February 10, 2015

ವಲ್ ವಲ್ (ಮಿಶ್ರ ತರಕಾರಿ ಕಾಯಿರಸ)

 ನಮ್ಮ ಮನೆಯಲ್ಲಿ ಈ ತಣ್ಣಗಿನ ಪದಾರ್ಥ ಎಲ್ಲರ  hot favorite. ನಿಮಗೆ ಬೇಕಾದ ತರಕಾರಿ ಬಳಸಬಹುದು. 
ಸಾಧಾರಣವಾಗಿ ಚೌತಿ ಹಬ್ಬದ ನಂತರ ಈ ವಲ್ ವಲ್ ಮಾಡುತ್ತಾರೆ ನಮ್ಮಲ್ಲಿ. ಚೌತಿಗೆ ಗಣಪ ಇರಿಸುವವರು, ಮಂಟಪದಲ್ಲಿ ಆ ಕಾಲಕ್ಕೆ ಸಿಗುವ ತರಕಾರಿ ಹಣ್ಣು ಹಂಪಲುಗಳನ್ನು ’ಫಲಾವಳಿ’ ಅಂತ ನೇತು ಹಾಕುತ್ತಾರೆ. ನೇತು ಹಾಕಲು ಸೂಜಿ ದಾರದ ಉಪಯೋಗ ಮಾಡುತ್ತಾರಾದ್ದರಿಂದ ತರಕಾರಿಗ ತುಂಬ ಸಮಯ ಇಡಲಾಗುವುದಿಲ್ಲ. ನಾಲ್ಕಾಲ್ಕೆ ತರಕಾರಿ ಗಳನ್ನು ಈ ಫಲಾವಳಿಯಲ್ಲಿ ಉಪಯೋಗಿಸ್ತಾರೆ ಆದ್ದರಿಂದ, ಆ ತರ್ಕಾರಿಗಳ ಮಿಶ್ರ ಅಡುಗೆಯನ್ನು ( ಅವನ್ನು ಬೇಗ ಖಾಲಿಮಾಡಲೋಸುಗ) ವಲ್ ವಲ್ ಅಥವ ಗಜಬಜೆ (ಅದು ಬೇರೆ ಪೋಸ್ಟ್ ನಲ್ಲಿ ಹಾಕ್ತೇನೆ) ಮಾಡುವ ಪರಿಪಾಠ. ನಮ್ಮ ಮನೆಯಲ್ಲಿ ಫ್ರಿಜ್ ನಲ್ಲಿ ಅಲ್ಪ ಸ್ವಲ್ಪ ಉಳಿದ ತರಕಾರಿಯಿದ್ದರೆ ನಾನು ಗಜಬಜೆ ಗಿಂತ ಹೆಚ್ಚು ವಲ್ ವಲ್ ಇಷ್ಟ ಆದ್ದರಿಂದ ಅದನ್ನೇ ಮಾಡುತ್ತೇನೆ.
ಒಬ್ಬ ಪರಿಚಯದವರು ನಮ್ಮ ಮನೆಗೆ ವಲ್ ವಲ್ ಮಾಡಿದಾಗ ಬಂದಿದ್ದರು. ಹೆಚ್ಚಿನದಾಗಿ ಕಾಯಿ ರಸ ಹಾಕಿ ಮಾಡಿದ ಪದಾರ್ಥ ಎಲ್ಲರಿಗೂ ಇಷ್ಟ. ಊಟಕ್ಕೆ ಅವರಿಗೆ ಔತಣ ಕೊಟ್ಟಿದ್ದರಿಂದ ವಲ್ ವಲ್ ಹಾಗೂ ಇತರೇ ಅಡಿಗೆಗಳೂ ಇದ್ದವು. ಅವರು ವಲ್ ವಲ್ ಒಂದು ಬಿಟ್ಟು ಎಲ್ಲ ಬಡಿಸಿ ಎಂದಾಗ, ಅಡಿಗೆ ಮನೆಯಲ್ಲಿ  ಬಾಳಕಾ (ಮಜ್ಜಿಗೆಯಲ್ಲಿ ಅದ್ದಿ ಒಣಗಿಸಿದ ಹಸಿಮೆಣಸು) ಎಣ್ಣೆಯಲ್ಲಿ ಕರಿಯುತ್ತಿದ್ದ ಅಕ್ಕ,..ವ್ಹಾssssಟ್ how can anybody not love ವಲ್ ವಲ್ ಅಂತ ಛಾವಣಿ ಕಡೆ (rolling her eyes) ನೋಡ್ತಾ ಇದ್ದಳು.
ಅವರಿಗೆ ನಾನು ಕುಶಾಲಿನಲ್ಲಿ ಯಾಕಿಷ್ಟ ಇಲ್ಲ ಅಂತ ಕೇಳಿದೆ. ಅದಕ್ಕೆ ಅವರು ...’ಮಾಯಿ, ಊರಲ್ಲಿ ನಮಗಿರೋದು ತರಕಾರಿ ಅಂಗಡಿ. ಅರ್ಧ ಕೊಳೆತ ತರಕಾರಿಯಲ್ಲಿನ ಒಳ್ಳೆಯ ಭಾಗ ತೆಗೆದು ನಮ್ಮ ಮನೆಯಲ್ಲಿ ದಿನಾ ವಲ್ ವಲ್ ಮಾಡ್ತಾರೆ. ತಿಂದು ತಿಂದು ಬೇಜಾರ್ ಆಗಿದೆ. ನನಗೆ ದಾಳಿತೊವ್ವೆ ಒಂದಿದ್ದರೆ ಸಾಕಪ್ಪ’ ಅಂತ ಹೇಳಿದರು :-)
ನಾನು ಇದರಲ್ಲಿ: ಬೀನ್ಸ್, ಕ್ಯಾರೆಟ್, ಸೌತೆಕಾಯಿ, ತೊಂಡೆಕಾಯಿ, ಬಾಳೆಕಾಯಿ, ದಪ್ಪಮೆಣಸು ಸೇರಿಸಿದ್ದೇನೆ.

ಬೇಕಾಗಿರುವುದು: ನಿಮಗೆ ಬೇಕಾದ ನಾಲ್ಕೈದು ತರಕಾರಿಗಳು, ನಾಲ್ಕೈದು ಹಸಿಮೆಣಸಿನಕಾಯಿ, ಒಂದು ತೆಂಗಿನಕಾಯಿ (ಹೆರೆದು ಹಾಲು ತೆಗೆದಿಟ್ಟುಕೊಳ್ಳಿ), ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕೆಂಪು ಒಣ ಮೆಣಸು, ಉಪ್ಪು, ಒಂದು ಚಮಚ ಅಕ್ಕಿ ಹಿಟ್ಟು.
ತರಕಾರಿಗಳಿಗೆ ಸ್ವಲ್ಪ ನೀರು ಸೇರಿಸಿ, ಸೀಳಿದ ಹಸಿಮೆಣಸಿನಕಾಯಿ, ಉಪ್ಪು ಬೆರೆಸಿ ಕುಕ್ಕರ್ ನಲ್ಲಿ ಎರಡು ಸೀಟಿ ಕೂಗಿಸಿ ಆಫ್ ಮಾಡಿ.
ತಣ್ಣಗಾದ ಮೇಲೆ ಒಂದು ಕುದಿ ಬರುವಷ್ಟು ಬಿಸಿ ಮಾಡಿ. ಅರ್ಧ ಗ್ಲಾಸ್ ನೀರಿನಲ್ಲಿ ಅಕ್ಕಿ ಹಿಟ್ಟನ್ನು ಗಂಟು ಬರದಂತೆ ಕದಡಿಸಿ. ಅದನ್ನು ಕುದಿ ಬರುತ್ತಿರುವಾಗ ಬೆರೆಸಿ ಬಿಡಿ. ಒಗ್ಗರಣೆ ಹಾಕಿ. (ತೆಂಗಿನಹಾಲು ಮತ್ತು ಬೆಂದ ತರಕಾರಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಕ್ಕಿ ಹಿಟ್ಟಿನ ಕಾರ್ಯ.) ಊಟಕ್ಕೆ ಬಡಿಸುವ ಮುನ್ನ ತೆಂಗಿನ ಹಾಲು ಬೆರೆಸಿ ಸ್ವಲ್ಪ ಬಿಸಿ ಮಾಡಿ. 
ವಲ್ ವಲ್ ತಯಾರು. 
ಸೂಪ್ ತರಹ ಹಾಗೆ ಸೇವಿಸಬಹುದು, ಅಥವಾ ಅನ್ನ ಕ್ಕೆ ಸಾಥ್...ಎರಡೂ ಟೇಸ್ಟಿ. ಎರಡು ತುತ್ತು ಹೆಚ್ಚು ಉಂಡರೂ (ಹೆವಿ )ಭಾರ ಅನಿಸಲ್ಲ. 


ಅನ್ನ, ವಲ್ ವಲ್ ಮತ್ತು ಕೋಕಂ (ಸೋಲ್) ಕಡಿ
ನಾನು ವೀಕ್ ಡೇ ನಲ್ಲಿ ಇದನ್ನು ತಯಾರಿಸಿದರೆ, ನನ್ನ ಸಣ್ಣ ಮಗಳು ’momee you should prepare this on my day off (ಭಾನುವಾರ ಆಕೆಗೆ ರಜೆ), ಆಗ ಆರಾಮಾಗಿ ಬುಕ್ ಓದುತ್ತ ಎಂಜಾಯಿಸುತ್ತ ಊಟ ಮಾಡಬಹುದ” ಅಂತ. 
ವಲ್ ವಲ್ ಗೆ ಸುವರ್ಣಗೆಡ್ಡೆ, ಅಲಸಂದೆ, ಹೀರೆಕಾಯಿ, ಸಾಂಬಾರ್ ಸೌತೆ,  ಆಲೂಗಡ್ಡೆ ಕೂಡ ಬೆರೆಸಬಹುದು.
:-)

January 30, 2015

ಒಂದು ಸಣ್ಣ ಕತೆ

ಶ್ರೀಮತಿ ಅವರ ಮನೆಗೆ ಹೋದಾಗ ಬಾಗಿಲು ತೆರೆದೆ ಇತ್ತು. ಅವಳು ಸೀದಾ ಒಳಗೆ ಹೋದಳು. ಆದರೆ ನೋಡಿದ್ದೇನು. ಗಂಡ ಆಕೆಯನ್ನು ಹಿಡಿದು ’ನಿನ್ನಿಂದಲೆ ..ನಿನ್ನಿಂದಲೇ ಇದೆಲ್ಲ ಆಗಿದ್ದು ಅಂತ ಮಣಮಣಿಸುತ್ತ’ ಚಚ್ಚುತ್ತಲಿದ್ದ. ಹಿರಿ ಮಗಳು ಅವರಿಬ್ಬರನ್ನು ನೋಡುತ್ತಾ ಅಳುತ್ತಾ ನಿಂತಲ್ಲೆ ಉಚ್ಚೆಹೊಯ್ದುಗೊಂಡಿದ್ದಳು. ಪುಟ್ಟ ಮಗ ಇಲ್ಲೇನೋ ತಮಾಷೆ ನಡೀತಾ ಇದೆ ಅಂತ ಸುಮ್ಮನೆ ನೋಡುತ್ತಾ ನಿಂತಿದ್ದ. ಇವಳಿಗೆ ಗೊತ್ತಿಲ್ಲದೆ ಬಾಯಿಯಿಂದ ಚೀತ್ಕಾರ ಹೊರಟಿತು. ಅದನ್ನು ಕೇಳಿ ಅವನು ಹೆಂಡತಿಯನ್ನು ದೂಡಿ ಅಳುತ್ತಾ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಕ್ಕರಿಸಿದ. 
ಶ್ರೀಮತಿಗೆ ಅವರ ಪರಿಚಯವೇನೂ ಇಲ್ಲ. ಅದು ಹೊಸ ಬಹುಮಹಡಿ ಸಂಕೀರ್ಣ. ಅಲ್ಲಿ ಬಂದವರೆಲ್ಲ ಹೊಸಬರೆ ಮತ್ತು ಅಲ್ಲಿನ ಮನೆಗಳಲ್ಲಿ ವಾಸಿಸುವ ಪರವಾನಗಿ ಇತ್ತೀಚಿನ ಎರಡು ತಿಂಗಳಲ್ಲಿ ಸಿಕ್ಕಿದೆಯಷ್ಟೆ. ಲಿಫ್ಟ್ ಬಳಿ ಇಬ್ಬರೂ ಮಾತಿಗೆ ಸಿಕ್ಕಿದಾಗ ’ಇಲ್ಲಿನ ನೀರು ಕುಡಿಯಲು ಆಗುತ್ತಿಲ್ಲ, ನೀವು ಏನು ಮಾಡ್ತಿದ್ದೀರಾ ಅಂತ ಕೇಳಿದಾಗ, ಶ್ರೀಮತಿ, ಬಾಟಲ್ಡ್ ನೀರು ಬಳಸುತ್ತಿರುವುದರ  ಬಗ್ಗೆ ಹೇಳಿದ್ದಳು. ಅದನ್ನು ಸರಬರಾಜು ಮಾಡುವವರ ನಂಬರ್ ಬೇಕೆಂದಾಗ, ಮನೆಯಲ್ಲಿದೆ ನಂತರ ತಂದು ಕೊಡುತ್ತೇನೆ ಎಂದಿದ್ದಳು ಶ್ರೀಮತಿ. ಮನೆಗೆ ಬಂದು ನಂಬರ್ ಬರೆದುಕೊಂಡು ಅವಳ ಮನೆಗೆ ಹೋದಾಗ ಹೀಗೆಲ್ಲ ನಡೆಯುತ್ತಿತ್ತು. 
ಶ್ರೀಮತಿ ಈಗ ನಿಧಾನವಾಗಿ ಅವನ ಬಳಿ ಸಾಗಿ, ರೀ ಮಿಸ್ಟರ್ ನೀವು ಹೊಡೆದ್ರೆ ಬಡಿದ್ರೆ ಆ ಮಗು ಸರಿಯಾಗುತ್ತ? ಮಗುವಿಗೆ ಇರೋದು ಡವ್ನ್ಸ್ ಸಿಂಡ್ರೋಮ್. ನೋಡಿ ಅಲ್ಲಿ ಮಗಳು ಹೇಗೆ ಹೆದರಿಕೊಂಡು ನಿಂತಿದ್ದಾಳೆ. ನಿಮ್ಮ ಹೊಡೆದಾಟದಿಂದ ಆಕೆಯ ಮನಸ್ಸಿನ ಮೇಲೂ ಪರಿಣಾಮವಾಗುತ್ತೆ. ಹಾಗೆ ನೋಡಿದ್ರೆ ಆ ಮಗು ಹಾಗಾಗಲು ನೀವೆ ಕಾರಣ ಅಂದಾಗ ಅವನು ಆಘಾತಕ್ಕೆ ಒಳಗಾಗಿದ್ದನು. ಅದು ಹೇಗೆ ಅಂತ ಕೇಳಿದಾಗ ’ಗಂಡಸಿನ ಕ್ರೋಮೋಸೋಮ್ ಇದನ್ನು ಡಿಸೈಡ್ ಮಾಡುತ್ತೆ. ಹಾಗಾಗಿ ನೀವು ಹೆಂಡತಿಯನ್ನು ಹೊಡೆಯುವ ಹಾಗಿಲ್ಲ. ಅವನ ಮುಖ ಪೆಚ್ಚಾಯಿತು. 
ಇಂತಹ ಮಕ್ಕಳು ಸುಮಾರು ಸಮಯ ಬದುಕಿರಲ್ಲ. ಇದ್ದ ದಿನಗಳನ್ನು ಸಮಾಧಾನವಾಗಿ ವ್ಯಯಿಸಿ. ಅದನ್ನು ನೋಡಿಕೊಳ್ಳಲು ಜನ ನೇಮಿಸಿ. ನಾಲ್ಕು ದಿನ ಎಲ್ಲಾದರೂ ತಿರುಗಾಡಿಕೊಂಡು ಬನ್ನಿ. ಕಾಯಿಲೆಯಿಂದ ಬಳಲುವ ಮಗುವಿಗೆ ಇದೆಲ್ಲ ಅರ್ಥ ಆಗಲ್ಲ. ನೀವು ಎಲ್ಲಾದರು ಅದನ್ನು ಬಿಟ್ಟು ಹೋದರೆ ಅದರ ಗಮನಕ್ಕೇ ಬರುವುದಿಲ್ಲ. ಆದಷ್ಟು ನಿಮ್ಮ ಜೀವನದಲ್ಲಿ normalcy ತನ್ನಿ . ಇದರಿಂದ ನಿಮಗೆಲ್ಲರಿಗೂ ಸಮಾಧಾನ. ನಿಮ್ಮ ಜಗಳ ಹೊಡೆದಾಟದಿಂದ ಸರಿಯಿರುವ ಮಗಳ ಮನಸ್ಸನ್ನು ಕೆಡಿಸಬೇಡಿ. 
ಈಗ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬರಿದ್ದಾರೆ. ಮಗಳನ್ನೂ ನೋಡಿಕೊಳ್ತಾರಾದ್ದರಿಂದ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿ ಬಂದು ಸ್ವಲ್ಪ ನೆಮ್ಮದಿಯಿಂದ ಇರ್ತಾರೆ. 
p.s: (Downs syndrome ಕಾಯಿಲೆಗೆ ಅವನ ಕ್ರೋಮೋಸೋಮ್ ಕಾರಣವಾ ಶ್ರೀಮತಿಗೆ ಸರಿಯಾಗಿ ಗೊತ್ತಿಲ. ಆದರೆ ಗಂಡು ಮಗು ಹುಟ್ಟಲು ಖಂಡಿತ ಗಂಡಸಿನ ಕ್ರೋಮೋಸೋಮ್ ಕಾರಣ ಅಂತ ಅವಳಿಗೆ ನಿಖರವಾಗಿ ಗೊತ್ತಿತ್ತು. ಅವನಿಗೆ temporary shock ಕೊಡುವುದಷ್ಟೆ ಅವಳಿಗೆ ಬೇಕಾಗಿತ್ತು. ಮತ್ತು ಡವ್ನಸ್ ಸಿಂಡ್ರೋಮ್ ಮಕ್ಕಳ life expectancy ಇತ್ತಿಚ್ಚಿಗೆ ಹೆಚ್ಚಿದೆ)

January 18, 2015

ಕ್ಷಮಯಾಧರಿತ್ರಿ ಎಷ್ಟಂತ ??

ಸಂಜೆ ಕೆಲಸ ಮುಗಿಸಿ ಟಿ ವಿ ಎದುರು ಕುಳಿತುಕೊಂಡು ಅಕ್ಕಿ ಆರಿಸುತ್ತ ಅತ್ತೆ ಸೊಸೆ ಜಗಳದ ದಾರಾವಾಹಿ ನೋಡುತ್ತ ಕುಳಿತಿದ್ದಳು ಕರುಣಾ. ಅಷ್ಟರೊಳಗೆ ಗಂಡ ಮನೆಗೆ ಬಂದನೆಂದು ಅಡಿಗೆ ಮನೆಗೆ ಹೋಗಿ ಚಹಾ ಗೆ ನೀರಿಟ್ಟಳು. ಬಂದ ಮೇಲೆ ಯಾವಾಗಲೂ ಏನಾದರು ಕಛೇರಿಯ ವಿಷಯ ತೆಗೆದು ಕರುಣಾಳಿಗೆ ಇಷ್ಟ ವಿದೆಯೋ ಇಲ್ಲವೋ ಮಾತನಾಡುತ್ತ ಹೋಗುವುದು ಕರುಣಾ ಕೇಳುತ್ತ, ಕೆಲವೊಮ್ಮೆ ಸೂಕ್ತ ಪ್ರತಿಕ್ರಿಯೆ ನೀಡುತ್ತಿರುವುದು ಇತ್ತೀಚಿನ  ಪರಿಪಾಠ. ನಂತರ ಊಟ ಮಾಡುತ್ತ ತಂದೆ- ಮಗಳ  ಹರಟೆ, ಮಾತು ಕತೆ, ಅವರ ದಿನಚರಿ ಬಗ್ಗೆ ಅವರು ಮಾತನಾಡುವುದು ಇವಳು ಕೇಳುವುದು- ಇಂತದೆಲ್ಲ ನಡೆಯುತ್ತಿದ್ದು ಯಾಕೋ ಒಂದು ವಾರದಿಂದ ಪೂರ್ತಿ ಸ್ತಬ್ದವಾಗಿತ್ತು. ಸೂಕ್ಷ್ಮ ವಾಗಿ ಕರುಣಾ ಕೇಳಿದಾಗಲೂ ಸರಿಯಾದ ಉತ್ತರ ಬರದೆ ಕಛೇರಿಯ ತಲೆ ಬಿಸಿ ಏನೋ ಅಂದು ಕೊಂಡರೂ ಮನಸ್ಸಿನಲ್ಲಿ ಎನೋ ಅನುಮಾನ.

ಚಹಾ ಮಾಡಿ ಕೊಟ್ಟು ಅವರ ಮುಖ ನೋಡಿದಾಗ ಮುಖ ತೀರಾ ಕಳೆಗುಂದಿತ್ತು. "ಯಾಕೆ ರೀ ಹುಷಾರಿಲ್ಲವಾ, ಮುಖ ತುಂಬ ಇಳಿದಿದೆ’ ಅಂದಾಗ ಚಹಾ ಬಟ್ಟಲು ಅಲ್ಲೇ ಟಿಪಾಯ್ ಮೇಲಿಟ್ಟು ಕರುಣಾಳ ಕೈ ಗಟ್ಟಿ ಹಿಡಿದು ಅಳಲು ಆರಂಭಿಸಿದನು ಅವಳ ಗಂಡ. ಏನಾಯಿತೆಂದು ಗೊತ್ತಿಲ್ಲದೆ ಕರುಣಾಳ ಎದೆ ಡವ ಡವ ಹೊಡೆದುಕೊಂಡು ಕೈ ಕಾಲು ತಣ್ಣಗಾದವು ’ರೀ ಏನಾಯ್ತು ಹೇಳ್ರಿ’ ಅಂದಳು ಧೈರ್ಯ ತಂದು ಕೊಂಡು

ಪ್ಲೀಸ್ ನನಗೆ ಬಿಡುಗಡೆ ಕೊಟ್ಟುಬಿಡು. ನಾನು ಬೇರೊಬ್ಬಳನ್ನು ಪ್ರೀತಿಸಿದ್ದೇನೆ ಅಂದಾಗ ತಲೆ ತಿರುಗಿದಂತಾಯಿತು ಕರುಣಾಗೆ.  ಹೊರಗಡೆ ಎಫೈರ್ ಇದ್ದದ್ದು ಕರುಣಾಗೆ ಸಂಶಯ ಇತ್ತು ಆದರೂ ಕಾರಣಾಂತರಗಳಿಂದ ಸುಮ್ಮನಿದ್ದಳು. "ನಾನು ಆಕೆಯನ್ನು ಆರು ತಿಂಗಳಿಂದ ಬಲ್ಲೆ. ಈಗ ಅವಳು ಗರ್ಭಿಣಿ. ನನಗೆ ಆಕೆಯನ್ನು ಬಿಟ್ಟಿರಲಾಗುವುದಿಲ್ಲ’ ದಯವಿಟ್ಟು ನನ್ನನ್ನು ಈ ಮದುವೆಯಿಂದ ಬಿಡುಗಡೆಗೊಳಿಸು’ ನಿನಗೆ ಅನ್ಯಾಯವಾಗುತ್ತದೆ ನಿಜ. ನಾನು ಹೀಗೆ ಮುಂವರೆಸುವ ಅಂತಿದ್ದೆ, ಈಗ ಹೇಗೆ ನಡೆದುಕೊಂಡು ಹೋಗುತ್ತಿದೆಯೋ ಹಾಗೆ ನಡೆದುಕೊಂಡು ಹೋಗಲಿ ಎಂದು ಇಚ್ಛಿಸುತ್ತಿದ್ದೆ. ಆದರೆ ಅವಳಿಗೆ ಅವಳ ಮಗುವಿನ ಭವಿಷ್ಯದ ಚಿಂತೆ’ ಇದನ್ನೆಲ್ಲ ಕೇಳಿ ಕರುಣಾ ಅವಾಕ್ಕಾದಳು. ಅರೇ ಅಳಬೇಕಾದವಳು ನಾನು. ನನ್ನ  ಭವಿಷ್ಯ ಚಿಂತಿಸಿ. ಇದೇನು ಉಲ್ಟಾ ಆಗ್ತಿದೆ ಇಲ್ಲಿ.
"ನಿನ್ನ ಬಳಿ ನಾನು ಯಾವತ್ತೂ ಏನೂ ಕೇಳಿಲ್ಲ, ಆದರೆ ಇವತ್ತು ಕೈ ಮುಗಿದು ಬೇಡುತ್ತೇನೆ, ನನಗೆ ಅವಳ ಅಳು ನೋಡಲು ಆಗುತ್ತಿಲ್ಲ". ಅರೇ ನಾನು ಯಾವತ್ತದ್ರೂ ಇವರ ಬಳಿ ಏನಾದರೂ ಪಡೆದುಕೊಂಡಿದ್ದೀನಾ?? ಮನೆ ಖರ್ಚಿಗೆ ಒಂದಿಷ್ಟು ದುಡ್ಡು ಕೊಡುತ್ತಿದ್ದರು. ಅದನ್ನು ಜೋಪಾನವಾಗಿ ದುಂದುವೆಚ್ಚ ಮಾಡದಂತೆ ಅದರಲ್ಲೂ ಉಳಿತಾಯ ಮಾಡಿ ಸಂಸಾರವನ್ನು ತೂಗಿಸುತ್ತಿದ್ದೆ. ನನ್ನ ಬಳಿ ಇರುವ ಸೀರೆ ಓಡವೆ ಬಹುತೇಕ ಅತ್ತೆ ಮನೆಯಿಂದ ಆಪ್ತೇಷ್ಟರ ಮದುವೆ ಮುಂಜಿಯಲ್ಲಿ ಕೊಟ್ಟಿದ್ದು. ನನ್ನ ಬಳಿ ಏನೂ ಇಲ್ಲ ಅಂದುಕೊಂದಿದ್ದೆ. ಅವರ ಬಿಡುಗಡೆಯ ದಾರಿ ನನ್ನಲ್ಲಿದೆಯೇ ಅಂತ ಒಂದು ಕ್ಷಣ ಚಿಂತಿಸಿದಳು. ಸ್ನಾನದ ಮನೆಗೆ ಹೋಗಿ ಸ್ವಲ್ಪ ಹೊತ್ತು ಅತ್ತಳು ಕರುಣಾ. ಆ ಮೇಲೆ ರಭಸದಿಂದ ತನ್ನ ಕಣ್ಣು ಮುಖವನ್ನು ಸ್ವಚವಾಗಿ ತೊಳೆದು. ಇದು self pity ಗೆ ಸಮಯವಲ್ಲ, ಮುಂದಿನದನ್ನು ಚಿಂತಿಸಬೇಕು. ಒಲ್ಲದ ಸಂಬಂಧ ಇಟ್ಟುಕೊಂಡು ಸಾಧಿಸುವುದಾದರೂ ಏನು? ರಾತ್ರಿ ಊಟ ಮಾಡುವಾಗ ಮಗಳಿಗೂ ಈ ವಿಷಯ ತಿಳಿಸಿದಳು. ಮಗಳು ಸ್ವಲ್ಪವೂ ಬೇಸರಿಸಿಕೊಳ್ಳಲಿಲ್ಲ.
’ಆಯ್ತು ವಿಚ್ಛೇದನ ಪ್ರತಿಗೆ ಸಹಿಹಾಕುತ್ತೇನೆ ಅಂದಾಗ ಅವರ ಮುಖ ಸಂತಸದಿಂದ ಅರಳಿದ್ದು ನೋಡಿ ಅವಳ ಹೃದಯ ಮುದುಡಿತ್ತು.  
ಮರುದಿನ ಅವನು ಬೆಳಿಗ್ಗೆ ಎದ್ದು ಬೇಗ ಬೇಗ ತಯಾರಾಗಿ ತನ್ನ ಬಟ್ಟೆ ಬರೆ, ಕಛೇರಿಯ ಕಡತಗಳು, personal documents ಗಳನ್ನು ಮಧ್ಯಾಹ್ನದ ತನಕ ಜೋಡಿಸಿ , ’ಡಿವೋರ್ಸ್ ಪೇಪರ್ ಅನ್ನು ಪೋಸ್ಟ್ ಮೂಲಕ ಕಳುಹಿಸುತ್ತೇನೆಂದು, ಮಗಳು ನನ್ನ ಜತೆ ಇರುತ್ತಳೆಂದು ಹೇಳಿ, ಇನ್ನು ಈ ಮನೆಯಲ್ಲಿ ಏನೇನು ಉಳಿದಿದೆ ಅವೆಲ್ಲ ನಿನ್ನದು. ಹೇಗೆ ಬೇಕೋ ಹಾಗೆ ಉಪಯೋಗಿಸಿಕೋ ಅಂತ ಸಾಮನುಗಳನ್ನೆಲ್ಲ ಗಾಡಿಯಲ್ಲಿ ಹೇರಿ, ಒಂದುಸಲವೂ ಹಿಂದಿರುಗೆ ನೋಡದೆ ಹೊರಟಾಗ ಕರುಣಾಗೆ ಆದ ನೋವು ಅಷ್ಟಿಷ್ಟಲ್ಲ. ಅವರಿಗೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವುದು ಅಷ್ಟು ಸುಲಭವೆನಿಸಿತೇ? ನಾನೇನೂ ತಪ್ಪು ಮಾಡದೆ, ಜಗಳ, ಕಿರುಕುಳ ಕೊಡದೆ ಅವರು ಹೇಳಿದ್ದಕ್ಕೆಲ್ಲ ಗೋಣಾಡಿಸಿಕೊಂಡಿದ್ದರೂ ಅದು ಅವರಿಗೆ ಸಾಕಾಗಲಿಲ್ಲವೇ?  ಬೇಡ ಬೇಡ ವೆಂದರೂ ಕಣ್ಣೀರು ಧೀಡಿರನೆ ದಾಳಿ ಮಾಡಿತು. ಮಗಳು ಕೂಡ ನನ್ನ ಬಳಿಯಲ್ಲಿರಲು ಇಚ್ಛಿಸಲಿಲ್ಲ. ಇನ್ನು ನನ್ನ ಜೀವನ ಹೇಗೆ ಸಾಗಿಸಬೇಕೆಂದು ನನ್ನ ಮುಂದೆ ಇರುವ ದಾರಿ. ನನ್ನ ಎಕೌಂಟ್ ನಲ್ಲಿ ಒಂದಿಷ್ಟು ಹಣ ಇದೆ. ಅದು ಮುಗಿಯುವ ಮುನ್ನಮುಂದಿನ ಜೀವನಕ್ಕೆ ದಾರಿ ಕಂಡುಕೊಳ್ಳಬೇಕು.  ಕೂತು ತಿಂದರೆ ಕುಡಿಕೆ ಹಣ ಸಾಲದು....
......................................................................................................
ಕರುಣಾಳ ತಂದೆ ತಾಯಿಗೆ ಕಡು ಬಡತನ.  ಆಕೆ ಕಲಿತದ್ದು ಬರೀ ಹತ್ತನೆ ತರಗತಿ. ಹೆಚ್ಚು ಓದಲು ಆಕೆಗೆ ಅವಕಾಶವೇ ಇರಲಿ. ದೂರದ ಸಂಬಂಧದಲ್ಲಿ ಮದುವೆಯಾಗಿ ಗಂಡನ ಮನೆಗೆ ಬಂದಳು. ಅದೂ ಅತ್ತೆಗೆ ಕಾಯಿಲೆ ಇದ್ದುದರಿಂದ ನೋಡಿಕೊಳ್ಳಲು ಹೆಣ್ಣು ದಿಕ್ಕು ಬೇಕೆಂದು. ಇದನ್ನು ಕರುಣಾಳಿಗೆ ಅವಳ ಮಾವ ಮನದಟ್ಟು ಮಾಡಿಯೇ ಅವಳಿಂದ ಮದುವೆಗೆ ಒಪ್ಪಿಗೆ ಪಡಕೊಂಡಿದ್ದು. ಹಾಗೂ ಮಗನೂ ಜವಾಬ್ದಾರಿಯಿಂದ ಇರಬಹುದು ಅಂತ ಅವರ ಆಶೆಯಿತ್ತು. ಅತ್ತೆ ಮಾವ ಇರುವುದು ಹಳ್ಳಿಯಲ್ಲಿ. ಕರುಣಳ ಗಂಡನಿಗೆ ದೂರದ ಪೇಟೆಯಲ್ಲಿ ಒಳ್ಳೆಯ ನೌಕರಿ. ವಾರಕ್ಕೊಮ್ಮೆ ಮನೆಗೆ ಬರಲು ಆಗುತ್ತಿತ್ತು. ಮದುವೆಯಾದ ಒಂದು ತಿಂಗಳು ತಪ್ಪದೆ ಪ್ರತಿ ವಾರ ಮನೆಗೆ ಬರುತ್ತಿದ್ದ ಅವಳ ಗಂಡ, ಆಮೇಲೆ ಕೆಲಸ, ಬಡ್ತಿಯ ನೆವ ಹೇಳಿಕೊಂಡು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಬರುವುದು ರೂಢಿಯಾಯಿತು. ಇದರಿಂದ ಕರುಣಾಳ ಮಾವ ತುಂಬ ನೊಂದುಕೊಂಡರು, ಕರುಣಾಳನ್ನು ಈ ಮನೆಯ ಸೊಸೆಯಾಗಿ ತಂದು ತಪ್ಪು ಮಾಡಿದ್ದೇನೇನೋ ಅಂತ.
ಇಷ್ಟರಲ್ಲೇ ಕರುಣಾಗೆ ಒಂದು ಹೆಣ್ಣು ಮಗಳು ಹುಟ್ಟಿದ್ದಲ್ಲದೇ ಅವಳ ಅತ್ತೆಯೂ ಕಾಲವಾದರು.  ಮಗಳು ಶಾಲೆಗೆ ಹೋಗುವ ವಯಸ್ಸಾದಾಗ "ಈ ಹಳ್ಳಿ ಕೊಂಪೆಯಲ್ಲಿ ನನ್ನ ಜಾಣ ಮಗಳು ಬೆಳೆಯುವುದು ಬೇಡ’ ಅಂತ ಕರುಣಾಳ ಗಂಡ ಮಗಳನ್ನೂ ಕರೆದುಕೊಂಡು ಪೇಟೆ ಕಡೆ ನಡೆದು ಬಿಟ್ಟನು.
ಈಗ ಮನೆಯಲ್ಲಿ ಮಾವ ಮತ್ತು ಸೊಸೆ ಅಷ್ಟೆ. ಹಳ್ಳಿಯಲ್ಲಿ ತೋಟ ಗದ್ದೆ ಮಾತ್ರವಲ್ಲದೇ ಅವರದ್ದೆ ಕಿರಾಣಿ ಅಂಗಡಿ ಕೂಡ ಇತ್ತು. ಕರುಣಾ ಮನೆ ಕೆಲಸ ಎಲ್ಲ ಮುಗಿಸಿ ಮಾವನವರಿಗೆ ಅಂಗಡಿ ಕೆಲಸಗಳಲ್ಲಿ ನೆರವಾಗುತ್ತಿದ್ದಳು. ಅವಳು ಅಂಗಡಿ ನಿರ್ವಹಿಸುವುದನ್ನು,  ಲೆಕ್ಕ ಮಾಡುವ ಚಾಕ ಚಕ್ಯತೆ ನೋಡಿ ಅವಳ ಮಾವನನವರಿಗೆ ಒಂದು ಉಪಾಯ ಹೊಳೆಯಿತು. ಅವಳನ್ನು ಊರಲ್ಲೇ ಇರುವ ಕಾಲೇಜಿಗೆ ಸೇರಲು ಪ್ರೆರೇಪಿಸಿದರು. ಅವಳು ಬಿ ಕಾಮ್ ಮಾಡಿ ಎಕೌಂಟ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಮತ್ತೇ ಮಾವನವರಿಗೆ ಅಂಗಡಿಯನ್ನು ಇನ್ನೂ ಚೆನ್ನಾಗಿ ನಿರ್ವಹಿಸುವಲ್ಲಿ ಹೊಸ ಹೊಸ ಐಡಿಯಾ ಅಳವಡಿಸುವುದರಲ್ಲಿ ಸಹಾಯ ಮಾಡುತ್ತಿದ್ದಳು. ಮಾವನವರ ಆರೋಗ್ಯ ಹದೆಗೆಡುತ್ತ ಹೋದ ಹಾಗೆ ಅವಳು ಅಂಗಡಿಯ ಪೂರ್ತಿ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಳು. ಮಾವನವರು ಸಾಯುವ ಮುಂಚೆ ಅವರ ಆಸ್ತಿಯನ್ನು ಅವಳ ಹೆಸರಿಗೆ ಬರೆದುಬಿಟ್ಟರು. ಅವಳು ಬೇಡ ಬೇಡ ಅಂದರು ಸಹ.." ನಿನಗೆ ಅನ್ಯಾಯ ಆಗಿದೆ. ಅವನ ಅಮ್ಮ ಅವನಿಗೆ ಒಬ್ಬನೆ ಗಂಡು ಮಗ ಎಂದು ತಲೆ ಏರಿಸಿ ಕೂರಿಸಿದ್ದು ಸ್ವಲ್ಪ ಹೆಚ್ಚೆ ಆಯಿತು, ಯಾಕೋ ಅವನಿಗೆ ತನ್ನವರಿಗಿಂತ ಪೇಟೆಯ ಆಕರ್ಷಣೆನೆ ಹೆಚ್ಚಾಯಿತು.’ ಅಂದಾಗ ಇಲ್ಲ ಮಾವ ನೀವು ಬೇಜಾರು ಮಾಡಬಾರದು. ಆದದ್ದೆಲ್ಲಾ ಆಯಿತು, ಮತ್ತೆ ನಮ್ಮ ಮನೆಯಲ್ಲಿದ್ದಾಗ ನಮಗೆ ಎರಡು ಹೊತ್ತಿನ ಊಟಕ್ಕೂ ತುಂಬಾ ತೊಂದರೆ ಆಗಿತ್ತು. ನಾನಿಲ್ಲಿ ಆರಾಮಾಗೆ ಇದ್ದೀನಿ’ ಅಂದಳು.
ಮಾವನವರು ತೀರಿಕೊಂಡ ಸಮಯ ಗಂಡ ಮಗಳು ಅತಿಥಿಗಳಂತೆ ಬಂದು ಹೋದರು. ಆಸ್ತಿ ಕರುಣಾಳ ಹೆಸರಿಗೆ ಆಗಿದ್ದು ಅವಳ ಗಂಡನಿಗೇನೂ ಬೇಜಾರು ಅಥವಾ ಸಿಟ್ಟು ಆಗಲಿಲ್ಲ, ಬದಲಿಗೆ ಖುಶಿಯೇ ಪಟ್ಟರು. ಅವಳೂ ಸಂಪೂರ್ಣವಾಗಿ ಕಿರಾಣಿ ಅಂಗಡಿ ನಡೆಸುವಲ್ಲಿ ವ್ಯಸ್ತಳಾದಳು. ಇದಾದ ಸ್ವಲ್ಪ ಸಮಯದ ನಂತರ ಪೇಟೆಯಲ್ಲಿ ಗಂಡನ ಕಛೇರಿಯಿಂದ ಟೆಲಿಗ್ರಾಮ್ ಬಂತು. ’ಯುವರ್ ಹಸ್ಬೆಂಡ್ ಸಿರೀಯಸ್ ಸ್ಟಾರ್ಟ್ ಇಮ್ಮಿಡಿಯಟ್ಲೀ’ ಅಂತ. ಅಂಗಡಿ ಕೆಲಸಗಳನ್ನು ಕೆಲಸಗಾರರಿಗೆ ಒಪ್ಪಿಸಿ ಸ್ವಲ್ಪ ದುಡ್ಡು ಹಿಡಿದುಕೊಂಡು ಗಂಡನ ಆಫಿಸ್ ಬಳಿ ಹೋದಳು ಕರುಣಾ. ಅಲ್ಲಿನ ಸಿಬ್ಬಂಧಿಗಳು ಆಕೆಗೆ ಅವಳ ಗಂಡನನ್ನು ಸೇರಿಸಿದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಜಾಂಡೀಸ್ ಕಾಯಿಲೆ ಗೊತ್ತಾಗದೇ ಉಲ್ಬಣಗೊಂಡು ತುಂಬಾ ಬಳಲಿದ್ದರು. ಆರು ತಿಂಗಳ ವಿಶ್ರಾಂತಿ ಮತ್ತು ಪಥ್ಯದ ಅಡುಗೆ ಹೇಳಿದ್ದರು ವೈದರು. ಮನೆಯಲ್ಲಿ ಶಾಲೆಗೆ ಹೋಗುವ ಮಗಳು. ನೋಡಿಕೊಳ್ಳಲು ಯಾರೂ ಇಲ್ಲವೆಂದು ಕರುಣಾಳಿಗೆ ಹೇಳಿ ಕಳುಹಿಸಿದ್ದರು.
ಕರುಣಾ ಈಗ ಇಲ್ಲೇ ಆದಳು. ಗಂಡನ ಆರೋಗ್ಯ ಪೂರ್ತಿ ಸರಿಯಾದ ಮೇಲೆ ಒಂದು ದಿನ ಅವರು ಅಚಾನಕ್ಕಾಗಿ ’ಊರಿನಲ್ಲಿರುವ ಆಸ್ತಿ ಅಂಗಡಿ ಮಾರಿ ಇಲ್ಲೇ ಇರಬಹುದಲ್ಲ’ ಎಂದು. ಕರುಣಾಳಿಗೆ ಖುಶಿ. ನನ್ನದೂ ಒಂದು ನಾರ್ಮಲ್ ಕುಟುಂಬ ಆಗ ಬಹುದು. ಗಂಡ ಮಗಳು ಮನೆ ಅಂತ ನಾನೂ ಖುಶಿಯಾಗಿರಬಹುದು ಅಂತ. ಮಗಳೇನೂ ಇವಳ ಜತೆ ಹೆಚ್ಚು ಮಾತಾಡ್ತಿರಲಿಲ್ಲ. ಈಗ ಅವಳು ಒಂಬತ್ತನೇಯ ತರಗತಿ. ಊರಿನಲ್ಲಿರುವ ಅಂಗಡಿ ತೋಟ ಎಲ್ಲ ಬೇರೆಯವರಿಗೆ ವಹಿಸಿ ಕೊಟ್ಟು ಅವಳು ಪೇಟೆಯಲ್ಲಿ ಆರಾಮಾಗಿದ್ದಳು. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಅವರ ಲಂಚ್ ಬಾಕ್ಸ್ ಗೆ ಅಡುಗೆ ಮಾಡಿದರೆ ಆಮೇಲೆ ದಿನವಿಡಿ ನಿಧಾನಕ್ಕೆ ತನ್ನ ಉಳಿದ ಕೆಲಸ ಬೊಗಸೆ ಮುಗಿಸುತ್ತಿದ್ದಳು. ಗಂಡ ಮಗಳ ಸಂಭಾಷಣೆಯಲ್ಲೇ ಅವಳಿಗೆ ಖುಶಿ. ಇವಳ ಜತೆ ಇಬ್ಬರೂ ಇಷ್ಟ ಇದ್ದರೆ ಮಾತನಾಡುತ್ತಿದ್ದರು ಇಲ್ಲದಿದ್ದರೆ ಇಲ್ಲ.
ಈಗ ಇದು...
ಬ್ಯಾಂಕ್ ಗೆ ಹೋಗಿ ತನ್ನ ಖಾತೆಯಲ್ಲಿ ದುಡ್ಡು ಎಷ್ಟಿದೆಯೆಂದು ನೋಡಿದಳು. ವಾಪಸ್ ಆಗುವಾಗ ಸೀರೆ ಅಂಗಡಿಯ ಮಾರವಾಡಿಯು ವಾಂಟಡ್ ಸೇಲ್ಸ್ ವುಮನ್ ಅಂತ ಬೋರ್ಡ್ ಹಾಕಿದ್ದು ನೋಡಿ ಕೂಡಲೆ ಅಲ್ಲಿ ಹೊಕ್ಕಳು. ಅವಳಿಗೆ ಏನನ್ನೂ ಆಲೋಚಿಸುವುದು ಬೇಡವಗಿತ್ತು. ಮಾರವಾಡಿ ಮತ್ತು ಅವನ ಹೆಂಡತಿ ಇವಳಿಗೆ ಕೂಲಂಕಷವಾಗಿ ಪ್ರಶ್ನಿಸಿ ಅವಳನ್ನು ಕೆಲಸಕ್ಕಿಟ್ಟುಕೊಂಡರು. ದೀಪಾವಳಿ ಹಬ್ಬ ಸನೀಹವಿತ್ತು. ಆಗ ಅವರಿಗೆ ವ್ಯಾಪಾರ ಜೋರು. ಹಿಂದಿನ ದಿನವಷ್ಟೆ ಜಗಳವಾಡಿಕೊಂಡು ಇಬ್ಬರು ಸೇಲ್ಸ್ ಗರ್ಲ್ ಕೆಲಸ ಬಿಟ್ಟು ಹೋಗಿದ್ದರು. ಹಾಗಾಗಿ ತುಂಬಾ ಏನೂ ವಿಚಾರ ಮಾಡದೆ ಕರುಣಾಳಿಗೆ ಕೆಲಸ ಕೊಟ್ಟರು. ತನ್ನ ಕೆಲಸಗಳನ್ನು ಕರುಣಾ ಚೆನ್ನಾಗಿಯೇ ನಿಭಾಯಿಸುತ್ತಿದ್ದಳು. ಸಂಬಳ ತುಂಬ ಕಡಿಮೆ ಕೆಲಸ ಹೆಚ್ಚಿದ್ದರೂ ಕರುಣಾಳಿಗೆ ಅದೇಬೇಕಿತ್ತು. ರಾತ್ರಿ ಮಲಗಿದ ಕೂಡಲೆ ನಿದ್ದೆ ಬರುವಷ್ಟು ದೇಹ ಬಳಲಿಸುತ್ತಿದ್ದಳು. ಮನೆ ಸುಮಾರಾಗಿ ದೊಡ್ಡದಾಗಿತ್ತು ಒಬ್ಬಳಿಗೆ ಅದೂ ತುಂಬ ದೊಡ್ಡ ಅನಿಸಿತ್ತು. ಆದ್ದರಿಂದ ಅವಳು ಪಿ ಜಿ ಕೂಡ ನಡೆಸಲು ಶುರು ಮಾಡಿದಳು. ನಾಲ್ಕು ಜನ ಹೆಣ್ಣು ಮಕ್ಕಳು ಇವಳನ್ನು ಬಾಯಿ ತುಂಬಾ ಆಂಟಿ ಅಂದುಕೊಂಡು ಅಂಟಿಕೊಂಡು ಬಿಟ್ಟರು. ಬೆಳಿಗ್ಗೆ ಎಲ್ಲರಿಗೂ ತಿಂಡಿ ಅಡಿಗೆ ಮಾಡಿ ಹೋಗುತ್ತಿದ್ದಳು. ಭಾನುವಾರ ರಾತ್ರಿ ಹೊರಗಿನಿಂದ ಊಟ ತರಿಸಿ ಈ ಮಕ್ಕಳೊಂದಿಗೆ ಮಕ್ಕಳಾಗಿ, ಟಿ ವಿ ಕಾರ್ಯಕ್ರಮಗಳನ್ನು ನೋಡುತ್ತಿದ್ದಳು.
ಒಂದು ದಿನ ಅವಳು ಕೆಲಸ ಮಾಡುವ ಕಡೆ ಎಕೌಂಟ್ಸ್ ನವನು ಕೈ ಕೊಟ್ಟು ಫಜೀತಿಯಾಯಿತು. ಆಗ ಕರುಣಾ ಅದನ್ನು ತಾನು ನಿರ್ವಹಿಸುತ್ತೇನೆಂದು , ತನ್ನ ಬಳಿ ಸೂಕ್ತ ಡಿಗ್ರಿಯಿದೆಯೆಂದು ಬಾಯಿ ಬಿಟ್ಟಳಲ್ಲದೇ ಸ್ವಲ್ಪದರಲ್ಲೇ ತನ್ನ ಬಾಳಿನ ಕತೆ ಹೇಳಿ ಮುಗಿಸಿದಳು. ಆ ದಿನದಿಂದ ಮಾರವಾಡಿ ಆಕೆಯನ್ನು ಎಕೌಂಟೆಂಟ್ ಹುದ್ದೆ ಕೊಟ್ಟಿದ್ದಲ್ಲದೇ, ಸಂಬಳ ಹೆಚ್ಚಿಸಿ ಅವಳದ್ದೇ ಆದ ಕ್ಯಾಬಿನ್ ಕೂಡ ಕೊಟ್ಟ. ಸೀರೆ ಮಾರುವುದಲ್ಲ್ದೇ ಬೇರೆ ಬೇರೆ ಊರಿಗೆ, ದೇಶಗಳಿಗೆ ಅವನ ಅಂಗಡಿಯಿಂದ ಸೀರೆಗಳು ರವಾನೆಯಾಗುತ್ತಿದ್ದವು. ಅಂಗಡಿಯ ಹಿಂದಗಡೆ ದೊಡ್ಡ ಗೋಡೌನ್ ಇತ್ತು. ಅದಕ್ಕೆ ಬರುವ ಹೋಗುವ ಸೀರೆಗಳ ಸ್ಟಾಕ್ ಲೆಕ್ಕ ಇಡಲು ಆರಂಭಿಸಿದ ಮೇಲೆ, ಉಳಿದವರು ಎಷ್ಟು ಮೋಸ ಮಾಡಿದ್ದಾರೆ ಅಂತ ಮಾರವಾಡಿ ದಂಪತಿಗಳಿಗೆ ಮನದಟ್ಟಾಗಿ, ಆಕೆಯನ್ನು ಸೇಲ್ಸ್ ಗರ್ಲ್ ಹುದ್ದೆಯಲ್ಲಿ ಅಷ್ಟು ಸಮಯ ಇಟ್ಟಿದ್ದು ಪೇಚಾಡಿಕೊಂಡರು. ಈಗ ಕರುಣಾ ಅವರ ಕುಟುಂಬದ ಸದಸ್ಯೆಯನ್ನುವಷ್ಟು ಸನೀಹವಾಗಿದ್ದಳು. ಹಬ್ಬ ಹರಿದಿನ ಅವರ ಮನೆಗೆ ಹೋಗಿ ಹಬ್ಬ ಆಚರಿಸಿ ಊಟ ಮಾಡಿ ಬರುತ್ತಿದ್ದಳು.
ಒಂದು ದಿನ ಸಂಜೆ ಅವಳು ಮನೆಗೆ ಬರುವಾಗ ಅವಳ ಮಗಳು ಬಾಗಿಲ ಬಳಿ ಕೂತು ಶಾಲೆಯ ಪುಸ್ತಕ ಓದುತ್ತಿದ್ದಳು. ಇವಳು ಕೇಳಿದ್ದಕ್ಕೆ ’ಅಮ್ಮ ಪ್ಲೀಸ್ ನನ್ನನ್ನು ಕ್ಷಮಿಸು. ಇನ್ನು ಮುಂದೆ ನಿನ್ನ ಜತೆ ಇರುತ್ತೀನಿ, ನಿನಗೆ ಎಲ್ಲ ಕೆಲ್ಸ ಮಾಡಿಕೊಟ್ಟು ಶಾಲೆಗೆ ಹೋಗುತ್ತೇನೆ’ ಅಂತ ಅಳಲು ಶುರು ಮಾಡಿದಳು. ಮೊದಲು ಬೀಗ ತೆಗೆದು ಮನೆಯೊಳಕ್ಕೆ ಹೊಕ್ಕು ಅವಳಿಗೆ ಬಿಸಿ ಬಿಸಿ ಕಾಫಿ ಮಾಡಿಕೊಟ್ಟು, ’ಈಗ ಹೇಳು ಏನಾಯ್ತು’ ಅಂತ ಕೇಳಿದಳು. ಆ ಮನೆಯಲ್ಲಿ ಮಗು ಹುಟ್ಟಿದ ಮೇಲೆ ಅಪ್ಪನ ಇನ್ನೊಂದು ಹೆಂಡತಿಯ ಅಸಹನೆ ಬೆಳೆದು ಇವಳ ಮೇಲೆ ಕಿಡಿಕಾರುತ್ತಿದ್ದಳಂತೆ’ ಓದಲು ಬರೆಯಲು ಆಗದಷ್ಟು ಕೆಲಸ ಮಾಡಿಸುತ್ತಿದ್ದಳಂತೆ, ಅಷ್ಟೆ ಅಲ್ಲದೇ ತಲೆ ಚಿಟ್ಟು ಹಿಡಿಯುವಷ್ಟು ಸದಾ ಅಳುವ ಮಗುವಂತೆ. ಅಪ್ಪ ಕೂಡ ನನ್ನ ಮೇಲೆ ಸಿಡಿ ಸಿಡಿ ಗೊಳ್ಳುವುದನ್ನು ಶುರು ಮಾಡಿದ್ದಾರೆ. ಅದಕ್ಕೆ ಇಲ್ಲೇ ಬಂದು ಬಿಟ್ಟೆ. ಇರಲಾ ನಿನ್ನ ಜತೆ ಅಥವಾ ನನ್ನ ಮೇಲೆ ಸಿಟ್ಟಾ. ನನ್ನನ್ನು ಚಿಕ್ಕವಳಿದ್ದಾಗ ನೀನು ಜತೆ ಇಟ್ಟುಕೊಳ್ಳಲಿಲ್ಲಾಂತ ಅಪ್ಪ ಹೇಳಿ ಹೇಳಿ ನನ್ನ ಬ್ರೈನ್ ವಾಶ್ ಮಾಡಿದ್ದರು. ಈಗ ನಿಧಾನಕ್ಕೆ ನನಗೆ ಎಲ್ಲ ಅರ್ಥ ಆಗುತ್ತಾ ಇದೆ. ಪ್ಲೀಸ್ ಕ್ಷಮಿಸಿಬಿಡು ಮಾಮ್’ ಅಂದಳು. ಅವಳನ್ನು ಅಪ್ಪಿಕೊಂಡು ಕುಣಿದಾಡುವುದೊಂದು ಬಾಕಿ ಕರುಣಾ.
**********************************************
ಕರುಣಾಳ ಗಂಡನಿಗೆ ತಲೆ ಚಿಟ್ಟು ಹಿಡಿದು ಹೋಗಿತ್ತು. ಆಫಿಸ್ ಬಳಿಯ ಹೋಟಲ್ ಗೆ ಬಂದು ಕೂತಿದ್ದ. ಮಗಳು ಮನೆಯಿಂದ ಹೊರಬಿದ್ದು ಪುನ: ಕರುಣಾಳ ಬಳಿಗೆ ಹೋಗಿದ್ದು ಅವನಿಗೆ ಶಾಕ್ ಆಗಿತ್ತು. ಅವನ ಇನ್ನೊಬ್ಬ ಹೆಂಡತಿಗೆ ಹೆರಿಗೆಯಲ್ಲಿ ಕಷ್ಟವಾಗಿ ಈಗೀಗ ಆರೋಗ್ಯ ಕೂಡ ಸರಿಯಿರುತ್ತಿರಲಿಲ್ಲ. ಅವಳ ತಂಗಿ ಮನೆಗೆ ಬಂದು ಇದ್ದರೂ ಇಬ್ಬರಿಗೂ ಯಾವಾಗಲೂ ಜಗಳ. ಆಫಿಸಿನ ಕೆಲಸಗಳಿಂದ ಮನೆಗೆ ಹೋಗಿ ಸ್ವಲ್ಪ ಹೊತ್ತು ನಿರುಮ್ಮಳವಾಗಿರುವ ಅಂದ್ರೆ ಇಬ್ಬರ ಕಿರಿಕಿರಿಯಲ್ಲದೇ ಯಾವಗಲೂ ಅಳುತ್ತಲೇ ಇರುವ ಮಗು. ಅದನ್ನು ಡಕ್ಟರ್ ಬಳಿಯಾದರೂ ಕರೆದುಕೊಂಡು ಹೋಗುವ ಅಂದ್ರೆ ಇವಳ ಜೋರು ’ಪುಟ್ಟ ಮಕ್ಕಳಲ್ಲಿ ಇದೆಲ್ಲ ಮಾಮೂಲು’ ನಿಮಗೇನು ನಿಮ್ಮ ಮಗಳು ಚಿಕ್ಕವಳಿರುವಾಗ ಅಮ್ಮನ ಬಳಿ ಇದ್ದಿದ್ದು’ ಸ್ವಲ್ಪ ತಿಳುವಳಿಕೆ ಬಂದ ಮೇಲಲ್ಲವೇ ನೀವು ಅವಳನ್ನು ನಿಮ್ಮ ಬಳಿ ಇರಲು ಕರೆದುತಂದಿದ್ದು’ ಅಂತ ಹಂಗಿಸುತ್ತಿದ್ದಳು.
ಯಾಕೋ ಸಂಯಮಿ ಕರುಣಾ ಇತ್ತೀಚಿಗೆ ತುಂಬಾ ಕಾಡುತ್ತಿದ್ದಳು. ಯಾವಗಲೂ ನಗು ಮುಖ. ತಾನಾಯಿತು ತನ್ನ ಕೆಲಸವಾಯಿತು. ತನಗೆ ಆರೋಗ್ಯ ತಪ್ಪಿದಾಗ ಈಕೆ ಒಂದು ದಿನ ಕೂಡ ಆಸ್ಪತ್ರೆಗೆ ಬರಲಿಲ್ಲ. ರಜೆ ಯಿದ್ದಾಗ ಆಫಿಸ್ ನ ಕಲೀಗ್ ಗಳ ಜತೆ ಪಿಕ್ನಿಕ್ ಗೆ ಹೋಗಿದ್ದಳು. ಅಡೆ ಕರುಣಾ ತಾನು ಎಷ್ಟು ನಿರ್ಲಕ್ಷಿಸಿ ಅವಮಾನ ಮಾದಿದರೂ ಕೂಡಲೆ ಉಟ್ಟ ಬಟ್ಟೆಯಲ್ಲೇ ಹೊರಟು ಬಂದಿದ್ದಳು. ಕರುಣಾಳ ಅಡಿಗೆಯಂತೂ ಎಷ್ಟು ಅಚ್ಚುಕಟ್ಟು ರುಚಿಕರ. ಇವಳು ಅಡಿಗೆ ಮಾಡಿದರೆ ಬಾಯಲ್ಲಿ ಹಾಕಲು ಆಗುತ್ತಿರಲಿಲ್ಲ. ಯಾವಾಗಲೂ ಗರಂ ಮಸಾಲೆ. ಬೇರೆ ಯೇನಾದರು ಮಾಡು ಅಂದ್ರೆ, ;ಹೋಟಲ್ ಗೆ ಹೋಗಿ ತಿನ್ನಿ’ಅಥವಾ ಅಡುಗೆಯವಳನ್ನಿಟ್ಟುಕೊಳ್ಳಿ, ನನ್ನನ್ನೇನೂ ನಿಮ್ಮ ಹಳೆ ಹೆಂಡತಿ ಅಂತ ತಿಳಕೊಂಡ್ರಾ ಅಂತ ಮುಖಕ್ಕೆ ಹೊಡೆಯುವ ಹಾಗೆ ಉತ್ತರಿಸುತ್ತಿದ್ದಳು.
ಅಗೋ ಆ ಟೇಬಲ್ ನಲ್ಲಿ ಅದೇನು ಗೌಜು-ಗಮ್ಮತ್ತು, ನಗು. ಯರಾದ್ದೋ ದನಿ ಕರುಣಾಳ ದನಿಯನ್ನು ಹೋಲುತ್ತಿದೆಯಲ್ಲ. ಬೆಳಿಗ್ಗೆ ಅಡುಗೆಮಾಡುವಾಗ ಅವಳು ತನ್ನಷ್ಟಕ್ಕೆ ತಾನೆ ನಿಧಾನವಾಗಿ ಸುಶ್ರ್ಯಾವ್ಯವಾಗಿ ಹಾಡುತ್ತಿದ್ದಳು. ಹಾ ಎಷ್ಟು ಮಿಸ್ ಮಾಡ್ತಾ ಇದ್ದೇನೆ ಅವಳನ್ನ.
ಕಾಯಿಲೆ ಬಿದ್ದ ಹೆಂಡತಿ ಕಾಯಿಲೆ ಜಾಸ್ತಿಯಾಗಿ ಮೂರುದಿನ ಗಳ ಹಿಂದೆ ತೀರಿಕೊಂಡಳು. ಚಿಕ್ಕ ಮನೆ ತುಂಬಾ ಗಿಜಿ ಗಿಜಿ ಜನ ಅವರ ಗದ್ದಲ, ಅಳುವ ಮಗು ಇದರಿಂದ ತಲೆ ಹಾಳಾಗಿತ್ತು. ಇವತ್ತು ಮನೆ ಖಾಲಿ. ಅವಳ ತಂಗಿ ಮಾತ್ರ ಇದ್ದಾಳೆ ಆದರೆ ಬೆಳಿಗ್ಗೆ ಯಿಂದ ಮಗುವನ್ನು ನೋಡಿಕೊಳ್ಳಲು ಯಾರನ್ನಾದರೂ ಇಟ್ಟುಕೊಳ್ಳಿ ನಾನು ಊರಿಗೆ ಹೋಗಬೇಕೆಂಬ ಒಂದೆ ವರಾತ, ಹಾಗೆ ತಟ್ಟನೆ ಯಾರು ಸಿಗುತ್ತಾರೆ?
ಅವನಿಗೆ ತಟ್ಟನೆ ಮನಸ್ಸಿನಲ್ಲೊಂದು ಮಿಂಚು ಹೊಳೆಯಿತು. ನಾನು ಕರುಣಾಳನ್ನು ಮಿಸ್ ಮಾಡ್ತಾ ಇದ್ದೇನೆ. ಅವಳು ಕೂಡ ನನ್ನನ್ನು ಮಿಸ್ ಮಾಡಬಹುದಲ್ಲವೇ? ಅವಳನ್ನೆ ಕೇಳಿದರೆ ಹೇಗೆ ಮಗುವನ್ನು ನೋಡಿಕೊಳ್ಳಲು?? ಮನಸ್ಸಿಗೆ ಸಮಾಧಾನವಾಗಿ ಆ ಟೇಬಲ್ ಕಡೆ ಕಣ್ಣು ಹರಿಯಬಿಟ್ಟರು. ಅರೇ ಇದೇನಿದು ಆಶ್ಚರ್ಯ ಅದು ಕರುಣಾ ಅಲ್ಲವೇ. ಅದೇನು ಮುಖದಲ್ಲಿ ಖಳೆ, ಅದೇನು ನಗು. ಇಷ್ಟು ಸುಂದವಾಗಿದ್ದನ್ನು ನಾನು ಈವರೆಗೇ ಅದೇನು ಗಮನಸಿಸಲಿಲ್ಲ? ಅವನು ಸಂತಸದಿಂದ ಅವಳ ಟೇಬಲ್ ಕಡೆ ನಡೆದ.
 ಸಡನ್ ಆಗಿ ಬಂದ ಅವಳ ಗಂಡನನ್ನು ನೋಡಿ ಕರುಣಾ ಚಕಿತ ಗೊಂಡು  ಎಲ್ಲರಿಗೂ ಅವಳು ಅವನ ಪರಿಚಯ ಮಾಡಿಸಿದಳು.
ಅವರು ಹೋಟಲ್ ಗೆ ಬಂದು ಪಾರ್ಟಿ ಮಾಡಲು ಕಾರಣ- ಅಂಗಡಿಯಲ್ಲಿ ಬಿಸಿನಸ್ ವಿಷಯವಾಗಿ ವ್ಯವಹರಿಸಲು ಬರುತ್ತಿದ ಮಾರವಾಡಿಯವರ ದೂರದ ಸಂಬಂಧಿಕ ಜೀನೇಶ್ ಗೆ ಕರುಣಾಳ ಕಂಡು ಅವಳ ಮೇಲೆ ಪ್ರೀತಿ ಹುಟ್ಟಿತು.ಕರುಣಾಳಿಗೂ ಚುರುಕಾಗಿರುವ ಜಿನೇಶ್ ಮೇಲೆ ಆಕರ್ಷಣೆ ಹುಟ್ಟಿತು. ತನ್ನ ಕತೆಯೆಲ್ಲ ಅವನಿಗೆ ಹೇಳಿದ್ದಳು.  ಅವನು ಇರುವುದು ಹೊರದೇಶದಲ್ಲಿ. ಇವಳನ್ನು ಮದುವೆಯಾಗಿ ಅಲ್ಲೇ ಕರೆದುಕೊಂಡು ಹೋಗುವವನಿದ್ದ. ಆಫಿಸ್ ನವರೆಲ್ಲ ಕರುಣಾಗೆ ಫೇರ್ ವೆಲ್ ಪಾರ್ಟಿ ಇಟ್ಟುಕೊಂಡಿದ್ದರು. ಮಾತು ನಗು ಗಲಾಟೆ ನಡೆಸುತ್ತ ಎಲ್ಲರೂ ಎಂಜಾಯ್ ಮಾಡ್ತಾ ಇದ್ದರು.
’ಸ್ವಲ್ಪ ಈ ಕಡೆ ಬರುತ್ತೀಯ, ನಿನ್ನ ಜತೆ ಮಾತನಾಡಬೇಕಿತ್ತು’ ಅಂದ. ಅವಳು ಕಛೇರಿಯ ಸಿಬ್ಬಂದಿ ಬಳಿ ಎಕ್ಸ್ಕೂಸ್ ಕೇಳಿ ಇತ್ತ ಬಂದಳು’ ’ನಿನ್ನನ್ನು ನೋಡಿ ಖುಶಿಯಾಯ್ತು. ಮನೆ ಬಳಿ ಬರಬೇಕೆಂದು ಕೊಂಡಿದ್ದೆ. ಅವಳು ಮೂರುದಿನದ ಹಿಂದೆ ತೀರಿಕೊಂಡಳು. ಈಗ ಮಗುವನ್ನು ನೋಡಿಕೊಳ್ಳಲು ಯಾರು ಇಲ್ಲ. ನನಗೆ ಗೊತ್ತು ನೀನು ಇಲ್ಲ ಅನ್ನಲ್ಲ ಅಂತ. ನಾವೆಲ್ಲ ಪುನ: ಕೂಡಿ ಒಟ್ಟಿಗೆ ಇರುವ.’
ಆಗ ಅವಳು ಅವನನ್ನು ಕರೆದು ಕೊಂಡು ತನ್ನ ಟೇಬಲ್ ಬಳಿ ಬಂದು ತಾನು ಮದುವೆಯಾಗುವವನನ್ನು ಪರಿಚಯಮಾಡಿಸಿಕೊಟ್ಟಳು. ಮುಂದಿನವಾರ ನಮ್ಮ ಮದುವೆ. ಮಗಳ 10 ನೇ ಕ್ಲಾಸ್ ಪರೀಕ್ಷೆ ಮುಗಿದ ಕೂಡಲೇ ನಾವು ಹೊರ ದೇಶಕ್ಕೆ ಹಾರುತ್ತಾ ಇದ್ದೇವೆ. ಇನ್ನೂ ಗುಡ್ ಬೈ ಅಷ್ಟೆ ನಾನು ಹೇಳುವುದು...
:-)
(ಯಾಕೆ ಬರೆಯುತ್ತಿಲ್ಲ ಅಂತ ಕೇಳುವವರು ಹಲವಾರು ಜನ. ಎನೂ ಸಿರಿಯಸ್ ಕಾರಣಗಳಿಲ್ಲ. ಮೊದಲಿನ ಮನೆ ಸ್ಯಾಂಡ್ ವಿಚ್ ತರಹ ಇದ್ದು ,ಆಫಿಸ್ ಕೆಲಸ ಬಿಟ್ಟು, ಮಾಡಲು ಬೇರೇನೂ ಕೆಲಸವಿರಲಿಲ್ಲವೆಂದು ,ಮಿತ್ರರು ನನ್ನ ಕನ್ನಡ ಚೆನ್ನಾಗಿದೆಯೆಂದು ಹೊಗಳಿ ಹೊನ್ನ ಶೂಲಕ್ಕೆ ಏರಿಸಿ ನನ್ನನ್ನು ಬರೆಯಲು ಪ್ರೇರೇಪಿಸಿದ್ದರು. :-) ಹಳೆಯದನ್ನ ಮೆಲುಕು ಹಾಕುತ್ತ ಬರೆಯುತ್ತಿದೆ. ಆದರೆ ನಮ್ಮ ಸ್ವಂತ ಮನೆಗೆ ಬಂದ ಮೇಲೆ ಇಲ್ಲಿನ ಮೂರು ಬಾಲ್ಕನಿ, ನನ್ನ ಪುಟ್ಟ ಬಾಲ್ಕನಿ ಗಾರ್ಡನ್, ನಮ್ಮ ಬಿಲ್ಡಿಂಗ್ ನ ಸುತ್ತ ನಡೆಯುವ ವಿದ್ಯಮಾನಗಳು, ಸೂರ್ಯಾಸ್ತ, ಸೂರ್ಯೋದಯ, ಚೆಂದದ ಹಕ್ಕಿಗಳು, ಓದಲು ತುಂಬಾ ಪುಸ್ತಕಗಳು, ನನ್ನದೇ ಲ್ಯಾಪ್ ಟಾಪ್ ನಲ್ಲಿ ನೋಡಲು ಸಿಗುವ ಅಸಂಖ್ಯಾತ ಸಿನಿಮಾಗಳು, ಮನೆಗೆ ಬರುವ ನೆಂಟರು, ಫೇಸ್ ಬುಕ್, ಶನಿವಾರ ಭಾನುವಾರ ನಾಟಕ, ಸಂಗೀತ ಕಾರ್ಯಕ್ರಮಗಳು... ಇವೆರಲ್ಲದರ ಮಧ್ಯ ಬರೆಯಲು ಸರಕು ತುಂಬಾ ಇದ್ದರೂ ಬರೆಯುವ ಆಸಕ್ತಿ ಹೋಗ್ತಾ ಇದೆ....ಯಾರೂ ಬೇಸರಿಸಿದಿರಿ. but please be happy that i am happy, ಮಧ್ಯ ಮಧ್ಯ ಹೀಗೆ ಹುಕ್ಕಿ ಬಂದರೆ ಖಂಡಿತ ಬರೆಯುತ್ತೇನೆ. ಮೊನ್ನೆ ಸಿಕ್ಕಿದ ಒಂದು ಪುಟ್ಟ ಗೆಳತಿ ತಾನು ಪ್ರೆಗ್ನೆಂಟ್ ಇದ್ದಾಗ ಹಾಗೂ ಡೆಲಿವರಿ ನಂತರ ಆಳವಾದ ಡಿಪ್ರೆಶನ್ ಗೆ ಹೋದಾಗ ನನ್ನ ಬರಹಗಳ ಮೊರೆ ಹೋಗಿದ್ದನ್ನು ಹಂಚಿಕೊಂಡಿದ್ದಳು.ಯಾಕೆ ಈಗ ರೆಗ್ಯುಲರ್ ಆಗಿ ಬರೆಯುತ್ತಿಲ್ಲ ಅಂತ ಕೇಳಿದ್ದಳು. ಅವಳಿಗೂ ಮೇಲಿನ ಉತ್ತರವಷ್ಟೆ ಕೊಟ್ಟಿದ್ದೇನೆ.)
ಕತೆ ಹೇಗನ್ನಿಸಿತು ಖಂಡಿತ ಹೇಳಿ..ಧನ್ಯವಾದಗಳು for tolerating my writing for so long..love you ಆಲ್
:-)

December 30, 2014

ಮಸಾಲೆದೋಸೆಗೆ ಕೆಂಪು ಚಟ್ನಿ

ಈ ರುಚಿಕರವಾದ ಟೈಟಲ್ ನ ಶ್ರೇಯ ಬರಹಗಾರರಾದ ಗಿರೀಶ ರಾವ್ ಹತ್ವಾರ್ ಇವರಿಗೆ ಸಲ್ಲುತ್ತದೆ. (ಅವರ ಇತ್ತೀಚಿಗಿನ ಎರಡು ಪುಸ್ತಕಗಳು ’ಮಸಾಲ್ ದೋಸೆಗೆ ಕೆಂಪು ಚಟ್ನಿ” ಮತ್ತು”ಎಲ್ಲಾನೂ ಮಾಡುವುದು ಹೊಟ್ಟೆಗಾಗಿ’ )
ಮುಂಬೈ ನ  ನಮ್ಮ ಮನೆಯಲ್ಲಿ ಮಸಾಲ್ ದೋಸೆಗೆ ಕೆಂಪು ಚಟ್ನಿ ಮಾಡದಿದ್ದರೆ ಅದು ಮಸಾಲೆ ದೋಸೆನೆ ಅಲ್ಲ. ಬೇರೆಯವರ ಮನೆಗಳಿಗೆ ಹೋದಾಗ ಅವರು ಮಸಾಲೆ ದೋಸೆ ಅಂತ ನಮಗೆ ಕೊಟ್ಟರೆ, ಅದರಲ್ಲಿ ಕೆಂಪು ಚಟ್ನಿ ಇಲ್ಲದಿದ್ದಲ್ಲಿ ನಾವು ಅದನ್ನು ದೋಸೆ ಪಲ್ಯ ಅಂತ ಹೆಸರಿಡುತಿದ್ದೆವು. ನಾವು ಚಿಕ್ಕವರಿರುವಾಗ ಹೋಟಲ್ ಗೆ ಹೋಗುತ್ತಿದ್ದದ್ದು ಅತೀ ಅಂದರೆ ಅತಿ ವಿರಳ, ಅದೂ ಪರ ಊರಿಗೆ ಹೋದಾಗ ಅದರಲ್ಲೂ ಆ ಊರಿನಲ್ಲಿ ನೆಂಟರಿಷ್ಟರು ಇಲ್ಲದಿದ್ದಾಗ ಮಾತ್ರ ಅನಿವಾರ್ಯವಾಗಿ ಹೋಟಲ್ ನ ಮೊರೆ ಹೊಕ್ಕುತ್ತಿದ್ದೆವು. ಟ್ರೈನ್ ನಲ್ಲಿ ದೂರದ ಪ್ರಯಾಣ ಆದರೆ ಹುರಿದ ಅವಲಕ್ಕಿ, ಮಂಡಕ್ಕಿ, ಕುರುಕುಲು ತಿಂಡಿಗಳು ಇರುತ್ತಿದ್ದವು. ಅಮ್ಮನ ಒಬ್ಬ ಅಣ್ಣ(ಅಮ್ಮನಿಗೆ ಮೂರು ಜನ ಅಣ್ಣಂದಿರು ಒಬ್ಬಳು ಅಕ್ಕ..ಅಮ್ಮ ಕೊನೆಯವರು) ಓದು ಹತ್ತದೆ ಅಜ್ಜನ ಪೆಟ್ಟಿನಿಂದ ತಪ್ಪಿಸಿಕೊಳ್ಳಲು ಮನೆಯಿಂದ ಓಡಿ ಹೋಗಿ ಯಾರೋ ಅಡಿಗೆಯವರಿಗೆ ಎಸಿಟೆಂಟ್ ಆಗಿದ್ದರಂತೆ. ಆಮೇಲೆ ನಮ್ಮಜ್ಜ ಅವನನ್ನು ಹುಡುಕಿಕೊಂಡು ತಂದು ಅಲ್ಲೇ ಊರಲ್ಲಿ ಕೆಲಸಕ್ಕೆ ಸೇರಿಸಿದರಂತೆ. ಮಾಮನಿಂದ ಆಗ ಮನೆಯ ಹೆಂಗಸರು ಹಲವಾರು ಹೋಟಲ್ ನಲ್ಲಿ ಬಡಿಸುವಂತಹ ತಿಂಡಿಗಳನ್ನು ಇನ್ಕ್ಲೂಡಿಂಗ್ ಮಸಾಲ್ ದೋಸೆ, ಕಲಿತಿದ್ದಂತೆ.
ಉಳಿದಂತೆ ನಮ್ಮ ಮನೆಯವರಿಗೆ ಹೋಟಲ್ ಗೆ ಹೋಗಿ ತಿನ್ನುವ ರುಚಿ ಹತ್ತಿದ್ದು ನನ್ನ ಮದುವೆಯಾದ ಮೇಲೆ ಶ್ರೀಕಾಂತ್ ರಾಯರ ದೆಸೆಯಿಂದ. ಈ 27 ವರ್ಷಗಳಲ್ಲಿ ನಾವು ಸುತ್ತಿದ ಊರು ಹೋಟಲ್ ನಲ್ಲಿ ತಿಂದಿದ್ದಕ್ಕೆ ಲೆಕ್ಕವೇ ಇಲ್ಲ.
ನಮ್ಮ ಅಮ್ಮನ ಅಡುಗೆಯ ರುಚಿ ಅಂದ್ರೆ ರುಚಿ. ಆದರೆ ಮೂರು ಐಟಮ್ ಅಮ್ಮನಿಗಿಂತಲೂ ನಾನು ಹೆಚ್ಚು ರುಚಿಕರವಾಗಿ ಮಾಡುತ್ತೇನೆ. ಒಂದು ಬಾಂಬೆ ಪಾವ್ ಭಾಜಿ, ಕಾಸಿದ ತುಪ್ಪ ಮತ್ತು ಮಸಾಲೆ ದೋಸೆ.

ಅಪ್ಪ ಬ್ಯಾಂಕ್ ನಲ್ಲಿದ್ದರಿಂದ ಹಲವಾರು ಕಡೆ ವರ್ಗ  ಆಗುತ್ತಿತ್ತು. ನಾನು ಮುಂಬೈನಲ್ಲಿ ಅಜ್ಜನ ಬಳಿಯಿದ್ದರೂ ಬೇಸಿಗೆ ರಜೆಯಲ್ಲಿ ಅಪ್ಪ ಅಮ್ಮ ಇದ್ದ ಕಡೆ ಹೋಗುತ್ತಿದ್ದೆ. ಹಾಗೆ ಒಂದು ಸಲ ಬಿಹಾರ್ ನಲ್ಲಿದ್ದರು. ಅವರು ಅಲ್ಲಿದ್ದಾಗ ಭೀಕರ ಪ್ರವಾಹ ಬಂದು ಜನ ಜೀವನ ಅಸ್ತ್ಯ ವಸ್ತ್ಯ ವಾಗಿತ್ತಂತೆ. ಅಪ್ಪನ ಬ್ಯಾಂಕ್ ಕ್ವಾರ್ಟರ್ಸ್ (ಇಡೀ ಮನೆ ಇದ್ದರೂ ಅದಕ್ಕೆ quarter ಯಾಕಂತಾರೆ ಅದೂ plural ನಲ್ಲಿ??!!) ಸ್ವಲ್ಪ ಉಬ್ಬು ಪ್ರದೇಶದಲ್ಲಿದ್ದರೂ ಮನೆಯಿಂದ ಹೊರಗಡೆ ಕಾಲಿಡಲಾಗದಷ್ಟು ನೀರು ಹಾಗೂ ನೀರಿನ ಸೆಳೆತ ಇತ್ತಂತೆ. ಆಗ ಹೆಲಿಕಾಪ್ಟರ್ ನಲ್ಲಿ ಊಟದ ಪಾರ್ಸೆಲ್ ಮನೆಯ ತಾರಸಿ ಮೇಲೆ ಎಸೆದು ಹೋಗುತ್ತಿದ್ದರಂತೆ, ಆರ್ಮಿಯವರು.  ಇದು ನಡೆದು ಕೆಲ ಸಮಯದ ನಂತರ ನಾನು ಅವರಲ್ಲಿಗೆ ಹೋಗಿದ್ದೆ. ಆಗ ಪ್ರವಾಹಪೀಡಿತರಿಗಾಗಿ ದುಡ್ಡು ಒಟ್ಟು ಮಾಡಲು (ಫ಼್ಲಡ್ ರಿಲೀಫ್ ಫಂಡ್) ಒಂದು ಫೆಸ್ಟ್ ಅನ್ನು ರೋಟರಿಯವರು ಪ್ರಾಯೋಜಿಸಿದರು . ನಮ್ಮ ತಂದೆ ಆಗ ರೋಟರಿ ಮೆಂಬರ್ ಆಗಿದ್ದರು. ಬೇರೆ ಬೇರೆ ತಿಂಡಿ ಸ್ಟಾಲ್ ಇಟ್ಟು ಅಲ್ಲಿ ಕಲೆಕ್ಟ್ ಆದ ದುಡ್ಡನ್ನು ಫ಼್ಲ್ಲಡ್ ರಿಲೀಫ್ ಫ್ಂಡ್ ಗೆ ಕೊಡುವುದು ಮತ್ತು ಯಾರು ಹೆಚ್ಚು ಸೇಲ್ಸ್ ಮಾಡ್ತಾರೆ ಅವರಿಗೊಂದು ಪ್ರೈಜ಼್. 
ಈಗಲೂ ಕಣ್ಣಿಗೆ ಕಟ್ಟಿದಂತೆ ಇದೆ. ನಮ್ಮ ಮಿಡಿಯಂ ಸೈಜ್ ರುಬ್ಬೋ ಕಲ್ಲಲ್ಲಿ (ಬಿಹಾರ್ ಗೆ ನಮ್ಮ ಸಾಮಾನು ಸಾಗುಸುವವರು ನಮ್ಮ್ ರುಬ್ಬೋಕಲ್ಲು ನೋಡಿ ನಕ್ಕಿದ್ದೆ ನಕ್ಕಿದ್ದಂತೆ. ಶಿವಲಿಂಗ ಕೂಡ ಅಂದಿದ್ದುಂಟು.ಅವರು ರುಬ್ಬಲು ಬೇರೆ ಮಾದರಿಯ ಕಲ್ಲು(pestle and mortar)  ಉಪಯೋಗಿಸುವುದು ಮತ್ತು ತೆಂಗಿನಕಾಯಿಯ ಉಪಯೋಗ ಎಲ್ಲ ನಿಲ್) ಮೂರು ನಾಲ್ಕು ಸಲ ರುಬ್ಬಿ ದೊಡ್ಡ ದೊಡ್ಡ ಸ್ಟೀಲ್ ಪಾತ್ರೆಯಲ್ಲಿ ಹಾಕಿದರು. ಮರುದಿನ ಮುಚ್ಚಳ ಹಾಕಿ ಅದಕ್ಕೆ ಬಟ್ಟೆ ಕಟ್ಟಿದರು. ಆಕಸ್ಮಾತ್ ಹಿಟ್ಟು ತುಳುಕಿದರು ಕಾರ್ ನಲ್ಲಿ ಬೀಳಲ್ಲ ಅಂತ.  ಬೆಳಿಗ್ಗೆ ಬೇಗ ಎದ್ದು ಆಲೂಗಡ್ಡೆ -ನೀರುಳ್ಳಿ ಪಲ್ಯ, ಕೆಂಪು ಚಟ್ನಿ ಮಾಡಿದರು. ದೋಸೆ ಹುಯ್ಯಲು ಕಾವಲಿ, ಸುಟ್ಟುಗ, ಚಟ್ನಿ ಗೆ ಬೇಕಾದ ಸೌಟುಗಳು, ಮತ್ತು ಗ್ಯಾಸ್ ಕಟ್ಟೆ-ಸಿಲಿಂಡರ್....ಅಂತೂ ಒಂಬತ್ತು ಗಂಟೆಗೆ ನಾವೆಲ್ಲ ಹೊರಟೆವು. ಅಪ್ಪ ಇದ್ದ ಊರಿನ ಹೆಸರು ’ಆರಾ’ (Arrah) ಊರಿನಿಂದ ಸುಮಾರು ದೂರ ಇತ್ತು ಫೆಸ್ಟ್ ನಡೆಸುವ ಜಾಗ. ಅಲ್ಲಿ ನೋಡಿದರೆ ಅದು ದೊಡ್ಡ  ಮೈದಾನ. ಆಗಲೇ ಹಲವಾರು ಸ್ಟಾಲ್ ಗಳು ತಿಂಡಿ ಸರಬರಾಜು ಶುರು ಮಾಡಿದ್ದರು. ಕೂಪನ್ ಎಲ್ಲ ಎಂಟ್ರೆನ್ಸ್ ನಲ್ಲೇ ತೆಗೋಬೇಕಿತ್ತು. ಬೇರೆ ಬೇರೆ ತಿಂಡಿಗಳಿಗೆ ಬೇರೆ ಬೇರೆ ಧಾರಣೆಯ ನ ಕೂಪನ್ ಗಳು, ಆಟ ಕ್ಕೂ ಕೂಪನ್ ಗಳು.  ಆಮೇಲೆ ಅಮ್ಮ ದೋಸೆ ಮಾಡಿದ್ದೆ ಮಾಡಿದ್ದು. ಬೆವರು ಸುರಿಸ್ತಾ ಇದ್ರು. ಬಿಹಾರ್ ನಲ್ಲಿ ಕ್ಲೈಮೆಟ್ extreme. ಚಳಿಗಾಲದಲ್ಲಿ ಸಖತ್ ಚಳಿಯಾದ್ರೆ, ಬೇಸಿಗೆಯಲ್ಲಿ ಸ್ನಾನಕ್ಕೆ ಉಪಯೋಗಿಸುವ ನೀರಿಗಿಂತ ಜಾಸ್ತಿ ಬೆವರು ಮೈನಿಂದ ಹೋಗುತ್ತಿತ್ತು. ಅಪ್ಪ ಅಂತೂ ಕರ್ಚೀಫ್ ನಿಂದ ಬೆವರು ವರೆಸಿ ಕರ್ಚೀಫ್ ಅನ್ನು ಹಿಂಡುತ್ತಿದ್ದರು. ಪವರ್ ಕಟ್ ಬಗ್ಗೆ ಮಾತಾಡೋದೆ ಬೇಡ. ಮತ್ತು ಅಪ್ಪನ ಆಫಿಸ್ ಗೆ ಬಂದು ಅಪ್ಪನಿಗೆ ರೋಪ್ ಹಾಕುವವರಿಗಂತೂ ಏನೂ ಕಡಿಮೆಯಿರಲಿಲ್ಲ. ಯಾವಾಗ ಗಲಾಟೆ ಶುರು ಆಗುತ್ತಂತ ಹೇಳಲಿಕ್ಕೂ ಬರ್ತಿರಲಿಲ್ಲ. ಹಾಗಿದ್ದವು ಆ ದಿನಗಳು. ಅಪ್ಪ ಮನೆಗೆ ಬರುವುದು ಸ್ವಲ್ಪ ವಿಳಂಬ ಆದ್ರೂ ಅಮ್ಮ ಹೆದರಿಕೊಳ್ಳುತ್ತಿದ್ದರು. ಮೂರು ವರೆ ವರ್ಷ ಇದ್ರು ಅಪ್ಪ ಅಲ್ಲಿ. ನನಗಂತೂ ರಜೆಯಲ್ಲಿ ಹೋದಾಗ ಸೊಳ್ಳೆ ಕಚ್ಚಿ ಅದರಿಂದ ಎಲರ್ಜಿಯಾಗಿ ಇಂಜೆಕ್ಷನ್ ಚುಚ್ಚಿಸಿಕೊಳ್ಳೋದೆ ಆಯ್ತು. ಆದ್ರೂ ಪಟ್ನಾ ಸಿಟಿ  ನಳಂದಾ, ಸಾರನಾಥ್ ಗೆ ಮತ್ತು ರೋಟರಿ ಟೀಮ್ ನೊಂದಿಗೆ ನೇಪಾಲ್ ಎಲ್ಲ ಹೋಗಿ ಬಂದಿದ್ದೆವು. ಫೋಟೊಗಳು ಈಗಲೂ ಇವೆ ಅಮ್ಮನ ಮನೆಯಲ್ಲಿ.

(continued...)ಅಮ್ಮ ಬೆವರು ಸುರಿಸ್ತಾ ದೋಸೆ ಮಾಡಿದ್ದೆ ಮಾಡಿದ್ದು. ಕೆಲವರು ತಿಂದು ಪುನ: ಕೂಪನ್ ತೆಗೊಂಡು ಬರ್ತಿದ್ದರು. ಭಾಭಿ ಡೋಸಾ ಬಹುತ್ ಅಚ್ಚಾ ಹುವಾ ಹೈ ಅಂತ. ಸಂಜೆ ಆಗ್ತಾ ಮೊದಲಿಗೆ ಚಟ್ನಿ ಖಾಲಿಯಾಯ್ತು. ಅದೂ ಅಲ್ಲದೆ ಚಟ್ನಿ ಅವರಿಗೆಲ್ಲ ಎಷ್ಟು ಇಷ್ಟ ಆಯ್ತಂದ್ರೆ ಇನ್ನಷ್ಟು ಚಟ್ನಿ ಬಡಿಸಿ ಅಂತ ಕೇಳುತ್ತಿದ್ದರು. ಚಟ್ನಿ ತುಂಬಾ ಖಾರವಾಗಿತ್ತು, ಆದರೆ ಗಮ್ಮತ್ತೆಂದರೆ ನಮ್ಮ ಬಾಜೂ ಸ್ಟಾಲ್ ನಲ್ಲಿ ನಿಂಬೆಹಣ್ಣಿನ ಜ್ಯೂಸ್ ಮಾರುತ್ತಿದ್ದರು. (ಆಕೆಗೆ ಸೆಕೆಂಡ್ ಪ್ರೈಜ್) ಖಾಲಿಯಾದಹಾಗೆ ಫ್ರೆಶ್ ನಿಂಬೆ ಹಣ್ಣು ತಂದು ಪುನ: ಜ್ಯೂಸ್ ಮಾಡ್ತಿದ್ದರಿಂದ ಅದು ದೋಸೆ ತಿನ್ನುವವರಿಗೆ ಅನುಕೂಲವಾಯ್ತು. ಅಲ್ಲೂ ಅಮ್ಮ ತಲೆ ಉಪಯೋಗಿಸಿಕೊಂಡು ಐಸ್ ಸ್ಲಾಬ್ ಒಂದನ್ನು ತಂದು ಅದನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ಅದರ ಮೇಲೆ ಗಟ್ಟಿ ಕೆಂಪು ಚಟ್ನಿಯ ಬಕೆಟ್ ಇಟ್ಟಿದ್ದರು. ಇಲ್ಲದಿದ್ದರೆ ಆ ಸೆಕೆಗೆ ಚಟ್ನಿ ಮಧ್ಯಾನಕ್ಕೆ ಗೋವಿಂದ ಆಗ್ತಿತ್ತು. ಜಾಣೆ ನಮ್ಮಮ್ಮ. :-) ಚಟ್ನಿ, ಖಾಲಿ ಯಾಗಿ, ಪಲ್ಯವೂ ಖಾಲಿಯಾಯ್ತು. ಇನ್ನೊಂದು ಬದಿಯ ಸ್ಟಾಲ್ ನ ಹೆಂಗಸಿನ ಬಳಿ ಉಪ್ಪಿನಕಾಯಿ ಉಳಿದಿದ್ತ್ತು. ಅದನ್ನು ಅವಳು ಅಮ್ಮನಿಗೆ ಕೊಟ್ಟಳು. ಕೊನೆ ಕೊನೆಗೆ ಜ್ಯಾಮ್ ಕೂಡ ಸಿಕ್ಕಿತು.  ಕೊನೆಗೆ ಅದೂ ಮುಗಿದು ಹೋಯ್ತು. ದೋಸೆ ಹಿಟ್ಟು ಸುಮಾರು ಇತ್ತು. ಎಷ್ಟೊಂದು ಡಿಮಾಂಡ್ ಅಮ್ಮನ ದೋಸೆಗೆ ಅಂದ್ರೆ, ಖಾಲಿ ಡೋಸಾ ಭಿ ಚಲೆಗಾ ಅಂತ ಕೇಳಿಕೊಂಡು ತಿಂದು ಹೋದ್ರು. ಖಾಲಿ ದೋಸೆಗೆ ಮಾತ್ರ ಅಮ್ಮ ಸ್ವಲ್ಪ ಹೆಚ್ಚೆ ಎಣ್ಣೆ (actually ಎಣ್ಣೆ +ಡಾಲ್ಡಾ ಮಿಶ್ರಣ) ಹಾಕಿ ಗರಿಗರಿಯಾಗಿ ದೋಸೆ ಮಾಡಿಕೊಟ್ಟಳು. ಆಮೇಲೆ ಗೊತ್ತಾಯ್ತು ಫೆಸ್ಟ್ ನ ಇನ್ನೊಂದು ಕಂಡಿಷನ್ " ಹೆಚ್ಚು ಸೇಲ್ ಮಾತ್ರವಲ್ಲ ಸಂಜೆ ತನಕ ನಡೆಸಿಕೊಂಡು ಹೋಗುವವರು" ಅಂತಿದ್ದದ್ದು. ನಮ್ಮಮ್ಮನೆ ಹ್ಯಾಂಡ್ಸ್ ಡೌನ್ ವಿನ್ನರ್. ಚ್ಯಾಟ್, ಅವಲಕ್ಕಿ, ದಹಿ ವಡಾ, ಇಡ್ಲಿ ವಡಾ ಮುಂತಾದ , ನನಗೆ ಗೊತ್ತಿಲ್ಲದ ಹಲವಾರು ತಿಂಡಿಗಳ ಸ್ಟಾಲ್ ನೋಡಿದೆ ನಾನು ಆ ದಿನ.
ಈಗಲೂ ನಾವು ರಜೆಯಲ್ಲಿ ಅಮ್ಮನ ಮನೆಯಲ್ಲಿ ಸೇರಿದಾಗ ಒಂದು ದಿನ ಮಸಾಲೆ ದೋಸೆ ಸಂಭ್ರಮ. ಪಲ್ಯ ಹಿಂದಿನ ದಿನ ರಾತ್ರಿನೇ ಮಾಡಿಡುವುದು. ಸಂಜೆ ನಾವೆಲ್ಲ ನಗುತ್ತಾ ಮಾತನಾಡುತ್ತ ನೀರುಳ್ಳಿ ಕಟ್ ಮಾಡಿ ಕೊಡುವುದು.ಚಿಕ್ಕ ಮಕ್ಕಳು ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದುಕೊಡುವುದು ಇತ್ಯಾದಿ. ಕಾಯಿ ತುರಿದು ಫ್ರಿಜ್ ನಲ್ಲಿ ಹಾಕಿಡುವುದು. ಮರುದಿನ ನಾವೆಲ್ಲ ಒಂದು ದೋಸೆ ಹೆಚ್ಚು ತಿಂದು ಹೆಬ್ಬಾವ್ ತರಹಾ ಹೊರಳಾಡ್ತಾ ಇರ್ತೀವಿ. ನಾಲ್ಕೈದು ದೋಸೆ ಹೊಡೆದು, ಹೋಟಲ್ ನಲ್ಲಿ ಒಂದಕ್ಕಿಂತ ಹೆಚ್ಚು ತಿನ್ನಕ್ಕಾಗಲ್ಲ ಅಲ್ವ ಅನ್ನುವ ಕಾನ್ಸ್ ಟೆಂಟ್ ಡೈಲೋಗ್ ಹೊಡೆಯುವುದನ್ನು ಮರೆಯಲ್ಲ. :-)
ನಾನು ಮಾಡುವ ಮಸಾಲೆ ದೋಸೆಗೆ’
ಎರಡು ಹಿಡಿ ಉದ್ದಿನ ಬೇಳೆ, ಎರಡು ಗ್ಲಾಸ್ ಅಕ್ಕಿ, ಒಂದು ಟೇಬಲ್ ಚಮಚ ಕಡ್ಲೇ ಬೇಳೆ, ಎರಡು ಟೀ ಸ್ಪೂನ್ ಮೆಂತೆ, ಒಂದು ಹಿಡಿ ಅವಲಕ್ಕಿ. ಎಲ್ಲವನ್ನೂ ಎರಡು ತಾಸು ನೀರಲ್ಲಿ ನೆನೆಸಿ ನುಣ್ಣಗೆ ರುಬ್ಬುವುದು. ರಾತ್ರಿ ಅರ್ಧ ಟೀ ಸ್ಪೂನ್ ಸಕ್ಕರೆ ಬೆರೆಸಿಡುವುದು. ಮರುದಿನ ಉಪ್ಪು ಹಾಕಿ ತೆಳ್ಳಗೆ ದೋಸೆ ಹುಯ್ಯುವುದು
ಅಲೂಗಡ್ಡೆ ಪಲ್ಯ ಅಂತೂ ಎಲ್ಲರಿಗೂ ಗೊತ್ತು
ಕೆಂಪು ಚಟ್ನಿ ಮಾಡುವ ವಿಧಾನ: ಕಾಯಿ ತುರಿ, ನಾಲ್ಕು ಎಸಳು ಬೆಳ್ಳುಳ್ಳಿ, ಕಾಲು ಟೀ ಸ್ಪೂನ್ ಕೊತ್ತಂಬರಿ ಬೀಜ, ಅರ್ಧ ಇಂಚ್ ಶುಂಠಿ, ಸ್ವಲ್ಪ ಹುಣಸೆ ಹುಳಿ, ಹುರಿದ ಕೆಂಪು ಮೆಣಸು, ಒಂದು ಹಸಿ ಮೆಣಸು, ಉಪ್ಪು ಹಾಕಿ ತರಿತರಿಯಾಗಿ ರುಬ್ಬುವುದು. 
ಶ್ರೀಕಾಂತ್ ಗೆ ಮಾತ್ರ ಈ ಚಟ್ನಿ ಹಿಡಿಸಲ್ಲ. ಅವರಿಗೋಸ್ಕರ ಸಾದಾ ಕಾಯಿ ಚಟ್ನಿ ಮಾಡ್ತೀನಿ. :-)
ನೋಡಿ ಅವರ ಪುಸ್ತಕದ ಟೈಟಲ್ ನಿಂದ ನಾನು ಇಷ್ತು ಬರೆದೆ. 
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

December 15, 2014

ನೌಟಂಕಿಗಳು

( ಇತ್ತೀಚಿಗೆ ಆಫಿಸ್ ಗೆ ಹೋಗಿದ್ದೆ. ಶ್ರೀಕಾಂತ ಆಫಿಸ್ ಗೆ ಯಾವುದೋ ಸಹಿ ಮಾಡಿದ ದಾಖಲೆ ಪತ್ರ ಅರ್ಜೆಂಟ್ ತಲುಪಿಸಬೇಕಿತ್ತು. ಅವರು ಸಹಿ ಮಾಡಿಟ್ಟು ಊರಿಗೆ ಹೋಗಿದ್ದರಿಂದ ನಾನು ಆಫಿಸ್ ಗೆ ಅದನ್ನು ತಲುಪಿಸಬೇಕಾಯ್ತು. ಆಗ ಆಫಿಸ್ ನಲ್ಲಿದ್ದವರು ಯಾಕೆ ಮ್ಯಾಡಂ ಬ್ಲಾಗ್ ಬರೀತಾ ಇಲ್ಲ. ಬಿಸಿ ನಾ ಅಂತ. ಅವರು ನನ್ನ ಬ್ಲಾಗ್ ಓದ್ತಾರೆ ಅಂತ ಖಂಡಿತ ಗೊತ್ತಿರಲಿಲ್ಲ. :-(. ಮೊದಲು ನನ್ನ ಬಳಿ ಕಂಪ್ಯೂಟರ್ ಇರಲಿಲ್ಲ ಅಂತ ನೆವ ಇತ್ತು. ಈಗ ಶ್ರೀಕಾಂತ ನನಗೆ ಒಂದು ಸಿಸ್ಟಮ್ ಕೊಡಿಸಿದ್ದೆ ಅಲ್ಲದೆ ಬರಹ ಕೂಡ ಅಳವಡಿಸಿಕೊಟ್ಟಿದ್ದಾರೆ. ಅದಲ್ಲದೆ. ವಾಟ್ಸ್ ಅಪ್ ನಲ್ಲಿ ಯಂಗ್ ಡೈರೆಕ್ಟರ್ ಸ್ ಅವಾರ್ಡ್ ಗೆ ಮಾಡಿದ ಎಡ್ ಗೆ ಮಾಡಿದ ಯೂ ಟ್ಯೂಬ್ ವಿಡಿಯೋ  ಓಡ್ತಾಡ್ತಾ ಇದೆ. ತರಲೆ ಮಕ್ಕಳದ್ದು. ಈ ವಿಷಯ ನೆನಪಾಗಿ ಅದನ್ನು ಬರೆಯುವಾ ಅಂತ ಬಂದೆ.....) ಮೊದಲು ಈ ವಿಡಿಯೋ ನೋಡಿ,


ಶ್ರೀಕಾಂತ ಫ್ರೆಂಡ್ ಮಗ ಅವನು. ಮುಂಬೈನಲ್ಲಿದ್ದಾಗ ನಾನು ಶ್ರೀಕಾಂತ ಶನಿವಾರ/ಭಾನುವಾರ ಅವರ ಜತೆ ಸ್ಪೆಂಡ್ ಮಾಡ್ತಿದ್ದ್ವಿ. ನಾನು ನೋಡಿದಾಗಲೆಲ್ಲ ಅವನ ಅಮ್ಮ ಸ್ಕೇಲ್ ಹಿಡಿದುಕೊಂಡು ಅವನಿಗೆ ಓದಿಸಲಿಕ್ಕೆ ಕೂತಿರುತ್ತಿದ್ದರು. ಅಪ್ಪ ಅಮ್ಮ ಇಬ್ಬರೂ ಬ್ಯಾಂಕರ್ಸ್. ಇವನು ನೋಡಲು ಮುದ್ದು ಮುದ್ದು ಗೊಂಬೆ ತರಹ. ಬಿಳಿ ಬಣ್ಣ, ಕೆಂಪು ಕೆಂಪು ಕದಪು, ಚೆಂದದ ಕಣ್ಣುಗಳಿಗೆ ಚಾಮರದಂತ, ಉದ್ದ ಉದ್ದ ರೆಪ್ಪೆ ಅದರ ಮೇಲೆ ಗುಳಿ ಬಿಳುವ ಕೆನ್ನೆ. ನಾನಂತು ಅವರ ಮನೆಗೆ ಹೋದರೆ ಅವನನ್ನು ರೆಪ್ಪೆ ಮಿಟುಕಿಸದೆ ನೋಡುತ್ತಿದ್ದೆ. ಚೂಟಿ ಚುರುಕು ಎಲ್ಲಾ ಹೌದು. ಆದರೆ ಓದುವುದೆಂದರೆ ಎಲರ್ಜಿ, ಅದರಲ್ಲೂ ಹೋಮ್ ವರ್ಕ್ ಮಾಡುವುದೆಂದರೆ ಶತ ಎಲರ್ಜಿ. ಅವನ ಅಮ್ಮನಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಇಂತದರಲ್ಲೆ ಒಂದು ದಿನ ಶಾಲೆಯಿಂದ ಪೋಷಕರಿಗೆ ಕರೆ ಬಂದಿತಂತೆ. ಅವನ ಅಮ್ಮ ಅಲ್ಲಿಗೆ ಹೋದರೆ ಅವನ ಶಾಲೆಯ ಸಿಸ್ಟರ್, "ಏನಮ್ಮ ನಿಮಗೆ ಮಗು ಸಾಕುವುದು ಕಷ್ಟ ಆಗುತ್ತಿದ್ದರೆ ಜನ್ಮ ಯಾಕೆ ನೀಡುತ್ತೀರಾ" ಅಂತ ಕೇಳಿದರಂತೆ, ಇವರ ಮಾತು ಕೇಳಲು ತಯಾರಿಲಿಲ್ಲವಂತೆ. ಅವನು ಆ ದಿನ ಹೋಮ್ ವರ್ಕ್ ಮಾಡಿರಲಿಲ್ಲವಂತೆ. ಅದಕ್ಕೆ ಮಿಸ್ ಬೈದಾಗ ಅವನು ಅಳುತ್ತಾ, ’ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊಗುತ್ತಾರೆ. ಸಂಜೆ ಅಲ್ಲಿಂದ ಇಬ್ಬರೂ ಕ್ಲಬ್ ಗೆ ಹೋಗುತ್ತಾರೆ. ನಾನು, ಅವರು ಮನೆಗೆ ಬರುವ ತನಕ ಮೆಟ್ಟಿಲ ಮೇಲೆ ಕುಳಿತಿರುತ್ತೇನೆ. ಲೇಟ್ ಆಗಿ ಬರ್ತಾರಾದ್ದರಿಂದ ನಾನು ಮಲಗಿ ಬಿಡ್ತೇನೆ, ಅಪ್ಪ ಅಮ್ಮ ಹೋಡಿತಾರೆ, ಅಂತೆಲ್ಲ ಕತೆ ಕಟ್ಟಿ ಹೇಳಿದ್ದನಂತೆ. ಆಗ ಅವನು ಇನ್ನೂ ಪ್ರೀ ಸ್ಕೂಲ್... ಅವನ ಅಮ್ಮ ಇಲ್ಲ ಸಿಸ್ಟರ್ ಸುಳ್ಳು ಸುಳ್ಳೇ ಹೇಳ್ತಾನೆ. ನಿನ್ನೆ ಹೋಮ್ ವರ್ಕ್ ಇದೆಯಾ ಅಂತ ಕೇಳಿದರೆ ಇಲ್ಲ ಅಂದ...ಅಂತ ಹೇಳೋವಷ್ಟರಲ್ಲಿ ಅವನ ಪ್ರಿನ್ಸಿಪಲ್-ಅದೇ ಸಿಸ್ಟರ್.." ಅವನ ಮುಖ ನೋಡಿ ಅವನು ಸುಳ್ಳು ಹೇಳ್ತಾನಾ? ನೀವೇ ಸುಳ್ಳು ಹೇಳ್ತಿದ್ದೀರಿ ಅಂತ ಜೋರಿನಿಂದ ಇವರ ಬಾಯಿ ಮುಚ್ಚಿಸಿದರಂತೆ. ಇದೆಲ್ಲ ನಡೆಯುವಾಗ ಅವನು ತಣ್ಣಗೆ ಮುಗ್ದ ಕಣ್ಣುಗಳನ್ನು ಪಿಟಿಕಿಸ್ತಾ ಇದ್ನಂತೆ. ಆಮೇಲೆ ನಮಗೆ ಹೇಳಿದಾಗ ನಾವು ನಕ್ಕಿದ್ದೆ ನಕ್ಕಿದ್ದು. ಅಂತೂ ಅವನು ಓದು ಪೂರ್ಣ ಗೊಳಿಸಲಿಲ್ಲ. ಫ್ರೆಂಡ್ ಗರಾಜ್ ನಲ್ಲಿ ಕೆಲಸ ಮಾಡಿ, ಅದರ ಜತೆ ಜಿಮ್ ಗೆ ಹೋಗಿ ಬಾಡಿ ಬಿಲ್ಡಿಂಗ್ ಎಲ್ಲಾ ಮಾಡಿ..ಈಗ ಅವನು ಆಸ್ಟೇಲಿಯಾದಲ್ಲಿ ಎರಡು ಗರಾಜ್ ಒಂದು ಜಿಮ್ ನಡೆಸ್ತಿದಾನೆ. ಭಾರತೀಯ ಮೂಲದ ಬಟ್ ಅಲ್ಲೇ ಹುಟ್ಟಿ ಬೆಳೆದ ಗುಜರಾತಿ ಹುಡುಗಿಯನ್ನು , ಇಲ್ಲೇ ಬೆಂಗಳೂರಿನಲ್ಲೇ ಮದುವೆಯಾಗಿ ಈಗ ಒಂದು ಮಗುವಿನ ತಂದೆ....ವಿಡಿಯೋ ನೋಡಿ ಅವನ ನೆನಪಾಯ್ತು.

ನನ್ನ ತಮ್ಮನ ಮಗಳು ಸ್ಯಾಮಿ
ಅವಳೂ ಪ್ರಿ ಸ್ಕೂಲ್. ಆಗಲೇ  ಹಿಂದುಸ್ತಾನಿ ಸಂಗೀತದಲ್ಲಿ ಅವಳ ವಯಸ್ಸಿಗೆ ಮೀರಿ ಪರಿಣಿತಿ ಹೊಂದಿದ್ದಾಳೆ. ನಮ್ಮ ಮಾತೃ ಭಾಷೆ ಕೊಂಕಣಿ ಜತೆ ಕನ್ನಡ, ಇಂಗ್ಲಿಶ್, ಹಿಂದಿ ಅರಳು ಹುರಿದಂತೆ ಮಾತಾಡ್ತಾಳೆ. ಓದಿನಲ್ಲೂ ತುಂಬಾ ಮುಂದೆ. ಇದರ  ಜತೆ ವೆಸ್ಟರ್ನ್ ಡ್ಯಾನ್ಸ್ ಕೂಡ ಕಲಿತಿದ್ದಾಳೆ. ಪನ್ ಕೂಡ ಮಾಡ್ತಾಳೆ. ಎಲ್ಲಾ ಹೌದು ಆದರೆ ಊಟ ತಿಂಡಿ ವಿಷಯದಲ್ಲಿ ಮಾತ್ರ ರಗಳೆ. ತಿನ್ನೋದೇ ಇಲ್ಲ. ಅವರ ಶಾಲೆಯಲ್ಲಿ ಮಧ್ಯಾಹ್ನದ ಊಟ ಕ್ಲಾಸ್ ರೂಮ್ ನಲ್ಲೇ ಟೀಚರ್ ಎದುರಿಗೆ ಮಾಡಬೇಕು. ಟಿಫಿನ್ ಎಲ್ಲ ಖಾಲಿ ಮಾಡದಿದ್ದರೆ ಟೀಚರ್ ಫನಿಶ್ ಮೆಂಟ್ ಕೊಡುತ್ತಾರೆ. ಆದ್ದರಿಂದ ಮಕ್ಕಳು ಟಿಫನ್ ಬಾಕ್ಸ್ ನಲ್ಲಿದ್ದದ್ದು ತಿಂದೇ ಬರುತ್ತಾರೆ. ಇಂತದ್ದರಲ್ಲಿ ಸ್ಯಾಮಿ ಯ ಕಂಡಿಷನ್...ನನಗೆ ಇಷ್ಟ ಆಗೋ ತಿಂಡಿ ಮಾತ್ರ ಹಾಕಬೇಕು ಅಂತ. ಅವಳಿಗೆ ಇಷ್ಟ ಆಗೋ ತಿಂಡಿ ಅಂದ್ರೆ ನೀರು ದೋಸೆ, ಚಪಾತಿ,ಪೂರಿ ಮತ್ತು ಉದ್ದು ಮೈದಾ ದೋಸೆ, ಅದೂ ಒಂದೇ ಅಂದ್ರೆ ಒಂದು ದೋಸೆ, ಒಂದು ಚಪಾತಿ ಹಾಗೆ. (ಹುಳಿ ಬರಿಸಿದ್ದು for eg ಇಡ್ಲಿ, ದೋಸೆ...ಅದೆಲ್ಲ ತಿನ್ನಲ್ಲ) ನಾವು ಹೋದಾಗ ಒಂದು ದಿನ ಒಂದು ಎಕ್ಸ್ಟ್ರಾ ಚಪಾತಿ ಹಾಕಿದ್ದಳು ಬಾಕ್ಸ್ ನಲ್ಲಿ ಅವಳ ಅಮ್ಮ. ಅವಳು ಬಂದಮೇಲೆ ಅವಳ ಅಮ್ಮ ಅವಳ ಟಿಫಿನ್ ಬಾಕ್ಸ್ ಚೆಕ್ ಮಾಡಿ ವಾಹ್ ಎಲ್ಲಾ ತಿಂದು ಬಂದಿದ್ದಾಳೆ ಅಂತ ಖುಶಿಯಲ್ಲಿದ್ದಳು. ನಾನು- ತಿಂದ್ಯೇನೆ ಅಂತ ಕೇಳಿದರೆ..ಇಲ್ಲ ಮಾಲ್ತ್ಯಕ್ಕ, ಸ್ಕೂಲ್ ಯುನಿಫರ್ಮ್ ಪಾಕೆಟ್ ನಿಂದ ಒಂದು ಚಪಾತಿ ತೆಗೆದು ತೋರಿಸಿ ಅವಳು ನಕ್ಕ ಪರಿಯಿದೆಯಲ್ಲ...priceless and unforgettable.. ಬ್ಲ್ಯಾಕ್ ಮೈಲ್ ಮಾಡುವುದರಲ್ಲಿ ಎತ್ತಿದ ಕೈ. ಅವಳಿಗೆ ಏನಾದರೂ ಕೇಳಿದರೆ ಕೊಡಿಸದಿದ್ದಲ್ಲಿ, ಸಿರಿಯಲ್ ನಲ್ಲಿ ತೋರಿಸೋ ಕ್ಯಾರಕ್ಟರ್ ತರಾ ಅಳ್ತಾ, ’ಗೊತ್ತು ಗೊತ್ತು ನಿಮಗೀಗ ಹೊಸ ಪಾಪು ಬಂದಿದೆಯಲ್ಲಾ? ಅದೂ ಬಿಳಿ ಬಿಳಿ ಬಣ್ಣ ಕೂಡ ಇದೆ ಅದಕ್ಕೆ, ನಾನು ಅಂದರೆ ಅಸಡ್ಡೆ ಎನ್ನುವ ದೊಡ್ಡ ದೊಡ್ಡ ಪದಗಳನ್ನು ಬಳಸ್ತಾಳೆ...ಆಗ ಪೆಚ್ಚು ಮುಖ ಮಾಡಿಕೊಂಡು ನನ್ನ ಬಳಿ ಕಂಪ್ಲೈನ್ ಮಾಡುವ ಸರದಿ ಅವಳ ಅಮ್ಮನದು, ’ನೋಡಿದ್ಯಾ ಮಾಲ್ತಕ್ಕಾ ಹೆಂಗೆ ಮಾತಾಡ್ತಾಳೆ? ಎಲ್ಲಿ ಕಲಿತಾಳೆ ಇದೆಲ್ಲ ನನಗೂ ಗೊತ್ತಿಲ್ಲ..ಅಂತ....
........................................................................................................................................................
ಮಾಲತಿ ಅಕ್ಕ, ನಿನಗೆ ಗೊತ್ತಾ? ನನಗೆ cooking ಅಂದ್ರೆ ಇಷ್ಟ. ನಾಳೆ ನಿನಗೆ ಸ್ಪೆಷಲ್ ಪರಾಠಾ ಮಾಡಿ ತಿನ್ನಿಸ್ತೇನೆ ಅಂತ   ನನ್ನ ತಮ್ಮನ ಐದು ವರೆ ವರ್ಷದ ಮಗಳು ಸ್ಯಾಮಿ  ಅಂದಾಗ, ಎನೋ ಮುದ್ದು ಮುದ್ದಾಗಿ ಹೇಳ್ತಿದ್ದಾಳೆ ಅಂತ, ಆಯ್ತು ಮಗು' ಅಂದೆ. ಆದ್ರೆ ಮರುದಿನ ಅವಳು ಕೊತ್ತಂಬರಿ ಸೊಪ್ಪು stuffed ಪರಾಠಾ ಮಾಡಿ ನಮಗೆ ಕೊಟ್ಟಾಗ ನಿಜಕ್ಕೂ ಬೆರಗಾದೆ.
ಹಿಟ್ಟು ಮಾತ್ರ ಅಮ್ಮ ಕಲಿಸಿಕೊಟ್ಟಿದ್ದು ಮತ್ತು ಗ್ಯಾಸ್ ಆನ್ ಮಾಡಿ ತವಾ ಇಟ್ಟಿದ್ದು. ಉಳಿದದ್ದೆಲ್ಲಾ ಆಕೆನೆ ಮಾಡಿದ್ದಾಳೆ. ಹಿಟ್ಟಿನಲ್ಲಿ ಕೊತ್ತಂಬರಿ ಸೊಪ್ಪು ಹಾಕಿ, ಅದಕ್ಕಿಂತ ಮುಂಚೆ ಅದನ್ನು ಚೆನ್ನಾಗಿ ತೊಳೆದು, ಪರಾಠಾವನ್ನು  almost ಉರುಟಾಗಿ ಲಟ್ಟಿಸಿ, (ನಾನು ಉರುಟು ಚಪಾತಿ ಮಾಡಲು ಕಲಿಯುವಷ್ಟರಲ್ಲಿ ನನಗೆ ಕತ್ತೆಯ ವಯಸ್ಸು ಆಗಿತ್ತು  :-)) ತುಪ್ಪ ಹಾಕಿ (ಅಜ್ಜಿ ಎಣ್ಣೆ ಬೇಡ ತುಪ್ಪ ಕೊಡು ಅದರಿಂದಲೇ Taste  ಬರುವುದು. ) ಚೆನ್ನಾಗಿ ರುಚಿ ರುಚಿಯಾದ ಪರಾಠಾ ತಿನ್ನುವ ಭಾಗ್ಯ ನಮ್ಮದು. ನನ್ನ ಪಾಲಿಂದು ನಾನು ಗಬ ಗಬ ತಿಂದೆ. ಇದು ನಿಹಾರಿಕಾ ತಿನ್ನುವ ಮುಂಚೆ, whatsapp  ನ ಫ್ಯಾಮಿಲಿ ಮೆಂಬರ್ಸ್ ಗೆ ಕಳುಹಿಸಲು ತೆಗೆದ ಚಿತ್ರ.

ಸ್ವಲ್ಪ ಹೊತ್ತು ಬಿಟ್ಟು ಸ್ಯಾಮಿ , ಮಾಲತಿ ಅಕ್ಕ ಹೇಗಾಗಿತ್ತು ಪರಾಠಾ' ಅಂತ ಕೇಳಿದಳು. ನಾನು ತುಂಬಾ ಚೆನ್ನಾಗಿತ್ತು ಅಂದೆ. ಸುಮ್ನೆ ಹೇಳ್ತಿದ್ದಿಯಾ ನಿಜ ಹೇಳಿತ್ತಿದ್ದಿಯಾ?
'ನಿಜ'.
pinky promise
ಎಸ್ ಪಿಂಕಿ ಪ್ರಾಮಿಸ್ ನಾನಂದೆ.
ಅಷ್ಟೆ ಯಾಕೆ ನಾ whatsapp  ನಲ್ಲಿ ಎಲ್ಲರಿಗೂ ಕಳಿಸಿ ಆಯ್ತು.
'ಹೌದಾ'ಎಲ್ಲಿ ತೋರಿಸು', ಏನು comments  ಹಾಕಿದಾರೆ ಅಂತ ಕೇಳ್ತಾಳೆ ಪುಟ್ಟಿ... ಈಗೀನಾ ಮಕ್ಕಳಾ?? ಅಬ್ಬಾ??
...............................................................................................................
ನಮ್ಮ ಮನೆ ಗೃಹ ಪ್ರವೇಶಕ್ಕೆ ಇಲ್ಲಿ ಬೆಂಗಳೂರಿಗೆ ಬಂದಾಗ, ’ಸ್ಯಾಮಿ ನನಗೆ ಎರಡು ಬೆಸ್ಟ್ ಫ್ರೆಂಡ್ಸ್ ಇದ್ದಾರೆ. ಅವರು ಇವತ್ತು ಬರುತ್ತಿದ್ದಾರೆ, ಅವರಿಗೆ ’ಚಂದಿರ ನಮಗೆ, ದೇವರು ಕೊಟ್ಟ ಪೆಪ್ಪರಮಿಂಟೇನಮ್ಮ" ಹಾಡು ಹೇಳ್ತೀಯಾ ಅಂತ ಕೇಳಿದೆ. ಆಯ್ತು ಹಾಡ್ತೀನಿ ಅಂತ ಒಪ್ಪಿ ಅದರ ಜತೆಗೆ ನಾನು ಅವರಿಗೋಸ್ಕರ ಗ್ರೀಟಿಂಗ್ ಕಾರ್ಡ್ ಕೂಡ ಮಾಡ್ತೇನೆ’ ಅಂದ್ಲು. ಆಯ್ತು ಅಂತಂದೆ. ಆಮೇಲೆ ಗ್ರೀಟಿಂಗ್ ಕಾರ್ಡ್ ಹಿಡಿದುಕೊಂಡು ಬಂದು ಅವರ ಹೆಸರು ಹೇಳು ಇದರ ಮೇಲೆ ಬರೀತೀನಿ ಅಂದ್ಲು. ನಾನು ಎರಡು ಹೆಸರು ಹೇಳಿದೆ. ಅದಕ್ಕೆ ಅವಳು ಕಣ್ಣುಗಳನ್ನು ಇಷ್ಟು ದೊಡ್ಡ ದೊಡ್ಡ ಬಿಟ್ಟುಕೊಂಡು, ಗಟ್ಟಿ ದನಿಯಿಂದ ’ನಿನ್ನ ಫ್ರೆಂಡ್ಸ್ ಬಾಯ್ಸಾ?? (boysಆ) ಅಂತ ಕೇಳಿದ್ದು ನನಗೆ ಒಂದು ಕ್ಷಣ ಶಾಕ್.....ಆಮೇಲ್ ಮಹಾ ನನ್ನ ಮೇಲೆ ಉಪಕಾರ ಮಾಡಿದ ಹಾಗೆ, ’ಹಾಂ ಇರಲಿ ಬಿಡು ಅವರ ಹೆಸರು ಬರೀತೇನೆ’ ಅಂತ ಬರೆದು ಇಟ್ಟು ಕೊಂಡಿದ್ದಳು. ಆದರೆ ನನ್ನ ಬೆಸ್ಟ್ ಫ್ರೆಂಡ್ಸ್ ಬಂದಾಗ ಅವಳು ಊಟ ಮಾಡ್ತಾ ಇದ್ದಳು, ಆಮೇಲೆ ಅವರೆಲ್ಲ ಅವಳ ಚಿಕ್ಕಮ್ಮನ ಮನೆಗೆ ವಿಸಿಟ್ ಕೊಡಲು ಹೋದರು. ರಾತ್ರಿ ಮನೆಗೆ ಬಂದು, ’ಎಲ್ಲಿ ನಿನ್ನ ಫ್ರೆಂಡ್ಸ್? ಹೊರಟು ಹೋದ್ರಾ ಅಂದ್ಲು’. ನಾನು ಹೌದೆಂದೆ....ತುಂಬಾ ಬೇಸರದ ಪೋಸ್ ಕೊಟ್ಟು, ಇರಲಿ ಬಿಡು ಈ ಗ್ರೀಟಿಂಗ್ ಕಾರ್ಡ್ ನಾದ್ರೂ ತಲುಪಿಸು ಅಂತ ಕೊಟ್ಲು.

ನನಗಂತೂ ಅವಳು, ಅವಳ ನೌಟಂಕಿಗಳು ತುಂಬಾ ಇಷ್ಟ. ಅದೂ ಅವಳಿಗೆ ಗೊತ್ತು..ಆದ್ದರಿಂದ  ನಾನಿದ್ದಾಗ ಸ್ವಲ್ಪ ಎಕ್ಸ್ಟ್ರಾ ನೇ ಮಾಡ್ತಾಳೆ.
ಲವ್ ಯು ಸ್ಯಾಮಿ. ಇವತ್ತು ಅವಳು ಶಾಲೆಯಲ್ಲಿ ಬರ್ತ್ ಡೇ ಸೆಲೆಬ್ರೇಟ್ ಮಾಡ್ತಿದ್ದಾಳೆ....

November 12, 2014

ದೊಡ್ಡಪತ್ರೆ/ ಸಾಂಬಾರಬಳ್ಳಿ ತಂಬುಳಿ


ಮಧ್ಯಾಹ್ನ ಊಟಕ್ಕೆ ಅಚಾನಕ್ಕ್ ಆಗಿ ಗೆಸ್ಟ್ ಇದ್ರು. ಹೊಟ್ಟೆ ಸರಿಯಿಲ್ಲದ್ದರಿಂದ ಮೊಸರನ್ನ ಊಟ ಮಾಡಲು ಬಂದವರು. ಈ ತಂಬುಳಿ ಬಗ್ಗೆ , ಅದರ ಔಷಧಿಯ ಗುಣಗಳ ಬಗ್ಗೆ ಹೇಳಿ' ಅಜ್ವಾಯಿನ್ ಪತ್ತೆ ಕಾ ಚಟ್ನಿ' ಅಂದೆ. ಅದಕ್ಕೆ ಬಂದವರು 'ಅರೇ  ಏ ತೋ ಸೇಹತ್ ಕೆ ಲಿಯೇ ಬಹುತ್ ಅಚ್ಚಾ ಹೈ ' ಅಂದಿದಲ್ಲದೆ ನಾನು ಮಾಡಿದ ೫-೬ ಬಗೆಯ ಅಡಿಗೆಯನ್ನು ಊಟ ಮಾಡಿ ಬಾಳೆ ಹಣ್ಣು ತಿನ್ನಲು ಜಾಗ ವಿಲ್ಲಾ ಅಂತ ಪೇಚಾಡಿಕೊಂಡು ಹೋದರು. ( ಇವತ್ತು ಬೆಳಿಗ್ಗೆ ಯಾರಾದರೂ ಊಟಕ್ಕೆ ಬರಬಹುದು ಅನ್ನಿಸಿತ್ತು ಯಾಕೋ ................) :-)

ಬೇಕಾಗುವ ಸಾಮಗ್ರಿ:

4-5 ದೊಡ್ಡಪತ್ರೆ ಎಲೆಗಳು, 8-10 ಕಾಳುಮೆಣಸು, 2 ಟೇಬಲ್ ಸ್ಪೂನ್ ಕಾಯಿ ತುರಿ ,  ಅರ್ಧ ಟೀ ಸ್ಪೂನ್ ಜೀರಿಗೆ, ಸ್ವಲ್ಪ ತುಪ್ಪ, ಹುಣಸೆ ಹುಳಿ , ಉಪ್ಪು, ಮಜ್ಜಿಗೆ.

ಎಲೆಗಳನ್ನು ಚೆನ್ನಾಗಿ ತೊಳೆಯಿರಿ. ತುಪ್ಪದಲ್ಲಿ ಕಾಳುಮೆಣಸು-ಜೀರಿಗೆ ಹುರಿಯಿರಿ. ಕಾಯಿತುರಿಯಿಂದಿಗೆ ಎಲ್ಲವನ್ನೂ ಸೇರಿಸಿ ನುಣ್ಣಗೆ ರುಬ್ಬಿ. ಇದು ಚಟ್ನಿ ಯಾಯಿತು.



ತಂಬುಳಿಗೆ: ಮೇಲಿನ ಮಿಶ್ರಣಕ್ಕೆ ಮಜ್ಜಿಗೆ / ಮೊಸರು ಬೆರೆಸಿ ತಂಬುಳಿ ಮಾಡಿ. ಬೇಕಿದ್ದಲ್ಲಿ ಸಾಸಿವೆ ಜೀರಿಗೆ ಒಗ್ಗರಣೆ ಕೊಡಬಹುದು. ದೇಹಕ್ಕೆ ತಂಪು. ನೆಗಡಿ ಎಲ್ಲ ಆಗಲ್ಲ. ಹಸಿಮೆಣಸಿನ ಕಾಯಿಯ ಬಳಕೆಯಿಲ್ಲದ್ದರಿಂದ ಎಸಿಡಿಟಿ ಇದ್ದವರಿಗೆ ಇದು ಒಳ್ಳೆಯ ಔಷಧಿ
ಟ್ರೈ ಮಾಡ್ತೀರಾ??
:-)
Vikas Hegde ಎಂಬೋ ತಮ್ಮ ಬ್ಲಾಗ್ ಬರಹಗಾರರಿಗೆ ಧಮಕಿ ಹಾಕ್ತಿದ್ದಾನೆ . ಅದಕ್ಕೆ ಅವನ ಗೂಂಡಾಗಿರಿಗೆ ಹೆದರಿ ಈ ಝಟ್ ಪಟ್  but healthy post
( ನನ್ನ ಬ್ಲಾಗ್ ನ ೬ ನೇ ಹುಟ್ಟುಹಬ್ಬ ಕೂಡ ಆಗಿ ಹೋಯ್ತೇ?? ನನಗೆ ಮರತೇ ಹೋಯ್ತು !!! ಛೆ ಒಂದು ಟ್ರೀಟ್ ಮಿಸ್ ಆಗಿ ಹೋಯ್ತು :-)

October 17, 2014

ಪೀಕಲಾಟ (ಸಣ್ಣ ಕತೆ)

ಇವತ್ತು ಪಟ್ಟು ಹಿಡಿದು ಬರೀಲಿಕ್ಕೆ ಕೂತಿದ್ದೇನೆ.  ತಿಂಗಳ ಮೇಲಾಯಿತು ಏನೂ ಬರೆದೆ ಇಲ್ಲ. ವಾಕಿಂಗ್ ಹೋದಾಗ ನೋಡಿದ ದೃಶ್ಯದ ಆಧಾರದ ಮೇಲೆ ಈ ಸಣ್ಣ ಕತೆ ಹೆಣೆದಿದ್ದೇನೆ..ಒಪ್ಪಿಸಿಕೊಳ್ಳುವಂತವರಾಗಿ....:-)
.
.
.
.
.
.ಮನೋರಮಾ ಗಾರ್ಡನ್ ನ ಸುತ್ತು ಹೊಡೆದು ಬರುವಾಗ ಈ ದೃಶ್ಯ ಅವಳಿಗೆ ಎದುರಾಯಿತು. ಅವಳ ಅಮ್ಮ ಒಬ್ಬ ಗಂಡಸಿನ ಜತೆ ಅವ್ಯಾಚ್ಯ ಶಬ್ದಗಳಿಂದ ಜಗಳವಾಡುತ್ತಿದ್ದಳು..’ಏನೋ ನೀನು ನನ್ನ ಮಗಳ ಮಿಂಡ ನಾ? ಏನು ಅವಳ ಜತೆ ನಿನ್ನ ಖುಸುಪುಸು? ನೀವು ಒಟ್ಟಿಗೆ ಇದ್ದದ್ದನ್ನ ನಾನು ನೋಡಲಿಲ್ಲ ಅಂದುಕೊಂಡೆಯಾ ಹೇಗೆ? ಬೋಸುಡಿ ಮಗನೆ..ಅಂದದ್ದು ಮಾತ್ರವಲ್ಲ ಅಲ್ಲೆ ಇದ್ದ ಇಟ್ಟಿಗೆಯನ್ನು ಎತ್ತಿಕೊಂಡಳು ಅವನನ್ನು ಹೊಡೆಯಲು. ಇದೆಲ್ಲ ನೋಡಿ ಮನೋರಮಾ ಓಡು ನಡಿಗೆ ಯಿಂದ ಅವರ ಬಳಿ ಬಂದು, ಅವಳ ಅಮ್ಮ ಕೈ ಎಳೆದಳು , ಆ ಜಾಗ ದಿಂದ ಹೊರಡಲು..ಆದರೆ ಅವಳ ಅಮ್ಮನ ಬೈಗಳು ಇನ್ನೂ ನಿಂತಿರಲಿಲ್ಲ..ಅಷ್ಟೆ ಅಲ್ಲ ಆ ವ್ಯಕ್ತಿ ತಬ್ಬಿಬ್ಬಾಗಿ ಇವರಿಬ್ಬರ ಬಳಿ ನೋಡುತ್ತಿದ್ದ. ಗಾರ್ಡನ್ ಬಳಿಯಿಂದ ಹಲವಾರು ಒಳದಾರಿಗಳು ಮುಖ್ಯ ರಸ್ತೆಗೆ ಒಯ್ಯುತ್ತಿದ್ದವು. ಹಾಗೆ ಈ ವ್ಯಕ್ತಿ ಕೂಡ ಶಾರ್ಟ್ ಕಟ್ ಬಳಸಲು ಈ ದಾರಿಯಿಂದ ಬಂದರೆ ಇಲ್ಲಿ ಹೀಗೆ.... ಮನೋರಮಾ ಅವರಿಗೆ ’ಹೋಗಿ ಸರ್..ಅಮ್ಮನಿಗೆ ಸ್ವಲ್ಪ ತಲೆ ಸರಿಯಿಲ್ಲ..ತುಂಬಾ sorry. ಅಂದಳು , ಮುಖ ಎಲ್ಲ ನಾಚಿಕೆ ಅವಮಾನದಿಂದ ಕೆಂಪಗಾಗಿತ್ತು. ಅವನು ಸಿಟ್ಟು ತಿರಸ್ಕಾರದಿಂದ...ಏನ್ರೀ ಮೆಂಟಲ್ ಹಾಸ್ಪಿಟಲ್ ಸೇರಿಸೋದು ಬಿಟ್ಟು ಹೀಗೆ ದಾರಿ ಹೋಕರನ್ನ ಬೈಯ್ಯೋದ...?? ಮೆಂಟಲ್ ನನ್ನ್ಮಕ್ಕಳು..ಅಂತ ಅಲ್ಲಿಂದ ಹೊರಟು ಹೋದ.
ಮನೋರಮಾ ’ಬಹುಶ: ನಾನು ಇವತ್ತು ಎದುರಿನ ಬಾಗಿಲು ಸರಿಯಾಗಿ ಎಳೆದುಕೊಂಡಿಲ್ಲಾ ಹಾಗಾಗಿ ಅಮ್ಮ ಮನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು’ ಅಂದು ಕೊಂಡು ಅಮ್ಮನನ್ನು ಎಳೆದುಕೊಂಡೆ ಮನೆಗೆ ಬಂದಳು. ಇತ್ತೀಚಿಗೆ ಅವಳ ಅಮ್ಮನಿಗೆ ಅವಳ ಮೇಲೆ ಸಂಶಯ ಜಾಸ್ತಿಯಾಗಿತ್ತು. ಆಫಿಸ್ ಕೆಲಸ ಮುಗಿಸಿ ಕೆಲವೊಮ್ಮೆ ಮನೆಗೆ ಬರುವಾಗ ಲೇಟ್ ಆದರೆ ’ಏನೇ ಯಾರ ಜತೆ ಚಕ್ಕಂದ ಆಡ್ತೀದ್ದಿ..ಅಂತಲೋ....ಬೋಸುಡಿಕೆ ಆಫಿಸ್ ಗೆ ಹೋಗ್ತೀಯಾ ಎಲ್ಲಿ ಅಂಡಲಿಲಿಕ್ಕೆ ಹೊಗ್ತೀಯ ಎಂಬಂತಹ ಅವ್ಯಾಚ್ಯ ಶಬ್ದಗಳ ಬಳಕೆ ಇತ್ತೀಚಿಗೆ ವಿಪರೀತ ವಾಗಿತ್ತು. ಅಷ್ಟೆ ಅಲ್ಲ ನ್ಯುಸ್ ಪೇಪರ್ ಬಿಲ್, ಹಾಲಿನವ, ಹೂವಿನವ ಬಂದಾಗಲೆಲ್ಲ ಇಂತವೇ ಬೈಗಳು. ಆಫಿಸಿನಿಂದ ಮನೆಗೆ ಮರಳಿ ಮನೆಗೆ ಬಂದಾಗ ಒಂದು  ಲೋಟ ಬಿಸಿ ಟೀ ಯಾರಾದರೂ ಮಾಡಿಕೊಡುವಂತಿದ್ದರೆ...ರೆ....ರೆ.....
ಬಾಗಿಲಿನ ಸದ್ದಾದಾಗ ಮನೋರಮಾ ಎದ್ದು ಹೊರಗೆ ಬಂದಳು. ಅವಳ ಸ್ನೇಹಿತೆ ಲತಾ ಬಂದಿದ್ದಳು. ’ಏನಾಯಿತು? ಅದೇ ಹಳೆ ಪ್ರಾಬಲ್ಂ ಆ?? ಯಾಕೆ ಅಳ್ತಾ ಇದ್ದೀಯಾ? ನಿನಗೆ ಎಷ್ಟೊಂದು ಸಾರಿ ಸಮಜಾಯಿಸಿ ಹೇಳಿದೆ ಅಮ್ಮನಿಗೆ ಒಂದು ಒಳ್ಳೆಯ ಸ್ಯಾನಿಟೋರಿಯಮ್ ಗೆ ಸೇರಿಸು ಅಂತ. ಇನ್ನೂ ಎಷ್ಟು ಅಂತ ಅನುಭವಿಸುತ್ತೀಯಾ?? you have a right to be happy. ಈಗಲೇ ನಿನಗೆ 28 . ಯಾರಿಗೋಸ್ಕರ ತ್ಯಾಗ ಮಾಡುತ್ತೀಯಾ?...ಮನೋರಮಳ ಸಪ್ಪಗಿನ ಮುಖ ನೋಡಿ..’ ನೋಡು ರಮ್ಮಿ, ಒಂದು ಮಾತು ಕೇಳ್ತಿಯಾ?? ಕೆಲವು ದಿನಗಳ ಮಟ್ಟಿಗೆ ಅಮ್ಮನನ್ನು ಸ್ಯನಿಟೋರಿಯಮ್ ನಲ್ಲಿಡುವ ಪ್ಲಾನ್ ಮಾಡು. ನೋಡು ಇನ್ನೂ ಪಾಪ ಪ್ರಜ್ಝೆ ಕಾಡುತ್ತಿದ್ದರೆ ಅಲ್ಲಿಂದ ಕರೆದುಕೊಂಡು ಬರುವಾ ಆಗದೆ?? ಇವತ್ತು ನೀನು ಆಲೋಚನೆ ಮಾಡು. ಯಾಕಂದ್ರೆ ಪರಿಸ್ಥಿತಿ ಮೀರುತ್ತಾ ಇದೆ. ಅಕ್ಕಪಕ್ಕದವರಿಗೂ ನಿನ್ನಮ್ಮನ ಮಾತುಗಳು ಕೇಳಿ ಕಿರಿಕಿರಿಯಾಗ್ತಾ ಇದೆ. ಸುಮ್ನೆ ಅವರೆಲ್ಲರ ಕಂಪ್ಲೈನ್ ಬರುವ ಮುಂಚೆ ಏನಾದರೂ ನಿರ್ಧರಿಸು. ನಾನಿದ್ದೀನಿ ನಿನ್ನ ಜತೆ. ಸರಿ..ಸಂಜೆ ಸಿಗ್ತೀನಿ,,ಆಫಿಸ್ ಗೆ ಲೇಟ್ ಆಯ್ತು..

.
.
.
.
.
.
.
ಅಂತೂ ಗಟ್ಟಿ ಮನಸ್ಸು ಮಾಡಿ ಮನೋರಮಾ ತನ್ನ ತಾಯಿಯನ್ನು ಪ್ರಖ್ಯಾತ ಆಶ್ರಮವೊಂದಕ್ಕೆ ಸೇರಿಸಿ ಬಂದಳು. ಒಂದು ನಾಲ್ಕು ದಿನ ತುಂಬಾ ಸಂಕಟ ಪಟ್ಟಳು. ತಿಂಗಳಿಗೊಮ್ಮೆ ಅವಳು ತನ್ನ ಅಮ್ಮನನ್ನು ಕಾಣಬಹುದಿತ್ತು. ಸ್ವಲ್ಪ ಹೆಚ್ಚೆ ಖರ್ಚಾದರೂ ಅಲ್ಲಿನ ವಾತಾವರಣ ಚೆನ್ನಾಗಿತ್ತು. ದೊಡ್ಡ ತೋಟದ ಮಧ್ಯೆ ಈ ಆಶ್ರಮ. ಅಲ್ಲಿ ಸೇರಿಸಿರುವ ಎಲ್ಲರಿಗೂ ಚೆನ್ನಾಗಿ ನೋಡಿಕೊಳ್ಳುವವರಿದ್ದರು. ದಿನಾ ಭೇಟಿ ಕೋಡುವ ವೈದ್ಯರು, ಯೋಗಾ ಕ್ಲಾಸ್ ಮುಂತಾದವು
.
.
.
.
..
ಈಗ ಸ್ವಲ್ಪ ಪ್ಲ್ಯಾಶ್ ಬ್ಯಾಕ್ ಗೆ ಹೋಗುವಾ....
ಮನೋರಮಾ ಅವಳ ಅಪ್ಪ ಅಮ್ಮನಿಗೆ ಮೂರನೆಯವಳು..ಅದೂ ಅವಳ ಅಮ್ಮನಿಗೆ 40 ರ ಮೇಲಾಗಿತ್ತು. ಮುಟ್ಟು ನಿಲ್ಲುವ ಸಮಯ ಎಂದು ನಿರ್ಲಕ್ಷಿಸಿದ್ದೆ ತಪ್ಪಾಯಿತು. ತಾನು ಗರ್ಭಿಣಿ ಎಂದು ಅರಿವಾದಾಗ ತುಂಬಾ ವಿಳಂಬವಾಗಿತ್ತು. ತೆಗೆಸಿದರೆ ಅವರ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ್ದರು. ಅಂತೂ ಇಂತೂ ಕಷ್ಟಕರ ಡೆಲಿವರಿಯಾಗಿ ..ಚೇತರಿಸಿಕೊಳ್ಳಲು ಅವಳ ಅಮ್ಮನಿಗೆ ತುಂಬಾ ಸಮಯ ಬೇಕಾಯಿತು. ಮನೋರಮಳಿಗೆ ಇಬ್ಬರು ಅಣ್ಣಂದಿರು..ಆಗಲೇ ಕಾಲೇಜು ಮುಗಿಸಿ, ಮನೋರಮೆಗೆ ತಿಳಿವಳಿಕೆ ಬರುವಷ್ಟರಲ್ಲಿ, ಕೆಲಸದ ಮೇಲೆ ಹೊರದೇಶಕ್ಕೆ ಹೋದವರು ಅಲ್ಲೇ ಮದುವೆ ಮಕ್ಕಳು ಮನೆ ಅಂತ ಮಾಡಿ ಹಾಯಾಗಿದ್ದರು. ತಮ್ಮ ಇಳಿವಯಸ್ಸಿನಲ್ಲಿ ತನಗೆ ಆಸರೆಯಾಗ ಬಹುದೆಂದು ತಿಳಿದುಕೊಂಡ ಅಮ್ಮನಿಗೆ ಇದರಿಂದ ಆಘಾತವಾಯಿತು. ಏತನ್ಮಧ್ಯೆ ಮನೋರಮಾಳ ತಂದೆಯ ದೇಹಾಂತವಾಗಿತ್ತು. ಮಗಂದಿರಿಬ್ಬರೂ ದೂರವೇ ಉಳಿದರು. ಪತ್ರವಿಲ್ಲ, ಮಾತುಕತೆಯಿಲ್ಲ..ಎನೂ ಇಲ್ಲ. ಮನೋರಮಾ ಕಲಿಯುವುದರಲ್ಲಿ ಜಾಣೆ. ಸ್ವಂತ ಪ್ರತಿಭೆಯಿಂದ ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗದಲ್ಲಿದ್ದಳು. ಅಮ್ಮನನ್ನು ನೋಡಿಕೊಳ್ಳಲ್ಲು ಯಾರು ಇಲ್ಲವೆಂದು ಮದುವೆ ಕೂಡ ಮಾಡದೇ ಉಳಿದುಕೊಂಡಿದ್ದಳು. ಇತ್ತೀಚಿಗೆ ಅವಳ ಅಮ್ಮನಿಗೆ ತುಂಬ ಹೆದರಿಕೆ. ಗಂಡು ಮಕ್ಕಳು ಕೈ ಬಿಟ್ಟರು. ಮನೋರಮಾ ಕೂಡ ಮದುವೆಯಾಗಿ ಹೋದರೆ ಎಂಬ ಭಯದಿಂದ ಅವರ ಮಾನಸಿಕ ಕಾಯಿಲೆ ಉಲ್ಬಣಿಸಿತ್ತು. ಯಾರದರೂ ಚಿಕ್ಕ ಪ್ರಾಯದ ಗಂಡಸನ್ನು ನೋಡಿದರೆ ಅವರು ಮನೋರಮೆಯನ್ನು ಮದುವೆ ಮಾಡಿಕೊಂಡು ಹೋಗುತ್ತಾರೆಂಬ ಭ್ರಮೆ...ಹಾಗಾಗೀ ಗಾರ್ಡನ್ ಬಳಿಯ ಆ ವ್ಯಕ್ತಿಯೊಂದಿಗೆ ಹಾಗೇ ಬಿಹೇವ್ ಮಾಡಿದ್ದರು
.
.
.
.
ಲತಾ ಹೇಳಿದ ಹಾಗೆ ನಾಲ್ಕು ದಿನ ಮನೋರಮಾಗೆ ಗಿಲ್ಟ್ ಕಾಡಿತ್ತು. ಆದರೆ ಅಲ್ಲಿ ಅಮ್ಮ ಡಾಕ್ಟರ್, ಔಷಧಿ ಯೋಗದ ಪರಿಣಾಮದಿಂದ ಮಾನಸಿಕ ಶಾಂತಿ ಪಡೆದಿದ್ದರು. ಮನೋರಮ ತನ್ನ ಉದ್ಯೋಗದಲ್ಲಿ ಇನ್ನಷ್ಟು ತೊಡಗಿಸಿಕೊಂಡು ಪ್ರೋಮೋಷನ್ ನಿರೀಕ್ಷೆಯಲ್ಲಿದ್ದಾಳೆ. ಇನ್ನೆರಡು ತಿಂಗಳಲ್ಲಿ ಮದುವೆ ಕೂಡ ಇದೆ....
ನನಗೆ ಇನ್ವಿಟೇಶನ್ ಕಳಿಸಿದ್ದಾಳೆ...ನೀವೂ ಬರಬಹುದು....
-:-)
.
,