August 7, 2009

ಅಟ್ಟದಲ್ಲಿ ಕೆಂಪು ಇಲಿ (title by Vijaya Karnataka)

(this post is a revised version)
ಇವತ್ತು ಬೆಳಿಗ್ಗೆ ತೀರ್ಥಹಳ್ಳಿಯಿಂದ ಭೈಯ್ಯಾ (ಶ್ರೀಕಾಂತ ದೊಡ್ಡ ಅಣ್ಣ)ಫೋನ್ ಮಾಡಿದ್ದರು. ರಸ್ತೆ ಅಗಲೀಕರಣ ಖಾತ್ರಿಯಾಗಿದೆ. ಅಟ್ಟಕ್ಕೆ ಹೋಗುವ ಮೆಟ್ಟಿಲಿನ ತನಕ ಜಾಗ ಹೋಗೇ ಬಿಡತ್ತೆ ಅಂತ. ರಸ್ತೆ ಅಗಲೀಕರಣದ ಬಗ್ಗೆ ಗೊತ್ತಿತ್ತು. ಆದರೆ ಆಪಾಟಿ ಜಾಗ ಹೋಗಿ ಬಿಡತ್ತೆ ಅಂತ ಗೊತ್ತಾದ ಮೇಲೆ ಯಾಕೋ ಮೈಯಲ್ಲಿ ಹುಷಾರು ತಪ್ಪಿದಂತೆ ಆಯಿತು.

೧೭ ವರ್ಷಕ್ಕೆಲ್ಲ ಮದುವೆ ಯಾಗಿ ಇವರ ಮನೆಗೆ ಹೋದಾಗ, ೧೦ ವರ್ಷದ ಓರಗಿತ್ತಿ ಮಗಳು ಬಿಟ್ಟರೆ ನಾನೇ ಚಿಕ್ಕವಳು. ಊರಲ್ಲೇ ನಮ್ಮದು ದೊಡ್ಡ ಕೂಡು ಕುಟುಂಬ. ದೊಡ್ಡವರೆಲ್ಲಾ ಇದ್ದುದರಿಂದ ಹಾಗೂ ನನಗೆ ಇನ್ನೂ ಕಾಲೇಜು ಕಲಿಯಿವುದು ಅದರ ಪರೀಕ್ಷೆಗೆ ತಯಾರಾಗಲು ಅಂತ ನನಗೆ ತುಂಬಾ ಕೆಲಸ ಏನು ಹೇಳ್ತಿರಲಿಲ್ಲ. ಓದಿ ಬೇಜಾರಾದಾಗಲೆಲ್ಲಾ ನಾನು ಸಾಕಷ್ಟು ಸಮಯ ಅಟ್ಟದಲ್ಲಿ ಕಳೆಯುತ್ತಾ ಇದ್ದೆ.

ಈಗಲೂ ತೀರ್ಥಹಳ್ಳಿಗೆ ಹೋದಾಗಲೆಲ್ಲಾ ನನ್ನ ಅತೀ ಮೆಚ್ಚಿನ ಕೆಲಸ ಅಂದರೆ ಅಟ್ಟಕ್ಕೆ ಹೋಗಿ ಸ್ವಲ್ಪ ಸಮಯ ಕಳೆಯುವುದು. ಅಕ್ಕ ಬೈಯುತಿರುತ್ತಾರೆ. ಹಬ್ಬಕ್ಕೆ ಅಂತ ಒಂದೆರಡು ದಿನದ ಮಟ್ಟಿಗೆ ಬರ್ತಿಯಾ ಸುಮ್ಮನೆ ಆರಾಮಾಗಿರೋದು ಬಿಟ್ಟು ಅದೇನು ಅಟ್ಟ ಏರಿ ಕೂರ್ತಿಯಾ. ಎಷ್ಟೋ ವರ್ಷ ಆಯ್ತು ಅಲ್ಲಿ ಯಾರೂ ಹೋಗ್ದೆ. ಸುಮ್ನೆ ಮೈ ಎಲ್ಲಾ ಧೂಳು. ಮಧ್ಯಾನ್ಹ ಒಂದರೆಗಳಿಗೆ ಮಲಕ್ಕೋ ಬಹುದಲ್ಲವಾ?

ಇತ್ತೀಚಿಗಂತು ನನ್ನ ಜತೆ ನನ್ನ ಇಬ್ಬರೂ ಮಕ್ಕಳು ನನಗೆ ಸಾಥ ನೀಡುತ್ತಾರೆ. ಇಲ್ಲಿ ಹೋದರೆ ಸಮಯ ಸಂದಿದ್ದೆ ತಿಳಿಯುವುದಿಲ್ಲ. ಅಕ್ಕ ಸಂಜೆಯ ಚಹಾ-ತಿಂಡಿಗೆ ಕರೆದಾಗಲೇ ನಾವು ಈ ಲೋಕಕ್ಕೆ ಬರುವುದು. ನನಗೆ ಅಟ್ಟದ ರಾಣಿ ಎಂದೇ ಎಲ್ಲರೂ ಕರೆಯುವುದು

ಹಳೆ ಆರಾಮ ಕುರ್ಚಿ, ಸೀಮೆ ಎಣ್ಣೆ ಬುಡ್ಡಿಗಳು, ಹಳೆ ಕಪ್ಪು ಬಿಳುಪು ಫೋಟೊಗಳು, ಕಲಾತ್ಮಕವಾಗಿ ಕೊರೆದಿರುವ, ಸೂಕ್ಷ್ಮ ಕುಸುರಿ ಕೆಲಸದ ತಾಮ್ರದ ಪಾತ್ರೆ ಪಗಡಿ, ಹಳೆಯ ಬಾರು ಕೋಲು, ವಿವಿಧ ಉದ್ದ- ಗಿಡ್ಡ ಗಾತ್ರದ ಕಡಗೋಲು, ಮರದಲ್ಲಿ ಮಾಡಿದ ಪಶು-ಪಕ್ಷಿಗಳು, ಅತೀ ತೆಳುವಾದ, ಈಗಲೂ ಪೀಂ ಅನ್ನುವ ಬಣ್ಣ ಬಣ್ಣದ ಪ್ಲಾಸ್ಟಿಕ್ ಬೊಂಬೆಗಳು,- ಇವನ್ನು ಬಹುಶ: ದಸರಾ ಗೊಂಬೆಯ ಜತೆ ಇಡುತ್ತಿದ್ದರೆನೋ? ಕೈಯಿಲ್ಲದ ಗಡಿಯಾರ, ಕಾಲಿಲ್ಲದ ಮಣೆಹೀ॒ಗೆ ಹತ್ತು ಹಲವಾರು ಸಾಮಾನುಗಳು,ಇನ್ನೇನೇನೋ ಯಾವುದಕ್ಕೆ ಉಪಯೋಗಿಸ್ತಾರೆ ಅಂತ ಗೊತ್ತಿಲ್ಲದ ಉಪಕರಣಗಳು. ಅವುಗಳನ್ನೆಲ್ಲ ಒರೆಸುವುದು. ಬೆಂಗಳೂರಿನಲ್ಲಾದ್ರೆ ಇವಕ್ಕೆ ಪೊಲಿಶ್ ಮಾಡಿ ಮನೆಯಲ್ಲಿ ಹೇಗೆ ಕಲಾತ್ಮಕವಾಗಿ ಜೋಡಿಸಬಹುದುದು- ಮ್ಯೂಸಿಯಂ ಇಡುವುದು, ಇಂತದೆಲ್ಲಾ ಮಾತಾಡ್ತಾ ಅಲ್ಲೆಲ್ಲಾ ನಾವು ಹುಡುಕಾಡ್ತಾ ಇರ್ತೇವೆ.

ಈ ಸಲ ನಮ್ಮ ಗಮನ ಹಳೆಯ ಟ್ರಂಕ್ ಮೇಲೆ ಬಿತ್ತು. ಬೀಗ ಜಡೆಯಲಾಗಿತ್ತು. ಮನೆಯಲ್ಲಿ ಕೇಳಿದರೆ ಅದರ ಬೀಗದ ಕೈ ಕಳೆದು ಹೋಗಿದುದರ ಬಗ್ಗೆ ತಿಳಿಯಿತು. ತುಂಬಾ ಹಳೆಯ ಬೀಗಕ್ಕೆ ತುಕ್ಕು ಹಿಡಿದಿತ್ತು. ಕಲ್ಲಿನಿಂದ ನಾಲ್ಕು ಸಲ ಬಡಿದಾಗ ತೆರೆದು ಕೊಂಡಿತು. ನನ್ನ ಕಣ್ಣನ್ನು ನಾನೇ ನಂಬಲಿಲ್ಲ. ಅಷ್ಟು ಪುಸ್ತಕಗಳಿದ್ವು ಅದರಲ್ಲಿ. ಎಲ್ಲಾ ತುಂಬಾ ಹಳೆಯವು. ಹೆಚ್ಚಿನ ಪುಸ್ತಕಗಳು ಅಂಗ್ಲ ಭಾಷೆಯಲ್ಲಿದ್ದವು, ಹಾಗು ಹೆಚ್ಚು ಕಡಿಮೆ ಎಲ್ಲ ಪುಸ್ತಕದಲ್ಲೂ, ಪುಸ್ತಕ ಖರೀದಿಯ ತಾರೀಕು ಹಾಗೂ ಮಾವನವರ, ಹಾಗೂ ಕೆಲವು ಪುಸ್ತಕದ ಮೇಲೆ ಮಾವನವರ ತಂದೆಯ ಹಸ್ತಾಕ್ಷರ ಹೊಂದಿದ್ದವು. ಮಾವನವರ ಪುಸ್ತಕ ಪ್ರೇಮದ ಬಗ್ಗೆ ನನಗೆ ತಿಳಿದಿರಲೆ ಇಲ್ಲ. ನನಗೆ ಬಿಡಿ ನನ್ನ ಮನೆಯಲ್ಲಿದ್ದ ಅಷ್ಟೂ ಜನರಿಗೂ ಗೊತ್ತಿರಲಿಲ್ಲ. ತುಂಬಾ ಮೇಲಿದ್ದ ಪುಸ್ತಕ ಎತ್ತಿಕೊಂಡೆ. ಪುಸ್ತಕ ರಟ್ಟು ಗಟ್ಟಿಯಿದ್ದರೂ ಪುಸ್ತಕದ ಪುಟಗಳು ತುಂಬಾ ಬ್ರಿಟ್ಟಲ್ - ಲಡ್ಡು ಆಗಿದ್ದವು. ಪುಸ್ತಕದ ಟೈಟಲ್ - an epic fast- by Mahatma Gandhi.

ಇನ್ನೊಂದು ಪುಸ್ತಕ ‘A Red Mouse- William Osborne Hamilton ಬರೆದಿದ್ದು. ಅದರ ದೂಳನ್ನು ನಾಜೂಕಾಗಿ ಒರೆಸಿ, ಭಯ ಭಕ್ತಿಯಿಂದ ಅದನ್ನು ತೆಗೆದಿಟ್ಟೆ. ಬೆಂಗಳೂರಿಗೆ ಬಂದ ಮೇಲೆ ಬುಕ್ ಬೈಂಡ ಮಾಡಿಸುವವನಿಗೆ ತೋರಿಸಿದಾಗ, ‘ಮ್ಯಾಡಂ ಒಂದು ಸೊಲ್ಯೂಷನ್ - ದ್ರಾವಣ ಸಿಗತ್ತೆ ಇಂತದ್ದೆಲ್ಲಾ ಪುಸ್ತಕ ಕಾಪಾಡಲು ಅಂತ ಹೇಳಿದ. ಸರಿ ಮತ್ತೊಮ್ಮೆ ಹೋದಾಗ ಆದಷ್ಟು ಪುಸ್ತಕಗಳನ್ನು - ಅಕ್ಕ ನಿನಗೆಲ್ಲೋ ಹುಚ್ಚು ಅಂದ್ರುವೆ- ಕೇಳಿಸಕೊಳ್ಳದೇ, ಬುಕ್ಕ ಬೈಂಡ ನವನಿಗೆ ತಂದು ಕೊಟ್ಟೆ. ಒಂದೆ ವಾರದಲ್ಲಿ ಆ ಪುಸ್ತಕಗಳು ಲವಲವಿಕೆ ಹೊಂದಿ, ಬುಕ್ ಬೈಂಡ್ ಆಗಿ ಮನಗೆ ಬಂದು ಬಿಟ್ಟವು. ಎಷ್ಟೊ ಹೊತ್ತು ಅವನ್ನು ಮುಟ್ಟದೇ ಹಾಗೆ ನೋಡ್ತಾ ಇದ್ದೆ. ದೊಡ್ಡವಳಂತೂ ‘ಅರೆ widow-marriage’ ತರಹ ಕಾಣ್ತಾ ಇದ್ದಾವಲ್ಲ ಪುಸ್ತಕಗಳು ಅನ್ನುವ ತನಕ.

‘A Red Mouse’ ಒಂದು ಪತ್ತೆದಾರಿ ಕಾದಂಬರಿ. ಪುಸ್ತಕ ಓದಿ ಕೊನೆಗೊಳ್ಳುವ ತನಕ ನಾನು ಅದನ್ನು ಕೆಳಗಿಡಲಿಲ್ಲ. ಕಥೆ ಹೇಳಲ್ಲ. ಇಸ್ಕೊಂಡಿ ಓದಿ.

ಡಾ ಜಾಕೀರ್ ಹುಸೇನ್ - ಭಾರತಿಸುತ- ವಯಸ್ಕರ ಶಿಕ್ಷಣ ಸಮಿತಿ ಹೊರತಂದಿದ್ದು- ೧೯೬೭ ರಚಿತ. ಆವಾಗ ನಾ ಇನ್ನೂ ಹುಟ್ಟಿರಲಿಲ್ಲ. ನನ್ನದು ೧೯೬೯. ರಾಮೋಹಳ್ಳಿಯ ಒಬ್ಬ ಯುವಕನ ಯಶೋಗಾತೆ. ಕತೆ ಬರೆದವರ ಹೆಸರೂ ಎಲ್ಲೂ ಸಿಗಲಿಲ್ಲ. ಮುನ್ನುಡಿಯಲ್ಲಿ ಪಿ.ಎನ್. ಜವರಪ್ಪ ಗೌಡ - ಇಂತಹ ಚಿಕ್ಕ ಹೊತ್ತಿಗೆಯ ಉದ್ದೇಶದ ಬಗ್ಗೆ ಎರಡು ಮಾತು ಬರೆದಿದ್ದಾರೆ. ಈ ಪುಸ್ತಕವನ್ನೂ ವಯಸ್ಕರ ಶಿಕ್ಷಣ ಸಮಿತಿಗಾಗಿ ೧೯೨೦ ರಲ್ಲಿ ಮುದ್ರಿಸಿದ ದಾಖಲೆ ಪುಸ್ತಕದ ಹಿಂಬಾಗದಲ್ಲಿದೆ.

ಉಳಿದ ನಾನು ತಂದ ಪುಸ್ತಕಗಳು ಆಂಗ್ಲ ಭಾಷೆಯ ಪುಸ್ತಕಗಳು...
Her friends and mine….ಇದನ್ನು ಬರೆದವರ ಹೆಸರೂ ಎಲ್ಲೂ ಸಿಗಲಿಲ್ಲ. ಅಜ್ಜಿಯ ಜತೆಯಲ್ಲಿ ವಾಸಿಸುವ ಇಬ್ಬರು ಹೆಣ್ಣು ಮಕ್ಕಳೂ ಹಾಗೂ ಪಕ್ಕದ ಮನೆಯಲ್ಲಿ ವಾಸಿಸಲು ಅಜ್ಜನೆ ಜತೆ ಬಂದ ತಾಯಿ ಇರದ ಪುಟ್ಟ ಬಾಲಕನ ಮೈತ್ರಿಯ ಕಥೆ. ಹದಿಹರೆಯದ ಮಕ್ಕಳಿಗಾಗಿ ಬರೆದಿರುವಂತದ್ದು.

Adventures of Tom Wallis -ಪುಟ್ಟ ಬಾಲಕನ ಹಡಗಿನಲ್ಲಿಯ ಜೀವನ, ತಂದೆಯ ಹಡಗಿನಲ್ಲಿ ದೂರ ದೂರದ ಪ್ರಯಾಣ, ಅವನು ಕಂಡ ವಿಸ್ಮಯಕಾರಿ ಘಟನೆಗಳು,- ಅವನ ಸಂತಸ- ವ್ಯಥೆಯ ಕಥೆ. ತುಂಬಾ ಚೆನ್ನಾಗಿದೆ.ಇಂತಹ ಇನ್ನೂ ಸುಮಾರು ಪುಸ್ತಕಗಳು ಈಗ ನನ್ನ ಪುಸ್ತಕದ ಕಪಾಟಿನಲ್ಲಿವೆ.

ಬದಲಾವಣೆ ಖಂಡಿತ ಬೇಕು, but at what cost? ಬದಲಾವಣೆ ಜತೆಗೆ ನಮ್ಮ ಮಧುರ ನೆನಪಿನ ಕುರುಹುಗಳು ನಶಿಸಿತ್ತುವಲ್ಲ? ಏನು ಮಾಡುವುದು? ಅಟ್ಟ ಹೋಗುತ್ತೆ ಅನ್ನುವ ಬೇಜಾರು ತುಂಬಾ ಕಾಡುತ್ತೆ. ಅಗಲೀಕರಣ ಆಗುವ ಮುನ್ನ ಒಂದ್ಸಲ ಅಲ್ಲಿಗೆ ಹೋಗಿ ಬರಬೇಕು. ಮುಂದಿನ ವಾರದ ಟಿಕೀಟು ಸಿಕ್ಕಿದೆ, ತೀರ್ಥಹಳ್ಳಿಗೆ ಹೋಗಲು.ಇಲ್ಲ ನೆನಪುಗಳು ಮಾತ್ರ ನಮ್ಮವು. ಯಾವಾಗ ಬೇಕೋ ಆವಾಗ ಫ್ಲಾಶ-ಬ್ಯಾಕ್ ಮೋಡ್ ಗೆ ಹೋಗಿ, ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕ ಬಹುದು. ಇದಕ್ಕೆ ಕರೆಂಟ್ - generator -ಯು.ಪಿ.ಎಸ್ , ಯಾವುದೂ ಬೇಡ.
ಈ ಸಲ ಮನೆಗೆ ಹೋದಾಗ ಮನೆಯ ಹೊರಗಿನ ಗೋಡೆಯ ಮೇಲೆ ಹೋಗುವ ಜಾಗವನ್ನು ಕೆಂಪು ಬಣ್ಣ ದ ದೊಡ್ಡ ’X ’ ಮಾರ್ಕ್ ಹಾಕಿದ್ದರು.
ನನ್ನ ಕನಲಿದ ಮುಖ ಕಂಡು, ಭೈಯಾ ’ಹುಚ್ಚು ಹುಡುಗಿ, ಅಷ್ಟ್ಯಾಕೆ ಬೇಜಾರು ಪಡ್ಕೋತೀಯಾ? ಮುಂದೆ ನೀವೆಲ್ಲ ದೊಡ್ಡ ದೊಡ್ಡ ಗಾಡಿ ಎಲ್ಲ ಇಟ್ಕಂಡು ಇಲ್ಲಿ ಬಂದಾಗ ರಸ್ತೆ ದೊಡ್ಡ ದಾಗಿದ್ರೆ ನಿಮಗೆ ತಾನೆ ಒಳ್ಳೆಯದು’. ಭೈಯ್ಯ ನ ಮುಖ ನೋಡಿದೆ. ನಾನಾದ್ರು ಮದುವೆ ಯಾಗಿ ಈ ಮನೆಗೆ ಬಂದಿದ್ದು. ಆದ್ರೆ ಭೈಯಾ ಈ ಮನೆಯಲ್ಲೇ ಹುಟ್ಟಿದ್ದು. ಅವರ ಬಾಲ್ಯ, ಯೌವನ ಎಲ್ಲ ಇಲ್ಲೆ ಕಳೆದಿದ್ದು. ಈಗ ಅವರಿಗೆ 74 ವರ್ಷ ವಯಸ್ಸು. ಎಷ್ಟೆಲ್ಲ ನೋವು -ನಲಿವು, ಸಂತಸ ದುಃಖ, ಹುಟ್ಟು-ಸಾವು, ಮದುವೆ-ಮುಂಜಿ ಈ ಮನೆಯಲ್ಲೇ ಕಂಡವರು. ಆದರೂ ಅವರ ಬೇಜಾರನ್ನು ಮರೆತು ನನ್ನನು ಸಂತೈಸಲು ಹೊರ‍ಟ ಅವರನ್ನು ಕಂಡು ಯಾಕೋ ಇನ್ನಷ್ಟು ದುಃಖ ಆಯ್ತು.
ಬನ್ನಿ ಭಯ್ಯ, ಅಕ್ಕ ಕಾಪಿ ಮಾಡ್ಕೊಂಡು ಕಾಯ್ತಿರ್ತಾಳೆ, ಹೋಗುವ ಅಂದು ಅವರನ್ನು ಎಳ್ಕೊಂಡು ಮನೆಯೊಳಗೆ ಹೋದೆ.

3 comments:

ಸವಿಗನಸು said...

ಸವಿ ನೆನಪುಗಳು ಬೇಕು ಸವಿಯಲು ಈ ಬದುಕು.....
ಹಳೆ ವಸ್ತುಗಳು ನೆನಪುಗಳನ್ನು ಉಳಿಸುತ್ತವೆ...
ಚೆಂದದ ಬರವಣಿಗೆ....

Anonymous said...

thank you saviganasu.
:-)
ms

Anonymous said...

Nice, infectiously nostalgic reading.

>>> "ಬದಲಾವಣೆ ಖಂಡಿತ ಬೇಕು, but at what cost? ಬದಲಾವಣೆ ಜತೆಗೆ ನಮ್ಮ ಮಧುರ ನೆನಪಿನ ಕುರುಹುಗಳು ನಶಿಸಿತ್ತುವಲ್ಲ? ಏನು ಮಾಡುವುದು? ಅಟ್ಟ ಹೋಗುತ್ತೆ ಅನ್ನುವ ಬೇಜಾರು ತುಂಬಾ ಕಾಡುತ್ತೆ"<<<<

Just an idle idea: why not recreate the attic elsewhere in the same compound. If Vijaynath Shenoy of Manipal can shift and recreate entire heritage houses, surely a small attic can be rebuilt to retain its old world charm.
xxxxxxxxx

>>> "Her friends and mine….ಇದನ್ನು ಬರೆದವರ ಹೆಸರೂ ಎಲ್ಲೂ ಸಿಗಲಿಲ್ಲ."<<<<

There is a reference for this 1871 book in Amazon.com. You can be the first one to write a review there.
http://www.amazon.com/Her-Friends-Mine-Aspirations-Memories/dp/1246906104

-- Shree Kar