December 16, 2013

ಸ್ವರೂಪ ರಾಣಿಯ ಕಥೆ

(ನಮ್ಮ ತಂದೆ ದಿನಾಂಕ 11.12.13 ರ ಮಧ್ಯಾಹ್ನ ದೈವಾಧೀನರಾದದರು. ಅವರ ಕೊನೆಯ ಕ್ಷಣಗಳಲ್ಲಿ ಅವರೊಂದಿಗಿದ್ದಿದ್ದು ಸಮಾಧಾನ ತಂದಿದೆ. ಫೋನ್ ಮೂಲಕ/ಎಸ್ ಎಮ್ ಎಸ್ ಮೂಲಕ ಸಂತಾಪ ಸೂಚಿಸಿದವರಿಗೆಲ್ಲ ಧನ್ಯವಾದಗಳು. ಯಾರ್ಯಾರಿಗೆ ತಂದೆಯವರ ದೇಹಾಂತದ ಬಗ್ಗೆ ತಿಳಿಸಬೇಕೆಂಬುದು ಲಿಸ್ಟ್ ಮಾಡುತ್ತಿದ್ದಾಗ ಸ್ವರೂಪ್ ಟೀಚರ್ ಬಗ್ಗೆ ಮಾತು ಬಂತು.)
ಆಕೆ ನನ್ನ ತಮ್ಮಂದಿರ ಗಣಿತ-ವಿಜ್ಝಾನದ ಶಿಕ್ಷಕಿ. ಅವರ ಬ್ಯಾಂಕ್ ಖಾತೆ ನನ್ನ ತಂದೆ ಕೆಲಸ ಮಾಡುವ ಬ್ಯಾಂಕ್ ನಲ್ಲಿ. ಆಗ ನನ್ನ ತಂದೆ ಬಿಹಾರದಿಂದ ಬಂದಿದ್ದಷ್ಟೆ. ತಂದೆಯ ಮೂಲಕ ಅವರ ಪರಿಚಯ ಆದಾಗ ಅವರು ತಮ್ಮಂದಿರ ಟೀಚರ್ ಕೂಡ ಅಂತ ಖುಶಿಯಾಯಿತು. ಮಕ್ಕಳಿಗೆ ಟ್ಯೂಶನ್ಸ್ ಕೊಡಲು ಒಪ್ಪಿದರು. ಅಮ್ಮನ ಬೆಸ್ಟ್ ಫ್ರೆಂಡ್ ಕೂಡ ಆಗಿಬಿಟ್ಟರು. ಶನಿವಾರ ಭಾನುವಾರ, ಅಪ್ಪನ ಹದಿನೈದುದಿನಕ್ಕೊಮ್ಮೆ ನಡೆಯುವ ಗುಂಡು ಪಾರ್ಟಿಗೆಲ್ಲ ಸ್ವರೂಪ್ ಟೀಚರ್ ಕೂಡ ನಮ್ಮೊಂದಿಗೆ ಇರುತ್ತಿದ್ದರು. ಅಮ್ಮ ಕೂಡ ಅವರನ್ನು ಸ್ವರೂಪ್ ಟೀಚರ್ ಅಂತ್ಲೆ ಕರೆಯುತ್ತಿದ್ದರು. ಅವರಿಗೆ ಹೆಚ್ಚು ಕಡಿಮೆ ನಮ್ಮಮ್ಮನ ವಯಸ್ಸು. ಅಮ್ಮನಿಗೆ ನಾವಾಗಲೇ ನಾಲ್ಕು ಜನ ಮಕ್ಕಳಾಗಿದ್ದರೆ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಮಾತಿಗೆ ಮುಂಚೆ ನಗು, ನೋಡಲು ಸುರಸುಂದರಿ, ತಿದ್ದಿತೀಡಿದಂತಹ ಕಣ್ಣು-ಮೂಗು, ದಂತದ ಮೈಬಣ್ನ, ಉದ್ದ ಜಡೆ, ಕಡೆದಿಟ್ಟಂತಹ ದೇಹಾಕೃತಿ. ಮದುವೆ ಮಾತು ಬಂದಾಗಲೆಲ್ಲ 'ನಾನು ಓದಿರುವಷ್ಟು ಓದಿದ ವರ ನಮ್ಮ ಜಾತಿಯಲ್ಲಿ ಸಿಗುವುದು ಕಷ್ಟ. ಮತ್ತೆ ಸುಮ್ಮನೆ ego ಪ್ರಾಬ್ಲಂ ಎಲ್ಲ ಬೇಡ. ಹೀಗೆ ಖುಶಿಯಾಗಿದ್ದೇನೆ' ಅಂತ ಮಾತು ಹಾರಿಸುತ್ತಿದ್ದರು. ಸ್ವರೂಪ ರಾಣಿ ಗಣಿತದ ವಿಷಯದಲ್ಲಿ ಎಮ್ ಎಸ್ಸಿ ಮಾಡಿದ ಗೋಲ್ಡ್ ಮೆಡಲಿಸ್ಟ್.  ಬೇಜಾರೆಂದರೆ ಅವರ ತಂಗಿ ತಮ್ಮಂದಿರಿಗೆ ವಿದ್ಯೆ ಹತ್ತಲಿಲ್ಲ. ಅವರ ತಂಗಿ ನನ್ನ ಕ್ಲಾಸ್. ಹತ್ತನೆಯ ತರಗತಿ ನಂತರ ಓದು ಸ್ಥಗಿತಗೊಳಿಸಿ ಟೈಲರಿಂಗ್ ಕಲೀಲಿಕ್ಕೆ ಹೋಗುತ್ತಿದ್ದಳು. ತಮ್ಮ ಯಾವುದೋ ಗರಾಜ್ ನಲ್ಲಿ ಕೆಲಸ. ತಂದೆ ಸರಕಾರಿ ಕರಕೂನ, ಅಮ್ಮ ಗೃಹಿಣಿ, ಅಲ್ಲದೇ ಮನೆಯಲ್ಲಿ  ವಯಸಾದ ಅಜ್ಜಿ. ನಾವು ಅವರ ಮನೆಗೆ ಭೆಟಿ ನೀಡಿದಾಗಲೆಲ್ಲ, ಸ್ವರೂಪ್ ಟೀಚರ್ ಗೆ ಮದುವೆಯಾಗದಿದ್ದರ ಬಗ್ಗೆ ಅವರಮ್ಮನದ್ದು ಯಾವಾಗಲೂ ಕಂಪ್ಲೈಂಟ್.
ಹೀಗೆ ಒಂದುಸಲ ಬೇರೆ ಊರಲ್ಲಿ ನಡೆದ ಶಾಲಾ-ಕಾಲೇಜು ಸಮಾವೇಶದಲ್ಲಿ ಸ್ವರೂಪ್ ಗೆ ಜೀವನ್ ಸಿಕ್ಕಿದರು. ಅವರದ್ದೆ ಜಾತಿ. ದೂರದ ಹೈದರಾಬಾದ್ ನಲ್ಲಿ ಕಾಲೇಜ್ ಲೆಕ್ಛರರ್. ತಂಗಿಯಂದಿರಂದಿಗೆಲ್ಲ ಮದುವೆ ಮಾಡಿ ಆಗಲೇ ಅವರಿಗೆ ನಲವತ್ತರ ಪ್ರಾಯ. ನಮ್ಮ ಸ್ವರೂಪ್ ಟೀಚರ್ ಗೆ 28-29. ಆದರೂ ಸೂಕ್ತ ವರ ಅಂತ ಮತ್ತು ಮನೆಯಲ್ಲಿನ ಒತ್ತಡಗಳಿಂದ ಸ್ವರೂಪ್ ಅವರನ್ನು ಮದುವೆಯಾಗಲು ಒಪ್ಪಿದರು. ಮದುವೆ ದೂರದ ಹಳ್ಳಿಯಲ್ಲಿ. ಅಪ್ಪನಿಗೆ ಹೃದಯ ಸಂಬಂಧಿ ಕಾಯಿಲೆಯ ಶಸ್ತ್ರ ಚಿಕಿತ್ಸೆ ನಡೆದಿತ್ತಷ್ಟೆ. ಆದುದರಿಂದ ನಾವು ಮದುವೆಗೆ ಹೋಗಲಾಗಲಿಲ್ಲ. ಅ ಮೇಲೆ ಅವರು ನಮ್ಮ ಜತೆ ಪತ್ರ ವ್ಯವಹಾರ ಇಟ್ಟುಕೊಂಡಿದ್ದರು.
ಅಲ್ಲಿ ಜೀವನ್ ಅವರದ್ದು ಕೂಡು ಕುಟುಂಬ. ಅವರ ಚಿಕ್ಕಪ್ಪ ದೊಡ್ಡಪ್ಪ, ಮದುವೆಯಾದವರು ಆಗದವರು ಮುಂತಾದ್ದು. ಮೊದ ಮೊದಲು ಎಲ್ಲ ಚೆನ್ನಾಗಿತ್ತು. ಆದರೆ ಸ್ವರೂಪ್ ಕೆಲಸಕ್ಕೆ ಹೋಗೋದು ಕುಟುಂಬದ ಮಹಿಳಾ ಸದಸ್ಯರಿಗೆ ಸರಿ ಬರುತ್ತಿರಲಿಲ್ಲ. ಅದೇನೂ ಗಂಡಸರ್ ಸರಿಸಮಾನ ಕೆಲ್ಸಕ್ಕೆ ಹೋಗೋದು? ಅವಳ ಗಂಡನೆನೂ ಕೈಲಾಗದವನಾ' ಅಂತೆಲ್ಲ ಕೊಂಕು ಮಾತಾಡುತ್ತಿದ್ದರಂತೆ. ಜೀವನ್ ಇದೆಲ್ಲ ಕೇಳಿಸಿಕೊಳ್ಳದವರಂತೆ ಇರುತ್ತಿದ್ದರಿಂದ ಅವರ ಪಿರಿಪಿರಿಗೆ ಸೊಪ್ಪು ಹಾಕಿದಂತಾಯಿತು. ಇವಳಿಗೆ ಕಿರುಕುಳ ನೀಡಲಾರಂಭಿಸಿದರು. ಸ್ವರೂಪ್ ಟೀಚರ್ ಶಾಲೆಯಿಂದ ಮನೆ ಬರುವ ತನಕ ಅವರು ಬೆಳಿಗ್ಗೆ ತಿಂದಿದ ತಟ್ಟೆ ಲೋಟಗಳು, ಮನೆ ಮಂದಿಯ ಬಟ್ಟೆಗಳು ಅವಳಿಗೋಸ್ಕರ ಕಾಯಲಾರಂಭಿಸಿದವು. ಸುಸ್ತಾಗಿ ಸಂಜೆ ಮನೆಗೆ ಬಂದ ನಂತರ ರಾತ್ರಿ 11 ರ ವರೆಗೆ ಕೆಲಸ. ಗಂಡನಿಗೆ ಏನಾದರೂ ಹೇಳಿದರೆ 'ಅದೆಲ್ಲ ನಿಮ್ಮ ಹೆಂಗಸರ ವಿಷಯ, ನೀನೇ ಏನಾದರೂ ಒಪ್ಪಂದ ಮಾಡಿಕೋ' ಅಂತ ಹೇಳಿ ಕೈತೊಳೆದುಕೊಳ್ಳುತ್ತಿದ. ಅಮೇಲೆ ಸ್ವರೂಪ್ ಟೀಚರ್ ಒಂದಾದ ಮೇಲೆ ಒಂದು ಇಬ್ಬರು ಹೆಣ್ಣು ಮಕ್ಕಳು ಬೇಗ ಬೇಗ ಹುಟ್ಟಿದರು. ಗಂಡು ಮಗು ಹುಟ್ಟಲಿಲ್ಲ ಅಂತ ಅವಳಿಗೆ ಇನ್ನಷ್ಟು ತೊಂದರೆ ಕೊಡುವುದರಲ್ಲಿ ಜೀವನ್ ಕೂಡ ಸೇರಿಕೊಂಡರು.  ಮತ್ತೆ ಇಬ್ಬರು ಹೆಣ್ಣುಮಕ್ಕಳಿಗೋಸ್ಕರ ದುಡ್ಡು ಸಂಪಾದಿಸಿಡಲು  ಅಂತ ಮನೆಯಲ್ಲಿನ ಒಂದು ಕೋಣೆಯಲ್ಲಿ ಸ್ವರೂಪ್ ಟೀಚರ್ ಸಂಜೆ ಶಾಲೆಯಿಂದ ಬಂದ ನಂತರ ಕಡ್ಡಾಯ ಮನೆ ಪಾಠಮಾಡುವಲ್ಲಿ ಒತ್ತಡ ಶುರು ಆಯಿತು. ಅಷ್ಟೆ ಅಲ್ಲ ಸ್ವರೂಪ್ ಟೀಚರ್ ಶಾಲೆಗೆ ಹೋದಾಗ ಮಕ್ಕಳಿಗೆ ಇಲ್ಲ ಸಲ್ಲದ್ದನ್ನು ಹೇಳಿ ಕೊಡಲು ಪ್ರಾರಂಭಿಸಿದರಂತೆ. ಅಷ್ಟರಲ್ಲಿ ಸ್ವರೂಪ್ ಟೀಚರ್ ಗೆ ಗಂಡು ಮಗ ಹುಟ್ಟಿದ. ಮನೆಯಲ್ಲಿ ಆಗ ಆಕೆಗೆ ಮಹಾರಾಣಿಯ ಸತ್ಕಾರ. ಇನ್ನೇನೂ ಎಲ್ಲ ಸರಿ ಹೋಯಿತು ಅನ್ನುವಷ್ಟರಲ್ಲಿ ಮಗನಿಗೆ ಬುದ್ದಿ ಮಾಂದ್ಯತೆ ಇರುವುದು ಗೋಚರವಾಯಿತು.ಮನೆಯಲ್ಲಿ ಪುನಃ ಯತಾಪ್ರಕಾರ ಕಿರುಕುಳಗಳು ಆರಂಭವಾದವು. ಶಾಲೆಯಲ್ಲಿ ವೇತನ ಪರಿಷ್ಕರಣೆಯಾಗಿ ಸ್ವಲ್ಪ ಹೆಚ್ಚು ಸಂಪಾದನೆ ಬರಲು ತೊಡಗಿದಾಗ ಸ್ವರೂಪ ಟೀಚರ್ ಮಗನ ದೇಖರೇಖಿಗೆ ಒಂದು ಹುಡುಗಿಯನ್ನು ತಂದು ಇಟ್ಟಳು.
ನಮ್ಮ ಅಮ್ಮನನ್ನು ಭೇಟಿ ಯಾಗಲು ಬಂದಾಗ ಎಷ್ಟು ಓದಿ , ಕೆಲಸದಲ್ಲಿದ್ದು ಏನು ಉಪಯೋಗ ಅಂತ ಬೇಸರಿಸಿಕೊಂಡರು. ಈಗ ಅವರು ಗಂಡನ ಸಂಪರ್ಕದಲ್ಲಿಲ್ಲ. ಮಗ ತನ್ನ 15 ನೇ ವರ್ಷದಲ್ಲಿ ತೀರಿಕೊಂಡ. ಇಬ್ಬರೂ ಹೆಣ್ಣು ಮಕ್ಕಳು ಒಳ್ಳೆಯ ಕೆಲಸದಲ್ಲಿದ್ದಾರೆ. ಸ್ವರೂಪ್ ಟೀಚರ್ ರಿಟೈರ್ ಆಗಿದ್ದಾರೆ. ವಾರಕ್ಕೆ ಮೂರು ದಿನ ಅನಾಥಾಶ್ರಮದ ಮಕ್ಕಳಿಗೆ ಫ್ರೀ ಆಗಿ ಪಾಠ ಹೇಳಿಕೊಡುತ್ತಾರೆ. ಮೊದಲಿನಹಾಗೆ ನಗುವುದನ್ನು ಸಂಪೂರ್ಣ ಮರೆತಿದ್ದಾರೆ.
(ಯಾಕೋ ಬೇಜಾರಾಗಿ ಸುಮ್ಮನೆ ಕೂತಿದ್ದೆ. ನನ್ನ ತಮ್ಮ ನಿನ್ನ ಬ್ಲಾಗ್ ನಾದ್ರು ಅಪ್ ಡೇಟ್ ಮಾಡು ಅಂದ. ಅವನೇನೂ ನನ್ನ ಬ್ಲಾಗ್ ಓದಲ್ಲ. ಅವನು ಹೇಳಿದ್ದಕ್ಕೆ ಕಷ್ಟಪಟ್ಟು ಬರೆಯಲು ಪ್ರಯ್ತ್ನಿಸಿದ್ದೇನೆ. ತಪ್ಪುಗಳೇನಾದರು ಇದ್ದಲ್ಲಿ ಬೆಂಗಳೂರಿಗೆ ಬಂದ ಮೇಲೆ ಸರಿಪಡಿಸುತ್ತೇನೆ)
:-(

5 comments:

Swarna said...

ನಿಮ್ಮ ತಂದೆಗೆ ನಮನ.
ಸ್ವರೂಪ್ ಟೀಚರ್ ಬಗ್ಗೆ ಓದಿ ಬೇಸರ ವಾಯಿತು. ಕೆಲವರಿಗೆಕೋ ಬದುಕು ತುಂಬಾ ಕಡಿಮೆ ಕೊಡುತ್ತದೆ
ನನ್ನ ತಮ್ಮನ ಹೆಸರು ಸ್ವರೂಪ್

ವನಿತಾ / Vanitha said...

Very sad to here that your Dad passed away. May you and your family get the strength to handle the situation in the best way possible.Take care.
Vanitha.

ಸಿಂಧು sindhu said...

akka...

sad :(

appa mele santoshavaagi gundu haakta irtaare andkoLLOna.

really sad about swaroopa teacher..
i have no words to console mysefl about her plight. !

rgds
sin

Srikanth Manjunath said...

ಕೆಲವೊಮ್ಮೆ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರ ಜೀವನದ ಆಧಾರವನ್ನೇ ಅಲ್ಲಾಡಿಸಿಬಿಡುತ್ತದೆ. ಮೇಡಂ ಅವರ ಜೀವನದಲ್ಲಿ ನಡೆದ ಘಟನೆಗಳು ಮನಸ್ಸಿಗೆ ಬೇಸರ ತರಿಸುತ್ತದೆ. ತಪ್ಪು ಯಾರದು ಸರಿ ಯಾರದು ಎನ್ನುವ ವಿಷಯದಲ್ಲಿ ಗೊಂದಲವಿದ್ದರು ಪೀಳಿಗೆಯ ಸಂತಸವೇ ಉಡುಗಿಸಿಬಿಡಬಹುದಾದ ನಿರ್ಧಾರದ ತಾರ್ಕಿಕ ಸತ್ಯ ಗೋಚರಿಸುವುದು ತಪ್ಪಾಗಿಯೇ ಅಲ್ಲವೇ.

ಹಾದಿಗೆ ಬೆಳಕ ನೀಡುವ ಪಿತ ಬೆಳಕ ದಾರಿ ಹಿಡಿದದ್ದು ನೋವಿನ ಸಂಗತಿ. ಸತ್ಯಲೋಕದ ಅನ್ವೇಷಣೆಗೆ ಹೋಗಿರುವ ಆ ಮಹನೀಯರ ಆತ್ಮದ ಆಶೀರ್ವಾದ ಭುವಿಯಲ್ಲಿರುವ ಅವರ ಪೀಳಿಗೆಯ ಎಲ್ಲರಿಗೂ ಸಿಗಲಿ.

nenapina sanchy inda said...

ಧನ್ಯವಾದ ಸ್ಪಂಧಿಸಿದವರಿಗೆಲ್ಲ
ಮಾಲತಿ ಎಸ್