(Note: First time wrote a story, and also Tried to write it without using English words)
ಹೆರಳನ್ನು ಹಾಕ್ತಾ ಕನ್ನಡಿಯಲ್ಲಿ ನೋಡ್ತಾ ಇದ್ರೂ, ರತ್ನಳ ಮನಸ್ಸು ತನ್ನ ರೂಪವನ್ನು ನೋಡ್ತಾ ಇರಲಿಲ್ಲ, ಮತ್ತೇನನ್ನೋ ಧೇನಿಸ್ತಾ ಇತ್ತು. ನಾಡಿದ್ದಿಗೆ ಮದುವೆಯಾಗಿ ಐದನೇ ವರ್ಷಕ್ಕೆ ಕಾಲಿಡ್ತಾರೆ ರತ್ನಾ ಮತ್ತು ಮುಕುಂದ ಕಾಳೆ. ಈ ವರ್ಷನಾದ್ರು ಮಕ್ಕಳಾಗದಂತೆ, ಹಾಕಿಸಿ ಕೊಂಡಿರುವ ಕಾಪರ್-ಟಿ ತೆಗೆದುಹಾಕಬೇಕು. ತನಗೀಗ ೨೧ ವರ್ಷ ವಯಸ್ಸು. ಕೂಡಿಟ್ಟ ದುಡ್ದು ಕಾಸೂ ಇದೆ. ಈ ಬಗ್ಗೆ ಮುಕುಂದನಿಗೇನೂ ಗೊತ್ತಿಲ್ಲ. ಇಲ್ಲಿಯವರೆಗೆ ಅವನಾಯಿತು, ಅವನ ಫ್ಯಾಕ್ಟರಿ ಕೆಲಸ, ಭಾನುವಾರದ ಬೈಠಕ್, ಇವೆಷ್ಟೆ ಅವನ ಆಸಕ್ತಿಗಳು. ರತ್ನಳಿಗೇನು ಇದರಿಂದ ತೊಂದರೆ ಅಥವಾ ಬೇಸರ ಇಲ್ಲ.
ಹೆರಳನ್ನು ಹಾಕ್ತಾ ಕನ್ನಡಿಯಲ್ಲಿ ನೋಡ್ತಾ ಇದ್ರೂ, ರತ್ನಳ ಮನಸ್ಸು ತನ್ನ ರೂಪವನ್ನು ನೋಡ್ತಾ ಇರಲಿಲ್ಲ, ಮತ್ತೇನನ್ನೋ ಧೇನಿಸ್ತಾ ಇತ್ತು. ನಾಡಿದ್ದಿಗೆ ಮದುವೆಯಾಗಿ ಐದನೇ ವರ್ಷಕ್ಕೆ ಕಾಲಿಡ್ತಾರೆ ರತ್ನಾ ಮತ್ತು ಮುಕುಂದ ಕಾಳೆ. ಈ ವರ್ಷನಾದ್ರು ಮಕ್ಕಳಾಗದಂತೆ, ಹಾಕಿಸಿ ಕೊಂಡಿರುವ ಕಾಪರ್-ಟಿ ತೆಗೆದುಹಾಕಬೇಕು. ತನಗೀಗ ೨೧ ವರ್ಷ ವಯಸ್ಸು. ಕೂಡಿಟ್ಟ ದುಡ್ದು ಕಾಸೂ ಇದೆ. ಈ ಬಗ್ಗೆ ಮುಕುಂದನಿಗೇನೂ ಗೊತ್ತಿಲ್ಲ. ಇಲ್ಲಿಯವರೆಗೆ ಅವನಾಯಿತು, ಅವನ ಫ್ಯಾಕ್ಟರಿ ಕೆಲಸ, ಭಾನುವಾರದ ಬೈಠಕ್, ಇವೆಷ್ಟೆ ಅವನ ಆಸಕ್ತಿಗಳು. ರತ್ನಳಿಗೇನು ಇದರಿಂದ ತೊಂದರೆ ಅಥವಾ ಬೇಸರ ಇಲ್ಲ.
ಅವಳ ತಿಳಿವಳಿಕೆ ಪ್ರಕಾರ ರಸಿಕತೆ, ಪ್ರೇಮ ಎಲ್ಲ ಸಿನಿಮಾ ಗಳಲ್ಲಿ ಮಾತ್ರ. ರತ್ನಾ ಹುಟ್ಟಿದ್ದು ರತ್ನಾಗಿರಿ ಬಳಿಯ ಹಳ್ಳಿ ಪರಿಸರದಲ್ಲಿ. ತಂದೆ ತಮ್ಮಂದಿರೆಲ್ಲ ಬೇಸಾಯ ಮಾಡಿ ಜೀವನ ನಡೆಸುವವರು. ಸಾಕಷ್ಟು ಅನುಕೂಲವಂತಿದ್ದರೂ ಜೀವನ ಶೈಲಿಯಲ್ಲಿ ಥಳುಕು ಬಳುಕಿಲ್ಲ. ರತ್ನಾಳ ಓದು ಏಳನೇ ಇಯತ್ತಿನ ತನಕ. ಮೈ ನೆರೆದ ಮೇಲೆ ಅದಕ್ಕೆ ತಿಲಾಂಜಲಿ. ಹಾಗಂತ ಮನೆಯಲ್ಲಿ ಸುಮ್ಮನೆ ಕೂಡುವಂತಿಲ್ಲ. ಹಳ್ಳಿ ಮನೆಯಲ್ಲಿ ಕೆಲಸ ಹೇರಳ. ಮುಗಿಯಿತು ಅಂತ ಹೇಳುವಂತೆ ಇಲ್ಲ. ಬಾವಿಯಿಂದ ನೀರು ತಂದು ಮನೆ ಅಡಿಗೆಗೆ, ನೀರುಮನೆಗೆ ಹಾಕುವುದು, ಅಂಗಳ ಗುಡಿಸಿ, ಗಿಡ-ಗಂಟಿಗಳನ್ನೆಲಾ ಚೊಕ್ಕವಾಗಿರುಸುವುದು, ಮರದಿಂದ ಹೂ ಬಿಡಿಸಿ ಮಾಲೆ ಹೆಣೆಯುವುದು. ಅಷ್ಟೆ ಅಲ್ಲ, ಅಮ್ಮ ತಿಂಗಳಿನ ಹೊಟ್ಟೆ ನೋವಿಂದ ನರಳುವಾಗ, ಭಾಕ್ರಿ ತಟ್ಟಿ, ಪಲ್ಯ ಮಾಡಿ, ಟೋಕ್ರಿಯಲ್ಲಿ ತೆಗೊಂಡು, ಅಪ್ಪ, ಅಣ್ಣಂದಿರಿಗೆ ತಲುಪಿಸುವ ಕೆಲಸವನ್ನೂ ಮಾಡಬೇಕು. ಬೆಳಿಗ್ಗೆ ಹೊತ್ತು ಮೂಡುವ ಮುಂಚೆ ಎದ್ದು, ದನದ ಕೊಟ್ಟಿಗೆ ಸ್ವಚ್ಚ ಮಾಡಿ, ಸೆಗಣಿಯನ್ನು ಗೋಬರ್ ಗ್ಯಾಸ್ ತೊಟ್ಟಿಗೆ ಹಾಕುವುದು, ಹಾಲು ಕರೆದು ಮೊದಲಿಗೆ ಎಲ್ಲರಿಗೂ ಒಂದೊಂದು ಕಪ್ಪ ಚಹಾ ಆದಮೇಲೆ ರತ್ನ ಮತ್ತು ಅವಳ ಆಯಿ, ಬಹಿರ್ದೆಶೆಗೆ ದೂರದ ಹಾಡಿಗೆ. ಅಲ್ಲಿಂದ ಬಂದು ಸ್ನಾನ, ಪೂಜೆ ಮುಗಿಸಿ ಆ ದಿನದ ಕೆಲಸಕ್ಕೆ ಶುರು.
ರತ್ನಳು ಮಾಡುವ ಮೊದಲ ಕೆಲಸ ಮೊಸರನ್ನು ಕಡೆದು ಮಜ್ಜಿಗೆ ಮಾಡುವುದು. ಬೆಣ್ಣೆ ತೆಗದಿಟ್ಟು, ಮಜ್ಜಿಗೆಗೆ ಇನ್ನಷ್ಟು ನೀರು ಸೇರಿಸಿ ಇಡುವುದು. ರತ್ನಳ ಅಪ್ಪ ಬೆಳಿಗ್ಗೆ ಭಾಕ್ರಿಯ ಜತೆಗೆ ಮಜ್ಜಿಗೆ ಆಗಬೇಕು. ಅಮ್ಮ ಭಾಕ್ರಿ ತಟ್ಟಲು ಕುಳಿತಳಂದ್ರೆ ಸುಮಾರು ಒಂದುವರೆ ತಾಸು ಅದೇ ಕೆಲಸ. ಬೆಳಿಗ್ಗೆ ಬಿಸಿ ಬಿಸಿ ಭಾಕ್ರಿ ತಿಂದ್ರೆ, ಮಧ್ಯಾನಕ್ಕೆ ಗದ್ದೆಯ ಬದಿ ಅವೇ ತಣ್ಣಗಾದ ಬಾಕ್ರಿ,ಏನಾದ್ರೊಂದು ಪಲ್ಯ, ಕತ್ತರಿಸಿದ ಹಸಿ ನೀರುಳ್ಳಿ ಮತ್ತು ಹಸಿಮೆಣಸಿನ ಕಾಯಿ, ನೀರು, ಮತ್ತಷ್ಟು ಮಜ್ಜಿಗೆ. ಅಪರೂಪಕ್ಕೆ ನೆಂಟರು-ಇಷ್ಟರು ಬಂದಾಗ ಅಲೂ-ಪೋಹಾ ಸಮಾರಾಧನೆ ಮತ್ತು ಪೂರಣ್ ಪೋಳಿ.
ಮಧ್ಯಾನ್ಹ ತಾಯಿ ಒಂದು ಗಳಿಗೆ ಮಲಗಿರ್ತಾರೆ. ಆಗ ರತ್ನ ಅಕ್ಕ ಪಕ್ಕದ ಮಕ್ಕಳನ್ನೊಡಗೂಡಿ ಕೆರೆಯ ಬಳಿ ಹೋಗಿ ಬಟ್ಟೆ ಒಗೆದು ಬರ್ತಾಳೆ. ಅಲ್ಲೆ ಒಣಗಿಸಿ ಬರುವಾಗ ಸಂಜೆಯಾಗಿರ್ತದೆ. ಸ್ವಲ್ಪ ಕಸೂತಿ, ಕೆಲವೊಮ್ಮೆ ಪಕ್ಕದ ಮನೆಯ ಮೇಷ್ಟ್ರ ಹೆಂಡತಿ ಬಳಿ ಎರವಳು ಪಡೆದ ಪುಸ್ತಕದ ಮೇಲೆ ಕಣ್ಣು ಹಾಯಿಸ್ತಾಳೆ. ಯಾರಿಗೂ ಗೊತ್ತಾಗದ ಹಾಗೆ ಇಂಗ್ಲೀಷು ಕಲಿತಿದ್ದಾಳೆ.
ಸಂಜೆ ಗಿಡಗಳಿಗೆ ನೀರು ಹಾಕಿ, ದೇವರ ಮುಂದೆ ದೀಪ ಹಚ್ಚಿ ತಾಯಿ ಹಾಗೂ ಅವಳು ಕೂಡಿ ನಾಲ್ಕಾರು ದೇವರ ನಾಮ ಅಂದವಾಗಿ ಹಾಡುತ್ತಾರೆ. ತಂದೆ ಅಣ್ಣಂದಿರು ತೋಟದ ಕೆಲಸ ಮುಗಿಸಿ, ಊರ ಪಂಚಾಯಿತಿಕೆಯಲ್ಲಿ ಪಾಲ್ಗೊಂಡು, ಮಿಂದು ಮನೆಗೆ ಬಂದ ಮೇಲೆ ಪುನ: ರಾತ್ರಿ ಊಟದ ಸಮಯ. ಅಣ್ಣ, ಅಪ್ಪ ಆ ದಿನ ಆಗು ಹೋಗುಗಳ ಬಗ್ಗೆ ಮಾತಾಡುವಾಗ ರತ್ನ ಮೈಯೆಲ್ಲಾ ಕಣ್ಣಾಗಿ ಕೇಳ್ತಾಳೆ. ಯಾರಿಗೆ ಮದುವೆ, ಯಾರಿಗೋ ಅವಳಿ ಜವಳಿ ಹುಟ್ಟಿದ ಸುದ್ದಿ, ಇನ್ಯಾರದ್ದೊ ಮಗ ದುಬಾಯಿಗೆ ಹೊರಡುವ ಬಗ್ಗೆ, ಆ ವರ್ಷದ ಬೇಳೆ, ಬೇಳೆಗೆ ತಗುಲಿದ ರೋಗ, ಅದರ ನಿವಾರಣೆ, ಬೇಳೆಗೆ ಬರುವ ಮೊತ್ತಹೀಗೆ ಹತ್ತು ಹಲವಾರು ಸಂಗತಿಗಳನ್ನು ಕೇಳಿ ಕಲೆತು ಹಾಕುತ್ತಾಳೆ. ರಾತ್ರಿ ಮಲಗುವ ತನಕ ಅಣ್ಣ ರೇಡಿಯೋ ಚಾಲು ಮಾಡಿಡ್ತಾನೆ. ಅದರಲ್ಲಿ ಬರುವ ಹಿಂದಿ ಮರಾಠಿ ಸಿನಿಮಾ ಹಾಡು, ಮರಾಠಿ ಲಾವಣಿ ಹಾಡು ಕೇಳ್ತಾ ರತ್ನಾ ನಿದ್ದೆಗೆ ಜಾರ್ತಾಳೆ.
ರತ್ನಳಿಗೆ ಹದಿನಾರನೇ ವರ್ಷ ನಡೀತಿದ್ದಾಗ, ಆ ಊರಿನಲ್ಲಿ ನಡೆದ ಮದುವೆಗೆ ಬಂದ ಮುಕುಂದ ಚುರುಕು ಚಟುವಟಿಕೆಯ ಉದ್ದ ಜಡೆಯ ರತ್ನಳನ್ನು ಕಂಡು, ಪರಿಚಯದವರ ಸಹಾಯದಿಂದ ಅವಳನ್ನು ಲಗ್ನ ವಾಗಿದ್ದ.
ಲಗ್ನವಾಗಿ ರತ್ನಳ ವಾಸ ಮುಂಬಯಿನ ನಾಲ್ಕಂತಸ್ತಿನ ಕಟ್ಟಡ, ಇವರದ್ದು ಮೂರನೆ ಮಹಡಿ. ಪ್ರತೀ ಮಹಡಿಯಲ್ಲಿ ಆರು ಮನೆ. ಒಂದು ಹಾಲ್, ಅಡಿಗೆ ಮನೆಯಿರುವ ಪುಟ್ಟ ಮನೆ. ಅಡಿಗೆ ಮನೆಯ ಮೂಲೆಯಲ್ಲೇ ಬಚ್ಚಲು. ಒಬ್ಬರು ಕೂತು ಸ್ನಾನ ಮಾಡುವಷ್ಟೇ ದೊಡ್ಡದು. ಅದಕ್ಕೆ ಒಂದು ದಪ್ಪ ಬಟ್ಟೆಯ ದಟ್ಟಿ ಕಟ್ಟಿದ್ದಾರೆ. ಅಲ್ಲೇ ಪಾತ್ರೆ,ಬಟ್ಟೆ ತೊಳೆಯಬೇಕು.ಪಾಯಿಖಾನೆ ಮಾತ್ರ ಮನೆಯ ಹೊರಗೆ, ಪ್ರತಿಯೊಂದು ಮಹಡಿಗೆ ಮೂರು ಪಾಯಿಖಾನೆಗಳು. ಅಂದರೆ ಎರಡು ಮನೆಗೆ ಒಂದು ಪಾಯಿಖಾನೆಯಂತೆ ಬಳಸಬೇಕಿತ್ತು. ಅದನ್ನು ಬೀಗ ಹಾಗಿ ಇಡಲಾಗುತ್ತಿತ್ತು. ಹಳ್ಳಿಯ ವಿಶಾಲವಾದ ಪರಿಸರದಲ್ಲಿ ಬೆಳೆದ ರತ್ನಳಿಗೆ ಹೊಂದಿಕೊಳ್ಳಲು ನಾಲ್ಕು ದಿನ ಸ್ವಲ್ಪ ಮುಜುಗರಾನು ಕಷ್ಟವೂ ಆಯಿತು. ಇನ್ನು ಮುಂದೆ ತನ್ನ ಜೀವನ ಇಲ್ಲೇ ರೂಪಿಸಬೇಕು ಎಂದು ಮನಗಂಡು, ನಿಧಾನವಾಗಿ ತನ್ನ ಪರಿಸರಕ್ಕೆ ಹೊಂದಿಕೊಂಡಳು. ಹಾಗೇ ಆ ಕಟ್ಟಡದಲ್ಲಿರುವವರೆಲ್ಲ ಇವಳ ಸಹಯಕ್ಕೆ ಟೊಂಕ ಕಟ್ಟಿ ನಿಂತರು. ಒಬ್ಬಂಟಿಯಂತೇನು ಅವಳಿಗೆ ಅನ್ನಿಸಲಿಲ್ಲ. ಅವಳಿಗೆ ಅತ್ಯಂತ ಖುಶಿ ಕೊಡುವ ಸಂಗತಿಯೆಂದರೆ ಹತ್ತಿರದಲ್ಲಿರುವ ಸಮುದ್ರ. ಮುಕುಂದನಿಗೋ ಬೆಳಿಗ್ಗೆ ಊಟದ ಬುತ್ತಿ ಹಿಡಿದು ಏಳು ಗಂಟೆಯ ರೈಲಿನಲ್ಲಿ ಫ್ಯಾಕ್ಟರಿಗೆ ಹೋಗುವ ತವಕ. ಅಂತದರಲ್ಲಿ ರತ್ನಳೊಡನೆ ಸರಿಯಾಗಿ ನಾಲ್ಕು ಮಾತನಾಡಲು ಪುರುಸೊತ್ತಿಲ್ಲ. ರತ್ನಳಿಗೆ ಸಮಾಧಾನವೆಂದರೆ ಅವನಿಗೆ ಕುಡಿತ, ಸಿಗರೇಟಿನ ಚಟವಿಲ್ಲದ್ದು.
ಮುಂಬಯಿಗೆ ಬಂದ ಮೇಲೆ ರತ್ನಳಿಗೆ ಮೊದ ಮೊದಲು ಸಮಯ ಕಳೆಯುವುದು ದುರ್ಭರವೆನಿಸಿದ್ದು ಹೌದು. ಇಲ್ಲಿ ಬೆಳಿಗ್ಗೆ ಎದ್ದು ರೊಟ್ಟಿ ತಟ್ಟುವ ಪ್ರಮೇಯ ಇರಲಿಲ್ಲ. ಬೆಳಿಗ್ಗಿನ ಚಹಾ ಜತೆ ಒಂದೆರಡು ಗುಲ್ಕೋಸ್ ಬಿಸ್ಕತ್ತು ಅಥವಾ ಖಾರಿ ಬಿಸ್ಕತ್ತು ತಿಂದರೆ ಅದೇ ಬೆಳಗ್ಗಿನ ಉಪಹಾರ. ಮಧ್ಯಾನ್ಹಕ್ಕೆ ಮುಕುಂದನಿಗೆ ನಾಲ್ಕು ಚಪಾತಿ ಮತ್ತು ಆಲೂ ಅಥವಾ ಮೆಂಥೆ ಸೊಪ್ಪಿನ ಪಲ್ಯ. ಮೊಸರು ಅವನು ಫ್ಯಾಕ್ಟರಿ ಕ್ಯಾಂಟೀನ್ ನಲ್ಲೆ ತೆಗೆದುಕೊಳ್ಳುತ್ತಾನೆ. ಮುಕುಂದನಿಗೆ ಚಪಾತಿ ತಯಾರಿಸುವಾಗಲೇ ಅವಳ ಪಾಲಿನ ಎರಡು ಚಪಾತಿಯನ್ನೂ ಅವಳು ಕಾಯಿಸುತ್ತಾಳೆ. ಆ ಮೇಲೆ ಎಷ್ಟೇ ನಿಧಾನಿಸಿದ್ರೂ ಒಂದೆರಡು ಗಂಟೆಯಲ್ಲಿ ಮನೆ ಕಸ ಗುಡಿಸಿ-ಒರೆಸುವುದು, ಇಬ್ಬರ ಬಟ್ಟೆ, ಪಾತ್ರೆ ಪರಡಿ ಬಳಸುವ ಕೆಲಸ ಮುಗಿತು. ಆ ಮೇಲೆ ಅವಳು ಅಕ್ಕ ಪಕ್ಕದ ಮನೆಗೆ ಹೋಗುವಳು, ಅಥವಾ ಅವರೇ ಇಲ್ಲಿ ಬಂದ್ರೂ ಆಯ್ತು. ಅವರವರ ಮನೆಯ ಗೋಳು- ಗಮ್ಮತ್ತಿನ ಕಥೆ, ಅವರ ಮಕ್ಕಳ ಚೇಷ್ಟೆ ಕೇಳುತ್ತಾ ಕೂರುವುದು. ಕೆಲವೊಮ್ಮೆ ಅವರ ಮಾತಿನ ನಡುವೆ ಅವಳು ತನ್ನ ಹಳ್ಳಿ ಮನೆಯನ್ನು ನೆನೆಸ್ತಾ ಕನಸಿನ ಲೋಕಕ್ಕೆ ತೇಲಿದ್ದು ಉಂಟು. ಕೆಲವೊಮ್ಮೆ ಮದ್ಯಾನ್ಹ ಮಾತಿನ ನಡುವೆಯೆ ಗೋದಿ, ಮೆಕ್ಕೆ ಜೋಳ ಸಾಫ್ ಮಾದುವುದು, ತರಕಾರಿ ಚೊಕ್ಕ ಮಾಡಿಡುವುದು ಮುಂತಾದೆಲ್ಲಾ ನಡೀತಿರ್ತದೆ. ಕೆಲವು ಮಧ್ಯಾನ್ಹ ಸೀಮೆ ಎಣ್ನೆ ತರಲು ರೇಶನ್ ಅಂಗಡಿಯಲ್ಲಿ ಕ್ಯೂ ನಿಲ್ಲುವುದರಲ್ಲಿ ಕಳೆದು ಹೋಗುತ್ತದೆ. ಆಗಲೂ ನಾಲ್ಕೈದು ಹೆಂಗೆಳೆಯರು ಒಟ್ಟಿಗೆ ಹೋಗುತ್ತಿದ್ದರಿಂದ ಅದರಿಂದ ಸಮಯ ಚೆನ್ನಾಗಿ ಹೋಗುತ್ತಿತ್ತು. ಗೋದಿ ಹಿಟ್ಟಿನ ಗಿರಣಿ ಅವರ ಕಟ್ಟಡದಲ್ಲಿ ವಾಸಿಸುವ ಸಖಾರಾಮ್, ನೆಲಮಾಳಿಗೆಯಲ್ಲಿ ನಡೆಸ್ತಿದ್ದ. ಅದ್ದರಿಂದ ಹಿಟ್ಟನ ಗಿರಣಿಗೆ ಹೋಗುವ ತಾಪತ್ರಯವಿಲ್ಲ.
ರತ್ನಳ ಮನೆಯಿಂದ ಮೂರನೆ ಮನೆಯಲ್ಲಿ ನರ್ಸ್ ಮೇರಿಯ ವಾಸ. ಮಕ್ಕಳಾಗದಂತೆ ಕಾಪರ್-ಟಿ ಹಾಕಿಸಿಕೊಂಡಿದ್ದು ಅವಳ ಕೃಪೆಯಿಂದ. ರತ್ನಳಿಗೆ ಇನ್ನೂ ಚಿಕ್ಕ ವಯಸ್ಸು ಎಂದು ಅವಳ ಆಂಬೋಣ. ಕಾಪರ್-ಟಿ ಬಗ್ಗೆ ಮಾಹಿತಿ ನೀಡುವ ಹಲವಾರು ಪುಸ್ತಿಕೆಗಳನ್ನು ಅವಳು ರತ್ನಳಿಗೆ ನೀಡಿದ್ದಳು. ಸ್ವಲ್ಪ ಹೆದರಿಕೆಯಾದ್ರೂ, ಅವರ ಕಟ್ಟಡದಲ್ಲಿರುವ ಎರಡು ಮೂರು ಮಹಿಳೆಯರೂ ಕಾಪರ್-ಟಿ ಯನ್ನು ಉಪಯೋಗಿಸುತ್ತ ಇದ್ದರಿಂದ ಇವಳಿಗೂ ಧೈರ್ಯ ತುಂಬಿಸಿದರು. ಒಂದು ಮಧ್ಯಾನ್ಹ ಕಾಪರ್-ಟಿ ಹಾಕಿಸುವ ಶಸ್ತ್ರಕ್ರಿಯೆಗೆ ತನ್ನನ್ನು ಒಳಪಡಿಸಿದ್ದಳು. ಅವಳ ತಾಯಿಗೆ ಊರಲ್ಲಿ ಇದೇ ಚಿಂತೆ. ಊರಿಗೆ ಹೋದಾಗಲೆಲ್ಲ ಅವಳನ್ನು ತರಾಟೆಗೆ ತೆಗೊಳ್ಳುವಳು. ಅವರಿಗೆ ಈಗ ಬೇಡವಂತೆ ಅಮ್ಮ, ಅಂತ ಇವಳ ಉತ್ತರದಿಂದ ಅವಳಿಗೆ ಸಮಾಧಾನ. ಏನು ಜಮಾಯಿಯವರು ನಿರೋಧ ಉಪಯೋಗಿಸ್ತಾರಾ ಅಂತೆ ಕೇಳಿದ್ದಕ್ಕೆ ಇವಳು ಗೋಣು ಅಲ್ಲಾಡಿಸಿದ್ಲು. ಇಂತದೆಲ್ಲಾ ತಾಯಿ ಹತ್ತಿರ ಮಾತಾಡಲಿಕ್ಕೆ ಅವಳಿಗೆ ಮುಜುಗರ. ತುಂಬಾ ಸಮಯ ತೆಗೆದುಕೋ ಬೇಡ ಅಂತ ಬುದ್ಧಿ ಮಾತು ಹೇಳಿ ,ಅಲ್ಲಿಗೆ ಆ ವಿಷಯದ ಬಗ್ಗೆ ಪೂರ್ಣವಿರಾಮ.
ರತ್ನ ಕಾಪರ್-ಟಿ ಹಾಕಿಸಲಿಕ್ಕೆ ಇನ್ನೊಂದು ಕಾರಣಾನೂ ಇದೆ. ಅದು ಪ್ರತಿ ಭಾನುವಾರ ತನ್ನ ಗಂಡನು ಮನೆಯಲ್ಲಿ ನಡೆಸುವ ಇಸ್ಪೀಟು ಬೈಠಕ್ಕ. ದುಡ್ಡು ಪಣಕ್ಕಿಟ್ಟು ಆಡುತ್ತಿದ್ದರು.ವೈನಿ ವೈನಿ ಅಂದು ಬಾಯಿ ತುಂಬಾ ಮಾತಾಡುವ ಅವನ ಸ್ನೇಹಿತರು, ಅವರಿಗೆ ತಿಂಡಿ ತೀರ್ಥ ಸರಬರಾಜು ಮಾಡುವುದು. ತೀರ್ಥ ಅಂದ್ರೆ ಚಹಾ ಅಥವಾ ಶರ್‌ಬಥ್. ಬೆಳಿಗ್ಗೆ ಬಂದವರು ರಾತ್ರಿ ತನಕ ಇವರ ಮನೆಯಲ್ಲೇ ಠಿಕಾಣಿ. ಅವರಲ್ಲಿ ಮುಕ್ಕಾಲು ಪಾಲು ಮದುವೆಯಾಗದಿದ್ದವರು, ಮದುವೆಯಾದವರಿದ್ದರೆ ಅವರು ಹೆಂಡತಿಯರು ಬಾಣಾಂತನಕ್ಕೆ ಹೋಗಿರುತ್ತಿದ್ದರು. ಅಷ್ಟು ಮಾತ್ರವಲ್ಲದೆ ರತ್ನಳ ಕೈ ಅಡುಗೆ ತುಂಬಾ ರುಚಿ. ಆ ದಿನದ ಖರ್ಚು ಹೆಚ್ಚು. ಮುಕುಂದ ಪಗಾರ ಅಷ್ಟೇನು ಇರಲಿಲ್ಲ. ನಾಟಕದ ಸಂಭಾಷಣೆ, ಹಾಡು, ದೇಶದಲ್ಲಿ ವರ್ತಮಾನಗಳು, ಅವರ ತಮಾಷೆಯ ಮಾತುಗಳನ್ನು ಕೇಳುತ್ತಾ ಅವರಿಗಾಗಿ ಅಡಿಗೆ ಮಾಡುವುದು ರತ್ನಳಿಗೂ ತುಂಬಾ ಖುಶಿ. ವಾರ ಪೂರ್ತಿ ಅವಳ ಬಳಿ ತುಂಬಾ ಸಮಯ. ಭಾನುವಾರ ಬಂತು ಅನ್ನುವಷ್ಟರಲ್ಲಿ ಅದೂ ಹೋಗಿಯೂ ಆಗ್ತಿತ್ತು.
ಹೀಗೆ ಸುಮ್ಮನೆ ಕುರೋದಕ್ಕಿಂತ ಮನೆಯಲ್ಲೇ ಏನಾದ್ರು ಮಾಡಿ, ಕಾಸು ಸಂಪಾದನೆಯಲ್ಲಿ ರತ್ನ ತನ್ನ ಮನಸ್ಸನ್ನು ಹರಿಸಿದಳು. ಅವಳು ಅಡಿಗೆಯಂತೂ ತುಂಬಾ ವೈನಾಗಿ ಮಾದುತ್ತಿದ್ದಳು. ಯಾಕೆ ಬೇರೆಯವರಿಗೆ ಮಧ್ಯಾನ್ಹದ ಊಟ ಒದಗಿಸಬಾರದು? ಈ ವಿಚಾರವನ್ನು ಅಕ್ಕ ಪಕ್ಕದ ಮಹಿಳೆಯರೊಂದಿಗೆ ಸಮಾಲೋಚಿಸಿದಾಗ ಅವರೆಲ್ಲ ಅವಳನ್ನು ಈ ಕೆಲಸಕ್ಕೆ ಹುರಿದುಂಬಿಸಿದರು. ಸರಿ. ಅವಳು ಮೇರಿಯಮ್ಮನ ಹತ್ತಿರ ಮಾತಾನಾಡಿದಳು. ಅವಳ ಆಸ್ಪತ್ರೆಯಲ್ಲೇ ನಾಲ್ಕು ಜನರಿಗೆ ಈ ವಿಷಯ ಹೇಳಿ, ಅವರು ಅನುಮತಿಸಿದಾಗ, ಅವರಿಗೆ ಮಧ್ಯಾನ್ಹದ ಊಟ ಸರಬರಾಜು ಮಾಡಲಾಯಿತು. ಪಾತ್ರೆ ಪಗಡಿ ಅವರಿಂದಲೇ ತಂದಳು. ಮುಖ್ಯ ಅವಳಿಗೆ ಗಂಡನಿಗೆ ಈ ವಿಷಯ ಗೊತ್ತಾಗಬಾರದೆಂಬ ತವಕ. ಹಾಗೂ ತಂದೆ ತಾಯಿ ಎನಾದರೆನ್ನಬಹುದು ಎಂಬ ದೂರದ ಭೀತಿ. ಹೀಗೆ ನಾಲ್ಕು ಜನರಿಂದ ಶುರು ಮಾಡಿ ಈಗ ಅವಳು ಎಂಟು ಜನರಿಗೆ ಡಬ್ಬಿ ಕಳಿಸ್ತಾಳೆ. ಹಾಗೆ ಅವರ ಕಟ್ಟಡದಲ್ಲಿ ಹುಟ್ಟು ಹಬ್ಬದ ಸಮಾರಂಭಕ್ಕೆಲ್ಲಾ ಸಧಾರಣ 25 ಮಂದಿಗಾಗುವಷ್ಟು ಆಲೂ ಬೋಂಡ, ಅವಲಕ್ಕಿ, ಚೂಡ ಮುಂತಾದುವುಗಳನ್ನೆಲ್ಲ ಅಗ್ಗದ ಬೆಲೆಗೆ ಅವರ ಮನೆ ಗಳಿಗೆ ಹೋಗಿ ಮಾಡಿ ಕೊಡುತ್ತಾಳೆ. ಇದರಿಂದ ಅವಳಿಗೆ ಹೊತ್ತು ಹೋಗುವುದು ಮಾತ್ರವಲ್ಲ, ಸ್ವಲ್ಪ ಪುಡಿಗಾಸನ್ನು ಒಟ್ಟು ಮಾಡಿದ ಸಂತಸ. ಭಾನುವಾರದಂದು ಈ ಕೆಲಸಗಳಿಗೆ ಬಿಡುಗಡೆ. ಆ ದಿನ ಅವಳ ಸಮಯ ಮುಕುಂದ ಮತ್ತು ಅವನ ಸಂಗಡಿಗರಿಗೆ. ಪುರಿ - ಪಲ್ಯ, ಶೀರಾ-ಶ್ರೀಖಂಡ್, ಅಪರೂಪಕ್ಕೆ ಬಾಸುಮತಿ ಅಕ್ಕಿಯ ಪುಲಾವ್ ಮುಂತಾದುವುಗಳನ್ನು ಮಾಡಿ ಬಡಿಸುವುದರಲ್ಲೇ ಅವಳಿಗೆ ಸಂಭ್ರಮ. ಅವರ ಹೊಗಳಿಕೆ ಕೇಳುವುದು ಇನ್ನೊಂದು ಸಂಭ್ರಮ ಎಂದು ಬೇರೆ ಹೇಳಬೇಕೆ ?
ಮನೆಗೆ ಹಾಗೂ ಡಬ್ಬಿಯಲ್ಲಿ ಕಳಿಸುವ ಕಾಯಿ ಪಲ್ಲೆಗೆ ಅವಳು ದಿನಾ ಸಾಯಂಕಾಲ ವಾಕ್ ಹೋಗುವ ನೆಪದಲ್ಲಿ, ಸಮುದ್ರದ ಬಳಿಯಿರುವ ಕಾಯಿ ಪಲ್ಲೆ ಮಾರುಕಟ್ಟೆಯಿಂದ ತರುತ್ತಾಳೆ.
ಇಷ್ಟಾದ್ರು ಅವಳ ಬಳಿ ಇನ್ನೂ ಸಮಯ ಉಳಿತಿದೆ. ಅದಕ್ಕೆ ಮಧ್ಯಾನ್ಹದ ಹೊತ್ತು ಅವಳು ಅಕ್ಕ ಪಕ್ಕದ ಮಕ್ಕಳಿಗೆ ಬಟ್ಟೆಯ ಮೇಲೆ ಕಸೂತಿ ಹಾಕುವುದನ್ನು ಕಲಿಸುತ್ತಾಳೆ.
ಈ ಮಧ್ಯ ಮುಕುಂದ ಕೆಲಸ ಮಾಡುವ ಫ್ಯಾಕ್ಟರಿಯಲ್ಲಿ ಮುಷ್ಕರ ಶುರು ಆಗಿತ್ತು. ರತ್ನಾ ತಾನು ನಡೆಸಿರುವ ಕಸುಬಿನ ಬಗ್ಗೆ ಅವನಿಗೆ ನಿಧಾನವಾಗಿ ಹೇಳಿದ್ದಾಳೆ. ಕೆಲಸ ಸಿಗುವ ತನಕ ದುಡ್ದಿಗೆ ಏನೂ ತಾಪತ್ರಯ ಪಡಬೇಡಿ ಅಂದಿದ್ದಾಳೆ. ಬೇಕಾದರೆ ನಮ್ಮದೇ ಆದ ಸ್ವಂತ ಉದ್ದಿಮೆಯೇನಾದರು ಹಾಕುವಾ ಅಂದಿದ್ದಾಳೆ. ಭಾನುವಾರ ನಡೆಯುವ ಬೈಠಕ್ಕಿಗೆ ಮಿತ್ರರು ಬರುವುದನ್ನು ಕಡಿಮೆ ಮಾಡಿದ್ದಾರೆ. ಎಲ್ಲಾದರೂ ಮುಕುಂದ ದುಡ್ಡು ಕೇಳ ಬಹುದೆಂಬ ಹೆದರಿಕೆ ಎಲ್ಲರಲ್ಲೂ. ಈ ಸಮಯದಲ್ಲಿ ಮಿತ್ರರು ಯಾರು, ತನ್ನನ್ನು ಸವಿ ಮಾತಿನಿಂದ ಉಪಯೋಗಿಸುವವರು ಯಾರು ಎಂದು ಮುಕುಂದನಿಗೆ ತಿಳುವಳಿಕೆ ಯಾಗಿದೆ. ಜೀವನದಿಂದ ಕೆಲವೇ ದಿನಗಲಲ್ಲಿ ಅವನು ಪಾಠ ಕಲಿತಿದ್ದಾನೆ. ಆಗ ನೆರವಿಗೆ ಬಂದಿದ್ದು ರತ್ನಳ ಕೌಶಲ್ಯ.
ಅವರ ಕಟ್ಟದಲ್ಲಿರುವ ಎರಡನೆ ಮಹಡಿಯ ದಪ್ಪ ಗುಜರಾತಿ ಹೆಂಗಸು ಇಳಾಬೇನ್ ಗೆ ಒಂದು ಹೊಸ ಉಪಾಯ ಹೊಳೆದಿದೆ. ಅವರೆಲ್ಲಾ ಮದುವೆ ಸಮಾರಂಭಕ್ಕೆ ಕಸೂತಿ ಹಾಕಿದ ನೈಲಾನ್ ಹಾಗೂ ಶಿಫೋನ್ ಸೀರೆಗಳನ್ನ್ನು ಉಡುವುದು. ರತ್ನಾ ಬಿಡಿಸುವ ಕಸೂತಿ ತುಂಬಾ ಮುದ್ದಾಗಿರ್ತವೆ. ಇಳಾಬೇನ್ ನ ತವರು ಮನೆ ಸೂರತ್ ನಲ್ಲಿ. ಅಲ್ಲಿ ಬಟ್ಟೆಗಳು ತುಂಬಾ ಅಗ್ಗದಲ್ಲಿ ಸಿಗುತ್ತವೆ. ಅವಳೀಗ ಅಲ್ಲಿಂದ ಪ್ಲೈನ್ ಸೀರೆ ಹೋಲ್ ಸೇಲ್ ದರದಲ್ಲಿ ತಂದು, ರತ್ನಳಿಂದ ಕಸೂತಿ ಬಿಡಿಸಿ ಅದನ್ಮ್ನ ಹೆಚ್ಚಿನ ಬೆಲೆಗೆ ಮಾರುತ್ತಾಳೆ. ರತ್ನಳಿಗೂ ಕಸೂತಿ ಹಾಕಿದ್ದಕ್ಕೆ ಒಳ್ಳೆ ಬೆಲೆ ಕೊಡುತ್ತಾಳೆ.
ಕೆಲವು ದಿನ ರತ್ನಳಿಗೆ ಬಂದ ದುಡ್ಡನ್ನೆಲ್ಲಾ ಹೇಗೆ ಸಂಭಾಳಿಸುವ ಚಿಂತೆಯಾಗಿತ್ತು. ಪರಿಚಯದವರೊಬ್ಬರ ಸಹಾಯದಿಂದ ಸ್ವಲ್ಪ ದುಡ್ಡನ್ನು ಅವಳು ಪೋಸ್ಟ್ ಆಫೀಸಿನ ಅರ್.ಡಿ ಗೆ ಕಟ್ಟಿದ್ದಾಳೆ. ಇನ್ನು ಸ್ವಲ್ಪ ದುಡ್ಡನ್ಮ್ನ ಅವಳು ಹತ್ತಿರದಲ್ಲೇ ಇರುವ ಕೋ ಒಪರೇಟಿವ್ ಬ್ಯಾಂಕ್ ನಲ್ಲಿ ಇಟ್ಟಿದ್ದಾಳೆ. ಬಹುಶಃ ಅವಳ ಬಳಿ ಈಗ ಹತ್ತಿರ ಹತ್ತಿರ ಒಂದು ಲಕ್ಷ ದುಡ್ದು ಒಟ್ಟಾಗಿರಬಹುದು. ಸ್ವಲ್ಪ ಜಮೀನು, ದಾಗಿನೇ ಮುಂತಾದವುಗಳನ್ನು ತೆಗೆದುಕೊಳ್ಳುವ ಅಂದಾಜಿನಲ್ಲಿ, ಮುಂಬರುವ ಮಗುವಿನ ಆಗಮನದಲ್ಲಿ ಅವಳು ಖುಶಿಯಿಂದಿದ್ದಾಳೆ.
ಅವಳು ನಡೆಸಿತ್ತಿರುವ ಕುಸುಬುಗಳ ಬಗ್ಗೆ ಈಗ ಮುಕುಂದನಿಗೆ ಹೆಮ್ಮೆ ಇದೆ. ಮಿತ್ರರು ಈಗ ಅವನಿಗೆ ಬೇಗ ಒಂದು ಮಗುವಿನ ತಂದೆಯಾಗಲು ಹುರಿದುಂಬಿಸುತ್ತಿದ್ದಾರೆ. ಮಗು ಆಗದಿದ್ದರ ಬಗ್ಗೆ ಅವನಿಗೆ ತನ್ನಲ್ಲೆ ಏನಾದರೂ ದೋಷವಿರಬಹುದೆಂಬ ಗುಮಾನಿ. ಬಾಯಿ ಬಿಟ್ಟು ಯಾರಲ್ಲು ಹೇಳಿಲ್ಲ. ಇನ್ನೊಂದು ಆರು ತಿಂಗಳು ನೋಡಿ, ಇಬ್ಬರೂ ಡಾಕ್ಟರನ್ನು ಕಾಣಬೇಕೆಂದಿದ್ದಾನೆ. ಊರಿನಲ್ಲೂ ಅವನ ತಂದೆ ತಾಯಿ ಮಗುವಿನ ವಿಷಯವಾಗಿ ಪಿರಿ ಪಿರಿ ಶುರು ಮಾಡಿದ್ದಾರೆ. ಇನ್ನು ಮುಂದಾದರೂ ರತ್ನಳನ್ನು ವಾರಕ್ಕೊಂದು ಸರ್ತಿ ಹೊರಗಡೆ ಸುತ್ತಾಡಲು ಚೌಪಾಟಿ, ಜುಹು ಬೀಚ್ ಗೆ ಕರೆದು ಕೊಂಡು ಹೋಗಬೇಕು ಅಂದುಕೊಂಡಿದ್ದಾನೆ ಮನಸ್ಸಿನಲ್ಲೆ.
ಈಗ ಮದುವೆಯಾಗಿ ಐದನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಇವನ್ನೆಲ್ಲ ನೆನಸ್ತಾ ಅವಳ ಹೆರಳು ಸುತ್ತುವ ಕಾರ್ಯಕ್ರಮವೂ ಮುಗಿದಿದೆ. ಒಂದು ಸುಂದರವಾದ ಮಂದಹಾಸ ಅವಳ ಮುಖದಲ್ಲಿ ಹಾಯ್ದು ಹೋಗಿದೆ. ಇನ್ನು ಅವಳು ಇವತ್ತಿನ ಡಬ್ಬಿಯ ತಯಾರಿಕೆಯಲ್ಲಿ ತೊಡಗಬೇಕಾಗಿದೆ.
:-)
8 comments:
ಕಥೆ ತುಂಬಾ ತುಂಬಾ ಚೆನ್ನಾಗಿ ಬಂದಿದೆ. ನೀವು ಮೊದಲ ಬಾರಿ ಕನ್ನಡದಲ್ಲಿ ಬರೆದ ಹಾಗೆ ಅನ್ನಿಸುವದೆ ಇಲ್ಲ.
ನನಗೆ ತುಂಬಾ ಇಷ್ಟವಾಯಿತು.
ಸಾಧ್ಯವಾದರೆ ನನ್ನ ಕಥೆಯನ್ನು ಓದಿರಿ.
ಕಾಗಕ್ಕಾ ಮತ್ತ ಗುಬ್ಬಕ್ಕನ ಕಥಿ (Kannada story)
(http://nivedita-views.blogspot.com/2010/08/kannada-story.html)
ಕಾದಂಬರಿಕಾರ್ತಿಯಾಗುವ ಎಲ್ಲಾ ಲಕ್ಷಣಗಳೂ ಮೊದಲ ಕಥೆಯಲ್ಲೇ ಕಾಣಿಸ್ತಿವೆ :-)congratulations!
ಚೆನ್ನಾಗಿದೆ ಕಥೆ . ಮುಂದುವರಿಯುವದಾ...?
ರತ್ನ ಮತ್ತು ಮುಕುಂದ ಕಾಳೆ ನಿಮ್ಮ ಕಥಾನಕದಲ್ಲಿ ಕಲಾತ್ಮಕ ಚಿತ್ರಗಳ ನಾಯಕ ನಾಯಕಿಯರನ್ನು ಹೋಲುತ್ತಾರೆ. ಅವಳು ಸರಳ ಮರಾಠಿ ಹೆಣ್ಣು ಮಗಳಂತೆ ಬಿಂಬಿತವಾಗಿದ್ದಾಳೆ. ಅವಳ ಭಾವನೆಗಳನ್ನು ಎಲ್ಲೂ ನೀವು ಹೇಳಿಲ್ಲ. ಮುಂಬಯಿಯನ್ನೂ ಚೌಪಾಟಿ ಪರಿಸರವನ್ನೂ ಮತ್ತೆ ನನ್ನ ಮುಂದೆ ತಂದು ನಿಲ್ಲಿಸಿದ್ದೀರ.
ಅಂದ ಹಾಗೆ ಭಾಕ್ರಿ ಎಂದರೇನು?
ನನ್ನ ಮೊಬೈಲ್ಗೆ ಕನ್ನಡ ಬರೋಲ್ಲ ಮಾಲತಿ ಅವರೆ. ಇಂಗ್ಲೀಷ್ ನಲ್ಲೇ ಹೇಳಿಕೊಡಿ ಭಾಕ್ರಿ ಮಾಡುವ ವಿಧಾನ.
"ಕೆಲವು ದಿನ ರತ್ನಳಿಗೆ ಬಂದ ದುಡ್ಡನ್ನೆಲ್ಲಾ ಹೇಗೆ ಸಂಭಾಳಿಸುವ ಚಿಂತೆಯಾಗಿತ್ತು". ಹೆಣ್ಣು ಮಕ್ಕಳು ಹೇಗೆ ಕಾಸು ಕೂಡಿಕ್ಕುತ್ತಾರೆ ಮತ್ತು ದುಡ್ಡನ್ನು ಹೇಗೆ ಸಂಭಾಳಿಸುತ್ತಾರೆ ಎನ್ನುವುದಕ್ಕೆ ಈ ಸಾಲು ಉತ್ತರಿಸುತ್ತದೆ.
ನೀವು ಕಾಣುವ ಜಗತ್ತನ್ನು ನೋಡುವ ಪರಿಯಲ್ಲೇ ಸೂಕ್ಷ್ಮತೆ ಇದೆ. ಒಳ್ಳೆ ಬರಹ
ಅಂದ ಹಾಗೆ ನನ್ನ ಬ್ಲಾಗಿಗೂ ಬನ್ನಿ. ಹೊಸ ಎರಡು ಪದ್ಯಗಳಿವೆ.
tumbaa chennagide
congrats
ಮಹಿಳಾ ಸ್ವಾವಲ೦ಬನೆಯ, ಸ್ವಉದ್ಯೋಗದ ನಿಮ್ಮ ಪರಿಕಲ್ಪನೆ ಕಥೆ ಸು೦ದರವಾಗಿದೆ. ಧನ್ಯವಾದಗಳು.
Good one Malathi Akka :-)
Chennagide munduvarisi.....
Post a Comment