July 29, 2015

ಮುತ್ತಿನಂಥಾ ರೊಟ್ಟಿ -tapioca pearl rotti

ನಮ್ಮ ಆಫಿಸ್ ನಿಂದ ನಾವು ಉದ್ಯಮಶೀಲತಾ /ಆರ್ಥಿಕ ಸ್ವಾವಲಂಬನಾ ತರಬೇತಿ ಮಾಡುತ್ತಿದ್ದೆವು (ಈಗ ನಿಲ್ಲಿಸಿದ್ದೇವೆ. ಯಾರಿಗಾದರೂ ಆಸಕ್ತಿಯಿದ್ದರೆ ಅವರು ಆಫಿಸ್ ಗೆ ಬಂದರೆ ನಾವು ಮಾರ್ಗದರ್ಶನ ನೀಡುತ್ತೇವೆ). ಅದರಲ್ಲಿನ ಒಂದು ಪಾಠ ’think out of the box'. ನಿನ್ನೆ ರೊಟ್ಟಿ ಮಾಡುವಾಗ ಅನ್ನಿಸಿದ್ದು, ’ಅರೇ ನಾವು preach ಅಷ್ಟೆ ಮಾಡುತ್ತೇವೆ, practice ಮಾಡಲ್ಲ’ ಅಂತ. ಯಾಕೆ ಇಷ್ಟು ಪೀಠಿಕೆ ಅಂತ ಮುಂದೆ ಓದಿ.

ನಾನು ಹುಟ್ಟಿ ಬೆಳೆದದ್ದು ಮುಂಬೈ. ತಿಂಗಳಿಗೊಂದು ಸಲ ಸಂಕಷ್ಟಿ. ಅದು ಅಲ್ಲಿನ ಒಂದು special feature. ಈಗ ಎಲ್ಲ ಕಡೆನೂ ಮಾಡುತ್ತಾರೆ. ಆ ದಿನ ಉಪವಾಸ. ನಾವು ಶಾಲೆ ಕಾಲೇಜಿನಲ್ಲಿ ’ಆಜ್ ಸಂಕಷ್ಟಿ ಕಾ ಉಪವಾಸ್ ಹೈ ರೆ’ ಅಂತ ಸಂಕಷ್ಟಿ ಏನಂತ ಗೊತ್ತಿಲ್ಲದವರ ಮುಂದೆ ನಮ್ಮ ಮಹಾ ಪೋಸ್. ನನಗೇನೂ ಆವಾಗಲೇ ದೇವರ ಮೇಲೆ ನಂಬಿಕೆ ಇರಲಿಲ್ಲ. ಆದರೆ ಮನೆಯಲ್ಲಿ ಎಲ್ಲರೂ ಉಪವಾಸ ಅಂತ ನಾನೂ ಕೂಡ. ಇಡಿ ದಿನ ಉಪವಾಸ. ಸಂಜೆ ಅಮ್ಮನ ಫ್ರೆಂಡ್ಸ್ ಜತೆ ಸೇರಿ ನಾವು ಮಕ್ಕಳ ಪಟಾಲಾಂ ಕೂಡ ವರ್ಸೋವಾದ ಗಣಪತಿ ದೇವಸ್ಥಾನಕ್ಕೆ ಭೇಟಿ. ಬರುವಾಗ ಸಮುದ್ರದ ದಂಡೆಗುಂಟ ವಾಕಿಂಗ್. ಮನೆಗೆ ಬಂದ ಮೇಲೆ ಅಮ್ಮ ಪುನ: ಸ್ನಾನ ಮಾಡಿ ಪಂಚಕಜ್ಜಾಯ, ಮೋದಕ, ಮತ್ತು ರಾತ್ರಿ ಚಂದ್ರ ದರ್ಶನ ಆದ ಮೇಲೆ ನಮ್ಮ ಫಳಾರ್ (ಫಲಾಹಾರ) ಕ್ಕೆಂದು either ಸಾಬುದಾಣಾ ಕಿಚಡಿ ಇಲ್ಲದಿದ್ದರೆ ಪೂರಿ ಮತ್ತು ಜೀರಾ-ಅಲ್ಲೂ ಭಾಜಿ ಗೆ ತಯಾರಿ. ಹೆಚ್ಚಾಗಿ ಸಾಬುದಾನ ಕಿಚಡಿ ನೇ ಮಾಡೋದಿತ್ತು. ಅಪ್ಪ ಆಫಿಸ್ ನಿಂದ ಬಂದವರೆ ಸ್ನಾನ ಮಾಡಿ ಸಂಕಷ್ಟಿ ಪೂಜಾ ವಿಧಾನದ ಪುಸ್ತಕ ಹೊರ ತೆಗೆದು ಅದನ್ನು ಓದಿ ಪೂಜೆ ಮಾಡುತ್ತಿದ್ದರು. ಚಂದ್ರ ನನ್ನು ನೋಡಿ ನಾವು ಮೊದಲು ಪ್ರಸಾದ ಗುಳುಂ ಮಾಡಿ ಮತ್ತೆ ಕಿಚಡಿಯ ಸಂಭ್ರಮ. ಚಂದ್ರ ಏನಾದರೂ ಆಕಾಶದಲ್ಲಿ ಕಾಣಿಸದಿದ್ದರೆ, ಪಂಚಾಂಗದಲ್ಲಿ ನಮೂದಿಸಲಾದ ಚಂದ್ರೋದಯ ದ timings ನೋಡಿ ನಮ್ಮ ರಾತ್ರಿಯ ಫಲಾಹಾರ. 
ಈ ಕಿಚಡಿ ಮಾಡಲು ಅಮ್ಮ ಸಾಬಕ್ಕಿಯನ್ನು ಎರಡು ಗಂಟೆ ನೆನೆಸಿಡುತ್ತಿದ್ದರು. ನಾನು ಅಮ್ಮನ ಬಳಿಯೇ ನೋಡಿ ಕಲಿತೆ, ಅಮ್ಮ ಮಾಡುವ ವಿಧಾನವನ್ನೇ ಅನುಸರಿಸುತ್ತಿದ್ದೆ. 28 ವರ್ಷಗಳಾದವು ನಮ್ಮ ಮದುವೆಯಾಗಿ.  ಮೊನ್ನೆ ಏನಾಯ್ತೆಂದರೆ...ಅದೇ ವೈಕುಂಟ ಏಕಾದಶಿಯಂದು ನಮ್ಮ ’ಅಕ್ಕ’ ನಿಗೆ ಸಾಬುದಾನ ಖಿಚಡಿ (ನಾವು ಈಗೀಗ ಮೂಡ್ ಬಂದಾಗಲೆಲ್ಲ ಸಾಬೂದಾನ ಖಿಚಡಿ ಮಾಡಿ ತಿಂತೇವೆ) ತಿನ್ನುವ ಮನಸ್ಸಾಯಿತು. ನಾನು ಸಾಬಕ್ಕಿ ನೆನೆಸಿಟ್ಟೆ. ಆಮೇಲೆ ಮನೆಗೆ ನೆಂಟರು, ಆಮೇಲೆ ನಾವು ಮನೆಯಿಂದ ಸ್ವಲ್ಪ ಶಾಪಿಂಗ್ ಇದೆಯಂತ ಹೊರಗಡೆ ಹೋಗಿ ಬಂದಾಗ ಲೇಟ್ ಆಯ್ತು. ’ಅಮ್ಮ ಇವತ್ತು ಖಿಚಡಿ ಮಾಡೋದು ಬೇಡ ನಾಳೆ ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ ಮಾಡು ಅಂದಳು. ನಮ್ಮ ರಾಯರಿಗೆ ಅದು ಬೆಳಗಿನ ತಿಂಡಿಗೆ ಅಷ್ಟು ಇಷ್ಟ ಆಗಲ್ಲ. ಹಾಗಾಗಿ ಅವರಿಗೆ ಅಕ್ಕಿ ರೊಟ್ಟಿ ಮಾಡುವುದೆಂದು, ಉಳಿದವರು ಖಿಚಡಿ ತಿನ್ನುವುದೆಂದು ಡಿಸೈಡ್ ಆಯ್ತು. ’ಅಮ್ಮ ರಾತ್ರಿ ಇಡೀ ನೆನೆಯುತ್ತೆ ಸಾಬಕ್ಕಿ. ಪೇಸ್ಟ್ ತರಹ  ಆದ್ರೆ ’ಅಂತ ಡೌವ್ಟ್ ಅಕ್ಕಂಗೆ. ಅದಕ್ಕೆ ನಾನು ಇರಲಿ ಬಿಡೆ, ಪರಿಮಳದ ಅಕ್ಕಿ (ಗಂಧಸಾಲೆ) ಸೇರಿಸಿ ಹಾಲು ಪಾಯಸ ಮಾಡಿದ್ರಾಯ್ತು ಅಂದೆ. 
ಬೆಳಿಗ್ಗೆ ನೋಡಿದ್ದ್ರೆ ನೀರೆಲ್ಲ ಹೀರಿಕೊಂಡು ಚೆಂದದ ಮುತ್ತುಗಳನ್ನು ಹೋಲುತ್ತಿದ್ದವು ನೆನೆಸಿದ ಸಾಬಕ್ಕಿ. ಶ್ರೀಕಾಂತ ಗೆ ಬೇಗ ಹೊರಡಿಲಿಕ್ಕಿತು ಆ ದಿನ. ಮೊದಲಿಗೆ ಅವರ ಅಕ್ಕಿ ರೊಟ್ಟಿ ಮಾಡಿದೆ, ಅವರು ತಿಂದು ಹಳ್ಳಿಗೆ ಹೋದರು. ಉಳಿದ ಅಕ್ಕಿ ಹಿಟ್ಟನ್ನು ರೊಟ್ಟಿ ತಟ್ಟುವಾಗ ಅದರಲ್ಲಿ ಒಂದು ಹಿಡಿ ಸಾಬಕ್ಕಿ ಹಾಕಿ ನಿಧಾನಕ್ಕೆ ತಟ್ಟಿದೆ. ಎಣ್ಣೆ ಹಾಕಿ ಬಾವಡಿಯಿಂದ ಮುಚ್ಚಿಟ್ಟು ಬೇಯಿಸಿದೆ. ರುಚಿ ರುಚಿಯಾದ ಮುತ್ತಿನಂತಹ ಸಾಬಕ್ಕಿ ರೊಟ್ಟಿ ತಯಾರ. ತಾಜ ಬೆಣ್ಣೆ ಹೇಗೂ ಇತ್ತು. ಜತೆಗೆ ಸ್ವಲ್ಪ ಹಸಿರು ಟೊಮೇಟೋ ಚಟ್ನಿ ಮಾಡಿದೆ.

ಇಂತಹ ಹೊಸದೊಂದು ರೆಸಿಪಿ ನನಗೆ ಸಿಕ್ಕಿದ್ದು ಫೇಸ್ ಬುಕ್ ನ ’ಪಾಕಶಾಲೆ’ ಪೇಜ್ ನಲ್ಲಿ 'ಶ್ರೀದೇವಿ ಕಳಸದ' ಇವರಿಂದ. 
ಆಮೇಲೆ ಸಾಬಕ್ಕಿ ಖಿಚಡಿ ಕೂಡ ಮಾಡಿದೆವು. ರಾತ್ರಿ ಇಡೀ ನೆಂದಿದ್ದರಿಂದ ಅದೇನೂ ಪೇಸ್ಟ್ ತರಹ ಆಗಲಿಲ್ಲ, ಬದಲಿಗೆ ಇನ್ನಷ್ಟು ಸಾಫ್ಟ್ ಆಗಿ, ಅರಳಿ, ರುಚಿಕರವಾಗಿತ್ತು ನಮ್ಮ ಖಿಚಡಿ.
Out of the box ಆಲೋಚನೆ ಏನಂದ್ರೆ ರಾತ್ರಿ ಇಡಿ ಸಾಬಕ್ಕಿ ನೆನೆಸಬಹುದು ಅಂತ. ಅಷ್ಟೆ. ಇವತ್ತು ಅಮ್ಮ ಫೋನ್ ಮಾಡಿದಾಗ ಅವರಿಗೂ ಹೇಳಿದೆ. ಅವರು ’ಹೌದೇನೆ’ ಅಂತ ಉದ್ಗರಿಸಿದರು.
ಕೆಳಗಿನಕೊಂಡಿಯಲ್ಲಿದೆ ಅಕ್ಕಿ ರೊಟ್ಟಿ ಮಾಡುವ ವಿಧಾನ. ನೀರುಳ್ಳಿ ಒಂದು ಹಾಕಲಿಲ್ಲ. ರೊಟ್ಟಿ ತಟ್ಟುವ ಮುನ್ನ ಒಂದು ಹಿಡಿ ನೆನೆಸಿದ ಸಬ್ಬಕ್ಕಿ ಹಾಕಿ, ಆಮೇಲೆ ಒದ್ದೆ ಕೈನಿಂದ ನಿಧಾನಕ್ಕೆ ತಟ್ಟಿ.
ಅಕ್ಕಿ ರೊಟ್ಟಿ ಮಾಡುವ ವಿಧಾನ
:-)

July 28, 2015

ಅಂತರ ಕ್ರಮಿಸಲಾಗಲಿಲ್ಲ

ನನ್ನಿಂದ ಬರಲಾಗಲಿಲ್ಲ, ನಿನ್ನಿಂದ ಕರೆಯಲಾಗಲಿಲ್ಲ
ನಮ್ಮ ನಡುವಿನ ಅಂತರ ನಮ್ಮಿಂದ ಕ್ರಮಿಸಲಾಗಲಿಲ್ಲ

ನಾವಿಬ್ಬರು ಸಂಧಿಸಿದ ಆ ಕ್ಷಣ ಇನ್ನೂ ಹಸಿರಾಗಿದೆ
ಕೈಗಳು ಬೆಸೆದವು, ಕಣ್ಣೋಟ ಕೂಡಿದವು ಮಾತು ಉಸಿರಾಗಿತ್ತು
ದಿನ ಸರಿದು, ಸಂಜೆಯಾಗಿ ಸಮಯ ಕಳೆದಿದ್ದು ಅರಿವಿಗೇ ಬರಲಿಲ್ಲ
ಹೇಗೆ ಅಳಿಸಲಿ ಆ ನೆನಪು ಮನದಾಳದಿಂದ

ಹೀಗೆ ಸಂಧಿಸಿ ಅಗಲುವುದರ ಅರಿವೆನಗಿರಲಿಲ್ಲ
ಅದೃಷ್ಟ ಖುಲಾಯಿಸುತ್ತಿದ್ದಾಗಲೆ ದುರದೃಷ್ಟ ಎದುರಾಯ್ತು
ಹೂವು ಅರಳುವ ಮುನ್ನವೆ ಹೂದೋಟ ಬರಿದಾಯ್ತು
ನೆಲಸಮವಾಯ್ತು ಯಾವತ್ತೂ  ಹೂಬಿಡದ ಹಾಗೆ

ಸಮಯ ಉರುಳುತ್ತದೆ, ನೆನಪು ಉಳಿಯುತ್ತವೆ
ಕುಸುಮ  ಅರಳುತ್ತವೆ ಹಾಗೇ ನರಳುತ್ತವೆ
ಎಲ್ಲರೂ ಹೊರಡುತ್ತಾರೆ ನೋವು ಉಳಿಯುತ್ತದೆ
ನೀನು ಹೃದಯಕ್ಕೆ ಹಾಕಿದ ಬರೆ ಅಳಿಸಲಾಗಲಿಲ್ಲ

ನಮ್ಮ ನಡುವಿನ ಅಂತರ ನಮ್ಮಿಂದ ಕ್ರಮಿಸಲಾಗಲಿಲ್ಲ

( ತಲತ್ ಮಹಮೂದ್ ರ  ’ಹಮ್ ಸೆ ಆಯಾ ನ ಗಯಾ, ತುಮ್ ಸೆ ಬುಲಾಯಾ ನಾ ಗಯ” ಹಾಡಿನ ಲೈಟ್ ಅನುವಾದ..) 





--
:-)
malathi S

July 20, 2015

ಹಾವೊಳು ಹೂವೆ??

ಚೈತ್ರಾ ಆಫಿಸ್ ನಿಂದ ಬಂದು ಗೇಟ್ ತೆರೆದು ಮನೆಯೊಳಗೆ ಹೋಗುವಾಗ ರಸ್ತೆ ಮೇಲೆ ನಿಂತು ತಲೆ ಕೆರೆದುಕೊಂಡು ಇವಳ ಕಡೆಗೆ ನೋಡುತ್ತಿದ್ದವನನ್ನು ಕಡೆಗಣ್ಣಿನಿಂದ ನೋಡಿದಳು. ಇವನನ್ನು ಎಲ್ಲೋ ನೋಡಿದೆನಲ್ಲಾ ಅಂತಾ. ಚೈತ್ರಾಳಿಗೆ ಫೊಟೊಗ್ರಾಫಿಕ್ ಮೆಮರಿ. ಏನಾದರೂ ಒಂದು ಸಲ ನೋಡಿದರೆ ಅವಳಿಗೆ ಅದು ಮರೆತು ಹೋಗುವುದಿಲ್ಲ. ಅವನ ಬಗ್ಗೆ ಯೋಚಿಸುತ್ತ, ಮನೆಯ ಒಳಗೆ ಬಂದು ಬಾಗಿಲಿಗೆ ಅಗುಳಿ ಹಾಕಿ ಚಪ್ಪಲಿ ತೆಗೆಯ ಬೇಕಾದ್ರೆ ಕಾಲ ಬಳಿ ಭುಸ್ ಎನ್ನುವ ಸದ್ದು. ನೋಡಿದರೆ ನಾಗರ ನಾವು. ಕಿಟಕಿಯ ಬಾಗಿಲು ಅವಳು ಯಾವಗಲೂ ಸಣ್ಣಕ್ಕೆ ತೆಗೆದಿರುತ್ತಾಳೆ ಅಂಚೆಯವನು ಕಾಗದ ಪತ್ರ ಏನಾದರೂ ಇದ್ದಲ್ಲಿ ಅದನ್ನು ಕಿಟಕಿಯ ಸಂದಿಯಿಂದ ಒಳಗೆ ನೂಕುವಂತೆ.. ತಕ್ಷಣ ಅವಳಿಗೆ ರಸ್ತೆಯಲ್ಲಿ ನಿಂತವನನ್ನು ಎಲ್ಲಿ ನೋಡಿದ್ದು ಅಂತ ನೆನೆಪಾಯಿತು. 
ಆದರೆ ಮೊದಲಿಗೆ ಈ ಹಾವಿಗೆ ಏನಾದರೂ ಮಾಡಬೇಕಿತ್ತು. ಚೈತ್ರಾಳಿಗೆ ಹಾವುಗಳೆಂದರೆ ಭಯವಿರಲಿಲ್ಲ. ಅದಿನ್ನೂ ಹೆಡೆ ಎತ್ತಿ ನಿಂತಿತ್ತು. ನಿಧಾನಕ್ಕೆ ಅವಳು ಕೈಯನ್ನು ಹೆಡೆಯ ಹಿಂಭಾಗಕ್ಕೆ ತೆಗೆದುಕೊಂಡು ತಕ್ಷಣ ಅದರ ಕುತ್ತಿಗೆಯನ್ನು ಒತ್ತಿ ಹಿಡಿದಳು. ಅದೇನೂ ಹೆಚ್ಚು ಒದ್ದಾಡದೆ ಸುಮ್ಮನೆ ಇತ್ತು. ನಿಧಾನಕ್ಕೆ ಅಲ್ಲಿಯೇ ಸಿಕ್ಕ ಪೆನ್ಸಿಲ್ ನಿಂದ ಅದರ ಬಾಯಿ ಅಗಲಿಸಿ ನೋಡಿದಳು. ಹಲ್ಲು ಇರಲಿಲ್ಲ. ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟು ಹಾವನ್ನು ಕೈಯಲ್ಲೇ ಹಿಡಿದು ಕೊಂಡು ಗೋಣಿಚೀಲಕ್ಕಾಗಿ ಹುಡುಕಾಟ ನಡೆಸಿದಳು. ಮನೆಯಲ್ಲಿ ಗೋಣಿ ಚೀಲ ಇರಲಿಲ್ಲ. ಆದರೆ ಹೊರದೇಶಕ್ಕೆ ಹೋಗಿದ್ದಾಗ ಅವಳ ಪತಿ ಅಲ್ಲಿಯ ಹೋಟಲ್ ಒಂದರ ಲಾಂಡ್ರಿ ಬ್ಯಾಗ್ ತಂದಿದ್ದು ಸ್ಟೋರ್ ರೂಮ್ ಬಾಗಿಲ ಸಂದಿನಲ್ಲಿ ಸಿಕ್ಕಿತು. ಹಾವನ್ನು ಸಿಂಬಿ ಸುತ್ತಿಸಿ ಅದನ್ನು ಲಾಂಡ್ರಿ ಬ್ಯಾಗ್ ನಲ್ಲಿ ಹಾಕಿ ಚೀಲದ ಬಾಯಿಯನ್ನು ಗಟ್ಟಿಯಾಗಿ ಕಟ್ಟಿದಳು. ಸಾವ್ಲೋನ್ ಹಾಕಿ ಕೈ ಕಾಲು ತಿಕ್ಕಿ ತಿಕ್ಕಿ ತೊಳೆದಳು. ಆಮೇಲೆ ಅಡುಗೆ ಮನೆಗೆ ಬಂದು ಟೀ ಕಾಯಿಸಲು ಇಟ್ಟಳು. ಟೀ ಆಗುತ್ತಿದ್ದ ಹಾಗೆ ಅವಳಿಗೆ ಕೆಲ ದಿನದ ಹಿಂದಿನ ನೆನಪು ಫ್ಲ್ಯಾಶ್ ಬ್ಯಾಕ್ ನಲ್ಲಿ ಮನಸ್ಸಿನಲ್ಲಿ ಹಾಯಿತು.
ಆಫಿಸ್ ನಿಂದ ಮನೆಗೆ ಬರುವಾಗ ಚೈತ್ರಾ ಒಳ ದಾರಿಯಿಂದ ಬರುವುದು ವಾಡಿಕೆ. ಆ ರಸ್ತೆಯಲ್ಲಿ ದೊಡ್ಡ ದೊಡ್ಡ ಬಂಗಲೆಗಳು ಮಾತ್ರವಲ್ಲ ಹೆಚ್ಚಿನ ಮನೆಯಲ್ಲಿ ಚೆಂದದ ಕೈತೋಟ ವಿದ್ದವು. ಅಲ್ಲಿಂದ ಮನೆಗೆ ಬರುವುದು ತುಸು ಹೆಚ್ಚೆ ಸಮಯ ತೆಗೆದುಕೊಳ್ಳುತ್ತಿದ್ದರೂ ಆಕೆಗೆ ಆ ದಾರಿಯಿಂದ ಬರುವುದು ಆಹ್ಲಾದಕರ ವಿಷಯ. ಹೆಚ್ಚು ವಾಹನ ಸಂಚಾರ ಕೂಡ ಇರಲಿಲ್ಲ. ಅದೇ ಒಂದು ದಿನ ಆ ರಸ್ತೆಯಲ್ಲಿ ಮನೆಗೆ ಬರಬೇಕಾದರೆ ಒಂದು ಮನೆಯ ಮುಂದೆ ಹಲವಾರು ಜನರು ಸೇರಿದ್ದರು. ಅರೇ ಯಾರಾದರು ತೀರಿಕೊಂಡರಾ ಹೇಗೆ ಅಂದು ಕೊಂಡಳು. ಆ ಮನೆಯ ಹತ್ತಿರಕ್ಕೆ ಬರುತ್ತಿದ್ದ ಹಾಗೆ ಅವಳು ಕುತೂಹಲದಿಂದ ಹೆಜ್ಜೆಯ ವೇಗ ಕಡಿಮೆಗೊಳಿಸಿದ್ದಳು. ಸೇರಿದ ಜನರೆಲ್ಲ ಹಾವಿನ ಬಗ್ಗೆ ಮಾತನಾಡುತ್ತ ಇದ್ದರು. ಯಾರೋ ಸ್ನೇಕ್ ಶ್ಯಾಮ್ ಗೆ ಫೋನ್ ಹಚ್ಚಲು, ಇನ್ನು ಯಾರೋ ಗೂಗಲ್ ನಲ್ಲಿ ಅವರ ಹೆಸರು ಹುಡುಕುತ್ತ ಇರಬೇಕಾದರೆ......ಅದೇ ಗೇಟ್ ಮುಂದಿರುವವ.....ಗಟ್ಟಿ ದನಿಯಲ್ಲಿ ಹಾವು ನಾನು ಹಿಡಿದುಕೊಡುತ್ತೇನೆ ಅಂತ ಹೇಳಿ ಮನೆ ಮಾಲೀಕಳ ಮುಂದೆ ತಲೆ ಕೆರೆದುಕೊಳ್ಳುತ್ತ ನಿಂತಿದ್ದ. "ಆದರೆ ಕಾSSSSSಸು" ಅಂತ ರಾಗ ಹಾಕಿದ್ದ . ಎಷ್ಟು ಕೊಡ್ಬೇಕಪ್ಪ? ಒಂದು ಆ ಹಾವು ಇಲ್ಲಿಂದ ಹೋದರೆ ಸಾಕು. ಮಕ್ಕಳು ಶಾಲೆಯಿಂದ ಬರುವ ವೇಳೆ"...
"500 ಕೊಡಿ ಸಾಕು"
:ಏನು 500 ಆ? 250 ಕೊಡ್ತೀನಪ್ಪ" ....ಅಂದಾಗ ಚೈತ್ರಳಿಗೆ ನಗು ತಡೆದುಕೊಳ್ಳಲಾಗಲಿಲ್ಲ. ಹಾವು ಅಂತ ಹೆದರಿಕೆ..ಅದರಲ್ಲೂ ಚೌಕಾಸಿ..ಅಂತ ಅವಳು ಮನೆಯ ಹಾದಿ ಹಿಡಿದಿದ್ದಳು. ಇದಾಗಿ  15 ದಿನ ಆಗಿರ ಬಹುದು
ಟೀ ರೆಡಿಯಾಗಿ ಇನ್ನೇನೂ ಗ್ಲಾಸಿಗೆ ಸೋಸಿ ಹಾಕಬೇಕು ಅನ್ನುವಷ್ಟರಲ್ಲಿ ಬಾಗಿಲ ಗಂಟೆಯ ಸದ್ದಾಯಿತು. ಚೈತ್ರಾ ಬಾಗಿಲು ತೆಗೆದಾಗ ಅವನು ನಿಂತಿದ್ದ. ’ಏನು’? ಎಂಬಂತೆ ಅವಳು ಅವನ ಕಡೆಗೆ ನೋಡಿದಳು
"ಮೇಡಂ ಈಗಷ್ಟೆ ಕಿಟಕಿ ಸಂದಿಯಿಂದ ಹಾವು ಬಂದಿದ್ದನ್ನು ನೋಡಿದೆ. ನಿಮಗೆ ಹೇಳುವಾ ಅಂತ ಬಂದೆ’ ಅಂದ...
"ಇಲ್ಲವಲ್ಲ"....ಅವಳಿಗೆ ಅವನ ಆಟ ಆಗಲೇ ಗೊತ್ತಾಗಿತ್ತು...
ಹೀಗೆ ಮನೆಯೊಳಗೆ ಹಲ್ಲು ಕಿತ್ತ, ಮತ್ತು ಬೆರೆಸಿದ ನಾಗರ ಹಾವನ್ನು ಬಿಡುವುದು. ಆಮೇಲೆ ಅದನ್ನು ಹಿಡಿಯುವ ನೆಪದಲ್ಲಿ ಮನೆಯಲ್ಲಿ ಹೊಕ್ಕುವುದು, ಅದನ್ನು ಹಿಡಿಯಲು ದುಡ್ಡು ಪಡೆಯುವುದು ಮಾತ್ರವಲ್ಲ, ಕೈಗೆ ಸಿಕ್ಕಿದ ಬೆಲೆ ಬಾಳುವ ಸಾಮಾನು ಕದಿಯುವುದು..ಮನೆಯಲ್ಲಿ ಇರುವ ಜನರ ಬಗ್ಗೆ ಮಾಹಿತಿ ಕಲೆಹಾಕಿ ಅವರು ಇಲ್ಲದಿದ್ದಾಗ  ಆ ಮನೆಗೆ ಕನ್ನ ಹಾಕುವುದು....
"ಇಲ್ಲ ಮೇಡಂ ಹುಡುಕುವಾ. ನಾಗರಹಾವು ಕಂಡಂಗೆ ಆಯ್ತು". 
"ಇಲ್ಲ ಈ ನೆಲ ತುಂಬಾ ಜಾರುತ್ತೆ ಎಲ್ಲೂ ತಪ್ಪಿಸಿಕೊಂಡು ಹೋಗಲ್ಲ, ಸಿಕ್ಕಿದರೆ ಆಮೇಲೆ ನೋಡುವಾ ಅಂತ ಬಾಗಿಲು ಹಾಕಿದಳು ಚೈತ್ರಾ. ಅವಳ ಪೋಲಿಸ್ ಫ್ರೆಂಡ್ ಗೆ ಅವಳು ಆಗಲೇ ಎಸ್ ಎಮ್ ಎಸ್ ಮಾಡಿ ಆಗಿತ್ತು. ಇನ್ನೇನೂ ಅವನು ಬರುತ್ತಾನೆ ಅಂತ ಕಾಯುತ್ತ ಇದ್ದಳು. ಅವನು ಹೊರಗೆ ಕಾಯುತ್ತ ಇದ್ದ......
:-)

July 16, 2015

ಬಾಲ್ಕನಿಯಿಂದ..............ಮಾಲತಿ

ಸುಮಾರು ದಿನಗಳೇ ಆಯ್ತು ಈ ಕಡೆ ಬಂದಿಲ್ಲ. ಸ್ವಲ್ಪ ಟೂರ್ ಆಯ್ತು, ಸ್ವಲ್ಪ ದಿನ ಲ್ಯಾಪ್ ಟಾಪ್ ಕೆಟ್ಟು ಹೋಗಿತ್ತು ಅಂತ ನೆವ ಏನೋ ಇದೆ....ಆದರೆ ಬಾಲ್ಕನಿ ಬಳಿಯಿಂದ ಒಳಗೆ ಬಂದು ಬ್ಲಾಗ್ ತುಂಬೋದು ಬೋರಿಂಗ್ ಅಂದೆ ರಾಯರಿಗೆ..ಅದಕ್ಕೆ ಅವರು ಲ್ಯಾಪ್ ಟಾಪ್ ಬಾಲ್ಕನಿ ಗೆ ತೆಗೊಂಡು ಹೋಗಿ ಬರಿ ಅಂದ್ರು..ಹಾ...ಗಾ....ಗಿ


ನಮಗೆ ಇಂಡಿಪೆಂಡೆಂಟ್ ಮನೆ ಕಟ್ಟಿಸಲಾಗುದಿಲ್ಲ ಎಂದು ತಿಳಿದಾಗ ಮಹಾ ಬೇಸರವಾಗಿತ್ತು. ಫ್ಲ್ಯಾಟ್ ಆದರೆ ನನಗೆ ಕನಿಷ್ಠ ಒಂದಾದರೂ ಬಾಲ್ಕನಿ ಇರಬೇಕೆಂದು ಖಡಾಖಂಡಿತ ಶರತ್ತು ಹಾಕಿದ್ದೆ. ಹಾಗಾಗಿ ಈ ಫ್ಲ್ಯಾಟ್ ನಲ್ಲಿ ಒಂದಲ್ಲ ಎರಡಲ್ಲ ಮೂರು ಬಾಲ್ಕನಿಗಳು. ಅದರಲ್ಲಿ ಹಾಲ್ ಗೆ ತಾಗಿ ಇರುವ ಬಾಲ್ಕನಿ ನನ್ನದು. ಕೂರಲಿಕ್ಕೆ ಆರಾಮದಾಯಕ ಕುರ್ಚಿ, ನನ್ನ ಟೀ ಇಡಲು ಪುಟ್ಟ ಸ್ಟೂಲ್ ಎಲ್ಲ ಇದೆ. ನಿದ್ದೆ ಬಾರದಾಗಲೆಲ್ಲ ಅಲ್ಲೆ ನನ್ನ ವಾಸ್ತವ್ಯ. ನನ್ನ ಕೋಜಿ ಕಾರ್ನರ್..:-)


ಬೆಳಿಗ್ಗೆ ನಾಲ್ಕಕ್ಕೆ ತೆರೆದ ಬಾಲ್ಕನಿ ಬಾಗಿಲು ರಾತ್ರಿ ನೇ ಬಂದ್ ಮಾಡುವುದು. ನಾನು ಹಲ್ಲು ಉಜ್ಜಿ ಟೀ ತಯಾರಿಸುವಷ್ಟರಲ್ಲಿ ಬಿಲ್ಡಿಂಗ್ ಎದುರಿನ A2B ನಲ್ಲಿ ಚಟುವಟಿಕೆಗಳು ಪ್ರಾರಂಭ. ಸಿಲಿಂಡರ್ ಎಳೆಯುವುದು, ಪಾತ್ರೆ ದಡಬಡಾಯಿಸುವುದು, ಗಟ್ಟಿ ಗಂಟಲಲ್ಲಿ ಅಷ್ಟು ಬೆಳಿಗ್ಗೆ ಜಗಳವಾಡುವವರೂ ಇದ್ದಾರೆ. ವಾಚ್ ಮ್ಯಾನ್ ಅವನ ಪಾಲಿನ ಬಿಸಿ ಬಿಸಿ ಕಾಫಿಯನ್ನು ಹಿಡಿದುಕೊಂಡು ಹೋಟಲ್ ನ ಗೇಟ್ ಎದುರಿನ ಪೇವ್ ಮೆಂಟ್ ಮೇಲೆ ಕೂತು ಅವನ ಕಾಫಿ ಹೀರುತ್ತಾನೆ. ಸ್ವಲ್ಪ ಸ್ವಲ್ಪವೇ ಬೆಳಕು ಮೂಡುವಾಗ, ಆಕಾಶದಲ್ಲಿ ಚಲಿಸುವ ಮೋಡಗಳು, ಸೂರ್ಯ ಮೂಡಿ ಅವನ ಬಣ್ಣ ಆಕಾಶದಲ್ಲೆಲ್ಲ ಹರಡುವಾಗ ಸಣ್ಣ ದೊಡ್ಡ ಹಕ್ಕಿಗಳ ಕಲರವ ಶುರು, ಕೋಗಿಲೆಗಳ ಜಗಳ, ಒಬ್ಬರನ್ನೊಬ್ಬರು ಮೀರಿಸುವ ’ಕುಹೂ’ ಗಳು.

 ನನ್ನ ಬಾಲ್ಕನಿಗೆ ಎದುರಾಗಿ ಇರುವುದು ದೊಡ್ಡ ನೇರಳೆ ಮರ. ಈ ವರ್ಷ ಹಣ್ಣು ಬಿಡುವುದು ಸ್ವಲ್ಪ ಲೇಟ್. ಹಿಂದಿನ ವರ್ಷ ಬೇಸಿಗೆ ರಜೆ ಸಮಯದಲ್ಲೇ ಭರಪೂರ ನೇರಳೆ ಹಣ್ಣು ಬಿಟ್ಟಿದ್ದು, ಪುಟ್ಟ ಮಕ್ಕಳು ಮರದ ಮೇಲೆ ಹತ್ತಿ ಹಣ್ಣು ಕೀಳುತ್ತಿದ್ದರು. ಈ ವರ್ಷ ಎಲ್ಲ ರಸ್ತೆಗೆ ಬಿದ್ದು, ಅದರ ಮೇಲೆ ವಾಹನಗಳ ಓಡಾಟದಿಂದ ಕಪ್ಪು ರಸ್ತೆಯ ಮೇಲೆಲ್ಲ ನೇರಳೆ ಕಲೆ...ಅದೇ ರಸ್ತೆ ಬಿಳಿ ಬಣ್ಣದ್ದಾದರೆ ಚೆಂದ ಕಾಣ್ತಿತ್ತು ಅಂತ ನನಗೆ ಅನಿಸಿ ನಾನು ನಗುತ್ತೇನೆ.


 ಸ್ವಲ್ಪ ಹೊತ್ತಿಗೆ A2B ಯ ಹೆಣ್ಣು ಕೆಲಸಗಾರರು ಬಾಗಿಲಿಗೆ ನೀರು ಹಾಕಿ ಚೆಂದದ ರಂಗೋಲಿ ಬರೆಯುತ್ತಾರೆ. ಬೆಳಿಗ್ಗೆ ಸಂಜೆ ವಿಧವಿಧವಾದ ರಂಗೋಲಿ, ಹಬ್ಬ ಹುಣ್ಣಿಮೆ ಹರಿದಿನಗಳಲ್ಲಿ ಬಣ್ಣ ತುಂಬಿಸಿದ ದೊಡ್ಡ ದೊಡ್ಡ ರಂಗೋಲಿಗಳು. ಈ ಮಧ್ಯೆ ಅಡಿಗೆ ಮನೆಗೆ ನಾನು ಹೊಕ್ಕು ಬೆಳಗ್ಗಿನ ತಿಂಡಿಯ ತಯಾರಿ. ಅದು ಹೇಗಪ್ಪ...ಒಂದು ದೋಸೆ ಹುಯ್ದು...ಅಡಿಗೆ ಮನೆಗೆ ಬಾಲ್ಕನಿಯಲ್ಲಿ ಕತ್ತು ಉದ್ದ ಮಾಡಿ ಕೆಳಗಿನ ಆಗು ಹೋಗುಗಳ ಬಗ್ಗೆ ಗಮನ, ಈಗ ದೊಡ್ಡ ದೊಡ್ಡ ವ್ಯಾನ್ ನಲ್ಲಿ ಹೋಟಲ್ ಗೆ ತರಕಾರಿ ಸರಬರಾಜು...ದೊಡ್ಡ ದೊಡ್ಡ ಮೂರು ಗೋಣಿ ಚೀಲದಲ್ಲಿ ಆಲೂಗಡ್ಡೆ, ನಾಲ್ಕೈದು ಗೊನೆ ಬಾಳೆಕಾಯಿ..ಬಾಳೆಕಾಯಿ ಯಾಕಪ್ಪ ಅಂತ ಕೆಲ ದಿನ ತಲೆ ಕೆಡಿಸಿದ್ದೆ..ಆ ಮೇಲೆ ಫ್ಲ್ಯಾಶ್ ಆಯ್ತು..ಅದು ಜೈನ್ ಪಾವ್ ಭಾಜಿಗೆ ಅಂತ....ಅವರು ಆಲೂಗಡ್ಡೆ ಬದಲಾಗಿ ಬಾಳೆಕಾಯಿ ಬಳಸೋದು.....ಐದು ಗೋಣಿಚೀಲ ಫುಲ್ ಕಾಲಿಫ್ಲವರ್...ಅಡುಗೆ ಮನೆಗೆ ವಾಪಸ್ ಆಗಿ ದೋಸೆ ಮಗುಚಿ ಪುನ: ನನ್ನ ಸವಾರಿ ಬಾಲ್ಕನಿಗೆ. ಈಗ ಸ್ವೀಟ್ಸ್ ನ, ಹಾಲಿನ, ಹಾಗೂ ಆನಂದ ಭವನ್ ನಿಂದ ಬೇರೆ ಕಡೆ ಅಂದ್ರೆ ಆರ್ಡರ್ ಇದ್ದ ಕಡೆ ತಿಂಡಿ ಸರಬರಾಜು ಮಾಡುವ ವ್ಯಾನ್ ಪಾರ್ಕ್ ಮಾಡುವ ಝಟಾಪಟಿ/ಜಗಳ ಆಟ ಜೋಕ್ಸ್ ನಗು.....ಇನ್ನೊಂದು ಹೊಸ ವಿಷಯ ನೋಡಿದ್ದೇನೆ ವ್ಯಾನ್ ಹತ್ತಿರ ನಿಂತು ಡ್ರೈವರ್ ಗಳ ಸಿಂಗಲ್ ಫೋಟೊ ತೆಗೀತಿರ್ತಾರೆ ಯಾರಾದ್ರು..

ಸ್ವಲ್ಪ ಸಮಯ ಮನೆಯ ಇತರ ಕೆಲಸಗಳಾದ ಕಸ ಗುಡಿಸುವುದು, ಪಾತ್ರೆ ತೊಳೆಯುವುದು, ನೆಲ ವರೆಸುವುದು ಮುಂತಾದ್ದು ನಡೆದು ಸಾಧಾರಣ ಹನ್ನೊಂದು ಗಂಟೆಗೆ ನನ್ನ ಎಲ್ಲ ಕೆಲಸಗಳೂ ಮುಗಿದಿರುತ್ತವೆ. ಪುಸ್ತಕ ಹಿಡಿದುಕೊಂಡು ಮಧ್ಯ ಮಧ್ಯ ಕೆಳಗಿನ ವಿದ್ಯಮಾನಗಳ ಮೇಲೆ ಒಂದು ನೋಟ ಇಡುತ್ತೇನೆ. ಈಗ ಕೆಳಗಿನ ಫೂಟ್ ಪಾತ್ ಮೇಲೆ ವಯಸ್ಸಾದ ಅಪ್ಪ , ಅಮ್ಮ ಮತ್ತು ಮಗ ಬರುತ್ತಾರೆ. ಮಗ ರಿಕ್ಷಾ ಓಡಿಸುತ್ತಾನೆ. ಅವನು ಫೂಟ್ ಪಾತ್ ಮೇಲೆ ಕಸ ಗುಡಿಸಿ ನೀರು ಸಿಂಪಡಿಸಿ, ಅಪ್ಪನಿಗೆ ಅವನ ಪೆಟ್ಟಿಗೆ ಅಂಗಡಿ ಸ್ಥಾಪಿಸುವಲ್ಲಿ ಸಹಾಯ ಮಾಡುತ್ತಾನೆ. ಪರ್ಮನೆಂಟ್ಲಿ ಪೇರಿಸಿದ್ದ ಕಲ್ಲುಗಳ ಮೇಲೆ ಒಂದು ಹಲಗೆ ಇಟ್ಟರಾಯ್ತು.makeshift ಅಂಗಡಿ ರೆಡಿ. ಹಲಗೆ ನಮ್ಮ ಬಿಲ್ಡಿಂಗ್ ನ ಸೆಕ್ಯೂರಿಟಿ ರೂಮ್ ನ ಹಿಂಭಾಗದ ಜಾಗ ದಲ್ಲಿ ಇಡುವುದು. ರಿಕ್ಷದಲ್ಲಿಟ್ಟುಕೊಂಡ ಎರಡು ದೊಡ್ಡ ಫ್ಲಾಸ್ಕ್ ಈಗ ಹೊರಗೆ ಬರುತ್ತವೆ, ಹಾಗೆ ಪ್ಲಾಸ್ಟಿಕ್ ಯೂಸ್ ಅಣ್ಡ್ ಥ್ರೋ ಗ್ಲಾಸ್ಗಳು...ಎರಡು ಗಾಜಿನ ಭರಣಿ ಮಿಠಾಯಿಗಳು, ಮುಖ್ಯ ಸಿಗರೇಟು/ಬೀಡಿ ಪೊಟ್ಟಣಗಳು. ಹತ್ತಿರದಲ್ಲೇ ಆನಂದ ಭವನ ಇದ್ದರೂ, ಈ ಪೆಟ್ಟಿಗೆ ಅಂಗಡಿಗೆ ಗ್ರಾಹಕರು ಹಲವಾರು. ಬೆರಳ ಎಡೆಯಲ್ಲಿ ಸಿಗರೇಟು/ಬೀಡಿ ಸೇರಿಸಿ ಅದೇ ಕೈನಿಂದ ಟೀ ನೋ ಕಾಫಿ ನೋ ಹಿಡಿದುಕೊಂಡು ಇನ್ನೊಂದು ಕೈ ನಲ್ಲಿ ಸೆಲ್ ಫೋನ್ ಹಿಡಿದುಕೊಂಡು ಗಟ್ಟಿ ದನಿಯಲ್ಲಿ ಪಂಚಾಯತಿಕೆ. ದೊಡ್ಡ ಗಾಡಿ ಗಳಲ್ಲಿ ಬರುವ ಗ್ರಾಹಕರೂ ಅವರಿಗಿದ್ದಾರೆ, ಬಿಳಿ ಬಣ್ಣದ ಬಟ್ಟೆ ಹಾಕಿದ (ರಾಜಕೀಯ ಪುಢಾರಿಗಳು according to me)), ಕೈಗೆ ಕುತ್ತಿಗೆಗೆ ದೊಡ್ಡ ಬಂಗಾರದ ಬ್ರೇಸ್ ಲೇಟ್/ಚೈನ್  ಹಾಕಿದವರು, ಕಾರು ಮಾರುವವರು , ಕದ್ದು ಮುಚ್ಚಿ ಸಿಗುವ ಪ್ರೇಮಿಗಳು..ಹೀಗೆ ಹತ್ತು ಹಲವಾರು ಸೀನ್ ಗಳು.
ಸೀಟಿ ಊದಿ ಊದಿ ಹೋಟಲ್ ಗೆ ಬರುವ ಗ್ರಾಹಕರ ಕಾರುಗಳು, ಟೂ ವ್ಹೀಲರ್ ಪಾರ್ಕ್ ಮಾಡಲು ಸಹಕರಿಸುತ್ತಾನೆ ಹೋಟಲ್ ನ ವಾಚ್ ಮ್ಯಾನ್. ಕೆಲವರು ಕೆಲವೊಮ್ಮೆ ಅವನು ಮುಂದು ಮಾಡಿದ ಕೈಗೆ ಕಾಸು ತುರುಕಿಸುತ್ತಾರೆ. ಅವನು ಒಂದು ಸೆಲ್ಯೂಟ್ ಹೊಡೆದು ಅವರನ್ನು ಬೀಳ್ಗೋಡುತ್ತಾನೆ. ಕೆಲವೊಮ್ಮೆ ಖಾಲಿ ಕೈ ಆಗ ಅವನು ವಾಹನ ಕಣ್ಮರೆಯಾಗುವ ತನಕ ಹ್ಯಾಪ್ ಮೋರೆ ಹಾಕಿಕೊಂಡು ನೋಡುತ್ತಿರುತ್ತಾನೆ. ಕೆಲವೊಮ್ಮೆ ತಿಂಡಿಗಳನ್ನು ಕಾರ್ ಗೆ ತೆಗೊಂಡು ಹೋಗಿ ಕೊಡುವುದೂ ಇದೆ ಅವನು. ಮಧ್ಯಾಹ್ನ ಪೆಟ್ಟಿಗೆ ಅಂಗಡಿಯವರ ಬಳಿ ಕೂತು ಮನೆಯಿಂದ ತಂದ ಬುತ್ತಿ ಬಿಚ್ಚಿ ಉಣ್ಣುತ್ತಾನೆ. ಮಳೆ ಬರುವಾಗ ಕಾಮನಬಿಲ್ಲಿನ ಬಣ್ಣದ ಛತ್ರಿ ಹಿಡಿದು ಗ್ರಾಹಕರನ್ನು ಅತ್ತ ಇತ್ತು ಸಾಗಿಸುತ್ತಾನೆ ಕೂಡ. ಅಜ್ಜ ಒಂದು ದೊಡ್ಡ ಫ್ಲೆಕ್ಸ್ ಬ್ಯಾನರ್ ಇಟ್ಟುಕೊಂಡಿದ್ದಾನೆ. ಮಳೆ ಬಂದರೆ ಅದನ್ನು ಅವನ ಅಂಗಡಿ ಮುಚ್ಚಲು ಉಪಯೋಗಿಸುತ್ತಾನೆ

ಪೆಟ್ಟಿಗೆ ಅಂಗಡಿ ಅಜ್ಜ ಮಧ್ಯಾಹ್ನ ಮನೆಗೆ ಹೋಗಿ ಊಟ ಮಾಡಿ ಒಂದು ಸಣ್ಣ ನಿದ್ದೆ ಮಾಡಿ (ಇದು ನನ್ನ ಅಂದಾಜು) ಬರುತ್ತಾರೆ, ಆಗ ಅಜ್ಜಿನೆ ಅಂಗಡಿ ಸಂಭಾಳಿಸುವುದು. ಯಾರಾದ್ರು ಕಿರಿಕ್ ಮಾಡಿದ್ರೆ ಗಟ್ಟಿ ದನಿಯಲ್ಲಿ ಬೈ ಲಿಕ್ಕೂ ಸೈ.
ಇನ್ನು ಸಂಜೆ ಆಗುವಾಗ ನಮ್ಮ ಬಿಲ್ಡಿಂಗ್ ನ ಪುಟ್ಟ ಮಕ್ಕಳು ಶಾಲೆಯಿಂದ ಬರುವ ಸಮಯ. ಅವರ ಕಲರವ. ಅಜ್ಜ/ಅಜ್ಜಿ ಮೊಮ್ಮಕ್ಕಳ ಪ್ರೀತಿ..ಸಂಜೆ ಬಿಲ್ಡಿಂಗ್ ಕೆಲಗಡೆ  ಅವರ ಆಟ. ಹಕ್ಕಿಗಳು ತಮ್ಮ ಗೂಡಿಗೆ ಮರಳುವ ಪರಿಯಿದೆ ಅಲ್ಲವಾ ನೋಡಲು ಎರಡು ಕಣ್ಣು ಸಾಲದು. ಬೆಳ್ಳಕ್ಕಿ, ಕಪ್ಪಕ್ಕಿ, ಬಾರ್ಬೆಟ್, ಗಿಡುಗಗಳು, ತುಂಬಾ ಸದ್ದು ಗದ್ದಲ ಮಾಡುವ ಪುಟ್ಟ ಕಪ್ಪು ಹಕ್ಕಿಗಳು (ಅದರ ಹೆಸರು ಇನ್ನೂ ಕಂಡು ಹಿಡಿಯಲಾಗಿಲ್ಲ) ಅದರಲ್ಲೂ ಗಿಳಿಗಳ ಹಿಂಡು ನೋಡುವುದು ಚೆಂದ.

ನಮ್ಮ ಬಿಲ್ಡಿಂಗ್ ಎದುರುಗಡೆಯ ಕೌಂಪೌಂಡ್ ಕಟ್ಟಿಸಿರುವ ಖಾಲಿ ಜಾಗ ನಮ್ಮ ಸೊಸೈಟಿಯದ್ದೆ. ಅಲ್ಲಿ ವಾರ್ಯಾಂತದಲ್ಲಿ ಸಂಗೀತ, ವಯೊಲಿನ್, ಭರತನಾಟ್ಯ ಹಾಗೂ ಕಂಗ್ ಫೂ ತರಬೇತಿಗಳು. ಮೊದಲು ಮರಗಳು ಚಿಕ್ಕವಿದ್ದಾಗ ಅವೆಲ್ಲ ಕಣ್ಣಿಗೆ ಕಾಣುತ್ತಿದ್ದವು. ಈಗ ಮರಗಳು ದಟ್ಟವಾಗಿ ಬೆಳೆದು ಅಲ್ಲಿನ ನೋಟ ಸ್ಪಷ್ಟವಾಗಿ ಕಾಣ ಸಿಗುವುದಿಲ್ಲ. ಅಲ್ಲದೇ ವರ್ಷಕ್ಕೆ ಎರಡು ಬಾರಿ ಬೆಂಗಾಲಿಗಳು ಕಾಲಿ ಮಾತೆಯ ವಿಗ್ರಹ ಇಟ್ಟು ಡಾನ್ಸ್/orchestra, ಬೆಂಗಾಲಿಗಳ ವಿಶೇಷ ತಿಂಡಿಗಳ ಸ್ಟಾಲ್ ಎಲ್ಲ ಇರುತ್ತವೆ. ವರ್ಷಕ್ಕೊಂದು ಸಲ ನಮ್ಮ ಬಿಲ್ಡಿಂಗ್ ನಲ್ಲಿ ವಾಸಿಸುವರದ್ದು ಒಂದು ದಿನದ ಸಾಂಸ್ಕೃತಿಕ ಚಟುವಟಿಕೆ ಕೂಡ ಆ ಖಾಲಿ ಜಮೀನಿನಲ್ಲಿ ನಡೆಯುತ್ತವೆ. ನಾವು ತಿಂಡಿ ಕರಕುಶಲ ಸಾಮಾನುಗಳ ಸ್ಟಾಲ್ ಇಡಬಹುದು. ಅಕ್ಕ ಬಿಸ್ಕೂಟ್ ಫ್ಯಾಕ್ಟರಿಯ ಸ್ಟಾಲ್ ಇಟ್ಟಿದ್ದಳು ಹಿಂದಿನ ವರ್ಷ. ಎಲ್ಲ sold out ಆಗಿ ನಮಗೆ ಖುಶಿ. :-)
ಮತ್ತೆ ರಾತ್ರಿ ಲೈಟು ಕಂಬದ ಬೆಳಕಿನಡಿ ನಡೆಯುವ ವಿದ್ಯಮಾನಗಳು. ಅಜ್ಜ ಅಜ್ಜಿ 7 ಗಂಟೆಗೆ ಅವರ ಅಂಗಡಿ ಮುಚ್ಚುತ್ತಾರೆ. ಊರಿಗೆ ಹೋಗುವವರು ಹೋಟಲ್ ನಲ್ಲಿ ತಿಂದು ಬಾಲ್ಕನಿ ಎದುರಿನ ರಸ್ತೆಯಲ್ಲಿರುವ ಬಸ್ ಸ್ಟಾಂಡ್ ಗೆ ಹೋಗಿ ನಿಂತರೆ ಅವರ ಬಸ್ ಅವರನ್ನು ಅಲ್ಲಿಂದಲೇ ಪಿಕ್ ಮಾಡುತ್ತವೆ. ನಮಗೂ ಅನುಕೂಲ. ಪ್ರತೀ ಗುರುವಾರ ರಿಕ್ಷಾದಲ್ಲಿ ಬಂದು ಹಳೆಯ ಸಿನಿಮಾ ಪೋಸ್ಟರ್ ಹರಿದು ಬಿಟ್ಟು ಚಕಾ ಚಕ್ ಗೋಂದು ಹಚ್ಚಿ, ಮರು ದಿನ ತೆರೆ ಕಾಣುವ ಎರಡು ಮೂರು ಹೊಸ ಸಿನಿಮಾಗಳ ಪೋಸ್ಟರ್ ಬರೀ ಅರ್ಧ ನಿಮಿಷದಲ್ಲಿ ಹಚ್ಚಿಟ್ಟು (ಗೋಂದು ದೊಡ್ಡ ಪೈಂಟ್ ಬಕೆಟ್ ನಲ್ಲಿ ತರುವುದು) ಫುರ್ ಅಂತ ರಿಕ್ಷಾ ಓಡಿಸುತ್ತಾ ಹೋಗುವ ಹುಡುಗ....
ಹುಣ್ಣಿಮೆಗಂತೂ ಚಂದಿರನನ್ನು ನೋಡುವ ಕಾಯಕ ನನಗೆ. ಏನೂ ಇಲ್ಲದಿದ್ದರೆ ನಿರಂತರ ಸಾಗುವ ಟ್ರಾಫಿಕ್ ಅಂತೂ ಇದ್ದೆ ಇದೆ. ಇವೆಲ್ಲದರ ಮಧ್ಯ ಅಕ್ಕನ ಬಾರ್ಬೆಕ್ಯೂ ಕಾರ್ಯಕ್ರಮ ಇರುತ್ತದೆ.

ಬ್ರಿಟಿಶ್ ಲೈಬ್ರರಿ ಬಿಟ್ಟರೆ ನಾನು ಎಲ್ಲೂ ಹೋಗುವುದಿಲ್ಲ ಇತ್ತೀಚಿಗೆ. ನನ್ನ ಬಾಲ್ಕನಿ ನೆ ನನ್ನ ಪ್ರಪಂಚ.....ಫ್ರೆಂಡ್ಸ್ ಊ ಬೇಡ, ಸಂಬಂಧಿಕರೂ ಬೇಡ..ಮನೆಗೆ ಬಂದವರ ಸತ್ಕಾರ ಬಿಟ್ಟರೆ.. ನಾನು - ಬಾಲ್ಕನಿ, ಟೀ ಮತ್ತು ಪುಸ್ತಕ.....
:-)