ಇಷ್ಟರವರೆಗೆ ನನ್ನ ಜೀವನದಲ್ಲಿ ಕೆಲವೇ ಕೆಲವು ಸಾವುಗಳಿಂದ ನಾನು ವಿಚಲಿತಳಾಗಿದ್ದೇನೆ. ಜಿ. ಕುಮಾರಪ್ಪ ಅಂತಹವರಲ್ಲಿ ಒಬ್ಬರು. ಪರಿಚಯ ವಾಗಿ ಭೇಟಿಮಾಡಿ ಅವರೊಂದಿಗೆ ಕಳೆದಿದ್ದು ಒಂದೇ ದಿನ. ಆ ಒಂದು ದಿನದಲ್ಲೇ ಅವರು ಅತ್ಯಂತ ಆತ್ಮೀಯರಾದರು. ನಂತರ ನಮ್ಮ ಸಂಪರ್ಕ ಇ-ಮೈಲ್ ಮೂಲಕ. ಮತ್ತು ಯಾರಾದರೂ ಕಲಕತ್ತೆಗೆ ಹೋಗುತ್ತೇನೆ ಅಂದ ಕೂಡಲೆ ನಾನು ಜಿ. ಕುಮಾರಪ್ಪ ಅವರನ್ನು ಭೇಟಿಯಾಗಿ ಅನ್ನುತ್ತಿದ್ದೆ.
ಕುಮಾರಪ್ಪ ನವರೊಂದಿಗೆ ನಾವು. left to right ಐದನೆಯವರು
ನಾವು ಗ್ಯಾಂಗಟಾಕ್ (Gangtok) ಹೋಗಬೇಕಾದರೆ ಮೊದಲು ಇಲ್ಲಿಂದ ಕಲಕತ್ತ. ಅಲ್ಲಿಂದ ಬಾಗಡೋಗ್ರಾ. ಕಲಕತ್ತಾದಿಂದ ದಿಂದ ಬಾಗಡೋಗ್ರಾದ ಫ್ಲೈಟ್ ಇದ್ದದ್ದೆ ಮರುದಿನ. ಹಾಗಾಗಿ ನಮಗೆ ಒಂದುವರೆ ದಿನದ ಅವಧಿಯಿತ್ತು ಕಲಕತ್ತೆಯಲ್ಲಿ ತಿರುಗಾಡಲು. ಸಾಲಿಮಠ ಕುಟುಂಬ ಮತ್ತು ನಾವು ಒಟ್ಟಿಗೆ ಹೋಗಿದ್ವಿ. ಬೆಂಗಳೂರಿನಿಂದ ನಾವು ಬೆಳಿಗ್ಗೆ 6.00 ಗಂಟೆಗೆ ಹೊರೆಟೆವು. 10.00 ಗಂಟೆಗೆ ನಾವು ನಮ್ಮ ಹೊಟಲ್ ರೂಮ್ ನಲ್ಲಿದ್ದೆವು. ಅಲ್ಲೇ ಹೋಟಲ್ ನಲ್ಲಿ ಬೆಳಗ್ಗಿನ ನಾಸ್ಟಾ ಮುಗಿಸಿ, ಅವರಿಂದ ಒಂದು ಟ್ಯಾಕ್ಸಿ ಬುಕ್ ಮಾಡಿಸಿಕೊಂಡು ಕಲಕತ್ತೆಯ ವಿಕ್ಟೋರಿಯ ಮೆಮೊರಿಯಲ್, ರೈಟರ್ಸ್ ಬಿಲ್ಡಿಂಗ್, ಸುಭಾಷಚಂದ್ರ ಬೋಸ್ ರ ಮನೆ, ಈಡನ್ ಗಾರ್ಡನ್ಸ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು.
ಮಧ್ಯಾಹ್ನ ಯಾವುದಾದರೂ ಒಳ್ಳೆಯ ವೆಜಿಟೇರಿಯನ್ ಹೋಟಲಿಗೆ ಕರೆದುಕೊಂಡು ಹೋಗುವಂತೆ ನಮ್ಮ ಡ್ರೈವರ್ ನಿಗೆ ಸೂಚಿಸಿದೆವು.
Victoria Memorial
Eden Gardens
ಅಲ್ಲೆ ಹೋಟಲ್ ಒಂದರ ಬಳಿ ನಮ್ಮ ಗಾಡಿ ನಿಲ್ಲಿಸುವಾಗ ಪಕ್ಕದಲ್ಲೆ ಸಿಂಡಿಕೇಟ್ ಬ್ಯಾಂಕ್ ಕಂಡಿತು. ಸೈ..ಇವರಿಬ್ಬರೂ ಸಿಂಡಿಕೇಟ್ ಬ್ಯಾಂಕ್ ಎಕ್ಸ್ ಎಂಪ್ಲಾಯೀ ಗಳು, ಕೇಳ ಬೇಕಾ..ತವರುಮನೆಗೆ ಬಂದಷ್ಟು ಖುಶಿ. ನಮ್ಮವರು ಯಾರಾದರೂ ಇದ್ದಾರಾ ಅಂತ ಒಳ ಹೊಕ್ಕರು. ನಮ್ಮ ಹೊಟ್ಟೆ ತಾಳ ಹಾಕಿ, ಹೊಟ್ಟೆಯಲ್ಲಿನ ಹುಳ ಸತ್ತರೂ ಇವರಿಬ್ಬರ ಪತ್ತೆಯಿಲ್ಲ. ಅವರ ಸಂಭಾಷಣೆಯನ್ನು ನಾವು ಹೊರಗೆ ನಿಂತಲ್ಲೆ ಊಹಿಸಬಹುದಿತ್ತು..ಅವನು ಯಾವ ಬ್ರಾಂಚ ನಲ್ಲಿದ್ದಾನೆ, ಇವನಿಗೆ ಪ್ರೊಮೋಷನ್ ಸಿಕ್ತಾ, he is a good banker...ಅಂತೆಲ್ಲಾ. ಕೊನೆಗೂ ಹೊರ ಬಂದಾಗ ಅವರ ಜತೆ ಇಬ್ಬರು ಪರಿಚಯಸ್ಥರನ್ನೆ ಕರೆದುಕೊಂಡು ಬಂದರು. ಅವರೆ ನಮಗೆ ಒಳ್ಳೆಯ ಹೋಟಲ್ ಸೂಚಿಸಿ, ನಾವು ಕರ್ನಾಟಕದವರೆಂದು, ಅವರ ಬ್ಯಾಂಕ್ ನಲ್ಲಿ ಎಕೌಂಟ್ ಇರುವ ನ್ಯಾಷನಲ್ ಲೈಬ್ರರಿಯ ಕನ್ನಡ ವಿಭಾಗದ ಮೇಲ್ವಿಚಾರಕರಾದ ಶ್ರೀ ಜಿ ಕುಮಾರಪ್ಪನವರ ಫೋನ್ ನಂಬರ್ ಕೊಟ್ರು. ಊಟದ ನಂತರ ನಮ್ಮನ್ನು ಗ್ರಂಥಾಲಯದ ತನಕ ಕಳುಹಿಸಲು ಬಂದರು. ಗಾಡಿ ಪಾರ್ಕ್ ಮಾಡಿದಕಡೆಯಿಂದ ಕಾಲ್ನಡಿಗೆಯಲ್ಲೆ ಕ್ರಮಿಸುವಷ್ಟು ಹತ್ತಿರವಿತ್ತದು. ನಾವು ತಲುಪುವಷ್ಟರಲ್ಲಿ ಕುಮಾರಪ್ಪನವರು ಗ್ರಂಥಾಲಯದ ಹೊರಗೆ ನಮಗೋಸ್ಕರ ಕಾಯುತ್ತಿದ್ದರು. ವಿಸಿಟರ್ಸ್ ಬುಕ್ ನಲ್ಲಿ ನಮ್ಮೆಲರ ಹೆಸರನ್ನು ನೋಂದಾಯಿಸಿ ಒಳಗೆ ಹೋದೆವು.
ಮೊದಲು ಗ್ರೌಂಡ್ ಫ್ಲೋರ್ ಕವರ್ ಮಾಡಿದೆವು. ಅಲ್ಲಿ ಓದುಗರು ಬಂದು ಪುಸ್ತಕಗಳನ್ನು ಎರವಲು ಪಡೆಯಬಹುದು. ಪುಸ್ತಕಗಳನ್ನು ಯಾವ ರೀತಿಯಲ್ಲಿ categorise ಮಾಡಿದ್ದಾರೆ ಅಂತ ತೋರಿಸಿದರು. ಮೇಲಿನ ಅಂತಸ್ತುಗಳಿಗೆ ಹೋಗಲು prior ಪರವಾನಗಿ ಪಡೆಯಬೇಕು ಮತ್ತು ನಮ್ಮ ಜತೆ ಗ್ರಂಥಾಲಯದ ಸಿಬ್ಬಂದಿಯೊಬ್ಬರು ಇರಲೇಬೇಕು. ಆಂಗ್ಲಭಾಷೆಯ ಪುಸ್ತಕವಲ್ಲದೆ, ನಮ್ಮ ದೇಶದ ಹದಿನಾಲ್ಕು ಭಾಷೆಯ ಪುಸ್ತಕಗಳಿಗಾಗಿ ವಿಶೇಷ sections ಗಳಿವೆ.
ಪುಸ್ತಕಗಳನ್ನು ಕಾಪಿಡುವ ಬಗ್ಗೆ, ಮೈಕ್ರೋ ಫಿಲ್ಮ್ಸ್ ಇಡುವ ಜಾಗ, ವೃತ್ತಪತ್ರಿಕೆ/ಮಾಸಪತ್ರಿಕೆ/ magazines ಮುಂತಾದವುಗಳಿಗೆ ವಿಶೇಷ ಕೊಠಡಿಗಳಿವೆ. ಹಳೆಯ original/handwritten manuscript ಗಳನ್ನಿಡುವ ವಿಶೇಷ ಗುಪ್ತ vault ಒಂದಿದೆ. ಅದರಳೊಗೆ ಯಾರನ್ನೂ ಬಿಡುವುದಿಲ್ಲವಾದರೂ ನಮಗೆ ಅಲ್ಲಿಗೆ ಹೋಗುವ ಸದಾವಕಾಶ ಸಿಕ್ಕಿತು. ನಾನಂತು ತುಂಬ ಭಯಭಕ್ತಿಯಿಂದ ಅದನ್ನೆಲ್ಲ ವೀಕ್ಷಿಸಿದೆ. ಅವರೂ ಒಂದುಚೂರು ಬೇಜಾರು ಪಡಕೊಳ್ಳದೆ ಸಾವಕಾಶವಾಗಿ ಎಲ್ಲವನ್ನೂ ನಮ್ಮಷ್ಟೆ ಕುತೂಹಲದಿಂದ ನಮಗೆ ವಿವರಿಸಿದರು. ನೆಲಮಾಳಿಗೆ, ಗ್ರೌಂಡ್ ಫ್ಲೋರ್ ನಿಂದ ಬೇರೆ ಬೇರೆ ಸೆಕ್ಷನ್ ಗಳಿಗೆ -ಒಟ್ಟಿಗೆ ಮೂರು ಅಂತಸ್ತುಗಳಿವೆ- ಟ್ರಾಲಿ ಲಿಫ್ಟ್ ಮೂಲಕ ಪುಸ್ತಕಗಳನ್ನು ಹೇಗೆ ಕಳುಹಿಸಲಾಗುತ್ತದೆ ಎಂಬುದನ್ನು ಅವರು ಒಂದು ಪ್ರಾತ್ಯಕ್ಷಿಕೆ ಕೂಡ ಮಾಡಿ ತೋರಿಸಿದರು ನನ್ನ ಸಲುವಾಗಿ. ತಾಳೆಗರಿಯ ಮೇಲಿನ ಬರಹದಿಂದ ಡಿಜಿಟಲೈಸ್ಡ್ ವರ್ಶನ್ ನ ಪುಸ್ತಕಗಳನ್ನು ನೋಡುವ ಭಾಗ್ಯ ನಮ್ಮದಾಯಿತು. ವಿಶೇಷ ಪುಸ್ತಕಗಳ ಪ್ರತಿ ಪುಟವನ್ನು ಫೋಟೊಗ್ರಾಫ್ ಮಾಡಿ ಮೈಕ್ರೋ ಫಿಲ್ಮ್ ಮಾಡಿಡುವ system ಅಲ್ಲಿದೆ
ಅಲ್ಲಿದ್ದ ಅವರ ಸಹೋದ್ಯೋಗಿಗಳಿಗೆ ಬಂಗಾಲಿ ಭಾಷೆಯಲ್ಲೆ ನಮ್ಮನ್ನೆಲ್ಲ ಪರಿಚಯಿಸಿದರು. ಆಮೇಲೆ ಕೆಲ ಹೊತ್ತು ನಾವು ಅವರ ಚ್ಯಾಂಬರ್ ನಲ್ಲಿ ಸಮಯವನ್ನು ಕಳೆದೆವು. ಅವರು ಈಗಾಗಲೇ ಬಂಗಾಲಿಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದ, ಮಾಡುತ್ತಿರುವ ಪುಸ್ತಕಗಳನ್ನು ನಮಗೆ ತೋರಿಸಿದರು. ಕನ್ನಡದಿಂದ ಬೆಂಗಾಲಿಗೆ ಅನುವಾದ ಮಾಡಿದ್ದೀರ ಅಂತ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಷ್ಟರೊಳಗೆ ಟಾಪಿಕ್ ಚೈಂಜ್ ಆಗಿ ಕಲಕತ್ತ ಕನ್ನಡ ಸಂಘದ ಕಡೆ ಹೊರಳಿತ್ತು.
ಈ ಗ್ರಂಥಾಲಯದಲ್ಲಿ ಕನ್ನಡ ವಿಭಾಗ ಆರಂಭಿಸಿದ್ದು ಸನ್ 1963 ನಲ್ಲಂತೆ. ಪ್ರಸ್ತುತ ಅಲ್ಲಿ 33,000 ಸವಿರ ಕನ್ನಡ ಪುಸ್ತಕಗಳಿವೆ ಎಂದರು.
ಅವರು ಮೂಲತ: ಚಿತ್ರದುರ್ಗವರು. 20 ವರ್ಷಕ್ಕಿಂತಲೂ ಹೆಚ್ಚು ಸಮಯ ಕಲಕತ್ತೆಯಲ್ಲಿದ್ದು ಬಂಗಾಲಿಯನ್ನು ತುಂಬ ಚೆನ್ನಾಗಿ ಮಾತನಾಡುತ್ತಾರೆ. ನಾವು ಬರುವುದು ಮೊದಲೇ ಗೊತ್ತಿದ್ದರೆ ನಾವು ಅವರಿಗೋಸ್ಕರ ಕಾಫಿ ಪುಡಿ ತರಬಹುದಿತ್ತು ಎಂದು ತಮಾಷೆ ಮಾಡಿದರು. ನಾನು ಮಾತ್ರ ಆ ವಿಷಯವನ್ನು ಮರೆತಿರಲಿಲ್ಲ. ನಮ್ಮ ಆಫಿಸ್ ನಿಂದ ಬೇರೆ ಸಹೋದ್ಯೋಗಿಗಳು ಕಲಕತ್ತೆಗೆ ಹೋಗುವಾಗ ಕಾಫಿ ಪುಡಿಯನ್ನು ತೆಗೆದುಕೊಂಡು ಹೋಗಲು ಹೇಳಿದ್ದೆ.
ನಾವು ವಿನಿಮಯ ಮಾಡಿಕೊಂಡ ಮೊತ್ತ ಮೊದಲ ಮಿಂಚಂಚೆ
ಇತ್ತೀಚಿಗೆ ನಟರಾಜ ನನಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದಾರೆ. ಅವರು ಕನ್ನಡಿಗರು ಕಲಕತ್ತೆಯಲ್ಲಿರುವವರು ಅಂದ ಕೂಡಲೆ ನಾನು ಕೇಳಿದ ಮೊದಲ ಪ್ರಶ್ನೆ ಕುಮಾರಪ್ಪ ನವರ ಪರಿಚಯ ಇದೆಯಾ ಎಂದು.
ನಾನು ಹುಟ್ಟಾ ಅಂತರ್ಮುಖಿ. ಪುಸ್ತಕಗಳೆ ನನ್ನ ಜಗತ್ತು ನನ್ನ ಆಪ್ತ ಮಿತ್ರರು. ಪುಸ್ತಕಗಳಿದ್ದರೆ ಮುಗಿಯಿತು ನನಗೆ ಊಟ ತಿಂಡಿ ಕೂಡ ಬೇಡ. ಮಾಲವಿಕ ಹುಟ್ಟಿದ ನಂತರ ಅಮ್ಮ ಬರೆದ ಪತ್ರಗಳಲೆಲ್ಲ 'ಓದುತ್ತಾ ಕೂರ ಬೇಡ, ಮಾಲವಿಕಳ ಜತೆ ಮಾತಾಡು, ಇಲ್ಲದಿದ್ದರೆ ಅವಳು ಮಾತನಾಡಲು ಕಲಿಯುವುದು ಹೇಗೆ' ಅನ್ನುವ ಒಕ್ಕಣೆ. ನನ್ನ ಪುಸ್ತಕ ಪ್ರೀತಿಯನ್ನು ನನ್ನ ಮಕ್ಕಳು ಹೊಂದಿದ್ದಾರೆ. ಯಾವುದಾದರು ರಜೆ ದಿನ ನಮ್ಮ ಮನೆಗೆ ಬಂದರೆ ನಾವು ನಾಲಕ್ಕೂ ಜನ ಬೇರೆ ಬೇರೆ ರೂಮ್ ನಲ್ಲಿ ಬೇರೆ ಬೇರೆ ಆಸನಗಳಲ್ಲಿ, ಶವಾಸನ, ಆರಾಮಾಸನ, ಹೊಟ್ಟೆಕೆಳಗಾಸನ ಮುಂತಾದ ಭಂಗಿಯಲ್ಲಿ ಪುಸ್ತಕ ಓದುವುದನ್ನು ನೀವು ಕಾಣಬಹುದು. ಅಡಿಗೆ ಮನೆಯೊಳಗೊಂಡು ನನ್ನ ಮನೆಯ ಪ್ರತ್ಯೇಕ ಕೋಣೆಯಲ್ಲೂ ನಾನು ಪುಸ್ತ್ಕಗಳನ್ನು ಇಟ್ಟಿರುತ್ತೇನೆ. ಆಂಗ್ ಸ್ಯೂ ಕಿ ಯಂತೆ ಎಲ್ಲಾದರೂ house arrest ಆದರೆ ಅಂತ ಭಯ ನನಗೆ. ಅದಕ್ಕೆ ನನ್ನ ಸುತ್ತ ಮುತ್ತಲೂ ಪುಸ್ತಕ.
ತುಂಬ ಚಿಕ್ಕವಳಿದ್ದಗ ನನಗೆ ಗ್ರಂಥಾಲಯದಲ್ಲಿ ಕೆಲಸ ಮಾಡಬೇಕೆಂಬ ಹಂಬಲವಿತ್ತು. ಹಾಗಾಗಿ ಸ್ವಾಭಾವಿಕವಾಗಿ ಈ ಗ್ರಂಥಾಲಯದಲ್ಲಿ ಕಳೆದ ಸಮಯವನ್ನು ನಾನು ಹೆಚ್ಚು ಇಷ್ಟಪಟ್ಟೆ, ಅಷ್ಟಲ್ಲದೆ ತಾನು ಒಬ್ಬ ಸಾಧಾರಣ ಅಲ್ಲಿ ನೌಕರಿಯಲ್ಲಿರುವವ ಅಂತ ಭಾವಿಸದೆ ಎಷ್ಟೊಂದು ಪ್ರೀತಿಯಿಂದ ಆಕರಾಸ್ಥೆಯಿಂದ ಇಡೀ ಗ್ರಂಥಾಲಯವನ್ನು ತಮ್ಮ ಹೊಸ ಮನೆ ತೋರಿಸುವಂತೆ ತೋರಿಸಿದರು. ತುಂಬ ಅಭಿಮಾನ ಹೊಂದಿದ್ದಾರೆ ಕುಮಾರಪ್ಪನವರು ತಮ್ಮ ಕಾಯಕದ ಪ್ರತಿ .ನಮ್ಮ ಪ್ರಶ್ನೆಗಳಿಗೆ ಒಂಚೂರು ಬೇಸರಿಸದೆ ನಮಗೆ ಎಲ್ಲವನ್ನೂ ನಿಧಾನವಾಗಿ ವಿವರಿಸಿ ಹೇಳಿದರು. ಆದರೂ ಯಾಕೋ ಅವರಲ್ಲಿ ಹೇಳಿಕೊಳ್ಳಲಾರದ ನೋವಿದೆ ಅಂತ ನನಗೆ ಅನಿಸಿತು. (ಸುಮ್ನೆ ನನ್ನ intution.ಶ್ರೀಕಾಂತ ಇದನ್ನು ಓದಿದರೆ ನೀನೂ ನಿನ್ನ intutions ಊ ಅನ್ನುತ್ತಾರೆ ಖಂಡಿತ). ನನಗಂತು ಇನ್ನೊಮ್ಮೆ ಅಲ್ಲಿ ಹೋಗಲೆ ಬೇಕೆನಿಸಿದೆ. ಆದರೆ ಈಗ ಕುಮಾರಪ್ಪನವರು ಅಲ್ಲಿರುವುದಿಲ್ಲವ್ಲಲ್ಲ....
ಅವರ ಅಮೂಲ್ಯ ಸಮಯವನ್ನು ನಮಗೋಸ್ಕರ ಅವರು ಮೀಸಲಿಟ್ಟಿದ್ದಕ್ಕೆ ನಾವು ಅವರನ್ನು ವಂದಿಸಿದಾಗ, 'ಇಲ್ಲಿ ಕನ್ನಡ ಮಾತನಾಡುವವರು ಸಿಗುವುದೇ ಅಪರೂಪ, ಧನ್ಯವಾದಗಳನ್ನು ಹೇಳಬೇಡಿ ಅಂದರು. ನಾವು ಅರ್ಧದಿನ ಅವರ ಜತೆ ಇದ್ದಿದ್ದು ನಮ್ಮ ಸೌಭಾಗ್ಯ. ಬಂದ ನಂತರ ನಾನು ಅವರ ಜತೆ ಇ-ಸಂಪರ್ಕದಲ್ಲಿದ್ದೆ. ನನ್ನ ಸ್ನೇಹಿತೆ ಜ್ಯೋತಿ ಕಡಲಾಡಿಯವರು ನನಗೆ ಕುಮಾರಪ್ಪನವರು ಅನುವಾದ ಮಾಡಿದ ಬೇಬಿ ಹಾಲ್ದಾರ್ ಅವರ `ನೋವು ತುಂಬಿದ ಬದುಕು' ಪುಸ್ತಕವನ್ನು ನಮ್ಮ ಮೊದಲ ಭೇಟಿಯ ಸವಿನೆನಪಿಗಾಗಿ ನೀಡಿದಾಗ ತುಂಬ ಸಂಭ್ರಮಪಟ್ಟು, ಮನೆಗೆ ಬಂದ ಕೂಡಲೆ ಅವರಿಗೆ ಮೈಲ್ ಕಳುಹಿಸಿದ್ದೆ. 'ಧನ್ಯವಾದಗಳು, ನಿಮಗೆ ನನ್ನಲ್ಲಿ ಎಷ್ಟೊಂದು ಅಭಿಮಾನ' ಅಂತ ಅವರು ಮರು ಮೈಲ್ ಕಳುಹಿಸಿದರು.
ಇವತ್ತು ಶ್ರೀಕಾಂತ ಪ್ರಜಾವಾಣಿ ಓದಿ, ಹೇ..ಕುಮಾರಪ್ಪ ತೀರಿಕೊಂಡ್ರಂತೆ ಅಂದಾಗ ಹೃದಯ ಕಿವುಚಿದ ಅನುಭವ. ಕಣ್ಣು ಹನಿಗೂಡಿದ್ದವು. ಮನೆಯಿಂದ ಎಲ್ಲರೂ ಹೊರಗೆ ಹೋದ ಮೇಲೆ ಸ್ವಲ್ಪ ಹೊತ್ತು ಒಬ್ಬಳೆ ಅತ್ತೆ. ಕೇವಲ 55 ವಯಸ್ಸು. ನಟರಾಜು ಅವರನ್ನು ಸಂಪರ್ಕಿಸಿದಾಗ ಅವರ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದರಂತೆ. ಆದರೂ ಇದು ಶಾಕ್
ಗ್ರಂಥಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
ಗ್ಯಾಂಗಟಾಕ್ ನಿಂದ ವಾಪಸ್ ಬರುವಾಗ ಇದೇ ರೂಟ್ ಆಗ ಹೌರಾ ಮೇಲ್ಸೇತುವೆ, ಕಾಲಿಘಾಟ್, ಬಿರ್ಲಾ ಪ್ಲ್ಯಾನೆಟೋರಿಯಮ್ ಮುಂತಾದನ್ನು ನೋಡಿದೆವು.
ಜಿ ಕುಮಾರಪ್ಪ ಅವರನ್ನು ನೆನಸುತ್ತ ನಮ್ಮ ಕಲಕತ್ತ ಟೂರ್ ಕೂಡ ನೆನಪಿಸಿದಂತಾಯಿತು.
ಕುಮಾರಪ್ಪ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ
:-(





4 comments:
:-(
ಯಾಕೋ ಮನಸ್ಸು ತೀರಾ ವಿಹ್ವಲವಾಯಿತು. ಆಗಿದ್ದ ಮನುಜ ಈಗಿಲ್ಲ! ಛೇ, ಹೀಗಾಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಅಂದ ಹಾಗೆ ಪ್ರವಾಸದ ಕಥನ, ಕುಮಾರಪ್ಪನವರ ವ್ಯಕ್ತಿ ಚಿತ್ರಣ ಮತ್ತು ಫೋಟೋಗಳು ಅಮೋಘವಾಗಿವೆ.
ಕುಮಾರಪ್ಪನವರಿಗೆ ನನ್ನ ಸಣ್ಣ ನಮಸ್ಕಾರ...ಅವರು ಯಾವಾಗಲು ಚಿರಂಜೀವಿಗಳು..ಹಾಗೆ ನಿಮ್ಮ ಪುಸ್ತಕ ಪ್ರೀತಿ ನಾನು ನೊಡಿದ್ದೀನಿ..ಕಲ್ಕತ್ತದ ಚಿತ್ರಗಳು ಚೆನ್ನಾಗಿದೆ..
Thank you everybody
ms
Post a Comment