ ಎಷ್ಟೆಷ್ಟು ದೇಣಿಗೆ ನೀಡಿದರು ಮುಂತಾದೆಲ್ಲ ರಸಿತಿಯನ್ನು ಬರೆಯುತ್ತ, ರಸವತ್ತಾಗಿ ಹೇಳುತ್ತಿದ್ದರು. ಇನ್ನೊಮ್ಮೆ ಒಂದು ಚಿಕ್ಕ ಪೆಟ್ಟಿಗೆ ತೋರಿಸಿ 'ಇದರಲ್ಲಿ ನಾನು ದಿನಾ 100 ರೂ ಹಾಕುತ್ತೇನೆ ವಾರಕ್ಕೊಂದು ಸಲ ಅದು ದೇವಸ್ಥಾನಕ್ಕೆ ನೀಡುತ್ತೇನೆ ಅಂದಿದ್ದರು. ಆಪ್ತರು ಪರಿಚಯಸ್ಥರು ಹಲವಾರು ಜನರು 'ದೇವಸ್ಥಾನಕ್ಕಾಗಿ ತುಂಬ ಖರ್ಚು ಮಾಡುತ್ತಿದ್ದಾರೆ' ಅಂದಾಗ ಅವರ ದುಡ್ಡು ಬೇಕಾದ ಹಾಗೆ ಖರ್ಚು ಮಾಡಲು ಅವರಿಗೆ ಹಕ್ಕಿದೆ ಅಂತ ಹೇಳಿ ನಾನು ಬಾಯಿ ಮುಚ್ಚಿಸಿದೆ. ನನಗೂ ದೇಣಿಗೆ ನೀಡಲು ,ಹಾಗೂ ಈ ನಿಟ್ಟಿನಲ್ಲಿ ನನ್ನ ಕುಟುಂಬದವರನ್ನು ಪ್ರೇರೇಪಿಸಲು ಅವರು ಅವಾಗಾವಾಗ ನನಗೆ ಹೇಳುತ್ತಿದ್ದರು. ನನಗೆ ಅದರಲ್ಲೆಲ್ಲ ನಂಬಿಕೆಯಿಲ್ಲ. ಅದಕ್ಕೆ ನಕ್ಕು ಸುಮ್ಮನಾಗುತ್ತಿದೆ. ಕಡೆಗೆ ಅವರೇ ನನ್ನ ತಂದೆ-ತಾಯಿ, ತಮ್ಮ, ತಂಗಿಯರಿಗೆ ಫೋನ್ ಮಾಡಿ ಅವರಿಂದ ದೇಣಿಗೆ ಪಡೆಯುವುದರಲ್ಲಿ ಯಶಸ್ವಿಯಾದರು. ದೇವಸ್ಥಾನದ ಅಧ್ಯಕ್ಷರನ್ನಾಗಿ ಮಾಡಿದಾಗಲಂತೂ ಅವರ ಖುಶಿ ಹೇಳತೀರದು. ಅಷ್ಟು ಖುಶಿಯಲ್ಲಿದ್ದಾಗಲೇ ಅವರು ಒಂದು ದಿನ ರಕ್ತ ವಾಂತಿ ಮಾಡಿಕೊಂಡಿದ್ದು. ದೇವಸ್ಥಾನದ ಕಮಿಟಿಯವರ ಸಹಾಯದಿಂದ ಅವರಿಗೆ ಮಣಿಪಾಲಕ್ಕೆ ಕರೆದೊಯ್ಯಲಾಯಿತು. ಆಗ ನಾವು ಹಾಗೂ ನನ್ನ ತಮ್ಮನ ಕುಟುಂಬ ಮಹಾರಾಷ್ಟ್ರದ ಟೂರ್ ಹೋಗಿದ್ದೆವು. ಆಮೇಲೆ ಅವರ ಚಿಕಿತ್ಸೆಗೋಸ್ಕರ ಅಂತ ಅವರು ಉಡುಪಿಯಲ್ಲೆ ಇರುವುದೆಂದು ನಿರ್ಧರಿಸಲಾಯಿತು ಉಡುಪಿಯಲ್ಲಿ ಹೇಗೂ ಮುನ್ನಳ ಮನೆಯಿತ್ತು.
ಕೊನೆ ಕೊನೆಗೆ ಅವರ ಜೀವ ತೀರ್ಥಹಳ್ಳಿ ಕಡೆ ಎಳೆಯುತ್ತಿತ್ತು. ಅಲ್ಲೇ ಹುಟ್ಟಿ ಬೆಳೆದು, ಕಷ್ಟ ಸುಖ, ದು:ಖ, ಹುಟ್ಟು, ಸಾವು ಸಂತಸ ಕಂಡಂತಹ ಮನೆಗೆ ಹೋಗುವ ಸಹಜ ತವಕ ವ್ಯಕ್ತ ಪಡಿಸುತ್ತಿದ್ದರು.ಉಡುಪಿಯಲ್ಲಿ ಕೂಡ ಅಕ್ಕ ಪಕ್ಕದವರ ಸ್ನೇಹ ಸಂಪಾದಿಸಿದ್ದರು. ಯಾರಿಗೂ ಯಾವತ್ತೂ ಕೇಡು ಬಯಸಿದವರಲ್ಲ.
ನಾವು ಉಡುಪಿ ತಲುಪಿದಾಗ ರಾತ್ರಿ 11.30. ಹೋಗಿ ಮೊದಲಿಗೆ ಅಕ್ಕನನ್ನು ತಬ್ಬಿಕೊಂಡಿದ್ದು. ರಾತ್ರಿ ಇಡೀ ಸಂಕಟ, ದು:ಖವನ್ನೂ ಮರೆಮಾಚಿಸುವಷ್ಟು ಸೊಳ್ಳೆಗಳ ಕಾಟ. ಅಕ್ಕನೆ ಎದ್ದು ನಮಗೆ ಸೊಳ್ಳೆ ಓಡಿಸುವ ಕಾಯಿಲ್ ತಂದು ಕೊಟ್ಟರು. ಹಾಗೆ ಹೀಗೆ ಹೊರಳಾಡಿ ಬೆಳಗಾಗುವುದನ್ನೆ ಕಾಯುತ್ತಿದ್ದೆ. ಶೈತ್ಯಾಗಾರದ ಬಾಗಿಲು ತೆರೆಯುವುದೇ 8 ಗಂಟೆಗೆ.
ಯಾರೂ ಅಳಕೂಡದೆಂದು ಭೈಯ್ಯ ನವರು ಹೇಳಿದ್ದರಂತೆ. ಆದರೂ ಕೊನೆಯ ಬಾರಿ ಅವರನ್ನು ಎತ್ತಿಕೊಂಡು ಹೋದಾಗ ತಡೆಯಲಾಗದೆ ಬಿಕ್ಕಳಿಸಿದ್ದೆ. ಅಷ್ಟೆ ಅಲ್ಲ, ಯಾರಿಗೂ ತೊಂದರೆ ಯಾಗಬಾರದೆಂದು ಅಂತ್ಯ ಸಂಸ್ಕಾರಕ್ಕೆಂದು ದುಡ್ಡು ಸಹ ರೆಡಿ ಮಾಡಿ ಬ್ಯಾಂಕ್ ನಲ್ಲಿ ಇಟ್ಟಿದ್ದರು ಎಂದರೆ ನಂಬುತ್ತೀರಾ??
ಈಗ ನಮ್ಮಲಿರುವುದು ಅವರ ನೆನಪು ಮಾತ್ರ.
ಮುನ್ನ ಉರ್ಫ್ ಸುಮತಿ ಹೆಗ್ಡೆ ಅವಳ ತಂದೆ ಬಗ್ಗೆ ಬರೆದಿದ್ದು ಕೆಳಗಿನ ಕೊಂಡಿಯಲ್ಲಿದೆ
http://sumathihegde.blogspot.in/2012/09/blog-post_15.html
:-(
200 ನೇ ಬರಹಕ್ಕೆ ತಲುಪಿದಕ್ಕೆ ಪುನ: ರಘು ಅಪಾರ, ಶ್ರೀಕಾಂತ, thatskannada.com, ವಿಜಯಕರ್ನಾಟಕ ಪತ್ರಿಕೆ, ಶ್ರೀವತ್ಸ ಜೋಶಿ, ಬದರಿನಾಥ ಪಲವಳ್ಳಿ, ಶ್ರೀದೇವಿ ಕಳಸದ್, ಅವಧಿ ಮ್ಯಾಗ್, ಕೆಂಡಸಂಪಿಗೆ, ನಿಲುಮೆ, ಕನ್ನಡ ಬ್ಲಾಗರ್ಸ್ ಲಿಸ್ಟ್, ಸಂಪದ ಹಾಗೂ ನನ್ನೆಲ್ಲ ಓದುಗ ಮಿತ್ರರಿಗೆ ನನ್ನ ಧನ್ಯವಾದ ಸಲ್ಲುತ್ತದೆ.