February 28, 2010

ಬನ್ನಿ ನೋಡಿ ನಮ್ಮೂರು- ತೀರ್ಥಹಳ್ಳಿ, ನಮ್ಮ ತೋಟ, ಅಡಿಕೆ ಕೊಯ್ಲು... etc ಎಟಸೆಟ್ರಾ part 1

ತೀರ್ಥಹಳ್ಳಿ :ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಮತ್ತು ಅದರ ಮುಖ್ಯ ಊರು. ಶಿವಮೊಗ್ಗದಿಂದ ಸಾಧಾರಣ 65 ಕಿ.ಮಿ.ದೂರ. ಮಲೆನಾಡಿಗೆ ಸೇರಿದ್ದರಿಂದ ಬೆಟ್ಟ, ಗುಡ್ಡ, ಕಾಡು, ನದಿ, ಝರಿಗಳಿಂದ ಕೂಡಿದ ಕಣ್ಮನ ಸೊರೆಗೊಳ್ಳುವ ರಮ್ಯ ಪ್ರದೇಶ.ಶಿವಮೊಗ್ಗ ಹಾಗೂ ಉಡುಪಿ ಮಧ್ಯದಲ್ಲಿ ಬರುವ ದೊಡ್ಡ ಎನಬಹುದಾದ ಊರು. ಹಾಗಾಗಿ ನೆಂಟರಿಗೆಲ್ಲ ನಮ್ಮ ಮನೆಯಲ್ಲಿ rest stop. ಇಲ್ಲಿವೆ ನಮ್ಮೂರಿನ ಕೆಲವು ಚಿತ್ರಗಳು.

ಇಲ್ಲಿನ ಮುಖ್ಯ ನದಿ- ತುಂಗಾ
ನದಿಗೆ ಹೋಗುವ ದಾರಿ
ರಾಮ ಮಂಟಪ. ಜೋರು ಮಳೆಯಾದಾಗ ಈ ಮಂಟಪ ಮುಳುಗಿ ಹೋಗುತ್ತೆ. ನೀರಿನ ರಭಸಕ್ಕೆ ಬಂಡೆಯಲ್ಲಿ ಕೊರೆಯಲ್ಪಟ್ಟ ಅನೇಕ ಕುಳಿಗಳಿವೆ. ಇದರಲ್ಲಿ ಒಂದು ವಿಶಾಲವಾದ ಕುಳಿ ಕೊಳದ ಆಕಾರ ಪಡೆದಿದೆ. ಈ ಕೊಳದ ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ ಪಾಪ ನಿರ್ಮೂಲನೆ ಯಾಗುತ್ತವೆ ಎಂಬ ನಂಬಿಕೆಯಿದೆ.




ಈ ಸೇತುವೆಯನ್ನು ಸರ್ ಎಮ್. ವಿಶ್ವೇಶರಯ್ಯನವರು ಕಟ್ಟಿಸಿದ್ದು :-) ಈ ಸೇತುವೆ ಕಂಡ್ರೆ ನನಗೆ ತುಂಬ ಹೆಮ್ಮೆಯನಿಸುತ್ತೆ!



ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ದಾರಿ

ಕೋದಂಡರಾಮ ದೇವಸ್ಥಾನ



ರಥ ಬೀದಿ

ರಾಮೇಶ್ವರ ದೇವಸ್ಥಾನ


ಕೊಪ್ಪ circle, Azad ರಸ್ತೆ. ಇಲ್ಲಿ ನಿಂತು ’ಮಾಲತಿ ಶೆಣೈ’ ಅಂತ ಕರೆದರೆ ನನಗೆ ಕೇಳಿಸುತ್ತೆ. ಇಲ್ಲೇ ಹತ್ತಿರದಲ್ಲಿ ನಮ್ಮ ಮನೆ. :-)

ತೀರ್ಥಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿದ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ. ಶ್ರೀಕಾಂತ ರ ಅಣ್ಣ (ನನ್ನ ಭೈಯ್ಯ) ದೇವಸ್ಥಾನದ ಅಧ್ಯಕ್ಷರು :-) ಬೆಳಿಗ್ಗೆ ಬೆಳಿಗ್ಗೆ ಇಬ್ಬನಿ ಹನೀತಾ ಇತ್ತು.


the idol in the SLV Temple




ಅಗ್ರಹಾರ.


ಊರಿನಲ್ಲಿ ಪ್ಲೇಗ್ ಮಹಾಮಾರಿ ತಗುಲಿದಾಗ, ಈ ರಥವನ್ನು ಹರಕೆಯರೂಪದಲ್ಲಿ ಹೇಳಿಕೊಂಡಿದ್ದು. ಈಗ ಸಂಕ್ರಮಣದಂದು ಈ ತೇರನ್ನು ಎಳೆಯುತ್ತಾರೆ. ಮಾರ್ಗಶಿರಮಾಸಿನಲ್ಲಿ ಮೂರು ದಿನ ರಾಮೇಶ್ವರ ಜಾತ್ರೆ ನಡೆಯುತ್ತದೆ

ಇನ್ನೂ part -2 ಇದೆ. ಫೋಟೊ download ಮಾಡಿ ಸುಸ್ತಾಯ್ತು. :-)

February 15, 2010

ಬಿಹಾರ್- ಕೆಲವು random ನೆನಪುಗಳು

ನಾನು ಮುಂಬಯಿನಲ್ಲಿ ಅಜ್ಜನ ಮನೆಯಲ್ಲಿದ್ದು ಶಾಲೆಗೆ ಹೋಗುತ್ತಿದ್ದೆ. ತಂದೆ ಬ್ಯಾಂಕ್ ಒಂದರಲ್ಲಿ ಇದ್ದುದರಿಂದ ಅವರಿಗೆ ಎರಡು- ಮೂರು ವರ್ಷಕೂಮ್ಮೆ ಬದಲಿ (transfer)ಆಗುತಿತ್ತು. ನಾನು ಬೇಸಿಗೆ ರಜೆ ಇದ್ದಾಗ ಒಂದು ತಿಂಗಳು ಅವರ ಜತೆ ಇದ್ದು ಬರುತ್ತಿದ್ದೆ. ಇದರಲ್ಲಿ ನನಗೆ ಬಿಹಾರ ಗೆ ಹೋಗಿದ್ದು ನೆನಪು ಇನ್ನೂ ಹಚ್ಚು ಹಸುರು. ಇಲ್ಲಿ ನಾನು ಪೂರ್ತಿ ಎರಡು ತಿಂಗಳು ಇದ್ದು ಬಂದಿದ್ದೆ.
ಆ ವರ್ಷ ಅಪ್ಪ ಪಟ್ನಾ ದಲ್ಲಿ ಇದ್ದರು. ನನ್ನ ಪುಟ್ಟ ತಂಗಿ ಅಲ್ಲೇ ಹುಟ್ಟಿದ್ದರಿಂದ, ನಮ್ಮ ಮಾತೃಭಾಷೆ ಕೊಂಕಣಿಯಾದ್ರು, ಅದನ್ನು ಕಲಿಯದೇ ಅರಳು ಹುರಿದಂತೆ ಹಿಂದಿ ಮಾತಾಡ್ತಿದ್ಲು. ಅವಳು ಹುಟ್ಟಿದ್ದೆ ನನಗೆ ಗೊತ್ತಿರಲಿಲ್ಲ. ಮುಂಬಯಿಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಬಂದಾಗಲೇ ಸೋಜಿಗದಿಂದ ಅವಳನ್ನು ನೋಡಿ ನಾನು ’ಯಾರು ಈ ಮುದ್ದು ಬೊಂಬೆ, ನಮ್ಮ ಮನೆಗೆ ಹೇಗೆ ಬಂತು’ ಅಂತ ನಾನಿ (ಅಮ್ಮನ ಅಮ್ಮ)ಗೆ ಕೇಳಿದಾಗ ನನನ್ನು ಗದರಿದರು. ನನ್ನ ತಾಯಿ ನಾಚಿಕೆಯಾಗಿ ನಾನಿ ಹತ್ರಾನೂ ಈ ವಿಷಯ ಮುಚ್ಚಿಟ್ಟಿದ್ದರಂತೆ. ಆಮೇಲೆ ಗೊತ್ತಾಯಿತು ಅವಳು ನನ್ನ ತಂಗಿ ಅಂತ. :-)

ಸರಿ ಮದುವೆಯ ಕಲಾಪಗಳೆಲ್ಲ ಮುಗಿದ ಮೇಲೆ, ಹೇಗೂ ನನ್ನ ಬೇಸಿಗೆಯ ರಜೆ ಶುರು ಆಗಿದ್ದರಿಂದ, ನನ್ನನ್ನೂ ಅವರೊಂದಿಗೆ ಕರೆದುಕೊಂಡು ಹೋಗುವುದು ನಿರ್ಧಾರವಾಯಿತು.ಮೊದಲು ನಾವು ಮಂಗಳೂರಿಗೆ ಒಂದು ಉಪನಯನ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿಂದ ಪಟ್ನಾಕ್ಕೆ ಹೊರಟೆವು. ನಾಲ್ಕು ದಿನಗಳ ರೈಲು ಪ್ರಯಾಣ. ಮುಗಲಸರಾಯ್ ತನಕ ಮೊದಲ ಹಂತದ ಪ್ರಯಾಣ. ಅಮ್ಮನ ಸಾಮಾನಿನ ಒಟ್ಟಿಗೆ ಹಪ್ಪಳ, ಉಪ್ಪಿನಕಾಯಿ ಪೊಟ್ಟಣಗಳು. ನಾವು ನಾಲ್ಕು ಮಕ್ಕಳು (ನಾನು, ನನ್ನ ತಮ್ಮಂದಿರಿಬ್ಬರು, ಹಾಗೂ ತಂಗಿ) ಅಪ್ಪ ಅಮ್ಮ, ಹಾಗೂ ಲಗ್ಗೇಜ್. ಪಟ್ನಾ ಸಿಟಿಗೆ ಹೋಗುವ ರೈಲು ಎಂಟು ಗಂಟೆ ವಿಳಂಬ. ನಾವು, ನಮ್ಮ ಸಾಮಾನು ಪ್ಲಾಟ್ ಫೋರ್ಮ್ ಮೇಲೆ.

ಸಾಲು ಸಾಲು ಭಿಕ್ಷೆ ಬೇಡುವ ಪುಟ್ಟ ಹುಡುಗ ಹುಡುಗಿಯರು. ಸ್ನಾನ ಮಾಡಿ ವರ್ಷಗಳೇ ಆಗಿರುವಂತೆ ಕಪ್ಪನೆ, ವಾಸನೆ ಹೊಡೆಯುತ್ತಿರುವ , ಹರಕು ಬಟ್ಟೆಗಳಿಂದ ಮುಚ್ಚಿದ ಅವರ ದೇಹ. ಯಾವುದೋ ಭಾಷೆ.....ರಾಗವಾಗಿ ’ದಾದಿಯ...ದಾದಿಯ...ದೇ..ದೇ..ದೇ...ಅನ್ನುವ ಅವರ ಹಾಡು. ಅಮ್ಮನ ಲಕ್ಷ್ಯ ಅವರಲ್ಲಿ ಸೆಳೆದುಕೊಳ್ಳಲು ಪ್ರಯತ್ನಿಸಿ,ಅವರು ಅಮ್ಮನ ಕೈ ಮುಟ್ಟಿದ್ದಕ್ಕೆ, ಅಮ್ಮದಿಂದ ’ದೂರ ಜಾಒ’ ಅಂತ ಬೈಯಿಸಿಕೊಂಡ ರೀತಿಯನ್ನು ದೊಡ್ಡ ದೊಡ್ಡ ಕಣ್ಣು ಬಿಟ್ಟು ನೋಡುತ್ತಾ..ಯಾವಗಲೋ ನಿದ್ದೆಗೆ ಜಾರಿದೆ.

ರಾತ್ರಿ ಮೂರಕ್ಕೆ ಬಂದ ರೈಲು, ಹೇಳಿದ ಪ್ಲಾಟ್ ಫೋರ್ಮ್ ಗೆ ಬರದೆ, ಫಜೀತಿಯಾಗಿ, ಪೋರ್ಟರ್ ನಮ್ಮ ಲಗ್ಗ್ಗೇಜನ್ನು, ನಮ್ಮಮ್ಮ ನಮ್ಮನ್ನೂ ಲಗೇಜ್ ತರ , ನೂಕು-ನುಗ್ಗಲಿನಲ್ಲಿ ದರದರನೆ ಎಳೆದು ಕೊಂಡು ಹೋದರು . ರೀಸರ್ವ್ ಮಾಡಿದ ಸೀಟ್ ಆದರೂ ಅದರಲ್ಲಿ ಯಾರೋ ಬಂದು ಹಕ್ಕು ಸ್ಥಾಪಿಸಿ ನಿದ್ದೆ ಹೋಗಿದ ಯಾತ್ರಿಕನನ್ನು, ಅಪ್ಪ ಜಗಳ ಮಾಡಿ , ಬೈದು ಇಳಿಸಿದರು. ಇಷ್ಟೆಲ್ಲ ಗಲಾಟೆ ಯಲ್ಲೂ ಮೇಲಿನ ಬರ್ಥ್ (berth)ಗಾಗಿ ಜಗಳ ಆಡ್ತಾ ಇದ್ದ ತಮ್ಮಂದಿರನ್ನು ಕಂಡು, ನನಗೆ ನಿದ್ದೆಗಣ್ಣಲ್ಲೂ ನಗು.

ಪಾಟ್ನ ಸಿಟಿ ತಲುಪಿದ ಮೇಲೆ, ಆರಾ (arrah) ಗೆ ಹೋಗುವ ರೈಲಿನಲ್ಲಿ ಬೆಳಿಗ್ಗೆ ಸುಮಾರು ೯.೦೦ ಗಂಟೆಗೆ, ಅಪ್ಪನ ಬ್ಯಾಂಕ್ ಕ್ವಾರ್ಟರ್ಸ್ ಗೆ ತಲುಪಿದೆವು. ಕಂಪೌಂಡ್ ನ ಒಳಗಡೆ ಅತ್ಯಂತ ದೊಡ್ಡದಾದ ಬಂಗಲೆ ಕಂಡು ನನಗಂತೂ ಖುಷಿಯೋ ಖುಷಿ. ಮನೆಯ ಹೊರಗೆ ಹೂ (ಹೆಸರು ಗೊತ್ತಿಲ್ಲ)ಗಳಿಂದ ತುಂಬಿದ ಸೋಂಪಾಗಿ ಬೆಳೆದ ಬಳ್ಳಿ.ಮನೆಯೊಳಗೆ ಒಂದು ಕೊಠಡಿಯಲ್ಲಿ ದೊಡ್ಡ ನಿಲುವುಗನ್ನಡಿ ನೋಡಿ, ಅದರ ಮುಂದೆ ಹೋಗಿ ನಿಂತರೆ, ಅದರಲ್ಲಿ ಪ್ರತಿಬಿಂಬಿಸಿದ ನನ್ನನ್ನು ನೋಡಿ ಹೆದರಿ ಬಿಟ್ಟೆ. ಕಪ್ಪು ಮುಖದಲ್ಲಿ, ಬೆಳ್ಳಗೆ ಕಾಣುತಿದ್ದುದು ನನ್ನ ಕಣ್ಣುಗುಡ್ಡೆ ಮತ್ತು ಹಲ್ಲು ಮಾತ್ರ. ಬಿಕ್ಷೆ ಬೇಡುತ್ತಿದ್ದ ಮಕ್ಕಳಿಗಿಂತ ಕೆಟ್ಟ ಪರಿಸ್ಥಿತಿ. ನಾಲ್ಕು ದಿನ ಸ್ನಾನನೂ ಇಲ್ಲದೇ, ಬಟ್ಟೆಯೂ ಬದಲಾಯಿಸದೇ ಬಂದೊದಗಿದ ಪರಿಸ್ಥಿತಿ.

ಆ ದಿನವಂತು ಅಮ್ಮ ನಮ್ಮನ್ನೆಲ್ಲ ತಿಕ್ಕಿ ತಿಕ್ಕಿ ಸ್ನಾನ ಮಾಡಿಸಿದರು.

ಬ್ಯಾಂಕಿನ ಪಿಯನ್ ಮಧ್ಯಾನ್ಹದ ಊಟದ ವ್ಯವಸ್ಥೆ ಮಾಡಿದ್ದರಿಂದ, ಅಮ್ಮ ನಿಗೆ ಕೆಲಸದವಳನ್ನು ಹಿಡಿದುಕೊಂಡು ಮನೆ ಕ್ಲೀನ್ ಮಾಡುವ ಕಾಯಕ. ನಾವು ಊಟ ಮಾಡಿ ಮಲಗಿ ಕಣ್ಣು ಬಿಡುವಾಗ ಆಗಲೇ ಕತ್ತಲೆ. ಕರೆಂಟು ಇಲ್ಲದಿದ್ದುದರಿಂದ ಕ್ಯಾಂಡಲ್ ನ ಮಿಣಿ ಮಿಣಿ ಬೆಳಕು. ಸೊಳ್ಳೆಗಳ ಝೇಂಕಾರ ಕೇಳಿ, ಆ ಸೆಖೆಗೆ ನಾವು ಕಿಟಕಿ ಹತ್ತಿರ ಕೂತಿದ್ದ ನೆನಪು. ಹೊರಗೆ ಗೌ ಎನ್ನುವ ಕತ್ತಲು. ನಾವು ಮೂರು ಮಕ್ಕಳಿಗೂ ಎನೋ ಒಂದು ತರಹ ಬೇಸರ. ಆ ರಾತ್ರಿ ಹೇಗೋ ಕಳೆಯಿತು. ಹೋದ ಕರೆಂಟ್ ಮರುದಿನ ಬೆಳಗಿನ ತನಕ ವಾಪಸ್ ಬರಲೇ ಇಲ್ಲ. ಬೆಳಿಗ್ಗೆ ಮನೆ ಯ ಹೊರಗೆ, ಕೌಂಪೌಂಡ್ ಒಳಗಡೆ ಹ್ಯಾಂಡ್ ಪಂಪ್ ನಿಂದ ಕೆಲಸದವಳು ನೀರು ತೋಡಿ ಅಮ್ಮನಿಗೆ ಕೊಡುವುದು, ಅಮ್ಮ ಅದನ್ನು ಬಚ್ಚಲಿಗೆ, ಪಾಯಿಖಾನೆಗೆ ಹಾಗೂ ಅಡುಗೆ ಮನೆಗೆ ಹೋಗಿ ಹಾಕುವುದು ಸುಮಾರು ಸಮಯ ನಡೆಯಿತು. ನಮ್ಮ ಅಮ್ಮ ಬೇಗ ಬೇಗ ಮನೆಕೆಲಸ ಮಾಡಿ ಮುಗಿಸುವುದರಲ್ಲಿ ಎತ್ತಿದ ಕೈ.

ಪ್ರತೀ ದಿನ ಅಡುಗೆ/ಮನೆ ಕೆಲಸ ಮುಗಿಸಿ ಆದ ಮೇಲೆ ನಮ್ಮನ್ನೂ ಕರೆದುಕೊಂಡು ಬಂಗಾಲಿ ಆಂಟಿ (ಮುಖರ್ಜಿ ಆಂಟಿ) ಮನೆಗೆ ಹೋಗುತ್ತಿದ್ದೆವು. ನಾವು ಅವರ ಮಕ್ಕಳಾದ ಮಂಪಿ, ಪಂಪಿ ಹಾಗೂ ಚಕ್ರಂ ಜತೆಗೆ ಆಟ ಆಡ್ತಿರಬೇಕಾದ್ರೆ, ಅಮ್ಮ ಮತ್ತು ಆಂಟಿ ಹರಟೆ ಹೊಡೆಯುತ್ತಿದ್ದರು. ಪಂಪಿ(ನಿಜ ಹೆಸರು ಒಪರ್ನಾ- aparna) ನನಗೆ ಒಂದು ಬಂಗಾಲಿ ಪದ್ಯ ಹೇಳಿ ಕೊಟ್ಟಿದ್ದಳು

ಬಪ್ಪು ರಾಮು ಶಾಪ್ಪು ರೆ
ಕೊಥೋ ಜಾಶೆ ಬಪ್ಪುರೆ
ಆಯ್ ಬಾಬಾ ದೆತೆ ಜಾ
ದೊಟ್ಟೊ ಶಾಪ್ಪೊ ದೆತೆ ಜಾ

ಯಾವುದೋ ಹಾವಿನ ಹಾಡು ಇರಬೇಕು..ಪದ್ಯದ meaning ಗೊತ್ತಿಲ್ಲ :-)

ಆಮೇಲೆ ನಾವು ಟೆರೆಸ್ ಮೇಲೆ ಹೋಗಿ ಅಡಿಗೆ ಆಟ ಆಡ್ತಿದ್ದ್ವಿ. ಒಂದು ಆಲು ಗಡ್ಡೆ, ಒಂದು ಈರುಳ್ಳಿ ಇಂದ ಪಲ್ಯ ತಯಾರಿಸಿ, ಒಂದು ಸ್ವಲ್ಪವೇ ಚಪಾತಿ ಹಿಟ್ಟಿನಿಂದ (ಆ ಹಿಟ್ಟನ್ನು ಪಂಪಿ ಮನೆಯ ಅಡಿಗೆಯವಳಿಂದ ಗೋಗರೆದು ಅವಳು ತರುತ್ತಿದ್ದಳು.) ಎರಡು ಕಲ್ಲುಗಳ ಮಧ್ಯ ಬೆಂಕಿ ಹಾಕಿ ನಮ್ಮ ಅಡುಗೆ. ನಮ್ಮ ಅಮ್ಮನಿಗೆ ನಾವು ಬೆಂಕಿಯೊಂದಿಗೆ ಆಡುತ್ತಿದ್ದುದು ಗೊತ್ತೇ ಆಗಲಿಲ್ಲ. ಆ ಅಡಿಗೆ ಎಷ್ಟು ರುಚಿಯಾಗಿರುತ್ತಿತ್ತು.

ಸಂಜೆ ಮಲಾಯಿವಾಲ ಬರುತ್ತಿದ್ದ. ಒಂದು ಕೋಲಿಗೆ ಎರಡು ಬದಿ ಹದ ಗಾತ್ರದ ಮಣ್ಣಿನ ಮಡಕೆ. ಅದರ ತುಂಬ ಮಲಾಯ್. ಮಲಾಯ್ ಅಂದ್ರೆ ಕೆನೆ ಮತ್ತು ಸಕ್ಕರೆ ಎರಡು ಚೆನ್ನಾಗಿ ಮಿಕ್ಸ್ ಮಾಡಿದ ಒಂದು sweet Dish' 10 ಪೈಸೆಗೆ ಒಂದು ಚಿಕ್ಕ ಮಣ್ಣಿನ ವಾಟಿಯಲ್ಲಿ ಮಲಾಯ್ ಕೊಟ್ಟು ಹೋಗುತ್ತಿದ್ದ.

ಭಾನುವಾರದಂದು ಬಾಯೋಸ್ಕೋಪ್ ವಾಲ ಬರುತ್ತಿದ್ದ.

ಆಗ್ರೆ ಕಾ ತಾಜ್ ಮಹಲ್ ತು ದೇಖ್ ಬಬುವಾ
ಡಿಲ್ಲಿ ಕಾ ಕುತುಬ್ ಮೀನಾರ ದೇಖೋ..

ನಾವು ಕಿಂಡಿಯಲ್ಲಿ ತಲೆ ತೂರಿಸಿದಾಗ ಈ ಮೇಲಿನ ಹಾಡು ಅವನು ಹೇಳುತ್ತಿದ್ದ. ಅವನ ಬಾಯೋಸ್ಕೋಪ್ ನಲ್ಲಿ ನಾವು ನಾಲ್ಕೂ ಜನ ಒಟ್ಟಿಗೆ ನೋಡಬಹುದಿತ್ತು.

ನಮ್ಮ ಆಫಿಸ್ ಪೀಯನ್ (peon) ಭಾನುವಾರದಂದು ಸೈಕಲ್ ರಿಕ್ಷಾ ಓಡಿಸುತ್ತಿದ್ದ. ಸಂಜೆ ಅವನ ಜತೆ ಒಂದು ರೌಂಡ್ ನಾವು ಹೋಗಿ ಬರುತ್ತಿದ್ದೆವು. ಅವನ ಹೆಸರು ಮುನಿಲಾಲ್. ಅವನಿಗೆ ಖೈನಿ ಹಾಕುವ ಚಟ.
ಖೈನಿ ಅಂದರೆ -
ತಂಬಾಕಿನ ಚೂರುಗಳು. ಅದರ ಮೇಲೆ ಸ್ವಲ್ಪ ಸುಣ್ಣ . ಇವೆರಡನ್ನು ಅವನು ಎಡ ಹಸ್ತದ ಮೇಲೆ ಹಾಕಿ ಬಲ ಹೆಬ್ಬೆರಳಿನಿಂದ ಘಸ ಘಸ ತಿಕ್ಕುತ್ತಿದ್ದ. ಅದರ ಜತೆ ಅವನ ಮಾತೂ ನಡಿತಿತ್ತು. ಊರ ಪಂಚಾಯ್ತಿಕೆ, ಅವನ ಜೋರೂ (ಹೆಂಡತಿ) ಅವಳ ಪರಿವಾರದ ಬಗ್ಗೆ ವಟ ವಟ ಅನ್ನುತ್ತಿದ್ದ. 10 ನಿಮಿಷ ತಿಕ್ಕಿಯಾದ ಮೇಲೆ ಇಡಿ ಮಿಕ್ಸ್ ಚರ್ ಬಲ ಹೆಬ್ಬೆರಳು ಹಾಗೂ ತೋರುಬೆರಳ ನಡುವೆ ಹಿಡಿದು, ಎಡಗೈನಿಂದ ಕೆಳಗಿನ ತುಟಿಯನ್ನು ಹೊರಕ್ಕೆ ಎಳೆದು, ಅಲ್ಲಿ ತೂರಿಸುತ್ತಿದ್ದ. ಸ್ವಲ್ಪ ಹೊತ್ತು ಹನುಮನನ್ನು ಹೋಲುತ್ತಿತ್ತು ಅವನ ಮುಖ. ಆಗಲೂ ಅವನ ಮಾತಿನ ವರಾತ ನಡೆಯುತ್ತಲೆ ಇರುತ್ತಿತ್ತು. ಮಧ್ಯ ಮಧ್ಯ ಉಗುಳನ್ನು ಪಿಚಕಾರಿಯಾಗಿ (ತೋರು ಬೆರಳು ಹಾಗೂ ಮಧ್ಯದ ಬೆರಳನ್ನು ತುಟಿಯ ಮೆಲೆ cigarette ಸೇದುವ style ನಲ್ಲಿ ಹಿಡಿದುಕೊಂಡು ಅದರ ಮಧ್ಯದಿಂದ ಉಗುಳುವುದು) try ಮಾಡಿ. ಗಮ್ಮತ್ತಾಗಿರುತ್ತದೆ. ಹೆ ಹೆ...

ಅವನು ಮಾತಾಡ್ತಿರಬೇಕಾದ್ರೆ ತಮ್ಮಂದಿರಿಬ್ಬರೂ ಅವನ ಸೈಕಲ್ ಮೇಲೆ ಸವಾರಿ practice ಮಾಡ್ತಿದ್ದರು. ಬಿದ್ದು ಮಂಡಿ ತರಚಿಕೊಂಡಿದ್ದು ಎಷ್ಟೋ.

ಕೆಲವೊಮ್ಮೆ ಮುನಿಲಾಲ್ ನಮ್ಮನ್ನು ಭೋಜಪೂರಿ ಫಿಲ್ಮ್ ಗೆ ಕರೆದುಕೊಂಡು ಹೋಗುತ್ತಿದ್ದ. ಮನೆಗೆ ಬಂದ ಮೇಲೆ ನಾವು ಭೋಜ್ ಪುರಿ ಮಾತಾಡ್ತಿದ್ವಿ. ರೋಟಿ ಖಾಯ್ಬ್? ಸ್ಕೂಲ್ ಜಾಯ್ಬ್ ಮುಂತಾದುವೆಲ್ಲ.ಸೈಕಲ್ ವಾ ಪರ್ ಜಹಿಹೋ?, ಉಮೇಶ ಭೋಜಪುರಿಯಲ್ಲಿ ಉಮೇಶವಾ ಆಗುತ್ತಾನೆ. ಕೈಸೆ ಹೋ -ಕೈಸನ್ ಬಾ ಆಗುತ್ತದೆ.

ನಮ್ಮ ಮನೆಯ ಮುಂದೆ ಒಂದು ಕೂಡು ಕುಟುಂಬದವರ ಮನೆ ಇತ್ತು. ಆ ಮನೆಯ ಒಬ್ಬ ಚಿಕ್ಕ ಪ್ರಾಯದ ಮಹಿಳೆಗೆ ಹೆರಿಗೆಯ ದಿನ ಹತ್ತಿರ ಬಂದಿತ್ತು. ಕಾಂಪೌಂಡ್ ಬಳಿ ನಿಂತು ಕೆಲವೊಮ್ಮೆ ಅಮ್ಮನ ಜತೆ ಮಾತಾಡುತಿದ್ದರು.ತಲೆಯ ಮೇಲೆ ಇಷ್ಟು ದೊಡ್ಡ ಘೂಂಘ್ಹಟ್.ಮುಖ ತುಂಬ ಚಂದ ಇತ್ತು ಅವರದ್ದು. ಒಂದು ಬೆಳಿಗ್ಗೆ ಅಲ್ಲಿಂದ ಬಾಯಿ ಬಾಯಿ ಬಡಿದುಕೊಂಡು ಅಳು ಅಂದರೆ ಅಳು. ಅಮ್ಮ ನಮಗೆಲ್ಲ ಹೊರಗೆ ಬರಬೇಡಿ. ಆ ಮನೆಯಲ್ಲಿ ಏನೋ ಆಗಿರಬೇಕು ಅಂದರು. ಕೆಲಸದವಳು ಮನೆಗೆ ಬಂದ ಮೇಲೆ ಅವಳ ಬಳಿ ವಿಚಾರಿಸಿದ್ರೆ...ಆ ಮಹಿಳೆಗೆ ಗಂಡು ಮಗು ಹುಟ್ಟಿದ ವಿಚಾರ ತಿಳಿಯಿತು. ಬಾಣಂತಿಗೆ ಏನಾದ್ರು ಆಯ್ತಾ ಅಂತ ಕೇಳಿದ್ರೆ ಇಲ್ಲ ಅಂದ್ಲು ಅವಳು. ಆ ಮೇಲೆ ಗೊತ್ತಾಗಿದ್ದು ಸಂತೋಷ ಅಥವಾ ದುಃಖ ಆದಾಗ ಅವರು ಬಾಯಿ ಬಡಿದುಕೊಂಡು ಅಳುವುದಂತೆ :-)

ಇನ್ನು ನಾನು ತಮ್ಮಂದಿರು ಸೇರಿ ರಾತ್ರಿ ಹೊತ್ತು, ಅಪ್ಪ ಅಮ್ಮ ಮಲಗಿದ ಮೇಲೆ ಪತಂಗ್- ಗಾಳಿಪಟ ಮಾಡಿತ್ತಿದ್ದುದ್ದು. ನನ್ನ ತಮ್ಮ ಅವನ ಕೈಬೆರಳಿನಿಂದ precise ಮೆಶರ್ ಮೆಂಟ್ ತೆಗೆದುಕೊಂಡು , ಕಡ್ಡಿಯನ್ನು ಸರಿಯಾಗಿ ತುಂಡು ಮಾಡಿ, ಹಚ್ಚಿ ಚಂದದ ಗಾಳಿಪಟ ಮಾಡುತ್ತಿದ್ದ. ನಾನು ಅಡಿಗೆಮನೆಯಿಂದ ಅನ್ನವನ್ನು ಮೊದಲೇ, ಅಮ್ಮನ ಕಣ್ಣು ತಪ್ಪಿಸಿ ಇಟ್ಟುಕೊಂಡಿರುತ್ತಿದ್ದೆ. ಅನ್ನ ಮತ್ತು ಗಾಜಿನ ಚೂರುಗಳನ್ನು ಚಿಕ್ಕ ರುಬ್ಬುವ ಕಲ್ಲಿನಲ್ಲಿ(pestle and mortar), ಸ್ಪೂನ್ ಯೂಸ್ ಮಾಡಿ ನುಣ್ಣಗೆ ರುಬ್ಬಿ ತಮ್ಮಂದಿರಿಗೆ ಕೊಡುತ್ತಿದ್ದೆ. ಅದನ್ನು ಅವರು ಟ್ವೈನ್ ದಾರಕ್ಕೆ (ಡೋರಿ)ಅಂಟಿಸುತ್ತಿದ್ದರು. ಏನೊ ಮಾಂಝಾ (giving thecutting edge to the thread)ಮಾಡುವುದಂತೆ. ಈ ತರಹದ ದಾರದಿಂದ ಬೇರೆಯವರ ಗಾಳಿಪಟವನ್ನು ಕಟ್ ಮಾಡಬಹುದು.ದಾರವನ್ನು ಗಾಳಿಪಟಕ್ಕೆ ಸಿಕ್ಕಿಸುವುದು ಒಂದು ಕಲೆ. ಟ್ವೈನ್ ಉಂಡೆಯನ್ನು ಚರ್ಖಿ ಗೆ ಸುತ್ತಿಸಿಕೊಂಡಿರುತ್ತಿದ್ದೆವು. ಆ ದಾರ ಕೈಗೇನಾದರೂ ತಾಗಿದರೆ ಕೈ ಬೆರಳಿಗೆ ಗಾಯವಾಗುತ್ತಿತ್ತು. ಆಮೇಲೆ ಮಧ್ಯಾನ್ಹ ಟೆರೆಸ್ ಗೆ ಹೋಗಿ ಗಾಳಿಪಟ ಹಾರಿಸುತ್ತಿದ್ದೆವು. ನಾನೂ ಗಾಳಿಪಟ ಹಾರಿಸುವುದರಲ್ಲಿ ಎಕ್ಸ್ ಪರ್ಟ್ ಆಗಿದ್ದೆ. :-)
 
ಆರಾ ದಿಂದ ನಾವು ಬೋಧಗಯಾ, ಸಾರನಾಥ್, ನಾಳಂದಾ ಹಾಗೂ ದೂರದ ನೇಪಾಲ್ ಗೆಲ್ಲ ಹೋಗಿ ಬಂದ್ದಿದ್ದೆವು.ಆ ಎರಡು ತಿಂಗಳು ಹೇಗೆ ಕಳೆದವು ಅಂತ ಗೊತ್ತಾಗಲೇ ಇಲ್ಲ. ಅಲ್ಲಿ ಎರಡು ವರ್ಷ ಕಳೆದ ಮೇಲೆ  ತಂದೆಗೆ ಮುಂಬೈಗೇ ವರ್ಗವಾಯಿತು
:-)

February 4, 2010

ಸಂಚಿಯಿಂದ ತೆಗೆದ ಇನ್ನೊಂದು ನೆನಪು

ನಾನಿ (ಅಜ್ಜಿ = ತಾಯಿಯ ತಾಯಿ) ಸ್ನಾನ ಮುಗಿಸಿದ ಕುರುಹಾಗಿ, ಬಾತರೂಮಿನ ಚಿಲಕದ ಸದ್ದು ಆದ ಕೂಡಲೇ ನಾನು ಓಡುತ್ತ ಬಂದು, ಸೋಫಾದ ಮೇಲೆ ಹೊಟ್ಟೆ ಮೇಲೆ ಮಲಗಿ, ಎರಡೂ ಕಾಲನ್ನು ಗಾಳಿಗೆ ಅಲ್ಲಾಡಿಸುತ್ತಾ, ಮೊಣಕೈಯನ್ನು ಸೋಫಾಗೆ ತಾಗಿಸಿ, ಕೈಗಳಲ್ಲಿ ಗದ್ದವನ್ನಿಟ್ಟು ನಾನಿಯ ಕಡೆಗೆ ಗಮನ ಇಟ್ಟಿರುತ್ತಿದ್ದೆ. ಕಿಟಕಿ ಹತ್ತಿರ ಎರಡು ಬೆಂಚನ್ನು ಒಟ್ಟಾಗಿ ಬದಿ ಬದಿಗೆ ಇಟ್ಟು ಅದರ ಮೇಲೆ ಜಮಖಾನೆ ಹಾಸಿರುತ್ತಿತ್ತು. ಬೆಂಚಿನ ಒಂದು ಪಕ್ಕದಲ್ಲಿ , ಗೋಡೆಗೆ ತಾಗಿದಂತೆ ಪೇರಿಸಿಟ್ಟ ನಮ್ಮಲ್ಲೆರ ದಿಂಬು ಇಟ್ಟಿರುತ್ತಿತ್ತು. ನಾನಿ ಅದಕ್ಕೆ ಒರಗಿ ಕೂತು, ಒದ್ದೆ ಟವಲ್ ನಿಂದ ಕತ್ತು ಮುಖವನ್ನು ತಿಕ್ಕಿ ತಿಕ್ಕಿ ಒರೆಸಿಕೊಳ್ಳುತ್ತಿದ್ದರು. ಆಮೇಲೆ ಬೆಂಚಿನ ಬುಡದಿಂದ ಅವರ ಪುಟ್ಟ ತಗಡಿನ ಟ್ರಂಕ್ ಮೇಲೆಳೆದು,ತಮ್ಮ ಪಕ್ಕದಲ್ಲಿಟ್ಟುಕೊಳ್ಳುತ್ತಿದ್ದರು. ಅದರಿಂದ ಒಂದೊಂದಾಗಿ- ಬಾಚಣಿಕೆ, ಒಂದು ಚಿಕ್ಕ, ಒಂದು ದೊಡ್ಡ ಕನ್ನಡಿ, ಮೂರು ಒಂದೇ ಗಾತ್ರದ ಪುಟ್ಟ ಪುಟ್ಟ ಸ್ಟೀಲ್ ಡಬ್ಬಿ ಹೊರಗಿಟ್ಟು ಟ್ರಂಕನ್ನು ಪುನಃ ಬೆಂಚಿನಡಿಗೆ ಇಡುತ್ತಿದ್ದರು

ಹಿಂದಿನ ದಿನದ ತುರುಬನ್ನು ಅದರ ಯು-ಪಿನ್ ಗಳಿಂದ ಬಿಡಿಸಿ, ಬಿಚ್ಚಿ, ಬಾಚಣಿಕೆಯನ್ನು ಹತ್ತು ನಿಮಿಷ ಕೂದಲ ಮೇಲೆ ಓಡಾಡಿಸಿ, ಹೆರಳು ಹಾಕಲಿಕ್ಕೆ ಶುರು ಮಾಡಿ, ಕೂದಲಿನ ತುದಿಯವರೆಗೆ ಜಡೆ ಹೆಣೆದುಕೊಳ್ಳುತ್ತಿದ್ದರು. ಆಮೇಲೆ ಜಡೆಯನ್ನು ಮೇಲೆತ್ತಿ, ತಲೆಯ ಹಿಂಬದಿ ಒಂದೊಂದೆ ಸುರುಳಿ ಸುತ್ತಿ, ಪ್ರತೀ ಸುರುಳಿಗೆ ಪಿನ್ ಸಿಕ್ಕಿಸುತ್ತಿದ್ದರು. ತುರುಬು ಪೂರ್ತಿಯಾದ ಮೇಲೆ ಚಿಕ್ಕ ಕನ್ನಡಿಯನ್ನು ತುರುಬಿನ ಹಿಂಬದಿಗೆ ಹಿಡಿದುಕೊಂಡು, ಎದುರಿಗೆ, ಇನ್ನೊಂದು ಕೈಯಲ್ಲಿ ಹಿಡಿದುಕೊಂಡ ದೊಡ್ಡ ಕನ್ನಡಿಯಲ್ಲಿ , ಚಿಕ್ಕ ಕನ್ನಡಿಯಿಂದ, ದೊಡ್ಡ ಕನ್ನಡಿಗೆ ಪ್ರತಿಬಿಂಬಿಸುವ ತುರುಬಿನ ಆಕಾರ ಸರಿಯಾಗಿದೆಯಾ ಇಲ್ಲವ ಅಂತ ನೋಡಿ ಕೊಳ್ಳುತ್ತಿದ್ದರು.

ಸರಿಯಾಗಿದೆ ಎಂದು ಖಾತ್ರಿಯಾದ ಮೇಲೆ. ಮುಖವನ್ನು ಪುನ: ಒರೆಸಿಕೊಳ್ಳುತ್ತಿದ್ದರು. ಪುಟ್ಟ ಡಬ್ಬಿಗಳ ಮುಚ್ಚಳ ತೆಗೆದು ಇಡುತ್ತಿದ್ದರು. ದೊಡ್ಡ ಕನ್ನಡಿಯನ್ನು ಕಾಲಿಗೆ ಸಿಗಿಸಿ, ಮುಖ ಕಾಣುವಂತೆ ಸರಿಯಾಗಿ ಎಡ್ಜಸ್ಟ್ ಮಾಡ್ಕೊತ್ತಿದ್ದರು. ಚಿಕ್ಕ ಡಬ್ಬಿಗಳಲ್ಲಿ- ಒಂದರಲ್ಲಿ ಮಯಣ (bees wax), ಇನ್ನೊಂದರಲ್ಲಿ ಪುಡಿಕುಂಕುಮ ಹಾಗೂ ಕೊನೆಯ ಡಬ್ಬಿಯಲ್ಲಿ ತೂತಿನ ಕಾಸು (ಒಟ್ಟೆ ಮುಕ್ಕಾಲು ಅಂತಿದ್ವಿ ಕೊಂಕಣಿಯಲ್ಲಿ) ಇರುತ್ತಿತ್ತು. ನಾನಿ, ಈಗ ತೂತಿನ ಕಾಸನ್ನು, ಹಣೆಯ ಮೇಲೆ, ಹುಬ್ಬಿನ ಮಧ್ಯದಲ್ಲಿಟ್ಟು, ಅದರೊಳಗೆ ಮಯಣ ಹಚ್ಚುತ್ತಿದ್ದರು. ಮಯಣ ಹಚ್ಚಿಯಾದ ಮೇಲೆ, ನಿಧಾನವಾಗಿ, ಕಾಸಿನ ಮಧ್ಯದಲ್ಲಿ ಕುಂಕುಮ ತುಂಬಿ, ನಿಧಾನವಾಗಿ ಕಾಸನ್ನು ಹಣೆಯ ಮೇಲಿನಿಂದ ಅತೀ ನಾಜೂಕಾಗಿ ಸರಿಸುತ್ತಿದ್ದರು. ಅಮೇಲೆ ಕಾಲಿನ ಬೆರಳಲ್ಲಿ ಸಿಕ್ಕಿಸಿದ ಕನ್ನಡಿ ಯನ್ನು ಎಡಕೈಯಲ್ಲಿ ಹಿಡಿದು, ಒದ್ದೆ ಟವಲ್ ನಿಂದ circle ನಿಂದ ಹೊರಬಂದ ಕುಂಕುಮವನ್ನು ಒರೆಸಿಕೊಂಡು ಒಪ್ಪಮಾಡಿಕೊಳ್ಳುತ್ತಿದ್ದರು.

ನಾನು ಶಾಲೆ ಹೋಗಲು ತುಂಬಾ ಸಮಯವಿರುತ್ತಿದ್ದುದರಿಂದ, ಸುಮಾರು ದೊಡ್ಡವಳಾಗುವ ತನಕ ನನಗೆ ನಾನಿ ಕುಂಕುಮ ಇಡುವುದನ್ನು ನೋಡುವುದು ತುಂಬಾ ಮೋಜಿನ ವಿಷಯವಾಗಿತ್ತು. it was therapeutic
:-)