ಈ ಮೊದಲೇ ಬಹಳ ಸಲ ಬರೆದ ಹಾಗೆ : ನಾನು ನನ್ನ ಅಜ್ಜನ ಹತ್ತಿರ ಬೆಳೆದೆ. ಅವರು ಪಕ್ಕಾ ಸಸ್ಯಾಹಾರಿಗಳು. ರಜೆಗೆಂದು ಅಮ್ಮನ ಮನೆಗೆ ಹೋದಾಗ ಅವರು ಬಹಳ ಕಟ್ಟುನಿಟ್ಟಾಗಿ ಹೇಳುತ್ತಿದ್ದರು, ’ಮಾಲತಿ ಅಲ್ಲಿ ಹೋಗಿ ಮೀನು ತಿಂದರೆ ನೀನು ವಾಪಸ್ ನನ್ನ ಬಳಿ ಬರಲಿಕ್ಕಿಲ್ಲ’ ಅಂತ. ಅಮ್ಮನ ಮನೆಗೆ ಹೋದಾಗಲೆಲ್ಲ ನನಗೋಸ್ಕರ ಅಮ್ಮ ವೆಜಿಟೇರಿಯನ್ ಅಡಿಗೆ ಮಾಡುತ್ತಿದ್ದರು. ಆ ಮೇಲೆ ನಾನಿಗೆ ಕ್ಯಾನ್ಸರ್ ಆಗಿ ನಾನು ಅಮ್ಮನ ಮನೆಗೆ ಪರ್ಮನೆಂಟ್ ಆಗಿ ವರ್ಗಾಯಿಸಲ್ಪಟ್ಟೆ. ಅಮ್ಮನಿಗೋ ತುಂಬ ಕೆಲಸಗಳು. ನಾವು ಐದು ಜನರ ಪಾತ್ರೆ ಬಟ್ಟೆ ಮನೆ ಕ್ಲೀನ್ ಇಡುವುದು, ಹೊರಗಿನಿಂದ ಸಾಮಾನು ತರುವುದು ವಗೈರೆ. ಅಷ್ಟೆ ಅಲ್ಲ ಯಾವುದೇ ಕಾರಣಕ್ಕೆ ಪಾಲಕರು ಶಾಲೆಗೆ ಬರಲೇಬೇಕಿದ್ದಲ್ಲಿ ನಮ್ಮ ಅಮ್ಮನೇ ಬರುತ್ತಿದ್ದದ್ದು- ಶಾಲೆಯ ವಾರ್ಷಿಕೋತ್ಸವ ಇರಲಿ, ಸ್ಪೋರ್ಟ್ಸ್ ಡೇ ಇರಲಿ, ಪೇರೆಂಟ್ ಟೀಚರ್ಸ್ ಮೀಟ್ ಇರಲಿ... ನಮ್ಮ ತಂದೆ ಬೆಳಿಗ್ಗೆ ಆಫಿಸ್ ಗೆ ಹೋದರೆ ಬರುತ್ತಿದ್ದದ್ದೆ ರಾತ್ರಿ. ಆವಾಗಲೇ ನಮ್ಮ ಬಿಲ್ಡಿಂಗ್ ನಲ್ಲಿ ಕಾರ್ ಪೂಲಿಂಗ್ ನಡೀತಿತ್ತು. ನಮ್ಮ ಮನೆ ಒಂದು ಕಡೆ ಆದರ ಅಪ್ಪನ ಆಫಿಸ್ ಮುಂಬೈ ನ ಇನ್ನೊಂದು ತುದಿಯಲ್ಲಿ. ಹಾಗಾಗಿ ಅಪ್ಪ ನಮಗೆ ಅಪರಿಚರಾಗೇ ಉಳಿದರು. ನಾನಂತು ಅಪ್ಪನಿಗೆ ಸಿಕ್ಕಾಪಟ್ಟೆ ಹೆದರುತ್ತಿದ್ದೆ. ಮಾರ್ಕ್ಸ್ ಕಾರ್ಡ್ ಎಲ್ಲ ಅಮ್ಮ ಅಥವಾ ತಮ್ಮ ತಂಗಿಯರಿಂದ ಅಪ್ಪನ ಬಳಿ ಕಳುಹಿಸಿ ಸಹಿ ಪಡೆದುಕೊಳ್ಳುತ್ತಿದ್ದೆ, ಒಳ್ಳೆಯ ಅಂಕಗಳನ್ನು ಪಡೆದುಕೊಂಡರೂ!!!.
ಆಮೇಲೆ ಅಮ್ಮಮನೆಯಲ್ಲಿ ನಾನ್ ವೆಜ್ ಮಾಡಿದಾಗ (ವಾರದಲ್ಲಿ ನಾಲ್ಕು ಸಲ ನಮ್ಮನೆಯಲ್ಲಿ ಮೀನು ಮಾಡುತ್ತಿದ್ದರು) ನನಗೊಸ್ಕರ ಬೇರೆ ಅಡಿಗೆ ಮಾಡಬೇಕಲ್ಲವಾ ಅಂತ ನಾನು ಪರವಾಗಿಲ್ಲಮ್ಮ ನಾನು ಮೀನು ತಿನ್ನಲು ಟ್ರೈ ಮಾಡ್ತೇನೆ ಏನಿಲ್ಲದಿದ್ದರೆ ಅದರ ಗ್ರೇವಿಯಾದರೂ ತಿನ್ನುತ್ತೇನೆ ನೀನು ನನಗೋಸ್ಕರ ಸಸ್ಯಾಹಾರಿ ಅಡುಗೆ ಮಾಡಬೇಕಿಲ್ಲ. ಹೌದು ನನ್ನ ಅಡುಗೆ ನಾನೇ ಮಾಡಿಕೊಳ್ಳುವಷ್ಟು ಬುದ್ದಿ ಬಂದಿತ್ತು ನನಗೆ, ಆದರೆ ನನಗೆ ಬೆಳಗ್ಗಿನ ಶಿಫ್ಟ್ ಶಾಲೆ ಇತ್ತು. 6 ಗಂಟೆಗೆಲ್ಲ ನಾನು ಮನೆಯಿಂದ ಹೊರಬೀಳಬೇಕಿತ್ತು. ಅದಲ್ಲದೇ ಎನ್ ಸಿ ಸಿ ಪರೇಡ್ ಇದ್ದಾಗ 5 ಕ್ಕೆ ಬೆಳಿಗ್ಗೆ ಹೊರಡಬೇಕಿತ್ತು.
ತಂದೆಯವರು ಭಾನುವಾರ ಬೆಳಿಗ್ಗೆ ವರ್ಸೋವಾ ಧಕ್ಕೆಗೆ ಹೋಗಿ ದೊಡ್ಡ ದೊಡ್ಡ ಗೋಣಿ ಚೀಲದಲ್ಲಿ ಮೀನು ತರುತ್ತಿದ್ದರು, ನಮಗೆ ಮಾತ್ರವಲ್ಲ ನಮ್ಮ ಬಿಲ್ಡಿಂಗ್ ನಲ್ಲಿನ ಇತರರಿಗೂ ಸಾಕಾಗುವಷ್ಟು, ನಮ್ಮ ಮನೆಯಲ್ಲಿ ಒಂದು ಜರ್ಮನ್ ಕಂಪನಿಯ ಯಾವುದೋ ಒಂದು ದೋssssssಡ್ಡ ಫ್ರಿಜ್ ಇತ್ತು. ಅದರ ಫ್ರೀಜರ್ ಕಂಪಾರ್ಟ್ ಮೆಂಟ್ ನಲ್ಲಿ ಪೂರ್ತಿ ಎರಡು ಮೂರು ನಮೂನೆಯ ಮೀನುಗಳು. ಅಷ್ಟೆ ಅಲ್ಲ ಭಾನುವಾರ ನಮ್ಮ ಮನೆಯಲ್ಲಿ ಮೂರು ನಾಲ್ಕು ಬಗೆಯ ಮೀನಿನ ಐಟಮ್. ನಮ್ಮಮ್ಮನ ಅಡುಗೆ ಮಾತ್ರ ಯಾವತ್ತೂ ಸೂಪರ್!
ಮಧ್ಯಾಹ್ನ ಚಪಾತಿ ಮೆಂತೆ ಸೊಪ್ಪು ಅಥವಾ ಆಲೂ ಭಾಜಿ ತಿಂದು ನಿಭಾಯಿಸುತ್ತಿದ್ದೆ. ರಾತ್ರಿ ಕಷ್ಟಪಟ್ಟು ಮೀನಿನ ಊಟ ಮಾಡುತ್ತಿದ್ದೆ. ಆ ಮೇಲೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಟಾಯಲೆಟ್ ಹೋಗಿ ವಾಂತಿ ಮಾಡುತ್ತಿದ್ದೆ :-) ನನ್ನ ಮದುವೆ ಆಗುವ ತನಕ ಇದು ನಡೆಯಿತು.
ಸಮುದ್ರ ಹೇಗೂ ನಮ್ಮ ಮನೆಯ ಬಳಿಯೇ ಇತ್ತು. ಅಪರೂಪಕ್ಕೊಮ್ಮೆ ಸಮುದ್ರದ ಅಲೆಯಲ್ಲಿ ರಾಶಿರಾಶಿ ಚಿಪ್ಪು ಮೀನು (Shell Fish) ಬರುತ್ತಿತ್ತು. ಆಗ ಬಿಲ್ಡಿಂಗ್ ನ ಯಾರಾದ್ರೂ ನಮಗೆ ತಿಳಿಸುತ್ತಿದ್ದರು. ಅಮ್ಮ, ಅಮ್ಮನ ಫ್ರೆಂಡ್ ಜತೆ ನಾವು ಪ್ಲ್ಯಾಸ್ಟಿಕ್ ಚೀಲ ಹಿಡಿದುಕೊಂಡು ಹೋಗಿ, ಕರ್ಚೀಫ್ ಅನ್ನು ಗಾಳದ ತರಹ ಯೂಸ್ ಮಾಡಿ ಅದರಲ್ಲಿ ಚಿಪ್ಪುಗಳನ್ನು ಹಿಡಿಯುತ್ತಿದ್ದೆವು. ನನಗೆ ಸಮುದ್ರದ ಬಳಿ ಹೋಗುವುದೆಂದರೆ ಇಷ್ಟದ ಕೆಲಸ. ಅಮ್ಮ ಎಲ್ಲ ಇದ್ದಾಗ ಸ್ವಲ್ಪ ಹೆಚ್ಚಿನ ಸಮಯ ಅಲ್ಲಿ ಕಳೆಯುವ ಅವಕಾಶವಾಗುತ್ತಿತ್ತು. ಹಾಗಾಗಿ ನಾನು ಫುಲ್ ಜೋಶ್ ನಿಂದ ಚಿಪ್ಪು ಗಳನ್ನು ಹಿಡಿದುಕೊಡುತ್ತಿದ್ದೆ. ನಮ್ಮ ಮನೆಯಲ್ಲಿ ನನ್ನ ಅಪ್ಪ, ತಮ್ಮ ತಂಗಿಯಂದಿರಿಗೆ ಇದು ಇಷ್ಟದ ಪದಾರ್ಥ. ಸಂಜೆ ಅದನ್ನು ತಂದ ಮೇಲೆ ಅಮ್ಮ ಅದನ್ನು ಕ್ಲೀನ್ ಆಗಿ ತೊಳೆದು( ಅದಕ್ಕೆ ಮರಳು ಮೆತ್ತಿಕೊಂಡಿರುತ್ತೆ ಅಲ್ಲವಾ? )ಅದನ್ನು ಫ್ರೀಜ್ ನಲ್ಲಿ ಹಾಕಿಟ್ಟು ಅದರ ಅಡುಗೆ ಮರುದಿನ ಮಾಡುವುದು. ಇದು ಯಾವತ್ತಿನ ಪರಿಪಾಠ.
ಹೀಗಿದ್ದಾಗ ಒಂದು ದಿನ ಅಮ್ಮನ ಕಸಿನ್ ಅವಳ ಪುಟ್ಟ ಮೂರು ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಬರುತ್ತಾರೆಂದು ಪತ್ರ ಬಂತು. ಆಗಿನ್ನೂ ಮನೆಗೆ ಫೋನ್ ಬಂದಿರಲಿಲ್ಲ. ಪತ್ರ ತಲುಪಿದ ಮೂರನೇ ದಿನಾ ನೆ ಅವರು ಬರುವ ದಿನಾಂಕ್. ಅಪ್ಪನಿಗೆ ಆ ದಿನ ಆಫಿಸ್ ನಲ್ಲಿ ಇನ್ಸ್ಪೆಕ್ಷನ್, ಆದ್ದರಿಂದ ಅಮ್ಮನೇ ಅವರನ್ನು ಕರೆತರಲು ದಾದರ್ ಗೆ ಹೋಗಬೇಕಾದ ಪರಿಸ್ಥಿತಿ. ನಾನು ಶಾಲೆಯಿಂದ ಮನೆಗೆ 1 ಗಂಟೆಗೆ ತಲುಪಿದಾಗ ಮನೆಗೆ ಬೀಗ. ಮೇಲಿನ ಮನೆಯಲ್ಲಿರುವ ಅಮ್ಮನ ಸ್ನೇಹಿತೆಯ ಮನೆಯಿಂದ ಬೀಗದ ಕೈ ತೆಗೊಂಡು ಮನೆಗೆ ಬಂದು ನೋಡಿದರೆ, ಅಡಿಗೆನೇ ಆಗಿರಲಿಲ್ಲ. ಬಹುಶ: ಟ್ರೈನ್ ಬರಲು ವಿಳಂಬ ವಾಗಿರಬೇಕೆಂದು ಕೊಂಡೆ. ಆ ಮೇಲೆ ಎನಪ್ಪಾ ಮಾದುವುದು ಅಂತ ತಲೆ ಕೆರೆದುಕೊಂಡೆ. ಹಿಂದಿನ ದಿನ ಸಂಜೆ ತಂದಿಟ್ಟ ಚಿಪ್ಪು ಮೀನಿನ ನೆನಪಾಯಿತು. ಅದನ್ನು ಪುನ: ಒಮ್ಮೆ ತೊಳೆದು ನೀರಲ್ಲಿ ಹಾಕಿ ಬಿಸಿ ಮಾಡಲಿಟ್ಟೆ. ಇನ್ನೊಂದು ಗ್ಯಾಸ್ ಮೇಲೆ (ಆಗ ನಮ್ಮನೇಲಿ ಗ್ಯಾಸ್ ಇದ್ದರೂ ಸಿಲಿಂಡರ್ ಸಿಗುವುದು ಕಿರಿಕಿರಿಯಾಗುತ್ತದೆಂದು, ಅಮ್ಮ ತುರ್ತು ಪರಿಸ್ಥಿತಿ ಬಿಟ್ಟರೆ ಸೀಮೆ ಎಣ್ಣೆಯ ಸ್ಟವ್ ಮೇಲೆ ಅಡಿಗೆ ಮಾಡುತ್ತಿದ್ದರು.) ಕುಕ್ಕರ್ ನಲ್ಲಿ ಅನ್ನಕಿಟ್ಟೆ, ಜತೆಯಲ್ಲಿ ಸ್ವಲ್ಪ ಬೇಳೆ ಕೂಡ. ನಮ್ಮಲ್ಲಿ ಬೇಳೆ ದಾಳಿ ತೊವ್ವೆ ಆಪತ್ ಬಾಂಧವ್. ಸೇಫ್ ಅಡುಗೆ. :-) ಆ ಮೇಲೆ ನಿಧಾನಕ್ಕೆ ತೆಂಗಿನಕಾಯಿ ಹೆರೆದೆ, ಅದಕ್ಕೆ ಅಂದಾಜಿನಲ್ಲಿ (ಆ ಅಂದಾಜು ಮಾಡಬೇಕಾದ್ರೆ 10 ನಿಮಿಷ ಬೇಕಾಯ್ತು) ಹುರಿದ ಕೆಂಪು ಮೆಣಸು, ಸಣ್ಣ ಹುಣಸೆ ಹುಳಿ ತುಂಡು (ಹುರಿದ ಕೆಂಪು ಮೆಣಸು+ ಉಪ್ಪು ಹಚ್ಚಿಟ್ಟ ಹುಣಸೆ ಹುಳಿ ನಮ್ಮಲ್ಲಿ ಯಾವತ್ತೂ ಸ್ಟಾಕ್ ಇರುತ್ತೆ) , ಸ್ವಲ್ಪ ಹರಳುಪ್ಪು ಹಾಕಿ ರುಬ್ಬುವ ಕಲ್ಲಲ್ಲಿ (ಆಗ ನಮ್ಮ ಮನೆಯಲ್ಲಿ ಮಿಕ್ಸಿ ಇರಲಿಲ್ಲ) ನುಣ್ಣಗೆ ರುಬ್ಬಿದೆ. ರುಬ್ಬುವ ಅಭ್ಯಾಸ ನನಗೆ ಮೊದಲೆ ಅಮ್ಮ ಮಾಡಿಸಿದ್ದರು. ಹಾಗಾಗಿ ಅಂದಾಜಲ್ಲಿ ಏನೇನು ಸಾಮಾನು ಹಾಕಬೇಕೆಂದು ಗೊತ್ತಾಗಿದ್ದು) -ಎಲ್ಲೋ ಒಂದು ಕಡೆ ಮನಸ್ಸಲ್ಲಿ ಮನಸ್ಸಿಲ್ಲದಿದ್ದರೂ ಕೆಲವು ವಿಷಯ ಸೇವ್ ಆಗಿರುತ್ತೆ ಅಂತಹ ವಿಷಯಗಳು)
ಬಿಸಿ ನೀರಿನಲ್ಲಿ ಮರಳುತ್ತ ಆ ಚಿಪ್ಪುಗಳು ತೆರೆದುಕೊಳ್ಳುತ್ತವೆ. ಅದರ ಒಳಗಿನ ಫ್ಲೆಶ್ ಅನ್ನು ತೆಗೆಯಬೇಕು, ಚಿಪ್ಪುಗಳನ್ನು ಬಿಸಾಡುವುದು. ಈ ಕೆಲಸ ಮಾಡಿ ಅದಕ್ಕೆ ರುಬ್ಬಿಟ್ಟ ಮಸಾಲೆ ಬೆರೆಸಿದೆ, ಒಂದು ಸಣ್ಣ ತುಂಡು ಮಾವಿನ ಕಾಯಿಯಿತ್ತು ಅದನ್ನು ಸೇರಿಸಿ, ಅದನ್ನು ಕುದಿ ಬರಲು ಇಟ್ಟೆ. ವಾಹ್ ಏನು ಘಂ ಎನ್ನುವ ಪರಿಮಳ. ಸರಿ ಕುದಿ ಬಂದ ನಂತರ ಅದಕ್ಕೆ ಒಂದೆರಡು ಸ್ಪೂನ್ ತೆಂಗಿನ ಎಣ್ಣೆ ಬರೆಸಿ, ಆಫ್ ಮಾಡಿ , ಪಾತ್ರೆ ಮುಚ್ಚಿಟ್ಟೆ. ಅಷ್ಟರಲ್ಲಿ ಕುಕ್ಕರ್ ಕೂಡ ತನ್ನ ಕೆಲಸ ಮುಗಿಸಿತ್ತು. ನೋಡಿದರೆ ಅನ್ನ ಚೆನ್ನಾಗಿ ಬೆಂದಿತ್ತು, ಆದರೆ ಬೇಳೆ ಬೆಂದಿರಲಿಲ್ಲ. ಹಾಗಾಗಿ ಅನ್ನದ ಪಾತ್ರೆ (ದೊಡ್ಡ ಕುಕ್ಕರ್ ಅದು ಈಗ ಅಂತಹುದ್ದನ್ನು ನಾನು ನೋಡಿಲ್ಲ, ಅದು ಜೋಡಿಸಬೆಕಾದರೆ ಸ್ವಲ್ಪತಲೆ ಖರ್ಚು ಮಾಡಬೇಕಾಯಿತು.) ಪುನ: ಬೇಳೆ ಬೇಯಲು ಇಟ್ಟೆ. ನನ್ನ ಅಡುಗೆ ಎಲ್ಲ ಮುಗಿಸಿ ಖುಶಿ ಖುಶಿಯಾಗಿದ್ದೆ. ನನ್ನ ಜೀವಮಾನದ ಮೊದಲ ಅಡುಗೆ (from scratch) ಅದೂ ಮೀನಿನದ್ದು, ಅಮ್ಮ , ಅಮ್ಮನ ಕಸಿನ ಎಲ್ಲ ಹಸಿವೆಯಿಂದ ಬಂದು ಊಟ ಮಾಡಿ ಕೊಂಡಾಡುತ್ತಾರೆಂದು!!
ಹೌದು ನಾನೆಣೆಸಿದ ಹಾಗೆ ಟ್ರೈನ್ ಬರುವಾಗ ತುಂಬ್ ಲೇಟ್ ಆಗಿ, ಎರಡು ಎರಡು ಲೋಕಲ್ ಟ್ರ್ರೈನ್ ಹಿಡಿದು. ಮೂರು ಪುಟ್ಟ ಮಕ್ಕಳು, ಸಾಮಾನು, ಮನೆಗೆ ತಲುಪುವಾಗ ಅವರೆಲ್ಲ ಸೋತು ಸುಣ್ಣವಾಗಿದ್ದರು. ಅದರಲ್ಲೂ ಅಮ್ಮನಿಗೆ ಡಬಲ್ ಚಿಂತೆ. ಮನೆಗೆ ಬಂದು ಅಡುಗೆ ಮಾಡಬೇಕಲ್ಲವಾ ಎಂದು. ಅಮ್ಮನ ಕಸಿನ್ ವಾಹ್ ವಾಹ್ ಅನ್ನುತ್ತ ಹೊಗಳುತ್ತ ಊಟ ಮಾಡಿದರು. ನಾನು ಮೊದಲ್ನೇ ಸಲ ಮಾಡಿದ ಅಡುಗೆ ಅಂತ ಅವರಿಗೆ ನಂಬಲಾಗಲಿಲ್ಲ. ಅಮ್ಮನಿಗೆ ನಾನು ಅಡಿಗೆ ಮಾಡಿಟ್ಟಿದ್ದೇನೆ ಅಂತ ನಿರಾಳ ಏನೋ ಆಯ್ತು ಆದರೆ ಒಂದು ಹೊಗಳಿಕೆಯ ಮಾತುಗಳನ್ನು ಹೇಳದೇ ಇದ್ದುದರಿಂದ ತುಂಬಾ ಪೆಚ್ಚಾದೆ. :-( :-(. ನಾನು ಅನ್ನ ತೊವ್ವೆ ಮಾತ್ರ ಉಂಡದ್ದು. ನಾನು ಮೀನಿನ ಸುದ್ದೆಗೆ ಹೊಗಿರಲಿಲ್ಲ. ರಾತ್ರಿ ಅಪ್ಪ ಊಟ ಮಾಡ್ತಾ, ಚೆನ್ನಾಗಿದೆ ಪ್ರಿಪರೇಶನ್ ಅಂದಾಗ ಮಾಲತಿ ಮಾಡಿಡ್ಡು ಅಂದಾಗ ಅಪ್ಪ ಆಶ್ಚರ್ಯದಿಂದ ಹೌದಾssssss, ಆಡ್ಡಿಲ್ಲ ಹುಡುಗಿ, ಅಂದಿದ್ದು ಕೇಳಿಸಿಕೊಂಡಿದ್ದೆ. :-)
ಆಮೇಲೆ ಮದುವೆಯಾಗಿ ತೀರ್ಥಹಳ್ಳಿಗೆ. ಅಲ್ಲಿ ಮೀನು ಬಿಡಿ ನೀರುಳ್ಳಿ ಬೆಳ್ಳುಳ್ಳಿ ಸಮೇತ ತಿನ್ನುತ್ತಿರಲಿಲ್ಲ. ಸಾಧಾರಣವಾಗಿ ಮನೆಯಲ್ಲಿ ಸಾಲಿಗ್ರಾಮಕ್ಕ್ಕೆ ಪೂಜೆ ಮಾಡುತ್ತಿದ್ದ ಪಕ್ಷ ಹೀಗೆ ಸಾತ್ವಿಕ ಆಹಾರ ತಿನುತ್ತಾರೆ ಅಂತ ನನ್ನ ಅನಿಸಿಕೆ. ನನಗೇನು ಕಿರಿಕಿರಿ ಅನ್ನಿಸಲಿಲ್ಲ. ಅದರ ಬದಲು ನೀರುಳ್ಳಿ ಬೆಳ್ಳುಳ್ಳಿ ಬಳಸದೇ ಎಷ್ಟೊಂದು ಅಡಿಗೆ ತಯಾರಿಸಬಹುದು ಎನ್ನುವ ಮನವರಿಕೆ ಯಾಯಿತು.
ನನ್ನ ಅಕ್ಕನಿಗೆ ಅಡಿಗೆ ಮನೆಯ ಕೆಲಸಗಳಲ್ಲಿ ಸಹಕರಿಸಿ ಆ ಮೇಲೆ ನನ್ನ ಓದು (ನನ್ನ ಪದವಿ ಪೂರ್ಣಗೊಂಡಿರಲಿಲ್ಲ, ಹನ್ನೆರಡನೇ ಇಯತ್ತೆ ಆದಕೂಡಲೇ ಮದುವೆ ಆಗಿದ್ದು) , ಓದಿ ಬೇಜಾರಾದಾಗ ನನ್ನ ಅತ್ತೆಯ ಕೊಠಡಿ ಹೊಕ್ಕುತ್ತಿದ್ದೆ. ಅವರು ಹರಳಿಮಠದ ಅವರ ತೋಟದ ವಿಷಯ, ಅವರ ಕುಟುಂಬದ ವಿಷಯಗಳನ್ನೆಲ್ಲ ಮೆಲುಕು ಹಾಕುತ್ತಿದ್ದರು. ಆಗ ಅವರಿಗೆ ಕಣ್ಣು ಕಾಣುತ್ತಿರಲಿಲ್ಲ, ಕಿವಿ ಮಂದವಾಗಿ ಕೇಳಿಸುತ್ತಿತ್ತು. ಹೀಗೆ ಒಂದು ಸಲ ಲೋಕಾಭಿರಾಮವಾಗಿ ಮಾತನಾಡುವಾಗ ಅವರು ಈ ತೀರ್ಥಹಳ್ಳಿಯ ಮನೆಯಲ್ಲಿ ಮಿಸ್ ಮಾಡುತ್ತಿದ್ದದ್ದು ಮೀನಿನ ಊಟ ಅಂದಾಗ ನನಗೆ ಆಶ್ಚರ್ಯ. ಮದುವೆಯಾದ ಕೆಲವು ತಿಂಗಳು ಅವರು ಮೀನಿನ ಊಟ ಮಾಡಲಿಕ್ಕೋಸ್ಕರ, ಹೋಗುವಾಗ ನಡೆದುಕೊಂಡು, ಬರುವಾಗ ತೀರ್ಥಹಳ್ಳಿ ಪೇಟೆಗೆ ಬರುವ ಎತ್ತಿನಗಾಡಿಯಲ್ಲಿ ವಾಪಸ್ ಬರುವುದು ಮಾಡುತ್ತಿದ್ದರಂತೆ :-) ಹರಳೀಮಠ ತೀರ್ಥಹಳ್ಳಿಯಿಂದ 12 ಕಿ.ಮೀ ದೂರದಲ್ಲಿದೆ.
ಮತ್ತೆ ನಮ್ಮ ರಾಯರ ಬಗ್ಗೆ ಕೇಳಿ! ಧಾರವಾಡದಲ್ಲಿ ಓದಲು ಹಾಸ್ಟೆಲ್ ನಲ್ಲಿದ್ದಾಗ ಮೀನು ತಿನ್ನುವ ರೂಢಿಯಾಯಿತಂತೆ. ಹಾಸ್ಟೆಲ್ ಮೆಸ್ ನಲ್ಲಲ್ಲ. ಪ್ರೆಂಡ್ಸ್ ಜತೆ ಹೋಟಲ್ ನಲ್ಲಿ. ಅವರ ಮೆಸ್ ಗೆ ಪ್ರತೀ ಭಾನುವಾರ ರಜೆ. ಆಗ ಇವರು ಬೆಳಿಗ್ಗೆ ಬಿನ್ ಬುಲಾಯೆ ಮೆಹಮಾನ್ ತರಹ ಅವರ ಪ್ರೊಫೆಸರ್ ಗಳ ಮನೆಗೆ ಲಗ್ಗೆ ಇಡುತ್ತಿದ್ದರಂತೆ. ಪಾಪ ಅವರು ಬೇರೆ ದಾರಿಗಾಣದೇ ಇವರನ್ನು ಬ್ರೇಕ್ ಫಾಸ್ಟ್, ಲಂಚ್ ಗೆ ಉಳಿಸಿಕೊಳ್ಳುತ್ತಿದ್ದರಂತೆ. ಧಾರವಾಡದಲ್ಲಿ ನಡೆದ alumni meet ನಲ್ಲಿ ಶ್ರೀಕಾಂತ ಅವರನ್ನೆಲ್ಲ ಪರಿಚಯಿಸಿ ಅವರ ಕಾಲಿಗೆರಗಿದ್ದು ನನಗೆ ಖುಶಿಯಾಗಿತ್ತು. ಅದಕ್ಕೆ ನಾನೆ ಇಲ್ಲಿ ಮುಂದಾಗಿ ನನ್ನ ಬ್ಯಾಚಲರ್ ತಮ್ಮಗಳಂದಿರಿಗೆ ಹಬ್ಬಕ್ಕೆ ಊಟಕ್ಕೆ ಕರೆಯುವುದು. :-)
ಹಾಂ ಎಲ್ಲಿದ್ದೆ?! ಸರಿ ಆ ಮೇಲೆ ಶ್ರೀಕಾಂತ್ ಬ್ಯಾಂಕ್ ಸೇರಿ ಮೊಟ್ಟ ಮೊದಲ ಪೋಸ್ಟಿಂಗ್ ಗೋವಾಕ್ಕೆ. ಅಲ್ಲಂತೂ ತಾಜಾ ಮೀನು ನೋಡಿ, ಗೋವಾದ ಸ್ಪೇಶಲ್ ಮೀನಿನ ಕರಿ ಪ್ರೆಪರೆಶನ್ ಗೆ ಫೀದಾ ಆಗಿ ಅವರು ಸಿಕ್ಕಾಪಟ್ಟೆ ಮೀನ್ ಮೈಂಡಂಡ್ ಆದ್ರೂ. (ಮೀನು ತಿನ್ನುವವರೆಲ್ಲ ಮೀನ್ ಮೈಂಡಡ್, ಶುಗರ್ ಇರುವವರೆಲ್ಲ ಗೋಡ್ ಬೋಲೆ/godfearing - ಗೋಡ್ ಅಂದರೆ ಕೊಂಕಣಿಯಲ್ಲಿ ಸಿಹಿ - ಅಂತ ನಮ್ಮ ಪ್ರೈವಟ್ ಸರ್ಕಲ್ ನ ಜೋಕ್) ಕೊಪ್ಪದಲ್ಲಿ ಮನೆ ಮಾಡಿದಾಗ ನಾನೂ ನಿಧಾನಕ್ಕೆ ಅವರ ಪ್ರೆಂಡ್ಸ್ ಗೋಸ್ಕರ ಮೀನಿನ ಅಡಿಗೆ ಮಾಡುತ್ತಿದ್ದೆ. ಅಮ್ಮ ಮಾಡುತ್ತಿದ್ದದ್ದು ಅಂದಾಜು ನನಗೆ ಇತ್ತು. ಆಗ ಮೀನು ಉಡುಪಿಯಿಂದ ಕೊಪ್ಪಕ್ಕೆ ತರಿಸುತ್ತಿದ್ದರು ಅಥವಾ ರಾಯರು ಬ್ಯಾಂಕ್ ನ ಮೀಟಿಂಗ್ ಮಂಗಳೂರು-ಉಡುಪಿಯಲ್ಲಿ ಇದ್ದರೆ , ನನ್ನ ಬಳಿ ದೊಡ್ಡ ಐಸ್ ಬಾಕ್ಸ್ ಇತ್ತು ಅದರಲ್ಲಿ ಹಾಕಿ ತರುತ್ತಿದ್ದರು. ಆ ದಿನ ರಾತ್ರಿ ಬೀರ್ ಮತ್ತು ಮೀನಿನ ಪಾರ್ಟಿ. ಅಲ್ಲೆಲ್ಲ ಇಂಡಿಪೆಂಡೆಂಟ್ ಮನೆಗಳಿದ್ದವು, ನಾನೂ ಮಾಡುತ್ತಿದ್ದೆ.
Manohar Mulgaonkar's book: 'Inside Goa',- 'Market Place' Cartoon : Mario Miranda
ಮಾಲವಿಕಳ ಟೈಮ್ ಡೆಲಿವರಿಗೆ ಮುಂಬೈಗೆ ಹೋದಾಗ ಅಮ್ಮ ಒಂದು ಸಲ ಬಂಗುಡೆ ಮೀನು ಕರಿಯುತ್ತಿದ್ದರು ಆ ವಾಸನೆಗೆ ನನಗೆ ತಿನ್ನುವ ಬಯಕೆಯಾಯಿತು. ತಿಂದೆ . ವಾಂತಿ ಗೀಂತಿ ಏನೂ ಆಗಲಿಲ್ಲ. ಸರಿ ಆಮೇಲೆ ನಾನು ಪಕ್ಕಾ ಮೀನ್ ಮೈಂಡಡ್ ಮಾತ್ರವಲ್ಲ ಮಾಲವಿಕಾ ಕೂಡ ಮೀನು ತಿನ್ನುವುದರಲ್ಲಿ ಎಕ್ಶಪರ್ಟ್ ಆದಳು. ಆದರೆ ಬೆಂಗಳೂರಿಗೆ ಬಂದ ಮೇಲೆ(ಇಲ್ಲಿ ಮನೆ ಬಾಡಿಗೆಗೆ ಕೊಡುವಾಗ ಮೀನು ತಿನ್ನದವರಿಗೆ ಮಾತ್ರ ಅಂತೆಲ್ಲ ಹೇಳುತ್ತಾರಾದ್ದರಿಂದ) ನಾನು ಶ್ರೀಕಾಂತ್ ಗೆ ಮೊದಲೇ ಹೇಳಿದ್ದೆ ಇಲ್ಲಿ ಮೀನು ಹೋಟಲ್ ನಲ್ಲಿ ಮಾತ್ರ ಅಥವ ನಮ್ಮ ಸ್ವಂತ ಮನೆಯಾದಲ್ಲಿ ಮಾತ್ರ ಅಂತ.
ಈಗ ನಮ್ಮದೇ ಮನೆ ಅದಲ್ಲದೇ ಅಡುಗೆ ಮನೆಯಲ್ಲಿ ಹೈ ಫಂಡಾ ಚಿಮ್ನಿ ಬೆರೆ. ಇವತ್ತು ಮಡಿವಾಳ ಮಾರ್ಕೆಟ್ ನಲ್ಲಿ ಫ್ರೆಶ್ ಮೀನು ಸಿಕ್ಕಿತು. ಮನೆಯಲ್ಲೆ ಮಾಡಿದೆ. ಹಾಂ ಈಗ ಮಾಲವಿಕ ಪ್ಯೂರ್ ವೆಜ್, ನಮ್ಮ ನಿಹಾಗೆ ಆವಾಗಾವಾಗ್ ಮೀನು ತಿನ್ನಲೇ ಬೇಕು, ನನಗೆ ಶ್ರೀಕಾಂತ್ ಗೆ ಹೇಗಾದರೂ ನಡೆಯುತ್ತೆ. ಚೆನ್ನಾಗಿತ್ತು. ನನ್ನ ಮೀನು ತಿನ್ನುವ ಪ್ರೆಂಡ್ಸ್, ತಮ್ಮ ತಂಗಿಯಂದಿಗೆಲ್ಲ whatsapp ನಲ್ಲಿ ಚಿತ್ರ ಕಳುಹಿಸಿ ಹೊಟ್ಟೆ ಕಿಚ್ಚಾಗುವಂತೆ ಮಾಡಿದೆ.
ಇತ್ತೀಚಿಗೆ ಆಫಿಸ್ ನಿಂದ ಒಂದು ಬಸ್ ಮಾಡಿ ನಾವೆಲ್ಲ ಕೇರಳಕ್ಕೆ ಹೋಗಿದ್ವಿ. ವಾಪಸ್ ಬೆಂಗಳೂರಿಗೆ ಬರುವ ದಿನ ’ಕೇರಳಕ್ಕೆ ಬಂದು ಮೀನು ಊಟ ಮಾಡದಿದ್ದರೆ ಹೇಗೆ’ ಅಂತ ವೆಜ್ ನಾನ್-ವೆಜ್ ಎರಡೂ ಸರ್ವ್ ಮಾಡುವ ಹೋಟಲ್ ಗೆ ಹೋದ್ವಿ. ಎರಡು ಗುಂಪುಗಳಾದ್ವು. ನಾನು ನಾನ್ ವೆಜ್ ಟೀಮ್ ಜತೆ ಹೋಗುತ್ತಿರಬೇಕಾದ್ರೆ, ನಮ್ಮ ಕಲೀಗ್ ಹೆಂಡತಿ, ’ಮಾಲತಿ ಆ ಕಡೆ ಯಾಕೆ ಹೋಗ್ತಿದ್ದೀರಾ? ಅವರು ಮೀನು ಊಟಕ್ಕೆ ಹೋಗ್ತಿದ್ದಾರೆ’ ಅಂದಾಗ ನಾನು ಸುಮ್ನೆ ಅವರ ಕಡೆ ಮುಗುಳ್ನಕ್ಕು , ಮೀನು ಊಟ ಟೀಮ್ ಜತೆ ನಡೆದೆ. ಅವರು ಮಾಲತಿ ’ನೀವು ನಾನ್ ವೆಜ್ ತಿನ್ನುತ್ತೀರಾ’ ಅಂತ ಸಿಕ್ಕಪಟ್ಟೆ ಅಪ್ ಸೆಟ್ ಆಗಿ ಊಟ ಕೂಡ ಮಾಡದೆ, ತುಂಬ ಸೈಲೆಂಟ್ ಆಗಿ ಕೂತ್ರಪ್ಪ. ಯಾಕೆ ಅಂತ ನನಗೊತ್ತಾಗಲಿಲ್ಲ, ಅಂದ ಹಾಗೆ ಅವರ ಹಸ್ಬೆಂಡ್ ಮೀನುಪ್ರಿಯರು....................!!! :-) :-)
ಸುಮ್ನೆ as usual :-) :-)
ಮೀನಿನ ಅಡುಗೆ ನನ್ನ ಇಂಗ್ಲಿಷ್ ಬ್ಲಾಗನಲ್ಲಿ

9 comments:
ಮೀನು minded malathi. ಹ್ಹ ಹ್ಹ.. nice title... :)
You're so kind hearted Malathi that you cooked all by yourself to help your mom. It was nice reading this meenu post :-)
@ Vikas : :-)
@ Radhika : Thank you.:-)
ms
ಅಲ್ಲ ಮಾಲತಿ ಅಮ್ಮಾವ್ರೇ ... ನೀವೂ ಮೀನು ತಿನ್ತೀರಾ $$$$$$ ? ಛೆ ಪಾಪ ಮೀನುಗಳು :'( . ಅಂದ ನಿಮ್ಮ ನೆನಪು ಭಾರಿ ಗಟ್ಟಿಯಾಗಿದೆ ನೋಡಿ ... ಎಲ್ಲವನ್ನು ನೆನಪಿನ ಸಂಚಿಯಲ್ಲಿ ಭದ್ರಪದಿಸಿಕೊಂಡಿದ್ದೀರಿ
ಟೈಟಲ್‌ಗೆ ಮಾರು ಹೋದೆ :) ಮೀನು ತಿನ್ನದವರಿಗೂ ಪ್ರಿಯವಾಗುವಂತಿದೆ ಬರಹ :)
Such a lovely Post Malati Akka :) Hey, DO u know, some people treat differently once they come to know that you eat non-veg, may be same case with your friend :, anyway, even my case is somewhat similar..I came from No garlic/onion home and now I can prepare NV dishes. Though I just add the ingredients, final cooking/frying of fish is hubby's job, I cannot bear the smell..Even that day dinner is served for me by my dear one:)..enjoy meenu fry :)
@ Suresh Nayak :-) thank you
@ Tejasvini: thank you Dear.
@ Vanitha: illa vanitha. when the time came for us to return home she shook my hands and even hugged me. My brother's wife comes from a pure vegetarian eating family, but now she has turned strictly non vegetarian and prepares tasty dishes. thank you for the comment :-)
ms
Like it... Like it ... :-) but don't like that 'ಮೀನು' :-P
munna (sumathi) i know :-)
Post a Comment