March 22, 2017

ನೀರು ಉಳಿತಾಯ

ಮಕ್ಕಳು ಚಿಕ್ಕವರಿದ್ದಾಗ ಅವರು ನನಗೆ ಕಾಟ ಕೊಟ್ಟಿದ್ದಕ್ಕಿಂತ ನಾನೇ ಅವರಿಗೆ ಹೆಚ್ಚು ಕೀಟಲೆ ಗಳನ್ನೂ ಮಾಡಿದ್ದಿದೆ. ಅದರಲ್ಲಿ ಒಂದನ್ನು ಶೇರ್ ಮಾಡುತ್ತೇನೆ.
ಶನಿವಾರ ಅವರಿಗೆ ಬೆಳಿಗ್ಗೆ ಮಾತ್ರ ಶಾಲೆ ಇರುತ್ತಿತ್ತು. ಅರ್ಧ ದಿನ . ಹಾಗಾಗಿ ಮಧ್ಯಾನ್ಹ ಅವರಿಗೆ ಇಷ್ಟವಾದ ಮೂರೂ ನಾಲ್ಕು ಅಡಿಗೆಗಳನ್ನು ಮಾಡುತ್ತಿದ್ದೆ . ತುಂಬಾ ಚಿಕ್ಕವರಾದ್ದರಿಂದ ಹಾಗು ಮುಖ್ಯ ರಸ್ತೆ ದಾಟಬೇಕಾದ್ದರಿಂದ ನಾನು ಅವರನ್ನು ಕರೆದು ತರಲು ಹೋಗುತ್ತಿದ್ದೆ. ಬೆಳಿಗ್ಗೆ ಶ್ರೀಕಾಂತ ಆಫಿಸ್ ಗೆ ಹೋಗ್ತಾ ಸ್ಕೂಟರ್ ನಲ್ಲಿ ಡ್ರಾಪ್ ಕೊಡುತ್ತಿದ್ದರು. ವಾಪಸ್ ಕರೆದುಕೊಂಡು ಬರುವುದು ನನ್ನ ಕೆಲಸ. ಉಳಿದ ದಿನ ಮಧ್ಯಾನ್ಹಕ್ಕೆ ಡಬ್ಬಿ.
ಆ ಒಂದು ದಿನ ಶನಿವಾರ ಹಾಗೆ... ಅವರಿಗೆ ಇಷ್ಟವಾದ ಅಡಿಗೆಗಳನ್ನು ಮಾಡಿ ಎಲ್ಲ ಡೈನಿಂಗ್ ಹಾಲ್ ನ ನೆಲದ ಮೇಲೆ ಜೋಡಿಸಿಟ್ಟಿದ್ದೆ. ಅವರು ಕೈ ಕಾಲು ತೊಳೆದು ಯುನಿಫಾರ್ಮ್ ಬದಲಿಸಿ ಬಂದ್ರು. ನಾನುತಲೆ ಮೇಲೆ ಕೈ ಇಟ್ಟು , 'ಛೆ ಎಂಥಾ ಕೆಲಸ ಆಗೋಯ್ತು. ಅನ್ನ ಮಾಡಲಿಕ್ಕೆ ಮರೆತು ಹೋಯ್ತು ಕಣೆ ಅಕ್ಕ' ಅಂದೆ. ವಾಹ್ ನನ್ನ ಆಕ್ಟಿಂಗ್ ನೋಡಬೇಕಿತ್ತು , ಯಾವ ಆಸ್ಕರ್ ಗು ಕಡಿಮೆ ಇರಲಿಲ್ಲ . :-) ಅಕ್ಕ ಮೊದಲು ಹಣೆ ಚಚ್ಚಿಕೊಂಡಳು , ಆಮೇಲೆ  ನನ್ನ ಕಡೆ ಕರುಣೆಯಿಂದ ನೋಡಿ, ಇರಲಿ ಬಿಡು , ನಿನ್ನೆ ತಂದ ಅವಲಕ್ಕಿ ಇದೆಯಲ್ಲ? ಅದನ್ನು ಸ್ವಲ್ಪ ನೀರಲ್ಲಿ ಅದ್ದಿ ಕೊಡು , ಅನ್ನದ ಬದಲಿಗೆ ಅದನ್ನೇ ಸಾರಿಗೆ ಹಾಕಿ ತಿನ್ನುವ ಅಂದ್ಲು. ನಾನು ನಕ್ಕು ಅವಳ ವಿಚಾರಕ್ಕೆ ತಲೆದೂಗಿ, ಅಡಿಗೆ ಮನೆಗೆ ಹೋಗಿ 'ಟಾಡಾssss ಅಂತ ಅನ್ನದ ಪಾತ್ರೆ ತಂದಿಟ್ಟೆ. ಅವಳು 'ಹಸಿವೆಯಿಂದ ಹಾಗು ಬಿಸಿಲಲ್ಲಿ ಬಂದಿದ್ದರಿಂದ ಕೆಂಪು ಕೆಂಪಾಗಿದ್ಲು. 'ಛೀ ಕಳ್ಳಿ ' ಅಂದ್ಲು ನಗುತ್ತ. ನನಗೆ ಎಷ್ಟು ಮುದ್ದು ಬಂತಂದ್ರೆ. ಇಬ್ಬರಿಗೂ ಇವತ್ತು ನಾನು  ಕೈತುತ್ತು ತಿನ್ನಿಸುತ್ತೇನೆ. ಟಿ ವಿ ಯಲ್ಲಿ ನಿಮ್ಮ ಇಷ್ಟದ ಕಾರ್ಟುನ್ ಷೋ ಹಾಕಿ ಅಂದೆ. ನಿಹಾ ಮಾತ್ರ ಯಾವತ್ತಿನ ಹಾಗೆ ನಗು ಮುಖ. ಹಾಗಾಗಿ ಪ್ರತಿ ಶನಿವಾರ ಮಧ್ಯಾಹ್ನ ಹೀಗೆ ನಾನು ಒಂದು ತಟ್ಟೆಯಲ್ಲಿ ಬಡಿಸಿ ಇಬ್ಬರಿಗೂ ಸ್ಪೂನ್ ninda ತಿನ್ನಿಸೋದು. ಬೆಂಗಳೂರಿಗೆ ಬಂದ ಮೇಲೆ ಇದು ನಾನು ಕೆಲ್ಸದಿಂದ ಬಂದ ಮೇಲೆ ,( ಆಗ ಅವರ ಶಾಲೆಯ ರಿಪೇರಿ ಅಂತ ಬೆಳಗ್ಗಿನ ಒಂದು ಹೊತ್ತು ಮಾತ್ರ ಕ್ಲಾಸ್ ಇರುತ್ತಿತ್ತು. ಮಧ್ಯಾಹ್ನ ಅವರೇ ಬೀಗದ ಕೈ ಬಳ್ಸಿ ಮನೆಗೆ ಬಂದ ಮೇಲೆ ನನಗೆ ಆಫಿಸ್ ಗೆ ಫೋನ್ ಮಾಡೋದು ಕಡ್ಡಾಯ .) ಕೆಲವೊಮ್ಮೆ ರಾತ್ರಿ ನಾವು ಮನೆ ತಲುಪುವಾಗ ಅವರು ನಿದ್ರೆ ಮಾಡಿರುತ್ತಿದ್ದರು. ನನಗೆ ತುಂಬಾ guilt ಕಾಡುತ್ತಿತ್ತು. ಹಾಗಾಗಿ ಬೇಗ ಮನೆಗೆ ಬಂದರೆ ರಾತ್ರಿ ಅವರಿಗೆ ಕೈತುತ್ತು.
ಮೊನ್ನೆ ಇದನ್ನೆಲ್ಲಾ ನೆನಪಿಸಿ ದಾಗ ಅವರು 'ಅಮ್ಮ ಈಗಲೂ ಹಾಗೆ ಮಾಡು' ಅಂದ್ರು. ನಾನು, 'ನಾಚಿಕೆಯಾಗಲ್ಲವೇನೆ ' ಅಂದ್ರೆ, ಅದರಲ್ಲಿ ನಾಚಿಕೆ ಎಂತದ್ದು? ನೀರು ಎಷ್ಟು ಉಳಿತಾಯ ಆಗುತ್ತೆ? ಅಷ್ಟು ತಟ್ಟೆ ಮತ್ತು ನಾವು ಕೈ ತೊಳೆಯುವ ನೀರು ಉಳಿತಾಯ ಆಗುತ್ತೆ ಅಲ್ಲವಾ?
ಇದೆಲ್ಲ ಯಾಕೆ ನೆನಪಾಯ್ತೆನೆಂದರೆ ಪ್ರಜಾವಾಣಿ ಪತ್ರಿಕೆಯವರು 'ನೀವು ಮಾಡುತ್ತಿರುವ ನೀರು ಉಳಿತಾಯದ ಮಾರ್ಗ ' ಬಗ್ಗೆ ಬರೆದು ಕಳಿಸಿ ಅನ್ನುವ ಅಂಕಣ ಇವತ್ತಿನಿಂದ ಶುರು ಮಾಡಿದ್ದಾರೆ. :-) 

March 8, 2017

ಮಹಿಳಾ ದಿನಾಚರಣೆ

ಅಲ್ಲೊಂದು ಸಂಭ್ರಮ . ಮಹಿಳಾ ದಿನಾಚರಣೆಯಂದು ಆಕೆಗೆ ಉನ್ನತ ಹುದ್ದೆಯ ಸ್ವೀಕಾರ ಸಮಾರಂಭ. ಅತಿ ಕಿರಿ ವಯಸ್ಸಿಗೆ ಈ ಹುದ್ದೆ ಏರಿದ್ದ ಅವಳಿಗೆ ಊರಿನ ಗಣ್ಯರಿಂದ ಅಭಿನಂದನಾ ಕಾರ್ಯಕ್ರಮ, ತಳಿರು ತೋರಣ ಹೂವು ಗಳಿಂದ ಅಲಂಕೃತ ಕಛೆರಿ . ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ಆಚೀಚೆ ಓಡಾಡುವ ಆಕೆಯ ಸಹೋದ್ಯೋಗಿಗಳು. 
ಕಾರ್ಯಕ್ರಮ ಶುರು ಆಯಿತು, ಆಕೆಯನ್ನು ಹಲವಾರು ಜನ ಹೊಗಳಿದರು. ಕೊನೆಗೆ ಗಣ್ಯರಿಂದ ಪ್ರಶಸ್ತಿ ಪ್ರಧಾನ ಹಾಗು ಉನ್ನತ ಹುದ್ದೆಯ ಸ್ವೀಕಾರ ಕಾರ್ಯಕ್ರಮ. ಅದಕ್ಕಿಂತ ಮುಂಚೆ ಆಕೆಗೆ ನಾಲ್ಕು ಮಾತಾಡುವ ಅವಕಾಶ ಕೊಟ್ಟರು. 
ಆಕೆ, " ಈ ನನ್ನ ಎಲ್ಲ ಹೆಗ್ಗಳಿಕೆಗೆ ಕಾರಣ ನನ್ನ ಮನೆಯವರ ದೊಡ್ಡಮ್ಮ. ಅವರಿಗೆ ಈ ಪ್ರಶಸ್ತಿ ಕೊಡಲು ನಾನು ಈಚ್ಚಿಸುತ್ತೇನೆ. ನಿಜವಾಗಿಯೂ ಇವತ್ತು ಈ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ ಇವತ್ತಿನ ಬೆಳಗ್ಗಿನ ಜಾವ ಅವರು ಆರೋಗ್ಯ ಕೈಕೊಟ್ಟು ಅವರು ಆಸ್ಪತ್ರೆ ಸೇರಬೇಕಾಗಿ ಬಂದಿದೆ. ನಿಮಗೆ ಇನ್ನೊಂದು ಆಘಾತಕರ ಸುದ್ದಿಯೂಯನ್ನು ಹೇಳಲು ಬಯಸುತ್ತೇನೆ. ನಾನು ಈ ಹುದ್ದೆಯನ್ನು ಸ್ವೀಕರಿಸುವುದಿಲ್ಲ. ದೊಡ್ಡಮಮನಿಗೆ ಈಗ ಮಲಗಿದ್ದಲ್ಲೇ ಎಲ್ಲ ಉಪಚಾರ ಆಗಬೇಕಿದೆ. ಹೌದು ನಾನು ಕೆಲಸದವರನ್ನು ಇಟ್ಟುಕೊಂಡು ಅವರ ಅರೋಗ್ಯ ನೋಡಿಕೊಳ್ಳಬಹುದು. ಆದರೆ ನನ್ನ ಪ್ರತಿಯೊಂದು ಔದ್ಯೋಕಿಕ ಪ್ರಗತಿಯಲ್ಲೂ ಅವರದ್ದೇ ಪಾಲು. ಮಕ್ಕಳಿಗೆ , ಮನೆಯವರಿಗೆ ಹುಷಾರು ತಪ್ಪಿದ್ದಾಗಲೆಲ್ಲ ಅವರೇ ನೋಡಿ ಕೊಂಡು ನನ್ನ ಜವಾಬ್ದಾರಿಗಳನ್ನೆಲ್ಲಾ , ನಾನು ಮನೆಯ ಕಡೆ ಅಷ್ಟೊಂದು ಲಕ್ಶ್ಯ ಕೊಡದ ಹಾಗೆ ಮಾಡಿ  ನನ್ನನ್ನು ಈ ಮಟ್ಟಕ್ಕೆ ಏರಲು ಸಹಕರಿಸಿದ್ದಾರೆ. ಹಾಗೆಯೇ ನನ್ನ ಮಕ್ಕಳೊಂದಿಗೆ ನಾನು ಹೆಚ್ಚು ಸಮಯ ಕಳೆದಿಲ್ಲ ಅವರ ಬಾಲ್ಯವನ್ನು ಎಂಜಾಯ್ ಮಾಡಿಲ್ಲ. ಇನ್ನು ಆರು ತಿಂಗಳಿಗೆ ನಾನು ಅಜ್ಜಿಯಾಗಲಿದ್ದೇನೆ. ಆ ಮಕ್ಕಳ ದೇಖರೇಖಿಯಲ್ಲಿ ನನ್ನನ್ನು ನಾನು ತೊಡಗಿಸಕೊಳ್ಳಬೇಕೆಂದು ಈ ನಿರ್ಧಾರ ಅಂದಾಗ ಇಡೀ ಸಭಾಂಗಣ ಎದ್ದು ನಿಂತು ಕರತಾಡನ ಮಾಡಿತು. 


ಇನ್ನೊಂದು ಕತೆ. 
ಆಕೆಯ ಬಗ್ಗೆ ನನಗೆ ಎಲ್ಲಿಲ್ಲದ ಅಭಿಮಾನ. ಹಳ್ಳಿಯ ಮೂಲೆಯಿಂದ ದೊಡ್ಡ ಪಟ್ಟಣಕ್ಕೆ ಬಂದು ಸ್ವ೦ತ ಉದ್ದಿಮೆಯನ್ನು ಮಾಡುತ್ತಿದ್ದಳು. ಮದುವೆಯಾಗಿ ಒಂದು ಹೆಣ್ಣು ಮಗಳ ತಾಯಿ. ತುಂಬಾ ಪ್ರೀತಿಸುವ ಗಂಡ ಹಾಗು ಅತ್ತೆ ಮಾವ ನಾದಿನಿಯರು. ಮಗಳು ಚೂಟಿ , ಒಂದನೇ ತರಗತಿಯಲ್ಲಿ ಕಲಿಕೆ. ಆಟ  ಪಾಠ ಸಂಗೀತದಲ್ಲಿ ನಿಪುಣೆ. ಈಗ ಆಕೆ   ಎರಡನೇ ಬಾರಿ ಗರ್ಭಿಣಿ. ಇನ್ನು ಕೆಲವೇ ದಿನದಲ್ಲಿ ಡೆಲಿವರಿ. ನನಗೆ ಫೋನ್. ಅಕ್ಕ ಈ ಬಾರಿ ಗಂಡು ಮಗುವೇ ಆಗುತ್ತಲ್ಲ? ನನ್ನ ಅತ್ತೆ ಮತ್ತು ಗಂಡ ಗಂಡು ಮಗನೆ ಆಗುವುದು ಅಂತ ಡಿಸೈಡ್ ಮಾಡಿದ್ದಾರೆ. ಸಿಕ್ಕ ಸಿಕ್ಕ ದೇವರಲ್ಲಿ ಹರಕೆ ಹೊತ್ತಿದ್ದಾರೆ.ಗಂಡನಂತು ಧರ್ಮಸ್ಥಳ , ಸುಬ್ರಮನ್ಯ, ಅಯ್ಯಪ್ಪ ಸ್ವಾಮ್ಮಿಗಳಿಗೆಲ್ಲ ಹೋಗಿ ಬಂದಾಗಿದೆ.  ಗಂಡು ಮಗ ಆಗದಿದ್ದರೆ ನಾನು ಸೋತ ಹಾಗೆ, ನನ್ನ ಬಗ್ಗೆ, ನನ್ನ ಉದ್ಯಮದ ಬಗ್ಗೆ ಅವರಿಗೆ ರೆಸ್ಪೆಕ್ಟ್ ಇರಲ್ಲ. ಪ್ಲೀಸ್ ಅಕ್ಕ ಗಂಡು ಮಗು ಆಗುತ್ತಲ್ಲ ಅಂತ ಕೇಳಿದ್ದು ಮಾತ್ರವಲ್ಲ ಎರಡು ಮೂರೂ ಬಾರಿ ಪ್ರಜ್ಞೆ ತಪ್ಪಿ ಆಸ್ಪೆತ್ರೆಗೆ ದಾಖಲಾದಳು. ಟೆನ್ಶನ್ ನಿಂದ  ಹುಡುಗಿ ಕಂಗೆಟ್ಟು ಕಣ್ಣುಗಳ  ಕೆಳಗೆ ಕಪ್ಪು ಗೆರೆ , ಸರಿ ಊಟ ತಿಂಡಿ ಮಾಡದೆ ಹದಗೆಟ್ಟಿದೆ ಆರೋಗ್ಯ. ಅಂತೂ ಇಂತು ಹೆರಿಗೆಯಾಗಿ ಗಂಡು ಮಗ. ಗಂಡ ಅತ್ತೆಗೆ ಸಂತೋಷ. 
ಈಗ ಮೊದಲಿಗೆ ಹುಟ್ಟಿದ ಜಾಣೆ ಹೆಣ್ಣು ಮಗಳನ್ನು ಚೆನ್ನಾಗಿ ನೋಡುತ್ತಾನೋ ಇಲ್ವೋ ನಿನ್ನ ಗಂಡ ಅಂತ ಕೇಳಿದಾಗ 'ಇಲ್ಲ ಗಂಡು ಮಗು ಹುಟ್ಟಿದ ಕೂಡಲೇ, ಅದರ ತಲೆ ಮೇಲೆ ಕೈಯಿಟ್ಟು ಅವರ ಬಳಿ ಮಗಳನ್ನು ಮಗನನ್ನು ಸಮಾನವಾಗಿ ಪ್ರೀತಿಸುವಂತೆ ಪ್ರಮಾಣ ಮಾಡಿಸಿಕೊಂಡಿದ್ದೇನೆ ಅಂತ ಹೇಳಿದಾಗ ನನಗೆ ಅಳ  ಬೇಕೋ ನಗಬೇಕೋ ಅರ್ಥ ಆಗಲಿಲ್ಲ... ಆಕೆಗೋ  ಒಂದು ದೊಡ್ಡ ಯುದ್ಧ ಗೆದ್ದು ಬಂದ ನಿಟ್ಟುಸಿರು... ಆಕಸ್ಮಾತ್ ಹೆಣ್ಣು ಮಗು ಹುಟ್ಟಿದ್ದಿದ್ದರೆ??,,,,,

Happy Women's day ಎಲ್ಲರಿಗು 

March 6, 2017

ಹಲಸಿನ ಹಣ್ಣಿನ ಆಕಾರದ ಕೇಕ್

ನನಗೆ ಬರೆಯಲು ಹಲವು ಸರಕು ಇದ್ದರು ಬರೆಯಲು ಕಂಪ್ಯೂಟರ್ ಕೈಗೆ ಸಿಗುವುದು ಅಪರೂಪವಾಗಿದೆ. ಟ್ಯಾಬ್ ನಲ್ಲಿ ಬರಿ ಬಹುದು ಆದರೆ ಫೋಟೋ ಅಪ್ಲೋಡ್ ಆಗುತ್ತಿಲ್ಲ.
ಅಲ್ಲಿ ತನಕ ಬಿಸ್ಕುಟ್ ಫಾಕ್ಟರಿಯಲ್ಲಿ ತಯಾರಾದ ಈ ಕೇಕ್ ನೋಡ್ತಾ ಇri . ಈ ಹಲಸಿನ ಹಣ್ಣಿನ ಕೇಕ್ ಗೆ ಮಗಳು ಹಲಸಿನ ಹಣ್ಣಿನ ತುಂಡುಗಳನ್ನು ಫಿಲ್ ಮಾಡಿದ್ದಾಳೆ. ಫೇಸ್ ಬುಕ್ ಪೇಜ್ ಗಳಲ್ಲಿ ಇದು ವೈರಲ್ ಆಗಿದೆ. ಫೇಸ್ ಬುಕ್ ಅಕೌಂಟ್ ಇಲ್ಲದವರಿಗೋಸ್ಕರ ಈ ಚಿತ್ರ ಇಲ್ಲಿ ಹಾಕುತ್ತ ಇದ್ದೇನೆ. :-) 
ಇನ್ನೊಮ್ಮೆ ಹೇಳುತ್ತೇನೆ ಬಿಸ್ಕುಟ್ ಫ್ಯಾಕ್ಟರಿ ಯಲ್ಲಿ ತಯಾರಾಗುವ ತಿನಿಸುಗಳಿಗೆ ಮೊಟ್ಟೆ ಬಳಸಲಾಗುವುದಿಲ್ಲ .
https://www.facebook.com/BiscootFactory/

https://www.facebook.com/BiscootFactory/





February 14, 2017

fig & honey cake making & decoration

fig & honey cake making & decoration from #BiscootFactory. click on the link below and do share your experience if you try making them

Simple Fig & Honey whole wheat cake


Kindly visit the Face Book Page and 'like' it. thank you all. 

February 3, 2017

ಪ್ರಯಾಣ - ಪುಸ್ತಕ

ನಾನು ನಿಹಾ ಒಂದು ಸಣ್ಣ ಪ್ರಯಾಣ ಕೈಗೊಂಡಿದ್ದೇವೆ. ಎಲ್ಲಿ ಎತ್ತ ಯಾಕೆ ಇದೆಲ್ಲ ಬಂದ ಮೇಲೆ !! ಪುಸ್ತಕ ವಿಲ್ಲದ ಪ್ರಯಾಣ? ಸಾಧ್ಯವೇ ಇಲ್ಲ . ಆದರೆ ಪ್ರಯಾಣ ಹೊರಡುವಾಗ ಮಾತ್ರ ನಾನು ನನ್ನದೇ ಕಲೆಕ್ಷನ್ ನಲ್ಲರುವ ಪುಸ್ತಕ ತೆಗೆದುಕೊಂಡು ಹೋಗುತ್ತೇನೆ. ಮನೆಯಲ್ಲಿ ನಾನು ಬ್ರಿಟಿಷ್ ಲೈಬ್ರರಿಯಿಂದ ಎರವಲು ತಂದಿರುವ ಪುಸ್ತಕ ಓದುವುದು. ಕೈ ಕಾಲುಗಳಲ್ಲಿ ಶಕ್ತಿ ಇರುವ ತನಕ ನಾನು ಗ್ರಂಥಾಲಯದಿಂದ ತಂದ ಪುಸ್ತಕ ಓದುತ್ತೇನೆ , ತುಂಬಾ ವಯಸ್ಸಾದ ಮೇಲೆ ನನ್ನ ಸ್ವ೦ತದ ಕಲೆಕ್ಷನ್ ನಲ್ಲಿರುವ ಪುಸ್ತಕ. ಯಾಕೆ ಅಂತ ಕೆಳದಿದ್ರೂ ಹೇಳೇ ಬಿಡ್ತೇನೆ. :-) ನನ್ನ ಅಜ್ಜಿಯಂದಿರು ಇಬ್ಬರು ಆರೋಗ್ಯಕರವಾಗಿದ್ದು ೯೦+ ವರ್ಷಗಳು ಜೀವಿಸಿದ್ದಾರೆ. ನಾನು ಹಾಗೆ ಹಲವಾರು ವರ್ಷ ಜೀವಿಸುತ್ತೇನೆ  ಅಂತ ವಿಶ್ವಾಸ ನನ್ನಲ್ಲಿದೆ. 
ನನ್ನ ಅಜ್ಜಿಯ ಕತೆ ಮೊದಲು ಹೇಳ್ತೇನೆ. ಆನಂತರ ಪುಸ್ತಕದ ಬಗ್ಗೆ 
ನನ್ನ ಅಜ್ಜ ಬಡ ಸ್ಕೂಲ್ ಮಾಸ್ತರರಾಗಿದ್ದರು. ಮನೆಯಲ್ಲಿ ಹಲವಾರು ಮಕ್ಕಳು. ಎಲ್ಲರನ್ನು ಚೆನ್ನಾಗಿ ಸಾಕುವಷ್ಟು ಆದಾಯ ಅಜ್ಜನಿಗೆ ಇರಲಿಲ್ಲ. ನಮ್ಮ ಅಜ್ಜಿ ಸ್ವಲ್ಪ ಅನುಕೂಲಸ್ಥ ಮನೆಯವರು. ಮದುವೆ  ಸಮಯದಲ್ಲಿ ಸಾಕಷ್ಟು ಬಂಗಾರದ ಆಭರಣಗಳನ್ನು ಅವರ ತವರು ಮನೆಯಿಂದ ಹಾಕಿದ್ದರು. ಅಜ್ಜನ ಮನೆಯ ಪಕ್ಕದಲ್ಲಿನ ತೋಟ ಮಾರಾಟಕ್ಕಿದ್ದಾಗ ಅಜ್ಜಿ ತಮ್ಮ ಒಡವೆಗಳನ್ನು ಒಬ್ಬ ಲಾಯರ್ ಬಳಿ  ಅಡವಿಟ್ಟು ಆ ಹಣದಿಂದ ೨ ಎಕರೆ ತೋಟ ಕೊಂಡರು. ಮೊದಲಿಗೆ ಅಲ್ಲೊಂದು ಪುಟ್ಟ ಮನೆ ಕಟ್ಟಿದರು. ಆಮೇಲೆ ನಿಧಾನಕ್ಕೆ ೧೦೦ ತೆಂಗಿನ ಸಸಿಗಳನ್ನು ನೆತ್ತರು. ನನಗೆ ೪ ವರ್ಷ ಆದಾಗ ನಾನು ಅಜ್ಜಿ ಬಳಿ ಇರುತ್ತಿದ್ದೆ. ನನಗೆ ಅರ್ಥವಾಗುವ ವಯಸ್ಸಿನಿಂದ ನೋಡ್ತಾ ಬಂದಿದ್ದೇನೆ-  ಅಜ್ಜಿ ತೆಂಗಿನ ಬುಡ ಅಗೆದು ಅದಕ್ಕೆ ಉಪ್ಪು, ಸಾರ ಹಾಕುವುದನ್ನು ನೋಡಿದ್ದೇನೆ. ಬಾವಿಯಿಂದ ನೀರು ಸೇದಿ  ತೆಂಗಿನ ಮರಗಳಿಗೆ ಹಾಕುತ್ತಿದ್ದರು. ಮಧ್ಯಾಹ್ನ ಊಟದ ಬಳಿಕ ಸ್ವಲ್ಪ ವಿಶ್ರಾ೦ತಿ . ಸ೦ಜೆ ಯಾಥಾವತ್ತು ತೋಟದ ಕೆಲಸಗಳೇ. ತೆಂಗಿನ ಮರಗಳ ಮಧ್ಯ ಮಧ್ಯ ಹೆಬ್ಬಲಸು, ನಕ್ಶತ್ರ ಹಣ್ಣು, ದಿವಿ ಹಲಸು, ಮಾವು, ಹಲಸು ಮುಂತಾದ ಮರಗಳು, ಸೌತೆಕಾಯಿ, ತೊಗರಿಕಾಯಿ, ಮೆಣಸಿನ ಕಾಯಿ, ಬಸಳೆ ಮುಂತಾದ ದಿನ ನಿತ್ಯ ಬಳಸುವ ತರಕಾರಿಗಳು, ಅಬ್ಬಲಿಗೆ, ಮಲ್ಲಿಗೆ, ಗೊರಟೆ ಮುಂತಾದ ಹೂಗಳು ಇವನ್ನೆಲ್ಲ ಬೆಳೆಸಿದ್ದರು. ಸಂಜೆ ಹೂವನ್ನು ಚೆಂದ  ಮಾಡಿ ಬಗೆ ಬಗೆಯ ರೀತಿಯಲ್ಲಿ ಪೋಣಿಸುತ್ತಿದ್ದರು. ತುಂಬಾ ಶ್ರಮ ಜೀವಿ. ನಮ್ಮ ತಂದೆ ಸೇರಿದಂತೆ ಅಜ್ಜಿಗೆ ೭ ಜನ ಮಕ್ಕಳು. ನಾನು ಹುಟ್ಟುವ ಮೊದಲೇ ಅಜ್ಜ ತೀರಿಕೊಂಡರು. ಇಬ್ಬರು ಮಗಳಿಗೆ ಮದುವೆ ಮಾಡಿದರು, ಗಂಡು ಮಕ್ಕಳ ವಿದ್ಯಾಭ್ಯಾಸ ಇವೆಲ್ಲ ಅಜ್ಜಿಯ ತೆಂಗಿನಕಾಯಿ ಮಾರಾಟ ಮಾಡಿದ  ಆದಾಯದ  ಮೇಲೆ ನಡೆಯುತ್ತಿತ್ತು.  ಬೆಳಿಗ್ಗೆ ನಾಲ್ಕಕ್ಕೆ ಎದ್ದರೆ ರಾತ್ರಿ ದೀಪ ಹಚ್ಚುವ ತನಕ ಕೆಲಸ. ದೀಪ ಹಚ್ಚಿದ ಮೇಲೆ ಭಜನೆ, ಊಟ ನಂತರ ನಿದ್ರೆ. ರಾತ್ರಿ ಊಟದ ಪಾತ್ರೆ ಬೆಳಿಗ್ಗೆ ಚಿಮಣಿ ದೀಪದಲ್ಲಿ ಮನೆಯ ಹೊರಗಡೆ ತೆ೦ಗಿನ  ಕಟ್ಟೆಯಲ್ಲ್ಲಿ  ತೊಳೆಯುವ ರೂಢಿ. ಆಮೇಲೆ ಬಾವಿಯಿಂದ ನೀರು ಸೇದಿ ಸ್ನಾನದ ತೊಟ್ಟಿಯಲ್ಲಿ ನಿರಿ ತುಂಬಿಸಿ , ಒಲೆಗೆ ಬೆಂಕಿ ಹಾಕಿ...  ಆಮೇಲೆ ಬೆಳಿಗ್ಗೆಗೆ  ಬೇಕಾದ ತಿಂಡಿಗೆ ಚಟ್ನಿ, ಅಡಿಗೆಗೆ ಮಸಾಲೆ ಎಲ್ಲ  ರುಬ್ಬುತ್ತಿದ್ದರು. ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ, ಉಪ್ಪಿನಕಾಯಿ ಕೆಲಸಗಳು. ಯಾವತ್ತೂ ಹುಷಾರಿಲ್ಲದೆ ಮಲಗಿದ್ದೆ ಗೊತ್ತಿಲ್ಲ. ಸಾವು ಕೂಡ ಹಾಗ್ ರಾತ್ರಿ ಮಲಗಿದ್ದವರು ಬೆಳಿಗ್ಗೆ ಇರಲಿಲ್ಲ. ಅಷ್ಟೇ. ನನಗೆ ಅವರ ಚುರುಕುತನ ಬಂದಿಲ್ಲ ಆದರೆ ಆರೋಗ್ಯ ಮಾತ್ರ ಧಂಡಿಯಾಗೆ ಬಳುವಳಿ ಬಂದಿದೆ. :-) ಹಾಗಾಗಿ ಕೈ ಕಾಲು ಸರಿಯಿದ್ದಾಗ ಗ್ರಂಥಾಲಯ ದ  ಪುಸ್ತಕ. ನಂತರ ಹೇಗೂ ನನ್ನ ಸ್ವ೦ತದ ಪುಸ್ತಕ ಆರಾಮಾಗಿ ಓದ ಬಹುದು.

ಮತ್ತೆ ಪ್ರಯಾಣಕ್ಕೆ ಯಾಕೆ ನಾನು ಲೈಬ್ರರಿ ಪುಸ್ತಕ ಕೊಂಡೊಯ್ಯುವುದಿಲ್ಲ ಅಂತ ಹೇಳ್ತೇನೆ..ಕೇಳಿ.. 
ನಮಗೆ ಶಾಲೆಯಲ್ಲಿ ಗ್ರಂಥಾಲಯ ಪಿರಿಯಡ್ ಒಂದು ಇರುತ್ತಿತ್ತು ಶನಿವಾರ ಬೆಳಿಗ್ಗೆ. ತುಂಬಾ ಒಳ್ಳೊಳ್ಳೆಯ ಪತ್ತೇದಾರಿ ಇಂಗ್ಲೀಷ ಪುಸ್ತಕಗಳು- Nancy drew, dana girl, hardy boys, bobsey twins, secret seven, famous five, kelavu science fiction - ಇರುತ್ತಿದ್ದವು. ಆದರೆ ನಮಗೆ sirname  first ರೋಲ್ ಕಾಲ್ ಇರುತ್ತಿತ್ತು. ಹಾಗಾಗಿ ನನ್ನದು ಪೈ ಮಾಲತಿ  ಆಗಿತ್ತು. ಕ್ಲಾಸಲ್ಲಿ ೩೦ ಜನ ಹೆಣ್ಮಕ್ಕಳು ನಾವು. ನನ್ನ ಸರದಿ ಬರುವಾಗ ಎಲ್ಲ ನನಗೆ ಬೇಕಿರುವ ಪುಸ್ತಕಗಳು ಬೇರೆಯವರ ಪಾಲಾಗಿರುತ್ತಿತ್ತು. ಅಷ್ಟೇ ಅಲ್ಲ ಅವರೆಲ್ಲ ನಿಧಾನಕ್ಕೆ ಪುಸ್ತಕ ಆರಿಸಿಕೊಳ್ಳುವಾಗ ನನ್ನ ಸರದಿ ಬರುವಾಗ ಬೆಲ್ ಹೊಡೆಯುವ ಸಮಯ ಕೂಡ ಆಗಿರುತ್ತಿತ್ತು. ಕೈಗೆ ಸಿಕ್ಕ ಪುಸ್ತಕ ತೆಗೊಂಡು ಬರುತ್ತಿದ್ದೆ. ಆದೊಂದು ದಿನ ಹೇಗೋ  ನನಗೆ ನ್ಯಾನ್ಸಿ ಡ್ರೂ  ಪುಸ್ತಕ ಅದು ಹೊಸತು ಸಿಕ್ಕೇ ಬಿಡ್ತು. ಖುಷಿಇಂದ ಬೀಗಿದ್ದೆ ಬೀಗಿದ್ದು. ಇದನ್ನು ನೋಡ್ದ ಕೆಲವು ಸಹಪಾಠಿಗಳು ' ನಿನ್ನ ಓದು ಮುಗಿದ ಮೇಲೆ ನನ್ನ ಜತೆ ಎಕ್ಸ್ಚೇಂಜ್ ಮಾಡು ಅಂದರು. ನಾನು ಸರಿ ಅಂತ ಓದು ಮುಗಿಸಿ ಒಬ್ಬಳಿಗೆ ಕೊಟ್ಟೆ. , ಅವಳು ಓದಿ ನನಗೆ ಹೇಳದೆ ಇನ್ನೊಬ್ಬಳಿಗೆ ಕೊಟ್ಟಳು. ಇದಾಗಿದ್ದು ಹತ್ತನೇ ತರಗತಿಯಲ್ಲಿ. ಕೊನೆಗೆ ಮುಂದಿನ ಲೈಬ್ರರಿ ಪಿರಿಯಡ್ ಬಂದಾಗ ನನ್ನ ಪುಸ್ತಕ ಯಾರು ಎರವಲು ಪಡೆದಿದ್ದು ಅಂತ ಗೊತ್ತಾಗಲೇ ಇಲ್ಲ. ಅಷ್ಟರೊಳಗೆ ನಮಗೆ ೧೦ ಕ್ಲಾಸಿನ ಪರೀಕ್ಷೆಯ ಹಾಳ್ ಟಿಕಟ್ ಕೊಡಲು ಆರಂಭಿಸಿದರು. ನನಗೆ ಮಾತ್ರ ಆಫಿಸ್ ರಮ್ ಗೆ ಕಳುಹಿಸಿದರು. ಅಲ್ಲಿ ಹೆಡ್ ಮಿಸ್ 'ನೀನು ಲೈಬ್ರರಿ ಪುಸ್ತಕ ವಾಪಸ್ ಮಾಡಿಲ್ಲ , ೧೫೦ ರು ಆ ಪುಸ್ತಕದ ಮುಖಬೆಲೆ  ಫೈನ್ ಕಟ್ಟ ಬೇಕು' ಅಂದರು. ನಾನು ಮನೆಗೆ ಬಂದು ಅಮ್ಮನಿಗೆ ಹೀಗಹೀಗೆ ಆಯಿತು ಅಮ್ಮ ಅಂದೆ. ಅಮ್ಮ ಅಪ್ಪನಿಗೆ ಹೇಳಿದರು. ನಾನು ಅಪ್ಪನ ಬಳಿ ಮಾತಾಡುತ್ತಿದ್ದುದ್ದೇ ಕಮ್ಮಿ. ಅಪ್ಪ 'ಪರೀಕ್ಷೆಗೆ ಕೂರೋದೇ ಬೇಡ, ಯಾಕೆ ಲೈಬ್ರರಿಯಿ ಪುಸ್ತಕ ಓದಬೇಕಿತ್ತು  ?' ಅಂತ ಹೇಳಿ ಬಿಟ್ಟರು. ಅಪ್ಪನಿಗೆ ನಾವ್ಯಾರು ಮಕ್ಕಳು ಕಥೆ ಪುಸ್ತಕ ಓದುತ್ತಿದ್ದುದ್ದು ಹಿಡಿಸುತ್ತಿರಲಿಲ್ಲ. ಅಪ್ಪ ಸ್ವತಃ: ತುಂಬಾ ಪುಸ್ತಕ ನಾವೆಲ್ ಗಳನ್ನೂ ಓದುತಿದ್ದರು. ಒಳ್ಳೆಯ ಕಲೆಕ್ಷನ್ ಕೂಡ ಇತ್ತು.   ಆದರೂ...  ನಾನು ತುಂಬಾ ಸಂಕಟ ಪಟ್ಟೆ  , ಏನಪ್ಪಾ ಮಾಡೋದು ಅಂತ.  ಸುಮ್ಮನಾದೆ. ದಿನ ನಿತ್ಯದಂತೆ ಶಾಲೆ ಹೋಗಿ ಬರುತ್ತಿದ್ದೆ, ಫೈನ್ ಬಗ್ಗೆ ಸೊಲ್ಲೆತ್ತುತ್ತಿರಲಿಲ್ಲ. ಕೊನೆಗೆ ಶಾಲೆಯಿಂದ ಅಪ್ಪನಿಗೆ ಲೆಟರ್ ಹೋಗಿದ್ದು ಮಾತ್ರವಲ್ಲ, ಶಾಲೆಯಿಂದ ಒಂದು ದಿನ ಅರ್ಧದಲ್ಲೇ ಮನೆಗೆ ಕಳುಹಿಸಿಬಿಟ್ಟರು.  ಅಪ್ಪ ನಿಗೆ ಕೆಂಡಾಮಂಡಲ ಸಿಟ್ಟು ಬಂದು, ಅಮ್ಮನ ಕೈಗೆ ದುಡ್ದು  ಕೊಟ್ಟು, ಅಮ್ಮ ಅದನ್ನು ನನಗೆ ರವಾನಿಸುವಾಗ ತಲೆಗೆ ನೋವಾಗುವಂತೆ ಮೊಟಕಿದ್ದು ನೆನಪಿಸಿಕೊಂಡರೆ   ಈಗಲೂ ಮೈ ಮೇಲೆ ಗುಳ್ಳೆ ಬರುತ್ತೆ. ಆದರೂ ನನಗೆ ಬೇಜಾರು ಒಂದೇ ವಿಷಯದ್ದು ಯಾವ ಸಹಪಾಠಿಗೆ ನಾನು ಪುಸ್ತಕ ಕೊಟ್ಟಿದ್ದೇನೋ ಅವಳು ಅದನ್ನು ನನಗೆ ಕೊಡಬೇಕಿತ್ತು . ಶಾಲೆಯಲ್ಲೂ ನನಗೆ ಸ್ನೇಹಿತರು ಅಂತ ಯಾರು ಇರಲಿಲ್ಲ, ಯಾರ ಸುದ್ದಿಗೂ ನಾನು ಹೋಗುತ್ತಿರಲಿಲ್ಲ, ಚೆನ್ನಾಗಿ ಸಿಹಿ ಮಾತಾಡಿ ಪುಸ್ತಕ ತೆಗೊಂಡು ವಾಪಸ್ ಕೊಡಲೇ ಇಲ್ಲ ಆ ಮುದ್ದು ಮುಖದ ಚೆಂದದ ಹುಡುಗಿ. 'ನನ್ನಿಂದ ಆ ಪುಸ್ತಕ ಕಳೆದು ಹೋಯ್ತು ' ಅಂತ ಆಕೆ ನಿಜ ಹೇಳಿದ್ದರು ನನಗೆ ಸಾಕಿತ್ತು. ನಾನು ೧೦ ಕ್ಲಾಸ್ ನ ಪರೀಕ್ಷೆ ಬರೆಯುವುದು ಅಷ್ಟು ಮುಖ್ಯ ಅನಿಸಲೇ ಇಲ್ಲ.
ಈಗಲೂ ಎರವಲು ಪಡೆದ ಪುಸ್ತಕ ವಾಪಸ್ ಕೊಡುವ ತನಕ ನನಗೆ ಹಿಂಸೆಯಾಗುತ್ತೆ. 

January 24, 2017

ರಾಮಸ್ವಾಮಿ

ಹಳೆಯ ಪೇಪರ್ ರಾಶಿ ಜಮಾ ಆಗಿತ್ತು. ಸೆಕ್ಯುರಿಟಿಯವರಿಗೆ ಹೇಳಿಟ್ಟಿದ್ದರು  ಇಷ್ಟು ದಿನ ಯಾರು ಬಂದಿರಲಿಲ್ಲ. ಕೊನೆಗೆ ಶ್ರೀಕಾಂತ ನಮ್ಮ ಬಿಲ್ಡಿಂಗ್ ಗೆ ಬರುವ ಮಾಮೂಲು ಪೇಪರ್ ತೆಗೆದುಕೊಂಡುಗುವ  ರದ್ದಿ ಪೇಪರ್ ಅಂಗಡಿಗೆ ಹೋದ್ರೆ ಅದು ಬಂದ್ ಆಗಿ ಹಲವು ಸಮಯ ಆಯ್ತು ಅಂತ ಪಕ್ಕದ ಅಂಗಡಿಯವರು ಹೇಳಿದರು. ಇವತ್ತು ಬಾಲ್ಕನಿಯಲ್ಲಿ ನಿಂತಾಗ 'ಪೇಪರ್' ಅನ್ನುವ ಕೂಗು ಕೇಳಿಸಿ ಸಂತೋಷವಾಯಿತು. ಕಪರ್ಡ್ ತುಂಬಿ, ಟೀಪಾಯ್ ಕೆಳಗಡೆ ತುಂಬಿ, ಸ್ವಲ್ಪ ಬಾಲ್ಕನಿ, ಇನ್ನು ಕೆಲವು ಟೀಪಾಯ್ ಮೇಲು ಹಳೆ ಪೇಪರ್ ರಾರಾಜಿಸುತ್ತಿದ್ದವು. ಕೂಡಲೇ ನಾನು 'ಪೇಪರ್' ಅಂತಾ ಕೂಗಿದೆ  ಆರನೇ ಮಹಡಿಯಿಂದ, ಅದು ನಿರಂತರ ಟ್ರಾಫಿಕ್ ಸದ್ದಿನಲ್ಲಿ ನನ್ನ ಪುಟ್ಟ ದನಿ ಅಲ್ಲಿ ಹೋಗುವುದೋ ಇಲ್ಲವೋ ಅಂತ ಸ್ವಲ್ಪ ಮುಜುಗರ ಆಯ್ತು. ಪುನ: ಪೇಪರ್ ಅಂತ ಕೂಗಿದ್ದು ಮಾತ್ರವಲ್ಲ ಎರಡೂ  ಕೈ ಕೂಡ ಅಷ್ಟುದ್ದ ಕೆಳಗಡೆ ಬಿಟ್ಟು ಸನ್ನೆ ಮಾಡ್ತಾ ಇದ್ದೆ. ಸಧ್ಯ ನನ್ನ ಕೂಚಿಪುಡಿ, ಸರ್ಕಸ್, ಸನ್ನೆಗಳನ್ನು ನೋಡಿ  ಮನೆಯಲ್ಲಿ ಬೆಂಕಿ ತಾಗಿದೆ ಅಂತ ಯಾರಾದರೂ ನೋಡಿ ಭಯಪಡಲಿಲ್ಲ. :-) ಅವನು ನೋಡಿ ಬಿಲ್ಡಿಂಗ್ ಗೆಟ್ ಬಳಿ ನಿಂತಿದ್ದ. ಸೆಕ್ಯುರಿಟಿಯಂವ ಅವನಿಗೆ ಒಳಗೆ ಬರಲು ಬಿಡಲಿಲ್ಲ. ನಾನು ಸನ್ನೆ ಮಾಡಿ ಅಲ್ಲೇ ನಿಲ್ಲಿ ನಾನು ಫೋನ್ ಮಾಡ್ತೇನೆ ಅಂದೆ. ಫೋನ್ ಮಾಡಿದರೆ 'ಈ ನಂಬರ್ ಚಾಲನೆಯಲ್ಲಿಲ್ಲ ' ಅನ್ನುವ ಸಂದೇಶ ಬಂತು, ಕಡೆಗೆ  ಅಕ್ಕನನ್ನು ಕೆಳಗಡೆ ಕಳುಹಿಸಿದೆ. 
ಅಷ್ಟರೊಳಗೆ ಸಂತೆಗೆ  ಹೋದ ಶ್ರೀಕಾಂತ ಕೂಡ ಬಂದಿದ್ದರು. ನಾನು ನೀಟಾಗಿ ಜೋಡಿಸಿಟ್ಟು ದಾರ ಕಟ್ಟಿದ ಪೇಪರ್ ಎಲ್ಲ ಹೊರಗೆ ತರಯುವ ಗಡಿಬಿಡಿಯಲ್ಲಿ ಹೆಂಗೆಂಗೋ ಆಯ್ತು. ಅದನ್ನು ನೀಟಾಗಿ ಜೋಡಿಸ್ತಾ ಇದ್ರು. 
ಶ್ರೀಕಾಂತ : ಏನು ಕನ್ನಡದವರಾ?"
"ಅಲ್ಲ ಸರ್ ತಮಿಳ್ ರವರು" 
"ಏನು ಹೆಸರು" 
"ರಾಮಸ್ವಾಮಿ" 
"ಎಷ್ಟು ಪೇಪರ್ ಗೆ "
"ಹತ್ತು ರೂಪಾಯಿ ಸಾರ್ ಕೆ ಜಿ ಗೆ" 
"ಹನ್ನೊಂದಲ್ಲವಾ?"
"ಇಲಾ ಸಾ 
"ನೀವ್ ಎಷ್ಟಕ್ಕೆ ಮಾರ್ತೀರಿ"?
"೧೦.೫೦ , ಹನ್ನೊಂದು" 
"ದಿನಕ್ಕೆ ಎಷ್ಟು ಸಂಪಾದನೆ ಆಗ್ತದೆ"?
"ಆಗುತ್ತೆ ಸರ್ "
"ಎಷ್ಟು?"
"ಶನಿವಾರ ಭಾನ್ ವಾರ ಸ್ವಲ್ಪ ಜಾಸ್ತಿ ಆಗುತ್ತೆ, ಒಂದು ೫೦೦-೬೦೦"
"ತಿಂಗಳಿಗೆ ಹತ್ತು ಸಾವರ ಆಗತ್ತಾ ?"
"ಹಾ ಹಾ ಇಲ್ಲಾ ಸಾ "
"ಮತ್ತೆ ಊರಿಗೆ ಕಳುಸಿಲಿಕ್ಕೆ ಇಲ್ಲವಾ?"
"ಹೆಂಡತಿ ಮಕ್ಕಳು ಅಲ್ಲೇ ಸಾರ್ "
"ಎಷ್ಟು ಮಕ್ಕಳು?"
"ಎರಡು ಹೆಣ್ಣು ಒಂದು ಗಂಡು" 
"ಹೆಂಡತಿ ಏನ್ ಮಾಡ್ತಾರೆ?"
"ಮಕ್ಕಳು ಇಸ್ಕೂಲ್ ಗೆ ಹೋಗ್ತಾರೆ ಅದಕ್ಕೆ ಹೆಂಡತಿ ಮನೆಯಲ್ಲೇ . ತುಂಬಾ ಸಣ್ಣ ಮಕ್ಕಳು "
"ಎಕೌಂಟ್ ಇದೆಯಾ?"
"ಇಲ್ಲಾ ಸಾ "
"ಯಾಕೆ ಮಾಡಿಸಿಲ್ಲ?"
"ಇಲ್ಲಿ ಇಲ್ಲಾ ಸಾ, ಊರಲ್ಲಿ ಇದೆ". 
"ಮತ್ತೆ, ನಿಮಗಿಲ್ಲಿ ದಿನಕ್ಕೆ ಎಷ್ಟು ಖರ್ಚ್ ಆಗುತ್ತೆ."
" ದಿನಕ್ಕೆ ೧೬೦ ರು ಸಾ "
"೩೦ -೪೦ ಕ್ಕೆ ಲ್ಲ ತಿಂಡಿ ಊಟ ಸಿಗತ್ತೆ , ಆಮೇಲೆ ಒಂದು ಸಲ್ಪ ಚಾ ಕಾಪಿ" 
"ಮತ್ತೆ ಉಳಿಕೊಳ್ಳೋದಿಕ್ಕೆ?"
"ಪೇಪರ್ ಅಂಗಡೀಲೇ ಉಳ್ಕೊಳ್ಳೋದು"
"demonetization ನಿಂದ ಏನಾದ್ರೂ ತೊಂದ್ರೆ ಆಯ್ತಾ?"
"ಇಲ್ಲಾ ಆ ನಮಗೇನು ತೊಂದರೆ ಆಗಿಲ್ಲ "
"ಮತ್ತೆ ಕುಡಿಯೋದು, ಗಿಡಿಯೋದು ಇದೆಯಾ?"
"ಹಾ ಹಾ ಇದೆ ಸಾ. ಇಲ್ಲಿ ಕುಡೀತೀನಿ , ಊರಲೆಲ್ಲಾ ಇಲ್ಲ" 
"ಅದಕ್ಕೆ ತುಂಬಾ ಖರ್ಚ ಆಗಲ್ಲ್ವಾ?"
"ಗಂಗೋತ್ರಿ ದಾಟಿದ್ರೆ ಅಲ್ಲಿ ೬೨ ರು ಗೆ ಸೀಗತ್ತೇ ಸಾ!"
"ಹೋಗ್ರ್ರಿ ೬೨ ಆ?"
"ಹೂಂ ಸಾ! ಗಂಗೋತ್ರಿ ಹತ್ತೀರಾ ೮೦ ರು . ನಾನು ಹೋಗೋದು ಹೋಲ್ ಸೆಲ್ . ಸುಮ್ನೆ ೧೮ ರು ವೆಸ್ಟ್ ಮಾಡಲ್ಲಾ" 
ನಾನು : :-) :-) :-) 
"ಊರಿಗೆ ಎಷ್ಟು ಸಲ ಹೋಗ್ತೀರಿ?"
"೨೦ ದಿನ ಕೆಲಸ ಮಾಡ್ತೀನಿ, ಮತ್ತೆ ಊರಿಗೆ ಹೋಗ್ತೀನಿ, ಇಲ್ಲದಿದ್ದರೆ  ಏನಾದರೂ ಅರ್ಜೆಂಟ್ ಇದ್ರೆ ಹೋಗ್  ಬೇಕಲ್ಲವಾ ಸಾ?"
"ಮತ್ತೆ ಅಮ್ಮನ ಪ್ಹ್ಯಾನ್ ಆ?"
"ಹಾ ಹಾ ಇಲ್ಲಾ ಸಾ "
"ಯಾಕ್ರೀ? ಅಮ್ಮ ನಿಮಗೋಸ್ಕರ ಏನೆಲ್ಲಾ ಮಾಡಿದ್ದಾರೆ . ಪ್ಹ್ಯಾನ್ , ಮಿಕ್ಸಿ , ಪ್ಹ್ರಿಜ್" 
"ಪ್ಹ್ರಿಜ್ ಇಲ್ಲಾ ಸಾ! ಫ್ಯಾನ್ ಮಿಕ್ಸಿ ಎಲ್ಲ ಒಂದು ಮೂವತ್ತು ಪರ್ಸೆಂಟ್  ನಡೆಡ್ರೆ ಅದೇ ಲಕ್ಕು ಸಾ  . ಕಾಂಟ್ರಾಕ್ಟ್ ಆಲ್ವಾ ಸಾ? "
"ಮತ್ತೆ ಮಕ್ಕಳಿಗೆ ಲ್ಯಾಪ್ ಟಾಪ್ " 
"ಹಾಂ ಅದು ಕೊಟ್ಟಿದಾರೆ" 
"ಅಕ್ಕಿ ಫ್ರೀ ಸಿಗತ್ತಲ್ಲವಾ?"
"ಹಾಂ ಸಿಗತ್ತೆ "
"ಹೇಗೆ ಕ್ವಾಲಿಟಿ ?" 
"ಕ್ವಾಲಿಟಿ ಹಾಂ ಹೂಂ ( ಸರಿ ಉತ್ತರ ಬರಲಿಲ್ಲ) :-)" 
"ಎಷ್ಟು ವರ್ಷ ಆಯ್ತು ಈ ಕೆಲಸ ಮಾಡ್ತಾ ಇದ್ದೀರಿ?"
"೩೫ ವರ್ಷ ಸಾ "
"ಈಗ ಎಷ್ಟು ವಯಸ್ಸು ನಿಮಗೆ??
"೫೫"
"ಒಂದು ಫೋಟೋ ತೇಗಿ ಬಹುದಾ?" 
"ಅಯ್ಯೋ ತೆಗೀರಿ ಸರ್ "

ಅಂತ ಪೋಸ್ ಕೊಟ್ಟು ಅಷ್ಟರಲ್ಲಿ ಪೇಪರ್ ನೀಟಾಗಿ ಕಟ್ಟಿ ಎಷ್ಟು ಕೆಜಿ ಇದೆ ಅಂತನನಗೆ ತೋರಿಸಿ , ದುಡ್ಡು ಕೊಟ್ಟು , ಫೋನ್ ನಂಬರ್ ಕೂಡ ಕೊಟ್ಟು ಹೋದ 
ಇಂತಿಪ್ಪ ರಾಮಾಸ್ವಾಮಿ 


January 1, 2017

ಹೊಸ ವರ್ಷದ ಶುಭಾಶಯಗಳು

ಎಲ್ಲರಿಗೆ ಹೊಸ ವರ್ಷ ಹರ್ಷದಾಯಕವಾಗಿರಲಿ.
ಹಿಂದಿನ ವಾರ ಬೆಳಗಾವಿಗೆಬಸ್ಸಲ್ಲಿ  ಹೋಗಿದ್ದೆ.ತಮ್ಮ ನ ಮಗಳಿಗೆ ರಜೆ, ಅವರೆಲ್ಲ ಮುಂಬೈನಿಂದ ಬರುವವರಿದ್ದರು. ಅಮ್ಮ ನಮಗೂ ಬರಲು ಹೇಳಿದ್ದರು.  ರಾತ್ರಿ ಡ್ರೈವರ್ ಗೆ ಹುಷಾರಿರಲಿಲ್ಲ ವೇನೋ. ಹಲವಾರು ಕಡೆ ನಿಲ್ಲಿಸುತ್ತಿದ್ದ. ಆದ್ದರಿಂದ ಬೆಳಗಿನ ನಸುಕಿನ ಜಾವ ನಾವು ಹುಬ್ಬಳ್ಳಿಯ ಬಳಿ ವರೂರು ಬಳಿ ಇದ್ದೆವು. ಬೆಳಗ್ಗಿನ ಚುಮು ಚುಮು ಬೆಳಕಿನಲ್ಲಿ, ಸೂರ್ಯೋದಯಕ್ಕೂ ಮುಂಚೆ ತೀರ್ಥಂಕರರ ಪುತ್ಥಳಿಗಳ ದಿವ್ಯ ದರ್ಶನ  ethereal ಅಂತಾರಲ್ಲವಾ ಹಾಗೆ.  ಬಿಟ್ಟ ಬಾಯಿಯಿಂದ ನೋಡ್ತಾ ಇದ್ದೆ. ಮೊಬೈಲ್ ಕ್ಯಾಮರಾ ಆನ್ ಆಗಿದ್ದರೂ  ಫೋಟೋ ತೆಗೆಯಲು ಮನಸ್ಸು ಬರಲಿಲ್ಲ.
ಬಸ್ ಮುಂದೆ ಚಲಿಸುತ್ತಾ ಈ ತರಹದ ಸೂರ್ಯೋದಯವನ್ನು ಕ್ಲಿಕ್ಕಿಸುತ್ತಾ ಹೋದೆ. ೬,೩೦ ಗೆ ತಲುಪಬೇಕಾಗಿದ್ದ ಬಸ್ ೯. ಗಂಟೆಗೆ ಬೆಳಗಾವಿಯಲ್ಲಿತ್ತು. :-)