October 14, 2009

ಒಂದು ಭಾನುವಾರ- ಹಾಗೆ ಸುಮ್ಮನೆ

ಇತ್ತೀಚಿಗೆ ರಂಗಶಂಕರದಲ್ಲಿ ಮಧ್ಯಾನ್ಹ 3.30 ಗಂಟೆಗೆ ನಾಟಕದ ಶೋ ಇಡುತ್ತಾರೆ, ಇದರಿಂದ ನಮಗೆ ಅನುಕೂಲವಾಗಿದೆ. ಮಹಾಲಕ್ಷ್ಮಿಪುರಂ ದಿಂದ ಜೆ.ಪಿ ನಗರ ಸ್ವಲ್ಪ ದೂರ. ರಿಕ್ಷಾದವರು ಕೆಲವೊಮ್ಮೆ ಬರಲು ಒಪ್ಪುವುದಿಲ್ಲ.

ಭಾನುವಾರ ೩.೩೦ ಗಂಟೆಯ ಶೋ ‘ನಾ ತುಕಾರಾಮ್ ಅಲ್ಲ’ ಗೆ ಹೊರೆಟೆವು. ಸ್ವಲ್ಪ ಗಡಿಬಿಡಿಯಾಯ್ತು. ಬಸ್ಸು, ರಿಕ್ಷಾ ಹಿಡಿದು, ರಂಗಶಂಕರ ತಲುಪಿದಾಗ ಶೋ ಶುರು ಆಗುವ ಮೊದಲ ಗಂಟೆಯ ಸದ್ದಾಯಿತು. on-line ಟಿಕೆಟ್ ಬುಕ್ ಮಾಡಿದ್ದರಿಂದ ಅದನ್ನು ಕೊಟ್ಟು ಬೇರೆ ಪಾಸ ಅವರಿಂದ ಪಡೆದುಕೊಳ್ಳ ಬೇಕಿತ್ತು. ಅಂತು ಅದೆಲ್ಲಾ ಫೋರ್‌ಮೆಲಿಟಿ ಪೋರೈಸಿ, ಓಡ್ತಾ ಮೆಟ್ಟಿಲು ಹತ್ತಿ, ತುಂಬಾ ಎತ್ತರದ ಜಾಗದಲ್ಲಿ ಹೋಗಿ ಕುಳಿತು ಕೊಂಡೆವು, ಉಳಿದಿದ್ದ ಜಾಗವೆಲ್ಲಾ ಭರ್ತಿಯಾಗಿತ್ತು.

ನಾಟಕ ಇನ್ನೂ ಶುರು ಮಾಡಿರಲಿಲ್ಲ. ಅದಕ್ಕೆ ಸುಮ್ಮನೆ ಪರಿಚಯದವರೂ ಯಾರಾದರೂ ಇದ್ದಾರಾ ಅಂತ ನೋಡುತ್ತಿರುವಾಗ ಜಯಂತ ಕಾಯ್ಕಿಣಿ ಅವರ ಮಗನ ಜತೆ ಕೂತಿದ್ದು ಕಾಣಿಸಿತು ದೂರದಲ್ಲಿ ಸುಧನ್ವಾ ದೇರಾಜೆ ಯವರನ್ನು ಕಂಡೆ. ಅವರ (ಮುಖ) ಪರಿಚಯ ನನಗೆ ಮೇ ಪ್ಲವರ್ ನ,fish market ಕಾರ್ಯಕ್ರಮದಲ್ಲಿ, ದುಂಡಿರಾಜ ಅವರ ಕವನ ಗಳ ಬಗ್ಗೆ ಮಾತನಾಡಲು ಕರೆದಾಗ ಆಗಿತ್ತು. (ಆ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಅವರ ಕಡೆ ಬೆಟ್ಟು ಮಾಡಿ- ಅವನು ಸುಧನ್ವಾ ದೇರಾಜೆ-ಉಜಿರೆಯವನು- ಒಳ್ಳೆಯ ಹುಡುಗ ಅಂತ ಪರಿಚಯಿಸಿದ್ದು ನೆನಪಾಗಿ ನಗೆ ಬಂದಿತ್ತು) ದೇರಾಜೆಯವರು ತುಂಬ ಕುತೂಹಲದಿಂದ ರಂಗಸಜ್ಜಿಕೆಯನ್ನು study ಮಾಡ್ತಾ ಇದ್ದರು. (ಮರು ದಿನ ನಾಟಕದ ಬಗ್ಗೆ ಪುಟ್ಟ ಮುದ್ದಾದ ಬರಹ ವಿಜಯ ಕರ್ನಾಟಕದಲ್ಲಿ ಹಾಕಿದ್ದರು.)
ನಾವು ಕುಳಿತುಕೊಂಡ ಸಾಲಿನಲ್ಲಿ ಕೆಲವು ಖಾಲಿ ಸೀಟ್ ಇದ್ದುದರಿಂದ, ಅರುಂಧತಿ ನಾಗ ನಮ್ಮ ಹತ್ತಿರ ಕುಳಿತುಕೊಂಡ್ರು. ಕೂತ ಕಡೆಯಿಂದ ಎಲ್ಲರಿಗೂ ಮೊಬೈಲ್ ಸ್ವಿಚ್ ಆಫ್ ಮಾಡಲು ರಿಕ್ವೆಶ್ಟ್ ಮಾಡ್ತಾ ಇದ್ರು. ಜಯಂತ ಕಾಯ್ಕಿಣಿ ಮಾಡಿರಲಿಲ್ಲ. ಅದಕ್ಕೆ ಅರುಂಧತಿ ಅವರ ಬಳಿ ಹೋಗಿ, ಅವರ ಕೈ ಕುಲುಕಿ, ಕುಶಲೋಪರಿ ಬಳಿಕ ಅವರನ್ನು ಮೊಬೈಲ್ ಸ್ವಿಚ್ ಆಫ್ ಮಾಡಲು ಕೇಳಿಕೊಂಡರು.

ನಾಟಕ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಕೆಲವು ಡಯಾಲಗ್ ತುಂಬಾ ಉದ್ದವಿತ್ತು. ಶ್ರೀಕಾಂತ್ ತುಂಬಾ ನಗ್ತಾ ಇದ್ದರು. ಅವರೆಲ್ಲಾದ್ರು ನಗ್ತ ನಗ್ತ ಬೀಳಬಹುದೆಂದನಿಸಿ, ನಾಟಕಕ್ಕಿಂತ ಅವರನ್ನು ಗಮನಿಸ್ತ್ತಾ ಇದ್ದೆ. ಎಲ್ಲ ಪಾತ್ರಧಾರಿಗಳು ತುಂಬಾ ಚೆನ್ನಾಗಿ ಅಭಿನಯಿಸಿದ್ರು. ವೃದ್ಧ್ಯಾಪದಲ್ಲಿ ಕಾಡುವ ಅನಿಶ್ಚಿತತೆ, ಅದನ್ನು ದೂರಮಾಡಲು ವೃದ್ದರು ಕಂಡು ಕೊಂಡ ಉಪಾಯ ತಮಾಷೆಯಾದ್ರೂ, ಮನಸ್ಸಿಗೆ ತಟ್ಟುವಂತಿತ್ತು. ನನ್ನ ಹಿರಿ ಮಗಳು ಬ್ಯಾಕ್ ರೆಸ್ಟ್ ಗೆ ತಲೆಯಾನಿಸಿ ಒಳ್ಳೆ ನಿದ್ದೆ ಮಾಡಿದಳು. ಯಾಕೆಂದರೆ ಪ್ರತಿ ಭಾನುವಾರ ಊಟದ ನಂತರ ಒಂದಷ್ಟು ಮಲಗುವುದು ಅವಳ ಅಭ್ಯಾಸ. ನಾಟಕ ಮುಗಿದ ಮೇಲೆ ‘ಇಷ್ಟು ಬೇಗ ಮುಗಿದು ಹೋಯಿತಾ ಅಂತ ಅವಳ ಪ್ರಶ್ನೆ. ಸಧ್ಯ ಅವಳು ಮಲಗಿದ್ದು ಇವರಿಗೆ ಗೊತ್ತಿರಲಿಲ್ಲ. ಇಲ್ಲದಿದ್ದರೆ ಇವರು ಲೆಕ್ಚರ ಮೋಡ್ ಗೆ ಸಜ್ಜಾಗುತ್ತಿದ್ದರು.

೫.೩೦ ಗೆ ನಾಟಕ ಸಮಾಪ್ತ ವಾಯ್ತು. ಹೊರಗೆ ಜಯಂತ ಕಾಯ್ಕಿಣಿ ಅವರ ಮಗನನ್ನು ಆಪ್ತರಿಗೆ ಪರಿಚಯಿಸ್ತಾ ಇದ್ದರು. ನಾವು ಶಂಕರ್ ಬುಕ್ ಹೌಸ್ ನಿಂದ ಕೆಲವು ಹಳೆಯ ಕಪ್ಪು-ಬಿಳುಪು , ಕನ್ನಡ ಫಿಲ್ಮ್ ಸಿ. ಡಿ. ಗಳನ್ನು ಕೊಂಡುಕೊಂಡೆವು.

ಮಕ್ಕಳಿಗೆ ಅಷ್ಟು ಬೇಗ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಅದಕ್ಕೆ ನಮ್ಮವರು, ‘ನಡೀರಿ, ಗಾಂಧಿಬಜಾರ್ ಕಡೆಗೆ ಹೋಗುವ. ನೀವು ಅಲ್ಲಿ ಹೋಗಿಲ್ಲವಲ್ಲ’ ಅಂತ ಹೇಳಿ ರಿಕ್ಷಾದಲ್ಲಿ ಹೋಗಿ ಹೋಟೆಲ್ ಶಿವ ಸಾಗರ್ ಹತ್ತಿರ ಇಳಿದು. ಅಲ್ಲಿಂದ ನಮ್ಮನ್ನು ನಡೆಸಿಕೊಂಡು, ‘ಹಳೆಯ ಸಾಹಿತಿಗಳಿಗೆಲ್ಲ, film makers ಗಳಿಗೆಲ್ಲ ಅಚ್ಚು ಮೆಚ್ಚಿನ ತಾಣ ಅಂತ ವಿವರಿಸ್ತಾ, ಅಲ್ಲಿ ಭೇಟಿ ನೀಡುತಿದ್ದ ಎಲ್ಲ ಸಾಹಿತಿಗಳ ಹೆಸರನ್ನು ಪಟ ಪಟನೆ ಹೇಳುತ್ತಾ ಹೋದ್ರು. ಅಲ್ಲಿನ ಹೂವಿನ ಮಾರುಕಟ್ಟೆ ನನಗೆ ತುಂಬಾ ಇಷ್ಟವಾಯ್ತು. ತರಹ ತರಹದ ಆಕಾರದಲ್ಲಿ ಕಟ್ಟಿದ ಹೂ ಮಾಲೆ, ವಿವಿಧ ಜಾತಿಯ ಹೂಗಳು, ಅದನ್ನು ಕೊಳ್ಳುವ ಜನರು.ಬಹುಶ: ಅಲ್ಲೆಲ್ಲೋ ದೇವಸ್ಥಾನವಿದೆಯೋ ಎನೋ, ಗೊತ್ತಾಗಲಿಲ್ಲ.

ಡಿ.ವಿ.ಜಿ ರೋಡಲ್ಲಿ ಗುಲಕನ್ನ್-ಮಸಾಲಾ ಸೋಡಾ ಅಂಗಡಿಗೂ ಕರೆದುಕೊಂಡು ಹೋದ್ರು. ಅಂಗಡಿಯವನ ಮಾತನ್ನು ನನ್ನ ಮಕ್ಕಳು ಮಿಮಿಕ್ರಿ ಮಾಡಿದಾಗ, ಕುಡಿಯುತ್ತಿರುವ ಸೋಡಾ ನೆತ್ತಿಗೆ ಹತ್ತಿ, ಇವರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು. ನಿಮಗೆ ನಗಲಿಕ್ಕೆ- ತಮಾಷೆ ಮಾಡಲಿಕ್ಕೆ ಹೊತ್ತು-ಗೊತ್ತು ಇಲ್ಲ ಅಂತ ಅಂದು ಬಿಟ್ರು. ಆ ಸೋಡ ಅಂಗಡಿಗಿಂತ ಮುನ್ನ, ದೇವರ ಸಾಮಾನು, ಕುಸುರಿ ಕೆತ್ತನೆಯ ಕೊಬ್ಬರಿ, ಸಕ್ಕರೆ ಅಚ್ಚುಗಳನ್ನು ಮಾರುವ ಸುಮಾರು ಅಂಗಡಿಗಳನ್ನು ನೋಡಿದೆ. ಅಲ್ಲಿ ಸಹ ಸಾಕಷ್ಟು ಜನಸಂದಣಿ ಇತ್ತು. ಅಂಗಡಿಯವನಿಗೆ ‘ಇಲ್ಲಿ ಯಾವಾಗಲೂ ಹೀಗೆ ರಶ್ ಆ’? ಅಂದಿದ್ದಕ್ಕೆ ಅವನು ‘ಅಮ್ಮ,- ಮದುವೆ, ಮುಂಜಿ, ಬಾಗಿನ, ಗಣೇಶ ಗೌರಿ ವೃತಕ್ಕೆ, ಏಳನೇ ತಿಂಗ ಳ ಶಾಸ್ತ್ರಕ್ಕೆ , ದೇವರ ಧೂಪ, ದೀಪ, ಬತ್ತಿ ಮುಂತಾದ ಸಾಮಾನೆಲ್ಲಾ ನಮ್ಮಲ್ಲಿ ದೊರೆಯುತ್ತೆ, ಅದಕ್ಕೆ ಇಲ್ಲಿ ಯವಾಗಲೂ ಜನ ಏನನ್ನಾದ್ರೂ ಕೊಂಡುಕೊಳ್ಳ್ತಾರೆ ಅಂತ ಹೇಳಿದ್ರು.

ಹಾಗೆ ನಡೆದುಕೊಂಡು ಹೋಗ್ತಾ ಇದ್ದಾಗ ನಮ್ಮೆದುರೇ ಅಂಕಿತ ಬುಕ್ಕ ಸ್ಟೋರ್ ಸಿಕ್ಕಿತು. ‘ಬಾ ನಿನಗೆ ನಿನ್ನ ಫ್ರೆಂಡ್ (ವಸುಧೇಂದ್ರರ ಹಂಪಿ ಎಕ್ಸ್‌ಪ್ರೆಸ್) ಪುಸ್ತಕ ಕೊಡಿಸ್ತೇನೆ ಅಂತ ಇವರು ನಮ್ಮನ್ನೆಲಾ ಅಂಗಡಿಗೆ ಕರೆದು ಕೊಂಡು ಹೋದ್ರು. ಪುಸ್ತಕ ದ ಅಂಗಡಿ ಹೊಕ್ಕಿದ್ದು ಅಂದ್ರೆ ಸಧಾರಣವಾಗಿ ನಾವೆಲ್ಲಾ ಹೊರಗೆ ಬರುವುದು ಎರಡು ಗಂಟೆ ಮೇಲೆ. ಮಕ್ಕಳಿಬ್ಬರೂ ಕನಿಷ್ಠ ಪಕ್ಷ ಎರಡು ಕಾಮಿಕ್ ಬುಕ್ ಗಳನ್ನು ಓದಲೇ ಬೇಕು. ನನಗ್ಯಾಕೋ ಅಂಗಡಿ ತುಂಬಾ ಕ್ರಾಂಪ್ಡ (claustrophobic ) ಅನ್ನಿಸಿತು. ಅದಕ್ಕೆ ನಾನು ಮೆಟ್ಟಿಲ ಹತ್ತಿರ ಇದ್ದ ಪುಸ್ತಕದ ಮೇಲೆ ಕಣ್ಣೋಡಿಸ್ತಾ ಇದ್ದೆ. ಎರಡು ಹಂಪಿ ಎಕ್ಸ್‌ಪ್ರೆಸ್ ಪುಸ್ತಕಗಳು, ಜಯಂತ ಕಾಯ್ಕಿಣಿ ಕವಿತೆಗಳ ಪುಸ್ತಕ ‘ಶ್ರಾವಣ ಮಧ್ಯಾನ್ಹ-ನೀಲಿ ಮಳೆ’ ಪಕ್ಕದಲ್ಲಿಟ್ಟು, ಅಂಗಡಿಗೆ ಬಂದ ಇತರ ಜನರನ್ನು ಗಮನಿಸ್ತಾ ಇದ್ದೆ. ತುಂಬ ಜನ ಇದ್ದರು. ಜಾಸ್ತಿ ಯುವಕರೇ. ಖುಶಿಯಾಯ್ತು. ಜನರಲ್ಲಿ ಪುಸ್ತಕ ಓದುವ ಅಭ್ಯಾಸ ಇನ್ನೂ ಇದೆ ಅಂತ ಆಯ್ತು

ಆಗಲೇ ಗಂಟೆ ೮.೩೦ ಯಾಗಿತ್ತು. ಅವರೆನ್ನೆಲ್ಲಾ ಹೊರಡಿಸಿ, ರೋಟಿ ಘರ್ ನಲ್ಲಿ ಊಟ ಮಾಡಿದ್ವಿ. ಮತ್ತೆ ಮನೆಗೆ ಮರಳಲು, ನಮ್ಮ ಏರಿಯಾಗೆ ಬರಲು ಯಾವೊಬ್ಬ ರಿಕ್ಷಾದವನೂ ಒಪ್ಪಲಿಲ್ಲ. ಬೇರೆ ವಿಧಿಯಿಲ್ಲದೇ ಬಸ್ಸ್ ಗೆ ಕಾದು, ಅಂತು ಇಂತು ಬಸ್ಸು ಬಂದು, ಅದರಲ್ಲಿ ಕುಳಿತು ಕೊಳ್ಳಲು ಜಾಗ ಸಿಕ್ಕಾಗ ನೆಮ್ಮದಿ. ಯಾಕೆಂದ್ರೆ ಪುಸ್ತಕ ಖರಿದಿ ಜೋರಾಗಿ, ಬ್ಯಾಗ್ ತುಂಬಾ ವಜ್ಜೆ heavy ಆಗಿತ್ತು. ಕಿಟಕಿ ಬಾಗಿಲು ತೆಗೆದು, ನನ್ನ ದೊಡ್ಡಮಗಳಿಗೆ ಆ ಜಾಗ ಬಿಟ್ಟು ಕೊಟ್ಟು ನಾನು ಪಕ್ಕದಲ್ಲಿ ಕುಳಿತುಕೊಂಡೆ.

ಬಸ್ಸ್ ಹತ್ತುವಾಗಲೇ ಖಾಲಿ ಇರುವ ಸೀಟ್ ನ ಹಿಂಬದಿ ಒಂದು ಪುಟ್ಟ ಪಾಪು ನ ನೋಡಿದ್ದೆ. ಸರಿ , ಕುಳಿತು ಎರಡು ನಿಮಿಷದ ಮೇಲೆ ತಲೆ ಮೇಲೆ ಪುಟ್ಟ ಕೈ ಯಿಂದ ತಬಲಾ ಬಾರಿಸಿದ ಹಾಗೆ ಅನ್ನಿಸ್ತು. ನಾನು ತಿರುಗಿ ನೋಡಲಿಲ್ಲ. ಹಾಗೇ ಮೂರು ನಾಲ್ಕು ಬಾರಿ ಆಯ್ತು. ಬಹುಶ: ನನ್ನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಿದು ಮಗುವಿಗೆ ಆಶ್ಚರ್ಯ ವಾಗಿರಬಹುದು. ನಿಧಾನವಾಗಿ ಪುಟ್ಟ ಕೈ ನಿಂದ ಸರಳು ಹಿಡಿದುಕೊಂಡು ಮುಖ ನನ್ನ ಬಳಿಗೆ ತಂದಿತು. ನಾನು ಮಗುವನ್ನು ನೋಡಿ, ತಟ್ಟಂತ ನಾಲಿಗೆ ಹೊರಚಾಚಿದಾಗ, ಮೊದಲಿಗೆ ಬೆಚ್ಚಿ ಆಮೇಲೆ ತಕ್ಷಣ ಅದು ಗಟ್ಟಿ ನಗಲು ಶುರು ಮಾಡಿತು. ಹಲ್ಲಿಲ್ಲದ ಬೊಚ್ಚು ಬಾಯಿಯ, ಜೊಲ್ಲು ಸುರಿಸುತ್ತಾ ನಕ್ಕಿದ್ದು ತುಂಬಾ ಖುಶಿ ಕೊಟ್ಟಿತು. ಮಗುವಿನ ಅಪ್ಪ ಅಮ್ಮ ಜಂಬದಿಂದ ಮಗುವಿನ ಬಾ ಲೀಲೆ ಹೇಳಲು ಮುಂದಾದರು. ಮಗುವಿನ ಹೆಸರು ಶ್ರೀ ರಾಮ ಚಂದ್ರ. ೧೧ ತಿಂಗಳು ವಯಸ್ಸು, ನೋಡಲಿಕ್ಕೆ ದುಂಡಗಿತ್ತು, ಮುದ್ದಾಗಿತ್ತು. ಸುಮಾರು ಹೊತ್ತು ಆಡ್ತಾ , ಒಂದು ಅರ್ಧಾ ಲೀಟರ್ ಜೊಲ್ಲು ಸುರಿದಿರಬೇಕು. ಆವಾಗಾವಾಗ ನನ್ನ ವೈಲ್ ನಿಂದ ಅದರ ಬಾಯಿ ಒರೆಸುತ್ತಾ ಇದ್ದೆ. ಯಾವುದೋ ಒಂದು ದೇವರನಾಮ (ಪವಮಾನ) ‘ಆಆಆಆsssssss ಅದರ ಬಾಲ ಭಾಷೆಯಿಂದ’ ಮಗುವಿನ ತಂದೆತಾಯಿ ಹಾಡಿಸಿದ್ರು. ಮತ್ತು ಅವರು ಇಳಿಯುವ ಸ್ಟಾಪ್ ಬಂತು. ಮಗುವಿಗೆ ದುಂಡಗಿನ ಕಪ್ಪು ಬಟ್ಟು ಇಟ್ಟಿದ್ರೂ ನಾನು ದೃಷ್ಟಿಯಾಗದಂತೆ ನನ್ನ ಬೆರಳಿನಿಂದ ನೆಟಿಕೆ ಮುರಿದು, ಮಗುವನ್ನು ಅದರ ಪೋಷಕರ ಬಳಿಗೆ ಕಳಿಸಿದೆ.

ಎಷ್ಟು ಎಂಜಾಯ್ ಮಾಡಿದೆ ಆ ದಿನ.

6 comments:

ಮನಸು said...

ಒಳ್ಳೆಯ ನೆನಪು ಚೆನ್ನಾಗಿ ವಿವರಿಸಿದ್ದೀರಿ... ರಂಗಶಂಕರದಲ್ಲಿ ಯಾವ ನಾಟಕ್ಕೆ ಹೋದರು ಚಿತ್ರ ಹಾಗು ಸಾಹಿತಿ ತಂಡದವರಾದರು ಇರುತ್ತಾರೆ ನಾನು ಒಮ್ಮೆ ನಾಟಕ ನೋಡಲು ಹೋದಾಗ.... ರತ್ನಜ ಚಿತ್ರ ನಿರ್ದೇಶಕರು ಹಾಗು ಹಲವು ನಟರಿದ್ದರು....ಹಾಗು ಅರುಂಧತಿ ನಾಗ್ ಅವರ ಮಗಳಿದ್ದರು.

ಸವಿಗನಸು said...

ಮಾಲತಿ,
ನಿರೂಪಣೆ ಚೆನ್ನಾಗಿತ್ತು......
ಗಾಂಧಿ ಬಜಾರ್ ಶಾಪಿಂಗಿಗೆ ಒಳ್ಳೆ ಜಾಗ...
ಬರೆಯುತ್ತಾ ಇರಿ...

nenapina sanchy inda said...

Dear Manasu & Saviganasu

thanks for all the encouragement.

:-)
malathi S

L'Étranger said...

ನೀವು ಹೀಗೆಲ್ಲಾ ಬರೆದು ನನ್ನ ಹೊಟ್ಟೆ ಉರಿಸುವುದು ಖಂಡಿತಾ ನ್ಯಾಯ ಅಲ್ಲ!!

ಹೋಗಲಿ ಬಿಡಿ, ಕಡೇ ಪಕ್ಷ ಇಷ್ಟು ರಸವತ್ತಾಗಿ ಬರೆದು ಹಳೆಯ ನೆನಪುಗಳು ಮರುಕಳಿಸುವಂತೆ ಮಾಡಿದ್ದೀರಿ. :)

ಗಾಂಧಿಬಝಾರಿನಲ್ಲಿ ದೇವಸ್ಥಾನಗಳಿಗೆ ಕೊರತೆ ಇಲ್ಲ, ದೇವಸ್ಥಾನಗಳಿಗೆ ಹೋಗುವವರಿಗೂ ಕೊರತೆ ಇಲ್ಲ! ಇನ್ನು ತಿನ್ನುವ ಜಾಗಗಳ ಬಗ್ಗೆ ಕೇಳಲೇಬೇಡಿ. ಹಳೆಯ charm ಕಳೆದುಕೊಂಡಿದ್ರೂ, it is still one of the best areas in Bangalore for everything.

Anomalyka said...

Enjoyed this post.

Anonymous said...

>>> "ಬಸ್ಸ್ ಹತ್ತುವಾಗಲೇ ಖಾಲಿ ಇರುವ ಸೀಟ್ ನ ಹಿಂಬದಿ ಒಂದು ಪುಟ್ಟ ಪಾಪು ನ ನೋಡಿದ್ದೆ. .... ಎಷ್ಟು ಎಂಜಾಯ್ ಮಾಡಿದೆ ಆ ದಿನ."

ಆಟೋದಲ್ಲಿ ಅಥವಾ ನಿಮ್ಮ ಸ್ವಂತ ಕಾರಿನಲ್ಲಿ ಹೋಗಿದ್ದರೆ ಈ ಸಂತೋಷ ತಪ್ಪಿಹೋಗುತ್ತಿತ್ತು!

:-)

-- ಶ್ರೀ ಕಾರ್