August 10, 2013

ಜೀವನ - ಇದು ಚಲಿಸುವ ಬಂಡಿ

ನಾನು ಮಕ್ಕಳು ಮುಂಬೈ ನ ದಾದರ್ ಸ್ಟೇಷನ್ ನಲ್ಲಿ ಬೆಂಗಳೂರಿನ ಟ್ರೈನ್ ಹಿಡಿಯಲು ನಿಂತಿದ್ದೆವು. ಅಷ್ಟರಲ್ಲಿ ಯಾರೋ ನನ್ನ ಎಡ ಭುಜ ತಟ್ಟಿದ ಹಾಗಾಯ್ತು ಅಂತ ಕುತ್ತಿಗೆಯನ್ನು ಎಡಕ್ಕೆ ತಿರುಗಿಸಿದರೆ ನನ್ನ ಬಲ ಕಿವಿಯ ಬಳಿ 'ಪೆಹಚಾನ್ ಮುಝೆ' ಅನ್ನುವ ದನಿ ಕೇಳಿಸಿ ಬಲಕ್ಕೆ ತಿರುಗಿದೆ. ನನ್ನ ಎದುರಿಗೆ ನಿಂತವಳನ್ನು ಬಿಟ್ಟ ಕಣ್ಣಿಂದ ನೋಡ್ತಾ ಇದ್ದೆ. ಜೇನ್ಸ್, ಚೆಂದ ದ ಟಾಪ್, ದೊಡ್ಡದೊಂದು ತುರುಬು, ಮುಂದಲೆಯಿಂದ ಸ್ಟೈಲ್ ಆಗಿ ಗಿಡ್ಡಕ್ಕೆ ಕತ್ತರಿಸಿದ ಕೂದಲು ಗಲ್ಲದ ಮೇಲೆ ಕ್ಯೂಟ್ ಆಗಿ ಇಳಿ ಬಿದ್ದಿತ್ತು. ಕಿವಿಯ ಲೋಲಾಕು ಭುಜದವರೆಗೆ ಇಳಿಬಿದ್ದು ತೂಗಾಡುತ್ತಿತ್ತು. ಸನ್ ಗ್ಲಾಸಸ್ ಹಾಕ್ಕೊಂಡಿದ್ದಳು. ನಿಧಾನಕ್ಕೆ ನಕ್ಕಳು. ಈ ನಗು ಪರಿಚಿತ ಅನಿಸಿತು. ಆ ಮೇಲೆ ಸ್ಟೈಲ್ ಆಗಿ ಕನ್ನಡಕ ತೆಗೆದಳು. 'ನಿಮ್ಮೂ' ಅಂತ ಕೂಗಿ ತಬ್ಬಿ ಕೊಂಡೆ.

ಹೇಗಿದ್ದಿಯಾ, ಏನು ಕತೆ ಅಂತ ಇಬ್ಬರೂ ಒಟ್ಟಿಗೆ ಉಚ್ಚರಿಸಿದೆವು. ನನ್ನ ಮಕ್ಕಳನ್ನು ಪರಿಚಯಿಸಿದೆ. 'ಅಬ್ಬ ಆಗಲೇ ಇಷ್ಟು ದೊಡ್ಡವರಾಗಿ ಬಿಟ್ರಾ? ಮೋಟಿ ಹೋಗಯಿ ತೂ (ದಪ್ಪ ಆಗಿದ್ದೀಯಾ) ಅದು ಬಿಟ್ಟರೆ  ನಿನ್ನಲ್ಲಿ ಮಾತ್ರ ಹೇಳಿಕೊಳ್ಳುವ ಮಹಾ ಯಾವ ಬದಲಾವಣೆ ಆಗಿಲ್ಲ ಅಂದಳು. ಗೊತ್ತ ಮಕ್ಕಳೆ?, ಈಗ ನೀವಿಬ್ಬರೂ ನಿಂತ ಹಾಗೆ ನಾನು ಮತ್ತು ರೇವತಿ ಇವಳಿಗೆ ಬಾಡಿಗಾರ್ಡ್ ಆಗಿದ್ದೆವು ಸ್ಕೂಲ್ ನಲ್ಲಿ. ಹುಡುಗರಿಂದ ಅವಳನ್ನು ರಕ್ಷಿಸುತ್ತಿದ್ದೆವು ಅಂತ ನಕ್ಕಾಗ ನಾನು ಕೆಂಪು ಕೆಂಪು ಆಗಿದ್ದನ್ನು 'ನೋಡಿ ನೋಡಿ ನಾವು ಛೆಡಿಸಿದಾಗ, ಕೀಟಲೆ ಮಾಡಿದಾಗಲೆಲ್ಲ ಹೀಗೆ ಗಲ್ಲ ಕಿವಿ ಎಲ್ಲ ಕೆಂಪು ಆಗುತ್ತಿತ್ತು. ಈಗಲೂ ಬದಲಾವಣೆ ಇಲ್ಲ' ಅಂತ ಇನ್ನಷ್ಟು ನಕ್ಕಳು. ಇನ್ನು ಏನೇನೋ ಹೇಳಿ ನನನ್ನು ಮುಜುಗರಕ್ಕೆ ಒಳಪಡಿಸುವುದು ಬೇಡ ಅಂತ ಅವಳ ಬಗ್ಗೆ ಕೇಳಿದೆ..
'ನೆನಪಿದೆಯ 11 ನೇ ಕ್ಲಾಸ್ ನಲ್ಲಿ ನಡೆದಿದ್ದು? ಅಂತ ಕೇಳಿದಾಗ ನನ್ನ ಮನಸ್ಸು ಹಿಂದಕ್ಕೆ ಓಡಿತು

ನಾನು ಆಗ ಆ ಶಾಲೆಗೆ ಹೊಸದಾಗಿ ಸೇರಿದ್ದೆ. ಅವಳು ಅದೇ ಶಾಲೆಯಿಂದ ಪಾಸ್ ಆಗಿ 11 ನೇ ತರಗತಿಗೆ ಬಂದಿದ್ದಳು. ಅಲ್ಲಿ ಹತ್ತನೆ ತರಗತಿ ಮುಗಿದ ನಂತರ ನಾವು ಕಾಲೇಜು ಸೇರಬಹುದಿತ್ತು ಅಥವಾ 11 ಮತ್ತು 12 ನೇ ತರಗತಿ (ಕರ್ನಾಟದಲ್ಲಿ ಪಿ. ಯು. ಸಿ ಅನ್ನುತ್ತರಲ್ಲವಾ?) ಮುಗಿಸಿ ಗ್ರಾಜುಯೇಷನ್ ಕೋರ್ಸ್ ಗೆ ಬೇರೆ ಕಾಲೇಜ್ ಗೆ ಹೋಗಬಹುದಿತ್ತು. ಕೆಲ ಶಾಲೆಯಲ್ಲಿ ಮಾತ್ರ 11 ಮತ್ತು 12 ತರಗತಿಗೆ ಅವಕಾಶ ಇತ್ತು.  ಅಂತಹ ಸ್ಕೂಲ್ ಗೆ ನಾನು ಸೇರಿದ್ದೆ. ನಾವು ಆಯ್ಕೆ ಮಾಡಿದ ವಿಷಯ ವಿಜ್ಞಾನ. ಮೊದಲ್ನೆ ದಿನಾ ನೆ ಪರಿಚಯ ಆದವಳು 'ನಿಮ್ಮು' ಓದುವುದರಲ್ಲಿ, ಸ್ಪೋರ್ಟ್ಸ್, ರಂಗವಲ್ಲಿ, ನಾಟಕ ಮುಂತಾದವುಗಳಲ್ಲು ಯಾವತ್ತೂ ಮುಂದೆ. ಅವಳಿಗೆ ಬೇರೊಂದು ಕಾಲೇಜಿನಲ್ಲಿ ಓದುವ ಅವಳಿ  (twin)ಇದ್ದ. ನಂತರ ಇನ್ನಿಬ್ಬರು ತಂಗಿಯಂದಿರು.  ಹುಡುಗರು ನನ್ನ ಶಾಂತ ಸ್ವಭಾವದ ಕಾರಣ ಯಾವತ್ತೂ ನನಗೆ ಚುಡಾಯಿಸುತ್ತಿದ್ದರಿಂದ ಅವಳು ಮತ್ತು ರೇವತಿ ಯಾವಾಗಲೂ ನನಗೆ ಬಾಡಿಗಾರ್ಡ್. ಹುಡುಗರು ಅವರನ್ನು 'ಬಾಡಿಗಾರ್ಡ್ಸ್' ಅಂತ ನಿಕ್ ನೇಮ್ ಇಟ್ಟಿದ್ದರು. ನಾನು ಪೀಚಲು ಕಡ್ಡಿ ತರಹ ಇದ್ದರೆ ಆದರೆ ಅವರಿಬ್ಬರೂ ಮೈ ಕೈ ತುಂಬಿಕೊಂಡು ಧಾಂಡಿಗರಂತೆ ಕಾಣುತ್ತಿದ್ದರು. ಅದರಲ್ಲೂ ರೇವತಿ ಕರಾಟೆಯೆಲ್ಲ ಕಲಿತು ಒಳ್ಳೆ ದೇಹಧಾರ್ಡ್ಯ ಹೊಂದಿದ್ದಳು. ಅದೇ ನಾಗಿತ್ತು ಅಂದರೆ, ಹತ್ತನೆಯ ತರಗತಿ ತನಕ ಹೆಣ್ಣುಮಕ್ಕಳ ಶಾಲೆಯಲ್ಲಿ ಕಲಿತ ನನಗೆ, ಹುಡುಗರನ್ನು ಕಂಡು ಒಂದು ತರಹ ಕಸಿವಿಸಿ. ಮನೆಯಲ್ಲಿ ನನ್ನ ತಮ್ಮಂದಿರ ಬಳಿ ಕೂಡ ಸರಿಯಾಗಿ ಮಾತನಾಡುತ್ತಿರಲಿಲ್ಲ ನಾನು. ಅಂತದ್ದರಲ್ಲಿ ಮೊದಲನೇ ದಿನಾನೇ ಹುಡುಗರು ಏನೋ ಅಂದಿದ್ದಕ್ಕೆ ನಾನು ಅಳಲಿಕ್ಕೆ ಶುರು ಮಾಡಿದ್ದೆ. ಆ ದಿನ ನೇ ಅವರಿಬ್ಬರು ನನಗೆ ಬಾಡಿಗಾರ್ಡ್ ಆಗಿದ್ದರು. :-)

ತರಗತಿಯ ಪಾಠ, ತಂಟೆ, ತಕರಾರು, ಟೂರ್ ಮುಂತಾದ್ದೆಲ್ಲ ನಡೆದು 11 ನೆಕ್ಲಾಸ್ ಯಾವಾಗ ಮುಗಿಯಿತು ಅಂತ ತಿಳಿಯಲೇ ಇಲ್ಲ. 11 ನೇ ತರಗತಿಯ ಪರೀಕ್ಷೆ ಮುಗಿಸಿ 15 ದಿನಕ್ಕೇ ನಮ್ಮ ರಿಸಲ್ಟ್. ಶಾಲೆ ಎಂಟರ್ ಆಗುವ ಮುಂಚೆಯೆ ಬೋರ್ಡ್ ಮೇಲೆ ಮೊದಲ ಐದು rank ನ ಪಟ್ಟಿ ಹಾಕಿಟ್ಟಿದ್ದರು. ಮೊದಲನೆ ಹೆಸರು ನಿಮ್ಮುದು, ನನ್ನದು ಐದನೆದು. ನನಗೆ ಇಂಗ್ಲಿಷ್ ನಲ್ಲಿ ತೀರಾ ಕಡಿಮೆ ಅಂಕ ಬಂದಿತ್ತು. ಅವಳಿಗೆ ಅಭಿನಂದಿಸಲು ಅವಳನ್ನು ಹುಡುಕ್ತಾ ಇದ್ದಾಗ ನನಗೆ ರೇವತಿ ಸಿಕ್ಕಿದಳು. ಅವಳು ನನ್ನನ್ನು ಪಕ್ಕಕ್ಕೆ ಒಯ್ದು 'ವಿಷಯ ಗೊತ್ತಾಯ್ತಾ?' ಅಂತ ಕೇಳಿದಳು. ನಾನು 'ಇಲ್ಲ' ಅಂದೆ.

ನಿಮ್ಮುಳ ಅಣ್ಣ (ಅವಳಿ ಜ್ಅವಳಿಯಾದರೂ ಅವನು ಐದು ನಿಮಿಷ ಬೇಗ ಹುಟ್ಟಿದ್ದ) ತನ್ನ ಕೊನೆಯ ಪರೀಕ್ಷೆ ಮುಗಿಸಿ ಟ್ರೈನ್ ನಲ್ಲಿ ವಾಪಸ್ ಆಗ್ತಾ, ಟ್ರೈನ್ ನ ಬಾಗಿಲ ಬಳಿ ನೇತಾಡ್ತಾ ಇದ್ದನಂತೆ. ಜೋಲಿ ತಪ್ಪಿ ಪಟರಿ ಮೇಲೆ ಬಿದ್ದು ತೀರಿಕೊಂಡಿದ್ದ. ನನಗೆ ಕೇಳಿ ತುಂಬ ಬೇಜಾರಾಯಿತು. ಆ ಮೇಲೆ ಸ್ಕೂಲ್ ಪುನ: ಪ್ರಾರಂಭ ಆದಾಗ ನನಗೆ ಸಿಕ್ಕಿದ್ದು ಮಂಕು ಬಡಿದ ನಿಮ್ಮು. ತುಂಬ ಚಟುವಟಿಕೆಯಿಂದ ಇರುತ್ತಿದ್ದ ನಿಮ್ಮು ಮಂಕಾಗಿದ್ದಳು. ಯಾವಾಗಲೂ ತರಗತಿಗೆ ಬೆಲ್ ಹೊಡೆದ ಮೇಲೆ ಬರುತ್ತಿದ್ದಳು. ಟೀಚರ್ ಕೇಳಿದರೆ ಮನೆ ಕೆಲಸ ಎಲ್ಲ ಮುಗಿಸಿ ಬರಲು ಲೇಟ್ ಆಗುತ್ತದೆ ಅಂದಿದ್ದಳು. ನಾವು ಸುಮ್ಮನೆ ಅವಳ ಜತೆ ಇರುತ್ತಿದ್ದೆವು. ಇಡೀ ಕ್ಲಾಸ್ ಒಂದು ತರಹ ತಣ್ಣಗಾಗಿತ್ತು. ಇದೆಲ್ಲದರ ಮಧ್ಯೆ ಅವಳ ಚಿಕ್ಕ ತಂಗಿ ಇನ್ನೋರ್ವ ಸ್ನೇಹಿತೆ ಜತೆ ಸೇರಿ ಮನೆಯಿಂದ ಓಡಿ ಹೋಗಿ, ಪೋಲಿಸರು ಆಕೆಯನ್ನು ಶೋಲಾಪುರ್ ದಿಂದ ಕರೆದುಕೊಂಡು ಮುಂಬೈಗೆ ತಲುಪಿಸಿದರು. ಆ ಕಾರಣದಿಂದಾಗಿ ಅವಳಿಗೆ ಶಲೆಯಿಂದ ತೆಗೆಯಲಾಯಿತು. :-(

ಅವಳ ತಂದೆಗೆ ಸರಕಾರಿ ನೌಕರಿ. ಅಮ್ಮ ಗೃಹಿಣಿ. ಮಗನಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ಅಮ್ಮ ಅವನ ಸಾವಿನಿಂದ ಡಿಪ್ರೆಷನ್ ಗೆ ಹೋಗಿದ್ದಳು. ನಮ್ಮ ಮುದಿ ವಯಸ್ಸಿನಲ್ಲಿ ನಮ್ಮನ್ನು ಸಾಕುವವನು ಹೋಗೆ ಬಿಟ್ಟ ಅಂತ ಆಗಾಗ ಅಳೋದು, ಹುಡಿಗಿಯರಿಗೆ ಬಾಯಿಗೆ ಬಂದದ್ದು ಬೈಯುವುದು, ಅಡಿಗೆಗೆ ಒಲೆ ಮೇಲೆ ಏನಾದರೂ ಇಟ್ಟರೆ ಅದು ಹಾಗೆ ಇದ್ದು ಸೀದು ಹೋಗುವುದು ಮುಂತಾದೆಲ್ಲ ನಡೆದು ಆಕೆ ಔಷಧಿ ಮೇಲೆ ಅವಲಂಬಿತಳಾಗಿದ್ದಳು. ಎಲ್ಲ ಕೆಲಸದ ಭಾರ ನಿಮ್ಮು ಮೇಲೆ. ಇಷ್ಟರಲ್ಲಿ ಅವಳ ತಂದೆಗೆ ಬೇರೆ ಕಡೆ ವರ್ಗ ಆಗಿ ಅವರು ಒಬ್ಬರೆ ಬೇರೆ ಇರುತ್ತಿದ್ದರು. ತಿಂಗಳಿಗೆ ಒಮ್ಮೆ ಮನೆಗೆ ಹೋಗಿ ಬರುವುದು ಮಾಡುತ್ತಿದ್ದರು. ಈಗ ಸಂಪೂರ್ಣ ಜವಬ್ದಾರಿ ನಿಮ್ಮು ಮೇಲೆ. ಓದಿ ಡಾಕ್ಟರ್ ಆಗ ಬೇಕೆಂದು ಅಂದು ಕೊಂಡಿದ್ದಳು ನಿಮ್ಮು. ಆದರೆ ಆಸ್ಪತ್ರೆ ಔಷಧಿ ಅಂತ ತುಂಬ ಖರ್ಚಾಗಿದ್ದು ಮಾತ್ರವಲ್ಲ, ಈಗೀಗ ನಿಮ್ಮುಗೆ ಕಡಿಮೆ ಅಂಕಗಳು ಬರಲು ಶುರು ಆಗಿತ್ತು. ಮೆಡಿಕಲ್ ಓದೋದಾದ್ರೆ ಮೆರಿಟ್ ಮೇಲೆ ಮಾತ್ರ ಅಂತ ಅವಳ ಅಮ್ಮ ಅವಳಿಗೆ ಅವಳ ಅಮ್ಮ ನಿಮ್ಮು ಎಂಟನೆ ತರಗತಿ ಓದಾಬೇಕಾದ್ರೆ ಹೇಳಿಟ್ಟಿದ್ದರಂತೆ. ಆ ಮೇಲೆ ಹನ್ನೆರಡನೆ ಪರೀಕ್ಷೆ ಆದ ಮೇಲೆ ನನ್ನ ಮದುವೆ ಆಗಿ, ಇಷ್ಟು ವರ್ಷಗಳ ಮೇಲೆ ಅವಳು ಸಿಕ್ಕಿದ್ದಳು.

ಅವಳು ಈಗ ಒಂದು ದೊಡ್ಡ ಕಂಪನಿಯ ಎಮ್ ಡಿ ಗೆ ಪರ್ಸನಲ್ ಸೆಕ್ರೆಟರಿ. ಮದುವೆ ಮಾಡಿಕೊಂಡಿಲ್ಲ. ಅಪ್ಪ ರಿಟೈರ್ ಆದ ಮೇಲೆ ಮುಂಬೈ ಹೊರವಲಯದಲ್ಲಿರುವ ತಮ್ಮ ಹಳ್ಳಿ ಮನೆಗೆ ಅಮ್ಮನ ಜತೆ ಇದ್ದಾರೆ. ಇಬ್ಬರೂ ತಂಗಿಯರಿಗೆ ಮದುವೆಯಾಗಿದೆ. ಅಪ್ಪ ಅಮ್ಮನ ಜವಾಬ್ದಾರಿ 'ನನ್ನದೇ' ಅಂತ ನಿಮ್ಮು ಮದುವೆ ಮಾಡಿಕೊಂಡಿಲ್ಲ. ಚಟಪಟ ಮಾತಾಡುತ್ತಿದ್ದರೂ ಕಣ್ಣಲ್ಲಿ ತುಂಬಿಕೊಂಡ ಅಗಾಧ ನೋವು 'ಅಣ್ಣನ ಸಾವಿನಿಂದ ಅಮ್ಮ ಚೇತರಿಸಿಕೊಳ್ಳಲೇ ಇಲ್ಲ'. ಒಂದಿನ ನಾನ್ನು ತಂಗಿ ಏನೋ ಮಾತನಾಡಿ ನಗುತ್ತಿರುವಾಗ 'ಅವನ ಬದಲು ನೀನು ಸಾಯಬೇಕಿತ್ತು' ಅಂದಾಗ ನನಗೆ ಆದ ಸಂಕಟ ಅಷ್ಟಿಷ್ಟಲ್ಲ. ಅಣ್ಣ ಮಾಡೋದನ್ನು ನಾನು ಮಾಡುತ್ತಿದ್ದರೂ ಆಕೆಗೆ ಸಮಾಧಾನ ಇಲ್ಲ' ಆ ಮಾತು ನನ್ನನ್ನು ಯಾವತ್ತೂ ಕಾಡುತ್ತೆ'.

ನಿಮ್ಮುಗೆ  ಸಮಾಧಾನ ಹೇಳುವ ಹಲವಾರು ಮಾತುಗಳಿದ್ದವು ಆದರೂ ಯಾಕೋ ನಾನು ಬಾಯಿ ಬಿಡಲೇ ಇಲ್ಲ. ಅಷ್ಟರಲ್ಲಿ ಧಡಧಡ ಅಂತ ನಮ್ಮ ಟ್ರೈನ್ ಬಂತು ಪುನ: ಒಬ್ಬರನ್ನೊಬ್ಬರು ತಬ್ಬಿ 'ಬೆಂಗಳೂರಿಗೆ' ಬಾ ಅಂತ ಹೇಳಿ ಬಂದೆ.
ಈ ಜೀವನ ಒಂದು ವಿಚಿತ್ರ ಅಲ್ಲವಾ??
:-(
(ಇದನ್ನೆಲ್ಲ ನಿಮ್ಮು ಮರಾಠಿ ಪತ್ರಿಕೆಯಲ್ಲಿ ಈಗಾಗಲೇ ಬರೆದಿದ್ದಾಳೆ ಆದ್ದರಿಂದ ಅವಳಿಗೆ ಕೇಳಿಯೇ ಬರೆದಿದ್ದೀನಿ)

ಇದು ಓದಿ ನಿಮಗೆ ಬೇಜಾರಾಗಿದ್ರೆ ಇಲ್ಲಿ ಕೇಳಿ ಒಂದು funny incident ಟ್ರೈನ್ ನಲ್ಲಿ ನಡೆದಿದ್ದು:
ನಮ್ಮ ಎದುರಿನ ಸೀಟ್ ನಲ್ಲಿ ಒಂದು ಪುಟಾಣಿ ಮಗು ಇತ್ತು. ಹೆಚ್ಚೆಂದರೆ ಒಂದುವರೆ ವರ್ಷ. ಅದರ ಅಮ್ಮನ ಫ್ರೆಂಡ್ ಒಬ್ಬರು ಬಂದು ಅವನ ಜತೆ ಮಾತನಾಡಲು ಶುರು ಮಾಡಿದರು. ತಮ್ಮ ಬಳಿಯಿದ್ದ ಜಾಗಕ್ಕೆ ಆ ಮಗುವನ್ನು ಕರೆಯುತ್ತ: 'ಪುಟ್ಟು ಇಲ್ಲಿ ಬಾ ಆಂಟಿ ಹತ್ತಿರ ಕೂಚಿ ಕೂಚಿ ಮಾಡು. ಬೆಂಗ್ಲೂಲಿಗೆ ಹೊಲಟಿದ್ದಿಯಾ?? ಚಾಕ್ಕಿ ತಿನ್ನುತ್ತೀಯಾ '...ಅಂತೆಲ್ಲ. ಮಗು ಆಕೆಯನ್ನು ಎವೆಇಕ್ಕದೆ ನೋಡುತ್ತಿತ್ತು. ಆಕೆ ಹೊರಟು ಹೋದ ಮೇಲೆ ಸ್ವಲ್ಪ ಹೊತ್ತಿಗೆ ತನ್ನ ಅಮ್ಮನ ಬಳಿ ಹೊರಳಿ 'ಪಾಪ ನಿನ್ನ ಫ್ರೆಂಡ್ ಗೆ ತೊದಲು ಅನ್ನಿಸುತ್ತೆ' ಅಂತ ಸ್ಪಷ್ಟವಾಗಿ ಕೇಳಿದಾಗ ನನಗಂತೂ ನಗು ತಡಿಲಿಕ್ಕೆ ಆಗಲಿಲ್ಲ. 'ಇನ್ನು ಮುಂದೆ ಮಕ್ಕಳ ಜತೆ ಮುದ್ದುಗರೆಯುತ್ತ ತೊದಲು ಮಾತಾಂಡಗಿಲ್ಲ ನೋಡಿ...
ನಿನ್ನೆ ನನ್ನ ತಮ್ಮನಿಗೆ ಮಗಳು ಹುಟ್ಟಿದ್ದಾಳೆ. ಅಲ್ಲಿಗೆ ಆಗಸ್ಟ್ ನಲ್ಲಿ ನಮ್ಮ ಕುಟುಂಬದಲ್ಲಿ 7 ಹುಟ್ಟಿದಹಬ್ಬಗಳು ಒಂದೆ ವಾರದಲ್ಲಿ. ಹೌ ನೈಸ್...ನಾ ಹೊರಟೆ ಅವಳನ್ನು ಮುದ್ದು ಮಾಡಲು...

ಅವಳ ಹುಟ್ಟಿದ ನಕ್ಷತ್ರದ ಪ್ರಕಾರ ಅವಳ ಹೆಸರು 'ಟ' ದಿಂದ ಶುರುವಾಗಬೇಕಂತೆ. ಸ್ಯಾಮಿ ಅವಳಿಗೆ 'ಟಾಟಾ ಪೈ' ಅಂತ ನಾಮಕರಣ ಮಾಡಿ ನಮನ್ನೆಲ್ಲ ಒಂದು ರೌಂಡ್ ನಗಿಸಿದಳು. ನಿಮಗ ಟ ದಿಂದ ಯಾವುದಾದರೂ ಹೆಸರು ಹೊಳೆದರು ಬರೀರಿ ಪ್ಲೀಸ್. :-)


4 comments:

Digital Eyes said...

"ಟ" ದಿಂದ ಶುರುವಾಗುವ ಹೆಸರು "ಟಬು" "Tabby"

nenapina sanchy inda said...

Tulip, Tina hEgide??

Radhika said...

Smart kid! Love that!

nenapina sanchy inda said...

thank you Radhika and Savi
:-)