October 24, 2024

ಒಂದು ಸಣ್ಣ ಕತೆ

 

              meta pic

ಪಶುಪತಿರಾಯರ ಬೆನ್ನು ಹುರಿಯಲ್ಲಿ ಬಿಟ್ಟು ಬಿಟ್ಟು ಚಳಿಯಾಗಿ ನಡುಗುತ್ತಿದ್ದರು. ಪಕ್ಕದ ಕೋಣೆಯಿಂದ ಸೊಸೆ ಮುಸಿ ಮುಸಿ ಅಳುವುದು ಕೇಳಿಸುತ್ತಿತ್ತು. ಮಗ ಬೈಕ್ ಅಪಘಾತದಿಂದ ಏಕಾಏಕಿ ಸಾವನ್ನಪ್ಪುವುದೆಂದು ಅವರು ಎಣಿಸಿರಲಿಲ್ಲ.

ಮಗ 7 ವರ್ಷದವನಿದ್ದಾಗ ಪಶುಪತಿರಾಯರ ಹೆಂಡತಿಯ ಕಾಲಾವಸಾನವಾಯಿತು. ಮರು ಮರುಮದುವೆಯ ಒತ್ತಾಯವಿದ್ದರೂ, ಮಗನಿಗೆ ಮಲತಾಯಿ ಬರುವುದು ಬೇಡ ಅಂತ ಅವರೇ ಮಗನ ಪಾಲನೆ ಪೋಷಣೆ ಮಾಡಿದರು. ಒಂದು ಸರಕಾರಿ ನೌಕರಿಯಲ್ಲಿದ್ದುಕೊಂಡು ಮಗನಿಗೆ ಇಂಜಿನೀಯರಿಂಗ್ ಓದಿಸಿದರು. ಮಗ , ಜತೆ ಕೆಲಸ ಮಾಡುತ್ತಿರುವ ಬೇರೆ ಜಾತಿಯವಳೊಂದಿಗೆ, ಅದೂ ಅನಾಥೆ, ಯನ್ನು ಮದುವೆಯಾಗಿದ್ದು ಅವರಿಗೆ ಇರುಸುಮುರುಸಾಗಿತ್ತು. ಅವಳು ಮಾವನನ್ನು ತುಂಬಾ ಓಲೈಸಲು ಪ್ರಯತ್ನ ಪಟ್ಟಳು. ಆದರೆ ಅವರು ಅವಳ ಜತೆ ಮಾತನಾಡುತ್ತಲೇ ಇರಲಿಲ್ಲ. ಮೊಮ್ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇವರಿಗೋ ಮಧ್ಯಾಹ್ನ ಜೋಳದ ರೊಟ್ಟಿ ಬೇಕಿತ್ತು. ಸೊಸೆ ಪಲ್ಯ ಸಾರು ಎಲ್ಲ ಮಾಡಿಟ್ಟು, ಮಧ್ಯಾಹ್ನ ಬಿಸಿ ಬಿಸಿ ರೊಟ್ಟಿ ತಟ್ಟಲು ಅಡುಗೆಯವಳನ್ನು ನೇಮಿಸಿದ್ಧಳು. ಸೊಸೆ ಮಾವನವರ ಜತೆ ನಿರಂತರ ಮಾತನಾಡುತ್ತಲೇ ಇರುತ್ತಿದ್ದಳು. 'ಮಾವ ಔಷಧ ಖಾಲಿಯಾಯ್ತ, ಇವತ್ತು ಬದನೆಕಾಯಿ ಪಲ್ಯ ಮಾಡಲಾ, ನಿಮ್ಮ ಇಷ್ಟದ ಕನ್ನಡ ಬರಹಗಾರರ ಹೊಸ ಪುಸ್ತಕ ಬಂದಿದೆ, ಇವತ್ತು ಕುರಿಯರ್ ಮೂಲಕ ಬರುತ್ತದೆ..ಇತ್ಯಾದಿ..
ಬಾಡಿಗೆ ಮನೆಯಿಂದ ಮಗ  ಸೊಸೆ ಸೇರಿ ಕಟ್ಟಿದ ದೊಡ್ಡ ಮನೆಗೆ ಬಂದಿದ್ದರು.
ಮಗ ಉಯಿಲು ಬರೆಯದಿದ್ದಲ್ಲಿ ಮಗನ ಆಸ್ತಿ ಎಲ್ಲ ಅವಳ ಪಾಲಿಗೆ ಬಂದು, ಬಹುಶಃ ನನ್ನನ್ನು ಈ ಮನೆಯಿಂದ ಹೊರ ಹಾಕ ಬಹುದು. ನಾನು ಅವಳನ್ನು ನಡೆಸಿಕೊಂಡ ರೀತಿಗೆ ಇದೆ ಸೈ....ನಾನೆಲ್ಲಿ ಹೋಗಲಿ ಎನ್ನುವ ಭಯ ರಾಯರನ್ನು ತುಂಬಾ ಕಾಡಿಸಿತು.
ಒಂದು ತಿಂಗಳ ತರುವಾಯ ವಕೀಲರು ಮನೆಗೆ ಬಂದು ಉಯಿಲು ಪತ್ರಿಯನ್ನು ಓದಿದರು. ಮಗ ಮನೆಯನ್ನು ಮತ್ತು ಒಂದಷ್ಟು ಮೊತ್ತವನ್ನು ಅಪ್ಪನ ಹೆಸರಿಗೆ ಬರೆದಿದ್ದನ್ನು. ರಾಯರಿಗೆ ನಿರುಮ್ಮಳವಾಯಿತು. ಕೊನೆಗೂ ನಾನು ಮಾಡಿದ ತ್ಯಾಗ ಕ್ಕೆ ಮಗ ತಕ್ಕುದಾಗಿಯೇ  ನಿರ್ಧಾರ ತೆಗೆದುಕೊಂಡಿದ್ದ.
ಸೊಸೆ 'ಮಾವ ನೀವು ಚಿಂತೆ ಮಾಡದಿರಿ, ನಿಮ್ಮನ್ನು ನಿಮ್ಮ ಮಗನಂತೆಯೇ  ಚೆನ್ನಾಗಿ ನೋಡಿಕೊಳ್ಳುವ ಹೊಣೆ ನನ್ನದು. ಆರಾಮಾಗಿ ಇರಿ ಅಂದಿದ್ದಕ್ಕೆ

'ಈ ಮನೆ ನನ್ನದು,ನೀನು ಈಗ ಈ ಮನೆಯಿಂದ ಹೋಗಬಹುದು. ಆಕೆ''ಮತ್ತೆ ಮೊಮ್ಮಗ?
ಅವನನ್ನೂ ಕರೆದು ಕೊಂಡು ಹೋಗು.ಇನ್ಮುಂದೆ ನಿಮ್ಮ ಸಂಪರ್ಕ ನನಗೆ ಬೇಡ. ಸೊಸೆ ತುಂಬಾನೇ ಅತ್ತಳು. ಮಾತು ಬೆಳೆಸದೆ ಮೊಮ್ಮಗನನ್ನು ಎತ್ತಿಕೊಂಡು, ಅವರ ಬಟ್ಟೆ ಬರೆ ಮಾತ್ರ ತೆಗೆದುಕೊಂಡು ಹೊರ ನಡೆದಳು. ಎಲ್ಲಿ ಎತ್ತ ಅಂತ ಪಶುಪತಿರಾಯರು ಕೇಳಲೇ ಇಲ್ಲ.
ಇದ್ದ ಮನೆಯನ್ನು ಮಾರಿ, ಒಂದು assisted living ಆಶ್ರಮ ಸೇರಿಕೊಂಡರು.
ಐದಾರು ವರ್ಷಗಳ ನಂತರ ಉಯಿಲು ಓದಿದ ವಕೀಲರು ಒಂದು ಕಾರ್ಯಕ್ರಮ ನಡೆಸಲು ಇವರ ಆಶ್ರಮಕ್ಕೆ ಬಂದರು. ರಾಯರಿಗೆ ಸೊಸೆ ಮೊಮ್ಮಗನ  ಬಗ್ಗೆ ಕೇಳಿದರು. ಸೋಸೆಯನ್ನು ಮನೆಯಿಂದ ಹೊರಗೆ ಹಾಕಿದ್ದನ್ನು ಹೇಳಿದರು...
ಛೇ ಛೇ ಎಂದರು ವಕೀಲರು. ನಿಮ್ಮ ಮಗ ಆಸ್ತಿಯನ್ನು ಸೊಸೆಯ ಹೆಸರಿಗೆ ಬರೆಯಲು ಬಂದಿದ್ದ, ಆದರೆ ನಿಮ್ಮ ಸೊಸೆ 'ನನ್ನ ಜತೆ ಮದುವೆಯಾಗಿದ್ದಕ್ಕೆ ನಿಮ್ಮ ತಂದೆ ನೊಂದಿದ್ದಾರೆ....ಅವರಿಗೆ ಇನ್ನೂ ನೋವು ಉಂಟು ಮಾಡುವುದು ಬೇಡ...ಅವರಿಗೆ ಸಮಾಧಾನ ವಾಗುವ ಹಾಗೆ ಆಸ್ತಿ ಅವರ ಪಾಲಿಗೆ ಬರೆಯಿರಿ.. ನನಗೆ ಹೇಗೂ ನೌಕರಿಯಿದೆ' ಎಂದಿದ್ದಳು....ಈ ಮಾತನ್ನು ಕೇಳಿ ರಾಯರು ಕುಸಿದುಹೋದರು. ಎಷ್ಟು ಅಹಂಕಾರದಿಂದ ವರ್ತಿಸಿದೆ...ಸೊಸೆ ಮೊಮ್ಮಗನನ್ನು ಹುಡುಕಬೇಕು ಎಂದುಕೊಂಡರು....

❤️❤️🙂

No comments: