ಒಂದು ಸಲ ಒಬ್ಬ ರಾಜ ಅವನ ಸೈನ್ಯದ ತುಕಡಿಯಿಂದ ಬೇರ್ಪಡುತ್ತಾನೆ. ನಡೆಯುತ್ತ ನಡೆಯುತ್ತ ನಡೆಯುತ್ತ ನಡೆಯುತ್ತ (ಆಜೋಬಾ ಎಷ್ಟು ಸಲ 'ನಡೆಯುತ್ತ' ಅಂತ ಹೇಳ್ತೀಯಾ ಅಂದ್ರೆ ಅವನು ಅಷ್ಟು ದೂssssssssssರ ನಡೆದಿದ್ದಾನಲ್ವಾ ಅದಕ್ಕೆ ಅನ್ನುತ್ತಿದ್ದರು. miss u ajoba) ಒಂದು ಅಡವಿಯಲ್ಲಿ ದಾರಿ ತಪ್ಪುತ್ತಾನೆ. ಅವನಿಗೆ ಜೋರು ಹಸಿವೆಯಾಗಿರುತ್ತೆ. ಒಂದು ಗುಡಿಸಲಿನ ಬಳಿ ತಲುಪಿ, ಯಾರಿದ್ದೀರಿ ನನಗೆ ಹಸಿವೆಯಾಗಿದೆ, ತಿನ್ನಲು ಏನಾದರೂ ಕೊಡಿ' ಅಂತ ಕೇಳಿದ. ಅಲ್ಲಿ ಇದ್ದದ್ದು ಒಬ್ಬ ಒಂಟಿ ಹಣ್ಣು ಹಣ್ಣು ಮುದುಕಿ.'ಮಗ ನನ್ನ ಬಳಿ ತಿನ್ನಲಿಕ್ಕೆ ಏನಿಲ್ಲ' ನನ್ನ ಜತೆ ಬಾ ದೇವಸ್ಥಾನದಲ್ಲಿ ಹಣ್ಣು ಕಾಯಿ ಏನಿದ್ದರೂ ನೀನು ತಿನ್ನ ಬಹುದು ಅಂತ ಅವನನ್ನು ಗುಡಿಸಲಿನ ಹತ್ತಿರದಲ್ಲಿ ಇರುವ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾಳೆ. ರಾಜನ ದುರದೃಷ್ಟಕ್ಕೆ ಅಲ್ಲಿ ಹಣ್ಣು ಕಾಯಿ ಮುಂತಾದ್ದು ಏನೂ ಇರಲಿಲ್ಲ. ದೇವಸ್ಥಾನದ ಹೊರ ಜಗುಲಿಯ ಮೇಲೆ ಒಂದು ತವಡು (Bran)ತುಂಬಿದ ಚೀಲವಿತ್ತು. ಬಹುಶ: ಕುದುರೆಗೆ ಅಂತ ತಂದಿದ್ದು, ದಾರಿಹೋಕರು ಬಿಟ್ಟು ಹೋಗಿದ್ದಿರಬಹುದು. ರಾಜನ ಕಂಗಾಲಾದ ಮುಖನೋಡಿ ಮುದುಕಿ ನಾನು ನಿನಗೆ ತವಡಿನಿಂದ ರೊಟ್ಟಿ ಮಾಡಿ ಕೊಡುತ್ತೇನೆ, ತಿನ್ನುತ್ತಿಯಾ ಅಂತ ಕೇಳಿದಳು. ಹಸಿವೆಯಿಂದ ಪ್ರಾಣ ಹೋಗ್ತಾ ಇದೆ ಬೆ ಮುದುಕಿ ಅಂದ ರಾಜ. ಮುದುಕಿ ದೇವರ ಹಚ್ಚಿ ರಾಜನಿಗೆ ತವಡಿನ ರೊಟ್ಟಿಗಳನ್ನು ದೀಪದ ಎಣ್ಣೆ ಹಾಕಿ ಬೇಯಿಸಿ ಕೊಡುತ್ತಾಳೆ. ರಾಜ ಹೊಟ್ಟೆ ತುಂಬ ತಿಂದ. ಆಮೇಲೆ ಅವನಿಗೆ ನಾಚಿಕೆಯಾಯಿತು. ಛಿ ನಾನು ರಾಜ ಹೀಗೆ ತವಡಿನ ರೊಟ್ಟಿ ತಿಂದಿದ್ದೇನೆಂದರೆ ಎಲ್ಲರೂ ಗೇಲಿ ಮಾಡಿಯಾರು, ನನ್ನ ಮರ್ಯಾದೆ ಪ್ರಶ್ನೆ, ಅಂತ ಮುದುಕಿಗೆ ತನ್ನ ಕುತ್ತಿಗೆಯಲ್ಲಿನ ಮುತ್ತಿನ ಸರ ಕೊಟ್ಟು. ನಾ ಪರ ಊರಿನ ರಾಜ, ಯಾರಿಗೂ ನಾನು ತವಡಿನ ರೊಟ್ಟಿ ತಿಂದದ್ದು ಹೇಳಬೇಡ ಅಂತ. ಮುದುಕಿ ಹೂಂ ಅಂದಳು
ಆದರೆ ಅವಳಿಗೆ ಈ ಗುಟ್ಟು ಅರಗಿಸಕೊಳ್ಳಲಾಗಲಿಲ್ಲ. ಹೊಟ್ಟೆಯಲ್ಲಿ ಗುಟ್ಟು ಇಟ್ಟುಕೊಂಡು ಅವಳಿಗೆ ಹೊಟ್ಟೆ ನೋವು ಶುರು ಆಯಿತು. ಅವಳು ದೇವಸ್ಥಾನದ ಬಳಿ ಬಂದು ಅಲ್ಲಿ ಒಂದು ಹೊಂಡ ತೋಡಿ, ಅದರಲ್ಲಿ ತನ್ನಲ್ಲಿರುವ ಗುಟ್ಟನ್ನು- 'ರಾಜಾ ತವಡು ತಿಂದ' ಅಂತ ನಿಧಾನಕ್ಕೆ ಉಸುರಿದಳು.ಅದರ ಮೇಲೆ ಮಣ್ಣು ಮುಚ್ಚಿ ಹೊರಟು ಹೋದಳು. ಅವಳ ಹೊಟ್ಟೆ ನೋವು ಮಾಯವಾಯಿತು. ಅಲ್ಲಿ ಫ್ರೆಶ್ ಆಗಿ ಹೊಂಡ ತೋಡಿ ಅದರ ಮೇಲೆ ತೆಳುವಾಗಿ ಮಣ್ಣು ಮುಚ್ಚಿದ್ದು ನೋಡಿ ದೇವಸ್ಥಾನದ ಅರ್ಚಕ ಅಲ್ಲೊಂದು ಗಾಳಿ ಮರದ ಬೀಜವನ್ನು ಬಿತ್ತಿದ. ಆ ಬೀಜ ಚಿಗುರೊಡೆದು, ಬೃಹದ್ ಗಾತ್ರದ ಮರವಾಗಿ ಬೆಳೆಯಿತು.
ಗಾಳಿ ಬೀಸಿದಾಗಲೆಲ್ಲ ಆ ಮರ ಓಲಾಡುತ್ತ 'ರಾಜಾ ತವಡು ತಿಂದ' ಎಂಬ ಸದ್ದು ಹೊರಡಿಸಲಾರಂಭಿಸಿತು. ಒಂದು ದಿನ ಆ ದಾರಿಯಲ್ಲಿ ಹೋಗುವ carpenter ಈ ದಪ್ಪ ಗಾತ್ರದ ಮರ ನೋಡಿ ಅದನ್ನು ಮೃದಂಗ ಮಾಡಲೋಸುಗ ಅದನ್ನು ಕತ್ತರಿಸಿ ಅದರಿಂದ ಮೃದಂಗ ತಯಾರಿಸಿದ. ಈ ಮೃದಂಗವನ್ನು ಒಬ್ಬ ಸಂಗೀತಗಾರ ಖರೀದಿಸಿದ. ಅವನಿಗೆ ಅದೇ ರಾಜನ ಆಸ್ಥಾನದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಸಾಥ್ ನೀಡಲು ಆಮಂತ್ರಣ ಬಂದಿತು. ಆಸ್ಥಾನನಲ್ಲಿ ಮೃದಂಗ ಬಾರಿಸುವಾಗ ಅದರಿಂದ 'ರಾಜಾ ತೌಡು ತಿಂದ ಧೂಮ್ ತನನನನನ...ರಾಜಾ ತವಡು ತಿಂದ ಧೂಮ್ ತನನನನನ' ಅನ್ನುವ ಸದ್ದು ಹೊರಡಿಸಿತಂತೆ...
ಹೀಗೆ ರಾಜನು ತವಡು ತಿಂದ ವಿಷಯ ಎಲ್ಲರಿಗೂ ಗೊತ್ತಾಯಿತು..ಆಮೇಲೆನಾಯ್ತು? ನಿಮಗೇನಾದರೂ ಗೊತ್ತಿದ್ದಲ್ಲಿ ಶೇರ್ ಮಾಡಿ. ನನಗೆ ನೆನಪಿರೋದು ಇಷ್ಟೆ...
:-)ತವಡು ಅಂದ್ರೆ bran ಧಾನ್ಯಗಳ ಹೊರಗಿನ ಕವಚ . ಈಗಂತೂ rice bran ಎಣ್ಣೆಗೆ ಸಿಕ್ಕಾಪಟ್ಟೆ ಪ್ರಚಾರ ಸಿಗುತ್ತಿದೆ. ತವಡಿನಲ್ಲಿ ಹೈ ಫೈಬರ್ (ಕನ್ನಡದಲ್ಲಿ??) ಅಂಶ ಇರುವುದರಿಂದ ಅದು ಮನುಷ್ಯರ ದೇಹಕ್ಕೆ ಒಳ್ಳೆಯದು. ಯು ಎಸ್ ನಲ್ಲಿರುವ ತಂಗಿ ಅಲ್ಲಿ ಬ್ರ್ಯಾನ್ ಕೇಕ್/ಮಫಿನ್ಸ್ ಎಲ್ಲ ಲಭ್ಯ ಅನ್ನುತ್ತಿದ್ದಳು. ಈಗ ಆ ರಾಜನೇನಾದರೂ ಇದ್ದಲ್ಲಿ ತವಡು ತಿಂದಿದ್ದು ಜಂಬದಲ್ಲಿ I am health conscious king ಅಂತ ಹೇಳಿಕೊಳ್ಳುತ್ತಿದ್ದನೋ ಏನೋ....:-)
ಇವತ್ತು ಸಿಕ್ಕಾಪಟ್ಟೆ ಸೆಕೆಯಂತ ಊರಿಂದ ತಂದ ಕೆಂಪಕ್ಕಿ ಗಂಜಿ ಮಾಡಿದ್ದೆ ಬೆಳಿಗ್ಗೆ ಬ್ರೇಕ್ ಫಾಸ್ಟ್ ಗೆ. ಊಟ ಮಾಡ್ತ ಇದನ್ನ ನನ್ನ ಮಕ್ಕಳ ಜತೆ ಶೇರ್ ಮಾಡಿದೆ. ಈಗ ನಿಮ್ಮೊಂದಿಗೆ. ನೀವು ನಿಮ್ಮ ಮಕ್ಕಳೊಂದಿಗೆ ಶೇರ್ ಮಾಡಬಹುದು
(ಓಕೆ ಇನ್ನು ಸಧ್ಯಕ್ಕೆ ನಿಮಗೆ ಬ್ರೇಕ್. ಇನ್ನು ಮೇ ಅಥವಾ ಜೂನ್ ಸೆಕೆಂಡ್ ಹಾಫ್ ನಲ್ಲಿ ಸಿಗುವ. till then love you all...
:-) :-)