June 23, 2016

Anti climax- a kannada short story

'ಅಮ್ಮಾ ನಿನ್ನ ಆ ಜುಜುಬಿ ಕೆಲಸ ಬಿಟ್ಟು ಬಿಡು ನನ್ನ ಜತೆ ಯು ಎಸ ಗೆ ಬಾ ಅಂತ ಮಗಳ ಮಾತು ಕೇಳಿ ಸರಸಳಿಗೆ ಮೈ ಪರಚಿಕೊಳ್ಳುವಂತೆ ಆಯ್ತು. ಆಫಿಸಿಗೆ ಲೇಟ್ ಆಗುತ್ತೆ ಬೇಗ ದೋಸೆ ತಿನ್ನಲು ಬಾ ಅಂದಿದ್ದಕ್ಕೆ ಮಗಳು ವೇಣಿ ಹೀಗೆ ಮಾತಾಡಿದ್ದಳು. 

ಸರಸ ಮೌನ ತಾಳಿ ಆಫಿಸ್ ಗೆ ನಡೆದಳು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಾಗೆ ಹಿಂದಿನ ನೆನಪುಗಳೆಲ್ಲ ಫ್ಲಾಶ್ ಬ್ಯಾಕ್ ನಲ್ಲಿ ಅವಳಿಗೆ ಗೋಚರಿಸಿತು. ಕಣ್ಣು ಮುಚ್ಚಿ ತಲೆಯನ್ನು ಕಿಟಕಿಗಾನಿಸಿದಳು. 

ಆಗಿನ ಕಾಲದ ಹಾಗೆ ಸರಸ್ಳಿಗೆ ಬೇಗ ನೆ ಮದುವೆ ಮಾಡಿದರು. ಆಕೆಯದ್ದು ಪಿ ಯು ಸಿ ಮುಗಿದಿದ್ದಷ್ಟೆ. ಅವಳ ಅಪ್ಪ ನಿಗೆ ಅವಳನ್ನು ಮುಂದಕ್ಕೆ ಓದಿಸುವ ಯೋಚನೆಯಿರಲಿಲ್ಲ. ಹಾಗೇ ಈ ನೆಂಟಸ್ತನ ಕೂಡಿ ಬಂತು. ಮದುವೆಯೂ ಆಯಿತು. ಸರಸ ಹಠವಿಡಿದು ಮನೆಕೆಲಸದೊಂದಿಗೆ ಓದನ್ನು ಮುಂದುವರೆಸಿ  ಸ್ನಾತಕೋತ್ತರ ಪದವಿಯನ್ನು ಪಡೆಯಲು ಯಶಸ್ವಿಯಾದಳು. ನರಹರಿ ಒಳ್ಳೆಯವನು. ಫ್ಯಾಕ್ಟರಿ ಒಂದರಲ್ಲಿ ಸೂಪರ್ವೈಸರ್ ಕೆಲಸ. ಸಂಬಳ ತಕ್ಕಮಟ್ಟಿಗಿತ್ತು. ಆದರೆ ಕಾಯಿಲೆಯ ಮನುಷ್ಯ. ಎರಡು ದಿನ ಕೆಲಸಕ್ಕೆ ಹೋದರೆ ನಾಲ್ಕು ದಿನ ಮನೆಯಲ್ಲಿ. ಹಾಗಾಗಿ ಹಿಂದೆ ಮುಂದೆ ಆಲೋಚಿಸದೆ ಸರಸ ಬ್ಯಾಂಕ್ ಒಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾದಳು. ಮಗಳು ತ್ರಿವೇಣಿ ಹುಟ್ಟಿದ ನಾಲ್ಕು ವರ್ಷಕ್ಕೆ ನರಹರಿ ಕಾಲವಾದ . ಆಗ ಸರಸಳ ನೌಕರಿಯೇ ಅವಳಿಗೆ ಧೈರ್ಯ ತುಂಬಿದ್ದು. ಮಗಳು ಓದುವುದರಲ್ಲಿ ಅಷ್ಟು ಜಾಣೆಯಲ್ಲದಿದ್ದರೂ ಇಂಜಿನಿಯರಿಂಗ್  ಮಾಡಲೇ ಬೇಕೆಂದು ಹಠ ಹಿಡಿದಿದ್ದರಿಂದ ಬ್ಯಾಂಕ ನಲ್ಲಿ ಸಾಲ ಸೋಲ ಮಾಡಿ ಅವಳಿಗೆ ಓದಿಸಿದ್ದಳು. ಈಗ ಅವಳಿಗೆ ಹೆಸರಾಂತ ಐಟಿ ಕಂಪನೆಯೊಂದರಲ್ಲಿ ಕೆಲಸ. ಅದರ ನಿಮಿತ್ತ ಅವಳು ಯು ಎಸ ನಲ್ಲಿರೋದು. ಅಲ್ಲಿಯೇ ಅವಳ ಸಹ ಕೆಲಸಗಾರನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. ಈಗ ಅವಳು ಚೊಚ್ಚಿಲ  ಗರ್ಭಿಣಿ. ಭಾರತದ ಕಛೇರಿಯಿಂದ ಕೆಲವೊಂದು ಡಾಕ್ಯೂಮೆಂಟ್ಸ್ ಗೆಂದು ಬಂದಿದ್ದವಳು ಈ ಮಾತು ಹೇಳಿದ್ದಾಳೆ. 

ದುಡಿಯುವ ಮಗಳು ಒಂದು  ದಿನ ಕೂಡ ಅಮ್ಮ ಪಡೆದ  ಲೋನ್ ನ ವಿಷಯದ ಬಗ್ಗೆ ಮಾತಾಡಿಲ್ಲ . ಈಗ ಅವಳು ಪ್ರೀತಿಯಿಂದೇನೂ ಅವಳ ಅಮ್ಮನನ್ನು ತನ್ನ ಜೊತೆ ಇರಕ್ಕೆ ಕರೆದಿಲ್ಲ ಎಂದು ಸರಸಳಿಗೆ ಗೊತ್ತು. ಅಲ್ಲಿ ಅವಳ ಬಾಣಂತನ ಮತ್ತು ಮಗುವನ್ನು ನೋಡಿಕೊಳ್ಳಲು ಅಷ್ಟೆ ಬಾ ಎಂದಿದ್ದಾಳೆ. 

ಸರಸ  ದುಡ್ಡಿನ ಸಂಕಷ್ಟದಿಂದ  ಹಲವಾರು ಸಲ ಚಿಕ್ಕ ಪುಟ್ಟ ಆಸೆಗಳನ್ನು ಕೈ ಬಿಟ್ಟಿದ್ದಾಳೆ, ಆದರೆ ಮಗಳಿಗೆ ಏನನ್ನು ಕಡಿಮೆಯಾಗದಂತೆ ಬೆಳೆಸಿದ್ದಾಳೆ,

ಸಂಜೆ ಬಂದ ಮೇಲೆ ಆಕೆ ವೇಣಿಯನ್ನು ತರಾಟೆಗೆ ತೆಗೆದುಕೊಂಡಳು. "ಏನೇ ನನ್ನ ಕೆಲಸ ಜುಜುಬಿಯಾ? ನಿನ್ನ ಓದಿಗೆ, ನಂತರದ ಕೆಲಸಕ್ಕೆ ಈ ಜುಜುಬಿ  ಕೆಲಸದ ಸಂಬಳದಿಂದಲೇ ಸಾಧ್ಯವಾಗಿದ್ದು. ನಾನು ಯು ಎಸ ಗೆ ನಿನ್ನ ಸೇವೆ ಮಾಡಲು ಬರಲ್ಲ. ಬೇಕಾದರೆ ನಿನ್ನ ಗಂಡ ನ ಕಡೆಯವರನ್ನು ಕರೆ'
ಏನಂದಿ? ನನ್ನ ಗಂಡನ ಕಡೆಯವರಾ? ಅವರನ್ನು ಏನೆಂದು ಕೊಂಡಿದ್ದೀಯಾ ?ಅವರು ದೊಡ್ಡ ಜನ . ಅವರೆಲ್ಲ ಹಾಗೆಲ್ಲಾ ಬರಲ್ಲ. 
"ಮತ್ತು  ನಾನೇನೂ ಇಲ್ಲಿ ಬಿಟ್ಟ್ಟಿ ಕೂತಿದ್ದಿನಾ?? ಲೋನ್ ತೆಗೆಂಡಿದ್ದು ಏನು ಮಾಡೋದು? ನೀನು ಒಂದಿನನಾದ್ರೂ  ಅಮ್ಮ ಉಳಿದ ದುಡ್ಡು ಕಟ್ಟುತ್ತೀನಿ ಅಂದ್ಯಾ? ಹೋಗಲಿ ಬಿಡು ಕೆಲಸ ಬಿಟ್ರೆ ಕಾಯಂ ಆಗಿ ನನ್ನನ್ನು ಯು ಎಸ ನಲ್ಲಿಟ್ಟು ಕೋತಿಯಾ? 
ಅದಕ್ಕೆ ವೇಣಿ ಏನೂ ಉತರಿಸಲಿಲ್ಲ . ಅದರ ಬದಲು 'ನೀನು ನನಗೆ ಈಗ ಸಹಾಯ ಮಾಡದಿದ್ದರೆ ಇನ್ನೆಂದೂ ನಿನ್ನ ಮುಖ ನೋಡಲ್ಲ' ಅಂತ ಸಿಟ್ಟಿನಿಂದ ಅಬ್ಬರಿಸಿದಳು 
ಅದಕ್ಕೆ ಸರಸ 'ಹೋಗ್ , ಹೋಗೆ ನಿನ್ನನ್ನು ನಂಬಿ ಜೀವನ ಮಾಡಿದ್ರೆ ಅಷ್ಟೇ, ನನ್ನ ಕತೆ ಗೋವಿಂದ. ಇನ್ನು ಹತ್ತು ವರ್ಷ ಸರ್ವಿಸ್ ಇದೆ ನನಗೆ.   ನೀನು ನನ್ನ ಮುಖ ನೋಡೋದೇನೂ ಬೇಡ. ಆದ್ರೆ ನನ್ನ ನಂತರ ನನ್ನ ಆಸ್ತಿ ನಿನಗೆ ಒಂದು ಬಿಡಿಗಾಸು ಸಿಗಲ್ಲಾ. ಎಲ್ಲ ಅನಾಥಾಶ್ರಮಕ್ಕೆ ಬರೆದು ಕೊಡುತ್ತೇನೆ. ಅಹಂಕಾರ ನಿನಗೆ ಮಾತ್ರ ಕಟ್ಟಿಟ್ಟ ಬುತ್ತಿಯಲ್ಲ. ನನ್ನ ಮುಂದಿನ ಜೀವನ ನಾನು ಆರಾಮಾಗಿ ನಡೆಸುತ್ತೇನೆ. ನಿನಗೊಂದು ದೊಡ್ಡ ನಮಸ್ಕಾರ 'ಎಂದು ಮಾತು ಮುಗಿಸಿ, ತನ್ನ ಸಂಜೆಯ ವಾಕ್ ಗೆ ಹೊರಟು ಹೋದಳು 
:-) 


1 comment:

Radhika said...

Will daughters be so selfish? If so, I like the mother's stance :-)