December 14, 2011

ಆ ದಿನ ನಡೆದದ್ದಾದರೂ ಏನು?- ಸಂಚಿಯಿಂದ ತೆಗೆದ ನೆನಪು -8

ಒಳ್ಳೆ ಕ್ರೈಮ್ ಸ್ಟೋರಿ ಟೈಟಲ್ ತರಹ ಇದೆ ಅಲ್ಲವ??
ಆ ತರಹ ಏನಿಲ್ಲ ಮುಂದೆ ಓದಿ....
ಮೂರು ನಾಲ್ಕು ತಿಂಗಳಿಗೊಂದು ಸಲ ನಾನು, ನಾವು ಮಲಗುವ ಮಂಚದ ಕೆಳಗೆಲ್ಲ ಕ್ಲೀನಿಂಗ್ ನಡೆಸ್ತೇನೆ. ಇತ್ತೀಚಿಗೆ 6 ತಿಂಗಳ ಮೇಲಾಗಿತ್ತು ಕ್ಲೀನ್ ಮಾಡ್ದೆ. ಮನೆಹತ್ತಿರದಲ್ಲೆಲ್ಲ ಎರಡು ಮೂರು ಮನೆಗಳನ್ನು extend, ಇನ್ನೊಂದು ಮಹಡಿ ಅಂತೆಲ್ಲ construction ಕೆಲಸ ಭರದಿಂದ ನಡೀತ ಇದೆ. ಸದ್ದಂತೂ ದಿನ ಪೂರ್ತಿ ಇದ್ದೆ ಇರುತ್ತೆ ಅದರ ಜತೆ ಜೆಲ್ಲಿ ಕಲ್ಲು, ಇಟ್ಟಿಗೆ, ಸಿಮೆಂಟು ಅಂತ ಸಿಕ್ಕಾಪಟ್ಟೆ ಧೂಳು ಬೇರೆ.
ಮನೆಯ ಎಲ್ಲ ಕೆಲಸಗಳಾದ ಮೇಲೆ ನಾನು ಮಂಚದ ಕೆಳಗಡೆ ಕ್ಲೀನಿಂಗ್ ಶುರು ಮಾಡೋದು.ನನ್ನ ಇಷ್ಟದ ಹಾಡನ್ನು ಕಂಪ್ಯೂಟರ್ ಅಥವಾ ಪುಟ್ಟ ರೇಡಿಯೋ volume ದೊಡ್ಡದಾಗಿಟ್ಟು ನನ್ನ ಕ್ಲೀನಿಂಗ್ ಶುರು. ಮಂಚದ ಕೆಳಗೆ ಮಹಾ ಎಷ್ಟು ಜಾಗ ಇರತ್ತೆ, ಅದಕ್ಕೆಲ್ಲ ಇಷ್ಟು preparation ಬೇಕಾ ಅಂತ ನಿಮಗೆ ಅನಿಸ ಬಹುದು. ಆದರೆ ಮಂಚದ ಕೆಳಗೆ ಒಂದು ದೊಡ್ಡ ಬ್ಯಾಗ್ ಇದೆ. ಅದರಲ್ಲಿ ತುಂಬ ಹೊಸ ಹಳೆ ಫೋಟೊಗಳ ಆಲ್ಬಂ ಇದೆ. ಅದನ್ನು ತೆರೆದು ಕೂತರೆ ನನಗೆ ಈ ಕಡೆಯ ಪರಿವೆಯೆ ಇರಲ್ಲ.
ಸರಿ ನಿನ್ನೆ ಗೀತಾ ದತ್ ಹಾಡು system ನಲ್ಲಿ ದೊಡ್ಡದಾಗಿ ಹಾಕಿ, ಬ್ಯಾಗ ತೆರೆದೆ. ಮೊದಲ ಸಿಕ್ಕ ಆಲ್ಬಂ ನನ್ನ ಎರಡನೆ ತಮ್ಮನ ಚೌಲದ್ದು. ನಮ್ಮಕುಲದೇವಸ್ಥಾನ  ಗೋವಾ ದಲ್ಲಿನ ಮಹಾಲಸಾ ದೇವಸ್ಥಾನದಲ್ಲಿ ನಡೆದದ್ದು. ಅದರಲ್ಲಿದ್ದ ಅಜ್ಜನ ಫೋಟೊ ನೋಡಿ ಅವರನ್ನು ತುಂಬ ಮಿಸ್ ಮಾಡ್ದೆ.

ನನ್ನ ತಮ್ಮ (ಕೃಷ್ಣ) ಬೇಗ ಹುಟ್ಟಿದ. premature birth. 7 ತಿಂಗಳಿಗೆ ಹುಟ್ಟಿದ್ದ. ನನ್ನ ಮೊದಲನೆ ಹುಟ್ಟು ಹಬ್ಬದ ಮೂರು ತಿಂಗಳ ನಂತರ. ಸಣ್ಣಕ್ಕೆ, ಆಗ ತಾನೆ ಹುಟ್ಟಿದ ಇಲಿ ಮರಿ ಹೇಗಿರುತ್ತೋ ಹಾಗೆ ಇದ್ದ. ಅವನನ್ನು ಹತ್ತಿಯಲ್ಲಿ ಸುತ್ತಿ ಇಡುತ್ತಿದ್ದರು. incubator ನಲ್ಲಿ ಇಡಲಾಗದಷ್ಟು weak ಇದ್ದ. ನರ್ಸ್ ಅವನ ಬೆನ್ನಿಗೆ ಸರಿ ಪೆಟ್ಟು ಕೊಡುತ್ತಿದ್ದರು. ಅವನು ಅತ್ತಷ್ಟೂ ಅವನ lungs ಗಟ್ಟಿಯಾಗಿ ಅವನು ಸರಿಯಾಗಿ ಉಸಿರಾಡಲು ಅನೂಕೂಲ ಅಂತ. ಹಾಲು ಚೀಪಲು ಶಕ್ತಿ ಇರಲಿಲ್ಲ. ಹತ್ತಿಯನ್ನು ಬತ್ತಿಯ ತರಹ ಮಾಡಿ ಅಮ್ಮನ ಹಾಲಿನಲ್ಲಿ ಅದ್ದಿ, ಆ ಹತ್ತಿಯನ್ನು ಅವನ ಬಾಯಲ್ಲಿ ಹಿಂಡುತ್ತಿದ್ದರು.
ಅಜ್ಜ ಅಪ್ಪನನ್ನು ಬೈದಿದ್ದು ಇನ್ನು ನೆನಪಿದೆ. ತಮ್ಮ ಹುಟ್ಟಿದ ತಕ್ಷಣ, ಅವನ ಸ್ಥಿತಿ ನೋಡಿ, (ಯಾಕೆಂದರೆ ಡಾಕ್ಟರ್ ಏನೂ hopes ಕೊಟ್ಟಿರಲಿಲ್ಲ) ಕೆಲಸದವನನ್ನು ಕಳುಹಿಸಿದ್ದರು ಅಪ್ಪನನ್ನು ಬ್ಯಾಂಕ್ ನಿಂದ ಕರೆದು ತರಲು. ಅಪ್ಪ ಅಂತೂ ಗಂಡು ಮಗ ಅಂತ ಕೇಳಿ, ಉಳಿದದ್ದು ಏನು ಕೇಳಿಸಿಕೊಳ್ಳದೆ, ಬ್ಯಾಂಕ್ ಪಕ್ಕದಲ್ಲಿದ ಮಿಠಾಯಿ ಅಂಗಡಿಯಿಂದ ಸ್ವೀಟ್ಸ್ ತೆಗೊಂಡು ಆಫಿಸ್ ಸ್ಟಾಫ್ ಗೆಲ್ಲ ಹಂಚಿ ಆರಾಮಾಗೇ ಬಂದರು. ಅಜ್ಜ, ’ಮಗುವಿನ ಸ್ಥಿತಿ ಹೀಗಿದೆ. ನಿನಗ್ಯಾರು ಮಿಠಾಯಿ ಹಂಚಿ ಬರಲು ಹೇಳಿದ್ದು’? ಅಂತ ಬೈದಿದ್ದರು.
ಡಾಕ್ಟರ್ ಮಗುವನ್ನು ಮನೆಗೆ ಕರೆದುಕೊಂಡು ಹೋಗಬಹುದೆಂದು ಹೇಳಿದ ಮೇಲೆ, ಅಮ್ಮನಿಗೆ ಇಬ್ಬರು ಪುಟ್ಟ ಮಕ್ಕಳನ್ನು ನೋಡಲು ತೊಂದರೆಯಾಗುತ್ತದಂತ, ಅಜ್ಜ ನನ್ನನ್ನು ಅವರ ಬಳಿಗೆ ಕರೆದುಕೊಂಡು ಹೋದರು. ಅಜ್ಜನಿಗೆ ನಮ್ಮಮ್ಮ ಒಬ್ಬಳೆ ಮಗಳು.ಹೀಗೆ ನನಗೆ 14 ವರ್ಷ ಆಗುವ ತನಕ ಅಜ್ಜನ ಬಳಿಯಲ್ಲೇ ಇದ್ದೆ. ಅಜ್ಜ ನನಗೆ ಬೆಳಿಗ್ಗೆ ಬೇಗ ಎಬ್ಬಿಸಿ ಸಂಸ್ಕೃತ ಓದಲು ಹೇಳುತ್ತಿದ್ದರು. ಉಚ್ಛಾರ ಸರಿಯಾಗುತ್ತದೆಂದು, ಅಥವ ಶ್ಲೋಕಗಳನ್ನು ಹೇಳುತ್ತ, ತಟ್ಟಂತ mental ಲೆಕ್ಕಗಳನ್ನು ಮಾಡುತ್ತ, ಬಳಿಯಲ್ಲೇ ಇದ್ದ ಸಮುದ್ರದ ದಂಡೆ ಮೇಲೆ ವಾಕ್ ಹೋಗ್ತಿದ್ವಿ. ಇಲ್ಲದಿದ್ದರೆ ಸಂಜೆ ಅಜ್ಜನ ಕಾರಿನಲ್ಲಿ ಒಂದು ಸುತ್ತು ತಿರುಗಿ ಬರುತ್ತಿದ್ವಿ. ಅಜ್ಜ ಇಂಜಿನಿಯರ್ ಆಗಿದ್ದು, ಹೈ ವೆ ರಸ್ತೆಗಳ ನಿರ್ಮಾಣದಲ್ಲಿ ತೊಡಗಿದ್ರು. ಬೇರೆ ಊರಿಗೆಲ್ಲ ಹೋದಾಗ ನನಗೋಸ್ಕರ ಪುಸ್ತಕಗಳನ್ನೆಲ್ಲ ತರಿಸಿ ಕೊಡುತ್ತಿದ್ದರು. ನನಗೆ ಪುಸ್ತ್ಕಕ ಪ್ರೀತಿ ಬರಲು ಅವರೇ ಕಾರಣರು. ಅದಲ್ಲದೆ ಅವರಿಗೆ ಹಸ್ತಸಾಮುದ್ರಿಕೆ ಕೂಡ ಗೊತ್ತಿತ್ತು. ಅವರ ಜತೆ ಕಳೆದ ಸಮಯ ನನಗೆ ಅತ್ಯಂತ ಪ್ರಿಯ. ಎಷ್ಟೆಲ್ಲ ವಿಷಯಗಳನ್ನು ಚರ್ಚಿಸುತ್ತ ಇದ್ದೆವು. ನಾನೊಬ್ಬಳೆ ಯುವರಾಣಿ ತರಹ ಬೆಳೆದೆ.ಮನೆಯಲ್ಲಿ ತುಂಬ ಆಳು ಕಾಳುಗಳಿದ್ರು.  ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು.
ನಾನಿ (ಅಜ್ಜಿ) ಗೆ ಕ್ಯಾನ್ಸರ್ ಆದ ಮೇಲೆ ನನಗೆ ಪುನ: ಅಮ್ಮನ ಬಳಿಗೆ ಕಳುಹಿಸಿ ಕೊಟ್ರು. ಅದಾದ ಮೂರು ವರ್ಷಕ್ಕೆ ನನ್ನ ಮದುವೆ ಯಾಯ್ತು. ಮದುವೆಯಾಗಿ ಸ್ವಲ್ಪ ಸಮಯ ತೀರ್ಥಹಳ್ಳಿ, ಆ ಮೇಲೆ ಕೊಪ್ಪ, ಆ ಮೇಲೆ ನನ್ನ ಡಿಗ್ರೀ ಪರೀಕ್ಷೆಗೆ ಮುಂಬಯಿ ಅಂತ ಹೇಳಿ ನಾನು ಒಂದು ಕಡೆ ಯಂತು ಇರುತ್ತಿರಲಿಲ್ಲ. ಮಾಲವಿಕ ಹುಟ್ಟಿದ ಮೇಲೆ, ಅಂದರೆ ನನ್ನ ಮದುವೆಯಾಗಿ 3 ವರ್ಷಗಳ ನಂತರ ಅಜ್ಜ ನನ್ನನ್ನು ನೋಡಲು ಕೊಪ್ಪಕ್ಕೆ ಬಂದಿದ್ದರು. ನಾನಿ, ನನ್ನ ಮದುವೆಗೆ 6 ತಿಂಗಳು ಮುಂಚೆ ತೀರಿಕೊಂಡರು. ನನ್ನ ಮದುವೆ ನೋಡುವ ಆಸೆ ಬಹಳ ಇತ್ತು ಅವರಿಗೆ.
ಸರಿ ಅಜ್ಜ ಬರುತ್ತ್ತಾರೆ ಅಂತ ನನಗೆ ಸಂಭ್ರಮವೋ ಸಂಭ್ರಮ. ನಮ್ಮ ಅಜ್ಜ ರಸ್ತೆ  ನಿರ್ಮಾಣ ಕಾಮಗಾರಿ ನಿಮಿತ್ತ ಭಾರತದ ಉದ್ದಗಲಗಳೆಲ್ಲ ತಿರುಗಿದ್ದರು. ಬಂದ ಕೂಡಲೆ ಅವರು ಹೇಳಿದ್ದು ’ಮಾಲತಿ, ಕೊಪ್ಪದಿಂದ ಎನ್ ಆರ್ ಪುರಕ್ಕೆ ಹೋಗುವ ರಸ್ತೆ ಇದೆಯಲ್ಲ ನಾನೆ ನಿಂತು ಕಟ್ಟಿಸಿದ್ದು. ಈಗಲೂ ಎಷ್ಟು ಚೆನ್ನಾಗಿದೆ ನೋಡು ಅಂದಾಗ ಎಷ್ಟೊಂದು ಹೆಮ್ಮೆ ಪಟ್ಟೆ. ಆ ಮೇಲೆ ಆ ರಸ್ತೆ ಮೇಲೆ ನಡೆಯುವಾಗಲೆಲ್ಲ (ಈಗಲೂ) ಆ ರಸ್ತೆ ಮೇಲೆ ವಿಶೇಷ ಪ್ರೇಮ. ರಸ್ತೆ ಮೇಲೆ ನಿಂತು ಚಪ್ಪಲಿ ತೆಗೆದು ಪಕ್ಕದಲ್ಲಿಟ್ಟು, ರಸ್ತೆಯನ್ನು ಪ್ರೀತಿಯಿಂದ ನೇವರಿಸುತ್ತಿದ್ದೆ. ನನ್ನ ತಮ್ಮ ಬಂದಾಗ ನಾನು ಹಾಗೆ ಮಾಡುವುದನ್ನು ನೋಡಿ, ಮಲಗಿ ನಮಸ್ಕಾರ ಮಾಡಿ ಒಂದು ಚುಮ್ಮ (ಮುತ್ತು) ಕೊಟ್ಟು ಬಿಡು ಅಂತಿದ್ದ,  ಸಿಟ್ಟಿನಿಂದ.:-)
ಅಜ್ಜನಿಗೆ low  ಬಿ ಪಿ ಇತ್ತು. ನಮ್ಮಲ್ಲಿ ಬಂದು ಎರಡು ವಾರ ಆಗಿರಬೇಕು ಒಂದು ದಿನ ಸಡನ್ ಆಗಿ hiccups - ಬಿಕ್ಕಳಿಕೆ ಶುರು ಆಗಿ ಬಿಡ್ತು. ಆ ದಿನ ಅಜ್ಜನಿಗೆ ಇಷ್ಟ ಅಂತ ಹುರುಳಿ ಸಾರು ಮಾಡಿದ್ದೆ. ತುಂಬಾ ರುಚಿಯಾಗಿದೆ ಅಂತ ಸ್ವಲ್ಪ ಹೆಚ್ಚೆ ಊಟ ಮಾಡಿದ್ದರು. ನಮ್ಮಲ್ಲಿ ಒಂದು ನಂಬಿಕೆಯಿದೆ. ಊಟ ರುಚಿಯಾಗಿ ಹೊಟ್ಟೆಗೆ ಹಿತವಾಗಿದ್ದರೆ ಬಿಕ್ಕಳಿಕೆ ಬರುತ್ತೆ ಅಂತ. ಏನು ಮಾಡಿದ್ರು ನಿಲ್ಲಲಿಲ್ಲ. ಸಕ್ಕರೆ ತಿಂದ್ರು, ನೀರು ಕುಡಿದ್ರು, ನಾನು ಹೇಳಿದ ಹಾಗೆ ಉಸಿರು ಬಿಗಿ ಹಿಡಿದ್ರು. ರಾತ್ರಿ, ಬೆಳಿಗ್ಗೆ ಒಂದೆ ಸಮ...ನನಗಂತು ಹೆದರಿಕೆ ಶುರು ಆಯಿತು. ಕೊಪ್ಪದಂತ ಚಿಕ್ಕ ಊರಿನಲ್ಲಿ ಡಾಕ್ಟರ್ ಎಲ್ಲಿ ಹುಡುಕೋದು?? ಶ್ರೀಕಾಂತ್ ಗೆ ಅಂತು ಹಳ್ಳಿಗಳ ತಿರುಗಾಟ. ನನಗೋ ಕನ್ನಡ ಗೊತ್ತಿರಲಿಲ್ಲ. ಸದ್ಯ ಆ ದಿನ ಶ್ರೀಕಾಂತ ಬೇಗ ಬಂದಿದ್ದರು. ಯಾರನ್ನೋ ಸಂಪರ್ಕಿಸಿ ಡಾ. ರಾಮಚಂದ್ರ ಅವರನ್ನು ಬೈಕ್ ನಲ್ಲಿ ಕರೆದುಕೊಂಡು ಬಂದ್ರು. ಅವರು ಬಂದು ಅಜ್ಜನನ್ನು ನೋಡಿ ಯಾವುದೋ ಮಾತ್ರೆ ತರಲಿಕ್ಕೆ ಹೇಳಿದರು. ಅದು ಸಿಗಲಿಲ್ಲ, ಹಾಗಾಗಿ ಅವರ ಶಾಪ್ ಗೆ ಕರೆದುಕೊಂಡು ಅವರ ಬಳಿಯಿದ್ದ ಔಷಧಿ ಕಳುಹಿಸಿಕೊಟ್ಟರು. ಸುಮಾರು ರಾತ್ರಿ ಕಳೆದ ಮೇಲೆ ಔಷಧದ ಪ್ರಭಾವದಿಂದ ಬಿಕ್ಕಳಿಕೆ ಕ್ರಮೇಣ ನಿಂತು ಹೋಯಿತು. ನಾವೆಲ್ಲ ಮಲಗಿದ್ದೆವು. ಸರೀ ರಾತ್ರಿ ’ಧಡಲ್’ ಸದ್ದಿಗೆ ನನಗೆ ಶ್ರೀಕಾಂತ ಗೆ ಎಚ್ಚರ ಆಗಿ ಹೊರಗೆ ಬಂದು ನೋಡಿದ್ರೆ ಅಜ್ಜ ಬಿದ್ದು ಬಿಟ್ಟಿದ್ದರು. ಬಹುಶ: toilet ಹೋಗಲು ಎದ್ದು, ತಲೆ ತಿರುಗಿ, ಬಿದ್ದ ರಭಸಕ್ಕೆ ಡೈನಿಂಗ್ ಟೇಬಲ್ ತಾಗಿದ್ದಿರಬೇಕು. ಮುಖದ ಮೇಲ್ ನೀರು ಚಿಮಿಕಿಸಿ ಅವರನ್ನು ಎಬ್ಬಿಸಿದೆವು. ಎಚ್ಚರ ಏನೋ ಆಯ್ತು, ಆದರೆ ಅವರಿಗೆ ಯಾವುದೇ ನೆನಪು ಇರಲಿಲ್ಲ. ನೀನು ಯಾರು ಅಂತ ಕೇಳಿದರು, ನಾನು ಅಜ್ಜ, ಮಾಲತಿ’ ಅಂದಿದಕ್ಕೆ ನೀನು ನನ್ನ ಮಾಲತಿಯಲ್ಲ’ ಅಂದು ಬಿಟ್ರು. ಅವರನ್ನು ಎಬ್ಬಿಸಿ ಅವರ ರೂಮ ಗೆ ಕರೆದುಕೊಂಡು ಮಲಗಿಸಿದ್ದೆವು. ದಿನೆ ದಿನೆ ಅವರ ಪರಿಸ್ಥಿತಿ ಕೆಡುತ್ತ ಹೋಯಿತು. ಮಲಗಿದ ಕಡೆ ನೆ ಮಲ ಮೂತ್ರ ವಿಸರ್ಜಿಸುತ್ತಿದ್ದರು. ಮಳೆಗಾಲ ಬೇರೆ. ಮಾಲವಿಕ ಸಣ್ಣವಳು. ಶ್ರೀಕಾಂತ ಎಷ್ಟು ದಿನ ರಜೆ ಹಾಕುವುದು? ತಮ್ಮನಿಗೆ ಆಗಷ್ಟೆ ಪರೀಕ್ಷೆ ಮುಗಿದಿದ್ದು ತಿಳಿದು ಬಂತು. ಬರುತ್ತಿಯಾ?? ಅಜ್ಜನನ್ನು ನೋಡಿಕೊಳ್ಳೋದು ನನಗೆ ಕಷ್ಟ ಆಗ್ತದೆ. ನಮ್ಮ ಅಜ್ಜ ಅಜಾನುಭಾಹು, ನಾನೋ ಕಡ್ಡಿ ತರಹ. ಅವರ ರೂಮ್ ಎಲ್ಲ ಕ್ಲೀನ ಮಾಡ್ತಿದ್ದೆ. ಆದರೆ ಅವರನ್ನು ಎತ್ತುವುದು ಅದೆಲ್ಲ ನನ್ನ ಒಬ್ಬಳಿಂದ ಆಗ್ತಿರಲಿಲ್ಲ. ಅಷ್ಟು ಮಾತ್ರವಲ್ಲ ಅಜ್ಜ 2 ನಂಬರ್ ಮಾಡಿ ಕೋಣೆಯ ಗೋಡೆಗೆ ಮೂಲೆಗೆ ಎಲ್ಲ ಹಚ್ಚುವುದು,ಬಟ್ಟೆ ಬಿಚ್ಚಿ ಬೆತ್ತಲಾಗಿ  ಕೂರುವುದು ಇಂತಹುದೆಲ್ಲ ಮಾಡ್ತಿದ್ದರು, ಚಿಕ್ಕ ಮಕ್ಕಳು ರಚ್ಚೆ ಹಿಡಿದ ಹಾಗೆ. ನಾನು ಅವರನ್ನು ಪುಟ್ಟ ಮಗುವಿನ ಹಾಗೆ ನೋಡಿಕೊಂಡಿದ್ದು ಅತ್ಯಂತ ಸಮಾಧಾನ ನನಗೆ. ಅಮ್ಮ ಈಗಲೂ ಹೇಳುತ್ತಾರೆ, ’ನೀನಾಗಿದ್ದಕ್ಕೆ ಮಾಡಿದೆ, ನನ್ನ ಕೈ ನಲ್ಲಿ ಆಗ್ತಿರಲಿಲ್ಲ’ ಅಂತ. ತಮ್ಮ ಬಂದ ಮೇಲೆ ನನಗೆ ಸ್ವಲ್ಪ ಧೈರ್ಯ ಬಂತು. ಡಾಕ್ಟರ್ ದಿನಾ ಬಂದು ನೋಡಿ ಹೋಗುತ್ತಿದ್ದರು.
ನನಗಂತು ತುಂಬ ಸುಸ್ತಾಗಿರುತ್ತಿತ್ತು. ಮಾಲವಿಕನನ್ನು ಮುದ್ದು ಮಾಡಲು ಸಮಯ ಸಿಗುತ್ತಿರಲಿಲ್ಲ.ಹೀಗೆ ಎರಡು ತಿಂಗಳು ಕಳೆದು ಹೋಯಿತು. ಅಜ್ಜ ಸರಿ ಹೋಗುವ ಲಕ್ಷಣ ಒಂದೂ ಕಾಣಲಿಲ್ಲ.
ಆ ದಿನ ಶನಿವಾರ ಮಧ್ಯಾಹ್ನ. ಮನೆಯಲ್ಲಿ ಮೂರು ಹಾವು. ಒಂದು ಮಾಲವಿಕ ನ walker ಬಳಿ ಇತ್ತು. ಅಂಬೆಗಾಲಿಟ್ಟುಕೊಂಡು ಓಡಾಡುವ ವಯಸ್ಸು. ಅಜ್ಜನ ಕೋಣೆಗೆ ಅವಳು ಹೋಗದಿರಲಿ ಅಂತ ಪಾಪ ಅವಳಿಗೆ ಯಾವಾಗಲೂ walker ನಲ್ಲಿ ಹಾಕಿ ಅದನ್ನು ಅಡಿಗೆ ಮನೆ ಬಾಗಿಲಿಗೆ ಕಟ್ಟಿರುತ್ತಿದ್ದೆ. ಶ್ರೀಕಾಂತ ಮತ್ತು ತಮ್ಮ ಪೇಟೆಗೆ ಹೊರಟಿದ್ದರು. ಅವರು ಬೈಕ್ ತೆಗೆದುಕೊಂಡ ಹೋದ ಮೇಲೆ ನಾನು ಗೇಟ್ ಹಾಕಿಕೊಂಡು ಮನೆಯೊಳಗೆ ಬರಬೇಕಾದರೆ ಹಾವು ಸರ ಸರನೆ ಮಾಲವಿಕ ಬಳಿ ಹೋಯ್ತು. ಅವಳಿಗೊ ಹರಿದಾಡುವ ಪ್ರಾಣಿಗಳ ಮೇಲೆ ವಿಶೇಷ ಆಸಕ್ತಿ. ಅದನ್ನು ಕೈ ಮುಷ್ಠಿಯಲ್ಲಿ ಹಿಡಿದು, ಬಾಯಲ್ಲಿ ಹಾಕುವ ಉಮ್ಮೆದು. ಹಾವು ಮನೆಯ ನೆಲದ ಟೈಲ್ ಮೇಲೆ ಜಾರುತ್ತ ಹರಿದಾಡುತ್ತಿತ್ತು. ಮಾಲು ಸುಮ್ಮನಿರು ಅಂದೆ. ಅವಳಿಗೆ  ಅರ್ಥ ಆದ ಹಾಗೆ ಪಾಪ ಸುಮ್ಮನೆ walker ನಲ್ಲಿ ಕುಳಿತಿದ್ದಳು. ನಾನು ಬಟ್ಟೆ ಒಣಗಿಸುವ ಕೋಲಿನಿಂದ ಆ ಹಾವನ್ನು, ಹಿಂದಿನ ಬಾಗಿಲಿನಿಂದ ಹೊರಹಾಕಿದೆ. ಕಪ್ಪು ಬಣ್ಣದ non ವಿಷಕಾರಿ ಹಾವು. ಹಾವು ಹರಿದು ಮುಂದೆ ಹೋಗಿದ್ದನ್ನು ನೋಡಿ ಹಿಂದಿನ ಬಾಗಿಲು ಹಾಕಿ ಒಳ ಬರಬೇಕಿದ್ದರೆ ಗೋದಿ ಬಣ್ಣದ ನಾಗರ ಹಾವು ಗೋಡೆ ಹತ್ತುತ್ತಿರುವುದನ್ನು ನೋಡಿದೆ. ಏನೂ ಮಾಡಬೇಕೆಂದು ತೋಚಲಿಲ್ಲ ಅದು ಮಾಡಿನ ಎಡೆಯಲ್ಲಿ ಹೋಗಿ ಕುಳಿತುಕೊಂಡಿತು. ನಾನು ಅದನ್ನು ನೋಡುತ್ತ ಕೂತುಕೊಂಡೆ. ಒಳಗೆ ಅಜ್ಜ ಎರಡಕ್ಕೆ ಮಾಡಿಕೊಂಡು ಗಲಾಟೆ ಮಾಡುತ್ತ ಇದ್ದರು. ಪಕ್ಕದ ಮನೆಯಲ್ಲಿರುವ ಮಾಲತಿ (ಅವರೂ ಮಾಲತಿ) ಯವರಿಗೆ ಕಿಟಕಿಯಿಂದ ಕೂಗಿ ಕರೆದೆ. ಅವರು ಹಾವನ್ನು ನೋಡಿ ಹೆದರಿ ಅಕ್ಕ ಪಕ್ಕದವರನ್ನೆಲ್ಲ ಕರೆದುಕೊಂಡು ಬಂದರು. ಅವರೆಲ್ಲರ ಗಲಾಟೆ ನೋಡಿ ಹಾವು ಒಂದೆರಡು ಸಲ ಬುಸುಗುಟ್ಟಿ, ಹೆದರಿ ಇನ್ನಷ್ಟು, ಮಾಡು ಮತ್ತು ತೊಲೆಗಳಲ್ಲಿ ಸಿಕ್ಕಿ ಹಾಕಿ ಕೊಂಡಿತು. ಬಂದವರದೆಲ್ಲ ತರ ತರದ ಸಲಹೆ. ಅಂತೂ ಹೊರಗೆ ಹೋಗಿದ್ದ ಶ್ರೀಕಾಂತ ಮತ್ತು ತಮ್ಮ ಬಂದರು. ನಾನು ಒಳಗೆ ಹೋಗಿ ಅಜ್ಜನ ರೂಮ್ ಕ್ಲೀನ್ ಮಾಡಿ ಸ್ನಾನ ಮಾಡಿ ಬಂದೆ. ಇಷ್ಟೆಲ್ಲ ನಡೆದು ಆಗಲೆ ಸಂಜೆ ಯಾಗುತ್ತ ಬಂದಿತ್ತು. ಮಾಲವಿಕ ನಿಗೆ ಊಟ ಮಾಡಿಸುತ್ತ ನೋಡಿದ್ರೆ ಯಾಕೋ ಅವಳ ಮೈ ಬಿಸಿಯಾಗಿದೆ ಅನ್ನಿಸಿ, thermometer  ಅವಳ ಕುಂಕಳದಲ್ಲಿ ಹಾಕಿ ಸುಮ್ಮನೆ ಕಿಟಕಿಯಿಂದ ಹೊರ ನೋಡ್ತಾ ಇದ್ದರೆ ಇನ್ನೊಂದು ಹಾವು ತಲೆ ಒಳಗೆ ಹಾಕಿಕೊಂಡು ಒಳ ಬರಲು ನೋಡುತ್ತ ಇತ್ತು. ಬೇಗ ಎದ್ದು ಅದನ್ನು ಓಡಿಸಿ ಕಿಟಕಿ ಬಾಗಿಲು ಹಾಕಿದೆ. ಇಲ್ಲಿ ಉಳಿದ ಜನ ನಾಗರ ಹಾವನ್ನು ಓಡಿಸುವ ಹುನ್ನಾರದಲ್ಲೆ ಇದ್ರು. ಬಂದವರಿಗೆಲ್ಲ ಹೊರಗೆ ಕಳುಹಿಸಿ, ಶ್ರೀಕಾಂತ ಮತ್ತು ತಮ್ಮನಿಗೆ ಬಲವಂತ ವಾಗಿ ಊಟಕ್ಕೆ ಕೂರಿಸಿ, ನಾನು ಹಾವನ್ನು ನೋಡುತ್ತ ಕೂತೆ :-). ಯಾರದ್ದೋ  ಉಪಾಯ ಅಂತ ಶ್ರೀಕಾಂತ ಮನೆಯ ಮೂಲೆ ಮೂಲೆಯಲ್ಲಿ ಹಿಂಗಿನ ತುಂಡನ್ನು ಇಟ್ಟಿದ್ದರು ಮನೆ ತುಂಬ ಹಿಂಗಿನ ವಾಸನೆ, ವಾಕರಿಕೆ ಬರುವಷ್ಟು. ಅದಾದ ಮೇಲೆ ಸುಮಾರು ದಿನ ನಾನು ಹಿಂಗನ್ನು ತಿನ್ನಲಿಲ್ಲ. ಹರಿಹರಪುರದ ಮಠದಿಂದ ಒಳ್ಳೆ quality ಹಿಂಗನ್ನು ಶ್ರೀಕಾಂತ ತರುತ್ತಿದ್ದರು. ಸಾರಿಗೆ, ತೊವ್ವೆಗೆ ಬಳಸಿದರೆ ಗಮ್ಮೆನ್ನುವ ಪರಿಮಳ :-)
ಅವರು ಒಳಗೆ ಊಟಮಾಡುತ್ತಿರುವಾಗ ನನಗೊಂದು ಉಪಾಯ ಹೊಳೀತು. ನನ್ನ ಬಟ್ಟೆ ಒಣಗಿಸುವ ಕೋಲು ಸಾಕಷ್ಟು ದೊಡ್ಡದಿತ್ತು. ಅದನ್ನು ಮಾಡಿಗೆ ಸಿಕ್ಕಿಸಿ , ಇನ್ನೊಂದು ತುದಿಯನ್ನು ಕಿಟಕಿಯ ಹೊರಗೆ ಬರುವ ಹಾಗೆ ನಿಲ್ಲಿಸಿದೆ. ಜನರ ಗಲಾಟೆ ಇಲ್ಲದಿದ್ದುದರಿಂದ ಹಾವು ನಿಧಾನವಾಗಿ ಮಿಸುಕಾಡಲು ಶುರು ಮಾಡಿತ್ತು. ಸಧ್ಯಕ್ಕೆ ಕೆಳ ಬರುವ ವಿಚಾರ ಏನೂ ಮಾಡಿದ ಹಾಗೆ ಕಾಣಲಿಲ್ಲ. ಶ್ರೀಕಾಂತ ಗೆ ತಮ್ಮನಿಗೆ ಒಳಗೆ ಮಲಗಲು ಹೇಳಿದೆ. ಹಾವು ಹೋಗುವ ತನಕ ನಾನು ಕಾಯ್ದಿರುತ್ತೇನೆ ಅಂದೆ. ಮಧ್ಯ ರಾತ್ರಿ ನಂತರ ಹಾವು ನಿಧಾನವಾಗಿ ಕೆಳಗೆ ಸರಿದು ಹೋಯಿತು. ನಾನು ಕಿಟಕಿ ಬಾಗಿಲು ಮುಚ್ಚಿ , ಮಲಗಿದೆ. ಒಳ್ಳೆ adventure.
ಮರುದಿನ ತುಂಬ ಸುಸ್ತು.ನಿಧಾನವಾಗಿ ಮನೆಕೆಲಸಗಲನ್ನೆಲ್ಲ ಮುಗಿಸಿದೆ. ಸಂಜೆ ನಾಲ್ಕು ಗಂಟೆಗೆ ಶ್ರೀಕಾಂತ ಮತ್ತು ಪಾಂಡು, ನನ್ನ ತಮ್ಮ, ಪುನ: ಹೊರಗೆ ಹೋಗಿದ್ರು. ಅಜ್ಜ ಮತ್ತು ಮಾಲವಿಕ ಮಲಗಿದ್ರು. ನಾನು ಮನೆ ಹೊರಗೆ ಮೆಟ್ಟಿಲ ಮೇಲೆ ಸುಮ್ಮನೆ ಮಂಕಾಗಿ ಕೂತಿದ್ದೆ. ಕುಂಕುಮ ವಿಭೂತಿ ಎಲ್ಲ ಹಚ್ಚಿದ ಒಬ್ಬ ವಯಸ್ಸಾದ ವ್ಯಕ್ತಿ ಗೇಟ್ ಬಳಿ ನಿಂತ್ರು. ನಾನು ಅವರನ್ನು ಮಾತನಾಡಿಸಲಿಲ್ಲ, ಸುಮ್ಮನೆ ಮುಂದೆ ಹೋಗಬಹುದೆಂದು. ಅವರೆ ಮಾತು ಶುರು ಮಾಡಿದರು ’ನಿನ್ನ ಮನೆಯಲ್ಲಿ ಯಾರಿಗೋ ಹುಷಾರಿಲ್ಲವಲ್ಲ?? ತಗೊ ಈ ಕುಂಕುಮ ಅವರಿಗೆ ಹಚ್ಚು. ನನಗೊತ್ತು ನಿನಗೆ ಇದರಲ್ಲಿ ನಂಬಿಕೆಯಿಲ. ಹೋಗಿ ಹಚ್ಚು ಒಮ್ಮೆ ಅಂದರು. ಇದೊಳ್ಳೆ ಅಜ್ಜನ ಕಾಟ ಅಂತ ಗೇಟ್ ಬಳಿ ಹೋಗಿ ಅವರು ಕೊಟ್ಟ ಕುಂಕುಮದ ಪೊಟ್ಟಣ ತೆಗೆದುಕೊಂಡೆ. ಒಳಗೆ ಹೋಗಿ ಪರ್ಸ್ ನಿಂದ ಏನಾದರೂ ದುಡ್ಡು ಕೊಡುವ ಅಂತ ಹೊರಗೆ ಬಂದ್ರೆ ಆ ಆಸಾಮಿ ನಾಪತ್ತೆ. 
ಅಷ್ಟರಲಿ ಅಜ್ಜ ’ಮಾಲತಮ್ಮ’ ಕಾಪಿ ಮಾಡಿ ಕೊಡು ಅಂತ ಗಲಾಟೆ ಶುರು ಮಾಡಿದರು. ಅವರಿಗೆ ಕಾಫಿ ಮಾಡಿಕೊಟ್ಟು, ನಾನು ಅವರ ಬಳಿ ಸುಮ್ಮನೆ ಮಾತಾಡ್ತಾ ಇದ್ದೆ. ಅವರಿಗೆ ಪ್ರಶ್ನೆಗಳನ್ನು ಹಾಕುತ್ತಿದೆ, ಏನಾದರೂ ನೆನಪು ಬರುತ್ತ ಅಂತ. sudden ಆಗಿ ಆ ಅಜ್ಜ ಕೊಟ್ಟ ಕುಂಕುಮದ ಪೊಟ್ಟಣ ನೆನಪಿಗೆ ಬಂತು. ಅಜ್ಜನತ್ರ ತಮಾಷೆ ಮಾಡ್ತಾ ಹಚ್ಚಲಾ? ಅಂತ ಕೇಳಿದೆ. ಅವರು ತಮ್ಮಷ್ಟಕ್ಕೆ ಏನೋ ಮಾತನಾಡುತ್ತ ಇದ್ದರು. ನಾನು ಹೋಗಿ ಅವರ ಹಣೆಗೆ ದುಂಡಗೆ ಕುಂಕುಮ ಹಚ್ಚಿದೆ. ಎರಡೆ ನಿಮಿಷ. ಅಜ್ಜ ಹುಷಾರ್ ಆದ್ರು ಅಂದ್ರೆ ನಂಬುತ್ತೀರಾ?? ’ಅರೇ’ ಏನಾಯಿತು? ನಾನ್ಯಾಕೆ ಹಿಗಿದ್ದೀನಿ ಅಂತ ಅಜ್ಜ ಮುಜುಗರ ಪಟ್ಟರು. ನಾನಂತು ಖುಶಿಯಿಂದ ಶ್ರೀಕಾಂತ ಮತ್ತು ಪಾಂಡು ಬರುವುದನ್ನು ಕಾಯುತ್ತ ಇದ್ದೆ. ಅವರಿಗೆ ನಡೆದದ್ದನ್ನೆಲ್ಲ ಹೇಳಿದೆ. ಅವರು ನಂಬಲಿಕ್ಕು ಅಲ್ಲ ಬಿಡಲಿಕ್ಕೂ ಅಲ್ಲ ಅನ್ನುವ state ನಲ್ಲಿದ್ದರು, but ಎರಡು ತಿಂಗಳಿನಿಂದ ಕಾಯಿಲೆಬಿದ್ದ, ಅಜ್ಜ ಹುಷಾರಗಿದ್ದು ಸಿನಿಮಾದಲ್ಲಿ ತೋರಿಸುತ್ತಾರಲ್ಲವಾ ಹಾಗೇನೆ... miraculously ಸರಿಹೊಂದಿದ್ದರು. ಅದಾದ ಮೂರು ನಾಲ್ಕು ದಿನದ ಮೇಲೆ Taxi ಮಾಡಿ ಶ್ರೀಕಾಂತ ಹಾಗೂ ತಮ್ಮ, ಅಜ್ಜನನ್ನು, ಅವರ ಇಷ್ಟದಂತೆ ನಾನಿಯ ತವರು ಮನೆಗೆ ಬಿಟ್ಟು ಬಂದರು.
ಹೇಂಗೆ?? ಏನಿದ್ದಿರಬಹುದು ಆ ಕುಂಕುಮದಲ್ಲಿ??
ಹೀಗೆ ಕ್ಲೀನ ಮಾಡ್ತ ಸಿಕ್ಕಿದ ಒಂದು ಫೋಟೊನಿಂದ ಎಷ್ಟೆಲ್ಲ ನೆನಪು??
:-)

11 comments:

ಮನದಾಳದಿಂದ............ said...

ಸವಿ ಸವಿ ನೆನನಪು..............
ಸಾವಿರ ನೆನಪು................

ಕೇವಲ ಕುಂಕುಮ ಹಚ್ಚಿದ್ದಕ್ಕೆ ಅಜ್ಜನಿಗೆ ಗುಣವಾಯ್ತು ಅಂದ್ರೆ ನಂಬಲು ಆಗದ ಸತ್ಯ ಅಲ್ವಾ?

ಮನದಾಳದಿಂದ............ said...

ಹ್ಞಾಂ.........!
ಅಂದಹಾಗೆ ಮೊನ್ನೆ ಊರಿಗೆ ಹೋಗಿದ್ದಾಗ ತೀರ್ಥಹಳ್ಳಿ ನೋಡಿ ಬೇಸರವಾಯ್ತು, ರಸ್ತೆ ಅಗಲೀಕರಣದ ನೆಪದಲ್ಲಿ ಸಂಪೂರ್ಣ ತೀರ್ಥಹಳ್ಳಿಯ ನಕ್ಷೆಯೇ ಬದಲಾಗಿದೆ. ರಸ್ತೆಯ ಅಕ್ಕಪಕ್ಕದ ಎಲ್ಲಾ ಮನೆ ಅಂಗಡಿಗಳನ್ನು ಒಡೆದು ಹಾಕಿದ್ದಾರೆ. ಪ್ರಸಿದ್ಧ ಮಾರಿಕಾಂಬ ದೇವಾಲಯವೂ ಕೂಡಾ ಇರುವುದೋ ಇಲ್ಲವೋ ಗೊತ್ತಿಲ್ಲ :(
ಮಲೆನಾಡ ಶೈಲಿಯ ಮನೆಗಳನ್ನು ಹೊಂದಿದ್ದ ತೀರ್ಥಹಳ್ಳಿ ಪೇಟೆ ಈಗ ಬರಿ ನೆನಪು ಮಾತ್ರ:(

nenapina sanchy inda said...

@ Praveen!!
Sad alwaa??
namma mane circle hattiraddu.mukkaalu bhaaga hOgiddarinda plus haLe mane bhaara taDkoLLala anta poorthi nela sama maaDtaa iddeevi
hEgiddeeri?? sumaaru dinagaLaaytallvaa?
:-)
ms

ಸಿಂಧು sindhu said...

ಮಾಲ್ತಕ್ಕಾ,
ವಾಆಆಆಆಆಆಆಆಆಆವ್ ಅನ್ನೋದು ಬಿಟ್ಟು ಮತ್ತೇನೂ ಹೇಳೋಕ್ಕೆ ತೋಚ್ತಾ ಇಲ್ಲ. !!!
ನಿಮ್ಮ ನೆನಪಿನ ಸಂಚಿ "ಮರಿಗೆಗಿಂತ" ಆಳವಾಗಿ ಇರೋ ಥರ ಕಾಣಿಸ್ತಾ ಇದೆ. :) (ಮರಿಗೆ ಅಂದ್ರೆ ಗೊತ್ತಿರುತ್ತೆ ಅಂದ್ಕೊಂಡಿದೀನಿ. ಮರದಲ್ಲಿ ಮಾಡಿದ ದೊಡ್ಡದಾದ ಸ್ಟೋರೇಜ್ ಪೆಟ್ಟಿಗೆ ಅದು)
ಸೂಪರ್ ನೆನಪು. ಅಜ್ಜನ ಮುದ್ದಿಗೆ ಸಿಕ್ಕ ಮೊಮ್ಮಗಳ ಭಾಗ್ಯ ನನಗೂ ಗೊತ್ತು. ಎಲ್ಲರಿಗೂ ಇಲ್ಲ ಅದು.
ನೆನಪುಗಳ ಮಾತು ಮಧುರ!

ಪ್ರೀತಿಯಿಂದ,ಸಿಂಧು

nenapina sanchy inda said...

priya Sindhu!!
nanna barahaginta nimma comment sakhattaagiratte.
tumbaaaaaaaaaaaaaa thanks
:-)
malathi S

ದಿವ್ಯಾ ಮಲ್ಯ ಕಾಮತ್ said...

Oh My God!! Just cant believe!!
Well narrated as always :-)

Anonymous said...

Nenapugalu madura Malthi adre ajjana ghatane nijakku atyashcharya

Veda

Radhika said...

Unbelievable!

nenapina sanchy inda said...

@ Divya Mallya Kamath, Veda and Radhika
It one those cases where one exclaims 'strange but true' Srikanth mattu tamma sakhsiyaagiddaare antle dhairyadinda post maaDiddu
:-)
thank you Odi pratikriyisiddakke
malathi S

Swarna said...

ಚೆನ್ನಾಗಿದೆ ಮೇಡಂ
ನಂಬಕ್ಕೆ ಆಗಲ್ಲ ಅಲ್ಲ ?
ನಿಮ್ಮ ಬಾಲ್ಯವನ್ನ ಸುಂದರಗೊಳಿಸಿದ ನಿಮ್ಮ ಅಜ್ಜನ ಸೇವೆ ಮಾಡಿದ
ತೃಪ್ತಿ ನಿಮಗೆ.
ಮಂಚದ ತಳ ವನ್ನ ಆಗಾಗ ಕ್ಲೀನ್ ಮಾಡುತ್ತಿರಿ :)
ಸ್ವರ್ಣ

nenapina sanchy inda said...

@ Swarna!!
:-)
thanks!!