ನಾನು ಮೊಟ್ಟ ಮೊದಲ ಬಾರಿಗೆ ಮ್ಯಾಗಿ ತಿಂದಿದ್ದು ಆರನೆ ತರಗತಿಯಲ್ಲಿದ್ದಾಗ. ಕೊನ್ವೆಂಟ್ ನಿಂದ ಫ್ರೀ ಎರಡು ಪ್ಯಾಕೆಟ್ ಕೊಟ್ಟಿದ್ದರು.ಅದನ್ನು ಹೇಗೆ ತಾಯಾರಿಸಬೇಕೆಂದು ಒಂದು ಪ್ರಾತ್ಯಕ್ಷಿ ಕೆ (Demo) ಕೂಡ ಮಾಡಿದರು. ಮನೆಗೆ ಬಂದ ಕೂಡಲೆ ನಾನಿ ಯನ್ನು ಪೀಡಿಸಿ ಬಿಸಿ ನೀರು ಮಾಡಿಸಿಕೊಂಡಿದ್ದೆ. ಮರಳುವ ನೀರಿನಲ್ಲಿ ಮ್ಯಾಗಿ ನೂಡಲ್ಸ್ ಹಾಕಿ , ಪ್ಯಾಕೆಟ್ ನಲ್ಲಿ ಕೊಟ್ಟ ಸೂಚನೆ ಪ್ರಕಾರ ಗಡಿಯಾರ ನೋಡಿಕೊಂಡು ಎರಡು ನಿಮಿಶ ಆದ ಮೇಲೆ ಅದನ್ನು ಕೆಳಗಿಳಿಸಿ, ಹರ ಸಾಹಸ ಮಾಡಿ ಬೆರಳಿನಿಂದಲೇ ತಿಂದಿದ್ದು. ಹಿಮ್ಮೇಳದಲ್ಲಿ ನಾನಿ ಹಾಗೂ ರಾಜೀವಿಯ ವರಾತ ಚಾಲೂ ಇತ್ತು, ಕ್ರಿಶ್ಚನ್ ಶಾಲೆಯಿಂದ ಕೊಟ್ಟಿದ್ದು, ಥೂ ಅದರಲ್ಲೇನಿರುತ್ತೋ ಹಾಳು-ಮೂಳು (ನನ್ನ ಅಜ್ಜನ ಮನೆಯಲ್ಲಿ ನಾವು vegetarian) ಅಂತೆಲ್ಲ. ತಿಂದ ಸ್ವಲ್ಪ ಹೊತ್ತಿಗೆ ಗಳಗಳನೆ ವಾಂತಿ ಮಾಡಿ ಬಿಟ್ಟೆ. ಆಯ್ತು ನನ್ನ ಹಾಗೂ ಮ್ಯಾಗಿಯ ಉಸಾಬರಿ. ಆಮೇಲೆ ಎರಡು ಮೂರು ಸಲ ಶಾಲೆಯಲ್ಲಿ ಫ್ರೀ ಸ್ಯಾಂಪಲ್ ಪ್ಯಾಕೆಟ್ ಕೊಟ್ಟರೂ ನಾನದನ್ನು ತೆಗೆದುಕೊಳ್ಳುತ್ತಿರಲಿಲ್ಲ.
ನಾನಿಗೆ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡ ಮೇಲೆ ನಾನು ಅಮ್ಮನ ಮನೆ ಅಂಧೇರಿಗೆ ಬಂದೆ. ಅಲ್ಲಿ ನನ್ನ ತಂಗಿ ಮ್ಯಾಗಿ ಮಾಡಿಕೊಂಡು ತಿನ್ನುತ್ತಿದ್ದಳು. ನಾನು ಒಂದು ದಿನ ಅವಳ ಜತೆ ತಿಂದೆ. ವಾಂತಿ ಗೀಂತಿ ಆಗಲಿಲ್ಲ. ಅಮೇಲೆ ಅದಕ್ಕೆ ತರಕಾರಿಗಳನ್ನೆಲ್ಲ ಹಾಕಿ ನನ್ನದೇ ಹಲವಾರು ವರ್ಷನ್ ನಲ್ಲಿ ವಾರಕ್ಕೊಂದು ಸರ್ತಿಯಾದ್ರು ಮ್ಯಾಗಿ ಮಾಡಿಕೊಂಡು ನಾವು ಮೂರು ಜನ ಮಕ್ಕಳು ತಿನ್ನುತ್ತಿದ್ದೆವು. ಒಬ್ಬ ತಮ್ಮನಿಗೆ ಅದು ಇಷ್ಟ ಆಗ್ತಿರಲಿಲ್ಲ. ಚೆನ್ನಾಗಿರುತ್ತಿತ್ತು ನಾನು ಮಾಡಿದ್ದು. ಅಪ್ಪ ಅಮ್ಮ ಮ್ಯಾಗಿ ಸುದ್ದಿಗೆ ಬರಲಿಲ್ಲ.
ಮದುವೆಯಾದ ಮೇಲೆ ಶ್ರೀಕಾಂತ ಬಳಿ ಯಾವುದೋ ಮಾತಿಗೆ ಮ್ಯಾಗಿ ಮಾತು ಎತ್ತಿದಾಗ ಛೀ, chiken feed..ಅದೇನು ತಿನ್ನೋದು ಅಂದಿದ್ದರಿಂದ ನಾನು ಕೊಪ್ಪದಲ್ಲಿ ನಮ್ಮದೇ ಬಾಡಿಗೆ ಮನೆಗೆ ಬಂದ ಮೇಲೆ ಅದನ್ನು ತಯಾರಿಸುತ್ತಿರಲಿಲ್ಲ. ಆದರೆ ತೀರ್ಥಹಳ್ಳಿಯಲ್ಲಿದ್ದಾಗ ಶ್ರೀಕಾಂತ ಅಕ್ಕನ ಮನೆಗೆ ಮಾವನವರ ಜತೆ ಪ್ರತೀ ಭಾನುವಾರ ಸಂಜೆ ಹೋಗುತ್ತಿದ್ದೆ. ಶ್ರೀಕಾಂತ ಅಕ್ಕನ ಮನೆಯಲ್ಲಿ ಟಿ.ವಿ ಯಿತ್ತು ಹಾಗಾಗಿ ಪ್ರತೀ ಭಾನುವಾರ ನನ್ನ ಹಾಗೂ ಮಾವನವರ ಸವಾರಿ ಅವರ ಮನೆಗೆ. ಮಾವನವರೋ ಉದ್ದಕ್ಕೆ, ನಾನು ಸಣಕಲು ಗಿಡ್ಡ ಪ್ರಾಣಿ. ನಾಚಿಕೊಂಡು ಕಣ್ಣು ಕೆಳಗಡೆ ರಸ್ತೆ ನೋಡ್ತಾ ,ರಾಜಠೀವಿಯಿಂದ ಸಾಗುತ್ತಿತ್ತು ನಮ್ಮ ಮೆರವಣಿಗೆ.ಮಾವನವರಿಗೆ ರಸ್ತೆ ಮಧ್ಯದಲ್ಲಿ ನಡೆಯುವ ಸ್ವಭಾವ. ದೊಡ್ಡ ವಾಹನಗಳೇನಾದರೂ ಬಂದರೆ ನಾನೇ ಎಷ್ಟೋ ಸಲ ಅವರನ್ನು ದರದರನೆ ಎಳೆದು ರಸ್ತೆ ಪಕ್ಕಕ್ಕೆ ತರುತ್ತಿದ್ದೆ. ಅನ್ನಕ್ಕನ ಮನೆ ತಲುಪಿದ ಮೇಲೆ ಮಾವ ಫಿಲ್ಮ್ ನೋಡುವುದರಲ್ಲಿ ಮಗ್ನರಾದರೆ, ನಾನು ನನ್ನ ಪುಟ್ಟ ಸೊಸೆಯಂದಿರಿಗೆ ಮುಂಬಯಿನ ತಿನಿಸುಗಳನ್ನು ಮಾಡಿಕೊಡುತ್ತಿದ್ದೆ- ಪಾನಿಪೂರಿ, vegetable ಕೂರ್ಮ, ಐಸ್ ಕ್ರೀಮ್ (ಅವರ ಮನೆಯಲ್ಲಿ ಫ್ರೀಜ್ ಕೂಡ ಇತ್ತು),ರಾಜಮಾ ಮಸಾಲ, ಮ್ಯಾಗಿ ಇತ್ಯಾದಿ. ಮ್ಯಾಗಿ ಮಾಡುತ್ತಿದ್ದುದ್ದೆ ಹೆಚ್ಚು, ’ಮಾಲತೆಕ್ಕ ನೀನು ಮಾಡಿದ ಮ್ಯಾಗಿ ಚೆನ್ನಾಗಿರುತ್ತೆ, ಅಪ್ಪನೂ ತಿನ್ನುತ್ತಾರೆ’ ಅಂತ ಮಾಡಿಸಿಕೊಳ್ಳುತ್ತಿದ್ದರು.
ಉಳಿದಂತೆ ನಾನು ನನ್ನ ಪದವಿ ಪರೀಕ್ಷೆಗೆ ಮುಂಬಯಿಗೆ ಹೋದಾಗಲೆಲ್ಲ, ಮ್ಯಾಗಿ ಮಾಡುವ ಕೆಲಸ ನನ್ನದೆ. ಮಹಾ ಸಂಭ್ರಮ ಆ ದಿನ. ಸ್ಟೈಲ್ ಆಗಿ ನೀರುಳ್ಳಿ ಕಟ್ ಮಾಡಿ, ಫ್ರೀsssಜ್ ಮಾಡಿದ ಬಟಾಣಿ ನೀರಿಗೆ ಹಾಕಿ, ಒಂದು ಕಡೆ ಗ್ಯಾಸ್ ನಲ್ಲಿ ನೀರು ಬಿಸಿ ಮಾಡಲು ಇಟ್ಟು, ಕ್ಯಾರಟ್, ಬೀನ್ಸ್, ದೊಣ್ ಮೆಣಸಿನಕಾಯಿ,ಕ್ಯಾಬೇಜ್, ಟೋಮ್ಯಾಟೋ ಸಪೂರಕ್ಕೆ ಕಟ್ ಮಾಡಿ ಇಡುತ್ತಿದೆ.ಅರ್ಧ ಟೀ ಸ್ಪೂನ್ ಬೆಣ್ಣೆಯಲ್ಲಿ ನೀರುಳ್ಳಿ ಕೆಂಪಗೆ ಹುರಿದು, ಉಳಿದ ತರಕಾರಿ ಹಾಕಿ, ಚಿಟಿಕೆ ಸಕ್ಕರೆ, ಗರಂ ಮಸಾಲೆ ಪುಡಿ ಬೆರೆಸಿ, ಆ ಮೇಲೆ tomato ಹಾಕಿ ಹುರಿದು, ಕುದಿಯುವ ನೀರು ಹಾಕುತ್ತಿದೆ. ಮ್ಯಾಗಿ ಪ್ಯಾಕ್ ನಲ್ಲಿರುವ ಮಸಾಲಾ ಪೌಡರ್ ಹಾಕಿ ಎರಡು ನಿಮಿಶ ಕೈ ಯಾಡಿಸಿ, ನೂಡಲ್ಸ್ ಸೇರಿಸುತ್ತಿದೆ. ಎರಡು ನಿಮಿಶ ಮುಚ್ಚಿಟ್ಟು, ಬಿಸಿ ಬಿಸಿ ಮ್ಯಾಗಿಯ ಬಾಣಲೆ ಟೇಬಲ್ ಮೇಲಿಟ್ಟು ನಾವು ಅದರ ಸುತ್ತಲೂ ಪವಡಿಸಿ, ಮ್ಯಾಗಿ ತಿನ್ನಲೆಂದೇ ಖರೀದಿಸಿದ ಮುಳ್ಳು ಚಮಚೆ ಉಪಯೋಗಿಸಿ..ತುಂಬ ಎಂಜಾಯ್ ಮಾಡುತ್ತಿದ್ದೆವು ಮಾಲತಿಯ 20 ಮಿನಿಟ್ಸ್ ಮ್ಯಾಗಿ ನೂಡಲ್ಸ್
ಉಜಿರೆಯಲ್ಲಿದ್ದಾಗ- ಬಹುಶ: ಮಾಲವಿಕ ಮೊದಲನೇ ಕ್ಲಾಸ್ ನಲ್ಲಿ ಓದುವಾಗ ಮ್ಯಾಗಿ ಮಾಡಲು ಶುರು ಮಾಡಿದ್ದೆ. ಸಂಜೆ ಹಸಿದುಕೊಂಡು ಬಂದಾಗ ಒಂದು ಸಲ ಮ್ಯಾಗಿ ಮಾಡಿದ್ದೆ. ಅವಳಿಗದು ಇಷ್ಟವಾಗಿದ್ದರಿಂದ ನಾನು ಆಗಾಗ್ಗ ಮ್ಯಾಗಿ ಮಾಡಲು ಶುರು ಮಾಡಿದೆ. ಶ್ರೀಕಾಂತ ಮೊದ ಮೊದಲು ಮೂಗು ಸಿಂಡರಿಸುತ್ತಿದ್ದರು- chicken feed ಜತೆ junk food ಪದದ ಪ್ರಯೋಗ ಕೂಡ ಮಾಡುತ್ತಿದ್ದರು. ಆದರೆ ನಾನು ಹಾಕಿರುವ ತರಕಾರಿಗಳ ಬಗ್ಗೆ ವಿವರಣೆ ಕೊಡುತ್ತಿದ್ದೆ. ನಾವು ಮ್ಯಾಗಿ ತಿನ್ನುವಾಗ ತುಂಬ sound effects ಮಾಡುತ್ತಿದ್ದೆವು..ಮ್ಮ್ಮ್ಮ್ಮ್ಮ್ ಸೂಪರ್, ಟೇಸ್ಟಿ , ಹೆವನ್ಲೀ (heavenly)...ಅಂತೆಲ್ಲ ಕಣ್ಣು ಮುಚ್ಚಿ ತುಂಬ ಆಕ್ಟಿಂಗ್ ಮಾಡುತ್ತಿದ್ದೆವು. ಶ್ರೀಕಾಂತ ಗೆ ಕರೀತಿರಲಿಲ್ಲ. ಒಂದು ದಿನ ನಾನೂ ಮಕ್ಕಳು ಮ್ಯಾಗಿ ತಿನ್ನುವಾಗ ಅವರು ಒಂದು ಪ್ಲೇಟ್ ಹಿಡಿದುಕೊಂಡು,ಒಳ್ಳೆ ಪರಿಮಳ ಬರ್ತಾ ಇದೆ ಅಂತ ಹೇಳಿ ಸುಮ್ಮನೆ ನಮ್ಮ ಜತೆ ಕೂತು ಮ್ಯಾಗಿ ತಿಂದ್ರು....:-) ಅದಾದ ನಂತರ ನಾವು ಟೂರ್ ಟ್ರಿಪ್ ಅಂತೆಲ್ಲ ಹೋಗಿ ಬಂದ ನಂತರ ರಾತ್ರಿ ಅದೇ ನಮ್ಮ ಊಟ ಆಗಿರುತ್ತಿತ್ತು. ಅಷ್ಟೆ ಅಲ್ಲ ನಮಗೆ ಯಲ್ಲಿಗಾರ ಮತ್ತು ಅವರ ಕುಟುಂಬದ ಪರಿಚಯ ಆಗಿ ಪ್ರತೀ ವಾರ್ಯಾಂತದಲ್ಲಿ ಬೈಕ್ ಮೇಲೆ ಎಲ್ಲಾದರೂ ಹೋಗಿ, ರಾತ್ರಿ ನಾನು ’ಮ್ಯಾಗಿ ಮಾಡ್ತೇನೆ ತಿಂದು ಹೋಗಿ’ ಅಂತ ಅವರಿಗೂ ಮ್ಯಾಗಿಯ ಫ್ಯಾನ್ ಮಾಡಿ ಬಿಟ್ಟೆ. ತರಹಾವರಿ ಬಗೆಯ ಮ್ಯಾಗಿ ಮಾಡುತ್ತಿದ್ದೆನಾದ್ದರಿಂದ ಅದೂ ಯಾವತ್ತೂ ಬೋರ್ ಹೊಡಿಸಲಿಲ್ಲ.
ಈಗ ತಂಗಿ ಯು ಎಸ್ ನಲ್ಲಿರೋದು, ಅವಳು ಇಲ್ಲಿ ಬಂದಾಗಲೆಲ್ಲ ಒಂದು ದಿನ ನಾನು ಮಾಡುವ ಮ್ಯಾಗಿಯ ಸಂಭ್ರಮ,ಅವಳ ಪುಟಾಣಿ ಮಕ್ಕಳಿಗೆ ನಾನು ಮಾಡಿದ ಮ್ಯಾಗಿ ಇಷ್ಟ ಅಂತೆ. ಉಳಿದ ದಿನ ಮಾಲವಿಕ, ನಿಹಾರಿಕ ಅವಳ ಮಕ್ಕಳಿಗೆ ಮಾಡಿಕೊಡುತ್ತಾರೆ, ಆದರೆ ನಾನು ಮಾಡುವ ಮ್ಯಾಗಿ special ಅದರಲ್ಲಿ ದೊಡ್ಡ ಟೇಬಲ್ ಚಮಚ ಪ್ರೀತಿ ಕೂಡ ತುಂಬಿರುತ್ತೆ.
ಮಾಲವಿಕ ಅಂತೂ ಒಂದು ಹೆಜ್ಜೆ ಮುಂದೆ, ಮೈಕ್ರೋವೇವ್ ನಲ್ಲಿ ಎರಡೆ ನಿಮಿಷದಲ್ಲಿ ಮ್ಯಾಗಿ ಮಾಡಿಕೊಂಡು ತಿನ್ನುತ್ತಾಳೆ. ಆಕಸ್ಮಾತ ಬೆಳಿಗ್ಗೆ ಅವಳಿಗೆ ಲೇಟ್ ಆದ್ರೆ, ಮನೆಯಿಂದ ಒಂದು ಪ್ಯಾಕೆಟ್ ಮ್ಯಾಗಿ ಎತ್ತುಕೊಂಡು (ಮ್ಯಾಗಿಯ ಸ್ಟಾಕ್ (stock) ಯಾವತ್ತೂ ಇರತ್ತೆ ಮನೆಯಲ್ಲಿ) ಹೋಗಿ ಅವಳು ಕೆಲಸ ಮಾಡುವಲ್ಲಿ ಮೈಕ್ರೋ ವೇವ್ ಇದೆ ಯಾದ್ದರಿಂದ ಅಲ್ಲೇ ಮಾಡಿಕೊಂಡು, ಅವಳ ಸಹೋದ್ಯೋಗಿಗಳ ಜತೆ ಶೇರ್ ಮಾಡಿಕೊಂಡು ತಿನ್ನುತ್ತಾಳೆ.
ಧನ್ಯವಾದಗಳು ಮ್ಯಾಗಿ.
ನನ್ನ ಆತ್ಮೀಯ ಮಿತ್ರರೊಬ್ಬರು ಒಂದು ಸಲ ಫೋನ್ ಮಾಡಿದಾಗ ನಾವು ಮ್ಯಾಗಿ ತಿನ್ನುತ್ತಿದ್ದೆವು. ಅವರು "ಏನು ಮಾಡ್ತಾ ಇದ್ದೀರಾ’ ಅಂತ ಕೇಳಿದಾಗ , ನಾನು ’ ಜಂಕ್ ಫುಡ್ ಕಬಳಿಸ್ತಾ ಇದ್ದೇವೆ’ ಅಂದಿದ್ದೆ..ಆಗ ಅವರು ’ಜಿಂಕೆ ಮರೀನಾ’ ಹಾಡನ್ನ್ನು ನಮಗೋಸ್ಕರ ’ಜಂಕಿ ಮರೀನಾ’ ಅಂತ ಬದಲಾಯಿಸಿ ಹಾಡಿದ್ದರು)
:-)
Picture of Maggie packet from the net.
Picture of Maggie packet from the net.

6 comments:
Wonder what's in the Maggi masala that it tastes so good. My daughter is allowed to pick just one packet of Maggi every month when we go for grocery shopping :-)
Radhika:
May be it has to do with the hype of the advertising..also the ease of cooking...fast to cook as their catch phrase says...how abt u?? nimge isTa aagillvaa?
but i received two mails saying its a life saving food...(one of them is a journalist)
:-)
ms
ಮ್ಯಾಗಿ ನನ್ನ ಮಗನಿಗೆ ಇಷ್ಟ ಆಗಾಗ ಮಾಡುತ್ತೇನೆ. ನೀವು ಮಾಡಿರುವ ರೀತಿಯೇ ತರಕಾರಿ ಎಲ್ಲಾ ಹಾಕಿ ಮಾಡುತ್ತಲಿರುತ್ತೇನೆ.. ಪ್ರೀತಿಯನ್ನೂ ಕೂಡಾ:)
:-) good one Suguna!!
ms
Malti Akka, we'll definitely come there to gobble those tasteful Maggy..:)) unfortunately here I didnt get that typical Indian style maggy, stll exploring!!
appetizing narration!
-Shee Kar
Post a Comment