March 8, 2017

ಮಹಿಳಾ ದಿನಾಚರಣೆ

ಅಲ್ಲೊಂದು ಸಂಭ್ರಮ . ಮಹಿಳಾ ದಿನಾಚರಣೆಯಂದು ಆಕೆಗೆ ಉನ್ನತ ಹುದ್ದೆಯ ಸ್ವೀಕಾರ ಸಮಾರಂಭ. ಅತಿ ಕಿರಿ ವಯಸ್ಸಿಗೆ ಈ ಹುದ್ದೆ ಏರಿದ್ದ ಅವಳಿಗೆ ಊರಿನ ಗಣ್ಯರಿಂದ ಅಭಿನಂದನಾ ಕಾರ್ಯಕ್ರಮ, ತಳಿರು ತೋರಣ ಹೂವು ಗಳಿಂದ ಅಲಂಕೃತ ಕಛೆರಿ . ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ಆಚೀಚೆ ಓಡಾಡುವ ಆಕೆಯ ಸಹೋದ್ಯೋಗಿಗಳು. 
ಕಾರ್ಯಕ್ರಮ ಶುರು ಆಯಿತು, ಆಕೆಯನ್ನು ಹಲವಾರು ಜನ ಹೊಗಳಿದರು. ಕೊನೆಗೆ ಗಣ್ಯರಿಂದ ಪ್ರಶಸ್ತಿ ಪ್ರಧಾನ ಹಾಗು ಉನ್ನತ ಹುದ್ದೆಯ ಸ್ವೀಕಾರ ಕಾರ್ಯಕ್ರಮ. ಅದಕ್ಕಿಂತ ಮುಂಚೆ ಆಕೆಗೆ ನಾಲ್ಕು ಮಾತಾಡುವ ಅವಕಾಶ ಕೊಟ್ಟರು. 
ಆಕೆ, " ಈ ನನ್ನ ಎಲ್ಲ ಹೆಗ್ಗಳಿಕೆಗೆ ಕಾರಣ ನನ್ನ ಮನೆಯವರ ದೊಡ್ಡಮ್ಮ. ಅವರಿಗೆ ಈ ಪ್ರಶಸ್ತಿ ಕೊಡಲು ನಾನು ಈಚ್ಚಿಸುತ್ತೇನೆ. ನಿಜವಾಗಿಯೂ ಇವತ್ತು ಈ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಬೇಕಿತ್ತು. ಆದರೆ ಇವತ್ತಿನ ಬೆಳಗ್ಗಿನ ಜಾವ ಅವರು ಆರೋಗ್ಯ ಕೈಕೊಟ್ಟು ಅವರು ಆಸ್ಪತ್ರೆ ಸೇರಬೇಕಾಗಿ ಬಂದಿದೆ. ನಿಮಗೆ ಇನ್ನೊಂದು ಆಘಾತಕರ ಸುದ್ದಿಯೂಯನ್ನು ಹೇಳಲು ಬಯಸುತ್ತೇನೆ. ನಾನು ಈ ಹುದ್ದೆಯನ್ನು ಸ್ವೀಕರಿಸುವುದಿಲ್ಲ. ದೊಡ್ಡಮಮನಿಗೆ ಈಗ ಮಲಗಿದ್ದಲ್ಲೇ ಎಲ್ಲ ಉಪಚಾರ ಆಗಬೇಕಿದೆ. ಹೌದು ನಾನು ಕೆಲಸದವರನ್ನು ಇಟ್ಟುಕೊಂಡು ಅವರ ಅರೋಗ್ಯ ನೋಡಿಕೊಳ್ಳಬಹುದು. ಆದರೆ ನನ್ನ ಪ್ರತಿಯೊಂದು ಔದ್ಯೋಕಿಕ ಪ್ರಗತಿಯಲ್ಲೂ ಅವರದ್ದೇ ಪಾಲು. ಮಕ್ಕಳಿಗೆ , ಮನೆಯವರಿಗೆ ಹುಷಾರು ತಪ್ಪಿದ್ದಾಗಲೆಲ್ಲ ಅವರೇ ನೋಡಿ ಕೊಂಡು ನನ್ನ ಜವಾಬ್ದಾರಿಗಳನ್ನೆಲ್ಲಾ , ನಾನು ಮನೆಯ ಕಡೆ ಅಷ್ಟೊಂದು ಲಕ್ಶ್ಯ ಕೊಡದ ಹಾಗೆ ಮಾಡಿ  ನನ್ನನ್ನು ಈ ಮಟ್ಟಕ್ಕೆ ಏರಲು ಸಹಕರಿಸಿದ್ದಾರೆ. ಹಾಗೆಯೇ ನನ್ನ ಮಕ್ಕಳೊಂದಿಗೆ ನಾನು ಹೆಚ್ಚು ಸಮಯ ಕಳೆದಿಲ್ಲ ಅವರ ಬಾಲ್ಯವನ್ನು ಎಂಜಾಯ್ ಮಾಡಿಲ್ಲ. ಇನ್ನು ಆರು ತಿಂಗಳಿಗೆ ನಾನು ಅಜ್ಜಿಯಾಗಲಿದ್ದೇನೆ. ಆ ಮಕ್ಕಳ ದೇಖರೇಖಿಯಲ್ಲಿ ನನ್ನನ್ನು ನಾನು ತೊಡಗಿಸಕೊಳ್ಳಬೇಕೆಂದು ಈ ನಿರ್ಧಾರ ಅಂದಾಗ ಇಡೀ ಸಭಾಂಗಣ ಎದ್ದು ನಿಂತು ಕರತಾಡನ ಮಾಡಿತು. 


ಇನ್ನೊಂದು ಕತೆ. 
ಆಕೆಯ ಬಗ್ಗೆ ನನಗೆ ಎಲ್ಲಿಲ್ಲದ ಅಭಿಮಾನ. ಹಳ್ಳಿಯ ಮೂಲೆಯಿಂದ ದೊಡ್ಡ ಪಟ್ಟಣಕ್ಕೆ ಬಂದು ಸ್ವ೦ತ ಉದ್ದಿಮೆಯನ್ನು ಮಾಡುತ್ತಿದ್ದಳು. ಮದುವೆಯಾಗಿ ಒಂದು ಹೆಣ್ಣು ಮಗಳ ತಾಯಿ. ತುಂಬಾ ಪ್ರೀತಿಸುವ ಗಂಡ ಹಾಗು ಅತ್ತೆ ಮಾವ ನಾದಿನಿಯರು. ಮಗಳು ಚೂಟಿ , ಒಂದನೇ ತರಗತಿಯಲ್ಲಿ ಕಲಿಕೆ. ಆಟ  ಪಾಠ ಸಂಗೀತದಲ್ಲಿ ನಿಪುಣೆ. ಈಗ ಆಕೆ   ಎರಡನೇ ಬಾರಿ ಗರ್ಭಿಣಿ. ಇನ್ನು ಕೆಲವೇ ದಿನದಲ್ಲಿ ಡೆಲಿವರಿ. ನನಗೆ ಫೋನ್. ಅಕ್ಕ ಈ ಬಾರಿ ಗಂಡು ಮಗುವೇ ಆಗುತ್ತಲ್ಲ? ನನ್ನ ಅತ್ತೆ ಮತ್ತು ಗಂಡ ಗಂಡು ಮಗನೆ ಆಗುವುದು ಅಂತ ಡಿಸೈಡ್ ಮಾಡಿದ್ದಾರೆ. ಸಿಕ್ಕ ಸಿಕ್ಕ ದೇವರಲ್ಲಿ ಹರಕೆ ಹೊತ್ತಿದ್ದಾರೆ.ಗಂಡನಂತು ಧರ್ಮಸ್ಥಳ , ಸುಬ್ರಮನ್ಯ, ಅಯ್ಯಪ್ಪ ಸ್ವಾಮ್ಮಿಗಳಿಗೆಲ್ಲ ಹೋಗಿ ಬಂದಾಗಿದೆ.  ಗಂಡು ಮಗ ಆಗದಿದ್ದರೆ ನಾನು ಸೋತ ಹಾಗೆ, ನನ್ನ ಬಗ್ಗೆ, ನನ್ನ ಉದ್ಯಮದ ಬಗ್ಗೆ ಅವರಿಗೆ ರೆಸ್ಪೆಕ್ಟ್ ಇರಲ್ಲ. ಪ್ಲೀಸ್ ಅಕ್ಕ ಗಂಡು ಮಗು ಆಗುತ್ತಲ್ಲ ಅಂತ ಕೇಳಿದ್ದು ಮಾತ್ರವಲ್ಲ ಎರಡು ಮೂರೂ ಬಾರಿ ಪ್ರಜ್ಞೆ ತಪ್ಪಿ ಆಸ್ಪೆತ್ರೆಗೆ ದಾಖಲಾದಳು. ಟೆನ್ಶನ್ ನಿಂದ  ಹುಡುಗಿ ಕಂಗೆಟ್ಟು ಕಣ್ಣುಗಳ  ಕೆಳಗೆ ಕಪ್ಪು ಗೆರೆ , ಸರಿ ಊಟ ತಿಂಡಿ ಮಾಡದೆ ಹದಗೆಟ್ಟಿದೆ ಆರೋಗ್ಯ. ಅಂತೂ ಇಂತು ಹೆರಿಗೆಯಾಗಿ ಗಂಡು ಮಗ. ಗಂಡ ಅತ್ತೆಗೆ ಸಂತೋಷ. 
ಈಗ ಮೊದಲಿಗೆ ಹುಟ್ಟಿದ ಜಾಣೆ ಹೆಣ್ಣು ಮಗಳನ್ನು ಚೆನ್ನಾಗಿ ನೋಡುತ್ತಾನೋ ಇಲ್ವೋ ನಿನ್ನ ಗಂಡ ಅಂತ ಕೇಳಿದಾಗ 'ಇಲ್ಲ ಗಂಡು ಮಗು ಹುಟ್ಟಿದ ಕೂಡಲೇ, ಅದರ ತಲೆ ಮೇಲೆ ಕೈಯಿಟ್ಟು ಅವರ ಬಳಿ ಮಗಳನ್ನು ಮಗನನ್ನು ಸಮಾನವಾಗಿ ಪ್ರೀತಿಸುವಂತೆ ಪ್ರಮಾಣ ಮಾಡಿಸಿಕೊಂಡಿದ್ದೇನೆ ಅಂತ ಹೇಳಿದಾಗ ನನಗೆ ಅಳ  ಬೇಕೋ ನಗಬೇಕೋ ಅರ್ಥ ಆಗಲಿಲ್ಲ... ಆಕೆಗೋ  ಒಂದು ದೊಡ್ಡ ಯುದ್ಧ ಗೆದ್ದು ಬಂದ ನಿಟ್ಟುಸಿರು... ಆಕಸ್ಮಾತ್ ಹೆಣ್ಣು ಮಗು ಹುಟ್ಟಿದ್ದಿದ್ದರೆ??,,,,,

Happy Women's day ಎಲ್ಲರಿಗು 

1 comment:

ಮನಸಿನಮನೆಯವನು said...

ಹೆಣ್ಮನಗಳಲ್ಲಿ ಮಾತ್ರ ಇಂಥ ಸೂಕ್ಷ್ಮ ಭಾವನೆಗಳು ಹೆಚ್ಚು..
ಅಂತಹ ಹೆಣ್ಮನಗಳಿಗೆ ಶುಭಾಶಯಗಳು..