March 26, 2016

ಬೆಳ್ಳಿಯ ಕಾಲ್ಗೆಜ್ಜೆ - ಕನ್ನಡ ಪ್ರಭ ದಲ್ಲಿ ನನ್ನದೊಂದು ಪುಟ್ಟ ಲೇಖನ

ಫೇಸ್ ಬುಕ್ ಮಿತ್ರರು ಹಾಗು ಕನ್ನಡ ಪ್ರಭಾದಲ್ಲಿರುವ ಸಹ್ಯಾದ್ರಿ ನಾಗರಾಜ 'ಮನಸಾರೆ' ಗೆ ಏನಾದ್ರೂ ಬರೆದು ಕಳಿಸಿ ಮೇಡಂ ಅಂದಿದ್ರು. ನಾವು ತೀರ್ಥಹಳ್ಳಿಗೆ ಎಳ್ಳಮವಾಸ್ಯೆ ಜಾತ್ರೆಗೆ ಹೋಗಿ ಬಂದ ಮೇಲೆ ಫೆಸ್ ಬುಕ್ ಪುಟದಲ್ಲಿ ಯಾರೋ ಶೇರ್ ಮಾಡಿದ ಮನಸಾರೆ ಓದಲು ಸಿಕ್ಕಿತು. ಯಾಕೆ ಬರೆಯಬಾರದೆಂದು ...... ಏನು ಎತ್ತ ಅಂದರೆ ಪದ ಮಿತಿ ಬಗೆ ಕೇಳದೆ ಎತ್ತಿನ ಮೂತ್ರದಂತೆ (ಕೊಂ  ಕಣಿಯ ಒಂದು ಹೇಳಿಕೆ ಕನ್ನಡೀಕರಿಸಿದ್ದೇನೆ) ಬರೆದು ಕಳಿಸಿಬಿಟ್ಟೆ. ಆದ್ದರಿಂದ ಅವರು ಕತ್ತರಿ ಪ್ರಯೋಗ ಮಾಡಿ ಅಂಕಣಕ್ಕೆ ತಕ್ಕುದಾಗಿ ಹಾಕಿದ್ದಾರೆ. 
ಪೂರ್ಣ ಪ್ರಮಾಣ ಇಲ್ಲಿದೆ. 

ಅಮ್ಮ ’ಆನಂದಭಾಷ್ಪ’ ಅಂದರೇನಮ್ಮ ಅಂತ ಕೇಳಿದಳು ಮಗಳು. ಅವಳಿಗೆ ಅವಾಗಾವಾಗ ಕನ್ನಡದಿಂದ ಆಂಗ್ಲಕ್ಕೆ ತರ್ಜುಮೆ ಮಾಡುವ ಕೆಲಸ ಸಿಗುತ್ತದೆ. ನಾನು ’ಟೀಯರ್ಸ್ ಆಫ್ ಜಾಯ್’ ಕಣೆ’ ಅಂದೆ. ಆ ತರಹದ್ದು ನಿಜವಾಗಿ ಇರುತ್ತ ಅಂತ ನಕ್ಕಳು. ನನ್ನ ಮನಸ್ಸು ಹಲವಾರು ವರ್ಷ ಹಿಂದಕ್ಕೆ ಓಡಿತು. ಬೇಸಿಗೆಯ ರಜಕ್ಕೆ ನಾವು ಊರಲ್ಲಿ ಸೇರುತ್ತಿದ್ದೆವು. ಹಲವಾರು ಮಕ್ಕಳು. ದೊಡ್ಡ ಹಿತ್ತಲಲ್ಲಿ ಒಂದು ಕಡೆ ಅಜ್ಜನ ಮನೆಯಾದರೆ ಇನ್ನೊಂದು ಬದಿಯಲ್ಲಿ ಮಾಮನ ಮನೆ. ಎಲ್ಲ ಮಕ್ಕಳೂ ಆ ಮನೆ  ಈ ಮನೆ ಅಂತ ಓಡಾಡಿ ಕೊಂಡಿದ್ದೆವು. ರಾತ್ರಿಯೂ ಹಾಗೆ ಯಾವುದಾದರೊಂದು ಮನೆಯಲ್ಲಿ ಕತೆ ಕೇಳುತ್ತ, ಹೇಳುತ್ತಾ, ನಮ್ಮ ನಮ್ಮ ಊರಿನ ಆಗು ಹೋಗು ಗಳ ಬಗ್ಗೆ ಮಾತನಾಡುವುದು- ಮಲಗೋದು ಎಲ್ಲ ಮಾಡುತ್ತಿದ್ದೆವು. ನನಗಾಗ ೬-೭ ವರ್ಷ. ನಮ್ಮ ಮಾಮನವರಿಗೂ ತಂದೆಯವರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ. ಆದ್ದರಿಂದ ಮಾಮ ನನ್ನ ಜತೆ ಮಾತು ಆಡುತ್ತಿರಲಿಲ್ಲ. ಬೇರೆ ಮಕ್ಕಳ ಜತೆ ತಮಾಷೆ, ನಗು ಮಾತು ಕತೆ ಆಡುವಾಗ, ನನ್ನ ಜತೆ ಅವರು ಯಾಕಾಗಿ ಹಾಗೆ ಸಿಟ್ಟು ಮಾಡಿಕೊಂಡು ಇರುತ್ತಾರೆಂದು ನನಗೆ ತಿಳಿಯುತ್ತಿರಲಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟೂ ಬುದ್ದಿಯಿರಲಿಲ್ಲ. ಚಾಕಲೇಟು ತಂದರೆ, ಬಟ್ಟೆ ಬರೆ, ಚೆಂದದ ರಿಬ್ಬನ್, ಬಣ್ಣದ ಚಾಕ್ ಪೀಸ್ ಎಲ್ಲ ತಂದು ಎಲ್ಲ ಮಕ್ಕಳಿಗೂ ಹಂಚುತ್ತಿದ್ದರು ನನ್ನೊಬ್ಬಳನ್ನು ಬಿಟ್ಟು. ಈ ವಿಷಯವನ್ನು ನಾನು ಹಿರಿಯರಿಗೆ ಅಂದರೆ ನನ್ನ ಅಜ್ಜ ಅಜ್ಜಿಗೆ, ತಂದೆ ತಾಯಂದರಿಗೆ ಯಾವತ್ತೂ ಹೇಳಿದ್ದಿಲ್ಲ. ಸ್ವಲ್ಪ ಹೊತ್ತು ಬೇಜಾರೇನೋ ಆಗುತ್ತಿತ್ತು. ಮುಂದಿನ ಕ್ಷಣಕ್ಕೆ ಅದೆಲ್ಲ ಮರೆತು, ನಮ್ಮ ಆಟದಲ್ಲಿ ತಲ್ಲೀನ. ಹಪ್ಪಳ ಸಂಡಿಗೆ ಮಾಡುವುದರಲ್ಲಿ ಸಹಾಯ ಮಾಡುವುದಕ್ಕಿಂತ, ಹಿಟ್ಟಿನ ಅರ್ಧದಷ್ಟು ನಾವೇ ಗುಳುಂ ಮಾಡುತ್ತಿದ್ದದ್ದು, ಹಿತ್ತಲಲ್ಲಿ ತಿರುಗಾಡಿ ಬಿದ್ದ ಮಾವಿನ ಹಣ್ಣು, ದಿವಿಹಲಸಿನಕಾಯಿಗಳನ್ನು ಹೆಕ್ಕಿ ಮನೆಗೆ ತಂದು ಕೊಡುವುದು, ದನಗಳಿಗೆ ಅಂತ ದೀವಿಹಲಸಿನ ಹಣ್ಣಾಗಿ ಬಿದ್ದ ಎಲೆಗಳನ್ನು ಹೆಕ್ಕಿ ಕೊಟ್ಟಿಗೆ ಬಳಿ ಪೇರಿಸಿವುದು, ಸಂಜೆ ಅಜ್ಜಿ ತೆಂಗಿನ ಮಡಲಿನಿಂದ ಕಡ್ಡಿಗಳನ್ನು ತೆಗೆದು ಅದರ ಹಿಡಿಸುಡಿ ಮಾಡುವುದರಲ್ಲಿ ,ಅಜ್ಜಿ ಹೇಳುವ ಕತೆ ಕೇಳುತ್ತಾ ಸಹಾಯ ಮಾಡುವುದು ಇತ್ಯಾದಿ. 
ಹೀಗೆ ಒಂದು ಸಲ ಮಾಮ ಮನೆಯ ಹೆಣ್ಣು ಮಕ್ಕಳಿಗೆಲ್ಲ ಬೆಳ್ಳಿಯ ಕಾಲ್ಗೆಜ್ಜೆ ತಂದಿದ್ದರು. ತರತರಹದ ಲಕ ಲಕನೆ ಹೊಳೆಯುವ ಕಾಲ್ಗೆಜ್ಜೆ ಗಳನ್ನು ನೋಡಿ ನನ್ನ ಕಣ್ಣುಗಳಲ್ಲೂ ಮಿಂಚು. ಎಲ್ಲರ ಕಾಲಿಗೂ ಬೆಳ್ಳಿಯ, ಗಿಲಿ ಗಿಲಿ ಸದ್ದು ಮಾಡುವ ಕಾಲ್ಗೆಜ್ಜೆ. ನನಗೆ ಮಾತ್ರ ಇಲ್ಲ. ಮೊದಲನೆ ಸಲ ಬಾಯ್ಬಿಟ್ಟು, ಮಾಮಾ ನನಗೆ? ಅಂತ ಕೇಳಿದೆ. ನಿನ್ನಪ್ಪನಿಗೆ ಹೇಳು ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿದರು. ಅವತ್ತೇ ಕೊನೆ ..ಈಗಲೂ ಸಹ ಯಾರಲ್ಲೂ ಏನೂ ಕೇಳುವುದು ಒಂದು ತರಹ ಮುಜುಗರ, ಹೆದರಿಕೆ. 
ಮರುದಿನ ಯಥಾವತ್ತು ನಮ್ಮ ಆಟ, ಕೀಟಲೆ, ಗಮ್ಮತ್ತು. ಇದೆಲ್ಲ ಆಗಿ ಒಂದು ವಾರ ಆಗಿರ ಬಹುದು. ನನ್ನ ಅಜ್ಜ ನನ್ನನ್ನು ಕರೆದುಕೊಂಡು ಪೇಟೆಗೆ ಬಂದರು. ನನಗೆ ಐಸ್ ಕ್ರೀಮ್ ಕೊಡಿಸಿದರು. ಆಮೇಲೆ ಬಂಗಾರದ ಅಂಗಡಿಗೆ ಕರೆದುಕೊಂಡು ಹೋಗಿ , ನಾನು ನೋಡ ನೋಡುತ್ತಿದ್ದಂತೆ ನನ್ನ ಕಾಲಿಗೆ ಅಂಗಡಿಯವನು ಚೆಂದದ ಕಾಲ್ಗೆಜ್ಜೆ ಸಿಕ್ಕಿಸಿದ. ಸಣ್ಣ ಸಣ್ಣ ಎಲೆಗಳಿಂದ ಕೂಡಿದ. ಕೊಂಡಿಯ ಬಳಿ ಮಾತ್ರ ಒಂದು ಗೆಜ್ಜೆ ಗೊಂಚಲು ಇರುವ ಗೆಜ್ಜೆ. ಸಣ್ಣಕ್ಕೆ ಇಂಪಾಗಿ ಸದ್ದು ಮಾಡುವ ಕಾಲ್ಗೆಜ್ಜೆ. ನನ್ನ ಬಿಸಿಲಿಗೆ ಒಡ್ಡಿದ ಕಪ್ಪಾದ ಕಾಲಿಗೆ ಝಗಝಗಸಿವ ಕಾಲ್ಗೆಜ್ಜೆ.
ಸ್ವಲ್ಪ ಹೊತ್ತಿಗೆ ಅಜ್ಜ, ಯಾಕೆ ಮಗಳೆ ಅಳುತ್ತಿದ್ದಿ’ ಅಂತ ಕೇಳಿದಾಗಲೇ ನನಗೆ ಗೊತ್ತಾಗಿದ್ದು, ನನ್ನ ಕಣ್ಣುಗಳಿಂದ ಬಳಬಳನೆ, ನನಗೂ ಗೊತ್ತಿಲ್ಲದ ಹಾಗೆ ಕಣ್ಣುಗಳಿಂದ ನೀರು ತೊಟ್ಟಿಕ್ಕುತ್ತಿದ್ದುದು. ಅದೇ ’ಆನಂದಭಾಷ್ಪ’ ಅಂತ ಗೊತ್ತಾಗಿದ್ದು ಸುಮಾರು ದೊಡ್ಡವಳಾದ ಮೇಲೆ.
ಆಮೇಲಾಮೇಲೆ ದೊಡ್ಡ ಕ್ಲಾಸು, ಓದು ರಜೆಯಲ್ಲಿ ಎಲ್ಲರೂ ಮುಂಬೈನ ನಮ್ಮ ಮನೆಗೇ ರಜೆಗೆ ಬರುತ್ತಿದ್ದರಿಂದ,  ಬೇಸಿಗೆ ರಜೆಯಲ್ಲಿ ಊರಲ್ಲಿ ಸೇರುವುದು ಕಡಿಮೆಯಾಯಿತು. ಮದುವೆ ಮುಂಜಿಗಳಿದ್ದಾಗ , ಅದೂ ರಜೆಯಲ್ಲಿದ್ದಾಗ ಹೋಗಿ ಬೇಗ ಬಂದು ಬಿಡುತ್ತಿದ್ದೆವು. ಹಲವಾರು ವರ್ಷಗಳ ನಂತರ , ನನ್ನ ಮದುವೆಯಾಗಿ, ನನಗೆ ಮಗುವಾದ ಮೇಲೆ, ಅಜ್ಜಿಗೆ ಜೋರು ಕಾಯಿಲೆ, ಆಗ ನನ್ನ ಅಜ್ಜಿಗೆ 93 ರ ವಯಸ್ಸು, ನನ್ನನ್ನು ನೋಡಲೇ ಬೇಕು ಅಂದಿದ್ದರಿಂದ ನಾನು ಹೋಗಿದ್ದೆ. ಮಾಮ ಕೂಡ ಇದ್ದರು. ಹೇ ಮಾಲತಿ ಬಂದಿದ್ದಾಳೆ, ಅವಳಿಗೋಸ್ಕರ ಅವಳ ಇಷ್ಟದ ಅಡಿಗೆ ಮಾಡು ಅಂತ ಮಾಮಿಗೆ ಆರ್ಡರ್. ಊಟ ಮಾಡುವಾಗ ’ಇವತ್ತು ಅಡುಗೆಗೆ ಏನು ರುಚಿ!! ಪ್ರೀತಿಪಾತ್ರರು ಬಂದಾಗ ಹಾಗೇ ಅಲ್ಲವೆ??!!’ ಅಂತ ಒತ್ತಾಯ ಪೂರ್ವಕ ಬಡಿಸಿ ಬಾಯಿ ತುಂಬಾ ಪ್ರೀತಿಯ ಮಾತು. ಸಂಜೆ ವಾಪಸ್ಸು ಹೊರಟು ಬರುವಾಗ, ನನ್ನ ಕೈಯಲ್ಲಿ ಒಂದು ಗುಲಾಬಿ ಬಣ್ಣದ ಕಾಗದದ ಪೊಟ್ಟಣ ಇತ್ತು, ’ನಿನ್ನ ಮಗಳಿಗೆ’ ಅಂದರು. ಬಿಡಿಸಿ ನೋಡಿದರೆ ನನ್ನ ಮಗಳ ಪುಟಾಣಿ ಕಾಲ್ಗಳಿಗೆ ತಕ್ಕ ಚೆಂದದ ಬೆಳ್ಳಿಯ ಕಾಲ್ಗೆಜ್ಜೆ. ಇದೆಲ್ಲ ಯಾಕೆ ಅಂದೆ. ಅದಕ್ಕೆ ಅವರು ನೀನು ಚಿಕ್ಕವಳಿದ್ದಾಗ ಕೈಯೆತ್ತಿ ನಿನಗೆ ಏನೂ ಕೊಟ್ಟಿರಲಿಲ್ಲ, ಮನಸ್ಸಿಗೆ ತುಂಬಾ ಕಾಡುತ್ತೆ, ಬೇಡ ಅನ್ನ ಬೇಡ ಅಂದರು. ನಾನು ಹೆಚ್ಚಿಗೆ ಮಾತಾಡದೆ, ಅದನ್ನು ಪಡೆದು, ಎಲ್ಲರ ಕಾಲಿಗೆ ಅಡ್ಡ ಬಿದ್ದು ಅಲ್ಲಿಂದ ಹೊರಟೆ. 
ಈಗ ಅಜ್ಜಿ, ಮಾಮಾ ಮಾಮಿ ಎಲ್ಲ ಕಾಲವಾಗಿದ್ದರೆ. ನೆನಪು ಮಾತ್ರ ಹಸಿ ಹಸಿ.

2 comments:

Anonymous said...

This particular post has better font size.

Makes it easy on my geriatric eyes. --- Shreekar

nenapina sanchy inda said...

yes i agree Shreekar!! i typed it in word file and copy pasted the write up once it was published. thank you for stopping by!!
malathi S