ಸುಮಾರು ಜನರು ಈ ಪ್ರಶ್ನೆ ಕೇಳಿದ್ದಾರೆ. ನೀವು ಮುಂಬೈಯವರು, ತೀರ್ಥಹಳ್ಳಿಗೆ ಹೇಗೆ ಬಂದ್ರಿ?ಎತ್ತಣಿಂದೆತ್ತಣ ಸಂಬಂಧವೈಯ್ಯ ಅಂತ
ಹೇಳ್ತೇನೆ ತಾಳಿ
ತಾಳ್ಮೆಯಿಂದ ಕೇಳಿ
ಮುಂಬೈನಲ್ಲಿ ನಾವು ಮೂರನೆ ಮಹಡಿಯಲ್ಲಿದ್ರೆ, ಶ್ರೀಕಾಂತ್ ಅಕ್ಕ ಶೈಲಜ ಮತ್ತು ಭಾವ ಕೆ.ಪಿ.ಪೈ ಎರಡನೇ ಮಹಡಿಯಲ್ಲಿ ಸೀದಾ ನಮ್ಮ ಫ್ಲಾಟ್ ಕೆಳಗಡೆ ಬಂದಿದ್ರು. ಕೊಂಕಣಿಯವರು ಅಂದ ಮೇಲೆ ಕೊಂಕಣಿಯವರ ಪರಿಚಯ ಮಾಡದೇ ಇರುತ್ತೀವಾ?? ಹೇಗೂ ನನಗೂ 12th (ಪಿ.ಯು.ಸಿ) ಪರೀಕ್ಷೆ ಮುಗಿದಿತ್ತು. ಶೈಲಜಾ ಆಂಟಿಗೆ ನಮ್ಮ ಬಿಲ್ಡಿಂಗ ಬಳಿ ಸುತ್ತ ಮುತ್ತಲಿನ ಪರಿಸರ-ಎಲ್ಲೆಲ್ಲಿ ಏನು ಸಿಗುತ್ತೆ -ಇದೆಲ್ಲದರ ಪರಿಚಯ ಮಾಡುವ ಕೆಲಸ ನನ್ನ ಪಾಲಿಗೇ ಬಂತು. ಅವರ ಪುಟ್ಟ ಮಗ ಒಂದು ವರ್ಷದ ಪ್ರದೀಪ, ನನ್ನನ್ನು ತುಂಬ ಹಚ್ಚಿಕೊಂಡಿದ್ದ.ಮಾಲತಿ ಅನ್ನಲಿಕ್ಕೆ ಬರದೇ, ಮಾಂಚೂ ಮಾಂಚೂ ಅಂತ ಕರೀತಿದ್ದ. ಹೆಚ್ಚಿನ ಹೊತ್ತು ನಮ್ಮ ಮನೇಯಲ್ಲೇ ಕಳೆಯುತ್ತಿದ್ದ.’ಕ’ ಅಕ್ಷರ ಒಂದು ’ತ’ ಅಂತ ಹೇಳುವುದು ಬಿಟ್ರೆ ಉಳಿದದೆಲ್ಲ ಸ್ಪಷ್ಟವಾಗಿ ಮಾತನಾಡುತ್ತಿದ್ದ, ಎಲ್ಲಿ ಹೋಗಬೇಕಾದ್ರೂ ನಾನೆ ಅವನನ್ನು ಎತ್ತ್ಕೋಬೇಕಿತ್ತು. ನಾನು ಸಣ್ಣಕ್ಕೆ ಕಡ್ಡಿ ಇದ್ದ ಹಾಗೆ, ಅವನೋ ಸ್ವಲ್ಪ overweight, ಒಳ್ಳೆ ಜೋಡಿ ನಮ್ಮದು.
ಹೀಗೆ ಬರುತ್ತ ಹೋಗುತ್ತ, ಪರಿಚಯ ತುಂಬ ಬೆಳೆಯಿತು. ಒಂದು ದಿನ ಅವರು ಅಮ್ಮನಿಗೆ ,’ ನನ್ನ ತಮ್ಮ ಒಬ್ಬ ಇದ್ದಾನೆ ಬ್ಯಾಂಕ್ ನಲ್ಲಿ. ಅವನಿಗೆ ಮದುವೆ ಮಾಡಲು ಹುಡುಗಿ ಹುಡುಕ್ತಾ ಇದ್ದೇವೆ’, ಆದರೆ ಅವನಿಗೆ ತೋರಿಸಿದ್ದ ಹುಡುಗಿಯರಲ್ಲೆಲ್ಲ ಏನಾದ್ರು ಕೊಂಕು ತೆಗೆದು ಬೇಡ ಅಂತಾನೆ.’ ಮಾಲತಿ ಜಾತಕ ಕೊಡುತ್ತೀರಾ?’ ಅಂತ. ಅದಕ್ಕೆ ಅಮ್ಮ ’ಅವಳು ಇನ್ನೂ ಚಿಕ್ಕವಳು. ಗ್ರಾಜುವೇಶನ್ ಮುಗಿಸಲಿ, ಆಮೇಲೆ ನೋಡುವಾ ಅಂದರೆ. ಅದಕ್ಕೆ ಶೈಲಾ ಆಂಟಿ, ’ಅಲ್ಲ ಮಾಮಿ, ಮೊದಲು ಜಾತಕ ಕೂಡಿ ಬರಬೇಕು, ಆಮೇಲೆ ತಮ್ಮ ಒಪ್ಪಬೇಕು, ಮನೆಯವರೆಲ್ಲ ಒಪ್ಪಬೇಕು, ಆಮೇಲೆ ಉಳಿದ ವಿಷಯ. ಈಗಲೇ ಜಾತಕ ಹೊರ ಹಾಕುವುದು ಒಳ್ಳೆಯದಲ್ಲವಾ ಅಂತ. ಕಾಕತಾಳೀಯವೆಂಬಂತೆ ಎರಡೇ ದಿನದಲ್ಲಿ ಅಜ್ಜನ ಪತ್ರ ಬಂದು ಬಿಟ್ಟಿತ್ತು,’ಮೊನ್ನೆ ಮಾಲತಿಯ ಜಾತಕ ನೋಡ್ದೆ. (ನಮ್ಮ ಅಜ್ಜ ಇಂಜಿನಿಯರಿಂಗ ಜತೆ astrology ಕೂಡ practice ಮಾಡ್ತಿದ್ದರು)ಈಗ ಅವಳಿಗೆ ಮದುವೆಯ ಯೋಗ ಇದೆ. ಅದು ತಪ್ಪಿದರೆ ಇನ್ನು ಅವಳಿಗೆ 26 ನೇ ವಯಸ್ಸಿಗೆ ಮದುವೆ’ ಅಂತ. ಸೈ, ಅಮ್ಮ ಅಂತೂ ಫುಲ್ tense. 26 ಅಂದರೆ ಮುದುಕಿ ಅಂತಲೇ ಲೆಕ್ಕ!!! ಕೂಡಲೇ ಜಾತಕ ಕಳಿಸಿ, ಅದು ಕೂಡಿ ಬಂದು, ಮರು ವಾರನೇ ವಧು ಪರೀಕ್ಷೆಗೆ (?grrrrrrr) ಬೆಂಗಳೂರಿಗೆ ಕರೆದುಕೊಂಡು ಬರಲು ಹೇಳಿದರು. ನಮ್ಮ ತಂದೆ ಆಗ ರಾಜಸ್ಥಾನದಲ್ಲಿದ್ದರು deputation ಮೇಲೆ. ಅವರಿಗೆ telegram ಕೊಟ್ಟು,ತಂದೆ ಕೂಡಲೇ ಬಂದಿಳಿದರು. ಅವರ ಪರಿಚಯದವರಿಗೆ ಫೋನಾಯಿಸಿ ನಾವು ಬೆಂಗಳೂರಿಗೆ ಬರುವುದನ್ನು ತಿಳಿಸಿದರು. ಇಷ್ಟರವರೆಗೆ ನನಗೆ ಯಾರೂ ಏನೂ ಕೇಳಲೇ ಇಲ್ಲ?? :-( ಆದರೆ ಒಂದಂತು ಖಾತ್ರಿಯಿತ್ತು, ನನ್ನನ್ನು ನೋಡಿಯಂತು ಶ್ರೀಕಾಂತ್ ಖಂಡಿತ ಒಪ್ಪಲ್ಲ ಅಂತ. ನಾನು 12 ಕ್ಲಾಸ್ ಪಾಸ್ ಆದ್ರೂ ನೋಡಲಿಕ್ಕೆಆರನೆ ಕ್ಲಾಸ್ ಹುಡುಗಿ ತರಹ ಇದ್ದೆ. ಸಣ್ಣಕ್ಕೆ, ಕಡ್ಡಿ ತರಹ. ಅಂತೂ ಹೆಂಗೆಂಗೊ ಸೀರೆ ಉಟ್ಟುಕೊಂಡು, ಒಳ್ಳೆ fancy dress ತರಹ ಕಾಣುತ್ತಿದ್ದೆ. ಶ್ರೀಕಾಂತ್ ಚಸ್ಮ ಹಾಕಿದ್ರೋ ಇಲ್ವೋ, ಶ್ರೀಕಾಂತ್ ಒಪ್ಪಿ ಬಿಟ್ರು. ಆದರೆ ತೀರ್ಥಹಳ್ಳಿಯಲ್ಲಿ ಅವರ ಮನೆಯಲ್ಲಿ ಸ್ವಲ್ಪ ಹೆದರಿಕೆಯಾಯಿತಂತೆ, ’ಮುಂಬೈಯವಳು, ಇಲ್ಲಿ ನಮ್ಮದು ಕೂಡು ಕುಟುಂಬ, ಹೇಗೂ ಏನೋ ಅಂತ’....ಶೈಲ ಅವರಿಗೆಲ್ಲ ಸಮಝಾಯಿಸಿ ಸಮಾಧಾನ ಹೇಳಿದ್ದರಂತೆ, ಇಲ್ಲ ನಮ್ಮ ಮಾಲತಿ ಒಳ್ಳೆಯವಳು, ಅಷ್ಟೇ ಅಲ್ಲ ಶ್ರೀಕಾಂತ್ ಕೂಡ ಒಪ್ಪಿದ್ದಾನೆ, ಸುಮ್ಮನೆ ಹೂಂ ಅಂದು ಬಿಡಿ ಅಂತ. ಸರೀ ತೀರ್ಥಹಳ್ಳಿಯಲ್ಲೇ ಸಣ್ಣ engagement ಶಾಸ್ತ್ರ ನಡೆಯಿತು, ಉಂಗುರಗಳ ವಿನಿಮಯ ಆಯ್ತು. ಮತ್ತು ಮದುವೆ ಎಲ್ಲಿ ಮಾಡುವುದು ಎಂಬ ಪ್ರಶ್ನೆ. ಹೆಚ್ಚಾಗಿ ಮದುವೆಯನ್ನು ವಧು ಇದ್ದೆಡೆ ಮಾಡುವುದು ನಮ್ಮ ಕಡೆ ರೂಢಿ. ಆದರೆ ಶ್ರೀಕಾಂತ ಕುಟುಂಬ ದೊಡ್ಡದು, ಅಷ್ಟಲ್ಲದೇ ಎಲ್ಲರೂ ತೀರ್ಥಹಳ್ಳಿ ಆಸು ಪಾಸು ಶಿವಮೊಗ್ಗ, ಕಾರ್ಕಾಳ, ಉಡುಪಿಯಲ್ಲೆಲ್ಲ ಇರುವವರು, ಮತ್ತೊಂದು ಮುಖ್ಯ ಕಾರಣ ಶ್ರೀಕಾಂತ್ ತಂದೆ ತಾಯಿಗೆ ತುಂಬ ವಯಸ್ಸಾಗಿತ್ತು., ಅದೂ ಅಲ್ಲದೇ ಶ್ರೀಕಾಂತ ಮನೆಯಲ್ಲಿ ಕೊನೆಯವರು, ಶ್ರೀಕಾಂತ ನಂತರ ಮದುವೆಗೆ ಯಾರೂ ಇರಲಿಲ್ಲ,ಹಾಗಾಗಿ ಎಲ್ಲರಿಗೂ ಮದುವೆಯಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸು, ಇನ್ನೂ ಒಂದು ಕಾರಣ ಬೇಸಿಗೆಯ ರಜೆ ಮಕ್ಕಳಿಗೆಲ್ಲ, ತುಂಬ ಜನ ಬಂಧುಗಳು ಒಟ್ಟಗುತ್ತಾರೆಂದು,ಹಾಗಾಗಿ ದೂರದ ಮುಂಬೈ ಪ್ರಯಾಣ ಬೇಡ ಎಂದು ಉಡುಪಿಯ ವೆಂಕಟರಮಣ ದೇವಸ್ಥಾನದಲ್ಲಿ ನಡೆಸಿಕೊಡಬೇಕೆಂದು ಅವರು ಅಭಿಪ್ರಾಯಪಟ್ಟರು. ಮಾರ್ಚ್ ನಲ್ಲಿ ಎಂಗೇಜ್ ಮೆಂಟ್ ಮೇ ನಲ್ಲಿ ಮದುವೆ. ಇನ್ನು ಬಂಗಾರ, ಸೀರೆ, ಇನ್ವಿಟೇಷನ್ ಕಾರ್ಡ್ ಇದರ ತಯಾರಿಯ ಗಡಿಬಿಡಿ. ಹಾಗೂ ಉಡುಪಿಯಲ್ಲಿ ಯಾರ ಪರಿಚವೂ ಇರಲಿಲ್ಲ. ಅದೇ ಸಮಯಕ್ಕೆ ಸರಿಯಾಗಿ ಅಮ್ಮನ ಫ್ರೆಂಡ್, ನಾಲ್ಕನೆ ಮಹಡಿಯಲ್ಲಿರುವ, ಉಡುಪಿಯವರಾದ ಮೀನಾ ಆಂಟಿಗೆ ಪುನ: ಮುಂಬೈ ನಿಂದ ಅವರ ಊರಿಗೆ ಟ್ರಾನ್ಸ್ಫರ್ ಆಯಿತು. ಏನೂ ಚಿಂತೆ ಮಾಡ ಬೇಡಿ, ನಮ್ಮ ಮನೆ ಸಾಕಷ್ಟು ದೊಡ್ಡದಿದೆ, ಹಾಗೂ ಊರು ತುಂಬ ಪರಿಚಯದವರಿದ್ದಾರೆ ಎನ್ನುವ ಅಶ್ವಾಸನೆ ಸಿಕ್ಕಿತು. ಪಾಪ ಅವರೇ ಎಲ್ಲ ಎರೆಂಜ್ಮೆಂಟ್ ಮಾಡಿದರು. ಮದುವೆ ಯಂತೂ ಅಮ್ಮನ ಮತ್ತು ಕೆಲ ಹಿರಿಯರ ಪ್ರಕಾರ ’ಹೂ ಎತ್ತಿದಂತೆ’ ಸಲೀಸಾಗಿ ಯಾವುದೇ ಅಡೆತಡೆಗಳಿಲ್ಲದೇ ನೆರವೇರಿತು.
ಸರಿ ಈಗ ಬಕುಳಾಭಾತ್ ಕತೆಯತ್ತ ಬಂದೇ ಬಿಟ್ವಿ.
ಮದುವೆಯಾದ ಮೂರನೇ ದಿನ ತೀರ್ಥಹಳ್ಳಿಯ ಶ್ರೀ ರಾಮಮಂದಿರದಲ್ಲಿ ಸತ್ಯನಾರಾಯಣ ವ್ರತ ಇಟ್ಟುಕೊಂಡಿದ್ದರು. ಮದುವೆಗೆ ಬರಲಾಗದಿದ್ದವರಿಗೆಲ್ಲ ಹಾಗೂ ಶ್ರೀಕಾಂತ್ ನ ಹೆಂಡತಿ ಹೇಗಿದ್ದಾಳೆ ಅಂತ ನೋಡುವ ಕುತೂಹಲಿಗಳಿಗೆಲ್ಲ ಒಂದು ಔತಣ ಕೂಟ. ಅಪ್ಪ, ಅಮ್ಮ, ತಮ್ಮ, ತಂಗಿ ಎಲ್ಲ ವ್ರತ ಮುಗಿಸಿ, ಊಟ ಮಾಡಿ, ಉಡುಪಿಗೆ ಹೋಗಿ ಅಲ್ಲಿಂದ ಮುಂಬೈ ಗೆ ಹೋಗುವುದು ನಿರ್ಧರಿಸಲಾಗಿತ್ತು. so ವ್ರತ ಎಲ್ಲ ಮುಗಿದು, ಸುಮಾರೆಲ್ಲ ಅಡಿಗೆ ಮಿಕ್ಕಿತ್ತು. ಶ್ರೀಕಾಂತ್ ಅಕ್ಕ- ಅನ್ನಕ್ಕ, ಛೆ ಮಲ್ಲಿಗೆಯಂತ ಅನ್ನ, ಸುಮ್ಮನೆ waste ಮಾಡೋದು ಬೇಡ ಅಂತ, ಅಡಿಗೆ ಭಟ್ಟರಿಗೆ ’ರಾತ್ರಿಗೆಯಾಗುವಾಷ್ಟು ಸಾರು ಮತ್ತು ಅನ್ನ ಸ್ವಲ್ಪ ಹೆಚ್ಚೆ ಮನೆಗೆ ಕಳುಹಿಸಿ ಉಳಿದ ಅಡಿಗೆ ಹೇಗೆ ಬೇಕೋ ಹಾಗೆ ವಿಲೇವಾರಿ ಮಾಡಿ ಅಂತ ಬೇರೆಯವರಿಂದ ಹೇಳಿಸಿದರು. ಮನೆಯಲ್ಲಿ ತುಂಬ ಜನ ಉಳಿದುಕೊಳ್ಳುವವರಿದ್ದರು, ಯಾಕೆಂದ್ರೆ ಹೇಗೂ ಎಲ್ಲ ಮಕ್ಕಳಿಗೂ ಬೇಸಗೆ ರಜೆ, ಮನೆ ಕೂಡ ದೊಡ್ಡದು. ಹೆಚ್ಚಿನ ಸಂಬಂಧಿಕರೆಲ್ಲ ನಮ್ಮ ಮನೆಯಲ್ಲೇ ಉಳಿದುಕೊಳ್ಳುವವರಿದ್ದರು. ರಾತ್ರಿ ಅನ್ನ ಹೆಚ್ಚೆ ಉಳಿದದ್ದು ನೋಡಿ, ನನ್ನ ಅಕ್ಕ (ಓರಗಿತ್ತಿ) ಅನ್ನಕ್ಕನಿಗೆ ಏನು ಮಾಡುವಾ? ಇಷ್ಟು ಅನ್ನ ಉಳಿದಿದೆ ಅಲ್ಲವಾ?? ಮೊದಲಾದ್ರೆ ದನಗಳಿದ್ವು ಅವುಗಳಿಗೆ ಹಾಕಬಹುದಿತ್ತು, ಈಗ ಏನು ಮಾಡುವುದು?? ಕೆಲಸದ ಗಿರಿಜಂಗೆ ಸ್ವಲ್ಪ ಕೊಡ ಬಹುದು, ಉಳಿದದ್ದು ಹೊರಗೆ ಹಾಕಲು ಮನಸ್ಸು ಬರುವುದಿಲ್ಲ . ಅದಕ್ಕೆ ಅನ್ನಕ್ಕ, ’ಏನೂ ಚಿಂತೆ ಮಾಡಬೇಡ, ನಾನು ನಾಳೆ ’ಬಕುಳಾಭಾತ್’ ಮಾಡ್ತೇನೆ. ಈಗ ಕುಕ್ಕರ್ ನಲ್ಲಿ ಸ್ವಲ್ಪ ಸ್ವಲ್ಪ ಬಿಸಿ ಮಾಡಿಡುವ. ಸಾಧಾರಣ 50 ಜನರಿದ್ದರು ಮನೆಯಲ್ಲಿ. ಬಕುಳಾಭಾತ್ ಹೆಸರು ಕೇಳಿದ್ದೆ ತಡ ಎಲ್ಲರೂ alert. ಏನದು? ಹೇಗೆ ಮಾಡುವುದು ಅಂತ. forest fire ಗಿಂತ ಬೇಗ ಈ ಸುದ್ದಿ ಹರಡಿತು. ಮಹಡಿ ಮೇಲೆ ಹರಟೆ ಹೊಡೆಯುತ್ತಿದ್ದವರು, ಕಾರ್ಡ್ಸ್ ಆಡುತ್ತಿರುವ ಗುಂಪಿನವರು,ಹೊರಗೆ ಪಡಸಾಲೆಯಲ್ಲಿ ಡಬಲ್ ಮೀನಿಂಗ್ ಜೋಕ್ ಹೇಳುವವರು,ಬೇರೆಯವರ ಪಂಚಾಯ್ತಿಕೆಯಲ್ಲಿ ಒಳಹೊಕ್ಕಿದ ಹೆಣ್ಣುಮಕ್ಕಳು, ಎಲ್ಲರದ್ದೂ ಒಂದೇ ಪ್ರಶ್ನೆ’ಏನದು ಬಕುಳಾಭಾತ್’ ಅಂತ’ ಅನ್ನಕ್ಕ ಅಂತೂ ಇಲ್ಲದ ಮೀಸೆ ತಿರುವು ಶರಲೇಖ ಹುಲಿಮೀಸೆ ಉಫ್ ಕ್ಷಮಿಸಿ sherlock holmes ಸ್ಟೈಲ್ ನಲ್ಲಿ ’ಹೆ ಹೆ ನಾಳೆಗೆ ಕಾಯ್ಕೊಂಡಿರಿ ಅಂತ’ ಅದು ಇದು ಮಾತು, ಹಾಡು ಹೇಳುವವರಿಂದ ಹಾಡು ಹೇಳಿಸಿ, ಜೋಕ್ಸ್ ಗೆಲ್ಲ ನಕ್ಕು ನಾವೆಲ್ಲ ಆ ದಿನ ಮಲಗುವಾಗ ರಾತ್ರಿ ಎರಡು ಗಂಟೆ ದಾಟಿತ್ತು. ನನಗೋ ಮೊದಲೇ ನಿದ್ದೆ ಕಡಿಮೆ. ಮತ್ತು ಮುಂಬೈನಲ್ಲಿ ರಾತ್ರಿನೂ ಸದ್ದು ಗದ್ದಲ,ರಾತ್ರಿಯಿಡಿ ಓಡಾಡುವ ವಾಹನಗಳು, ಸಮುದ್ರದ ತುಂಬ ಹತ್ತಿರದಲ್ಲಿ ನಮ್ಮ ಬಿಲ್ಡಿಂಗ್, ರಾತ್ರಿ ಅದರ ತೆರೆಗಳ ಅಬ್ಬರ, ನಮ್ಮ ಬಿಲ್ಡಿಂಗ್ ಕೆಳಗಡೆನೆ ಇದ್ದ ಬಾರ್ ನಲ್ಲಿನ ಗಲಾಟೆ, ಮತ್ತು ಮನೆಯ ಸುತ್ತ ಮುತ್ತ ಇತರ ಬಿಲ್ಡಿಂಗ್ ಹಾಗೂ street light ನಿಂದ ಯಾವತ್ತೂ ಬೆಳಕು,ರಾತ್ರಿಯಿಡಿ ಸದ್ದು. ತೀರ್ಥಹಳ್ಳಿಯಲ್ಲಿ ಅಬ್ಬ ಗೌ ಎನ್ನುವ ಕತ್ತಲೆ, ಯಾವುದೋ ಕ್ರಿಮಿ ಕೀಟಗಳ, ಇಲಿ, ಹೆಗ್ಗಣಗಳ ಕಾರುಬಾರು, ಮಾತ್ರವಲ್ಲದೇ ಮಲಗಿದ ಜನರ ತರಹಾವರಿ, ಕೆಮ್ಮು, ಗೊರಕೆಗಳ ಸದ್ದು. ರಾತ್ರಿಯಿಡಿ ಬಕುಳಾಭಾತ್ ನಿಂದ hype create ಆಗಿ, ನಿದ್ದೆಯಲ್ಲೂ ಕೆಲವರು ’ಬಕುಳಾಭಾತ್ ಬಕುಳಾಭಾತ್’ ಅಂದಿದ್ರೂ ಹೆಚ್ಚೇನಿರಲಿಲ್ಲ ಬಿಡಿ. :-)ಅಂತೂ ನಾಲ್ಕು ಗಂಟೆಗೆ ಅಕ್ಕ ಎದ್ದು ಅಡಿಗೆ ಮನೆ ಲೈಟ್ ಹಾಕಿದಾಗ ನಾನು ಬಚಾವಾಗಿ ಎದ್ದು ಅಡಿಗೆ ಕೋಣೆಗೆ ಹೋದೆ,
ಅಕ್ಕ, ’ಯಾಕೇ ಹುಡುಗಿ ಇಷ್ಟು ಬೇಗ ಎದ್ದೆ’
’ನನಗೆ ನಿದ್ದೆ ಬರಲಿಲ್ಲ ಅಕ್ಕ’
’ಒಹೋ ಶ್ರೀಕಾಂತ್ ತುಂಬ ಕಾಟ ಕೊಟ್ಟನಾ’
ಮತ್ತೆ ಅಕ್ಕ ಬಚ್ಚಲುಮನೆಯ ಒಲೆ ಹಚ್ಚಿದರು. ಬೇಗ ಎದ್ದವರೆಲ್ಲ ಸ್ನಾನ ಮಾಡಬಹುದು ಅಂತ. ನಾನು ಅಕ್ಕನ ಹಿಂದೆ ಮುಂದೆ ತಿರುಗುವುದೇ ಆಯಿತು. ಸ್ವಲ್ಪ ದಿನಾ ಯಾವುದೇ ಮನೆಗೆಲಸ ಮಾಡಬಾರದು ನೀನು’ ಅಂತ ಕಟ್ಟಪ್ಪಣೆ ಅವರದ್ದು. ಮಾಡಲೂ ನನಗೇನೂ ತಿಳಿಯುತ್ತಿರಲಿಲ್ಲ ಬಿಡಿ. ಅಂತು ಅಕ್ಕನನ್ನು observe ಮಾಡೋದು ಬಿಟ್ಟರೆ ಬೇರೆ ಏನು ಕೆಲಸ ಇರುತ್ತಿರಲಿಲ್ಲ. ಅದೆಲ್ಲ ಇನ್ನೊಮ್ಮೆ ಹೇಳ್ತೇನೆ. :-)
ಇಲ್ಲದಿದ್ದರೆ ಬಕುಳಾಭಾತ್ ನಿಂದ track ತಪ್ಪೀತು!!
ಆ ದಿನ ಎಲ್ಲರೂ ಎಂದಿಗಿಂತ ಬೇಗನೇ ಎದ್ದವರು, ’ಬಕುಳಾ ಭಾತ್ ಬಕುಳಾ ಭಾತ್’ ವರಾತ ಶುರು ಮಾಡಿದರು. ಅನ್ನಕ್ಕ cool ಆಗಿ, ಇತರ ಹೆಂಗಸರಿಗೆ ಹೇಳಿಸಿ ಹಸಿಮೆಣಸಿನಕಾಯಿ ಕೊಯ್ಸಿದರು, ಒಗ್ಗರಣೆಗೆ ಎಲ್ಲ ಸಾಮಾನು ತಯಾರು ಮಾಡಿಕೊಂಡರು. ಘಮ ಘಮ ಪರಿಮಳ, ಸ್ವಲ್ಪ ಹೊತ್ತಿಗೆ ಎಲ್ಲರೂ ಬನ್ನಿ, ಬಾಳೆ ಎಲೆ ಎದುರಿಗೆ ಕುಳಿತುಕೊಳ್ಳಿ, ಬಿಸಿ ಬಿಸಿ ಬಕುಳಾಭಾತ್ ರೆಡಿ..ಅಂತ ಕೂಗಿದ್ದೆ ತಡ, ಎಲ್ಲರೂ ತಂಡೋಪತಂಡವಾಗಿ ಹಾಜರ್. ಎಲೆಯಲ್ಲಿ ಬಡಿಸಿದ್ದೇನೂ?? ಹಾ ಹಾ ಹಾ ನಮ್ಮ ಸೀದಾ ಸಾದ ಚಿತ್ರಾನ್ನ, ಸ್ವಲ್ಪ ಅರಿಸಿನ ಪುಡಿ ಜಾಸ್ತಿಹಾಕಿತ್ತು. ಎಲ್ಲರ ಮುಖ ನೋಡಿ ಅನ್ನಕ್ಕ ನಗಲು ಆರಂಭಿಸಿದರು. ನಿಧಾನವಾಗಿ ಮನೆಯೆಲ್ಲ ನಗೆಗಡಲಲ್ಲಿ ತೇಲಿತು. ನಾನಂತೂ ತುಂಬ enjoy ಮಾಡ್ದೆ. ನೀವು???
ಹೇ ಅಂದ ಹಾಗೆ ಮುಂದಿನ ತಿಂಗಳು ನಮ್ಮ ಮದುವೆಯಾಗಿ 25 ವರ್ಷ.ಇನ್ನೂ ಮೊನ್ನೆ ಮೊನ್ನೆ ಹಾಗೇ ನೆನಪು :-) :-) :-)
:-)