June 21, 2015

ವೀಳ್ಯದೆಲೆಯ ಪಾನ್ ಮಿಲ್ಕ್ ಶೇಕ್



ನನಗೆ ಪಾನ್ ಪಸಂದ್ ಮಾರುಕಟ್ಟೆಗೆ ಬಂದಾಗನಿಂದ ತುಂಬಾsss ಇಷ್ಟವಾಗ್ತಿತ್ತು. ಮದುವೆಯಾದ ಕೆಲ ಸಮಯದ ನಂತರ ಅದು ನನಗೆ ಕಣ್ಣಿಗೆ ಬಿದ್ದಿರಲಿಲ್ಲ. ಹಿಂದಿನ ವರ್ಷ ಅಕ್ಕ ನ ಟ್ರೀಟ್ ಅಂತ, ಬ್ರಿಟಿಶ್ ಲೈಬ್ರರಿ ಗೆ ಹೋದಾಗ ಅಲ್ಲಿಂದಲೇ ಅವಳು ನನಗೆ ಅಲ್ಲೇ ಹತ್ತಿರವಿದ್ದ ಮಸ್ತ್ ಕಲಂದರ್ಗೆ ಹೋದಾಗ ಅಲ್ಲಿ ಆಫ್ಟರ್ ಮಿಂಟ್ ಗೆ ಬದಲಾಗಿ ಅದನ್ನೆ ಕೊಟ್ಟಿದ್ದಾಗ ಅರೇ ಅಕ್ಕ ಇದನ್ನು ತಿನ್ನದೇ ಎಷ್ಟೊಂದು ವರ್ಷಗಳದಾವು ಎಂದು ಉದ್ಗರಿಸಿ, ಒಂದು ಕ್ಷಣ ’ಶಾದಿ ಔರ್ ತುಮ್ಸೆ? ಕಭಿ ನಹೀಂ ಎನ್ನುವ ಅದರ ad ದೂರದರ್ಶನದಲ್ಲಿ ನೋಡಿದ್ದು ನೆನಪಾಗಿ ನಗು ಬಂತು. ಅವಳ ಪಾಲಿನ ಪಾನ್ ಪಸಂದ್ ಕೂಡ ನಾನೇ ಗುಳುಂ ಮಾಡಿದೆ. ಹಾಗಂತ ನನಗೆ ಮದುವೆ ಮನೆಯಲ್ಲಿ ಅಥವಾ ಪಾನ್ ಬೀಡಾ ಅಂಗಡಿಯಲ್ಲಿ ಸಿಗುವ ಪಾನ್ ಗಳು ಇಷ್ಟ ಆಗಲ್ಲ. ಕೆಲವೊಮ್ಮೆ ದೊಡ್ಡ ದೊಡ್ಡ ಪ್ಯಾಕೆಟ್ ಪಾನ್ ಪಸಂದ್ ತಂದಿಟ್ಟು ತಿಂದಿದ್ದೂ ಇದೆ. ಶ್ರೀಕಾಂತ ಯಾವಾಗಲೂ ಹೇಳೋರು, "ಯಾಕೆ ಆ artificial ಪಾನ್ ಪಸಂದ್ ತಿಂತಿಯಾ? ಅದರ ಬದಲು ಎಲೆ ಅಡಿಕೆ ಹಾಕಬಹುದಲ್ಲವಾ ಅಂತ!
 ನಮ್ಮ ಮನೆಯಲ್ಲಿ ಶ್ರೀಕಾಂತ ಗೆ ಕೆಲವೊಮ್ಮೆ ರಾತ್ರಿ ಊಟದ ನಂತರ ಎಲೆ ಅಡಿಕೆ ತಿನ್ನುವ ಅಭ್ಯಾಸ ಇದೆ. ಅಡಿಕೆ ನಮ್ಮ ತೀರ್ಥಹಳ್ಳಿಯ ತೋಟದ್ದು, ಸ್ಟಾಕ್ ಇರುತ್ತೆ. ಊಟದ ನಂತರ ಅವರು ಉಯ್ಯಾಲೆ ಮೇಲೆ ಕೂರುವುದಂತೆ. ನಾನು ಕಚ್ಚೆ ಹಾಕಿ ಸೀರೆ ಉಟ್ಟು ಕೊಂಡು, ಸೆರಗಿನಿಂದ ಎಲೆಗಳನ್ನು ಉಜ್ಜಿ, ಅದಕ್ಕೆ ಹಿತವಾಗಿ ಸುಣ್ಣ ಎಲೆ ಅಡಿಕೆ ಪುಡಿ ಬೆರೆಸಿ ಚೆಂದವಾಗಿ ಮಡಚಿ ಅದನ್ನು ಅವರ ಬಾಯಲ್ಲಿ ಹಾಕಿ, ನಾನು ಒಂದು ಎಲೆ ಹಾಕಿ ತೂಗುಯ್ಯಾಲೆ ಮೇಲೆ ನಿಧಾನಕ್ಕೆ ತೂಗ್ತಾ.........ಇದು ಅವರ ಕನಸು. ಅದಕ್ಕೆ ನಾನು ಮೊದಲು ತೇಗದ ಮರದ ಕುಸುರಿ ಕೆಲಸದ ಮಣೆ ಹಾಕಿರುವ ತೂಗುಯ್ಯಾಲೆ ಮಾಡಿಸಿ ಆಮೇಲೆ ನೋಡುವ ’ ........:-)
ಎರಡು ತಿಂಗಳ ಹಿಂದೆ ದೆಹಲಿಗೆ ಹೋದಾಗ ಅಲ್ಲಿ ನಾನು ಪಾನ್ ಕುಲ್ಫಿ ತಿಂದು ಅದು ನನಗೆ ತುಂಬಾ ಇಷ್ಟ ಆಯ್ತು. ಅದಾದ ಕೆಲ ದಿನಗಳ ನಂತರ ಫೇಸ್ ಬುಕ್ ನ ಪಾಕ ಶಾಲೆ ಪೇಜ್ ನಲ್ಲಿ ಪೂರ್ಣಿಮಾ ಗಿರೀಶ್ ವೀಳ್ಯದೆಲೆ ಚಿತ್ರಾನ್ನ್ ಮಾಡುವ ಬಗೆ ಹಾಕಿದರು.  ಹಾಗೆ ಮಾಲವಿಕ ಒಂದು ಸಲ ಅದರ ಮಿಲ್ಕ್ ಶೇಕ್ ಮಾಡಿದ್ದಳು. ಅದು ನನಗೆ ತುಂಬಾ ಇಷ್ಟ ಆಗಿ ನಿಹಾಳ ಪಾಲಿನದ್ದು ನಾನೇ ಕುಡಿದುಬಿಟ್ಟೆ. ಅದಕ್ಕೆ ಮಾಲವಿಕ ಇವತ್ತು ಪುನ: ಮಾಡಿದ್ದರಿಂದ ಅದರ ಫೋಟೊ ಹಾಗೂ ರೆಸಿಪಿ ನಿಮಗಾಗಿ
ಬೇಕಾಗಿರುವುದು: ಎರಡು ವೀಳ್ಯದೆಲೆ, ಎರಡು ಚಮಚ ಗುಲ್ಕಂದ್, ಒಂದು ಗ್ಲಾಸ್ ಹಾಲು, ಅರ್ಧ ಗಂಟೆ ನೆನೆಸಿಟ್ಟ ಸಬ್ಜ್ (ಫಲೂದಾ ಸೀಡ್ಸ್) ಸಕ್ಕರೆ ಬೇಕಿದ್ದಲ್ಲಿ ಮಾತ್ರ, ಕೆಲವು ಐಸ್ ಕ್ಯೂಬ್ಸ್. ಎಲ್ಲವನ್ನು (except falooda seeds. they have to be added just before serving) ಬ್ಲೆಂಡರ್ ನಲ್ಲಿ ಹಾಕಿ. ಕೂಲ್ ಕೂಲ್ ಪಾನ್ ಮಿಲ್ಕ್ ಶೇಕ್ ತಯಾರು...

:-).


June 10, 2015

ಮಿತ್ರ ರಂಜಿತ್ ಸತ್ಯರಾಜ್ - ಒಂದು ಸುಂದರ ನೆನಪು

ಏಪ್ರಿಲ್ 8, 2015, ರಾತ್ರಿ ಸಿನಿಮಾ ನೋಡಿ ಮಲಗುವಾಗ 1 ಗಂಟೆ. ಎಲ್ಲರೂ ಮಲಗಿದ್ದರು. ನಾನು ಮಲಗುವ ಮುನ್ನ ಸೆಲ್ ಫೋನ್ ಚೆಕ್ ಮಾಡಿದಾಗ ಮೈಲ್ ಇವೆಯೆಂಬ ಐಕನ್ ಕಾಣ್ತಾ ಇತ್ತು. ಬೆಳಿಗ್ಗೆ ಚೆಕ್ ಮಾಡಿದರಾಯಿತು ಅಂತ ಸುಮ್ಮನಿದ್ದೆ.  ನಿದ್ದೆ ಬರುವ ತನಕ ವರ್ಡಾಮೆಂಟ್ ಆದ್ರೂ ಆಡುವ ಅಂತ ಆಡ್ತಾ ಇದ್ದೆ. ಬೋರ್ ಆಯಿತು. ಸರಿ ಮೈಲ್ ಚೆಕ್ ಮಾಡುವ ಅಂತ ಜಿ ಮೈಲ್ ಗೆ ಹೋದೆ. ಅದರಲ್ಲಿ ಮೊದಲಿನ ಮೈಲ್ ಮಿತ್ರ ರಂಜಿತ್ ಅವರದ್ದು. ಏನಾದರೂ ಜೋಕ್ ಅಥವ ಕೀಟಲೆ ಮೆಸೆಜ್ ಇರುತ್ತೆ ಅಂತ ಕ್ಲಿಕ್ ಮಾಡಿದ್ರೆ. ಅವರ ಮೈಲ್ ಐ ಡಿ ಯಿಂದ ಅವರು ದೈವಾಧೀನ ರಾಗಿರುವ ವಿಷಯ. ಸರ್ರ್ ಅಂತ ಸಿಟ್ಟು ಬಂತು. ತಮಾಷೆಗೂ ಒಂದು ಲಿಮಿಟ್ ಇರುತ್ತೆ ಅಂತ.  ಬೆಳಿಗ್ಗೆ ಫೋನ್ ಮಾಡಿ ಅವರನ್ನು ತರಾಟೆಗೆ ತಗೊಳುವವಳಿದ್ದೆ. ಪುನ: ಮೈಲ್ ಚೆಕ್ ಮಾಡಿದಾಗ ರೆಸ್ಟ್ ಇನ್ ಪೀಸ್ ರಂಜಿತ್ ಅಂತೆಲ್ಲ, ಅವರ ಜತೆ ಒಡನಾಡಿದ ಮಿತ್ರರ ಗಳ ನೆನಪುಗಳು ಪೂರ್ತಿ 122 ಮೈಲ್ ಫೊರ್ವಡ್ ಗಳು. ಕಿರಿ ಕಿರಿ ಅನ್ನಿಸ್ತು. ಆ ಅಪರಾತ್ರಿಯಲ್ಲಿ ಯಾರನ್ನೂ ಎಬ್ಬಿಸುವುದು ಬೇಡ ಅಂತ ಸುಮ್ಮನಾದೆ. ಹಾಗೂ ಹೀಗೂ ಬೆಳಗಾಯಿತು. ಶ್ರೀಕಾಂತ್ ಏಳುವುದನ್ನೇ ಕಾಯುತ್ತ ಇದ್ದೆ. ರಂಜಿತ್ ಹೆಂಡತಿ ಸೂಸಿ ನನ್ನ ಆತ್ಮೀಯ ಗೆಳತಿ. ಅವರಿಗೆ ಫೋನ್ ಹಚ್ಚುವ ಅಂದ್ರೆ ಯಾಕೋ ಧೈರ್ಯವೇ ಬರಲಿಲ್ಲ. ಅಕ್ಕ ಎದ್ದ ಕೂಡಲೆ ಅವಳಿಗೆ ಮೈಲ್ ಓದಲು ಕೊಟ್ಟು, ನಿನಗೆ ಏನನ್ನಿಸುತ್ತೆ ಅಂದೆ. ಅವಳು "ಅಂಕಲ್ ತಮಾಷೆ ಮಾಡ್ತಿದ್ದಾರೆ. ಆದರೆ ನೀನ್ಯಾಕೆ ಸೂಸಿ ಆಂಟಿಗೆ ಫೋನ್ ಮಾಡಬಾರದು" ಅಂದ್ಲು.

ಶ್ರೀಕಾಂತ ಎದ್ದ ಕೂಡಲೆ ಅವರಿಗೆ ಮೊಬೈಲ್ ಕೊಟ್ಟು ಸೂಸಿ ಗೆ ಫೋನ್ ಮಾಡಿ. ವಿಷಯ ಹೀಗೆ ಹೀಗೆ ಅಂದೆ. ಅವರು ಸೂಸಿ ಗೆ ಫೋನ್ ಮಾದುವುದು ಬಿಟ್ಟು ರಂಜಿತ್ ನಂಬರ್ ಗೆ ಫೋನ್ ಮಾಡಿದ್ರು. ಕಾಲ್ ರಿಸೀವ್ ಮಾಡಿದ್ದು ಸೂಸಿ. ಶ್ರೀಕಾಂತ್ ಗೆ ಫೋನ್ ಯಾವಾಗಲೂ ಸ್ಪೀಕರ್ ಫೋನ್ ನಲ್ಲಿ ಹಾಕೋದು ಅಭ್ಯಾಸ. ಅಲ್ಲಿಂದ ಕೇಳಿಸ್ತು "ಶ್ರೀಕಾಂದ್ ರಂಜಿತ್ ಪಾಸ್ಡ್ ಎವೇ ಯೆಸ್ಟರ್ಡೆ ಇವನಿಂಗ್ ಎರೌಂಡ್ ಫೈವ್ ಒ ಕ್ಲೋಕ್’ ವಿ ಆರ್ ಇನ್ ಬೆಂಗಳೂರ್ ನೌ’ ಅಂತ. ರಾತ್ರಿ ಇಡಿ ಎಂಬುಲೆನ್ಸ್ ನಲ್ಲಿ ಟ್ರವೆಲ್ ಮಾಡಿ ರಂಜಿತ್ ರ ಶರೀರದೊಂದಿಗೆ ಬೆಂಗಳೂರಿಗೆ ಬಂದಿದ್ದರು. ಸರ್ವಿಸ್ ಎಷ್ಟು ಗಂಟೆಗೆ- ಎಲ್ಲಿ ಅಂತ ಆಮೇಲೆ ತಿಳಿಸ್ತೇನೆ ಅಂದರು. ಸ್ವಲ್ಪ ಹೊತ್ತು ಬಿಟ್ಟು ಸೂಸಿ ನನಗೆ ಫೋನ್ ಮಾಡಿದರು. ’ದ್ಯಾಟ್ ನೊಟಿ (naughty) ಫೆಲ್ಲೊ ಲೆಫ್ಟ್ ಅಸ್ ಮಾಲದಿ’ ಅಂದ್ರು. ತುಂಬಾ ಕೂಲ್ ಆಗಿದ್ದರು. ನನ್ನ ಎದೆ ಮಾತ್ರ ಡವ ಡವ ಎನ್ನುತ್ತಿತ್ತು. ಹೌ ಆರ್ ಯು ಸೂಸಿ ಅಂದ್ರೆ ಐ ಯಾಮ್ ಫೈನ್. ಇಟ್ ಹ್ಯಾಡ್ ಟು ಹ್ಯಾಪನ್, ಹಿಸ್ ಹಾರ್ಟ್ ವಾಸ್ ವೀಕ್ ಅಂದ್ರು

ಹೌದು ಐದು ವರ್ಷದ ಹಿಂದೆ ರಂಜಿತ್ ಗೆ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ತುರ್ತು ಹಾರ್ಟ್ Trasnplant ಮಾಡಿಸಬೇಕಿತ್ತು. ಇಲ್ಲದಿದ್ದರೆ ಆರೇ ತಿಂಗಳು ಅವರ ಜೀವಿತಾವಧಿ ಅಂತ ಡಾಕ್ಟರ್ ಶರಾ ಬರೆದಿದ್ದರು. ಛೆ ನನಗೆ Transplant ಬೇಡ ಏನೂ ಬೇಡ ಇದ್ದಷ್ಟು ಸಮಯ ಚೆನ್ನಾಗಿಯೇ ಇದ್ದು ಸಾಯುತ್ತೇನೆ ಅಂದಿದ್ದವರು, ವೈದ್ಯಕೀಯ ಜಗತ್ತು ಬೆರಗುಗೊಳ್ಳುವಂತೆ ಇನ್ನೈದು ವರ್ಷ ಕಾಲ ಕಳೆದದ್ದು ಮಾತ್ರವಲ್ಲ ಈ ನಡುವೆ ಒಬ್ಬರೆ ಕ್ಯಾಲಿಫೋರ್ನಿಯ ಗೆ ಅವರ ರೇಕೀ ಗುರುವನ್ನು ಕಾಣಲು ಹೋಗಿ ಮೂರು ತಿಂಗಳು ಅಲ್ಲಿದ್ದು ಬಂದಿದ್ದರು.

ನಮ್ಮ ಮನೆ ಗೃಹಪ್ರವೇಶ ಸಮಾರಂಭಕ್ಕೆ ಅವರು ಇಲ್ಲಿರಲಿಲ್ಲ. ಅದರ ಮರು ತಿಂಗಳು ಬಂದಿದ್ದರು. ಅವರ ಡಿವೈನಿಂಗ್ ರಾಡ್ ಹಿಡಿದುಕೊಂಡು. ’ಮಾಲ್ತಿ ಯುವರ್ ಹೌಸ್ ಹ್ಯಾಸ್ ಪೊಸಿಟಿವ್ ವೈಬ್ಸ್’ ಅಂದಿದ್ದರು, ನನಗೂ ಖುಶಿಯಾಗಿತ್ತು. ಖಾದಿ ಧೋತಿ, ಹಾಫ್ ಕುರ್ತಾ, ಕಿವಿಗಳಿಗೆ ಚೆಂದದ ಕೆಂಪು ಕಲ್ಲಿನ ಓಲೆ, ಚೆಂದದ ಗಟ್ಟಿ ನಗು (ಎಂಥವರ ಮುಖದಲ್ಲೂ ಅವರ ನಗೆ ಪ್ರತಿಬಿಂಬಿಸುತಿತ್ತು), ತುಂಟತನದಿಂದ ತುಳುಕುವ ಕಣ್ಣುಗಳು ಅವರ ಹಾಸ್ಯ ಪ್ರಜ್ಝೆ, ಅವರ ಅಗಾಧ ಜ್ಝಾನ ಇವೆಲ್ಲವೂ ಅಚ್ಚರಿ ಮೂಡಿಸುವಂತಿರುವ ಅವರ ವ್ಯಕ್ತಿತ್ವ.
ಸಂಜೆ ಸೈಂಟ್ ಜಾನ್ ಚರ್ಚ್ ನಲ್ಲಿ ಅವರ ಅಂತಿಮ ದರ್ಶನಕ್ಕೆ ಅನುವು ಮಾಡಲಾಗಿತ್ತು. ಪ್ರೇಯರ್ ಹಿಮ್ನ್, ಆರ್ಗನ್ ಮ್ಯೂಸಿಕ್ ನಡುವೆ ಒಂದು ಸುಂದರವಾದ ಸರ್ವಿಸ್. ಅವರನ್ನು ಹತ್ತಿರದಿಂದ ನೋಡಿದ, ಅವರ ಕುಟುಂಬದವರ, ಸಹೋದ್ಯೋಗಿಗಳ ಮನದುಂಬುವ ಮಾತುಗಳು... ಕಾಫಿನ್ ನ ಮುಚ್ಚಳ ತೆಗೆದಿತ್ತು. ಹತ್ತಿರ ಹೋಗಿ ನೋಡಿದರೆ. ಅದೇ ನಗು ಮುಖ. ಮುಟ್ಟಿದರೆ ಎಚ್ಚ ರವಾಗಬಹುದೇನೋ ಎಂಬಂತಹ ಮುಖಚರ್ಯೆ. ನಾನು ಮುಟ್ಟಿ ನೋಡಿದೆ. ಸೂಸಿ ಬಳಿ ಬಂದಾಗ ಅವರು ಕೂಲ್ ಆಗೇ ಇದ್ದರು. ಅವರನ್ನು ತಬ್ಬಿ ಅತ್ತಿದ್ದು ನಾನು ಮತ್ತು ನಿಹಾ. ರಂಜಿತ್ ರ 91 ವಯಸ್ಸಿನ ಅಮ್ಮನ ಅಳು ನೋಡಲಾಗಲಿಲ್ಲ. ಅಲ್ಲಿ ಸೇರಿದ್ದ ಹಲವಾರು ಜನ ಬೈಬಲ್ ಓದುತ್ತ ಅಳುತ್ತಿದ್ದರು. ಮಧ್ಯಾಹ್ನ ನಾಲ್ಕರ ಸಮಯ , ಅದೂ ಗಡಿಬಿಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸೇರಿದ್ದ ಜನರು ಹಲವರು. ಅವರನ್ನು ನೋಡಿ ದಂಗು ಮಾತ್ರವಲ್ಲ ಸ್ವಲ್ಪ ಅಸೂಯೇ ಕೂಡ. ನಾನಲ್ಲದೇ ಇಷ್ಟೊಂದು ಜನ ಮಿತ್ರರಾ ಅವರಿಗೆ ಅಂತ.

ಇಲ್ಲಿದೆ ರಂಜಿತ್ ಬಗ್ಗೆ ಒಂದು ಸಣ್ಣ ವಿಡಿಯೋ ತುಣುಕು. ಅವರು ಜೀವನ ನಡೆಸಿದ ಬಗ್ಗೆ ಒಂದು ಪುಟ್ಟ ಝಲಕ್. ಅದರ ಕೆಳಗಡೆ ಇವತ್ತು ಡೆಕ್ಕನ್ ಹೆರಾಲ್ಡ್ ನಲ್ಲಿ ಅವರ ಬಗೆಗಿನ ಪುಟ್ಟ ಬರಹ. ರಂಜಿತ್ ನಮ್ಮೊಂದಿಗಿಲ್ಲ ಅನ್ನಲಾಗುವುದೇ ಇಲ್ಲ. ಅವರ ನೆನಪು ಅವರ ಜೋಕ್ ಗಳು ಯಾವತ್ತೂ ಮಂದಹಾಸ ಮೂಡಿಸುತ್ತದೆ. ಅವರು ದೈವಾಧೀನ ರಾಗುವ ನಾಲ್ಕು ದಿನದ ಹಿಂದೆ ಒಂದು ರಾತ್ರಿ ಮೆಸೆಜ್ ಬಂದಿತ್ತು. ’ವ್ಹೆನ್ ಆರ್ ಯು ವಿಸಿಟಂಗ್ ಅಸ್ ಮಾಲ್ತಿ’ ಅಂತ. ಐ ವಿಲ್ ಬಿ ದೇರ್ ಡ್ಯೂರಿಂಗ್ ದ ಮನ್ಸೂನ್ಸ್. ಮೆ ಐ ಬ್ರಿಂಗ್ ಅ ಫ್ರೆಂಡ್ ವಿದ್ ಮಿ’ ಅಂತ ಕೇಳಿದ್ರೆ..you and any friend of yours is always welcome' ಅಂದಿದ್ರು. ರೂಮಿ quotes ತುಂಬಾ ಇಷ್ಟ ಪಡುತ್ತಿದ್ದರು ಮತ್ತು ನಮ್ಮೆಲ್ಲರ ಜತೆ ಶೇರ್ ಮಾಡುತ್ತಿದ್ದರು. ಇ ಮೈಲ್ , ಎಸ್ ಎಮ್ ಎಸ್ ಗಳಿಗೆ ’ಮೂರ್ಖ’ ಅಂತ ಸೈನ್ ಆಫ್ ಮಾಡುತ್ತಿದ್ದರು.
ಹತ್ತನೆ ದಿನ ಪುನ: ಒಂದು ಸರ್ವಿಸ್ ಇಟ್ಟುಕೊಂಡಿದ್ದರು ಚರ್ಚ್ ನ ಹಾಲ್ ನಲ್ಲಿ . ಅವರ ನೆನಪುಗಳನ್ನು ಶೇರ್ ಮಾಡಿಕೊಂಡು ಎಲ್ಲರೂ ನಕ್ಕಿದ್ದೆ. ಅವರು ಈಗ ದೇವರನ್ನು ಎಂಟರ್ ಟೈನ್ ಮಾಡುತ್ತಿದ್ದಾರೆ ಅಂತ ಒಬ್ಬರು ಹೇಳಿದರು. :-) ದೇಶ ವಿದೇಶದಿಂದ, ಕೇವಲ್ ಮೈಲ್ ಸಂಪರ್ಕ್ ಮಾತ್ರ ಇದ್ದವರು ಕೂಡ ಬಂದು ಭಾಗವಹಿಸಿದ್ದು ಅತ್ಯಂತ ಸುಂದರ ಕ್ಷಣ. ಗೆಳತಿ ಸೂಸಿ ಅವರ ಬಗ್ಗೆ ಬರೆದ ಒಂದು ಚೆಂದದ ಪದ್ಯ  ಓದಿದರು.


ಮೇಲಿನ ಲಿಂಕ್ ನಲ್ಲಿ ನಂದೊಂದು ಪುಟ್ಟ ಬರಹ. ಅದಾದ ಮೇಲೆ ಆ ವಿಡಿಯೋ. ಬರಹ ಓದದಿದ್ದರೆ ಅಡ್ದಿಯಿಲ್ಲ ಆದರೆ ವಿಡಿಯೋ ತುಣುಕನ್ನು ಖಂಡಿತ ನೋಡಿ


June 1, 2015

ಮಾಲತಿಯ ಮ್ಯಾಗಿ ಮ್ಯಾನಿಯಾಗೆ good-bye

maggi ಬಗ್ಗೆ 2 ಹಳೆ ಪೋಸ್ಟ್


ನನ್ನ ತಮ್ಮ ಆಫಿಸ್ ಕೆಲಸ ಮೇಲೆ ಹೊರ ದೇಶಕ್ಕೆ ತುಂಬಾ ಟೂರ ಹೋಗುತ್ತಿರುತ್ತಾನೆ. ಎರಡು ಮೂರು ವರ್ಷದ ಹಿಂದೆ ಅವನು ಮ್ಯಾಗಿ ಎಲ್ಲ ತಿನ್ನಬೇಡ್ರೇ...ಅದಕ್ಕೆ ವ್ಯಾಕ್ಸ್ ಕೋಟಿಂಗ್ ಹಾಕ್ತಾರೆ. ಅದು ನಮ್ಮ ಕರುಳಿಗೆ ಅಂಟಿಕೊಂಡು ಹಲವಾರು ರೋಗ ಬರುತ್ತೆ ಅಂತಂದಿದ್ದ. ಅವನಿಗೆ ಮ್ಯಾಗಿ ಇಷ್ಟ ಆಗಲ್ಲ ಅಂತ ಸುಮ್ಮನೆ ನಮ್ಮನ್ನು ಹೆದರಿಸಲು ಅನ್ನುತ್ತಿದ್ದಾನೆ ಅನ್ನಿಸಿದ್ದರೂ, ಯಾಕೋ ನಾನು ಮ್ಯಾಗಿ ತರುವುದನ್ನು ತುಂಬಾ ಕಡಿಮೆ ಮಾಡಿದ್ದೆ. 
ನಿಹಾರಿಕಾ ಸಾವಯವ ಜೀವನ ಪದ್ದತಿ ತರಬೇತಿ ಮುಗಿಸಿ ಬಂದ ಮೇಲಂತು ಮ್ಯಾಗಿ ಅಥವಾ ಹೊರಗಿನ ಸಂಸ್ಕರಿಸಿದ (Processed food)ತಿನಿಸು ಯಾವುದೂ ತಿನ್ನುತ್ತಿರಲಿಲ್ಲ. ಆದ್ದರಿಂದ ನಾನು ಮ್ಯಾಗಿ ತರುವುದು ತುಂಬಾ ಅಂದರೆ ತುಂಬಾ ಕಡಿಮೆಯಾಯ್ತು. ಮನೆಯಲ್ಲಿ ಸ್ಟಾಕ್ ಇಟ್ಟುಕೊಂಡಿರುತ್ತಿರಲಿಲ್ಲ. ತಿನ್ನಬೇಕೆನಿಸಿದಾಗ ಒಂದು ಪ್ಯಾಕೆಟ್ ತಂದು ತಿನ್ನುತ್ತಿದೆ. ಮೊದಲೆಲ್ಲ ಮೆಟ್ರೋ ಕ್ಯಾಶ್ & ಕ್ಯಾರಿ ಗೆ ಹೋದಾಗಲೆಲ್ಲ ನಾನು ಬೇರೆ ಬೇರೆ flavor ನ ಬಗೆ ಬಗೆಯ ನೂಡಲ್ಸ್ ತಂದಿಟ್ಟಿರುತ್ತಿದ್ದೆ. ಒಂದು ದೊಡ್ಡ ಡಬ್ಬ ಇಡೀ ನೂಡಲ್ಸ್.
ಹಿಂದಿನ ವರ್ಷ ತಮ್ಮನ ಮನೆಗೆ ಹೋದಾಗ ತಮ್ಮನ 5 ವರ್ಷದ ಮಗಳು ಮ್ಯಾಗಿ ತಿನ್ನುತ್ತಿರುವುದನ್ನು ನೋಡಿದೆ. ಅವಳು ಊಟ ತಿಂಡಿ ಎಂದರೆ ಮಾರು ದೂರ. ಮ್ಯಾಗಿ ಅಂದರೆ ಬಾಯಲ್ಲಿ ಜೊಲ್ಲು ಸುರೀತಿತ್ತು. ಅವಳು ಊಟ ತಿಂಡಿ ಮಾಡಬೇಕಾದರೆ ಅವಳಿಗೆ ಅವಳ ಅಮ್ಮ ಅಥವಾ ನನ್ನ ಅಮ್ಮ ಮ್ಯಾಗಿಯ ಆಮಿಶ ತೋರಿಸುತ್ತಿದ್ದರು. ದಿನಾ ಮ್ಯಾಗಿ ಮಾತ್ರವಲ್ಲ ಕೆಲವೊಮ್ಮೆ ಶಾಲೆಗೂ ತೆಗೆದುಕೊಂಡು ಹೋಗುತ್ತಿದ್ದಳು. ಮ್ಯಾಗಿ ತಿನ್ನುವಾಗ ನೆಲದ ಮೇಲೆ ಬಿದ್ದರೆ ಅದನ್ನು ಹೆಕ್ಕಿ ತಿನ್ನುತ್ತಿದ್ದಳು ಮಾತ್ರವಲ್ಲ, ಮ್ಯಾಗಿಯ ಪ್ಲೇಟ್ ಅಥವಾ ಬಟ್ಟಲನ್ನು ನೆಕ್ಕಿ ನೆಕ್ಕಿ ಆಮೇಲೆ ಸಿಂಕ್ ನಲ್ಲಿ ಹಾಕುತ್ತಿದ್ದಳು. ನನ್ನ ತಮ್ಮ ಅವಳಿಗೆ’ ನಾಯಿ ಕೂಡ ಇಷ್ಟು ಕ್ಲೀನ್ ಆಗಿ ನೆಕ್ಕಲ್ಲ, ಅದೇನು ಇದೆಯೋ ಈ ಮ್ಯಾಗಿನಲ್ಲಿ’  ಅಂತ ಹೇಳುತ್ತಿದ್ದಾಗ ನನಗೇ ಅನುಮಾನ ಶುರು  ಆಯ್ತು. ಮ್ಯಾಗಿ ಮಾಡಿಕೊಡದಿದ್ದಲ್ಲಿ ಅತ್ತು ರಂಪ ಮಾಡುತ್ತಿದ್ದಳು  ನಾನು ಇನ್ನು ಮುಂದೆ ಮ್ಯಾಗಿ ತಿನ್ನಲ್ಲ ಅಂತ ಪಣ ತೊಟ್ಟೆ. ಮ್ಯಾಗಿ ಮಾಡಿ ತಿನ್ನಿಸುವುದರಲ್ಲಿ/ತಿನ್ನುವುದರಲ್ಲಿ ನಾನೇ ಎಲ್ಲರಿಗೆ ಮಾದರಿಯಾಗಿದ್ದೆ. 
ಈಗ ತಮ್ಮ ಅವನ ಮಗಳಿಗೆ ’ಮಾಲತಿ ಅಕ್ಕ ಮ್ಯಾಗಿ ತಿನ್ನುವುದನ್ನು ಬಿಟ್ಟಿದ್ದಾಳೆ ನೀನು ತಿನ್ನಬಾರದು ’ ಅಂತ ತಾಕೀತು ಮಾಡಿದಾನೆ. ಮನೆಯಲ್ಲಿ ಮ್ಯಾಗಿ ತರಿಸುವುದನ್ನು ಅವನು ನಿಲ್ಲಿಸಿದ್ದಾನೆ. ಹಿಂದಿನ ತಿಂಗಳು ಅವಳು ಇಲ್ಲಿ ಬಂದಾಗ 15 ದಿನ ಇಲ್ಲಿದ್ದರು. ಅಗ ಒಂದು ದಿನ ನನ್ನ ಬಳಿ ’ಕೆಲವೊಮ್ಮೆ ಮ್ಯಾಗಿ ತಿನ್ನ ಬೇಕು ಅನ್ನಿಸುತ್ತೆ’ ಅಂದಿದ್ದಳು. ಪಾಪ ಅನ್ನಿಸಿತು.
ಮ್ಯಾಗಿ ಮಾಡಲು ಸುಲಭ ಅಲ್ಲದೆ ಹೊಟ್ಟೆ ತುಂಬುತ್ತಿತ್ತು ಕೂಡ. ಆದರೆ ಇತ್ತೀಚಿನ ವರದಿ ನನ್ನನ್ನು ತೀರ ದೃತಿ ಗೆಡೆಸಿದೆ. ಎಮ್ ಎಸ್ ಜಿ /ಮೊನೊ ಸೋಡಿಯಂ ಗ್ಲುಟಮೇಟ್ ಅಥವಾ ಅಜಿನೋಮೋಟೊ ಇದೆಯಲ್ಲ ಅದಕ್ಕಿಂತ ಅಪಾಯಕಾರಿ ಬೇರೆ ಇಲ್ಲ. ಚೈನೀಸ್ ಮತ್ತು ರಸ್ತೆ ಬದಿ ಸಿಗುವ ಗೋಬೀ ಮಂಚುರೀ ಗೆಲ್ಲ ಕ್ರಿಸ್ಪ್ ಆಗಲು ಇದೇ ಬಳಸುವುದು. ಮಕ್ಕಳಲ್ಲಿ ಒಬೇಸಿಟಿಗೆ ಇದೂ ಒಂದು ಕಾರಣ.
ಸಾಯುವುದು ಹೇಗೂ ಇದೆ ಆದರೆ ಹೇಗೆ ಸಾಯುತ್ತೇವೆ ಅದೂ ಮುಖ್ಯ. ಕಾಯಿಲೆ ಕಸಾಲೆ ಇಲ್ಲದೆ ಬಾಳಬೇಕು. ನಾನಂತು ಮ್ಯಾಗಿ ಗೆ ಗುಡ್ ಬೈ ಹೇಳಿಯಾಗಿದೆ. ನನ್ನ ಓದುಗರಲ್ಲಿ ಯಾರಾದರೂ ಮ್ಯಾಗಿ ಫ್ಯಾನ್ಸ್ ಇದ್ದರೆ ದಯವಿಟ್ಟು ಮ್ಯಾಗಿ ನೂಡಲ್ಸ್ ತಿನ್ನುವುದನ್ನು ನಿಲ್ಲಿಸಿ.
ಇವತ್ತು ಫೇಸ್ ಬುಕ್ ಇನ್ಬಾಕ್ಸ್ ನಲ್ಲಿ ಬಂದ ಒಂದು ಜೋಕ್
Q. What is the gender of Maggi?
a) MALE  b) FEMALE

Ans. a) MALE. Because MAGGI get ready in 2 minutes...!!