March 27, 2015

ಬಾಳೆ ಹಣ್ಣಿನ ಚಪಾತಿ

ನನ್ನ ನಿಂಪಿ ಆಫಿಸ್ ನಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಬ್ಯಾಚಲರ್ಸ್ ಗಳು. ನಾನು ಅವಳಿಗೆ ಲಂಚ್ ಬಾಕ್ಸ್ ನಲ್ಲಿ ಕಳಿಸುವ ತಿಂಡಿಗಳ ಬಗ್ಗೆ ಕೌತುಕ. ನಿಮ್ಮ ಅಮ್ಮ ಮಾಡುವ ಚಪಾತಿ ಹೇಗೆ ಸಾಫ್ಟ್ ಆಗಿರುತ್ತೆ? ಎಲ್ಲಿಂದ ಹಿಟ್ಟು ತರಿಸ್ತಿರಿ, ಯಾವ ಹಿಟ್ಟು ತರಿಸ್ತೀರಿ? packed ಆ loose ಆ ವಗೈರೆ. ಈ ಹುಡುಗರು ಒಂದು ರೂಮ್ ಮಾಡಿಕೊಂಡು ಇರೋದಂತೆ. ಊರಿನಿಂದ ಒಬ್ಬ ಅಡಿಗೆಯವನನ್ನು ಇಟ್ಟುಕೊಂಡಿದ್ದಾರೆ. 10 -15 ಜನರಿಗೆ ಅವನು ಅಡಿಗೆ ಮಾಡಿ ಹಾಕುತ್ತಾನಾದ್ದರಿಂದ, ಹಲವಾರು ಜನರ ಬಾಕ್ಸ್ ನಲ್ಲಿ ಒಂದೇ ತಿಂಡಿ. ಅದೇನು ಶೇರ್ ಮಾಡಕ್ಕೆ ಆಗಲ್ಲ. ಈಗ ನಿಹಾ ಅವರ ಜತೆ ಕೆಲಸಕ್ಕೆ ಸೇರಿದ ಮೇಲೆ, ಕೆಲವೊಮ್ಮೆ ಅವಳ ಲಂಚ್ ಬಾಕ್ಸ್ ಅವರೇ ಖಾಲಿ ಮಾಡಿ, ಬಾಕ್ಸ್ ತೊಳೆದಿಟ್ಟು, ಅವಳಿಗೋಸ್ಕರ ಹೋಟಲ್ ನಿಂದ ಫ್ರೈಡ್ ರೈಸ್ ಮುಂತಾದ್ದು ತಂದು ಕೊಡುತ್ತಾರಂತೆ. ನಾನು ಅವಳಿಗೆ ಎರಡು ಬಾಕ್ಸ್ ತೆಗೊಂಡು ಹೋಗೆ ಅನ್ನುತ್ತಿರುತ್ತೇನೆ. ಒಂದು ನಿನಗೆ ಒಂದು ಅವರಿಗೆ ಅಂತ. ಅಯ್ಯೋ ಯಾರಮ್ಮ ಹೊತ್ತು ಕೊಂಡು ಹೋಗ್ತಾರೆ? ನಾನಂತು ಉಪವಾಸ ಇರಲ್ಲ. ಏನಿಲ್ಲದ್ದಿದ್ದರೆ ಅವರ ಆಫಿಸ್ ನಲ್ಲಿ ಮ್ಯಾಗಿ ಪ್ಯಾಕೆಟ್, ಬಿಸ್ಕಟ್ ವಗೈರೆ ಇರುತ್ತದಂತೆ. ಅದರ ಬಳಿ ಒಂದು ಡಬ್ಬಿ ಇರುತ್ತದಂತೆ.ಏನಾದರೂ ಉಪಯೋಗಿಸುವುದಿದ್ದರೆ  ಆ ಡಬ್ಬಿಯಲ್ಲಿ ಆ ಪ್ಯಾಕೆಟ್ ನಲ್ಲಿ ನಮೂದಿಸಿರುವ ಬೆಲೆಯ ಹಣವನ್ನು ಡಬ್ಬಿಗೆ ಹಾಕಿ ಬಿಡುವುದಂತೆ. ಪಿಯೋನ್ ಖಾಲಿಯಾದಂತೆ ಅಡಿಗೆ ಸಾಮಾಗ್ರಿ ಅಲ್ಲಿ ತುಂಬಿಡುತ್ತಾಳಂತೆ. ದಿನದಲ್ಲಿ ಮೂರು ನಾಲ್ಕು ಬಾರಿ ಟೀ ಮತ್ತು ಬಿಸ್ಕಟ್ ಇವರು ಕೂತ ಕಡೆ ಸರಬರಾಜಾಗುತ್ತಂತೆ. ಅದಕ್ಕೆ ಅವಳು ಆಫಿಸ್ ನಿಂದ ಮನೆಗೆ ಎರಡು ಕಿ ಮಿ ನಡೆದುಕೊಂಡು ಬರುತ್ತಾಳೆ. ಮತ್ತೆ ಎರಡೆರಡು ಡಬ್ಬಿ ಎತ್ತಿಕೊಂಡು ಹೋಗು ಅಂತ ಹೇಗೆ ಹೇಳಲಿ?? :-) ಇರೋ ಒಂದು ಬಾಕ್ಸ್ ನಲ್ಲೇ ಆದಷ್ಟು ತಿಂಡಿ ತುರುಕಿಸಿ ಕಳಿಸ್ತೀನಿ. ನಿನ್ನೆ ಡಬ್ಬಿಯಲ್ಲಿ ಹಾಕಿಕೊಟ್ಟ ಬಾಲೆಹಣ್ಣಿನ ಚಪಾತಿ great hit ಅಂತೆ. ಅದಕ್ಕೆ ನಿಮ್ಮ ಜತೆ ಶೇರ್ ಮಾಡುವಾ ಅಂತ.....
ಅಕ್ಕನ ಬಿಸ್ಕೂಟ್ ಫ್ಯಾಕ್ಟರಿಗೆ ನಿಹಾಳ ಆಫಿಸ್ ನಿಂದ ಹಲವಾರು ಆರ್ಡರ್ಸ್ ಬರುತ್ತೆ. ಅಕ್ಕನ ಕಪ್ ಕೇಕ್ ನ ಫ್ಯಾನ್ ಗಳಾಗಿಬಿಟ್ಟಿದ್ದಾರೆ. :-)
ಸರಿ ಈಗ ಬಾಳೆ ಹಣ್ಣಿನ ಚಪಾತಿ ಮಾಡುವ ಬಗ್ಗೆ ಕೇಳಿ
4-5 ತುಂಬಾ ಹಣ್ಣಾದ (ಕಳಿತ) ಬಾಳೆಹಣ್ಣು, 10-15 ಕರಿ ಮೆಣಸಿನ ಪುಡಿ,2 ಸ್ಪೂನ್ ಜೀರಿಗೆ, ರುಚಿಗೆ ತಕ್ಕ ಉಪ್ಪು ಉಪ್ಪು...ಇವಿಷ್ಟನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಇದಕ್ಕೆ ನಾಲ್ಕೈದು ಬಟ್ಟಲು ಗೋದಿ ಹಿಟ್ಟು ಬೆರೆಸಿ. ಬೇಕಾದರೆ ನೀರು ಬೆರೆಸಿ ಮೆತ್ತಗಿನ ಹಿಟ್ಟು ತಯಾರಿಸಿ. ಚಪಾತಿ ಲಟ್ಟಿಸಿ. ಬಿಸಿ ಕಾವಲಿ ಮೇಲೆ ಹಾಕಿ ತುಪ್ಪ ಹಚ್ಚಿ ಎರಡೂ ಬದಿ ಕಾಯಿಸಿ. ಅಷ್ಟೆ. ಈ ಐಡಿಯಾ ನನಗೆ ಕೊಟ್ಟಿದ್ದು ಮಾಲವಿಕ.

ಈ ಚಪಾತಿಗೆ ಸೈಡ್ಸ್ ಎಲ್ಲ ಬೇಡ. ಆಫಿಸ್ ಕೆಲ್ಸ ಮಾಡ್ತಾ ಅಥವಾ ನನ್ನ ತರಹ ಯು ಟ್ಯೂಬ್ ನಲ್ಲಿ ಫಿಲ್ಮ್ ನೋಡ್ತಾ ಗುಳುಂ ಮಾಡಬಹುದು.


:-)

March 25, 2015

ಜ್ಯೋತಿ alias ಕೋತಿ ರಾಜ

ಇವತ್ತು ಬೆಳಿಗ್ಗೆ ಹೊರ ಹೋಗ ಬೇಕಾದರೆ ಕಾಟನ್ ಸೀರೆ ಉಡುವ ಮನಸ್ಸಾಯ್ತು. ಶ್ರೀಕಾಂತ ರ ಪ್ಯಾಂಟ್ ಶರ್ಟ್, ನನ್ನ ಸ್ಟಾರ್ಚ್ ಹಾಕಿರುವ ಸೀರೆಯ ಮಡಿಕೆಯಲ್ಲಿ ಯಾವತ್ತೂ ಒಂದು ನ್ಯೂಸ್ ಪೇಪರ್ ನ ತುಂಡು ಇಡುತ್ತಾನೆ ನಮ್ಮ ಬಿಲ್ಡಿಂಗ್ ನಲ್ಲೆ ಇಸ್ತ್ರಿ ಹಾಕಿ ಕೊಡುವ ಗಂಗಾಧರ್ (ನಮ್ಮ ಗಂಗಾಧರ್ ಅನ್ನುವ ಪೋಸ್ಟ್ ಅನ್ನು ಶೀಘ್ರದಲ್ಲೇ ನಿರೀಕ್ಷಿಸಿ.) ಆ ಪೇಪರ್ ತುಂಡನ್ನು ಓದಿ ನಾನು ಕಸದ ಬುಟ್ಟಿಗೆ ಹಾಕುವ ರಿವಾಜು. ಇವತ್ತು ಅದರಲ್ಲಿ ಹರಿ ಕನ್ನಡ ಪ್ರಭ ಇವರ ಜ್ಯೋತಿ ರಾಜ್ ಜತೆ mock interview ಓದಲು ಸಿಕ್ಕಿತು. ಓದಿ ನಗು ಬಂತು. 
ನಾವು ಚಿತ್ರದುರ್ಗದ ಕೋಟೆಗೆ ಹೋದಾಗ ಅವರ ಕಸರತ್ತು ನೋಡಿದ್ದು, ಮಾತಾಡಿಸಿದ್ದು ನೆನಪಾಗಿ, ಅರೇ ನಮ್ಮ ಹಂಪಿ ಟ್ರಿಪ್ ಬರಹ ಹಾಗೇ ಉಳಿದು ಕೊಂಡು ಬಿಟ್ಟಿತಲ್ಲವಾ ಅಂತಂದುಕೊಂಡೆ. ಆದರೆ ನೋಡುತ್ತೇನೆ ಬಸ್ ಸಿಗ್ನಲ್ ನಲ್ಲಿ ನಿಂತಾಗ ಗೋಡೆಗೆ ಜ್ಯೋತಿ ಅಲಿಯಾಸ್ ಕೋತಿ ರಾಜ್ ನ ಫಿಲ್ಮ್ ನ ಪೋಸ್ಟರ್ ಗಳು.ಇನ್ನು procrastinate ಮಾಡಬಾರದೆನಿಸಿ ಈ ಪೋಸ್ಟ್.
ಬೆಂಗಳೂರಿಗೆ ಬಂದು ಈ ಹನ್ನೆರಡು ವರ್ಷದಲ್ಲಿ ನನಗೆ ಹಂಪಿ ಗೆ ಹೋಗಬೇಕೆಂಬ ಆಸೆ ಇತ್ತು.ನಾನು ಮುಂಬೈಗೆ ಹೋಗುವಾಗ ಲೆಲ್ಲ ರೈಲು ನಿಲ್ದಾಣದಲ್ಲಿ ಹಂಪಿ ಎಕ್ಸ್ ಪ್ರೆಸ್ ರೈಲು  ಇನ್ನೊಂದು ಬದಿಯ ಪ್ಲಾಟ್ ಫಾರ್ಮ್ ನಲ್ಲಿ ನಿಂತಿರುವುದನ್ನು ಹಲವಾರು ಬಾರಿ ಕಂಡಿದ್ದೇನೆ. ಹಾಗೆ ಕೆಲವು ವರ್ಷದ ನಂತರ ವಸುಧೇಂದ್ರರ ಹಂಪಿ ಎಕ್ಸ್ಪ್ರೆಸ್ ಪುಸ್ತಕ ಹೊರ ಬಂದಮೇಲಂತೂ ಯಾವಾಗ ಹಂಪಿಗೆ ಹೋಗುತ್ತೇನೋ ಅನ್ನಿಸಿಬಿಟ್ಟಿತು. ನಮಗೆ ಹೋಗಲು ಹಲವು ಅವಕಾಶಗಳಿದ್ದರೂ ನನಗೆ  ತಂಗಿ ಮತ್ತು ಅವಳ ಮಕ್ಕಳು ಯು ಎಸ್ ನಿಂದ ಬಂದಾಗಲೇ ಹೋಗಬೇಕಿತ್ತು. ಇದಕ್ಕೆ ಹಲವಾರು ಕಾರಣಗಳು. ಒಂದು  ಅವಳ ಮಕ್ಕಳ ಸಮ್ಮರ್ ಪ್ರೋಜೆಕ್ಟ್ ಬರೆಯಲನೂಕೂಲ ವಾಗಿರುವ ಬೆಂಗಳೂರಿಗೆ ಹತ್ತಿರದ ತಾಣ ಮತ್ತು ಚಿಕ್ಕವಳು, ಹತ್ತು ವರ್ಷದ ಶ್ರೇಯಾ ನಮ್ಮ ಟ್ರಿಪ್  ಉಪಯೋಗಿಸಿ ಪತ್ತೆದಾರಿ ಕತೆ ಬರೆಯುವುದಲ್ಲದೇ ನನಗೆ ಅದರಲ್ಲಿ ಒಂದು ಪಾತ್ರ ಕೂಡ ಕೊಡುತ್ತಾಳೆ (ಯಾರಿಗುಂಟಪ್ಪ ಈ ಭಾಗ್ಯ??:-)). (ಯು ಎಸ್ ನ ಅವಳ ಶಾಲೆಯಲ್ಲಿ ಅವಳು ಎರಡು ಪುಸ್ತಕ ಪಬ್ಲಿಶ್ ಮಾಡಿದಾಳೆ. ಹಿಂದಿನ ತಿಂಗಳು ಅವಳ ಕವನ District ಲೆವೆಲ್ ನಲ್ಲಿ ಪ್ರೈಜ್ ಗಿಟ್ಟಿಸಿದೆ..)
ಕೊನೆಗೂ ಈ ವರ್ಷ ಅವರು ಬಂದಾಗ ಹಂಪಿಗೆ ಹೋಗೋದೇ ಅಂತ ತೀರ್ಮಾನಿಸಿ ಟ್ರೈನ್ ಟಿಕಟ್ ಬುಕ್ ಮಾಡಿದೆ. ಶ್ರೀಕಾಂತ ಆಫಿಸ್ ಕೆಲಸದ ಒತ್ತಡದಿಂದ ಬರಲ್ಲ ಅಂದ್ರು. ಸರಿ ಈ ಸಲ ಕೂಡ ಲೇಡೀಸ್ ಓನ್ಲಿ ಟ್ರಿಪ್ ಅಂದು ಕೊಂಡ್ವಿ. ನಾವು ಹೊರಡುವ ಮೂರು ದಿನ ಮುಂಚೆ ನಮ್ಮ ಟ್ರವೆಲ್ ಪ್ಲ್ಯಾನ್ಸ್ ಕೇಳಿಕೊಂಡ್ರು.ಮತ್ತು ಛೆ ಟ್ರೈನ್ ನಲ್ಲಿ ಯಾಕೆ ಟೈಮ್ ವೇಸ್ಟ್ ಮಾಡ್ತೀರಾ (ತಂಗಿ ಮಕ್ಕಳನ್ನು ನಮ್ಮ ಭಾರತೀಯ ಟ್ರೈನ್ ನ ಅನ್ಹುಭವ ಪಡಿಸಬೇಕೆಂದಿತ್ತು ನನಗೆ,,) ದೊಡ್ಡ ಗಾಡಿ ಬುಕ್ ಮಾಡಿ. ನಾನೂ ಬರುತ್ತೇನೆ. ದಾರಿಯಲ್ಲಿ ನಮ್ಮ ಲಕ್ಕವನಹಳ್ಳಿಯ ಬಾಳೆ ನಾರಿನಿಂದ ತಯಾರಿಸುವ ಉತ್ಪನ್ನಗಳ ಘಟಕಕ್ಕೆ ಭೇಟಿ ನೀಡುವಾ, ಅಲ್ಲಿಂದ ಚಿತ್ರದುರ್ಗ ಆಮೇಲೆ ಹಂಪಿ ಅಂತ ಪ್ಲ್ಯಾನ್ ಫಿಕ್ಸ್ ಆಯ್ತು. ಶ್ರೀಕಾಂತ ಅವರ contact ಉಪಯೋಗಿಸಿ ನಮಗೆ ಪುರುಷೋತ್ತಮ ಗಡಿಯಲ್ಲಿರುವ ರೆಸಾರ್ಟ್ ಒಂದರಲ್ಲಿ ತಂಗಲು ರೂಮ್ ಗಳನ್ನು ಬುಕ್ ಮಾಡಿಸಿಕೊಂಡರು. ಮಕ್ಕಳಿಗೋಸ್ಕರ ಕುರುಕುಲು ತಿಂಡಿಗಳನ್ನು ಮಾಡಿಟ್ಟುಕೊಂಡೆ. ತಂಗಿಯ ಮಕ್ಕಳಿಬ್ಬರಿಗೂ lactose intolerance ಹಾಗಾಗಿ ನಾವು ಎಲ್ಲ ಹೋಟಲ್ ಗಳಿಗೆ ಹೋಗುವಂತಿಲ್ಲ.  stand by ತಿಂಡಿಗಳನ್ನು ನಾವು ಯಾವಾಗಲೂ ಇಟ್ಟುಕೊಳ್ಳುತ್ತೇವೆ.
ಲಕ್ಕವನಹಳಿಯ ಘಟಕದಲ್ಲಿ ನಾವು ಹಲವು ಗಂಟೆ ಕಳೆದೆವು. ಮಕ್ಕಳ ಇಂಗ್ಲಿಷ್ ಪ್ರಶ್ನೆಗಳನ್ನು ನಾನು ಹಳ್ಳಿಯ ಹೆಣ್ಣುಮಕ್ಕಳಿಗ್ವೆ ಕನ್ನಡದಲ್ಲಿ ಕೇಳಿ ಪುನ: ಮಕ್ಕಳಿಗೆ ಅವರ ಉತ್ತರಗಳನ್ನು ಹೇಳಬೇಕಿತ್ತು. ತುಂಬಾ ಇಂಪ್ರೆಸ್ ಆದರು. ನನ್ನ ಬಳಿಯಿರುವ ಬ್ಯಾಗ್ ತೋರಿಸಿ, ’ಇದು ಇಲ್ಲೇ ಮಾಡಿದ್ದು’ ಅಂತ ಹೇಳಿದೆ. ದೇಶ ವಿದೇಶದಲ್ಲಿ, ಫ್ಯಾಬ್ ಇಂಡಿಯಾ ದಲ್ಲಿ ನಮ್ಮ ಉತ್ಪನ್ನಗಳು ಲಭ್ಯ. ಹಳ್ಳಿಯವರಿಗೂ ಖುಶಿ. ಆಮೇಲೆ ಅವರ ಮರ್ಜಿಯಂತೆ ಎಳನೀರು ಕುಡಿದು, ಫೋಟೊ ಎಲ್ಲ ಮುಗಿಸಿ ಸೀದಾ ಚಿತ್ರದುರ್ಗದ ಕೋಟೆಗೆ ಹೋದೆವು. ಅಲ್ಲಿಗೆ ನಮಗೆ ಈ ಜ್ಯೋತಿ ರಾಜ್ ಸಿಕ್ಕಿದರು. ಸುಮಾರು ಜನ ಕೂಡಿದ ಮೇಲೆ ಅವರು ಬರಿ ಗೈ ನಿಂದ ಕೋಟೆ ಹತ್ತಿ ತೋರಿಸಿದರು. ಅವರ ಬಳಿ ಟ್ರೈನಿಂಗ್ ಅಂತ ನಾಲ್ಕೈದು ಹುಡುಗರು ಇದ್ದರು. ನಾವೂ ಅವರ ಜತೆ ಫೋಟೊ ತೆಗೆಸಿಕೊಂಡು, ಶ್ರೀಕಾಂತ ಅವರಿಗೆ ಸ್ವಲ್ಪ ಹಣವನ್ನು ನೀಡಿದರು. ಅವರ ಕಷ್ಟಗಳ ಬಗ್ಗೆ, ಜೋಗ್ ಫಾಲ್ಸ್ ನಲ್ಲಿ ಹೆಣಗಳನ್ನು ಶೋಧಿಸಲಿಕ್ಕೆ ಅವರನ್ನು ಕರೆದು ಕೊಂಡು ಹೋಗಿ ತುಂಬಾ ರಿಸ್ಕ್ ಇರೋ ಜಾಗದಲ್ಲಿ ಹತ್ತಿಸಿ ದುಡ್ಡು ಕೊಡದೆ ಪೋಲಿಸರು ಸತಾಯಿಸುವುದನ್ನು ಹೇಳಿಕೊಂಡರು. ’ನಮಗೆ ಗವರ್ಮೆಂಟ್ ಸಪೋರ್ಟ್, ಇನ್ಸ್ಯೂರೆನ್ಚೆ ಎಲ್ಲ ಇಲ್ಲ ಸರ್, ನಿಮ್ಮಂತಹವರು ಅಷ್ಟಿಷ್ಟು ಕೊಟ್ಟರೆ ಇದೆ’ ಅಂದ್ರು. ನನ್ನ ಬಳಿಯಿದ್ದ ಶ್ರೇಯಾಳನ್ನು ಮಾತನಾಡಿಸಿದರು. ಅದಕ್ಕೆ ನಾನು ಅವಳಿಗೆ ಕನ್ನಡ ಬರಲ್ಲ ಅಂದೆ. ಆಗ ಜ್ಯೋತಿರಾಜ್ ಅವಳನ್ನು ಉದ್ದೇಶಿಸಿ ’education is not important talent is important' ಅಂತ ಹೇಳಿದರು. ಫೋಟೊ ಎಲ್ಲ ತೆಗಿಸಿಕೊಂಡ ಮೇಲೆ , ಮಾವ್ಯಾ (ಕೊಂಕಣಿಯಲ್ಲಿ ದೊಡ್ಡಮ್ಮನಿದೆ ಮ್ಹಾವೆ ಅನ್ನುತ್ತ್ತಾರೆ, ಆದರೆ ಅವಳು ನನ್ನನ್ನು ಮಾವ್ಯಾ ಅಂತ ಸಂಭೋಧಿಸುವುದು) did you hear what he just said? Is it true' ಅಂತ ದೊಡ್ಡ ದೊಡ್ಡ ಕಣ್ಣು ಬಿಟ್ಟು ನೋಡಿದಳು. ಅದಕ್ಕೆ ನಾನು no sweetie pai , ignore him. education is equally important, he is just not aware of it 'ಅಂದೆ. ಅವಳಿಗೆ ಇಂತಹ ಮಾತುಗಳಿಂದ ತಲೆಯಲ್ಲಿ ಗುಂಗಿ ಹುಳ ಬಿಟ್ಟಂತಾಗಿ ಪದೇ ಪದೇ ಅದೆ ಪ್ರಶ್ನೆ ಕೆಳುತ್ತಿರುತ್ತಾಳೆ. ಶ್ರವಣಬೆಳಗೊಳದ ಗೊಮ್ಮಟ ಮೂರ್ತಿ ಯಾಕೆ naked ಇದ್ದಾನೆ ಅಂತ ವಿವರಿಸಲು ನನ್ನ ತಲೆ ಕೆರೆದದ್ದು ನೆನಪಾಯ್ತು. :-)

ಶ್ರೇಯಾ ಕಲಿಯುವುದುರಲ್ಲಿ ಮುಂದು ಮಾತ್ರವಲ್ಲ ಅವಳು ಮ್ಯಾಥ್ black belt. ಅವಳು ಅವಳ ವಯಸ್ಸಿಗಿಂತ ಎರಡು ವರ್ಷ ಮುಂದಿನ ಲೆಕ್ಕ ಮಾಡುತ್ತಳೆ ಅವಳ ಶಾಲೆಯಲ್ಲಿ (for eg ಅವಳು ೬ ನೆ ಕ್ಲಾಸ್ ಆದರೆ ಲೆಕ್ಕದ ಪಿರೀಯಡ್ ನಲ್ಲಿ ಅವಳು ಎಂಟನೆ ಕ್ಲಾಸಿನ್ ಲೆಕ್ಕದ ಸಿಲೆಬಸ್ ಬಿಡಿಸುವುದು), ಮೆಂಟಲ್ ಮ್ಯಾಥ್ ಕೂಡ ಮಾಡುತ್ತಾಳೆ, ಬೆಂಗಳುರಿನ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಾಗ ನಾವು ಈ ಆಟ ಆಡುತ್ತೇವೆ. ನಾನು ಅವಳಿಗೆ ಲೆಕ್ಕ ಹೇಳಿ ಉತ್ತರ ನಾನು ಮೊಬೈಲ್ ನಲ್ಲಿ ಹುಡುಕುವಷ್ಟರಲ್ಲಿ ಅವಳು ಉತ್ತರ ಹೇಳಿರುತ್ತಾ ನಗುತ್ತ ಕಾಯುತ್ತಾಳೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಕಲಿಯುತ್ತಿದ್ದಾಳೆ, ಪಿಯಾನೋ, ವಯೋಲಿನ್ ಬಾರಿಸುತ್ತಾಳೆ. ದೊಡ್ಡವಳು ತುಂಬಾ ಜಾಣೆ state level science project ಒಂದಕ್ಕೆ ಆಯ್ಕೆಯಾಗಿದ್ದಾಳೆ. ಹಾಗಾಗಿ ಈ ವರ್ಷ ಅವರು ಅವರ ಸಮ್ಮರ್ ರಜೆಗೆ ಇಲ್ಲಿಗೆ ಬರಲಾಗುವುದಿಲ್ಲ. ಆದರೆ ಮುಂದಿನವಾರ ಮದುವೆ ಎಟೆಂಡ್ ಮಾಡಲು ಎಲ್ಲರೂ ಬರುತ್ತಿದ್ದಾರೆ. ಹತ್ತು ದಿವಸ ಇರುವುದು. ಈಗಾಗಲೇ ಎಲ್ಲಿ ಹೋಗುವುದು ಅಂತ -short trip- ತಯಾರಾಗುತ್ತಿದೆ.


At Rangashankara story telling competition


ಸಿಹಿ ಕಹಿ ಚಂದ್ರು ತದೇಕಚಿತ್ತರಾಗಿ ಶ್ರೇಯಾಳ accent ಭರಿತ ಸ್ವಂತ ಕತೆಯನ್ನು ಕೇಳುತ್ತಿರುವುದು
 ಲಕ್ಕವನಹಳ್ಳಿಯಲ್ಲಿ ನಮಗೋಸ್ಕರ ನೇಯ್ಗೆಯ ಪ್ರಾತ್ಯಕ್ಷಿಕೆ (Demo)
 ಬಣ್ಣದ ದಾರ for embroidering on the banana fibre bags
 ಬಾಳೆಯ ನಾರನ್ನು ಒಟ್ಟು ಗೂಡಿಸಿ ಹೊಲೆದು, ಅದು ಬ್ಯಾಗ್, prayer mat, table runnerss ಮುಂತಾದವುಗಳಾಗುವ ಮುಂಚಿನ ನೇಯ್ಗೆ
 ಅವರ ಫೋಟೊ ತೆಗೆಯುವ ಉಮ್ಮೇದು. ನಿಹಾ clicks
ಹಿರಿಯ ಮಹಿಳೆ ಕೈಗೊಂಡ ಸೂಕ್ಷ್ಮ ನೈಗೆ

ಚಿತ್ರದುರ್ಗದ ಕೋಟೆಯೊಳಗಿನ ದೃಶ್ಯಗಳು. ಒಂದೆರಡು ನಾನು ಕ್ಲಿಕ್ಕಿಸಿದ್ದು ಬಿಟ್ಟರೆ ಎಲ್ಲ ಫೋಟೊ ಕರ್ಟಸಿ ನಿಂಪಿ





 ನಾಯಿಗೂ ಗೋಡೆ ಹತ್ತಬೇಕೆಂಬ ಆಸೆಯಂತೆ :-)
  ಜ್ಯೋತಿರಾಜ್ 
 education is not important, only talent is important ಉವಾಚ....:-)


https://www.youtube.com/watch?v=WFCjpKRU0u0&feature=youtu.be
ಮೇಲಿನ ಕೊಂಡಿ ಮೇಲೆ ಕ್ಲಿಕ್ ಮಾಡಿದ್ರೆ ಅವರು ಕೋಟೆ ಹತ್ತುವ ಚಿಕ್ಕ ತುಣುಕು ಕಾಣಿಸುತ್ತದೆ


 ಮಾಲತಿ ಮೇಡ್ಂ ಸುಸ್ತಿಫೈಡ್ :-)
 ಅಕ್ಕ ತಂಗಿ ಜೋಡಿ. me and sis
 english speaking guide ಮಹಾಶಯರ ಕ್ಲಿಕ್ಕು :-) ಪೈ & ಶೆಣೈ ಫ್ಯಾಮಿಲಿ








 ನನ್ನ ನಿಂಪಿ ನನ್ನ ಕ್ಲಿಕ್ಕು








 ನನ್ನ fav photo
ಹುಕ್ಕಾ ಬಾರ್- me n akka


ಹಂಪಿಯ ಬಗ್ಗೆ ಮತ್ತೊಮ್ಮೆ....

March 8, 2015

ಅದ್ದದ್ದೆಲ್ಲ ಒಳಿತೇ???!!!!!

ವಿನೋದಕ್ಕನ ಫೋನ್ ಬಂದಾಗ ನಾನು ಮಾಡುತ್ತಿದ್ದ ಅಡುಗೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೊರಗೆ ಬಂದೆ. ಅಕ್ಕನ ಫೋನ್ ಅಂದರೆ ಹಾಗೆ ಸುಮಾರು ಹೊತ್ತು ಮಾತು ಕತೆ. ನಮ್ಮ ಸಂಸ್ಥೆ ಬಗ್ಗೆ, ಅವರ ಬಿಸಿನೆಸ್ ಬಗ್ಗೆ, ನನ್ನ ಮಕ್ಕಳು, ಅವರ ಮಕ್ಕಳು, ನನ್ನ ಬ್ಲಾಗ್ ಬರಹ, ಊರಿನ ವಿಷಯ, ಕಾಮನ್ ಸಂಬಂಧಿಕರ ವಿಷಯ ಹೀಗೆ.......
ನಾನು ಹಲೋ ಅಂದಿದ್ದಕ್ಕೆ ಅಲ್ಲಿಂದ ಸ್ವಲ್ಪ ಹೊತ್ತು ಸದ್ದೆ ಬರಲಿಲ್ಲ. ನಮ್ಮ ಮನೆಯಲ್ಲಿ ಕೆಲವೊಮ್ಮೆ ಸಿಕ್ಕಾಪಟ್ಟೆ ಸಿಗ್ನಲ್ ಪ್ರಾಬ್ಲಮ್. ಹಾಗಾಗಿ ಎರಡು ಮೂರು ಕಡೆ ಸ್ಥಳ ಬದಲಾಯಿಸಿ, ಫೋನ್ ಕಟ್ ಆಗಿಲ್ಲ ಎನ್ನುವುದನ್ನು ಖಾತರಿ ಪಡಿಸಿ, ಹಲೋ ಹಲೋ ಎಂದೆ. ಅಲ್ಲಿಂದ ಬಿಕ್ಕುವ ಅಳುವ ಸದ್ದು ಕೇಳಿ ಬಂದು ನಾನು ಕಂಗಾಲಾದೆ. ಹಿರಿಯ ಜೀವ , ಅದೂ ಯಾವತ್ತೂ ಲವಲವಿಕೆಯಿಂದ ಕೂಡಿದ ಜೀವ ಅತ್ತರೆ ಹೇಗನಿಸಬೇಡ. ಏನಾಯ್ತಕ್ಕ ಅಂದೆ. ’ಇವರಿಗೆ ಹೊರಗಡೆ ಅಫೈರ್ ಇದೆ ಏನು ಮಾಡಬೇಕೆಂದು ತೋಚುತ್ತಿಲ್ಲ’ ಅಂದರು. ಕೂಡಲೆ ನನಗೆ ಸಿಟ್ಟು ಏರಿ ಏನಾಯ್ತಪ್ಪ ಆಯಂಪ್ಪಂಗೆ ಧಾಡಿ? ಎಂದು ಅಳಬೇಡಿ ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ ಎಂದೆ.
ಬೇಗ ಬೇಗ ಉಳಿದ ಕೆಲ್ಸ ಮುಗಿಸಿದೆ ಹಾಗೆ ನನ್ನ ವಿನೋದಕ್ಕನೆ ಪರಿಚಯದ ಬಗ್ಗೆ ಆಲೋಚಿಸಿದೆ. ನಾನು ಅವರನ್ನು ಭೇಟಿಯಾಗಿದ್ದು ನಮ್ಮ ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ, ನಾವು ಸ್ವ ಉದ್ಯೋಗ ಕೈಗೊಳ್ಳುವ ವರಿಗೆ ಒಂದು ತರಬೇತಿ ಕಾರ್ಯಕ್ರಮ ಹೊಮ್ಮಿಕೊಂಡಿದ್ದೆವು. ಅದನ್ನು ನ್ಯೂಸ್ ಪೇಪರ್ ನಲ್ಲಿ ಹಾಕಿದ್ದೆವು. ಅದರ ಬಗ್ಗೆ ಹೆಚ್ಚಿನ ಮಾಹಿತಿಗೋಸ್ಕರ ಅವರು ನಮ್ಮ ಸೆಲ್ ಗೆ ಬಂದಿದ್ದರು. ಅವರದ್ದು ಸ್ವಂತ್ ಉದ್ಯೋಗ ಆಗಲೇ ಇತ್ತು. ನಾವು ಲೋನ್ ಏನಾದರೂ ಏರ್ಪಾಡು ಮಾಡುತ್ತೀವಾ ಅಂತ ಕೇಳಿದರು. ಮಾತಾಡ್ತಾ ಅವರು ಕೊಂಕಣಿಯೆಂದು ಗೊತ್ತಾಗಿ , ಹಾಗೂ ನಮ್ಮ ಸೆಲ್ ಗೆ ಅವರು ಬರುತ್ತಾ ಹೋಗುತ್ತಾ ಇದ್ದರಿಂದ ಅವರ ಜತೆ ನನ್ನ ಸಲಿಗೆ ಹೆಚ್ಚಾಯಿತು. ನನಗಿಂತ 15-16 ವರ್ಷಕ್ಕೆ ದೊಡ್ಡವರು. ಅವರ ಗಂಡ ಕೂಡ ಬಿಸಿನೆಸ್ ಮ್ಯಾನ್. ಮೂರು ಜನ ಮಕ್ಕಳು ಮಾತ್ರವಲ್ಲದೆ, ಅವರ ಊರಾದ ಉತ್ತರ ಕರ್ನಾಟದ ಬಳಿಯ ಹಳ್ಳಿಯಲ್ಲಿ ಅವರ ಕುಟುಂಬದ ಬುದ್ದಿವಂತ ಮಕ್ಕಳನ್ನು ಗುರುತಿಸಿ, ಅವರ ಹೆಚ್ಚಿನ ಓದಿಗಾಗಿ ಅವರಿಗೆ ಕೆಲಸ ಸಿಗುವ ತನಕ ಆರ್ಥಿಕ ಸಹಾಯ ಮಾಡಿ ಇವರ ಮನೆಯಲ್ಲೇ ಇರಿಸಿಕೊಳ್ಳುವುದು ರೂಢಿ,ಅಲ್ಲದೇ ದೊಡ್ಡ ಕುಟುಂಬದವರಾದ್ದರಿಂದ ಮನೆಗೆ ಬರುವ ಸಂಬಂಧಿಕರು, ಸ್ನೇಹಿತರು ಹಾಗಾಗಿ ಮನೆ ತುಂಬ ಜನವೋ ಜನ. ವಿನೋದಕ್ಕ ಮೊದಲು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಗಂಡ ಆ ಬ್ಯಾಂಕಿನಲ್ಲಿ ವ್ಯವಹರಿಸುತ್ತಿದ್ದರಿಂದ ಅವರ ಪರಿಚಯ ಪ್ರೇಮಕ್ಕೆ ತಿರುಗಿ , ಇಬ್ಬರ ಮನೆಯ ವಿರೋಧದ ನಡುವೆ ಇಬ್ಬರ ಮದುವೆಯಾಯಿತು. ಆ ಮೇಲೆ ಅಕ್ಕನ ಮನೆಯಲ್ಲಿ ಎಲ್ಲ ಸರಿಯಾದರೂ, ಅವರ ಗಂಡ ಮನೆಯವರು ರಾಜಿಯಾಗಲೇ ಇಲ್ಲ. ಅವರ ಗಂಡ ಕೂಡ ದೊಡ್ಡ ಕುಟುಂಬದವರು. ಎಲ್ಲರೂ ಶಾಸ್ತ್ರೀಯ ಸಂಗೀತದಲ್ಲಿ ಒಂದಲ್ಲ ಒಂದು ಸಾಧನೆ ಮಾಡಿದವರು. ಮದುವೆಯಾಗಿ ಮೂವತ್ತು ಚಿಲ್ಲರೆ ವರುಷ, ಮೂರು ಮಕ್ಕಳು ಯಾಕಪ್ಪ ಭಾವಾಜಿಗೆ ಈ ಚಾಳಿ ಬಂತು ಅಂತ ನನ್ನಷ್ಟಕ್ಕೆ ನಾನು ಚಿಂತಿಸಿದೆ. ಬೇಜಾರಾಯಿತು. ನಾನು ಅಂದರೆ ಅವರಿಗೆ ತುಂಬಾ ಅಭಿಮಾನ. ನನ್ನ ಮಾತು ತುಂಬ ಕಡಿಮೆಯಾದರೂ ಭಾವಾಜಿ ಜತೆ ನಾನು ಮನ ಬಿಚ್ಚಿ ಮಾತಾಡುತ್ತಿದ್ದೆ ಮಾತ್ರವಲ್ಲ ಅವರು ನನಗೆ ತುಂಬಾ ಇಷ್ಟ ಕೂಡ ಆಗುತ್ತಿದ್ದರು. ನಮ್ಮ ಪರಿಚಯ ಆದ ಕೆಲ ದಿನದಲ್ಲೇ ವಿನೋದಕ್ಕನಿಗೆ ಲೀವರ್ ನ ಕ್ಯಾನ್ಸರ್ ಕಾಣಿಸಿಕೊಂಡಿತು. ಆಮೇಲೆ ಕೀಮೋಥೆರಪಿ , ರಕ್ತದಲ್ಲಿ ಏನೋ ನ್ಯೂನತೆಯಿಂದಾಗಿ ಆಗಾಗ ರಕ್ತದ transfusion. ಇದರ ಮಧ್ಯೆಯೂ ಅವರ ಬಿಸಿನೆಸ್ ಹೀಗೆಲ್ಲ ನಡೆಯಿತು. ಮೂರು ಮಕ್ಕಳು ಕೆಲ್ಸದಲ್ಲಿದ್ದಾರೆ. ಮಗಳು ಇತ್ತೀಚಿಗೆ ಕೆಲಸ ಬಿಟ್ಟು ಎಂ ಬಿ ಎ ಗೆ ತಯಾರಾಗುತ್ತಿದ್ದಾಳೆ. ಈಗ ಈ ಸುದ್ದಿ. 
ಅವರ ಮನೆ ತಲುಪಿದೆ. ಎದುರಾದದ್ದೆ ಭಾವಾಜಿ. ನಾನು ಬಿಟ್ಟ ಬಾಯಿಯಿಂದ ಅವರನ್ನು ನೋಡುತ್ತಲೇ ಇದ್ದೆ. ಅವರ ಮುಖದಲ್ಲಿ ಹತ್ತು ವರ್ಷ ಕಡಿಮೆ ಕಾಣುತ್ತಾ ಇತ್ತು. ಹಣೆಯ ಮೇಲೆ ಕೂದಲು ಬೀಳುವ ಹಾಗೆ ಹೊಸ ಮಾದರಿಯ ಹೆಯರ್ ಕಟ್, ಕೂದಲಿಗೆ ಕಪ್ಪು ಬಣ್ಣ, ಕನ್ನಡ ಹೋಗಿ ಕಾಂಟ್ಯಾಕ್ಟ್ ಲೆನ್ಸ್, ಲೋ ವೈಸ್ಟ್ ಜೀನ್ಸ್, ಜಿಮ್ ಗೆ ಹೋಗಿ ಪಡೆದ ಚೆಂದದ ದೇಹ, ಬೈಸೆಪ್ಸ್ ಕಾಣುವಂತೆ ಗಿಡ್ಡ ತೋಳಿನ ಟೈಟ್ ಶರ್ಟ್, ಚೆಂದದ ಬಕಲ್ ನ ಲೆದರ್ ಬೆಲ್ಟ್, ಹೈ ಫಂಡಾ ಶೂ ಗಳು. ಬೆರಳಿಗೆ ಸುತ್ತಿಕೊಂಡ ಕೀಚೈನ್ ಗಿರ ಗಿರ ತಿರುವುತ್ತ, ಹಾಡಿನ ವಿಶಲ್ ಹಾಕುತ್ತಿದ್ದರು. ನನ್ನನ್ನು ನೋಡಿ, ಹಾಯ್ ಮಾಲ್ತಿ. ಐ ಯಾಮ್ ಆಫ್ ಟು ಎ ಮೀಟಿಂಗ್, ಬಟ್ ಡೊಂಟ್ ಗೋ, ಲೆಟ್ ಅಸ್ ಹ್ಯಾವ್ ಲಂಚ್ ಟುಗೆದರ್’ ಅಂದ್ರು. ನಾನು ಹೂಂ ಅಂದೆ. ಅವರು ಮೆಟ್ಟಲು ಓಡುತ್ತಾ ಇಳಿದರು. ನಾನು ಮೆಚ್ಚುಗೆಯಿಂದ ಅವರನ್ನು ನೋಡುತ್ತ ಬಾಲ್ಕನಿಗೆ ಬಂದೆ. ಅವರು ಬುಲೆಟ್ ಬೈಕ್ ಗುಡುಗುಡು ಮಾಡುತ್ತಾ ನಾನು ಬಾಲ್ಕನಿ ಮೇಲೆ ನಿಂತಿದ್ದನ್ನು ನೋಡಿ ನನಗೆ ವೇವ್ ಮಾಡಿ ಹೊರಟು ಬಿಟ್ಟರು. ನಾನು ಸ್ವಲ್ಪ ಹೊತ್ತು ಹೊರಗಡೆ ನೆ ನಿಂತೆ. ನನ್ನ ಮೆಚ್ಚುಗೆಯ ನಿಮಿತ್ತ ನನ್ನ ಮುಖದಲ್ಲಿನ ಮಂದಹಾಸ , ವಿನೋದಕ್ಕ ನೋಡುವುದಕ್ಕೆ ಮುಂಚೆ , i had to compose myself. 
ಒಳಗೆ ಬಂದೆ, ವಿನೋದಕ್ಕ ಅಳು ಶುರು ಮಾಡಿದರು. ಮಾಲ್ತಿ ಬೇರೆ ಸಮಯ ಹೀಗೆಲ್ಲ ಆದ್ರೆ ಬೇರೆ ವಿಷಯ. ನಮ್ಮ ಮದುವೆಯಾಗಿ ಮೂವತ್ತು ಮೂರು ವರ್ಷ ಆಯ್ತು. ಮಕ್ಕಳೂ ಮದುವೆ ವಯಸ್ಸಿಗೆ ಬರುತ್ತಿದ್ದಾರೆ, ಅದಲ್ಲದೆ ನನಗೆ ಕಾಯಿಲೆ ಬೇರೆ. ಇವರು ನೋಡಿದರೆ ಹೀಗೆ ಅಂದ್ರು. 
ಭಾವಾಜಿಯವರ ಪರವಾಗಿ ಯೋಚಿಸಲು ಶುರು ಮಾಡಿದೆ. ಯಾವುದೋ ಸಂಗೀತ ಕಾರ್ಯಕ್ರಮದಲ್ಲಿ ಆಕೆ ಭೇಟಿ ಯಾಗಿದ್ದಳಂತೆ. ವಿಧವೆ, ಪುಟ್ಟ ಮಗು ಅಲ್ಲದೇ ಅವರದ್ದೆ  ಕುಟುಂಬದ ದೂರದ ಸಂಬಂಧಿ. ಪರಿಚಯ ಸ್ನೇಹ ವಾಗಿ ಈಗ ಪ್ರೀತಿ (?) ಗೆ ತಿರುಗಿತ್ತು. ಅಕ್ಕನ ಹುಷರಿಲ್ಲದ್ದಿದ್ದಾಗಲೆಲ್ಲ ಮನೆಯ ಸಂಪೂರ್ಣ ಜವಾಬ್ದಾರಿ ಅವರ ಬಿಸಿನೆಸ್ ಜತೆ , ನಿಭಾಯಿಸುತ್ತಿದ್ದರು. ಆಸ್ಪತ್ರೆಯ ಓಡಾಟ, ಮನೆಗೆ ಬಂದು ಅಕ್ಕನ ಶುಶ್ರೂಷೆ, ಅಂತ ಅವರಿಗೆ ಬಿಡುವೇ ಆಗುತ್ತಿರಲಿಲ್ಲ, ಅವರ ಕಡೆಯ ಕುಟುಂಬದ ಸಹಕಾರ ಕೂಡ ಇರಲಿಲ್ಲ. ಹಾಗಾಗಿ ಒಂಟಿತನ ಅನಿಸಿ ಎಲ್ಲೋ ನಾಲ್ಕು ಒಳ್ಳೆಯ ಮಾತಾಡಿದ, ಹಾಗೂ ಆಕೆ ವಿಧವೆ ಎಂಬ ಕಾರುಣ್ಯದಲ್ಲಿ ಇಬ್ಬರಲ್ಲಿ ಮೈತ್ರಿ ಕಾಣಿಸಿಕೊಂಡಿರಬೇಕು.
ಅಕ್ಕ, ’ ನಾನೀಗ ಏನು ಮಾಡಲಿ. ನನಗೆ ಅವರು ಬೇಕು. ಅವಳನ್ನು ಬಿಡಲ್ಲ ಅಂತಿದ್ದಾರೆ. ಈಗ ಹೇಗೆ ನಡೆದುಕೊಂಡಿದೆ ಹಾಗೆ ನಡೆಯಲಿ. ನನಗೆ ಅವಳೂ ಬೇಕು ’ಅಂತಿದ್ದಾರೆ, ಅದಲ್ಲದೇ ಭಾನುವಾರ ಪೂರ್ತಿ ಅವಳ ಜತೆಯಲ್ಲೇ ಇರ್ತಾರೆ ಅಥವ ಎಲ್ಲಾದರೂ ಕಾರ್ ನಲ್ಲಿ ಹೋಗುತ್ತಾರೆ. ಮಕ್ಕಳು ಅವರಪ್ಪನ ಜತೆ ಮಾತು ಯಾವಾಗಲೋ ಬಿಟ್ಟಿದ್ದಾರೆ. ಮಗ ಬೇರೆ ಊರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳುತ್ತಿದ್ದಾನೆ. ದೊಡ್ಡವಳಿಗೆ ಮದುವೆ ಪ್ರೊಪೋಸಲ್ಸ್ ಬರುತ್ತಿವೆ. ನೀನೆ ಹೇಳು ಏನು ಮಾಡಲಿ..
’ಅಕ್ಕ ನಾನು ನಿಮಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವಳು. ನನ್ನ ಸಲಹೆ ಕೇಳುತ್ತೀರಾ?/"
"ಆಗಲಿ, ಹೇಳು"
ಇದು ಒಂದು passing phase. ನೀವು ಹೇಳಿದ ಪ್ರಕಾರ ಅವರ ಮಧ್ಯ ವಯಸ್ಸಿನ ಗ್ಯಾಪ್ ತುಂಬಾ ಇದೆ. ಗಂಡಸಿರಿಗೂ ಮೇಲ್ ಮೆನೋಪಾಸ್ ಅಂತ ಇರುತ್ತೆ. ಇದು ಅದರ ಪ್ರಭಾವ. ಭಾವಾಜಿಯವರು ನನಗೆ ಆತ್ಮೀಯರು ಅದಕ್ಕೆ ನನಗೆ ಗೊತ್ತು ಅವರು ನಿಮ್ಮನ್ನು ಯಾವತ್ತೂ ನೋಯಿಸಲ್ಲ. ಇದೆನೋ ಆಗಿ ಬಿಟ್ಟಿದೆ. ನೀವು ಬಿಟ್ಟುಕೊಡಬೇಕು." ನನ್ನ ಮಾತಿನಿಂದ ಅಕ್ಕ ಹೌಹಾರಿದರು. ಅವರು ಬಾಯಿ ತೆರೆಯುವ ಮುಂಚೆ..’ಇಲ್ಲ ಕೇಳಿಸಿಕೊಳ್ಳಿ. ನನ್ನ intuition ಪ್ರಕಾರ, ಅದೂ ಯಾವತ್ತೂ ಸುಳ್ಳಾಗಿಲ್ಲ,ಎಲ್ಲ ಸರಿಯಾಗುತ್ತೆ. ಅವರು ಇವೆಲ್ಲ ಬಿಟ್ಟು ವಾಪಸ್ ಬರುತ್ತಾರೆ, ಅವರಿಗೇ ನಾಚಿಕೆನೂ ಆಗುತ್ತೆ. ಆಗ ನೀವು ಧಾರಾಳ ಮನಸ್ಸು ಮಾಡಿ ಅವರನ್ನು ಕ್ಷಮಿಸಬೇಕು. ಮಕ್ಕಳಿಗೂ ತಿಳಿ ಹೇಳ ಬೇಕು. ಅಲ್ಲದೇ you should also think on behalf of him. ಹೆಚ್ಚಿನ ಪ್ರೀತಿ ಕಾಳಜಿ ತೋರಿಸಿ. ನಿಮಗೆ ಹುಷಾರಿಲ್ಲದಿದ್ದಾಗ ನೋಡಿಕೊಳ್ಳಲ್ಲು ದಾದಿ ನೇಮಿಸಿ. give him a break from time to time. ಪೊಸೆಸಿವ್ ನೆಸ್ ಸ್ವಲ್ಪ ಕಡಿಮೆ ಮಾಡಿ.
ಅವರಿಗೆ ದುಡ್ಡಿಗೇನೂ ಕಡಿಮೆಯಿಲ್ಲ. ಬಿಸಿನೆಸ್ ಚೆನ್ನಾಗಿಯೇ ನಡೆಯುತ್ತೆ. ವಿನೋದಕ್ಕನಿಗೆ ವಿಚಿತ್ರ ಅಭ್ಯಾಸ. ಯಾವುದಾದರೊಂದು ಕಿರು ಉದ್ಯಮ ಶುರು ಮಾಡೋದು, ಅದು ಲಾಭಕ್ಕೆ ಬರುತ್ತಿದ್ದ ಹಾಗೆ ಅದನ್ನು ಬೇರೆಯವರಿಗೆ ಮಾರಿಬಿಡುವುದು. ಯಾವಾಗಲೂ ಏನಾದರೂ ಹೊಸತನದಿಂದ ಕೂಡಿರುತ್ತೆ ಅವರ ಜೀವನ, ನನಗೆ ಖುಶಿ ಅವರ ಬಗ್ಗೆ. :-) ಅಷ್ಟೆ ಅಲ್ಲದೇ ಹಲವಾರು ಬಿಲ್ಡಿಂಗ್ ಕಾಂಪ್ಲೆಕ್ಸ್ ಬಾಡಿಗೆಗೆ ಎಲ್ಲ ನೀಡಿದಾರೆ.
" ನೀವು ಯು ಎಸ್ ಗೆ ಹೋಗುವ ಪ್ಲ್ಲ್ಯಾನ್ ಏನಾಯ್ತು?"
ಎಲ್ಲ ರೆಡಿಯಾಗಿದೆ ಮಾಲ್ತಿ.’ ತಾರೀಕೂ ಫಿಕ್ಸ್ ಮಾಡುವುದೊಂದು ಬಾಕಿ"
ಅದನ್ನು ಮೊದಲು ಮಾಡಿ. ನೀವು ಮತ್ತು ರಜೆ ಹಾಕಿರುವ ಮಗಳು ಹೋಗಿ ಬನ್ನಿ’ ಡಾಕ್ಟರ್ ಹತ್ತಿರ ಚೆಕ್ ಮಾಡಿಸಿ ಹೊರಡುವ ಮುನ್ನ". ಹಾಗೆ ನಾನು ನಮ್ಮ ಆಫಿಸ್ ನಿಂದ ಇತ್ತೀಚಿಗೆ ಹೊರದೇಶಕ್ಕೆ ಹೋಗಿ ಬಂದವರರಿಂದ coxs and kings ಟ್ರಾವೆಲ್ ಏಜೆನ್ಸಿ ಬಗ್ಗೆ ತುಂಬಾ ಕೇಳಿದ್ದೆ. ನಮ ಕಲೀಗ್ ಇಬ್ಬರು ಈ ಟ್ರಾವೆಲ್ಸ್ ನಲ್ಲಿ ಫ್ಲೈಟ್ ಬುಕ್ ಮಾಡಿ ಯೂರೋಪ್/ಅಮೇರಿಕಾ/ಅಂಡಾಮಾನ್, ಹೀಗೆ ಹೋಗಿ ಬಂದಿದ್ದಾರೆ. ಒಬ್ಬ ಕಲೀಗ್ ಸಿಂಗಾಪೂರ್ ನಲ್ಲಿ ಗಾರ್ಡನ್ ಬಳಿಯ cow-catch ತರದ್ದು ಏನೋ ಇದ್ದು ಅದರಲ್ಲಿ ಕಾಲು ಸಿಲುಕಿ ಬಿದ್ದು, ಕಾಲು ತಿರುಚಿ ಅದು ಫ್ರಾಕ್ಛರ್ ಆದಾಗ ಅವರ ಎಯರ್ ಲೈನ್ಸ್ ನಿಂದ ತುಂಬಾ ಕಾಳಜಿಯಿಂದ ಅಲ್ಲಿ ಚಿಕಿತ್ಸೆ ಕೊಡಿಸಿ ಪುನ: ಭಾರತಕ್ಕೆ ತಂದು ಇಳಿಸಿದ್ದರಂತೆ, ಅವರ ಖರ್ಚಿನಲ್ಲೇ. ಕಾಲು ಸರಿಯಾದ ಮೇಲೆ ಇವರು ಅವರ ಟ್ರಿಪ್ ಅನ್ನು ಮುಂದುವರೆಸಿದರು...ಅದು ಬೇರೆ ವಿಷಯ...
ಆ ಟ್ರಾವಲ್ ಏಜೆನ್ಸಿ ನಾನೆ ಸಜೆಸ್ಟ್ ಮಾಡಿದೆ. 
ನಮ್ಮ ಮನೆಯ ಗೃಹಪ್ರವೇಶಕ್ಕೆ ಅವರು ಭಾರತದಲ್ಲಿರಲಿಲ್ಲ. ಮೊನ್ನೆ ನಗುತ್ತ ಬಂದು ನನಗೋಸ್ಕರ ಅಮೇರಿಕೆಯಿಂದ ತಂದ ಮೆಮೆಂಟೊ (ನಯಾಗರಾ ಫಾಲ್ಸ್ ಚಿತ್ರದ ಟೂಥ್ ಪಿಕ್ ಹೋಲ್ಡರ್), ಚಾಕಲೇಟುಗಳನ್ನು ನೀಡಲು ಬಂದಿದ್ದರು. 
"ನೀನು ಹೇಳಿದ್ದು ಸರಿಯಿತ್ತು ಮಾಲ್ತಿ". ನಾನು ಅಮೇರಿಕಾಗೆ ಹೋಗುತ್ತಿದ್ದದ್ದು ಮೊದಲು ಅವರಿಗೆ ಪಿಚ್ಚೆನಿಸಿತು. ನಾವೆಲ್ಲರೂ ಒಟ್ಟಿಗೆ ಹೋಗುವ ಪ್ಲ್ಯಾನ್ಸ್ ಅಲ್ಲವಾ ಇದ್ದದ್ದು? ನೀನೊಬ್ಬಳೆ ಹೋಗುತ್ತಿಯಾ’ ಅಂತ ಮೊದಲಿಗೆ ಬೆಜಾರಾದರೂ, ಆಕೆಯೊಂದಿಗೆ ಹೆಚ್ಚು ಸಮಯ ವ್ಯಯಿಸಬಹುದು ಎಂಬ ವಿಚಾರದಿಂದ ಅವರ ಮುಖ ಅರಳಿದಾಗ ಒಂದು ಕ್ಷಣ ನನಗೆ ಸತ್ತು ಹೋಗುವ ಮನಸ್ಸಾಯಿತು. ನಾವು ಹೋದ ಮೇಲೆ ಇವರು ಅವಳ ಮನೆಯಲ್ಲಿರಲು ಹೋದರಂತೆ. ಮೊದಲು ಕೆಲವು ದಿನ ಎಲ್ಲ ಸರಿಯಿತ್ತೆನಿಸುತ್ತೆ. ನನಗೆ ಯಾವುದೆ ಫೋನ್ , ಮೆಸೇಜ್ ಏನೂ ಇರಲಿಲ್ಲ. ನಾನು ಮೂರು ತಿಂಗಳಿಗೆ ಅಂತ ಹೋಗಿದ್ದು, ಆರು ತಿಂಗಳು ಇದ್ದು ಬಂದೆ. ಮೊದಲು ಎಲ್ಲ ಸೈಟ್ ಸೀಯೀಂಗ್ ಮುಗಿಸಿದೆ, ಆಮೇಲೆ ನನ್ನ ಅಕ್ಕನ ಮನೆಯಲ್ಲಿ ಇದ್ದೆ. ಅವಳ ಮಗ ಡಾಕ್ಟರ್. ಅವನ ಬಳಿ ಎಲ್ಲ ಚೆಕ್ ಅಪ್ ಮಾಡಿಸಿದೆ. ಸಧ್ಯಕ್ಕೆ ಕ್ಯಾನ್ಸರ್ ತಹಬದಿಯಲ್ಲಿದೆ ಎಂದ. ಹಾಗೆ ಎಲ್ಲ ಸಂಬಂಧಿಕರ ಮನೆಯಲ್ಲಿ ಸ್ವಲ್ಪ ಸಮಯ ಇದ್ದು ಬಂದೆ. ಇವಳಿಗೂ (ಮಗಳಿಗೂ) ಅವಳ ಕರಿಯರ್ ಬಗ್ಗೆ ಯೋಚಿಸಲು ಅವಕಾಶ ಆಯ್ತು. ಕೊನೆ ಕೊನೆಗೆ ಇವರ ಫೋನ್ ಕಾಲ್ಸ್ ಶುರು. ’ಯಾವಾಗ ಬರುತ್ತೀಯಾ’? ಮೂರು ತಿಂಗಳು ಯಾವಾಗಲೋ ಆಗಿ ಹೋಯ್ತು’. ನನಗಿಲ್ಲಿ ಒಂಟಿಯಾಗಿರಲಿಕ್ಕೆ ಆಗ್ತಾ ಇಲ್ಲ", ನಾನು ಬರಲಾ’ ಮುಂತಾದ್ದು. ನಾನು ತಣ್ಣಗಿದ್ದೆ. ಇಲ್ಲಿಗೆ ಬಂದ ಮೇಲೆ ತಿಳಿಯಿತು. ಮೊದ ಮೊದಲು ಎಲ್ಲ ಚೆನ್ನಾಗಿತ್ತು, ಆಮೇಲೆ ಅವಳಿಗೆ ಇವರ presence ಕಿರಿ ಕಿರಿ ಅನ್ನಿಸಲಿಕ್ಕೆ ಶುರು ಆಯ್ತು’.  ಹೊರಗಡೆ ಎಲ್ಲರ ಕಣ್ಣು ತಪ್ಪಿಸಿ ಕಳ್ಳತನದಲ್ಲಿ ಸಿಗುವ ಥ್ರಿಲ್ ಈಗ ಇರಲಿಲ್ಲ, ಅಲ್ಲದೇ ಅವರ ಮನೆಗೆ ಬಂದ ಅವಳ ಅಣ್ಣಂದಿರು ಸರಿಯಾಗಿ ಛಿ ಮಾರಿ ಹಾಕಿದ್ದಲ್ಲದ್ದೆ, ಅವಳಿಗೆ ಬೇರೆ ಗಂಡು ಹುಡುಕಲು ಶುರು ಮಾಡಿದರಂತೆ. ಇವಳೂ ಅದಕ್ಕೆ ಒಪ್ಪಿಕೊಂಡಾಗ ಇವರು ಬಾಲ ಸುಟ್ಟ ಬೆಕ್ಕಿನಂತೆ ಮನೆಗೆ ವಾಪಸ್ ’ ಮೊನ್ನೆ ನನ್ನ ಕೈ ಹಿಡಿದು ನಾಚಿಕೆಯಿಂದ ಅತ್ತು ಬಿಟ್ಟರು’ಅಂತ ನಗುತ್ತ ಹೆಳಿದಾಗ ನನಗೆ ನೆಮ್ಮದಿ.
All's well that end's well. ಆದರೆ ತದ್ವಿರುದ್ದ ಆಗಿದ್ದಿದ್ದರೆ? how long can i rely on my intuition?? ಹಾಂ?
ಅವರಿಗೆ ನಾನು ಇಲ್ಲಿ ಬಂದು ಕನ್ನಡ ಕಲಿತು ಬ್ಲಾಗ್ ಬರೆಯುತ್ತೆನೆಂಬುದು ಎಲ್ಲಿಲ್ಲದ ಅಭಿಮಾನ. ಪೇಪರ್ ನಲ್ಲಿ ನಾನು ಬರೆದ ಆರ್ಟಿಕಲ್ ಎಲ್ಲ ಬಂದಾಗ ಫೋನ್ ಮಾಡುವುದಲ್ಲದೇ ಅದರ ಕ್ಲಿಪ್ಪಿಂಗ್ ಕೂಡ ಇಟ್ಟಿದ್ದಾರೆ. ಮನೆಯಲ್ಲಿ ಯಾರದಾದರೂ ಲ್ಯಾಪ್ ಟಾಪ್ ಸಿಕ್ಕರೆ ನನ್ನ ಬ್ಲಾಗ್ ಪೋಸ್ಟ್ ಗಳನ್ನು ಓದುತ್ತಾರೆ. ಇದನ್ನು ಬ್ಲಾಗಿಸಲು ಅವರೇ ಹೇಳಿದ್ದು. ನಾನು ಹೆಸರನ್ನು ಬದಲಾಯಿಸಿದ್ದೇನೆ ಅಷ್ಟೆ.

HAPPY WOMEN S DAY ಎಲ್ಲರಿಗೂ
here is a painting by Niha