October 27, 2015

ಒಳ್ಳೆತ(ಮ)ನ

ಮಗ ಮದುವೆ  ಮಾಡಿಕೊಳ್ಳುತ್ತಿದ್ದಾನೆ ಅಂದಾಗ ಡಾ. ಪದ್ಮಿನಿಗೆ ತುಂಬಾ ಸಂತೋಷ ಸಮಾಧಾನ. ಆ ದಿನ ಸಂಜೆ ಅವನು ಹುಡುಗಿಯನ್ನು ಮನೆಗೆ ಕರೆದುಕೊಂಡು ಬರುವವನಿದ್ದ. ಮನೆಗೆ ತಾಗಿರುವ ಗರಾಜ್ ಅನ್ನೇ ಮಾಡಿಫೈ ಮಾಡಿ ಅಲ್ಲಿ ತನ್ನ ಪ್ರಾಕ್ಟೀಸ್ ಮಾಡುತ್ತಿದ್ದಳು ಸ್ತ್ರೀ ತಜ್ಞೆ ಯಾದ ಡಾ. ಪದ್ಮಿನಿ. ಸ್ವಲ್ಪ ವಾದ್ರು ಮನೆ ಚೊಕ್ಕಟ ಮಾಡುವ ಅಂತ ಅದರ ಕಾರ್ಯದಲ್ಲಿ ತೊಡಗಿದಳು.  ಬಂದ ಪೇಶೇಂಟ್ಸ್ ಗಳಿಗೆಲ್ಲ ಹಿಂದಿನ ಬೀದಿಯಲ್ಲಿರುವ ತನ್ನ ಸ್ನೇಹಿತೆಯ ಮಗಳ ಬಳಿ ಕಳುಹಿಸುವ ಏರ್ಪಾಡು ಮಾಡಿದಳು. ಮನೆಯೊಳಗೆ - ದಿವಾನ್ ಗೆ ಹೊಸ ಹಾಸು, ಕಿಟಕಿಗಳಿಗೆ ಹೊಸ ಪರದೆ , ಹೂದಾನಿಯಲ್ಲಿ ತಾಜಾ ಹೂವಿನ ಗುಚ್ಛ ಇತ್ಯಾದಿ.. ಆಮೇಲೆ ಸಂಜೆಗೆ ಏನೆಲ್ಲಾ ತಿಂಡಿ  ಮಾಡಬೇಕೆಂದು ಅಡಿಗೆಯ ಶಾಂತಮ್ಮನಿಗೆ ಸಲಹೆ  ಸೂಚನೆಯನ್ನಿತ್ತಳು,   
ಸಂಜೆ ಕಾವೇರಿಯನ್ನು ಕರೆದುಕೊಂಡು ಬಂದಾಗ 'ಇವಳನ್ನು ಎಲ್ಲೋ ನೋಡಿದೆನಲ್ಲ ಅಂತ ಅನಿಸಿತು. ಮಗ ಮೆಚ್ಚಿದ ಹುಡುಗಿ ಅಂತ ಹೆಚ್ಚಿಗೇನೂ ಆಲೋಚನೆ ಮಾಡದೆ ಅವಳು ಮದುವೆಗೆ ಸಮ್ಮತಿ ನೀಡಿದಳು. ಕಾವೇರಿಗೆ  ತನ್ನವರಾರೂ ಇರಲಿಲ್ಲ. ಅನಾಥಾಶ್ರಮದಲ್ಲಿ ಓದಿ ಈಗ ಬ್ಯಾಂಕೊಂದರಲ್ಲಿ ಕೆಲಸ ಆಕೆಗೆ. ಸುಮಾರು ಮಧ್ಯರಾತ್ರಿ ಡಾ ಪದ್ಮಿನಿಗೆ , ಕಾವೇರಿಯನ್ನು ಕಂಡದ್ದೆಲ್ಲಿ ಅಂತ ನೆನಪಾಗಿ ಬೆಚ್ಚಿ ಬಿದ್ದಳು. ಮಗನಿಗೆ ಏನೂ ಹೇಳಲು, ಕೇಳಲು ಹೋಗಲಿಲ್ಲ. ಕಾವೇರಿಯ ಜತೆ ಮಾತುಕತೆಯಲ್ಲಿ ತೊಡಗಿದಾಗ ಆಕೆ ಒಳ್ಳೆಯವಳೆಂದು ಅವಳಿಗೆ ಮನದಟ್ಟಾಗಿತ್ತು. ಮಗ ಮತ್ತು ಕಾವೇರಿ ಆತ್ಮೀಯ ಸ್ನೇಹಿತರಂತೆ ಸಂಭಾಷಿಸುವದು ನೋಡಿ ಸಂತಸ ಪಟ್ಟಿದ್ದಳು. ಮಾತುಗಳಲ್ಲಿ ಏನು ನಯ -ನಾಜೂಕು!!
ಮದುವೆಯೆಲ್ಲ ಮುಗಿದು ಹಲವಾರು ವರ್ಷಗಳು ಕಳೆದರೂ ಕಾವೇರಿಗೆ ಮಕ್ಕಳಾಗಲಿಲ್ಲ. ಇಬ್ಬರಿಗೂ ಅದರ ಕೊರಗು ಹತ್ತಿಕೊಂಡಿತು. ಒಂದು ಸಲ ಏನೋ ಮಾತಾಡುವಾಗ , 'ಮೊದಲ ಪಸಲ ಗರ್ಭ ಧರಿಸಿದಾಗ ಅಬೋರ್ಶನ್ ಮಾಡಿಸಿದರೆ ಮಕ್ಕಳಾಗುವುದು ಸ್ವಲ್ಪ ಕಷ್ಟವೇ  'ಎಂದು ಡಾ. ಪದ್ಮಿನಿ ಉಸುರಿದರು. " ಹೌದಮ್ಮ ಹಾಗಾಗಿದ್ದು ಅವಳ ತಪ್ಪಲ್ಲ  ' ಅಂತ ಮಗ ಪ್ರತ್ಯುತ್ತರ  ನೀಡಿದಾಗ ಇಬ್ಬರಿಗೂ ತಾವೇನೂ ಮಾತನಾಡುತ್ತಿದ್ದೇವೆ ಎಂಬುದರ ಅರ್ಥವಾಗಿ ಪ್ರಶ್ನಾರ್ಥಕವಾಗಿ ಒಬ್ಬರ ಮುಖ ಇನ್ನೊಬ್ಬರು ನೋಡಿ ಕೊಂಡರು. ಇಬ್ಬರೂ ಒಂದೇ ಉಸುರಿಗೆ 'ನಿನಗೊತ್ತಿತ್ತಾ?' ಅಂತ ಕೇಳಿಕೊಂಡರು 
"ಹೌದಮ್ಮ ಮದುವೆಗೆ ಮುಂಚೆ ಆಗಿದ್ದನ್ನು ಕಾವೇರಿ ಹಂಚಿಕೊಂಡಿದ್ದಾಳೆ. ಆ ಅನಾಥಾಶ್ರಮಕ್ಕೆ ಬಂದವರೊಬ್ಬರಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದಾಗ ಆಕೆಗೆ  ೧೩ ವರ್ಷ ವಯಸ್ಸು. ಅಬೋರ್ಶನ್ ಗೆ ನಿನ್ನ ಬಳಿ ಬಂದಿದ್ದು ಗೊತ್ತಿರಲಿಲ್ಲ ಅಂದ ಮಗ. 
"ಹೌದು ಕಣೋ ಮಗ, ನನಗೆ ಅವಳಾರೆಂದು ಆ ದಿನಾನೆ ಗೊತ್ತಾಗಿತ್ತು. ಆದರೆ ನಿಮ್ಮಿಬ್ಬರ ಮದುವೆಯಿಂದ ಇಬ್ಬರೂ ಖುಷಿಯಾಗಿರುತ್ತೀರಿ ಅನ್ನಿಸಿ ನಾನೂ ಸುಮ್ಮನಿದ್ದೆ. ಬಹುಶ: ಯಾವತ್ತೂ ಯಾರಿಗೂ ಏನೂ ಹೇಳುತ್ತಿರಲಿಲ್ಲ. ಈಗ ನೀನು ಮಕ್ಕಳಿಲ್ಲವೆಂಬ ಕೊರಗುತ್ತಿರುವುದಿರಿಂದ ಸೈಂಟಿಫಿಕ್ ರೀಸನ್ ಕೊಟ್ಟೆ ಅಷ್ಟೆ 'ಅಂದರು 
ಇಬ್ಬರ ಮಾತುಗಳನ್ನು ಇನ್ನೊಂದು ಕೋಣೆಯಲ್ಲಿದ್ದ ಕಾವೇರಿ ಕೇಳಿಸಿಕೊಂಡು...'ಒಳ್ಳೆಯವರು ಇರುತ್ತಾರೆ ಜಗತ್ತಿನಲ್ಲಿ ಎಂದು ನಿಟ್ಟುಸಿರು ಬಿಟ್ಟಳು. 


1 comment:

Radhika said...

Sweet little story Malathi. Your stories make me think how I would react in a situation. They motivate me to be broad minded :-)