February 4, 2010

ಸಂಚಿಯಿಂದ ತೆಗೆದ ಇನ್ನೊಂದು ನೆನಪು

ನಾನಿ (ಅಜ್ಜಿ = ತಾಯಿಯ ತಾಯಿ) ಸ್ನಾನ ಮುಗಿಸಿದ ಕುರುಹಾಗಿ, ಬಾತರೂಮಿನ ಚಿಲಕದ ಸದ್ದು ಆದ ಕೂಡಲೇ ನಾನು ಓಡುತ್ತ ಬಂದು, ಸೋಫಾದ ಮೇಲೆ ಹೊಟ್ಟೆ ಮೇಲೆ ಮಲಗಿ, ಎರಡೂ ಕಾಲನ್ನು ಗಾಳಿಗೆ ಅಲ್ಲಾಡಿಸುತ್ತಾ, ಮೊಣಕೈಯನ್ನು ಸೋಫಾಗೆ ತಾಗಿಸಿ, ಕೈಗಳಲ್ಲಿ ಗದ್ದವನ್ನಿಟ್ಟು ನಾನಿಯ ಕಡೆಗೆ ಗಮನ ಇಟ್ಟಿರುತ್ತಿದ್ದೆ. ಕಿಟಕಿ ಹತ್ತಿರ ಎರಡು ಬೆಂಚನ್ನು ಒಟ್ಟಾಗಿ ಬದಿ ಬದಿಗೆ ಇಟ್ಟು ಅದರ ಮೇಲೆ ಜಮಖಾನೆ ಹಾಸಿರುತ್ತಿತ್ತು. ಬೆಂಚಿನ ಒಂದು ಪಕ್ಕದಲ್ಲಿ , ಗೋಡೆಗೆ ತಾಗಿದಂತೆ ಪೇರಿಸಿಟ್ಟ ನಮ್ಮಲ್ಲೆರ ದಿಂಬು ಇಟ್ಟಿರುತ್ತಿತ್ತು. ನಾನಿ ಅದಕ್ಕೆ ಒರಗಿ ಕೂತು, ಒದ್ದೆ ಟವಲ್ ನಿಂದ ಕತ್ತು ಮುಖವನ್ನು ತಿಕ್ಕಿ ತಿಕ್ಕಿ ಒರೆಸಿಕೊಳ್ಳುತ್ತಿದ್ದರು. ಆಮೇಲೆ ಬೆಂಚಿನ ಬುಡದಿಂದ ಅವರ ಪುಟ್ಟ ತಗಡಿನ ಟ್ರಂಕ್ ಮೇಲೆಳೆದು,ತಮ್ಮ ಪಕ್ಕದಲ್ಲಿಟ್ಟುಕೊಳ್ಳುತ್ತಿದ್ದರು. ಅದರಿಂದ ಒಂದೊಂದಾಗಿ- ಬಾಚಣಿಕೆ, ಒಂದು ಚಿಕ್ಕ, ಒಂದು ದೊಡ್ಡ ಕನ್ನಡಿ, ಮೂರು ಒಂದೇ ಗಾತ್ರದ ಪುಟ್ಟ ಪುಟ್ಟ ಸ್ಟೀಲ್ ಡಬ್ಬಿ ಹೊರಗಿಟ್ಟು ಟ್ರಂಕನ್ನು ಪುನಃ ಬೆಂಚಿನಡಿಗೆ ಇಡುತ್ತಿದ್ದರು

ಹಿಂದಿನ ದಿನದ ತುರುಬನ್ನು ಅದರ ಯು-ಪಿನ್ ಗಳಿಂದ ಬಿಡಿಸಿ, ಬಿಚ್ಚಿ, ಬಾಚಣಿಕೆಯನ್ನು ಹತ್ತು ನಿಮಿಷ ಕೂದಲ ಮೇಲೆ ಓಡಾಡಿಸಿ, ಹೆರಳು ಹಾಕಲಿಕ್ಕೆ ಶುರು ಮಾಡಿ, ಕೂದಲಿನ ತುದಿಯವರೆಗೆ ಜಡೆ ಹೆಣೆದುಕೊಳ್ಳುತ್ತಿದ್ದರು. ಆಮೇಲೆ ಜಡೆಯನ್ನು ಮೇಲೆತ್ತಿ, ತಲೆಯ ಹಿಂಬದಿ ಒಂದೊಂದೆ ಸುರುಳಿ ಸುತ್ತಿ, ಪ್ರತೀ ಸುರುಳಿಗೆ ಪಿನ್ ಸಿಕ್ಕಿಸುತ್ತಿದ್ದರು. ತುರುಬು ಪೂರ್ತಿಯಾದ ಮೇಲೆ ಚಿಕ್ಕ ಕನ್ನಡಿಯನ್ನು ತುರುಬಿನ ಹಿಂಬದಿಗೆ ಹಿಡಿದುಕೊಂಡು, ಎದುರಿಗೆ, ಇನ್ನೊಂದು ಕೈಯಲ್ಲಿ ಹಿಡಿದುಕೊಂಡ ದೊಡ್ಡ ಕನ್ನಡಿಯಲ್ಲಿ , ಚಿಕ್ಕ ಕನ್ನಡಿಯಿಂದ, ದೊಡ್ಡ ಕನ್ನಡಿಗೆ ಪ್ರತಿಬಿಂಬಿಸುವ ತುರುಬಿನ ಆಕಾರ ಸರಿಯಾಗಿದೆಯಾ ಇಲ್ಲವ ಅಂತ ನೋಡಿ ಕೊಳ್ಳುತ್ತಿದ್ದರು.

ಸರಿಯಾಗಿದೆ ಎಂದು ಖಾತ್ರಿಯಾದ ಮೇಲೆ. ಮುಖವನ್ನು ಪುನ: ಒರೆಸಿಕೊಳ್ಳುತ್ತಿದ್ದರು. ಪುಟ್ಟ ಡಬ್ಬಿಗಳ ಮುಚ್ಚಳ ತೆಗೆದು ಇಡುತ್ತಿದ್ದರು. ದೊಡ್ಡ ಕನ್ನಡಿಯನ್ನು ಕಾಲಿಗೆ ಸಿಗಿಸಿ, ಮುಖ ಕಾಣುವಂತೆ ಸರಿಯಾಗಿ ಎಡ್ಜಸ್ಟ್ ಮಾಡ್ಕೊತ್ತಿದ್ದರು. ಚಿಕ್ಕ ಡಬ್ಬಿಗಳಲ್ಲಿ- ಒಂದರಲ್ಲಿ ಮಯಣ (bees wax), ಇನ್ನೊಂದರಲ್ಲಿ ಪುಡಿಕುಂಕುಮ ಹಾಗೂ ಕೊನೆಯ ಡಬ್ಬಿಯಲ್ಲಿ ತೂತಿನ ಕಾಸು (ಒಟ್ಟೆ ಮುಕ್ಕಾಲು ಅಂತಿದ್ವಿ ಕೊಂಕಣಿಯಲ್ಲಿ) ಇರುತ್ತಿತ್ತು. ನಾನಿ, ಈಗ ತೂತಿನ ಕಾಸನ್ನು, ಹಣೆಯ ಮೇಲೆ, ಹುಬ್ಬಿನ ಮಧ್ಯದಲ್ಲಿಟ್ಟು, ಅದರೊಳಗೆ ಮಯಣ ಹಚ್ಚುತ್ತಿದ್ದರು. ಮಯಣ ಹಚ್ಚಿಯಾದ ಮೇಲೆ, ನಿಧಾನವಾಗಿ, ಕಾಸಿನ ಮಧ್ಯದಲ್ಲಿ ಕುಂಕುಮ ತುಂಬಿ, ನಿಧಾನವಾಗಿ ಕಾಸನ್ನು ಹಣೆಯ ಮೇಲಿನಿಂದ ಅತೀ ನಾಜೂಕಾಗಿ ಸರಿಸುತ್ತಿದ್ದರು. ಅಮೇಲೆ ಕಾಲಿನ ಬೆರಳಲ್ಲಿ ಸಿಕ್ಕಿಸಿದ ಕನ್ನಡಿ ಯನ್ನು ಎಡಕೈಯಲ್ಲಿ ಹಿಡಿದು, ಒದ್ದೆ ಟವಲ್ ನಿಂದ circle ನಿಂದ ಹೊರಬಂದ ಕುಂಕುಮವನ್ನು ಒರೆಸಿಕೊಂಡು ಒಪ್ಪಮಾಡಿಕೊಳ್ಳುತ್ತಿದ್ದರು.

ನಾನು ಶಾಲೆ ಹೋಗಲು ತುಂಬಾ ಸಮಯವಿರುತ್ತಿದ್ದುದರಿಂದ, ಸುಮಾರು ದೊಡ್ಡವಳಾಗುವ ತನಕ ನನಗೆ ನಾನಿ ಕುಂಕುಮ ಇಡುವುದನ್ನು ನೋಡುವುದು ತುಂಬಾ ಮೋಜಿನ ವಿಷಯವಾಗಿತ್ತು. it was therapeutic
:-)

12 comments:

ಸವಿಗನಸು said...

ಒಳ್ಳೆ ಸವಿ ನೆನಪುಗಳು....

ಮನಮುಕ್ತಾ said...

ಸವಿನೆನಪುಗಳು ಬೇಕು ಸವಿಯಲೀ.. ಬದುಕಾ..
nice one..

ಜಲನಯನ said...

ಮಕ್ಕಳೊಂದಿಗೆ ಮಕ್ಕಳಾಗುವ ಸಾಧ್ಯತೆ ಕೇವಲ ಅಜ್ಜ-ಅಜ್ಜಿಗೇ ..ನಿಮ್ಮ ಈ ಎಲ್ಲ ಗಮನಿಕೆಗಳು ನಿಮ್ಮನ್ನು ನೆನಪಿನಾಳಕ್ಕೆ ಕೊಂಡೊಯ್ದರೆ..ಏನಿಲ್ಲ ಆಶ್ಚರ್ಯ...ಚೆನ್ನಾಗಿವೆ ಎಳೆಗಳು

ಮನಸು said...

ella nenapugaLu savi saviyaagirutte. chennagide nimma niroopaNe

ಗೌತಮ್ ಹೆಗಡೆ said...

nice reading:)

ಮನಮುಕ್ತಾ said...

Thanks..

Badarinath Palavalli said...

ಮೇಡಂ,

ಮೊದಲಿಗೆ ನನ್ನ ಬ್ಲಾಗಿನ ತನಕ ಬಂದು ಕವಿತೆ ಓದಿದ್ದಕ್ಕೆ ಧನ್ಯವಾದಗಳು.

ಏಕೆಂದರೆ ಈಗೀಗ ಕವಿತೆ ಓದುವವರಿಗೂ ಬರ ಬಿದ್ದಿದೆ!

ನೀವು ಚಿತ್ರಣವನ್ನು ಕಟ್ಟಿಕೊಟ್ಟ ರೀತಿ ಚೆನ್ನಾಗಿತ್ತು.

ಚಿಕ್ಕವಯಸ್ಸಿನಲ್ಲಿ ನನ್ನ ತಾಯಿ ಎಲ್ಲರಂತೆ ಏಕೆ ಕುಂಕುಮವಿಡುತ್ತಿರಲಿಲ್ಲ? ಎನ್ನುವುದು ವಿಚಿತ್ರ ಸಂಗತಿಯಾಗಿತ್ತು. ನನ್ನ ಎಳವೆಯಲ್ಲೇ ಅಪ್ಪ ತೀರಿಕೊಂಡ ಮೇಲೆ ಆ ಹಳ್ಳಿಗಾಡಿನಲ್ಲಿ ಕುಂಕುಮ ನಿಷಿದ್ಧ ಎಂಬ ಅರಿವು ನನಗಾಗ ಇರಲಿಲ್ಲ.

ಹಳೆಯದನ್ನು ಮತ್ತೆ ಕೆದಕಿದ್ದಕ್ಕೆ thanks.

- ಬದರಿನಾಥ ಪಲವಳ್ಳಿ.

pl. visit my blog:
www.baari-poems.blogspot.com

ಸಾಗರದಾಚೆಯ ಇಂಚರ said...

ನೆನಪುಗಳ ಬುತ್ತಿ ಚೆನ್ನಾಗಿದೆ
ಒಳ್ಳೆಯ ಬರಹ

Anonymous said...

ಇಲ್ಲಿ ಮೂಡಿ ಬಂದ ವಿವರ ತುಂಬಾ ಆಪ್ತವಾಗಿತ್ತು.ನಿಮ್ಮ ನೆನಪ ಪೆಟ್ಟಿಗೆಯೊಳಗಿನ ಇಂತಹ ಚಿಕ್ಕ ಚಿಕ್ಕ ಆದರೆ ಆಪ್ತವೆನಿಸುವ , ಜೀವನೋತ್ಸಾಹದ ವಿವರಗಳು ಬ್ಲಾಗಿನಲ್ಲಿ ಮೂಡುತ್ತಾ ಇರಲಿ. ಈ ನೆನಪ ಪೆಟ್ಟಿಗೆಯ ಕೀಲಿಯನ್ನು ಭದ್ರವಾಗಿತ್ತುಕೊಳ್ಳಿ.ಈ ಪೆಟ್ಟಿಗೆಯನ್ನು ಬಿಚ್ಚಿ ಅದರೊಳಗಿನ ಹಳೆ ಲೋಕ, ಅಲ್ಲಿನ ವಿವರಗಳನ್ನು ನಮ್ಮ ಮುಂದಿಟ್ಟಾಗ ನಿಮಗಾಗುವಸ್ತೆ ಸಂತೋಷ ಅದ ನೋಡಿದ ನಮಗೂ ಆಗುತ್ತದೆ.

keep writing,

nithesh shenoy

savitri said...

Madam, I am remembering my Naani by reading about Your Naani. My Naani Basamma was using the wax(to wear Kunkuma.) which collects in the Hanati(Panati.) We both (Naani and myself) shared most sweet days during my childhood. Thanks, Your article took me to those days once again.

Anonymous said...

Three remarkable things - your power of detailed observation, vivid memory, and recording the recollection in minute detail in a charming manner!

Our maammamaa too had an otte-mukkaalu and had an almost similar ritualistic routine, except perhaps holding the mirror with her legs.

-- Shree Kar

Anonymous said...

How was it therapeutic?