ಕೂಷ್ಮಾಂಡ ಅಂದ್ರೆ ಬೂದುಗುಂಬಳ . Ashgourd .
ಮನೆಗೆ ಬೂದುಗುಂಬಳಕಾಯಿ ಬಂದಾಗಲೆಲ್ಲ ಒಮ್ಮತದ ದನಿ ಮಜ್ಜಿಗೆ ಹುಳಿಗೆ . ಹೊಟ್ಟೆಗೆ ತಂಪು. ಆರೋಗ್ಯಕ್ಕೆ ಒಳ್ಳೆಯದು. ಕಡು ಬೇಸಗೆಯಲ್ಲಂತೂ ಇದರ ಸೇವನೆ ಅತ್ಯುತ್ತಮ. ಈ ಸಲ ಸಂತೆಯಿಂದ ತುಂಬಾ ದೊಡ್ಡ ಹೋಳು ತಂದಿದ್ದರು ಶ್ರೀಕಾಂತ.. ಹಾಗಾಗಿ ಅಕ್ಕ, 'ಅಮ್ಮಾ ತುಂಬಾ ದಿನ ಆಯ್ತು ಕಾಶಿ ಹಲ್ವಾ ಮಾಢದೆ ' ಅಂತ ಹೇಳಿದಳು . ಬೂದುಗುಂಬಳಕಾಯಿಯ ಹಲ್ವಾ ಗೆ ಕಾಶಿ ಹಲ್ವಾ ಯಾಕಂತಾರೆ? ಗೊತ್ತಿಲ್ಲ. ಬಹುಷ್ಯ ಹಿಂದೆ ಕಾಶಿ ರಾಮೇಶ್ವರ ಮುಂತಾದ ಕಡೆ ತೀರ್ಥಯಾತ್ರೆಗೆ ಹೋಗುವಾಗ ಇದನ್ನು ಕಟ್ಟಿಕೊಂಡು ಹೋಗುತ್ತಿದ್ದರೋ ಏನೋ? (ತೀರ್ಥಯಾತ್ರೆ ಎಂದಾಗ ರೈಲು ತಂಬಿಗೆ ನೆನಪಾಗುತ್ತದೆ. ನನ್ನ ನಾನಿ (ಅಜ್ಜಿ) ಯ ಬಳಿ ಬೆಳ್ಳಿಯ ತಂಬಿಗೆ ಇತ್ತು. ಅಷ್ಟರಲ್ಲೇ ಯಾತ್ರೆ ಮುಗಿಸುತ್ತಿದ್ದರು. ರೈಲು ಕೆಲವು ನಿಲ್ದಾಣದಲ್ಲಿ ಹೆಚ್ಚಿಗೆ ನಿಲ್ಲುತ್ತಿದ್ದ ಕಡೆ ಅದರಲ್ಲಿ ನೀರು ತುಂಬಿಸುತ್ತಿದ್ದರು. ಆಗ ಬೇರೆ ಕಡೆ ನೀರು ಕುಡಿಯುವುದರಲ್ಲಿ ಹೆದರಿಕೆ ಇರಲಿಲ್ಲ, ಹಾಗೆಯೇ ಪ್ಲಾಸ್ಟಿಕ್ ಬಾಟಲಿಗಳಿರಲಿಲ್ಲ. ಪ್ಲ್ಯಾಸ್ಟಿಕ್ ಬಾಟಲಿಗಳು ಯಾವಾಗ ಚಾಲನೆಯಲ್ಲಿ ಬಂತು ಗೊತ್ತಾಗಲೇ ಇಲ್ಲ. ಸ್ವಲ್ಪ track change ಆಯ್ತು 😀 )
ಹಾಗಾಗಿ ನಿನ್ನೆ ನಮ್ಮಲ್ಲಿ ಬೂದುಗುಂಬಳದ ಹಲ್ವಾ. ಸುಮಾರು ಸಮಯ ಬೇಕು ಇದರ ಹಲ್ವಾ ತಯಾರಾಗಲು. ಮೊದಲಿಗೆ ಬೂದುಗುಂಬಳವನ್ನು ತುರಿಬೇಕು. ಬೆಲ್ಲಕ್ಕೆ ಒಂದೆಳೆ ಪಾಕ ಆದಾಗ ತುರಿದಿಟ್ಟ ಬೂದುಗುಂಬಳದಿಂದ ನೀರೆಲ್ಲ ಒತ್ತಿ ತೆಗೆದು ಬೆಲ್ಲದ ಪಾಕಕ್ಕೆ ಹಾಕಬೇಕು. ಬೂದುಗುಂಬಳದ ನೀರಿನ ಅಂಶ ಎಲ್ಲ ಹೋಗಿ ಪಾತ್ರೆಯ ತಳ ಬಿಡುತ್ತಿದ್ದ ಹಾಗೆ ಹಲ್ವಾ ತಯಾರಾಗಿದೆ ಅಂತ ಲೆಕ್ಕ. ಸುಮಾರು ಎರಡು ಗಂಟೆಯ ಮೇಲೆ ತಗಲುತ್ತದೆ ಈ ಹಲ್ವಾ ತಯಾರಿಸಲು. ಹಾಗಾಗಿ ತುಂಬಾ ದಿನ ಕೆಡದೆ ಉಳಿಯುತ್ತದೆ. ಕೊನೆಗೆ ಏಲಕ್ಕಿ, ತುಪ್ಪ , ಹುರಿದ ಗೋಡಂಬಿ ಬೆರೆಸಿದರೆ ಆಯ್ತು. ನಿಮ್ಮ ಹಲ್ವಾ ತಯಾರು. :-)
ಈ ಸಲ ಸ್ವಲ್ಪ ಚೀಟಿಂಗ್ ಮಾಡಿದೆ. ತುರಿದು ನೀರು ಬಸಿದ ಕುಂಬಳವನ್ನು ನೀರಾರುವ ತನಕ ಮೈಕ್ರೋವೇವಿಸಿದೆ 🙂 ಹಾಗಾಗಿ ಹಲ್ವಾ ಬೇಗ ತಯಾರಾಯಿತು
ಈ ಸಲ ಸ್ವಲ್ಪ ಚೀಟಿಂಗ್ ಮಾಡಿದೆ. ತುರಿದು ನೀರು ಬಸಿದ ಕುಂಬಳವನ್ನು ನೀರಾರುವ ತನಕ ಮೈಕ್ರೋವೇವಿಸಿದೆ 🙂 ಹಾಗಾಗಿ ಹಲ್ವಾ ಬೇಗ ತಯಾರಾಯಿತು
ashgourd halwa with organic jaggery
ಬೂದುಗುಂಬಳ ತುರಿಯುವ ಕೆಲಸ ಅಕ್ಕ ಹಚ್ಚಿಕೊಂಡಳು. ಕೆಲಸ ಮಾಡ್ತಾ ಅಮ್ಮ ನೀನು ಯಾವತ್ತಾದ್ರೂ ಪೇಠಾ ಮಾಡಿದೆಯಾ? ಅಂತ ಕೇಳಿದಳು . ಪೇಠಾ ಆಗ್ರಾದ ಸ್ಪೆಷಲ್ ಸ್ವೀಟು.
ಹೌದೆಂದ್ದು ನಾವು ಪೇಠಾ ತಯಾರಿಸಿದ ಕತೆ ಶುರು ಮಾಡಿದೆ.
ಆಗ ಅಕ್ಕ (ಮಾಲವಿಕಾ) ನ ಮೊದಲ ಹುಟ್ಟು ಹಬ್ಬ ಆಚರಿಸಲು ಅಮ್ಮ ಮತ್ತು ತಮ್ಮ ಮುಂಬೈ ನಿಂದ ಕೊಪ್ಪಕ್ಕೆ ಬಂದಿದ್ದರು. ಕರೆಂಟ್ ಇದ್ದರೆ ಮಧ್ಯಾಹ್ನ ನಾವು ದೂರದರ್ಶನ ನೋಡುತ್ತಿದ್ದೆವು. ಒಂದು ಮಧ್ಯಾಹ್ನ ಆಗ್ರಾದ ಪೇಠಾ ತಯಾರಿಸಿವುದನ್ನು ತೋರಿಸುತ್ತಿದ್ದರು. ನಮ್ಮ ಬಾಡಿಗೆ ಮನೆಯ ಹಿತ್ತಲಲ್ಲಿ ನಾವು ಪುಟ್ಟ ಕೈತೋಟ ನಿರ್ಮಿಸಿದ್ದೆವು. ಆವಾಗಲೇ (30 ವರ್ಷದ ಹಿಂದೆ) ಮನೆಯ ಹಸಿ ತ್ಯಾಜ್ಯ ವಸ್ತುಗಳನ್ನು ಬಳಸಿ ಕಾಂಪೋಸ್ಟ್ ಕೂಡ ಮಾಡುತ್ತಿದೆವು. ನಮ್ಮ ತೋಟ ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಅಲ್ಲದೆ ಕೊಪ್ಪದ ವಾತಾವರಣ ಕೂಡ ಹೂ ತರಕಾರಿ ಬೆಳೆಸುವಲ್ಲಿ ತುಂಬಾ ಸಹಕಾರಿ. ನಾವು ಬೆಳೆಸಿದ ಮೂಲಂಗಿ ಅಂತೂ ಈಗಲೂ ಹಲವಾರು ಜನ ನೆನೆಸಿಕೊಳ್ಳುತ್ತಾರೆ. ನನ್ನ ತಮ್ಮ ಬಂದಾಗಲೆಲ್ಲ ತಾಜಾ ಮೂಲಂಗಿ ಸೊಪ್ಪು ಬಳಸಿ ಬ್ರೆಡ್ ಸ್ಯಾಂಡ್ವಿಚ್ ತಯಾರಿಸುತ್ತಿದ್ದೆ. ಈಗಲೂ ತಮ್ಮ ಅದನ್ನೆಲ್ಲ ನೆನೆಸಿಕೊಳ್ಳುತ್ತಾನೆ. ಕುಂಬಳಕಾಯಿಯಂತೂ ಹೇರಳವಾಗಿ ಬೆಳೆಯುತ್ತಿತ್ತು.
ಈ ಪೇಠಾ ಮಾಡುವ ಕಾರ್ಯಕ್ರಮ ಪ್ರಸಾರವಾಗುವಾಗ ನಮ್ಮ ಹಿತ್ತಲಲ್ಲಿ ಮೂರು ಬೂದುಗುಂಬಳಕಾಯಿಗಳಿದ್ದವು. ಅದರಲ್ಲಿ ಚೆನ್ನಾಗಿ ಬಲಿತ ಕಾಯಿ ಅಮ್ಮ ಸೆಲೆಕ್ಟ್ ಮಾಡಿದರು. ಶ್ರೀಕಾಂತ ಮಧ್ಯಾಹ್ನ ಊಟ ಮುಗಿಸಿ ಆಫಿಸ್ ಗೆ ಹೋಗುವ ಮುನ್ನ ಅಮ್ಮ ಅವರ ಬಳಿ ಸುಣ್ಣ ತರಿಸಿಕೊಂಡರು. ಆಮೇಲೆ ನೀಟಾಗಿ ಕುಂಬಳ ಕಾಯಿಯ ಒಂದೇ ಅಳತೆಯ ಚೌಕ ಹೋಳುಗಳನ್ನು ಮಾಡಿದರೆ ನಾನು ಮುಳ್ಳು ಚಮಚ ದಿಂದ ಹೋಳುಗಳನ್ನು ಚುಚ್ಚುತ್ತಿದ್ದೆ . ಹೋಳುಗಳನ್ನು ಸುಣ್ಣದ ನೀರಿನಲ್ಲಿ ಎರಡು ದಿನ ನೆನೆ ಹಾಕಿದೆವು. ಮೂರನೇ ದಿನ ಹೋಳುಗಳನ್ನೆಲ್ಲ ಸುಣ್ಣದ ನೀರಿನಿಂದ ತೆಗೆದು ಒಳ್ಳೆಯ ನಿರಿನಿನಲ್ಲಿ ಹಾಕಿ ತೆಗೆದು ಒಂದು ಬಿಳಿಯ ಮುಂಡಿ (ಮನೆ ಯೊಳಗೆ ಒಣಗಿಸಬೇಕು ಬಿಸಿಲಲ್ಲಲಾ} ನ ಮೇಲೆ ಒಣಗಿಸಲು ಇಟ್ಟೆವು. ನೀರಿನ ಅಂಶವೆಲ್ಲ ಹೋಗಬೇಕು.
ಸಕ್ಕರೆಗೆ ನೀರು ಬೆರೆಸಿ ಅದು ಎರಡೆಳೆ ಪಾಕ ಆದ ನಂತರ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡ ಬೇಕು .ಬೇಕಿದ್ದಲ್ಲಿ ಏಲಕ್ಕಿ ಪುಡಿ ಬೆರೆಸ ಬಹುದು. ಒಣಗಿದ ಹೋಳುಗಳನ್ನು ಸಕ್ಕರೆ ಪಾಕದಲ್ಲಿ ಒಂದು ದಿನ ನೆನೆಯಲು ಇಟ್ಟು , ನಂತರ ಒಂದೊಂದೇ sugarcoated ಹೋಳನ್ನು ಇನ್ನೊಂದು ಪಾತ್ರಗೆ ವರ್ಗಾಯಿಸಬೇಕು. ಪೇಠಾ ತಯ್ಯಾರ್ ಅಂತ ಹೇಳಿದೆ. ಅಷ್ಟರಲ್ಲಿ ಅವಳ ತುರಿಯುವ ಕೆಲಸ ಮುಗಿದಿತ್ತು.
ಹೀಗೆ ಮಾಡಿದ ಪೇಠಾ ಮಾಲವಿಕಳ ಹುಟ್ಟುಹಬ್ಬದಿನದಂದು ಎಲ್ಲರಿಗು ಇತರ ತಿಂಡಿ ಖಾದ್ಯದೊಂದಿಗೆ ಬಡಿಸಲಾಯಿತು. ಸಕ್ಕರೆ ಸ್ವ ಲ್ಪ ಜಾಸ್ತಿಯಾದುದು ಬಿಟ್ಟರೆ, ಪೇಠ ಸೂಪರ್ ಆಗಿತ್ತು.
ಬೂದುಗುಂಬಳದ ಜ್ಯೂಸು : ತುರಿದ ಬೂದುಗುಂಬಳದಿಂದ ಹಿಂಡಿದ ರಸಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಬೆರೆಸಿ ಕುಡಿಯಬಹುದು. ಹೌದು ಕೊಂಕಣಿಯವರು ಏನನ್ನು ವೆಸ್ಟ್ ಮಾಡುವುದಿಲ್ಲ :-)
ಶ್ರೀಕಾಂತ ಆಫಿಸ್ ಕೆಲಸದ ಮೇಲೆ ದೆಹಲಿಗೆ ಹೊಆಗಲೆಲ್ಲ ನನಗೋಸ್ಕರ ಪೇಠಾ ತೆಗೆದುಕೊಂಡು ಬರುತ್ತಾಳೆ. ಈಗ ಅದು ಕೇಸರ್, ಕೇದಗೆ , ಮಿಕ್ಸಡ್ ಫ್ರೂಟ್ ಅಂತ ಬೇರೆ ಬೇರೆ ಆಕಾರ ಫ್ಲೇವರ್ಸ್ ನಲ್ಲಿ ಲಭ್ಯ.
ಹಾಗೆ ಒಂದು ಕೊಂಕಣಿ ಗಾದೆ ಇದೆ. ಅದರ ಕನ್ನಡ ವರ್ಷನ್ ಹೀಗೆ : ತನ್ನ ಮನೆಯ ಹಿತ್ತಲಲ್ಲಿ ಕುಂಬಳಕಾಯಿ ಕೊಳೆಯುತ್ತಿದ್ದರು ಇವನಿಗೆ ಬೇರೆಯವರ ಮನೆಯಲ್ಲಿನ ಕುಂಬಳಕಾಯಿಯ ಹುಳುಕು ಹುಡುಕುವುದರಲ್ಲಿ ಎತ್ತಿದ ಕೈ ' ಅಂತ
ಹೀಗೆ ಒಂದು ಲಹರಿ :-)


1 comment:
Malathi, try Kashi halwa using OPOS method. It is ready in 15 minutes :-)
I'd tried Peta once. But it was so sticky and didn't have the crunchy consistency of what we get in sweet shops. Will try again when there's lot of time.
Post a Comment