ಅವಳು ಅವನಿಗೆ ತಾನು ತಾಯಾಗಲಿರುವ ಬಗ್ಗೆ ಹೇಳಿದಾಗ ಅವನು ಕೇಳಿದ ಪ್ರಶ್ನೆ 'ಅದು ಹೇಗೆ ಸಾಧ್ಯ?' ಅಂತ. ಅವಳೋ ಕಕ್ಕಾಬಿಕ್ಕಿ
ಪ್ರಿಯಂವದಾಳಿಗೆ ಐದು ಜನ ಅಕ್ಕಂದಿರು ಇಬ್ಬರು ತಂಗಿಯಂದಿರು. ಅಕ್ಕಂದಿರ ಮದುವೆ, ಬಾಣಂತನ, ಮಕ್ಕಳು ಅಂತ ನೋಡಿ ಅವಳಿಗೆ ರೇಜಿಗೆ ಅನ್ನಿಸಿ. ತಾನು ಯಾವತ್ತೂ ಮದುವೆಯಾಗಲಾರೆನೆಂದು ಪ್ರತಿಜ್ಞೆ ಮಾಡಿದ್ದಳು. ಹಾಗೆ ವಿಜ್ಞಾನದ ಉನ್ನತ ಪದವಿಧರೆಯಾದ ಅವಳು ವಿಜ್ಞಾನಿಯೊಬ್ಬರ ಬಳಿ ಎಸಿಸ್ಟೆಂಟ್ ಆಗಿ ಕ್ಯಾನ್ಸರ್ ರೋಗದ ಮೇಲೆ, ಅದನ್ನು ಗುಣಪಡಿಸುವತ್ತ ಸಂಶೋಧಕಿಯಾಗಿ ಕೆಲಸಕ್ಕಿದ್ದಳು. ಹೀಗಿರುವಾಗ ಒಂದು ದಿನ ಅವಳ ತಂಗಿಗೆ ಒಬ್ಬನ ಜತೆ ಪ್ರೇಮವಾಗಿ ಮದುವೆಯಾಗಲು ತುದಿಗಾಲ ಮೇಲೆ ನಿಂತಿದ್ದಳು. ಆದರೆ ಅವಳಿಗಿಂತ ದೊಡ್ಡವಳಿಗೆ ಮದುವೆಯಾಗದೆ ಚಿಕ್ಕವಳಿಗೆ ಮದುವೆ ಮಾಡುವುದು ಮನೆಯ ಹಿರಿಯರಿಗೆ ಸರಿ ಬರಲಿಲ್ಲ. 38 ರ ಪ್ರಾಯದ ಪ್ರಿಯಂವದೆಗೆ ಗಿಣಿಗೆ ಹೇಳಿದ ಹಾಗೆ ಹೇಳಿದರೂ ಅವಳು ಸುತಾರಾಂ ಒಪ್ಪಲಿಲ್ಲ. ಸರಿ ಹಾಗಾದ್ರೆ ಚಿಕ್ಕವಳಿಗಾದ್ರು ಮದುವೆ ಮಾಡಿ ಮುಗಿಸುವ ಅಂದ್ರೆ ಅವಳ ಪ್ರಿಯಕರನ ಕುಟುಂಬಕ್ಕೆ ಗುಮಾನಿ. ನೋಡಲು ಇಷ್ಟು ಚೆನ್ನಾಗಿದ್ದಾಳೆ ಅಕ್ಕ, ಸ್ವಂತ ದುಡಿಮೆಯಿದೆ ಆದರೆ ಯಾಕೆ ಮದುವೆಯಾಗುತ್ತಿಲ್ಲ ಅಂತ ಅವರಿಗೆ ತಲೆ ಬಿಸಿ. ಏನೋ ಊನವನ್ನು ಮುಚ್ಚಿಡುತ್ತಿದ್ದಾರೆ ಅಂತ. ಹೀಗೆ ಮದುವೆ ಮುಂದೂಡುತ್ತಲೆ ಇರುವಾಗ ತಂಗಿ ತಲೆ ಕೆಟ್ಟವರಹಾಗೆ ವರ್ತನೆ ಶುರು ಮಾಡಿದ್ಲು. ಆಗ ಕುಟುಂಬದ ಹಿರಿಯರೆಲ್ಲ ಸೇರಿ ಪ್ರಿಯಂವದೆಗೆ ಛಿಮಾರಿ ಹಾಕಿದರು - ನಿನ್ನಿಂದ ನಿನ್ನ ತಂಗಿಯ ಜೀವನ ಹಾಳಾಗುತ್ತಿದೆಯೆಂದು. ಅವಳು 'ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ, ನಾನು ಆಶ್ರಮ ಸೇರಿ ಸನ್ಯಾಸಿ ಆಗುತ್ತೇನೆ ಅಂತ ಗಲಾಟೆ ಮಾಡಲು ಶುರು ಮಾಡಿದಳು. ಆಗ ಸಿಕ್ಕಿದ ವರ ಸುಮತೀಂದ್ರ.
ಸುಮತೀಂದ್ರನಿಗೆ ಮೂವರು ಅಕ್ಕಂದಿರು. ತಂದೆ ಚಿಕ್ಕ ಪ್ರಾಯದಲ್ಲೇ ಕಾಲಾವಸಾನರಾಗಿದ್ದರು. ಕೈ ತುಂಬ ಸಂಬಳ ಮಾತ್ರವಲ್ಲ ಗದ್ದೆ ತೋಟಗಳಿಂದಲೂ ಸಾಕಷ್ಟು ಆದಾಯ ಬರುವ ಸುಮತೀಂದ್ರನಿಗೆ ಮೂವರು ಅಕ್ಕಂದಿರ ಮದುವೆ ಮಾಡಿ ಮುಗಿಸಬೇಕಾದ್ರೆ ಸಾಕು ಬೇಕಾಯಿತು. ನೋಡಲು ಒಂದು ಚೂರು ಲಕ್ಷಣವಿಲ್ಲದ ಹುಡುಗಿಯರನ್ನು ದಂಡಿಯಾಗಿ ವರದಕ್ಷಿಣೆ ಕೊಟ್ಟು ಸಾಗ ಹಾಕಿದ. ಅಮ್ಮನೂ ತೀರಿಕೊಂಡ ಮೇಲೆ ಅವನು ದುಡಿಯುತ್ತ ಕುಡಿಯುತ್ತ ಇತ್ತೀಚಿನ ಐದು ವರ್ಷಗಳಲ್ಲಿ ಹಾಯಾಗಿದ್ದ.ಮದುವೆ ಮಾಡಿಕೊಳ್ಳುವ ಯೋಚನೆ ಅವನಿಗೆ ಖಂಡಿತ ಇರಲಿಲ್ಲ. ಪ್ರಿಯಂವದಾ ಹಾಗೂ ಸುಮತೀಂದ್ರ ಮದುವೆ ಮಾಡಿಸಿದವರು ಎರಡೂ ಕುಟುಂಬದ ನಿಕಟ ಪರಿಚಯದವರು ಮತ್ತು ಎರಡೂ ಕುಟುಂಬಕ್ಕೆ ಬೇಕಾದವರು. ಪ್ರಿಯಂವದಾ ಹಾಗೂ ಸುಮತೀಂದ್ರರಿಬ್ಬರನ್ನೂ ಒಂದು ಸಲ ಒಟ್ಟೊಟ್ಟಿಗೆ ಇನ್ನೊಂದು ಸಲ ಬೇರೆ ಬೇರೆಯಾಗಿ ಸಂಧಿಸಿ ಅವರಿಬ್ಬರೂ ಮದುವೆಯಾಗುವ ಹಾಗೆ ತಯಾರು ಮಾಡಿದರು. ಮ್ಯಾರೇಜ್ ಆಫ್ ಕನ್ವಿನೀಯನ್ಸ್ ಅಂತಾರಲ್ಲವಾ, ಹಾಗೆ!
ಸರಿ ಮದುವೆಯಾಯ್ತು. ಸುಮತೀಂದ್ರ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರಿಬ್ಬರಿಗೂ ಬೇರೆ ಬೇರೆ ಕೊಠಡಿ. ಅವಳು ಮಾಡಿ ಹಾಕಿದ ರುಚಿರುಚಿಯಾದ ಅಡಿಗೆ ಬಾಯಿ ಚಪ್ಪರಿಸಿ ತಿಂದು ಅವನ ಸ್ನೇಹಿತರು, ಕುಡಿತ ಅಂತ ಆರಾಮಾಗಿದ್ದು ಬಿಟ್ಟಿದ್ದ. ಪ್ರಿಯಂವದೆ ತನ್ನ ಸಂಶೋಧನೆಯಲ್ಲಿ ಮಗ್ನ.ಯಾವಾಗಲೋ ಕುಡಿತದ ಅಮಲಿನಲ್ಲಿ ಅವಳನ್ನು ಕೂಡಿದ ಅವನು, ಅವಳು ರೇಜಿಗೆಯಿಂದ ಅವನಿಗೆ ಛಿ ಮಾರಿ ಹಾಕಿದ್ದು, ಈ ಸಿಡಿಲಿನಂತಹ ಸುದ್ದಿ.
ಅವನು ಅದು ಹೇಗೆ ಅಂತ ಕೇಳಿದ್ದಕ್ಕೆ ಅವಳ ಬಳಿ ಉತ್ತರ ಏನೋ ಇತ್ತು ಆದರೆ ಅವನ ಶಾಕ್ ನಿಂದ ಕೂಡಿದ ಮುಖ ನೋಡಿ ಅವಳಿಗೆ ಉತ್ತರಿಸಬೇಕೆಂದನಿಸಲಿಲ್ಲ. ಅವನು ಯಾವಾಗಲೋ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅವನಿಗೆ ಮಕ್ಕಳಾಗದಿರುವ ಬಗ್ಗೆ ರಿಪೋರ್ಟ್ ಬಂದಿದ್ದು ಅವನಿಗೆ ನಿಜಕ್ಕೂ ಶಾಕ್ ಆಗಿತ್ತು.ಆ ಮೇಲೆ ಅವರು ಬೇರೆ ಬೇರೆ ಆದರು. ಅವನಿಗೆ ಅವಳ ಬಗ್ಗೆ ಮರೆತು ಕೂಡ ಹೋಯಿತು.
ಪ್ರಿಯಂವದಾ ಯಾವಾಗಲೋ ಹೊರ ದೇಶದ ಸಂಶೋಧನಾ ಫೆಲ್ಲೊಶಿಪ್ ಗೆ ಅರ್ಜಿ ಹಾಕಿದ್ದು ಅದು ಸ್ವೀಕೃತ ಆಗಿ ಆಕೆ ಸ್ವಿಜರ್ ಲ್ಯಾಂಡ್ ಗೆ ಹೋಗಿದ್ದಷ್ಟೆ ಅವನಿಗೆ ಅವರಿವರಿಂದ ಗೊತ್ತು. ಆಮೇಲೆ ಅವರಿಬ್ಬರೂ ಸಂಪರ್ಕದಲ್ಲಿರಲಿಲ್ಲ
ಮಧ್ಯೆ ಮಧ್ಯೆ ಸುಮತೀಂದ್ರನಿಗೆ ಅವನ ದೂರದ ಸಂಬಂಧಿ ಡಾಕ್ಟರ್ ಒಬ್ಬರು ಪತ್ರ ಕಳುಹಿಸುತ್ತಿದ್ದರು. ಅದರ ಒಕ್ಕಣೆ ಹೆಚ್ಚು ಕಡಿಮೆ ಹೀಗಿರುತ್ತಿತ್ತು, 'ಇಲ್ಲಿ ಥೇಟ್ ನಿನ್ನನ್ನು ಹೋಲುವ ನೇ ಒಬ್ಬ ಹುಡುಗನಿದ್ದಾನೆ ಅಂತಲೋ, ನೀನು ಆರನೆ ಈಯತ್ತೆಯಲ್ಲಿದ್ದಾಗ ಹೇಗೆ ಕಾಣುತ್ತಿದ್ದೆ ಹಾಗೆ ಕಾಣುತ್ತನೆಂದಲೋ, ನಕ್ಕರೆ ನೀನೆ ನಕ್ಕಹಾಗೆ ಕಾಣುತ್ತನೆಂತ್ಲೋ ಇರುತಿತ್ತು. ಆದರೆ ಮೊನ್ನೆ ಬಂದ ಪತ್ರ ಓದಿ ಅವನಿಗೆ ಯಾಕೋ ತಳಮಳ ಆಯ್ತು. ಈ ಪತ್ರದ ಒಕ್ಕಣೆ ಹೀಗಿತ್ತು, 'ಒಂದು ಸಲ ಇಲ್ಲಿ ಬಂದು ಆ ಹುಡುಗನ್ನ ನೋಡ್ತಿಯಾ? ದೂರದಿಂದಲೇ ನೋಡು. ಅವನ ತಾಯಿ ಇನ್ನೂ ಕೆಲವೆ ದಿನಗಳ ಅತಿಥಿ.'
ಸುಮತೀಂದ್ರ ಈಗ ಸ್ವಯಂ ನಿವೃತ್ತಿ ಹೊಂದಿದ್ದ. ದುಡ್ಡಿನ ಜತೆ ಅವನ ಬಳಿ ಸಮಯವೂ ಸಾಕಷ್ಟಿತ್ತು. ಈಗ ಗೆಳೆಯರೂ ಅವರವರ ಪರಿವಾರ ಅವರ ಜೀವನದಲ್ಲಿ ವ್ಯಸ್ತರಾಗಿದ್ದು ಇವನ ಬಳಿ ಮಾತಾಡುವಷ್ಟು ವ್ಯವಧಾನ ಅವರಿಗಿರಲಿಲ್ಲ. ಇತ್ತೀಚಿಗೆ ಯಾಕೋ ಅವನಿಗೆ ಪ್ರಿಯಂವದಾ ಅವಳ ಅಡಿಗೆ, ಅವಳು ಬಳಸುವ ಶ್ಯಾಂಪೂ ಪರಿಮಳ ಅವಳ ಉದ್ದ ಜಡೆ ಪದೇ ಪದೇ ನೆನಪಿಗೆ ಬರುತ್ತಿತ್ತು. ಹದಿನೈದು ವರ್ಷಗಳೇ ಕಳೆದು ಹೋಗಿದ್ದವು. ಅವಳಿಗೆ ನನ್ನ ನೆನಪು ಒಂದು ಸಲವೂ ಕಾಡಿಲ್ಲವೇ ಮುಂತಾದ ಪ್ರಶ್ನೆಗಳು ಅಸ್ವಸ್ಥ ಮಾಡುತ್ತಿದ್ದವು. ಆ ಸಂಬಂಧಿಕರಿರುವ ಊರಿಗೆ ಹೋಗಿ ಯಾಕೆ ಆ ಹುಡುಗನ್ನ ನೋಡ ಬಾರದು? ಅವನ ಶಿಕ್ಷಣಕ್ಕೆ ಏನಾದರೂ ದಾರಿಯಾದರೂ ಮಾಡುವ ಅಂತ ಹೊರಟ ಸುಮತೀಂದ್ರ.
ಹೌದು ಅಲ್ಲಿ ನೋಡಿದ್ರೆ ಆ ಹುಡುಗ ಸುಮತೀಂದ್ರ 9 ನೆ ತರಗತಿಯಲ್ಲಿ ಹೇಗೆ ಕಾಣಿಸುತ್ತಿದ್ದ ಹಾಗೇ ಇದ್ದ. ಅಷ್ಟೆ ಅಲ್ಲ ಸುಮತೀಂದ್ರನ ಹಾಗೆ ಸುಮ್ಮನೆ ಕೂತಾಗ ಒಂದು ಕಾಲನ್ನು ಅಲ್ಲಾಡಿಸುವ ಅಭ್ಯಾಸ ಕೂಡ ಇತ್ತು. ಸುಮತೀಂದ್ರ ಆ ಹುಡುಗನ ಅಮ್ಮನ ಬಳಿ ಮಾತನಾಡಲು ಹೋದ. ಅಮ್ಮನ ಪರಿಸ್ಥಿತಿ ತುಂಬ ಬಿಗಡಾಯಿಸಿತ್ತು. ಆಕೆ ಕಷ್ಟಪಟ್ಟು ಹುಡುಗನಿಗೆ ತಂದೆ ಇಲ್ಲ, ಹೇಳಿಕೊಳ್ಳುವಂತಹ ಬಂಧು ಬಳಗವಿಲ್ಲ, ನಾನು ನೋಡಿದರೆ ನಿತ್ಯ ರೋಗಿ, ನನ್ನ ನಂತರ ಆ ಹುಡುಗಂದು ಏನಾಗುತ್ತದೋ ಎಂದು ರೋಧಿಸಿದರು. ಅವನು ಊರಿನ ಮುನಿಸಿಪಾಲಿಟಿ ಆಫಿಸ್ ನಲ್ಲಿ ಸ್ವಲ್ಪ ಅವರಿವರ ಕೈ ಬೆಚ್ಚಗೆ ಮಾಡಿ ಆ ಹುಡುಗ ಹುಟ್ಟಿದ ದಿನಾಂಕ ಅವನ ಇತರೇ ಮಾಹಿತಿಗಳನ್ನು ಕಲೆ ಹಾಕಿದ. ತಾಯಿಯ ಹೆಸರು ಇತ್ತೆ ವಿನಹ ತಂದೆಯ ಹೆಸರನ್ನು ಅಲ್ಲಿ ನೋಂದಾಯಿಸಿರಲಿಲ್ಲ. ಈಗ ಅವನು ಪ್ರಿಯಂವದಾಳಿಗೆ ಸಂಪರ್ಕಿಸ ಬೇಕಾಯಿತು. ಹಾಗೆ ತಾನೂ ಡಾಕ್ಟರ್ ಬಳಿ ತಪಾಸಣೆ ಹೋದಾಗ ಅವನಲ್ಲಿ ತಂದೆಯಾಗುವ ಎಲ್ಲ ಯೋಗ್ಯತೆಗಳೂ ಇದ್ದವು. ಒಂದು ತರಹ ಸಂತಸ ಸಂಭ್ರಮ.
ಸರಿ ಗೂಗಲ್ ನಲ್ಲಿ ಅವಳ ಹೆಸರು ಪ್ರಿಯಂವದಾ ಅಂತ ಹಾಕಿದ್ರೆ ಏನೂ ಸಿಗಲಿಲ್ಲ. ಪುನ: ಅವನ ಊರಿಗೆ ವಾಪಸ್ ಬಂದು ಮನೆಯ ಕಪಾಟುಗಳನ್ನೆಲ್ಲ ತಡಕಾಡಿದ ಪ್ರಿಯಂವದಾ ಬಗ್ಗೆ ಏನಾದರೂ ಸುಳಿವು ಸಿಗಬಹುದೇ ಅಂತ. ಕೊನೆಗೂ ಪುಸ್ತಕದ ಕಪಾಟಿನಲ್ಲಿ ಎರಡು ಪುಸ್ತಕದ ಮಧ್ಯೆ ಅಪಚ್ಚಿಯಾದ, ಹುಳು ತಿಂದ ಅರ್ಜಿಯ ಸ್ವಲ್ಪ ಭಾಗದಲ್ಲಿ ಅವಳ ಸಂಶೋಧನಾ ಸಂಸ್ಥೆಯ ಹೆಸರು ಸಿಕ್ಕಿತು. ಕೂಡಲೆ ಗೂಗಲಿಸಿ ನೋಡಿದರೆ ಪ್ರಿಯಂವಾದ ಈಗ ಪ್ರಿಯಾ ಆಗಿದ್ದು, ಅವಳಿಗೆ ಬಂದ ಹಲವಾರು ಪ್ರಶಸ್ತಿಗಳು, ಅವಳು ಮತ್ತು ಅವಳ ಸಹೋದ್ಯೋಗಿಗಳು ಜಂಟಿಯಾಗಿ ಮಂಡಿಸಿದ ಪ್ರಬಂಧಗಳ ಪಟ್ಟಿಯೇ ಕಣ್ಣೆದುರಿಗೆ ಸಾಲು ಸಾಲಾಗಿ ಬಂದು ನಿಂತಿತು. ಪುಟದ ಕೊನೆಯಲ್ಲಿ ಅವಳ ವೈಯಕ್ತಿಕ ಮಾಹಿತಿ ಮುಂತಾದನ್ನು ಹಾಕಿದ್ದರು. ಅವಳ ಇ ಮೈಲ್ ಫೋನ್ ನಂಬರ್ ಇತ್ಯಾದಿ.
ಕೂಡಲೆ ಒಂದು ಮೈಲ್ ಕಳುಹಿಸಿ ಒಂದು ವಾರದ ತನಕ ಬೆಳಿಗ್ಗೆ ಮಧ್ಯಾಹ್ನ , ರಾತ್ರಿ ಎಚ್ಚರವಾದಾಗಲೆಲ್ಲ ಅವಳ ಮೈಲ್ ಏನಾದರೂ ಬಂದಿದೆಯಾ ಅಂತ ಕಾಯೋದೆ ಆಯಿತು. ಇನ್ನೊಂದೆರಡು ದಿನ ಕಾದು ಅಲ್ಲಿ ಕೊಟ್ಟ ನಂಬರ್ ಗೆ ಸಂಪರ್ಕಿಸೋದು ಅಂತ ತನ್ನಷ್ಟಕ್ಕೆ ಅಂದು ಕೊಂಡ ಅಲ್ಲಿಂದ ಯಾವುದೇ ಸುದ್ದಿಯಿಲ್ಲ. ಕೊನೆಗೆ ಫೋನ್ ಮಾಡಿದರೆ, 'ದಯವಿಟ್ಟು ನಿಮ್ಮ ಹೆಸರು ನಂಬರ್ ಹೇಳಿ ಅಂತ ಆಟೋಮೇಟದ್ ದನಿಯೊಂದು ಕೇಳಿತು. ಹತಾಶನಾದ ಸುಮತೀಂದ್ರ. ಎಲ್ಲ ಆಸೆ ಕೈಬಿಟ್ಟ ಮೇಲೆ ಒಂದು ದಿನ ಅವಳ ಮೈಲ್ ನೋಡಿ ಅವನ ಎದೆ ಡವಗುಟ್ಟಿತು ಕಾತುರದಿಂದ.
ಮೈಲ್ ಪಕ್ಕದಲ್ಲೇ ಅವಳ ಫೋಟೊ ಮೊದಲಿಗೆ ನೋಡಿದ. ಬಿಳಿ ಕೂದಲಿನಿಂದ ಆವೃತ ಅವಳ ಮುಖ ಇನ್ನೂ ಆಕರ್ಷಕ ವಾಗಿತ್ತು, ಸ್ನಿಗ್ದ ಸುಂದರವಾಗಿತ್ತು. ಮಿಂಚಂಚೆಯಲ್ಲಿ ಅವಳು ಕೆಲ ದಿನಗಳ ಮಟ್ಟಿಗೆ ಕೆಲಸಕ್ಕೆ ಬ್ರೇಕ್ ತೆಗುದ್ಕೊಂಡು ಮಗನ ಜತೆ ಯೂರೋಪ್ ಟೂರ್ ಗೆ ಹೋಗಿದ್ದು ಹಾಗು ಅಲ್ಲಿನ ಚಿತ್ರಗಳನ್ನು ಕಳುಹಿಸಿದ್ದಳು. 'ಆಶ್ಚರ್ಯದಿಂದ ಮೂರು ನಾಲ್ಕು ಸಲ ನಿನ್ನ ಮೈಲ್ ಓದ ಬೇಕಾಯ್ತು. ಏನಪ್ಪ ದಿಢೀರ್ ನೆನಪು ಬಂತು ಅಂತ' ಆ ಹುಡುಗನ ಬಗ್ಗೆ ಓದಿ ಆಶ್ಚರ್ಯ ಆಯಿತು.ಡಾಕ್ಟರ್ ನನಗೆ ಅವಳಿ ಜವಳಿ ಮಕ್ಕಳಾಗುವ ಸಾಧ್ಯತೆಯಿದೆ ಎಂದಿದ್ದರು. ಆದರೆ ಒಂದು ಮಗು ಸತ್ತು ಹುಟ್ಟಿತ್ತು ಅಂತ ದಾಯಿ ಹೇಳಿದಾಗ ಅವಳನ್ನು ನಂಬಿದೆ. ಸಾಧ್ಯ ಆದರೆ ನನಗೆ ಅವನ ಫೋಟೊ ಕಳುಹಿಸಿ ಮತ್ತು ಆಟಾಂಚ್ ಮೆಂಟ್ ನಲ್ಲಿ ನಿನ್ನ ಮಗನ ಫೋಟೊ ಕೂಡ ನೋಡು. ಹೇಗಿದ್ದಿಯಾ? ನಾನು ನನ್ನ ಕೆಲಸದಲ್ಲಿ ತುಂಬ ಇನ್ವಾಲ್ವ್ ಆಗಿದ್ದೀನಿ. ನಾನೀಗ ಸೀನಿಯರ್ ರಿಸರ್ಚ್ ಸಯಂಟಿಸ್ಟ್. ವಾಸ ಮಾಡಲು ಮನೆ ಒಳ್ಳೆಯ ಸಂಬಳ ಇದೆ". ಅಂತೆಲ್ಲ ಹಾಕಿದ್ದಳು ಮೈಲ್ ನಲ್ಲಿ
ಮಗನ ಫೋಟೊ ನೋಡಿ ಇವನಿಗೆ ಶಾಕ್. ಥೇಟ್ ಆ ಹುಡುಗನ ತರಹ ಮುಖಚರ್ಯೆ. ಏನಿದು ಆಶ್ಚರ್ಯ ಅಂತ. ಕೂಡಲೆ ಅವಳಿಗೊಂಡು ಮೈಲ್ ಹಾಕಿ ಅವನು ಆ ರಾತ್ರಿಯೇ ಊರಿಗೆ ಹೊರಟ. ಆ ಹುಡುಗ ಹುಟ್ಟಿದ ಆಸ್ಪತ್ರೆಗೆ ಹೋಗಿ, ಸ್ವಲ್ಪ ಲಂಚ ಕೊಟ್ಟು ಹಳೆಯ ಫೈಲ್ ಗಳನ್ನೆಲ್ಲ ಎಡತಾಕಿದ. ಆಗ ಅಲ್ಲಿ ಕೆಲಸ ಮಾಡುತ್ತಿದ್ದ ದಾಯಿಯ ಹೆಸರು ಸಿಕ್ಕಿತು. ಆ ದಾಯಿಯ ವಿಳಾಸದ ಜಾಡನ್ನು ಹುಡುಕುತ್ತ ಹೊರಟ ಸುಮತೀಂದ್ರ. ಅವರಿವರನ್ನು ಕೇಳಿಕೊಂಡು ಕೊನೆಗೂ ಒಂದು ತಿಂಗಳ ನಂತರ ಅವಳನ್ನು ಪತ್ತೆ ಹಚ್ಚಿದ. ಈಗ ಅವಳು ಹಣ್ಣು ಹಣ್ಣು ಮುದುಕಿ. ಆದರು ಸರಿಯಾಗಿ ನೆನಪುಮಾಡಿಕೊಳ್ಳಲು ಹೇಳಿದಾಗ ಅವಳಿಂದ ಪಡೆದ ಮಾಹಿತಿ ಇಷ್ಟು.
ಪ್ರಿಯಂವದಾ ಅವಳ ಊರಿನವಳೇ ಆಗಿದ್ದು, ಗಂಡನನ್ನು ಬಿಟ್ಟು ಬಂದಿದ್ದು ಅವಳಿಗೆ ತಿಳಿದಿತ್ತು. ಅದೇ ಊರಿನ ಇನ್ನೊಂದು ಕುಟುಂಬದ ಹೆಂಗಸಿಗೆ ತುರ್ತಾಗಿ ಅವಳ ಜೀವ ಉಳಿಸಲು ಒಂದು ಮಗು ಬೇಕೆ ಬೇಕಿತ್ತು. ದಾಯಿ ಪ್ರಿಯಂವದಳಿಗೆ ಗೊತ್ತಾಗದಂತೆ ಅವಳ ಮಗುವನ್ನು ಕದ್ದು ಆ ಕುಟುಂಬಕ್ಕೆ ಕೊಡುವ ಹುನ್ನಾರದಲ್ಲಿದ್ದಳು. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಪ್ರಿಯಂವದಳಿಗೆ ಅವಳಿಜವಳಿ ಗಂಡು ಮಕ್ಕಳು ಹುಟ್ಟಿದ್ದು ಅವಳಿಗೆ ಅನುಕೂಲವಾಯಿತು.ಡಾಕ್ಟರ್ ಕೂಡ ಇದರಲ್ಲಿ ಶಾಮೀಲಾಗಿದ್ದಿರ ಬಹುದು ಎಂದು ಅವನಿಗೆ ಸಂಶಯ ಬಂತು. ಅವಳು ಅದರಲ್ಲಿ ಒಂದು ಮಗುವನ್ನೆ ಎತ್ತಿಕೊಂಡು ಆ ಕುಟುಂಬಕ್ಕೆ ಕೊಟ್ಟಿದ್ದಳು. ಆ ಹೆಂಗಸಿಗೆ ಮೂರು ಮಕ್ಕಳಾಗಿ ಹೊಟ್ಟೆಯಲ್ಲಿ ಸತ್ತು ಹುಟ್ಟುತ್ತಿದ್ದರಿಂದ ಆಕೆ ಮಾನಸಿಕ ಕ್ಷೋಭೆಗೆ ತುತ್ತಾಗಿದ್ದಳು. ಈ ಮಗುವಿನಿಂದ ಆಕೆ ಸಮಾಧಾನ ಹೊಂದಿದ್ದಾಳೆ. ಆದರೆ ಈಗ ತೀರ ಕಾಯಿಲೆಯಿಂದ ಅವಳು ಇನ್ನು ಕೆಲವೇ ದಿನಗಳ ಅತಿಥಿ.
ಇದೆಲ್ಲವನ್ನೂ ಸುಮತೀಂದ್ರ ಪ್ರಿಯಂವದಾಳಿಗೆ ಮೈಲ್ ಮೂಲಕ ರವಾನಿಸಿದ.'ಮಗನನ್ನು ಇಲ್ಲಿಗೆ ಕರೆದುಕೊಂಡು ಬಾ. ನಿಮ್ಮಿಬ್ಬರನ್ನು ನೋಡಬೇಕೆನ್ನಿಸಿದೆ. ಇತ್ತೀಚಿಗೆ ನಿನ್ನ ನೆನಪು ತುಂಬ ಕಾಡುತ್ತಿದೆ'
ಮರು ಮೈಲ್ ನಲ್ಲಿ ಪ್ರಿಯಂವದಾಳ ಉತ್ತರ ಹೀಗಿತ್ತು. ಇನ್ನು ಎರಡು ತಿಂಗಳಿಗೆ ಮಗನ ರಜೆ ಶುರು ಆಗುತ್ತದೆ. ಆಗ ಅವನನ್ನು ನಿನ್ನ ಬಳಿ ಕಳುಹಿಸುತ್ತೇನೆ. ನೋಡು. ಬೇಕಾದ್ರೆ ನಿನ್ನ ಬಳಿ ಇಟ್ಟು ಕೋ. ನಾನು ಇನ್ನು ಆರು ತಿಂಗಳ ನಂತರ ಸ್ವಯಂ ನಿವೃತ್ತಿ ಪಡೆದು ಸ್ಯಾನ್ ಫ್ರಾನ್ಸಿಕೋ ದ ಆಶ್ರಮ ಸೇರುತ್ತ ಇದ್ದೀನಿ. ನಾವು ಒಂದು ಒಪ್ಪಂದದ ಮೇಲೆ ಮದುವೆಯಾಗಿದ್ದು. ಅದರ ಪ್ರಕಾರ ನೀನು ವರ್ತಿಸಲಿಲ್ಲ. ಮಗುವನ್ನು ನಾನು ಆಗಲೇ ತೆಗೆದು ಹಾಕಬಹುದಿತ್ತು ಆದರೆ ಹುಟ್ಟದೆ ಇರುವ ಮಗುವಿನ ಯಾವುದೇ ತಪ್ಪು ಇರಲಿಲ್ಲ ಅನ್ನುವ ಪಾಪಪ್ರಜ್ಞೆ ಕಾಡಿತ್ತು. ಮಗು ಹುಟ್ಟಿದ ಬಳಿಕ ನಾನು ಬದಲಾಗಬಹುದೆಂದು ಕೊಂಡಿದ್ದೆ. ಆದರ ನನಗೆ ಅವನಿಗೇ ಯಾವ ಇಮೋಷನಲ್ ಅಟ್ಯಾಚ್ ಮೆಂಟ್ ಇಲ್ಲ. ಹುಟ್ಟಿದಾರಭ್ಯ ಅವನು ನ್ಯಾನಿ ಬಳಿ ಬೆಳೆದ. ನೀನು ಬೇರೆ ಮದುವೆ ಮಾಡಿಕೊಳ್ಳುವಲ್ಲಿ ನನ್ನದೇನೂ ಅಭ್ಯಂತರವಿಲ್ಲ. ನಿನಗೆ ಕಾನೂನಿನ ತೊಡಕೂ ಆಗಲ್ಲ ಯಾಕಂದರೆ ನಾವು ಹಲವು ವರ್ಷಗಳು ಸಂಪರ್ಕದಲ್ಲಿರಲಿಲ್ಲ. ಮಗನ ಬಗ್ಗೆ ಬೇಗ ಯಾವುದಾದರೂ ನಿರ್ಧಾರ ತೆಗೆದುಕೊ. ಅವನ ಹೆಸರಿಗೆ ಸ್ವಲ್ಪ ಹಣಕಾಸು ಠೇವಣಿಯಾಗಿಟ್ಟಿದ್ದೇನೆ. ಮಗನನ್ನು ನಿನ್ನ ಬಳಿ ಇರಿಸಿಕೊಳ್ಳಲು ಇಷ್ಟ ಪಡದಿದ್ದರೆ ಅವನಿಗೆ ಬೇರೆ ವ್ಯವಸ್ಥೆ ಮಾಡಬೇಕು.
......................................................................
......................................................................
ಸುಮತೀಂದ್ರ ಈಗ ಅವನ ದೂರದ ಸಂಬಂಧದಲ್ಲಿ ವಯಸ್ಸಾದ ದೊಡ್ಡಮ್ಮನನ್ನು ಕರೆದುತಂದು, ಇಬ್ಬರು ಮಗಂದಿರ ಜತೆ ವಾಸವಾಗಿದ್ದಾನೆ.
(ಕಥೆಯೆಂದು ಗೀಚಿದ್ದು ಟೈಟಲ್ ಏನೂ ತೋಚಲಿಲ್ಲ....ಅದಕ್ಕೆ ಸುಮ್ನೆ ಕಥೆ ಅಂತ ಹಾಕಿದ್ದೀನಿ. ಚೆನ್ನಾಗಿದೆಯಾ ಇಲ್ಲವಾ?)
(ಕಥೆಯೆಂದು ಗೀಚಿದ್ದು ಟೈಟಲ್ ಏನೂ ತೋಚಲಿಲ್ಲ....ಅದಕ್ಕೆ ಸುಮ್ನೆ ಕಥೆ ಅಂತ ಹಾಕಿದ್ದೀನಿ. ಚೆನ್ನಾಗಿದೆಯಾ ಇಲ್ಲವಾ?)
--
:-)
malathi S
5 comments:
ಸುಮತೀಂದ್ರ ಪ್ರಿಯಂವದಾ
ಕಥೆ ನಿಜವಾಗಲೂ ವಿಭಿನ್ನವಾಗಿದೆ.
ಅವ್ಯಕ್ತ ಎಂದು ಹರಸರಿಟ್ಟರೇ?
ಕಥೆ ಚೆನ್ನಾಗಿದೆ...
(ಸತ್ಯ ಕಥೆ ಆಗಿರಬೋದಲ್ವಾ ..?)
thank you Badari. title chennagide
Dattatri: houdu swalpa nija ide :-) sariyaagi guess maaDidri. nimm cartoons nOdtaa irteevi. sadhyadalle rayaru nimmannu samparkisababhudu for an assignment
:-)
ms
ಕತೆ ವಿಭಿನ್ನವಾಗಿದೆ. ಇಷ್ಟವಾಯಿತು.
thanks Chadrashekar :-)
Post a Comment