ಟಿ.ವಿ ಬಾಲಕೃಷ್ಣ ಶೆಣೈ ( ವರ್ತಕರು ,ತೀರ್ಥಹಳ್ಳಿ )
ತೀರ್ಥಹಳ್ಳಿ ತಾಲ್ಲೂಕಿನ ಗೌಡ ಸಾರಸ್ವತ ಸಮಾಜದ ಹಿರಿಯರು ವೃತ್ತಿಯಲ್ಲಿ ವರ್ತಕರು ಹಾಗು ಕೃಷಿಕರಾಗಿ ತಮ್ಮ ಶಿಸ್ತು ಬದ್ಧ ಜೀವನ ಹಾಗು ವೃತ್ತಿ ಬದ್ದತೆಗಳ ಮೂಲಕ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಚಿರಪರಿಚಿತರಾಗಿದ್ದ ಟಿ.ವಿ ಬಾಲಕೃಷ್ಣ ಶೆಣೈ ಇವರು ಮೂಲತಃ ದಕ್ಷಿಣ ಕನ್ನಡದ ಮೂಲದವರಾದರು ಸರಿಸುಮಾರು ಶತಮಾನದ ಹಿಂದೆ ತೀರ್ಥಹಳ್ಳಿ ತಾಲ್ಲೂಕಿನ ಮುತ್ತೂರು ಹೋಬಳಿಯ " ಹಾರೋಗೊಳಿಗೆ "ಯಲ್ಲಿ ನೆಲೆಗೊಂಡ ಗ್ರಾಮದ ಹಿರಿಯ ಕೃಷಿಕರಾಗಿದ್ದ ಟಿ ವೆಂಕಟೇಶಯ್ಯ ಇವರ ಪುತ್ರರಾದ ಟಿ.ವಿ ಶ್ರೀನಿವಾಸಯ್ಯ ಮತ್ತು ದೇವಕಿ ಇವರ ಹಿರಿಯ ಪುತ್ರರಾಗಿ 1915 ರಲ್ಲಿ ಜನಿಸಿದರು.1923 ರಲ್ಲಿ ಹಾರೋಗೊಳಿಗೆಯ ಜಮೀನನ್ನು ಮಾರಿ ತೀರ್ಥಹಳ್ಳಿಯ ಕುರುವಳ್ಳಿಗೆ ಬಂದು ನೆಲೆಸಿದ ಬಾಲಕೃಷ್ಣ ಶೆಣೈ ಇವರ ತಂದೆ ಟಿ.ವಿ ಶ್ರೀನಿವಾಸಯ್ಯ ಜವಳಿ ಅಂಗಡಿಯನ್ನು ಪ್ರಾರಂಭಿಸಿದರಲ್ಲದೆ ಕೆಲಕಾಲ ಶಿಕ್ಷಕ ವೃತ್ತಿಯ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡವರು.1924 ರ ಮಳೆಗಾಲದಲ್ಲಿ ತುಂಗಾ ನದಿಯ ಪ್ರವಾಹದಿಂದ ಅಪಾಯದ ಮಟ್ಟವನ್ನು ಮೀರಿದ ಸಂಧರ್ಭದಲ್ಲಿ ನೆರೆಯ ಅಬ್ಬರಕ್ಕೆ ತಮ್ಮ ಮೂಲ ನೆಲೆಯನ್ನು ಕಳೆದುಕೊಂಡ ಬಾಲಕೃಷ್ಣ ಶೆಣೈ ಇವರು ತಮ್ಮ ಸಹೋದರರೊಡಗೂಡಿ ತೀರ್ಥಹಳ್ಳಿಯ ಹೃದಯ ಭಾಗವಾದ ಕೊಪ್ಪ ಸರ್ಕಲ್ ಬಳಿಯ ಮನೆಯನ್ನು ಖರೀದಿಸಿ " ಬಾಲಕೃಷ್ಣ ಶೆಣೈ ಮತ್ತು ಸಹೋದರರು " ಎಂಬ ವ್ಯಾಪಾರೀ ಸಂಸ್ಥೆಯನ್ನು ಪ್ರಾರಂಭಿಸಿ ತಮ್ಮ ಸಂಸ್ಥೆಯನ್ನು ತೀರ್ಥಹಳ್ಳಿ ತಾಲ್ಲೂಕಿನ " ಜೀವನಾಡಿ " ಯಾಗಿ ಸಾರ್ವಜನಿಕ ಬಳಕೆಯ ಬಹುಪಯೋಗಿ ಸಂಸ್ಥೆಯನ್ನಾಗಿಸಿ ರೂಪಿಸಿ ಬೆಳೆಸಿದ್ದು ಟಿ.ವಿ ಬಾಲಕೃಷ್ಣ ಶೆಣೈ ಹಾಗು ಸಹೋದರರ ವೃತ್ತಿ ಬದ್ದತೆಗೆ ಸಾಕ್ಷಿಯಾಗಿದೆ.ಸ್ವಾತಂತ್ರ್ಯ ಪೂರ್ವದಲ್ಲಿ " ಹೋಂ ಗಾರ್ಡ್ " ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದ ಬಾಲಕೃಷ್ಣ ಶೆಣೈ ಇವರು ತಮ್ಮ ಜೀವಿತಾವಧಿಯುದ್ದಕ್ಕೂ ಡಿಸೆಂಬರ್ ಆರರಂದು ನಡೆಯುವ " ಹೋ ಗಾರ್ಡ್ " ಸಂಸ್ಥಾಪನಾ ದಿನಾಚರಣೆಯಂದು ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತವಾಗಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ತಮ್ಮ ಸಾಮಾಜಿಕ ಸೆರವೆಯನ್ನು ಸಲ್ಲಿಸುತಿದ್ದ ಶ್ರೀಯುತರು ವ್ಯವಸಾಯ, ಜೇನು ಕೃಷಿ, ಖಾದಿ ಗ್ರಾಮೋದ್ಯೋಗ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಗಳಿಸಿಕೊಂಡಿದ್ದವರು. ಸರಿಸುಮಾರು ಎಂಟು ದಶಕಗಳ ಕಾಲದ ತಮ್ಮ ಜೀವಿತಾವಧಿಯಲ್ಲಿ ಅವಿಭಜಿತ ಕುಟುಂಬದ ಸದಸ್ಯರಾಗಿ,ಹಿರಿಯರಾಗಿ ತಮ್ಮೆಲ್ಲಾ ಸಹೋದರರೊಂದಿಗೆ ಕುಟುಂಬವನ್ನು ಮುನ್ನಡೆಸಿ ಅನ್ಯೋನತೆಯ ಜೀವನವನ್ನು ನಡೆಸುವ ಮೂಲಕ " ಕೂಡು ಕುಟುಂಬ "ದ ಸಾಂಪ್ರದಾಯಿಕ ಬಾಳಿಗೊಂದು ಹೊಸ ಅರ್ಥವನ್ನು ಕಲ್ಪಿಸಿದವರು ಎಂದರೆ ಅತಿಶಯೋಕ್ತಿಯಲ್ಲ.ಎತ್ತರದ ನಿಲುವು,ಉದ್ದ ತೋಳನ್ನು ಮಡಚಿದ ಶ್ವೇತವರ್ಣದ ವಸ್ತ್ರ ,ಕಚ್ಚೆ ಪಂಚೆ,ಗಂಭೀರತೆಯ ಮುಖಭಾವದ ಬಾಲಕೃಷ್ಣ ಶೆಣೈ ಇವರು ತಮ್ಮ ಅಂಗಡಿಯ ಬಲಭಾಗದ ಚೌಕಾಕೃತಿಯ ಚಾಕೊಲೇಟ್ ಗಳ ಭರಣಿಗಳು ತುಂಬಿದ ಗಲ್ಲದಲ್ಲಿ ಕುಳಿತು ವ್ಯವಹರಿಸುತ್ತಿದ್ದರೆ ಅಂಗಡಿಯ ಎಡಬದಿಯ ಗಲ್ಲದಲ್ಲಿ ಶ್ರೀಯುತರ ಸಹೋದರರಾದ ರಾಮ್ ಶೆಣೈ, ಲಕ್ಷ್ಮೀನಾರಾಯಣ ಶೆಣೈ ಹಾಗು ಪುತ್ರರಾದ ಅನಂತ ಶೆಣೈ, ನಾಗರಾಜ ಶೆಣೈ ಇವರು ಗ್ರಾಹಕರ ಸೇವೆಯಲ್ಲಿ ನಿರತರಾಗಿರುತ್ತಿದ್ದ, ಹತ್ತಾರು ಮರದ ಹಲಗೆಗಳ ಬಾಗಿಲಿನ ಅಂಗಡಿಯಾಗಿದ್ದ ಅಂದಿನ ಬಾಲಕೃಷ್ಣ ಶೆಣೈ ಯವರ ಸಂಸ್ಥೆಯ ವ್ಯಾಪಾರದ ದಿನಚರಿಗಳು ಇಂದಿಗೂ ನಾಗರೀಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.ತೀರ್ಥಹಳ್ಳಿ ತಾಲ್ಲೂಕಿನ ಗ್ರಾಹಕರ ಪಾಲಿಗೆ ಕೇಳಿದನ್ನು ಕೊಡುವ " ಕಾಮಧೇನು " ವಾಗಿದ್ದ " ಬಾಲಕೃಷ್ಣ ಶೆಣೈ " ಸಹೋದರರ ವ್ಯಾಪಾರಿ ಸಂಸ್ಥೆ ತೀರ್ಥಹಳ್ಳಿಯ ನಾಗರೀಕರ ನಿತ್ಯಜೀವನದ ಒಡನಾಡಿಯಾಗಿ ಸುಧೀರ್ಘ ಎಂಟು ದಶಕಗಳ ಕಾಲದ ಗ್ರಾಹಕರ ಸೇವೆಯ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಗೊಂಡಿರುವುದರೊಂದಿಗೆ ಶಾಲಾ ಮಕ್ಕಳ ಬಳಕೆಯ ಸುಣ್ಣದ ಬಳಪ, ಪುಸ್ತಕ, ಬೈಂಡಿಗ್ ಪೇಪರ್, ಔಷದಿಗಳ ಬೇರು,ದಿನಸಿ ಸಾಮಾಗ್ರಿ,ಕೃಷಿ ಉಪಕರಣಗಳು,ಗಾಜಿನ ಬಾಟಲಿಯ ಮರದ ಮಚ್ಚಳಗಳು, ಪೇಂಟಿಂಗ್ ಹಾಗು ಹಾರ್ಡ್ವೇರ್ ಉಪಕರಣಗಳು,ಮನೆ ಬಳಕೆಯ ವಸ್ತುಗಳು,ಗ್ರಾಮೀಣ ಕರಕುಶಲ ಸಾಮಾಗ್ರಿಗಳು ಹೀಗೆ ನೂರಾರು ಸಾಮಗ್ರಿಗಳನ್ನು ಸೂರಿನಡಿ ತಾಲ್ಲೂಕಿನ ಗ್ರಾಹಕರಿಗೆ ಪೂರೈಸುವ ಜಿಲ್ಲೆಯ ಏಕೈಕ ಪ್ರತಿಷ್ಠಿತ ಸಂಸ್ಥೆಯಾಗಿ ಪ್ರಸಿದ್ದಿ ಪಡೆದಿತ್ತಲ್ಲದೆ ವ್ಯಾಪಾರದ ಉದ್ದಾತ ಧೈಯಾದರ್ಶಗಳ ಮೂಲಕ ಜನ ಮೆಚ್ಚಗೆಗೆ ಪಾತ್ರವಾಗಿತ್ತು.ಇಂದು ದೇಶ- ವಿದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ಹಾಗು ಒಂದೆ ಸೂರಿನಡಿ ಎಲ್ಲಾ ರೀತಿಯ ಜನೋಪಯೋಗಿ ವಸ್ತುಗಳು ಸಿಗುವ ಅಧುನಿಕ ವ್ಯವಹಾರಿಕ " ಮಾಲ್ " ಸಂಸ್ಕ್ರತಿಯ ಮಾದರಿ ಕಲ್ಪನೆಯನ್ನು ಅಂದಿನ ಕಾಲದ ಅಗತ್ಯತೆಗೆ ತಕ್ಕಂತೆ ಸರಿಸುಮಾರು ಏಳೆಂಟು ದಶಕಗಳ ಹಿಂದೆ " ಬಾಲಕೃಷ್ಣ ಶೆಣೈ ಮತ್ತು ಸಹೋದರರು " ಇವರ ವಾಣಿಜ್ಯ ಸಂಸ್ಥೆ ತಮ್ಮ ವೈವಿದ್ಯಮಯ ವ್ಯಾಪಾರದ ಮೂಲಕ ಶಿವಮೊಗ್ಗ ಜಿಲ್ಲೆಗೆ ಪರಿಚಯಿಸಿದ್ದು ಶ್ರೀಯುತರ ವ್ಯಾಪಾರೀ ಕ್ಷೇತ್ರದ ದೂರದೃಷ್ಟಿತ್ವಕ್ಕೆ ಸಾಕ್ಷಿಯಾಗಿದೆ.ತಮ್ಮ ಸಹೋದರರು ಹಾಗು ಪುತ್ರರ ಸಹಕಾರದಿಂದ ಸುಧೀರ್ಘ ಎಂಟು ದಶಕಗಳ ಕಾಲ ವ್ಯಾಪಾರಿ ವೃತ್ತಿಜೀವನ, ವ್ಯವಹಾರದ ಶಿಸ್ತು,ಗ್ರಾಹಕರೊಂದಿಗಿನ ಅನ್ಯೋನತೆಗಳಿಂದಾಗಿ ತಮ್ಮ ಸಹ ವರ್ತಕರ ಗೌರವಾಧಾರಗಳಿಗೆ ಪಾತ್ರರಾಗಿದ್ದ ಟಿ.ವಿ ಬಾಲಕೃಷ್ಣ ಶೆಣೈ ತೀರ್ಥಹಳ್ಳಿ ವರ್ತಕ ವಲಯದ " ಭೀಷ್ಮ " ಎಂದರೆ ತಪ್ಪಾಗಲಾರದು. ಮೊದಲ ಮಡದಿ ಮನೋರಮಾರವಲ್ಲಿ ಮಗಳು ವಿಜಯಾ, ಮಗ ಅನಂತ ಶಣೈ ಮತ್ತು ರಘುನಾಥ ಶಣೈ, ಮೊದಲ ಮಡದಿಯ ನಿಧನನಂತರ ದ್ವಿತಿಯ ಮಡದಿ ರಮಣಿಯವರಲ್ಲಿ ಮಗಳು ಅನುರಾಧ ಮತ್ತು ಮಗ ನಾಗರಾಜ ಶಣೈ, ರಮಣಿಯವರ ನಿಧನನಂತರ, ಮೂರನೇ ಮಡದಿ ಶಾಂತಾ ಅವರಲ್ಲಿ ಶ್ರೀಕಾಂತ ಶಣೈ ಹೀಗೆ ಏಳು ಮಕ್ಕಳು, ಐವರು ಸಹೋದರಿಯರು ಇಬ್ಬರು ಸಹೋದರರನ್ನು ಹೊಂದಿದ್ದ ಟಿ.ವಿ ಬಾಲಕೃಷ್ಣ ಶೆಣೈ ಇವರು 29-10-1996 ರ ತಮ್ಮಎಂಬತ್ತೊಂದರ ವಯಸ್ಸಿನಲ್ಲಿ ವಿಧಿವಶರಾದ ಬಳಿಕ ಬಾಲಕೃಷ್ಣ ಶೆಣೈಯವರ ಸಂಸ್ಥೆಯ ವ್ಯವಹಾರಗಳನ್ನು ಇವರ ಸಹೋದರರು ಹಾಗು ಪುತ್ರರು ಮುಂದುವರೆಸಿಕೊಂಡು ಬಂದರಾದರೂ ಕಾಲಕ್ರಮೇಣ ಅವರ ಮಾಗಿದ ವಯಸ್ಸು ಹಾಗು ಸಂಸ್ಥೆಯ ವ್ಯವಹಾರಗಳನ್ನು ಮುಂದವರೆಸಿಕೊಂಡು ಹೋಗಲು ಅಗತ್ಯವಾದ ಕೌಟುಂಬಿಕ ಸದಸ್ಯರ ಕೊರತೆಯಿಂದಾಗಿ ಸರಿಸುಮಾರು 2007 ರಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಕಾಲದಲ್ಲಿ ಅನಿವಾರ್ಯವಾಗಿ ಸಂಸ್ಥೆಯ ವ್ಯವಹಾರವನ್ನು ಸ್ಥಗಿತಗಿಳಿಸುವ ಮೂಲಕ ಬಾಲಕೃಷ್ಣ ಶೆಣೈ ಮತ್ತು ಸಹೋದರರು " ಸಂಸ್ಥೆ ಇತಿಹಾಸದ ಪುಟವನ್ನು ಸೇರಿತು.ಇಂದು ಬಾಲಕೃಷ್ಣ ಶೆಣೈ ಇವರ ಸಂಸ್ಥೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ದಶಕಗಳು ಉರುಳಿದರೂ ಗ್ರಾಹಕರಿಗೆ ಸಕಾಲಕ್ಕೆ ವಸ್ತುಗಳ ಅಗತ್ಯತೆ ಬಂದಾಗ " ಬಾಲಕೃಷ್ಣ ಶೆಣೈ ಮತ್ತು ಸಹೋದರ" ರ ಬಹುಪಯೋಗಿ ಸಂಸ್ಥೆಯ ನೆನಪುಗಳು ಮನಸ್ಸಿನಾಳದಲ್ಲಿ ಹಾದುಹೋಗುವುದಲ್ಲದೆ ತೀರ್ಥಹಳ್ಳಿ ತಾಲ್ಲೂಕಿನ ನಾಗರೀಕರಿಗೆ ಈ ಸಂಸ್ಥೆಯ ಸೇವೆಯ ಅಲಭ್ಯತತೆಯ ಕೋರಗು ಇಂದಿಗೂ ಕಾಡುತ್ತಿರುವುದಲ್ಲದು ಸುಳ್ಳಲ್ಲ.ಟಿ.ವಿ ಬಾಲಕೃಷ್ಣ ಶೆಣೈ, ಅವರ ಸಹೋದರರು ಹಾಗು ಪುತ್ರರ ವ್ಯವಹಾರಿಕ ಕ್ಷೇತ್ರದ ಸಾರ್ವಜನಿಕ ಸುಧೀರ್ಘ ಸೇವೆಗೆ ತೀರ್ಥಹಳ್ಳಿ ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇವೆ.
ಬರಹ : ನವನೀತ್ ಮಕ್ಕಿಮನೆ ( 9481319601 ) thank you nanni

No comments:
Post a Comment