December 19, 2016

ಗೋವಾದ ಉಂಡೆ ಪಾವ್ / ಪೊಯ್ ಭಾಕ್ರಿ



ಗೋವಾದಲ್ಲಿ ಚಾಂಡೋರ್ ಎಂಬ ಚೆಂದದ ಊರು. ಅಲಿ ಶ್ರೀಕಾಂತ ಬ್ಯಾಂಕ್ ಫ್ರೆನ್ಡ್ ಮಿಲಿಂದ್ ಸರದೇಸಾಯಿ ಯವರ ಮನೆ. ಗೋವಾ ಟೂರ್ ಹೋದಾಗ ಒಂದಿನ ಅವರ ಮನೇಲಿ ಅತಿಥಿ ಸತ್ಕಾರ. ಅವರ ಹೆಂಡತಿಗೆ ಅಷ್ಟೊಂದು ಆರಾಮ್ ಇಲ್ಲದಿದ್ದರೂ ನಮಗೋಸ್ಕರ ಹಲವಾರು ನಾನ್ ವೆಜ್ ಅಡಿಗೆ ಮಾಡಿದ್ದಲ್ಲದೆ, ಮಾಳವಿಕಾ ಗೋಸ್ಕರ ವೆಜಿಟೇರಿಯನ್ ಅಡಿಗೆ ಮಾಡಿಟ್ಟಿದ್ದರು ಪಾಪ. ಈ ಎಲ್ಲ ಅಡಿಗೆಗೂ ಪಾವ್ ಬೇಕೇ ಬೇಕಿತ್ತು. ಹಾಗಾಗಿ ನಾವು ಬ್ರಗಾಂಜ ಪ್ಯಾಲೇಸ್ ಮ್ಯೂಸೆಯಂ ಗೆ ಹೋಗಿ ವಾಪಸ್ ಮನೆಗೆ ಬರುವಾಗ ಪಾವ್ ಮಾಡುವ ಜೋಕಿಮ್ (Joaquim) ಡಿಸೋಜಾ ಅವರ ಬೇಕರಿಗೆ ಭೇಟಿ ನೀಡಿದೆವು, ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳು ಈ ಬೇಕರಿ ನಡೆಸಲು ಸಹಾಯ ಮಾಡುತ್ತಾರಂತೆ.







ಇಲ್ಲಿವೆ ಕೆಲವು ಚಿತ್ರಗಳು. ತಾಜಾ ಪಾವ್ ಗಳಿಗೆ ಇವರಿಗೆ ತುಂಬಾ ಡಿಮಾಂಡ್, ಈಗಲೂ ಮರದ ಕಟ್ಟಿಗೆ ಬಳಸಿ ಪಾವ್ ಮಾಡುವ ಕೆಲವೇ ಕೆಲವು ಬೇಕರಿಗಳಲ್ಲಿ ಡಿಸೋಜಾ ಅವರದ್ದು ಒಂದು. ಹಿಟ್ಟು ಹುದುಗಿ ಬರಲು ೬-೮ ಗಂಟೆ ಇಡ್ತಾರಂತೆ. ಬೆಳಿಗ್ಗೆ ೬ ಗಂಟೆಗೆ ಪಾವ್ ಮಾಡಲು ಶುರು ಮಾಡ್ತಾರಂತೆ. ನಮಗೆ ಬಿಸಿ ಬಿಸಿ ಪಾವ್ ಕೊಟ್ಟರು ತಿನ್ನಲು. ಎಷ್ಟು ರುಚಿಯಾಗಿತ್ತು. ಆದರೆ ಅವರು ಅವರ ಪಾವ್ ನ ರ್ರೀಇಪಿ ಹೇಳಲು ನಗು ನಗುತ್ತಾ ನಿರಾಕರಿಸಿದರು. :-)

ಇದಕ್ಕೆ ಬೇಕಾಗುವ ಹುಣಸೆ  ಕಟ್ಟಿಗೆ ಇವರು ಕರ್ನಾಟಕದಿಂದ ತರಿಸುವುದಂತೆ. ಒಂದು ಟ್ರಕ್  ಲೋಡ್ ಗೆ  ೩೦ ಸಾವಿರ ಅವರಿಗೆ ೬ ತಿಂಗಳಿಗೆ ಸಾಕಾಗುವುದಂತೆ. ಹುಣಸೆ ಕಟ್ಟಿಗೆಯ ಶಾಖ ಬಹಳ ಹೊತ್ತು ಇರುತ್ತದೆ ಅಂತ ಹೇಳಿದರು.


ಜೋಕಿಮ್ , ಶ್ರೀಕಾಂತ ಮತ್ತು ಮಿಲಿಂದ ಸರದೇಸಾಯಿ 

ಇದಕ್ಕೆ ರಾಕೆಟ್ ಪಾವ್ ಅಂತಾರೆ. ಇದ್ರ texture ಸಾಫ್ಟ್ ಇರುತ್ತೆ. 

ತಣ್ಣಗಾಗಲು ಇತ್ತ ಪಾವ್ 

ಮೂರೂ ನಾಲ್ಕು ಬಗೆಯ ಪಾವ್ ಅನ್ನು ನಾವು ಖರೀದಿಸಿದೆವು ಬೆಂಗಳೂರಿಗೆ ತರಲು 

November 16, 2016

demonetization ಎರಡು ಚುಟುಕು ಕತೆಗಳು

೧........ 
ಆತ ಕಾಯುತ್ತಲಿದ್ದ. ಅಹಂಕಾರದ ಹೆಂಡತಿ ಈಗ ತಿಜೋರಿಯಲ್ಲಿದ್ದ ಹಣ ನನ್ನ ಬಳಿ ತಂದು 'ಈಗೇನು ಮಾಡುವುದು' ಅಂತ ಕೇಳೇ ಕೇಳ್ತಾಳೆ ಅಂತ. ಆಕೆಗೆ ತಾನು ಶ್ರೀಮಂತ ಕುಟುಂಬದವಳೆಂಬ ಹಮ್ಮು . 
ಅರೆರೆ ಇದೇನಿದು ಬ್ಯಾ೦ಕಿಗೆ ಹಳೆ ನೋಟು  ಕೊಟ್ಟು ಹೊಸದನ್ನು ತರಲು ಇನ್ನು ಎರಡೇ ದಿನಗಳು ಉಳಿದಿವೆ. ಹೆಂಡತಿ ಇನ್ನು ದುಡ್ಡು ಹೊರಗೆ ತೆಗಿಲಿಲ್ಲ. 
ಅಲ್ಲಿ ಆಕೆ ಗೆ ಒಳಗೊಳಗೇ ನಗು. ತನ್ನ ಅಪ್ಪ, ತಮ್ಮ ದೊಡ್ಡಪ್ಪಂದಿರು ಕೊಟ್ಟ ೧೦೦೦/೫೦೦ ಹಣವನ್ನೆಲ್ಲಾ ಆಕೆ ೧೦೦ ರೂ ಗಳ ಬಂಡಲ್ ಮಾಡಿಡುವ ಖಯಾಲಿ. ತಮ್ಮ೦ದಿರು ಆಕೆಯ ಚಿಲ್ಲರೆ ಬುದ್ದಿಗೆ  ಬೈದು ಬೈದು ಸುಮ್ಮನಾಗಿದ್ದರು. ಆಕೆದು ಒಂದೇ ಹಠ ದೇವಸ್ಥಾನದ  ಹುಂಡಿಗೆ ಹಾಕಲು, ಖರ್ಚು ಮಾಡಲು , ಈ ೧೦೦ ರೂ ನೋಟ್ ಗಳೆ  ನನಗೆ ಸರಿ . ಸ್ವಲ್ಪ ದುಡ್ಡಿನಿಂದ  ಆಕೆ ಚಿಕ್ಕ ಪುಟ್ಟ ಬಂಗಾರದ ಆಭರಣಗಳನ್ನು ಮಾಡಿಟ್ಟಿದ್ದಳು.. 


೨...... 
ಬ್ಯಾ೦ಕ್ ನಿ೦ದ ಹಣ ಪಡೆಯಲು ಅದೊಂದು ದೊಡ್ಡ ಕ್ಯೂ . ಅಲ್ಲೊಬ್ಬಳು ಹಣ್ಣು ಹಣ್ಣು ಮುದುಕಿ. ನಿಂತು ನಿಂತು ಸುಸ್ತಾಗಿ ಶಾಪ್ ಹಾಕುತ್ತಿದ್ದಳು. ಅಲ್ಲೇ ಇದ್ದ ಒಬ್ಬ 'ಅಜ್ಜಿ ಈಗ ಶಾಪ್ ಹಾಕ್ತಿಯಾ; ಮುಂದೆ ನಿನಗೆ ಒಳ್ಳೆದಾಗುತ್ತೆ ನೋಡ್ತಿರು' ಅಂದ. 
ಹೌದಪ್ಪ ಹೌದು ನಾನೋ ನಾಳೆ ನಾಡಿದ್ದೋ ಉರುಳಿ ಬಿದ್ದು ಸಾಯೋವವಳು. ನನ್ನ ಮಗ ಅಲ್ಲಿ ಆಸ್ಪತ್ರೆಯಲ್ಲಿ ಹುಷಾರಿಲ್ಲದೆ ಸೇರಿಕೊಂಡಿದ್ದಾನೆ. ದೇಶಕ್ಕೆ ಒಳ್ಳೆಯದೇನಾದರೂ ಆದರೆ ಆವನಾದ್ರು ನೋಡಬೇಕಾದ್ರೆ ನನಗೆ ಈಗ ತುರ್ತು ದುಡ್ಡಿನ ಅಗತ್ಯ ಇದೆ. ಏನ್ಮಾಡಿರಿ? 

October 30, 2016

ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ ( my 400th post)



ಮಂಜುಳಾ ಒಳಗೆ ಅಡಿಗೆ ಮನೆಯಲ್ಲಿ ಸ್ವೀಟ್ ತಯಾರಿ ಯಲ್ಲಿ ವ್ಯಸ್ತಳಾಗಿದ್ದಳು. ಹೊರಗಡೆ ಜಾನಿಬಾಯಿ ಮತ್ತು ಅವಳ ಪುಟ್ಟ ಮಗಳು ಸೇರಿ ದೀಪಾವಳಿಗೆ ಅಂತ ಮನೆ ಹೊರಗಡೆ ಚೊಕ್ಕ ಗೊಳಿಸುತ್ತಿದ್ದರು. ಅವರ ಸಂಭಾಷಣೆ ಮಂಜುಳೆಯ ಕಿವಿ ಮೇಲೆ ಬೀಳುತ್ತಾ ಇತ್ತು.
" ಅಮ್ಮ ನಾವು ನಾಳೆ ಹಬ್ಬ ಮಾಡ್ತೀವಾ?'
" ಇಲ್ಲ ಮಗಳೇ ನಾವು ಎರಡು ದಿನ ಬಿಟ್ಟು ಹಬ್ಬ ಆಚರಿಸುವಾ, ಆಯ್ತಾ' ಈಗ ಎರಡು ಮೂರು ಮನೆಯ ಕೆಲಸ ಇದೆಯಲ್ಲವಾ? ನಾವು ಹಬ್ಬ ಅಂತ ಮನೆಯಲ್ಲಿ ಕುಳಿತರೆ ಅವರ ಮನೆಯಲ್ಲಿ ಕೆಲಸ ಮಾಡುವವರು ಯಾರು?"
ಮಂಜುಳೆಗೆ ಕುರುಳು ಚುರುಕ್ ಎಂದಿತು. ಅವರಿಗೆ ರಜೆ ಕೊಡುವಾ ಅಂದ್ರೆ ನಾಳೆ  ಡಿನ್ನರ್ ಪಾರ್ಟಿ ಗೆ ಸಹಾಯ ಮಾಡುವವರ್ಯಾರು?
ಅವಳಿಗೆ ಒಂದು ಐಡಿಯಾ ಬಂತು. ಬೇಗ ಬೇಗನೆ ಅಡಿಗೆ ತಿಂಡಿ ಕೆಲಸ ಮುಗಿಸಿ ಹೊರಗೆ ಹೋಗಿ ಜಾನಿಬಾಯಿ ಮತ್ತು ಅವಳ ಮಗಳಿಗೆ ಹೊಸ ಬಟ್ಟೆ, ಹಣತೆ, ಎಣ್ಣೆ , ಸ್ಕೂಲ್ ಬ್ಯಾಗ್ , ಬಣ್ಣ ಬಣ್ಣದ ಕತೆ ಪುಸ್ತಕ ತೆಗೊಂಡು ಅದನ್ನು ನೀಟಾಗಿ ಗಿಫ್ಟ್ ರ್ಯಾಪ್ ಮಾಡಿಸಿ ತಂದಿಟ್ಟು  ಕೊಂಡಳು.
ಮರುದಿನ ಬೆಳಿಗ್ಗೆ ಅವರು ಬಂದ ಕೂಡಲೇ ಅವರಿಗೆ ಅವರ ಉಡುಗೊರೆಯನ್ನು ಕೊಟ್ಟಳು. ಮಗಳು ಹೊಸ ಬಟ್ಟೆಯನ್ನು ಕೂಡಲೇ ಹಾಕಿಕೊಂಡಳು. ಸಂಜೆ ಆ ಹುಡುಗಿಯಿಂದಲೇ ಮನೆಯ ಮುಂದೆ ದೀಪಗಳನ್ನು ತನ್ನ ಮಕ್ಕಳ ಜೊತೆಯಲ್ಲೇ  ಹಚ್ಚಿಸಿ ತಂದ  ಪಟಾಕಿಗಳನ್ನು ಅವರೆಲ್ಲರೂ ಕೂಡಿಸಿ  ಹಚ್ಚಿದರು .
ದೀಪಾವಳಿಯ ಮರುದಿನ ಜಾನಿಬಾಯಿಗೆ ರಜೆ ಮಾತ್ರವಲ್ಲ ದೀಪಾವಳಿಯ ಮಿಠಾಯಿ ಮತ್ತು ಸ್ವಲ್ಪ ದುಡ್ಡನ್ನು ಕೊಟ್ಟು ಕಳಿಸಿ ಮನಸ್ಸಿಗೆ ಒಂದು ಸ್ವಲ್ಪ ಸಮಾಧಾನ ಆಗುವಂತೆ ನಡೆದುಕೊಂಡಳು ಮಂಜುಳಾ ..
ಸುಮ್ನೆ ದೀಪಾವಳಿಗೆ ಒಂದು ಫಿಲ್ ಗುಡ್ ಪೋಸ್ಟ್ .:-) 

October 28, 2016

ಆಕಾಶದಲ್ಲಿ fireworks

ಆಗ ನಾವು ಉಜಿರೆಯಲ್ಲಿದ್ದೆವು. ಕೆ ಟಿ ಗಟ್ಟಿ ಮಾಮನ  ಮಹಡಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಅವರ ಮಗಳಿಗೆ ಹುಷಾರಿಲ್ಲ ಅಂತ ಗಟ್ಟಿಯವರು ಮತ್ತು ಯಶೋದಾ ಆಂಟಿ ಪುಣೆ ಗೆ ಹೋಗಿದ್ದರು. ಅಲ್ಲಿ ಹೋದ ಮೇಲೆ ಮಗಳಿಗೆ ಹಲವಾರು ದಿನ ಆಸ್ಪತ್ರೆಯಲ್ಲಿರಬೇಕಾಗಿ ಬರುತ್ತೆ, ಸ್ವಲ್ಪ ಯಮುನಾ (ಯಶೋದಾ ಆಂಟಿ ಯಾ ಅಕ್ಕ) ಅವರಿಗೆ ಪ್ಹ್ರಿಜ್ ಕ್ಲಿನ್ ಮಾಡಲು ಸಹಾಯ ಮಾಡ್ತೀರಾ? ಅವರು ಮಂಗಳೂರಿಗೆ ಹೊರಟಿದ್ದಾರೆ ಅಂತ ಪುಣೆಯಿಂದ ಫೋನ್ ಮಾಡಿದ್ರು. ಆಮೇಲೆ ಯಮುನಾ  ಆಂಟಿ ಹೊರಟು  ಹೋದ್ರು. ಶ್ರೀಕಾಂತ ಕೂಡ ಮೈಸೂರಿಗೆ ಹೊರಟಿದ್ರು. ಗೇಟ್   ಆ ಕಡೆಯಲ್ಲಿರುವ ಸಚಿನ್  ಮನೆಯವರು ಕೂಡ ಯಾವುದೋ ಸಮಾರಂಭಕ್ಕೆ ಹೋಗಿದ್ದರಿಂದ ಮನೆಯಲ್ಲಿ ನಾನು ಮತ್ತು ಮಕ್ಕಳು ಮಾತ್ರ. ಗಟ್ಟಿಯವರ ಮನೆ ಪೇಟೆಯಿಂದ ದೂರ. ನಮ್ಮ ಮನೆಯಲ್ಲಿ ಫೋನ್ ಇತ್ತು ಆದರು ಅದು ಸರಿಯಿರುತ್ತಿದ್ದದ್ದೇ ಅಪರೂಪ. ಯಾವುದೋ ಕೆಲಸದ ಮೇಲೆ ನನ್ನ ಸ್ನೇಹಿತೆ ಸೂಸಿ ಮನೆಗೆ ಬಂದಿದ್ರು. ಅವರಿಗೆ ನಮ್ಮ ಮನೆಯಲ್ಲೇ ಉಳಿದು ಕೊಳ್ಳಲು  ಹೇಳಿದೆ. 
ಶ್ರೀಕಾಂತ ರಾತ್ರಿ ಊಟ ಮಾಡಿ ಮೈಸೂರಿಗೆ ಹೊರಟರು. ಮಕ್ಕಳು ಮಲಗಿದ್ದರು. ತಾರಸಿ ಮನೆಯಾದ್ದರಿಂದ ಸೆಕೆ. ಹಾಗಾಗಿ ನಾನು ಸೂಸಿ ಟೆರೇಸ್ ಮೇಲೆ ಇನ್ನೊಂದು ಎತ್ತರದಲ್ಲಿ ನೀರಿನ ಟ್ಯಾಂಕ್ ಮತ್ತು ಡಿಶ್ ಟಿ ವಿ ರಿಸೆಪ್ಟರ್ ಜಾಗಕ್ಕೆ ಹೋಗಿ ಕೂರುವ ಅಂದಾಜು ಮಾಡಿದೆವು. ಕುರುಕುಲು ತಿಂಡಿ ಹಣ್ಣು ಎತ್ತಿಕೊಂಡು, ಮಕ್ಕಳು ಮಲಗಿದ್ದರಿಂದ ಬಾಗಿಲಿಗೆ ಬಿಗ ಜಡಿದು ಟ್ಯಾಂಕ್ ಬಳಿ ಹತ್ತಿದೆವು. ಹೀಗೆ ಲೋಕಾಭಿರಾಮವಾಗಿ ಮಾತಲ್ಲಿ ಮುಳುಗಿದ್ದೆವು. ಹಾಗೆ ಅಡ್ಡಾದೆವು. ಶುಭ್ರ ಆಕಾಶ ಅಲ್ಲಲ್ಲಿ ಚುಕ್ಕೆ ಇಟ್ಟಂತಹ ನಕ್ಸತ್ರಗಳು . ಒಮ್ಮೆಲೇ ಆಕಾಶದಲ್ಲಿ ಸುರು ಸುರು ಬತ್ತಿ ಹಚ್ಚಿದ್ದ ದೃಶ್ಯ. ದೀಪಾವಳಿಯಂತೂ ಇರಲಿಲ್ಲ. ಇದ್ದರು ಈ ರೀತಿ ಪಟಾಕಿ ಮೊದಲೆಲ್ಲೂ ನೋಡಿರಲಿಲ್ಲ ಅಂತ ನಮ್ಮ ನಮ್ಮಲ್ಲೇ ಮಾತನಾಡಿದೆವು. ಆಗ ಮೊಬೈಲ್ ಎಲ್ಲ ಇರಲಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮನ ಬಳಿ ಒಂದು ಪೇಜರ್ ಮಾತ್ರ ನೋಡಿದ್ದೆ. :-) ಇಲ್ಲದಿದ್ದರೆ ಈಗಿನ ಹಾಗೆ ಒಂದು ಸೆಲ್ಫಿ ತೆಗೆದುಕೊಳ್ಳಬಹುದಿತ್ತು. ಪೂರ್ತಿ ೧೫ ನಿಮಿಷ ನಮಗೆ ಮನೋರಂಜನೆ. 

ಮೇಲಿನ  ಚಿತ್ರ ನಾನು ಗುಗಲಿಸಿ ಹಾಕಿದ್ದೇನೆ. ಆದರೂ ನಾವು ನೋಡಿದ ದೃಶ್ಯ ಇನ್ನು ಆಕರ್ಷಕ ವಾಗಿತ್ತು. ನಾನು ಮತ್ತು ಸೂಸಿ ಮಾತ್ರ ಈ ಆಕಾಶ ಪಟಾಕಿ ನೋಡಿದ್ದು ಅಂದುಕೊಂಡಿದ್ವಿ. ಆದರೆ ಮರುದಿನ ಶ್ರೀಕಾಂತ ಮೈಸೂರಿನಿಂದ ತಲುಪಿದಕ್ಕೆ ಫೋನ್ ಮಾಡಿದಾಗ ಬಸ್ ನಲ್ಲಿ ಹೋಗುತ್ತಾ ಇದನ್ನು ನೋಡಿದ್ದು, ಬಸ್ ಡ್ರೈವರ್ ಬಸ್ ಸ್ಲೋ ಮಾಡಿದ್ದು ಎಲ್ಲ ಹೇಳಿದ್ದರು.
ಇಂತಹ ಕೆಲವು ಅಪರೂಪ ಡಾ ಸಂಗತಿಗಳನ್ನು ನೋಡಿ ಜೀವನ ಧನ್ಯ ವಾದ ಅನುಭವ. 
ಮೊನ್ನೆ ಕೂಡ ಫೇಸ್ ಬುಕ್ ನಲ್ಲಿ ಅಕಾಶದಲ್ಲಿ ಬೆಳಕಿನ ಓಕುಳಿ ನಡೆಯುತ್ತಿದೆಎಂದು ಹಾಕಿದ್ದು, ನಾನು ಬಾಲ್ಕನಿಯಲ್ಲೇ ಪವಡಿಸಿದ್ದೆ , ಆದರೆ ಬಾಲ್ಕನಿಯಿಂದ ಪೂರ್ತಿ ಆಕಾಶ ಕಾಣುವುದಿಲ್ಲ ಮತ್ತು ನಮ್ಮ ಅಪಾರ್ಥಮೆಮ್ಟ್ ನ ಟೆರೇಸ್ ಬಾಗಿಲಿಗೆ ಬಿಗ ಹಾಕಿರುತ್ತಾರೆ. ಟೆರೇಸ್ ಮೇಲೆಲ್ಲಾ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. 
ಓರಿನೋಯ್ಡ್ಸ್, Orionids/starburst galaxy google ಮಾಡಿ ನೋಡಿ ನಿಮಗೂ ಅಂದಾಜು ಆಗಬಹುದು.. 
ದೀಪಾವಳಿಗೆ ಒಂದು ಚಿಕ್ಕ ಪೋಸ್ಟ್. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. :-) 



October 6, 2016

ಸಂಚಿಯಿಂದ ತೆಗೆದ ನೆನಪು- ೧೩ about car and adventures

ಚಿಕ್ಕವಳಿದ್ದಾಗ ಭಾರತದ ಉದ್ದಗಲ ಪ್ರಯಾಣಿಸಿದ ಹೆಮ್ಮೆ ನನ್ನದು. ಅಜ್ಜ ನನ್ನ ತಂದೆಗೆ volkswagen Beetle- steel blue ಬಣ್ಣದ್ದು ಕೊಡಿಸಿದ್ದರು. ಆಗ ಸ್ಕೂಲ್ ಗೆ ಚಕ್ಕರ ಹಾಕಿ ತಿರುಗಾಟ ಮಾಡಿದ್ದಲ್ಲಿ ಕೇಳುವವರು ಯಾರೂ ಇರಲಿಲ್ಲ. ಅಷ್ಟೆ ಅಲ್ಲ ನನ್ನ ಅಜ್ಜ ದೊಡ್ಡ ಕುಳ ಆಗಿದ್ದರಿಂದ ಯಾರೂ ಯಾವುದರ ಬಗ್ಗೆಯೂ ಸೊಲ್ಲೆತ್ತುತ್ತಿರಲಿಲ್ಲ. ಪ್ರಯಾಣ ಅಂದರೆ ಸಿರ್ಫ್ ಯಾತ್ರಾ pilgrimage ಸ್ಥಳಗಳು- ಕಾಶಿ, ರಾಮೇಶ್ವರ, ಪಳನಿ, ಪಂಢರಾಪುರ, ತಿರುಪತಿ, ಕನ್ಯಾಕುಮಾರಿ, ಮದುರೈ etc. ಅಜೋಬಾ, ನಾನಿ, ಅಪ್ಪ, ಅಮ್ಮ, ನಾವು ಮೂರು ಮಕ್ಕಳು,( ನನ್ನ ತಂಗಿ ಇನ್ನೂ ಹುಟ್ಟಿರಲಿಲ್ಲ.) ಇಷ್ಟು ಜನ ಗಾಡಿಯಲ್ಲಿ.ಕೆಲವೊಮ್ಮೆ ಡ್ರೈವರ್ ಕೂಡ ಇರುತ್ತಿದ್ದ
ಗಾಡಿ, ರಸ್ತೆ ಮಧ್ಯ ಕೆಲವೊಮ್ಮೆ ಮುಷ್ಕರ ಹೂಡುತಿತ್ತು. ಆಗ ಅಜ್ಜ ಅಪ್ಪ ದಾರಿಯಲ್ಲಿ ಸಾಗುವ ಟ್ರಕ್ ನಿಲ್ಲಿಸಿ ನಮ್ಮ ಗಾಡಿ Tow ಮಾಡಿಸಿ ಹತ್ತಿರದ ಗರಾಜ್ ಗೆ ಸಾಗಿಸುತ್ತಿದ್ದರು. ಆಗ ಹೋಟಲ್ ಗಳು ಅಷ್ಟೊಂದು ಇರಲಿಲ್ಲ. ನಾವು ಹೀಗೆ ಯಾರಾದರೂ ಗರಾಜ್ ನಡೆಸುವವರ ಮನೆಯಲ್ಲಿ ರೊಟ್ಟಿ ಪಲ್ಯ ಚಟ್ನಿ ತಿನ್ನುತ್ತಿದ್ದ ನೆನಪು. ಕೆಲವೊಮ್ಮೆ ರಿಪೇರಿ ಆಗಲಿಕ್ಕೆ ಎರಡು ಮೂರು ದಿನಗಳೇ ಬೇಕಾಗುತ್ತಿದ್ದವು. :-)
ಹೀಗೆ ಒಂದು ಸಲ ಕಾರವಾರಕ್ಕೆ ಹೋಗುವಾಗ ದಾರಿಯಲ್ಲಿ ರಾತ್ರಿ ನಮ್ಮ ಗಾಡಿ ಮುಷ್ಕರ ಹೂಡಿತು. ಅದೊಂದು ಸೇತುವೆ. ಕೆಳಗೆ ಹರಿಯುತ್ತಿರುವ ನದಿ. ಒಂದು ಹುಲಿ ಧುತ್ ಅಂತ ನಮ್ಮ ಕಾರ್ ಮುಂದೆ. ನಾವು ಸದ್ದು ಮಾಡಬಾರದೆಂದು ಅಮ್ಮ ನನ್ನ ಮತ್ತು ತಮ್ಮನ ಬಾಯಿ ಗಟ್ಟಿ ಹಿಡಿದುಕೊಂಡಿದ್ದು, ನಮ್ಮ excitement ಇನ್ನೂ ಹಸಿಯಾಗಿದೆ.ಡ್ರೈವರ ಕೂಡಲೆ ಗಾಡಿಯ ಲೈಟ್ ಆಫ್ ಮಾಡಿದ. ಸ್ವಲ್ಪ ಹೊತ್ತು ಸುಮ್ಮನೆ ನಮ್ಮ ಕಡೆ ನೋಡಿ ಆಮೇಲೆ ನಿಧಾನಕ್ಕೆಬಳಿ ಸಾಗಿ ಪಂಜಿನಿಂದ ಟಾಪ್ ಮೇಲೆ ಹೊಡೆಯಿತು. ಕಾರ್ ಗಡಗಡ ನಡುಗಿದ್ದು ಇನ್ನೂ ನೆನಪಿದೆ. ಆಗ ಅಪ್ಪ, ಡ್ರೈವರ್ ಗೆ ಒಟ್ಟೊಟ್ಟಿಗೆ ಬೆಳಕು ಹಾಗೂ ಹಾರ್ನ್ ಮಾಡಲು ಹೇಳಿದರು. ಡ್ರೈವರ್ ಲೈಟ್ ಆನ್ ಮಾಡಿ ಹಾರ್ನ್ ಹಾಕಿದ್ದೆ ಹಾಕಿದ್ದು, ಹುಲಿ ಒಂದೇ ಉಸುರಿಗೆ ಓಡಿ ಹೋಯ್ತು. :-)
ಆಮೇಲೆ ಅಪ್ಪನಿಗೆ ಬಿಹಾರ್ ಗೆ ಟ್ರಾನ್ಸ್ಫರ್ ಆಯ್ತು. ಅಪ್ಪ ಹೋಗುವ ಮೊದಲು ಕಾರ್ ಅನ್ನು ಗೂಡ್ಸ್ ಟ್ರೈನ್ ನಲ್ಲಿ ಮುಂದೆ ಕಳುಹಿಸಿದ್ದರು. ಅಪ್ಪ ಬಿಹಾರ್ ತಲುಪಿ ಅಲ್ಲಿನ ಬ್ರಾಂಚ್ ಜಾಯಿನ್ ಆಗಿ ಮೂರು ತಿಂಗಳು ಕಳೆದರೂ ಕಾರ್ ನ ಪತ್ತೆ ಇಲ್ಲ. ಅಂತೂ ಇಂತೂ ಪತ್ರ ಬರೆದು ಬರೆದೂ, ಅಲ್ಲಿ ಇಲ್ಲಿ ಫೋನಾಯಿಸಿ...ಒಂದು ದಿನ ಪಟ್ನಾದ ಗೂಡ್ಸ್ ಶೆಡ್ ನಿಂದ ಫೋನ್ ಬಂತು, ಕಾರು ತಲುಪಿದೆಯೆಂದು. ಅಪ್ಪ ಹೋಗಿ ನೋಡಿದರೆ ಅದು ರಿಪೇರಿ ಆಗದಷ್ಟು ನುಜ್ಜುಗುಜ್ಜಾಗಿತ್ತು. ಕೊನೆಗೆ ಗುಜರಿಯಲ್ಲಿ 200 ರೂ ಅಷ್ಟೆ ಬಂದಿತ್ತು. ಆಮೇಲೆ ನಮ್ಮ ಅಪ್ಪ ಕಾರ್ ಸುದ್ದಿಗೆ ಹೋಗಲಿಲ್ಲ.
ಮೊನ್ನೆ ಗೋಕರ್ಣಕ್ಕೆ ಹೋಗುವ ದಾರಿಯಲ್ಲಿ ಮಕ್ಕಳಿಗೆ ಇದನ್ನು ಹೇಳ್ತಾ ಇದ್ದೆ.


October 3, 2016

ದೀಪಾವಳಿಗೆ ನಿಮ್ಮ ಉಡುಗೊರೆ ಸ್ವಲ್ಪ ಭಿನ್ನವಾಗಿರಲಿ

ದೀಪಾವಳಿಗೆ  ನಿಮ್ಮ ಆಪ್ತೆಷ್ಟರಿಗೆ ಎಷ್ಟಂತ ಸ್ವೀಟ್ ಕೊಡ್ತೀರಿ? ಈ ದೀಪಾವಳಿಗೆ ಬೇರೆ ಏನಾದರೂ ಉಡುಗೊರೆ ನೀಡಿ. for eg ಕೆಳಗಿನಕೊಂಡಿಯಲ್ಲಿನ ಫೈಟಿಂಗ್ಸ್.  ಇದರಲ್ಲಿ ಕೆಲವು ಈಗಾಗಲೇ ಮಾರಲ್ಪಟ್ಟಿವೆ. ನೀವು ತ್ವರೆ ಮಾಡಿ. ನಿಮ್ಮ ಆತ್ಮೀಯರು ನಿಮ್ಮ ಕಲಾ ಅಭಿರುಚಿಯನ್ನು  ನೋಡಿ ಮೆಚ್ಚಲಿ. :-) :-) 



chitrakale

ಇಲ್ಲಿದೆ ಒಂದು ಸ್ಯಾಂಪಲ್


September 30, 2016

spring roll ಸ್ಪ್ರಿಂಗ್ ರೋಲ್

ಇನ್ನು ಮಕ್ಕಳಿಗೆ ದಸರಾ ರಜಾ ಶುರು. . ಆಗ ಮಕ್ಕಳುಆಟ ಮುಗಿಸಿ ಅಥವಾ ಅವರ ಕ್ಲಾಸ್ ಮುಗಿಸಿ ಬಂದು ಅಮ್ಮ ಹಸಿವೆ ಎಂದಾಗ ಸ್ಪ್ರಿಂಗ್ ರೋಲ್ ಮಾಡಿ ಕೊಡಬಹುದು. ಸ್ಪ್ರಿಂಗ್ ರೋಲ್ ನ ಹೊರಗಿನ ಕವಚವನ್ನು ಮೊದಲೇ ಮಾಡಿಟ್ಟು ಶೀತಾಗಾರದಲ್ಲಿ ಕಾಪಿಟ್ಟುಕೊಳ್ಳಬಹುದು. 

ಮೊದಲಿಗೆ ಸ್ವಲ್ಪ ಮೈದಾ ಹಿಟ್ಟಿಗೆ ಸ್ವಲ್ಪ ಕಾರ್ನ್ ಫ್ಲೋರ್ ಮಿಕ್ಸ್ ಮಾಡಿ ನೀರು ಬೆರೆಸಿ ಗಂಟಾಗದಂತೆ ತೆಳುವಾದ ಹಿಟ್ಟು ತಯಾರಿಸಿ. ನಾನ್ ಸ್ಟಿಕ್ ಕಾವಲಿ ಓಲೆ ಮೇಲಿಡಿ. ಬಿಸಿ ಆದ ಮೇಲೆ ಒಂದು ಬ್ರಶ್ ಅನ್ನು ಹಿಟ್ಟಿನಲ್ಲಿ ಅಡ್ಡಿ ಪೈಂಟ್ ಮಾಡೊತರಹ ಕಾವಲಿ ಮೇಲೆ ಆಡಿಸಿ. ಒಂದಾದನಂತರ ಲಂಬವಾಗಿ ಹಿಟ್ಟನ್ನು ಕಾವಲಿಗೆ ಬ್ರಶ್ ಮಾಡ್ತಾ ಹೋಗಿ. 

ಒಣಗಿದಂತೆ ಕಂಡ ಕೂಡಲೇ ಕಾವಲಿಯಿಂದ ಬಿಡಿಸಿ ಪ್ಲೇಟ್ ಮೇಲೆ ಹಾಕಿ. ಇದಕ್ಕೆ ತೆಳು ಎಣ್ಣೆ ಸವರಿಡಿ . ಇದರ ಮೇಲೆ ಇನ್ನೊಂದು ಪದರ ಮಾಡಿ ಇಡುತ್ತಾ ಹೋಗಿ. ಹೀಗೆ ಕವಚಗಳು ರೆಡಿಯಾದ ಮೇಲೆ ಪ್ಹ್ರಿಜರ್ ನಲ್ಲಿ ಇತ್ತು ಬಿಡಿ. 






ಸ್ಪ್ರಿಂಗ್ ರೋಲ್ ನ ಹೂರಣ : ಕ್ಯಾಬೇಜ್, ದಪ್ಪ  ಮೆಣಸಿನಕಾಯಿ ಕ್ಯಾರಟ್ ಸಣ್ಣಕ್ಕೆ ಕಟ್ ಮಾಡಿಡಿ . ಎಣ್ಣೆಯಲ್ಲಿ ನೀರುಳ್ಳಿ ಬೆಳ್ಳುಳ್ಳಿಬಾಡಿಸಿ, ಇದಕ್ಕೆ ತರಕಾರಿಗಳನ್ನು ಬೆರೆಸಿ  ಉಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ ತಣ್ಣಗಾಗಲು  ಪಕ್ಕಕ್ಕಿಡಿ. 


ಈಗ ಒಂದೊಂದೇ ರೋಲ್ ಗಳನ್ನೂ ಬಿಡಿಸಿ. ಮಧ್ಯದಲ್ಲಿ ತರಕಾರಿ ಮಿಶ್ರಣವನ್ನು ಹಾಕಿ ಹಾಸಿಗೆ ಯಂತೆ ಸುರುಳಿ ಸುತ್ತಿ .

 ಹೀಗೆ ಐದಾರು ಸ್ಪ್ರಿಂಗ್ ರೋಲ್ ಮಾಡಿಡಿ. ಬಿಸಿ ಎಣ್ಣೆಯಲ್ಲಿ  ಪ್ರೈ ಮಾಡಿ. 
ಡಿಪ್ ಮಾಡಲು ಸಾಸ್. ಕೆಂಪು ಮೆಣಸನ್ನು ಬಿಸಿ ನಿರಿ ನಲ್ಲಿ ಹಾಕಿಡಿ. ಮೆದುವಾದ ಮೇಲೆ ಉಪ್ಪು ವಿನೆಗರ್, ಬೆಳ್ಳುಳ್ಳಿ ಸಕ್ಕರೆ ಹಾಕಿ ಮಿಕ್ಸಿ ಯಲ್ಲಿ ಪೇಸ್ಟ್ ಮಾಡಿಕೊಳ್ಳಿ. 
ಬಿಸಿ ಬಿಸಿ ಸ್ಪ್ರಿಂಗ್ ರೋಲ್ ರೆಡಿ ಟು ಸರ್ವ್ 
ರಿಸಿಪಿ : ಫಾರುಖ್ ಅಜಿಜ್ ಅವರ ಬ್ಲಾಗ್ : http://cubesnjuliennes.com/