Showing posts with label ಅವಿರತ ತಂಡ. Show all posts
Showing posts with label ಅವಿರತ ತಂಡ. Show all posts

September 19, 2011

ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ

ನಿನ್ನೆ ನಾವು ಡಾ. ಕೆ. ಶಿವರಾಮ ಕಾರಂತ ಕಾದಂಬರಿ ಆಧಾರಿತ ’ಬೆಟ್ಟದ ಜೀವ’ ಸಿನಿಮಾ ಪ್ರದರ್ಶನಕ್ಕೆ ಹೋಗಿದ್ವಿ. ಬೆಟ್ಟದ ತಪ್ಪಲಿನಲ್ಲಿ ವಾಸವಾಗಿದ್ದ ವೃದ್ಧ ದಂಪತಿಗಳ ಮನೆಗೆ .ದಾರಿ ತಪ್ಪಿ  ಬರುವ ಶಿವರಾಮಯ್ಯ, ಈ ದಂಪತಿಗಳೊಂದಿಗೆ ಮೂರು ದಿನ ಕಳೆಯುವ, ಅವರ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಈ ಸ್ವಾತಂತ್ರ ಚಳುವಳಿ ಹೋರಾಟಗಾರನಿಗೆ. ತೋಟನೋಡುವಾಗ ಜಾರಿ ಬಿದ್ದು ಅವನ ಕಾಲಿಗೆ ತ್ಯಾಂಪಣ್ಣನ ತೈಲ ಹಚ್ಚಿ ಕಾಲು ನೋವನ್ನು ಸರಿಮಾಡಲಾಗುತ್ತದೆ. ಆ ಪ್ರಸಂಗ ನನ್ನ  ಈ ಪೋಸ್ಟ್ ಗೆ ಪ್ರೇರಣೆ. ಚಲನಚಿತ್ರವನ್ನು ನೀವೆಲ್ಲರೂ ಖಂಡಿತ ನೋಡಲೇಬೇಕು. ಚುರುಕಾದ ಸಂಭಾಷಣೆ, ರಮ್ಯ ಮನೋಹರ ಪ್ರಕೃತಿ ದ್ರಶ್ಯ...ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ’ಬೆಟ್ಟದ ಜೀವ’. ಈ ಚಿತ್ರದ ಪ್ರದರ್ಶನ ಏರ್ಪಡಿಸಿದ ’ಅವಿರತ’ ತಂಡಕ್ಕೆ ಧನ್ಯವಾದಗಳು.
ಹಳ್ಳಿಗಳಲ್ಲಿ - ತೋಟ ಗದ್ದೆಗಳ ಕೆಲಸ ಇದ್ದ ಪ್ರತಿ ಮನೆಯಲ್ಲೂ ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಇರುವುದು ಮಾಮೂಲಿ. ತೀರ್ಥಹಳ್ಳಿಯ ನಮ್ಮ ಅಂಗಡಿಯಲ್ಲೂ ಅದನ್ನು ಮಾರಲು ಇಡುತಿದ್ದು ಪ್ರತಿ ತಿಂಗಳು ನಾವು ಈ ಎಣ್ಣೆಯನ್ನು restock ಮಾಡುವುದಿತ್ತು.
ಇತ್ತೀಚಿಗೆ ಶ್ರೀಕಾಂತ ಹರಳೀಮಠದಲ್ಲಿರುವ ಅವರ ತಮ್ಮನ ಮನೆಗೆ ಭೇಟಿಯಿತ್ತಾಗ ಅಲ್ಲಿ ಗದ್ದೆ ಉಳುತ್ತಿದ್ದ ಎತ್ತು ಕಾಲು ಜಾರಿ ಬಿದ್ದು ಏಳಲಿಕ್ಕಾಗದೆ ಇದ್ದಾಗ, ತಮ್ಮ ಕೆಲಸದ ಆಳಿನಿಂದ ತ್ಯಾಂಪಣ್ಣನ ತೈಲ ತಂದು ಆ ಎತ್ತಿನ ಕಾಲಿಗೆ ಸರಿಯಾಗಿ 10 ನಿಮಿಷ ತಿಕ್ಕಿದ ಮೇಲೆ ಎತ್ತು ಕೆಲ ಹೊತ್ತಿಗೆ ತನ್ನ ಕಾಲ ಮೇಲೆ ನಿಂತು ಹೊಲ ಉಳುವುದನ್ನು ನೋಡಿ ಶ್ರೀಕಾಂತ ಸಖತ್ impressedu. ರಸ್ತೆ ಅಗಲೀಕರಣ ನಿಮಿತ್ತ ನಮ್ಮ ತೀರ್ಥಹಳ್ಳಿಯ ಅಂಗಡಿ ಪೂರ್ತಿ ನೆಲಸಮ ಮಾಡುವ ಮುಂಚೆ ಅಲ್ಲಿರುವ  ಕೆಲವು ತ್ಯಾಂಪಣ್ಣ ಭಂಡಾರಿ ನೋವಿನ ಎಣ್ಣೆ ಬಾಟಲಿಗಳಲ್ಲಿ ಒಂದನ್ನು ಶ್ರೀಕಾಂತ ಬೆಂಗಳೂರಿಗೆ ತಂದಿದ್ದರು.ಅಪರೂಪ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಅವರ ಬಲಗಾಲು ಮಣಿಗಂಟು ನೋವು ಬಂದಾಗ ನೋವಿನ ಎಣ್ಣೆ ಹಚ್ಚುತ್ತಾರೆ.(ಹಚ್ಚುತ್ತಾರೆ ಅನ್ನುವುದಕ್ಕಿಂತ ನನ್ನಿಂದ ಹಚ್ಚಿಸಿಕೊಳ್ಳುತ್ತಾರೆ ಅನ್ನಬಹುದು. ಅದಕ್ಕೆ ಬೇರೆ ’ಹೇ, ನಿನ್ನ ಕೈ ನಲ್ಲಿ ಜಾದು ಇದೆ ಅಂತಲೋ ಅಥವಾ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ ಅಂತಲೋ ಹಾಡು ಹೇಳಿ ಪೂಸಿ ಬೇರೆ ಹೋಡಿತಾರೆ). ಮಣಿಗಂಟು ನೋವು  ನಮ್ಮ ಹಿಂದಿನ ದಿನಗಳ trekking/hiking/biking ನ ಉಡುಗೊರೆ. ನಾನು ಸ್ಕೂಲ್ ಗೆ ಹೋಗುವಾಗ ನನ್ನ ನೋಟ್ ಪುಸ್ತಕಗಳು ಕಾಟು ಚಿತ್ತು ಇಲ್ಲದೆ ನೀಟಾಗಿತ್ತು, ಮಾತ್ರವಲ್ಲ ಬೇರೆಯವರಿಗೆ ಮಾದರಿಯಾಗಲಿ ಅಂತ ನನ್ನ ನೋಟ್ ಪುಸ್ತಕವನ್ನು / ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ನೋಟಿಸ್ ಬೋರ್ಡ್ ನಲ್ಲೂ ಹಾಕುತ್ತಿದ್ದರು ಆದರೆ ನಮ್ಮ ಟ್ರೆಕ್ಕಿಂಕ್ ಮುಂತಾದ ಸಾಹಸದ ಕಾರಣ ನನ್ನ ತಲೆ ತುಂಬ ಚಿತ್ತು ಕಾಟುಗಳಿವೆ. :-)
ಐದು ಆರು ವರ್ಷಗಳಿಗೊಮ್ಮೆ ನನಗೆ ತಲೆ ನೋವು ಬರುತ್ತೆ. ಇತ್ತೀಚಿಗೆ ಒಂದು ದಿನ ತಲೆ ನೋವು ಶುರುವಾಯಿತು. ಸುಮಾರು ದಿನಗಳಾಗಿದ್ದವು ತಲೆಗೆ ಎಣ್ಣೆ ಹಚ್ಚದೆ. ಎಣ್ಣೆ cupboard ನಿಂದ ಎದುರಿಗೆ ಸಿಕ್ಕ ಬಾಟಲಿನಿಂದ ಎಣ್ಣೆ ಹಚ್ಚಿಕೊಂಡೆ...ಯಾಕೋ ಜಿಡ್ಡು ಜಿಡ್ಡಾಗಿತ್ತು. ಎಣ್ಣೆ ಹಚ್ಚಿದ ಎರಡೆ ನಿಮಿಷಕ್ಕೆ ತಲೆ ನೋವು ವಾಸಿ. ಆದರೆ ತಲೆ ಸ್ನಾನ ಮಾಡಿದ ಮೇಲೂ ತಲೆಯೆಲ್ಲ ಜಿಡ್ಡು. ಶ್ರೀಕಾಂತ ಅಕ್ಕ ತರಹೇವಾರಿ ಹೂವಿನ ಎಲೆಗಳಿಂದ ತಲೆಗೆ ಹಚ್ಚುವ ಎಣ್ಣೆ ಮಾಡುತ್ತಾರೆ. ಬಹುಶಃ ಶ್ರೀಕಾಂತ ಹತ್ತಿರ ಕಳುಹಿಸಿರಬೇಕು ಮತ್ತು ಶ್ರೀಕಾಂತ ನನಗೆ ಹೇಳಲು ಮರೆತು, ಅದನ್ನು ಎಣ್ಣೆ ಕಪಾಟಿನಲ್ಲಿ ಇಟ್ಟಿರಬೇಕು ಅಂತ ನಾನು ಅಂದಾಜಿಸಿದೆ. ಶ್ರೀಕಾಂತ ತೀರ್ಥಹಳ್ಳಿಯಿಂದ ಫೋನ್ ಮಾಡಿದಾಗ ಕೇಳಿದೆ, ಯಾವ ಎಣ್ಣೆಯದು?? ತಲೆ ನೋವು ಮಾಯ...(ಫೋನ್ ಮಾಡಿದಾಗ ಬಹುಶಃ  ಪಕ್ಕದಲ್ಲೆ ಯಾರೋ ಇದ್ದಿರಬೇಕು ಇಲ್ಲದಿದ್ದರೆ ಶ್ರೀಕಾಂತ ’ನಿನಗೆ ತೆಲೆ ನೆ ಇಲ್ಲ ತಲೆ ನೋವು ಎಲ್ಲಿಂದ’ ಅಂತ ಕೇಳೋವ್ರು.)
ಅವರು ಅಯ್ಯೋ ಮಾರಾಯ್ತಿ ನೋಡ್ಲಿಕ್ಕಿಲ್ಲವಾ ಅದು ತ್ಯಾಂಪಣ್ಣನ ನೋವಿನ ಎಣ್ಣೆ ಅಂದರು. ಗೊತ್ತಾಗಲಿಕ್ಕೆ ಅದಕ್ಕೆ ಲೇಬಲ್ ಬೇರೆ ಇರಲಿಲ್ಲ. ತಲೆ ನೋವಿನ ಜತೆ ಸ್ವಲ್ಪ ಕೂದಲು ಒಂದಿಷ್ಟು ಉದುರಿ ಹೋಗಿದೆ :-)
ಮತ್ತೆ ವಾಸನೆಯಿಂದ ಗೊತ್ತಾಗಲ್ವಾ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ರೆ ಮುಂದೆ ಓದಿ
ನಮ್ಮ ಅಡಿಗೆ ಮನೆ ಎದುರಿಗೆ ಶ್ರೀ ರಾಮ ದೇವಸ್ಥಾನ. ಭಕ್ತರು ಹೆಚ್ಚಿದ ಹಾಗೆ, ದೇವಸ್ಥಾನವೂ ಗಟ್ಟಿಯಾಗಿ ದೊಡ್ಡದಾಗಿದೆ. ನಿತ್ಯ ಹೋಮ -ಹವನ- ಭಜನೆ ಮುಂತಾದವು ನಡೆಯುತ್ತಿರುತ್ತದೆ. ನಾನು ತಲೆಗೆ ಎಣೆ ಹಚ್ಚಿದ ದಿನ ಸಂಕಷ್ಟಿ ಬೇರೆ. ಹೋಮದಲ್ಲಿ ಅಗರಬತ್ತಿಯೊಂದಿಗೆ ಅದರ ಪ್ಲಾಸ್ಟಿಕ್ ಕೂಡ ಸೇರಿ ಕೆಟ್ಟ ವಾಸನೆ. ಹೋಮ-ಅಗರಬತ್ತಿ, ಉರಿಯುವ ಎಣ್ಣೆ ವಾಸನೆ ಎಲ್ಲ ನನ್ನ ಅಡಿಗೆ ಮನೆಗೆ. ನಾನು ತಲೆಗೆ ಹಚ್ಚುವ ಎಣ್ಣೆಗಳ ಬಾಟಲಿ ಕೂಡ ಅಡಿಗೆ ಮನೆಯಲ್ಲೇ ಇವೆ. ಆದ್ದರಿಂದ ತಕ್ಷಣ ಯಾವುದರ ಸುವಾಸನೆ/ವಾಸನೆ ಇತ್ಯಾದಿ ಗೊತ್ತಾಗುವುದಿಲ್ಲ.
ಹೂಂ ಒಂದು ಸಲ ಹೋಗೆನಕಲ್ ಗೆ ಟ್ರಿಪ್ ಹೋಗಿದ್ವಿ  ಆಫಿಸ್ ಮಂದಿಯೆಲ್ಲ..ಅಲ್ಲಿ ಮೈ ಗೂ ಎಣ್ಣೆ ಹೊಟ್ಟೆಗೂ ಎಣ್ಣೆ ಹಾಕುವವರನ್ನು ನೋಡ್ದೆ.
ಇದಕ್ಕಿಂತ ಮುಂಚಿನ ಪೋಸ್ಟ್ : ’ಸಂಬಂಧಗಳು’ ಓದಿ ಮೂಡ್ ಹಾಳಾಗಿದವರಿಗೆ ಇದು ಸುಮ್ನೆ ಒಂದು ಲೈಟ್ ಪೋಸ್ಟ.

:-)