Showing posts with label ಮಿನಿ ಕತೆ. Show all posts
Showing posts with label ಮಿನಿ ಕತೆ. Show all posts

May 29, 2013

ಒಂದು feel good ಕತೆ (ಮಿನಿ ಕತೆ)

photo and effects : Niharika Shenoy
ಅವನು ಪ್ರೀತಿಸಿದ ಹುಡುಗಿಗೆ ಕಿವಿ ಸರಿಯಾಗಿ ಕೇಳಿಸದಿದ್ದರೂ ಅವನು ಮುಂದಾಗಿ ಅವಳನ್ನು ಮದುವೆಯಾದ. ಡಾಕ್ಟರ್ ಬಳಿ ಹೋದಾಗ, ಕಿವಿಗೆ ಒಂದು ಪುಟ್ಟ correctional ಶಸ್ತ್ರ ಚಿಕಿತ್ಸೆಯಿಂದ ಅದನ್ನು ಸರಿಪಡಿಸಬಹುದು ಅಂತ ಗೊತ್ತಾಯಿತು. ಆದರೆ ಅದಕ್ಕೆ ತಗಲುವ ವೆಚ್ಚ ಅಪಾರ. ಹುಡುಗ ಸ್ವಾಭಿಮಾನಿ. ಆಕೆಗೆ ಒಂದು ಸಣ್ಣ ಮೊತ್ತ ಸಂಪಾದನೆ ಬರುವ ಹಾಗೆ ಒಂದು ಕಾರಖಾನೆಯಲ್ಲಿ ಕೆಲಸ. ಅದರೊಟ್ಟಿಗೆ ಉನ್ನತ ಪದವಿಯ ಓದು. ಅವನದ್ದು ಕಿರಾಣಿ ಅಂಗಡಿ.
ಮದುವೆಯ ಆದ ದಿನದಿಂದಲೇ ಅವನು ಸ್ವ್ವಲ್ಪ ಹಣ ಆಕೆಯ ಶಸ್ತ್ರ ಚಿಕಿತ್ಸೆಗೆಂದು ತೆಗೆದಿಡಲಾರಂಭಿಸಿದ. ಅಂಗಡಿಯಲ್ಲಿ ತುಂಬ ಚೆನ್ನಾದ ವ್ಯಾಪಾರ ಆದ ದಿನ ಸ್ವಲ್ಪ ಹೆಚ್ಚೆ ಆ ಮೊತ್ತಕ್ಕೆ ಸೇರಿಸುತ್ತಿದ್ದ. ಮದುವೆಯ ವಾರ್ಷಿಕೋತ್ಸವಕ್ಕೆ ಒಂದು ವಾರ ಇದೆ ಯೆನ್ನುವಾಗ ಅವನು ಆ ದುಡ್ಡನ್ನು ಲೆಕ್ಕ ಹಾಕಿದ . ಅದರಲ್ಲಿ 50000 ರೂ ಜಮಾ ಆಗಿತ್ತು. ಸಂತಸದಿಂದ ಡಾಕ್ಟರ್ ಬಳಿ ಹೋದ. ತನ್ನ ಕತೆ ಹೇಳಿದ. ಡಾಕ್ಟರ್ ಶಸ್ತ್ರ್ರ ಚಿಕಿತ್ಸೆಗೆ 1 ಲಕ್ಷ ರೂ ಖರ್ಚಾಗುತ್ತದೆಯೆಂದು, ಅದೂ ಒಂದು ಕಿವಿಗೆ ಅಂತಂದು, ಸ್ವಲ್ಪ ಹೊತ್ತು ಆಲೋಚಿಸಿ 50000 ನಮ್ಮ ಆಸ್ಪ್ತ್ರತ್ರೆ ಫಂಡ್ ನಿಂದ ಹಾಕ್ತೀವಿ ಅಂದರು.
ಖುಶಿಯಲ್ಲಿ ಹುಡುಗ ಅವನ ಟಿ ವಿ ಎಸ್ ನಡೆಸುತ್ತಿದ್ದ. ಹೆಂಡತಿಯ ಕಿವಿ ಸರಿಹೋದ ಮೇಲೆ ಆಡ ಬೇಕಾದ ಮಾತುಗಳು, ಎಸ್ ಎಮ್ ಎಸ್ ಮೂಲಕ ರವಾನಿಸುವ ಸಂದೇಶಗಳನ್ನು ಈಗ ಆಕೆಯ ಕಿವಿಯಲ್ಲೇ ಉಸುರಬಹುದು, ತಾನು ಬರೆದ ಚುಟುಕುಗಳನ್ನು. ಕತೆಗಳನ್ನು ಓದಿ ಹೇಳಬಹುದು, ಅದರೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು ಮುಂತಾದ ಸಂತಸದ ಸಂಗತಿಗಳಿಂದ ಅವನ ತಲೆಯಲ್ಲಿ ಮೃದು-ಮಧುರ ಆಲೋಚನೆ ಹಾರಾಡತೊಡಗಿದವು. ಖುಶಿಯಿಂದ ಅವನು ಗಮನಿಸಲಿಲ್ಲವೋ, ಅಥವಾ ಆ ಕಡೆಯಿಂದ ಬರುತ್ತಿದ್ದ ಲಾರಿಯವನ ತಪ್ಪೋ, ಹುಡುಗನಿಗೆ ಬಿದ್ದದ್ದು ಮಾತ್ರ ಗೊತ್ತು. ಎಚ್ಚರವಾದಾಗ ಆಸ್ಪ್ತತ್ರೆಯಲ್ಲಿದ್ದ. ಜೀವಕ್ಕೇನೂ ಅಪಾಯವಿಲ್ಲದಿದ್ದರೂ ಕಾಲಿನ ಮೂಳೆ ಮೂರು ಕಡೆ ಫ್ರಾಕ್ಛರ್ ಆಗಿ ಅದನ್ನು ಸರಿಪಡಿಸಲು 50000 ಸಾವಿರ ರೂ ಆಗುತ್ತದೆ ಅಂತ ಆಸ್ಪತ್ರೆಯ ಸಿಬ್ಬಂಧಿ ತಿಳಿಸಿದರು.
ಈ ಕತೆಯನ್ನೆಲ್ಲ ಹುಡುಗ ತನ್ನ ಆಪ್ತ ಮಿತ್ರನಲ್ಲಿ ಹೇಳಿಕೊಳ್ಳುವಾಗ, ಪಕ್ಕದ ಬೆಡ್ ನಲ್ಲಿರುವ ಕೋಟ್ಯಾಧಿಪತಿಗೆ ಏನನ್ನಿಸಿತೋ ಡಾಕ್ಟರ್ ಅನ್ನು ಕರೆದು ಆ ಹುಡುಗನ ಚಿಕಿತ್ಸೆಗೆ ತಗಲುವ ವೆಚ್ಚ ಹಾಗೂ ಆಕೆಯ ಕಿವಿಯ ಶಸ್ತ್ರ ಚಿಕಿತ್ಸೆಗೆ ತಗಲುವ ವೆಚ್ಚವನ್ನು ತಾನೇ ಭರಿಸಲು ಮುಂದಾದ. ತನ್ನ ಹೆಸರು ಮಾತ್ರ ಎಲ್ಲೂ ಹೇಳಕೂಡದು ಅಂತಂದು ಕೂಡಲೆ ಹಣದ ವ್ಯವಸ್ಥೆ ಮಾಡಿಸಿದರು. ಎರಡು ದಿನದ ನಂತರ ಆ ಕೋಟ್ಯಾಧಿಪತಿ ಕೊನೆಯುಸಿರೆಳೆದರು.
ಎರಡು ವರ್ಷಗಳ ನಂತರ....................
ಹುಡುಗನ ಕಾಲು ಸರಿಯಾಗಿದೆ, ಹುಡುಗಿಯ ಕಿವಿಗೆ ಒಂದು ಚಿಕ್ಕ ಹಿಯರಿಂಗ್ ಎಇಡ್ ಅಳವಡಿಸಿದ್ದಾರೆ. ಅದರ ಮೂಲಕ ಎಲ್ಲವನ್ನೂ ಕೇಳಿಸಿಕೊಳ್ಳಬಲ್ಲಳು, ಆಕೆಯ ಪುಟ್ಟ ಕಂದನ ತೊದಲು ಮಾತು ಕೂಡ. ಡಾಕ್ಟರನ್ನು ಕಾಡಿಸಿ ಪೀಡಿಸಿ ಆ ಕೋಟ್ಯಾಧಿಪತಿಯ ಹೆಸರನ್ನು ತಿಳಿದುಕೊಂಡು, ಪುಟ್ಟನಿಗೆ ಆ ಕೋಟ್ಯಾಧಿಪತಿಯ ಹೆಸರನ್ನೆ ಇಟ್ಟಿದ್ದಾರೆ. ಇಬ್ಬರೂ ಕಷ್ಟ ಪಟ್ಟು ದುಡಿದು ಸಮಾಧಾನದಿಂದಿದ್ದಾರೆ
all is well that ends well..
:-)

December 1, 2011

ಮಿನಿ ಕತೆ ಹಾಗೂ ಒಂದು ನಿಜ ಘಟನೆ

ದಿನ್ನು- ದಿನೇಶ  ಗೆ ಕೆಲಸ ಸಿಕ್ಕಿತು. ತುಂಬ ಖುಶಿಯಲ್ಲಿದ್ದ ಅಂವ. ಈ ಸಲ ಮನೆಗೆ ಹೋದಾಗ ಎದುರು ಮನೆ ಮಿನ್ನಿ- ಮೃಣಾಲಿನಿಯನ್ನು ಮದುವೆ ಮಾಡಿಕೊಳ್ಳುವುದರ ಬಗ್ಗೆ ತಂದೆ ತಾಯಿ ಹತ್ತಿರ ಮಾತಾಡಬೇಕು ಅಂದು ಕೊಂಡ. 
ಮನೆ ತಲುಪಿದಾಗ ಮಿನ್ನಿಯ ಮನೆ ತಳಿರು ತೋರಣ- ಶಾಮಿಯಾನ ದಿಂದ ಅಲಂಕರಿಸಲಾಗಿತ್ತು. ಅದೇನು ಹೊಸ ವಿಷಯವಾಗಿರಲಿಲ್ಲ ಯಾಕೆಂದರೆ ಮಿನ್ನಿಯ ತಂದೆ ರಾಜಕೀಯ ಪುಢಾರಿ, ಏನಾದರು ಸಭೆ -ಸನ್ಮಾನ- ಸಮಾರಂಭ ನಡೆಯುತ್ತಲಿರುತಿತ್ತು ಯಾವಾಗಲೂ
ಹಾಗಂತ ಒಂದು ದಿನವು ದಿನು-ಮಿನ್ನಿ ಮುಖಕ್ಕೆ ಮುಖ ಕೊಟ್ಟು ಮಾತಾನಾಡೋದು ಬಿಡಿ,ಒಬ್ಬರ ಮುಖ ಇನ್ನೊಬ್ಬರು ಸರಿಯಾಗಿ ನೋಡಲು ಇರಲಿಲ್ಲ ಈ ವರೆಗೂ. ತುಂಬ ಚಿಕ್ಕವರಿರುವಾಗ, ಅಂದರೆ ಬಾಲವಾಡಿಗೆ ಹೋಗುವಾಗ ಜಾನಿಬಾಯಿ ಒಂದು ಕೈಯಲ್ಲಿ , ಶಾಲೆಗೆ ಹೋಗುವುದಿಲ್ಲ ಎನ್ನುವ ಮಿನ್ನಿ (ಮೄಣಾಲಿನಿ ಗೆ ಯಾರಾದರು ಅವಳ ಹೆಸರು ಕೇಳಿದರೆ ಅವಳು ಮಿನ್ನಿಲಿನ್ನಿ ಅಂತ ಹೇಳುತ್ತಿದ್ದಳು. ಅವಳಿಗೆ ಮೄಣಾಲಿನಿ ಎನ್ನಲು ನಾಲಿಗೆ ತಿರುಗುತ್ತಿರಲಿಲ್ಲ . ಹಾಗಾಗಿ ಅವಳ ಹೆಸರು ಮುದ್ದಿನಿಂದ ಎಲ್ಲರೂ ಮಿನ್ನಿ ಅಂತ ಕರೆಯುತ್ತಿದ್ದರು)) ಯನ್ನು ಮತ್ತು ಇನ್ನೊಂದು ಕೈಯಲ್ಲಿ ದಿನ್ನು ವಿನ ರಟ್ಟೆ  ಹಿಡಿದುಕೊಂಡು ದರದರನೆ ಶಾಲೆಗೆ ಎಳೆದುಕೊಂಡು ಹೋಗುವುದು, ಮಧ್ಯಾಹ್ನ ಮನೆಗೆ ತಂದು ಬಿಡುವುದು- ಆಗ ಒಟ್ಟಿಗೆ ಇದ್ದರು ಅಷ್ಟೆ. ಆ ಮೇಲೆ ಸ್ತ್ರೀ ರೋಗ ತಜ್ಝೆಯಾದ ದಿನ್ನು ತಾಯಿ ಹಾಗೂ industrialist ತಂದೆ - ಇಬ್ಬರೂ ಅವರವರ ಕೆಲಸದಲ್ಲಿ ಸದಾಕಾಲ busy- ಅವನನ್ನು ಗಂಡು ಮಕ್ಕಳ ಕಾನ್ವೆಂಟ್ ಶಾಲೆಗೆ ಸೇರಿಸಿದರು. ಅವನು ಸಂಜೆ ಶಾಲೆ ಮುಗಿದ ಮೇಲೆ ಶಾಲೆಯ ಆಟದ ಮೈದಾನದಲ್ಲೇ ಆಟ ಆಡಿಕೊಂಡು, ಕತ್ತಲಾದಾಗ ಮನೆ ಸೇರುತ್ತಿದ್ದನು. ಮನೆ ತುಂಬ ಆಳು ಕಾಳುಗಳು. ಏಳನೆ ತರಗತಿ ಮುಗಿಯುತ್ತಿದ್ದಹಾಗೆ ಅವನಿಗೆ ಉತ್ತರ ಭಾರತದ ಪತಿಷ್ಟಿತ residential ಶಾಲೆಗೆ ಸೇರಿಸಲಾಯಿತು. ಅಲ್ಲೇ ಕಾಲೇಜು ಕೂಡ ಇತ್ತು. ಆ ಶಾಲೆಯಲ್ಲಿ ವಾರ್ಷಿಕ ರಜೆ ಜೂನ್ ನಲ್ಲಿ ಕೊಡುತ್ತಿದ್ದರಿಂದ ಅವನು ಊರಿಗೆ ಮರಳಿದಾಗ ಅವನ ಹಳೆ ಶಾಲೆಯ ಸ್ನೇಹಿತರು ಕೂಡ ಸಿಗುತ್ತಿರಲಿಲ್ಲ.ಅವನ residential ಶಾಲೆಯ ಕೆಲ ಸಹಪಾಠಿಗಳು ಅವನ ಜತೆ ಬಂದು ಒಂದು ವಾರ ಇವರ ಮನೆಗೆ ತಂಗಿದ್ದು ವಾಪಸ್ ಅವರವರ ಊರಿಗೆ ತೆರಳುತ್ತಿದ್ದರು, ಹಾಗಾಗಿ ಮನೆಯಲ್ಲಿ ಒಂಟಿಯಾಗಿಯೇ ಓದುವುದು ಬರೆಯುವುದು ರೂಢಿ ಮಾಡಿಕೊಂಡ. ಆದರೆ ಸಂಜೆ ಮಿನ್ನಿ ಶಾಲೆಯಿಂದ ಮರಳುವ ಸಮಯಕ್ಕೆ ಸರಿಯಾಗಿ ಅವನು ಮನೆಯ ಎದುರಿನ ಬಾಲ್ಕನಿಯಲ್ಲಿ ನಿಂತಿರುತ್ತಿದ್ದ. ಸ್ಕರ್ಟ್ ತೊಡುತ್ತಿದ ಮಿನ್ನಿ, ಚೂಡಿದಾರ- ಪ್ಯಾಂಟ್ ಹಾಕುವರೆಗಿನ,ಎಣ್ಣೆಹಾಕಿ ಎರಡು ಜಡೆಯಿಂದ -ಬಾಬ್ ಕಟ್,  ಸೈಕಲ್ ಬಿಟ್ಟು- ಸ್ಕೂಟಿ ಓಡಿಸುವ ಮಿನ್ನಿಯ ಬೆಳವಣಿಗೆ/ ಬದಲಾವಣೆಗಳನ್ನೆಲ್ಲ ನೋಡುತ್ತಿದ್ದ. ಮಿನ್ನಿಗೆ ಒಭ್ಬ ತಂಗಿ ಹಾಗೂ ತಮ್ಮ ಇದ್ದುದರಿಂದ ಅವರ ಮನೆಯಯಲ್ಲಿ ನಡೆಯುವ ಆಟ, ಜಗಳ, ಗಲಾಟೆಯೆಲ್ಲ ದಿನ್ನುವಿಗೆ ಕೇಳಿಸುತ್ತಿದ್ದವು. ಉಳಿದಂತೆ ಕೆಲಸದ ಆಳು ಅವರ ಮನೆಯ ವಿಷಯ ಮಾತಾಡಿಕೊಳ್ಳುತ್ತಿದ್ದರಾದರೂ, ದಿನ್ನು ಮಿನ್ನಿಯ ನಡುವೆ ಮಾತು ಮಾತ್ರ ಇಲ್ಲವೇ ಇಲ್ಲ. ದಿನ್ನು ತನ್ನನ್ನು ನೋಡುತ್ತಿದ್ದಾನೆ ಎನ್ನುವ ವಿಚಾರ ಅವಳಿಗೆ ಹೊಳೆಯುವುದಾದರೂ ಹೇಗೆ? ಹತ್ತನೆ ಹಾಗೂ ಹನ್ನೆರಡನೆ  ತರಗತಿಯಲ್ಲಿ ಇಬ್ಬರೂ ಒಳ್ಳೆಯ ಅಂಕಗಳಿಂದ ಪಾಸಾಗಿ, ದಿನ್ನು ಇಂಜಿನಿಯರಿಂಗ್ ಓದಲು ಪುಣೆಗೆ ಹೋದರೆ, ಮಿನ್ನಿ ಅವಳ ಊರಲ್ಲೇ ಇಂಜಿನಿಯರಿಂಗ ವ್ಯಾಸಂಗ್ ಮುಂದುವರೆಸಿದಳು. ಈಗ ದಿನ್ನುಗೆ ಕೆಲಸ ಸಿಕ್ಕಿದೆ.
ಮನೆ ಒಳಗೆ ಹೋದಾಗ ದಿನ್ನುವಿನ ಅಪ್ಪ-ಅಮ್ಮ ತುಂಬ ಸಂಭ್ರಮದಿಂದ ಸಿಂಗರಿಸಿಕೊಂಡು ಎಲ್ಲಿಗೋ ಹೋಗುವ ತಯಾರಿ ನಡೆಸಿದ್ದರು. ದಿನ್ನು ಬಂದಿದ್ದನ್ನು ನೋಡಿ, ಬೇಗ ಕೈ ಕಾಲು ಮುಖ ತೊಳೆದು ಕೊ, ಇವತ್ತು ಮಿನ್ನಿಯ ಎಂಗೇಜಮೆಂಟ್. ಎಲ್ಲರೂ ಒಟ್ಟಿಗೆ ಹೋಗುವ ಅಂತ ಹೇಳಿದರು. ದಿನ್ನುವಿಗೆ ತಲೆ ಮೇಲೆ ಐಸ್ ನೀರು ಚೆಲ್ಲಿದ ಅನುಭವ. ಮನೆಗೆ ಬರುವಾಗಿನ ಉತ್ಸಾಹ ಕಳೆದುಕೊಂಡು, ಪ್ರಯಾಣದ ಆಯಾಸ ಅವನನ್ನು ಈಗ ಕಾಡಿತು. ತಾನು ಬರುವುದುಲ್ಲ ಎಂದು ನಯವಾಗಿ ಹೇಳಿದ. ಅವರು ಮನೆಯಿಂದ ಹೊರಟ ಮೇಲೆ, ದಿನ್ನು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದ. ಸುಮಾರು ವರ್ಷಗಳಿಂದ ಹೊರ ಊರಿನಲ್ಲೇ ಓದಿದ್ದರಿಂದ, ಅವನಿಗೆ ಅವನ ಊರಿನಲ್ಲಿ   ಹೇಳಿಕೊಳ್ಳುವಂತ ಯಾವ ಸ್ನೇಹಿತರೂ ಇರಲಿಲ್ಲ. ತುಂಬ ದೂರದ ವರೆಗೆ ವೇಗದ ನಡಿಗೆಯಿಂದ ಹೋಗಿ, ಸುಸ್ತಾದಾಗ ಸಿಕ್ಕಿದ ಒಂದು ಉದ್ಯಾನವನದಲ್ಲಿ ಮಕ್ಕಳ ಆಟ ನೋಡುತ್ತ ಕುಳಿತುಕೊಂಡ. ಮನೆಗೆ ಹೋಗಲೂ ಬೇಸರ, ಕುಳಿತ ಕಡೆಯೂ ಬೇಸರ, ಹೇಳಲಾಗದ ಸಂಕಟ. ಮಧ್ಯಾಹ್ನದ ಊಟ ಸರಿಯಾಗಿರದೇ ಹೊಟ್ಟೆ ಹಸಿವಿನಿಂದ ಕಂಗಾಲಾದ ದಿನ್ನು, ಸುಮಾರು ರಾತ್ರಿ ಕಳೆದ ಮೇಲೆ ಮನೆಗೆ ತೆರಳಿದ. 
ಸರಿ ರಾತ್ರಿಯಾಗಿದ್ದರೂ ಮಿನ್ನಿಯ ಮನೆಯ ಮುಂದೆ ಇನ್ನೂ ಜನರು ಜಮಾಯಿಸಿ, ಗುಸು ಪಿಸಿ ಮಾತಲ್ಲಿ ತೊಡಗಿದರು. ಮನೆ ಒಳಗೆ ಬಂದಾಗ ದಿನ್ನುವಿನ ತಂದೆ ತಾಯಿ ಗಂಭೀರ ಮುಖ -ಮುದ್ರೆ ಹೊಂದಿ ಸುಮ್ಮನೆ ಕೂತುಕೊಂಡಿದ್ದರು. ದಿನ್ನುವನ್ನು ನೋಡಿ ’ಮಿನ್ನಿಯ ಮನೆಗೆ ಬರಬೇಕಾದ ವರನ ಕುಟುಂಬ ರಸ್ತೆ ಅಪಘಾತದಲ್ಲಿ ಹಲವಾರು ಮಂದಿ ತೀರಿಕೊಂಡರು, ಹುಡುಗನೂ ಅದರಲ್ಲಿ ಸೇರಿದ್ದ’ ಅನ್ನುವ ಸುದ್ದಿ ಅರುಹಿದರು.
ದಿನ್ನುವಿಗೆ ಹೇಗೆ ಪ್ರತಿಕ್ರಯಿಸಬೇಕೆಂದು ತಿಳಿಯಲಿಲ್ಲ............................................
( ನನ್ನ ತಂಗಿ ಕಳೆದ 9 ವರ್ಷಗಳಿಂದ ಅಮೇರಿಕದಲ್ಲಿದ್ದಾಳೆ. ಅಲ್ಲೆ ಕೂಗಳತೆ ದೂರದಲ್ಲಿ ನಮ್ಮ ಕಸಿನ್ sister (cousin  ಚಿಕ್ಕಪ್ಪನ ಮಗಳು) ಕಳೆದ 6 ವರ್ಷಗಳಿಂದ ಇದ್ದದ್ದು,  ಇತ್ತೀಚಿಗೆ  ಎರಡು ಕಿಮಿ ದೂರದಲ್ಲಿರೋ mall ಒಂದರಲ್ಲಿ ಇಬ್ಬ್ಬರೂ ಸಿಕ್ಕಾಗ ತಿಳಿಯಿತಂತೆ. ಸುಮ್ಮನೆ ಅದರಿಂದ ಪ್ರೇರಿತವಾಗಿ ಬರೆದೆ ಈ ಕತೆ.)

ಮತ್ತೀಗ ನಿಜವಾಗಿ ನಡೆದ ಒಂದು ಘಟನೆ
ಅಮ್ಮ ನ ಫ್ರೆಂಡ್ ನ ಪರಿಚಯದವರ ತಂಗಿಯ ಮಗಳು. ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದಾರೆ. ಗಂಡ ಹಾಗೂ ಮಗನಿಗೆ ಒಳ್ಳೆಯ ಕೆಲ್ಸ ಇಲ್ಲ. ಹುಡುಗಿಗೆ 19 ವರ್ಷ ವಯಸ್ಸು. ಪರಿಚಯದ ಪುರೋಹಿತರು ಆ ಹುಡುಗಿಗೆ ಒಂದು ಗಂಡು ಹುಡುಕಿದ್ದರು. ಹುಡುಗ ದುಬೈನ ಆಭರಣದ ಮಳಿಗೆಯಲ್ಲಿ ಕೆಲಸಕ್ಕಿದ್ದವನು ಇತ್ತೀಚಿಗೆ ಬೆಂಗಳೂರಿನ ಪ್ರತಿಷ್ಟಿತ ವಜ್ರದ ಮಳಿಗೆಯಲ್ಲಿ ಸಿನೀಯರ್ ಸೇಲ್ಸ್ ಪರ್ಸನ್. ತಿಂಗಳಿಗೆ 20,000 ಸಾವಿರ ಸಂಬಳ. ದುಬೈನಲ್ಲಿ ಸಿಗುತ್ತಿದ್ದ ಸಂಬಳದಲ್ಲಿ ಉಳಿತಾಯ ಮಾಡಿ ಅವನು ಬೆಂಗಳೂರಿನಲ್ಲಿ ಒಂದು ಚಿಕ್ಕ flat ಖರೀದಿಸಿದ್ದಾನೆ. ಹುಡುಗನಿಗೆ ಅಪ್ಪ ಅಮ್ಮ ಇಲ್ಲ. ಇರುವ ಒಬ್ಬ ಅಕ್ಕನಿಗೆ ಮದುವೆಯಾಗಿ, ಸ್ವಲ್ಪ ಅನೂಕೂಲದಲ್ಲಿದ್ದಾರೆ. ಅವನು ಹುಡುಗಿಗಿಂತ 13 ವರ್ಷಕ್ಕೆ ದೊಡ್ಡವನು. ನೋಡಲು ಸುಮಾರಾಗಿದ್ದು, ತಲೆಯಲ್ಲಿ ಅಲ್ಲಲ್ಲಿ ಕೂದಲು ಉದುರಿವೆ. ಮತ್ತು ಹುಡುಗಿ, ಹಲ್ಲುಬ್ಬಿ ಕಣ್ಣಿಗೆ ಸೋಡಾ ಗ್ಲಾಸ್ ಬೇರೆ. ಎಂಗೇಜಮೆಂಟ ಎರಡು ತಿಂಗಳ ಹಿಂದೆ ನಡೆದಿದೆ. ಮದುವೆ ಅವರ ಕುಲದೇವರ ದೇವಸ್ಥಾನದಲ್ಲಿ - ಗೋವೆಯಲ್ಲಿ ನಡೆಸುವುದು  ಅಂತ decide ಮಾಡಲಾಗಿತ್ತು.
ಎಂಗೇಜಮೆಂಟ್ ಆದ ಮೇಲೆ ಹುಡುಗ , ಹುಡುಗಿಯ ಮನೆಯವರ ಪರವಾನಗಿ ತೆಗೆದುಕೊಂಡು ಅವಳನ್ನು ಒಂದು ರೌಂಡ್ ಹೊರಗೆ ಸುತ್ತಾಡಿಸಿಕೊಂಡು, ಪರಸ್ಪರ ಇಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ನೆವದಿಂದ, ಹುಡುಗಿಯನ್ನು ಕರೆದ. ಅವಳು ಸುತಾರಾಂ ಅವನ ಜತೆ ಹೋಗಲು ಒಪ್ಪಲಿಲ್ಲ. ಬಹುಶ: ಹುಡುಗಿಗೆ ನಾಚಿಕೆ ಇರಬಹುದೆಂದು ಸುಮ್ಮನಾದ. ಹೀಗೆ ಎರಡು ಮೂರು ಸಲ ಹುಡುಗ ಬೆಂಗಳೂರಿನಿಂದ ರಜೆ ಇದ್ದಾಗಲೆಲ್ಲ ಊರಿಗೆ ಹೋಗಿ ಆ ಹುಡುಗಿಯ ಮನೆಗೆ ಹೋಗಿ ಬರುತ್ತಿದ್ದ. ಮೊನ್ನೆ ಒಂದು ದಿನ ಹೀಗೆ ಹೋದಾಗ, ಅವಳಿಗೆ ಹಲ್ಲನ್ನು ಸರಿಪಡಿಸಲು ಹಾಗೂ ಕಣ್ಣಿಗೆ ಕಾಂಟೆಕ್ಟ್ ಲೆನ್ಸ್ ಹಾಕಿಸಿಕೊಳ್ಳಲು ದುಡ್ಡು ಕೊಟ್ಟಾಗ, ಆ ಹುಡುಗಿ ದುಡ್ಡನ್ನು ಅವನ ಮುಖಕ್ಕೆ ಎಸೆದು, ನೀನು ಮುದುಕ ನನಗೆ ನಿನ್ನ ಜತೆ ಮದುವೆ ಮಾಡಿ ಕೊಳ್ಳಲು ಇಷ್ಟವಿಲ್ಲ ಅಂದಳಂತೆ. ಅಮ್ಮ ನನಗೆ ಇದೆಲ್ಲ ಫೋನ್ ನಲ್ಲಿ ಹೇಳಿದಾಗ, ಸಧ್ಯ ಮದುವೆ ಮುಂಚೆನೆ ಹೀಗಾಯ್ತಲ್ಲ  ಒಳ್ಳೆಯದಾಯ್ತು ಅಂದೆ. ಅದಕ್ಕೆ ಅಮ್ಮ ’ಆ ಹುಡುಗಿಯ ಸೊಕ್ಕು ನೋಡು, ನೋಡಕ್ಕೆ ಒಂಚೂರು ಚೆನ್ನಾಗಿಲ್ಲ. ಆ ಹುಡುಗ ಅವಳನ್ನು ಮದುವೆಯಾಗಲು ಒಪ್ಪಿದ್ದೆ ದೊಡ್ಡ ವಿಷಯ’ ಅಂತ ಹೇಳಿದರು. ಪುರೋಹಿತರು ರಾಜಿ ಮಾಡಲು ಪ್ರಯತ್ನಿಸಿದಾಗ ಆ ಹುಡುಗಿಯ ಅಮ್ಮ ,’ ಏನು!? ನನ್ನ ಹುಡುಗಿಗೆ ಇನ್ನು 19 ವರ್ಷ ವಯಸ್ಸು, ಯಾರಾದರು ಗಂಡು ಸಿಗುತ್ತಾರೆ. ನೀವೆಲ್ಲ ಸೇರಿ ನಮ್ಮನ್ನು ತೊಂದರೆ ಕೊಟ್ಟಿರಿ ಅಂತ ಅವರ ಮೇಲೆ ಆರೋಪ ಮಾಡಿದರಂತೆ.  ಹುಡುಗ ಮಾತ್ರ ನಿಶ್ಚಿಂತೆಯಿಂದ, ’ಸಧ್ಯ ಮದುವೆ ಮುಂಚೆನೆ ಅವಳು ಹೇಳಿದ್ದು ಒಳ್ಳೆಯದಾಯ್ತು. ಇಲ್ಲದಿದ್ದರೆ ನಾನು ತುಂಬ ಕಷ್ಟ ಪಡಬೇಕಾಗುತ್ತಿತ್ತು ಅಂದ . ಎಂಗೇಜಮೆಂಟ್ ಗೆ ಹುಡುಗನು ಹುಡುಗಿಗೆ ಕೊಟ್ಟ ಬಂಗಾರದ ಉಂಗುರ, ಹಲ್ಲು ಹಾಗು ಕಣ್ಣು ಸರಿಪಡಿಸಲು ಕೊಟ್ಟ ದುಡ್ಡು ಹೀಗೆ ಎಲ್ಲವನ್ನೂ ಹುಡುಗಿಯ ಮನೆಯವರು ಹಿಂದಕ್ಕೆ ಕೊಟ್ಟಿದ್ದಾರಂತೆ
.....ನನಗಂತು ಆಗಿದ್ದು ಸರಿಯಾಗಿದೆ ಅನ್ನಿಸ್ತು. ಎಂಗೇಜಮೆಂಟ್ ಮೊದಲೆ ಇದೆಲ್ಲ ನಡೆದಿದ್ದರೆ ಆ ಖರ್ಚು ಹಾಗೂ ಮುಜುಗರ ಆಗುವುದು ಕೂಡ ಉಳಿಯುತ್ತಿತ್ತು. ಹುಡುಗ ಹುಡುಗಿಯರಿಗೆ ಇಷ್ಟವಿಲ್ಲದಿದ್ದಾಗ ಪುರೋಹಿತರು ಹಾಗೂ ಉಳಿದ ಸಂಬಂಧಿಗಳು ಹೀಗೆ ಮುಂದುವರೆಯಬಾರದಿತ್ತು....ಏನಂತೀರಾ??
:-)