September 9, 2009

ನಾಮಾವಳಿ

ನಾನು ಹುಟ್ಟೋ ಮುಂಚೆ, ಅಮ್ಮನಿಗೆ ಗಂಡು ಮಗು ಅಂತ ಖಾತ್ರಿಯಿತ್ತಂತೆ. ಏಳನೇ ತಿಂಗಳಲ್ಲಿ ಕನಸಲ್ಲಿ ಪುಟ್ಟ ಬಾಲಕೃಷ್ಣ ದನ ಕರು ಗಳೊಂದಿಗೆ ನಿಂತು ಕೊಳಲು ಬಾರಿಸುವುದನ್ನು ನೋಡಿದ್ದರಂತೆ. ಹಾಗೇ ಹೊಟ್ಟೆಯ ಗಾತ್ರ ನೋಡಿ ಮನೆಯಲ್ಲಿರುವ ಹಿರಿಯರೆಲ್ಲ ಗಂಡು ಮಗುವೆ ಹುಟ್ಟುವುದೆಂದು ಹೇಳಿದ್ದರಂತೆ. ಅದರಂತೆ ಅಮ್ಮ ಹುಟ್ಟಲಿರುವ ಮಗನಿಗೆ ’ಮಧುಸೂಧನ, ಕೃಷ್ಣಾನಂದ ಎಂದು ನಾಮಕರಣ ಮಾಡುವ ಕನಸನ್ನು ಇಟ್ಟುಕೊಂಡಿದ್ದಳು.
ಹೊರಗಡೆ ದೀಪಾವಳಿ ಪಟಾಕಿಯ ಸದ್ದಿನೊಂದಿಗೆ ನನ್ನ ಜನನ. ನೋಡಲು ಶ್ಯಾಮಲ ವರ್ಣವಾಗಿದ್ದರು, ಬಾಲಕೃಷ್ಣ ಆಗಿರದೇ, ನಾನು ಕೃಷ್ಣೆಯಾಗಿದ್ದೆ.ಅಮ್ಮನಿಗೆ ಎಷ್ಟು ಗಾಬರಿಯಾಯ್ತೆಂದರೆ..’ಇದು ನನ್ನ ಮಗುವಲ್ಲ. ನನಗೆ ಗಂಡು ಮಗು ಹುಟ್ಟಿರುವುದು ಅಂದು, ಬೇರೆಯವರ ಮಗು ಅಂತ ನನ್ನ ಮುಟ್ಟಲೇ ಇಲ್ಲ. ಸಧ್ಯ ನನ್ನ ಅದೃಷ್ಟ (?)ನರ್ಸ್ ಸಿಟ್ಟು ಗೊಂಡು ಇಲ್ಲಿ ಇವತ್ತು ಹುಟ್ಟಿದ್ದು ಮೂವರೂ ಹೆಣ್ಣು,ನಿಮ್ಮದು ಮೂರನೇದು ಅಂದ್ರಂತೆ,ಇಲ್ಲದಿದ್ದರೆ ನನ್ನನ್ನು exchange ಮಾಡ್ತಿದ್ದರೇನೋ? . ಹಾಲು ಉಣಿಸುವ ಅನಿವಾರ್ಯವಾದಾಗ ನನ್ನನ್ನ ಬಳಿಗೆ ಕರೆದುಕೊಂಡ್ರಂತೆ.
ನನ್ನ ನಾಮಕರಣಕ್ಕೆ , ಕುಟುಂಬದ ಮೊದಲ ಹೆಣ್ಣು ಮಗು ಅಂತ (ನನ್ನ ದೊಡ್ಡಪ್ಪನಿಗೆ ಆಗಲೇ ಮೂರು ಗಂಡು ಮಕ್ಕಳು ಆಗಿದ್ದವು) ಗೋವೆಯಲ್ಲಿರುವ ನಮ್ಮ ಕುಲದೇವಸ್ಥಾಕ್ಕೆ ಒಯ್ದು ಹೆಸರಿಡುವುದೆಂದು ತಿರ್ಮಾನಿಸಿದರು. ನನ್ನ ನಕ್ಷತ್ರದ ಗುಣಾಕಾರ ಭಾಗಾಕಾರ ಮಾಡಿ ’ಮ’ ದಿಂದ ಶುರುವಾಗುವ ಹೆಸರಿಡಬೇಕೆಂದು...ನಮ್ಮ ಕುಲದೇವತೆಯಾದ ’ಮಹಾಲಸಾ ನಾರಾಯಣಿ’ ಹೆಸರಿಟ್ಟರಂತೆ. ಆದರೆ ಮುಂಬಯಿಯಲ್ಲಿ, ಅದೂ ಶಾಲೆಗೆ ಆ ಹೆಸರು ಬೇಡವೆಂದು ಪುಟ್ಟದಾಗಿ ’ಮಾಲತಿ’ ಯಂತ ಹೆಸರು ಪುರೋಹಿತರೇ ಸೂಚಿಸಿದರು. ನನ್ನ ಅಜ್ಜ ಅದಕ್ಕೆ ಮೋಹಿನಿ ಸೇರಿಸಿದರು. ’ಮಾಲತಿ-ಮೋಹಿನಿ’ ಹೆಸರು ನನ್ನದಾಯಿತು. ಶಾಲೆಗೆ ಮಾಲತಿ ಹೆಸರು ನೋಂದಾಯಿಸಲಾಯಿತು. ಯಾಕೆ ಅಂದ್ರೆ ಮೋಹಿನಿಯಂದ್ರೆ ಹೆಣ್ಣು ಭೂತ/ದೆವ್ವವಂತೆ.
ಸರಿ, ಮದುವೆ ಆಗಿ ಕೂಡುಕುಟುಂಬಕ್ಕೆ ಬಂದೆ. ಅಲ್ಲಿ ನೋಡಿದ್ರೆ ಆಗಲೇ ನಾಲ್ಕು ಮಾಲತಿಯರು ಇದ್ರು. ಅವರನ್ನು distinguish ಮಾಡೋದು..ದೊಡ್ಡ ** ಮಾಲತಿ, ಮೆಳ್ಳೆ ಗಣ್ಣಿನ ಮಾಲತಿ, ಹೆಬ್ರಿ ಮಾಲತಿ, ಉದ್ದ ಮಾಲತಿ...ಸಧ್ಯ ನನಗೆ ಮಾತ್ರ ಶ್ರೀಕಾಂತ್ ನ ಮಾಲತಿ ಅಂತಿದ್ರು. ಆದರೆ ಅತ್ತೆಯವರು ನನ್ನನ್ನು special ಹೆಸರಿನಿಂದ ಕರೆಯುತ್ತಿದ್ದರು. ನಂದೀಪಾ ಅಂತ. ಒಟ್ಟು ನನ್ನನ್ನು ಮಲ್ಲು, ಮಾಲಿ, ಮಾಂಚು, ಮಲ್ಲಿಕಾಕಾ, ಮಾಲತಿಯಕ್ಕ ಅಂತೆಲ್ಲ ಕರೆಯುವವರು ಇದ್ದಾರೆ.
ಮದುವೆಯಾದ ಹೊಸತರಲ್ಲಿ ಊರ ದೇವಳಕ್ಕೆ ಹೋದಾಗ, ಇಬ್ಬರು ಮಹಿಳೆಯರು ನನ್ನ ಬಳಿಗೆ ಬಂದು, ಅದರಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳಿಗೆ ನನ್ನನ್ನು ಪರಿಚಯಿಸುತ್ತ ’ಇವರು ನಮ್ಮ ರವೀಂದ್ರಣ್ಣನ ಹೆಂಡತಿ ಅಂತ ಹೇಳಿದ್ರು. ನನಗಂತೂ ಗಾಬರಿ. ನಾನು ’ಅಲ್ಲ, ಅಲ್ಲ ನಾನು ಶ್ರೀಕಾಂತ್ ಶೆಣೈ ಹೆಂಡತಿ’ ಅಂದೆ. ಅದಕ್ಕೆ ಅವರು ಗಟ್ಟಿಯಾಗಿ ನಕ್ಕು, ’ ನಿನ್ನ ಶ್ರೀಕಾಂತ್ ನನ್ನು ನಾವು ರವೀಂದ್ರ ಅಂತ ಕರೆಯುವುದು” ಅಂದ್ರು. ಶ್ರೀಕಾಂತ್ ತಾಯಿ (ನನ್ನ ಅತ್ತೆ) ತವರು ಮನೆಯಲ್ಲಿ ಅವರನ್ನು ರವೀಂದ್ರ ಅಂತಲೇ ಸಂಭೋಧಿಸುವುದಂತೆ. ಸಂಜೆ ಅವರು ಮನೆಗೆ ಬಂದ ಮೇಲೆ,ಅವರಿಗೆ ಇನ್ನೂ ಯಾವ ಯಾವ ಹೆಸರಿದೆ ಹೇಳಿಬಿಡಿ ಅಂದೆ. ಶಾಲಾ ಸ್ನೇಹಿತರು ’ಕಾಟಿ’ ಅಂತ, ಅವರ ತಂದೆ (ನನ್ನ ಮಾವನವರು) ಕಂಠಿ ಎಂದೂ, ಕರೆಯುತ್ತಾರೆಂದು ತಿಳಿಯಿತು. :-)
ನನ್ನ ತಂಗಿ ಇರುವುದು ಅಮೇರಿಕದಲ್ಲಿ. ಅವಳಿಗೆ ಎರಡನೆ ಮಗು ಹುಟ್ಟುವಾಗಲೂ ಸ್ವಲ್ಪ ಈ ತರಹನೇ ಆಯ್ತು. ಅಲ್ಲಿ ಭ್ರೂಣ ಪರೀಕ್ಷೆ ಮಾಡಿ ಮಗುವಿನ ಲಿಂಗದ ಬಗ್ಗೆ ಹೇಳಿ ಬಿಡುತ್ತಾರೆ. ಆದರೆ ಅವಳ ಮಗುವಿನ ಪೊಸಿಷನ್ ಹಾಗೂ ಎರಡೂ ಕೈಗಳು ಅಡ್ಡ ಇದ್ದುದರಿಂದ ಎರಡು ಸ್ಕ್ಯಾನಿಂಗ್ ನಲ್ಲೂ ಮಗುವಿನ ಲಿಂಗದ ಬಗ್ಗೆ ಪತ್ತೆ ಹೆಚ್ಚಲಿಲ್ಲ. ಅಮ್ಮ ಜ್ಯೋತಿಷಿ ಹತ್ತಿರ ಹೋದಾಗ ಅವರು ’ಗಂಡು’ ಮಗುವೇ ಹುಟ್ಟುವುದೆಂದು ಭವಿಷ್ಯ ಹೇಳಿದ್ದರು. ನನ್ನ ತಂಗಿಗೂ ಗಂಡು ಹೆರುವ ಆಸೆ ಇತ್ತೇನೋ? ನನಗೆ ಗಂಡು ಮಗುವಿನ ಹೆಸರು ಮೈಲ್ ಮಾಡಲಿಕ್ಕೆ ಹೇಳಿದ್ದಳು. ನಾನು ಶ್ರೇಯಸ್ (Shreyas) ಅನ್ನುವ ಹೆಸರು ಸೆಲೆಕ್ಟ್ ಮಾಡಿದ್ದೆ. ಎಲ್ಲರಿಗೂ ಇಷ್ಟವಾಗಿತ್ತುಅಲ್ಲಿ ಮಗು ಹುಟ್ಟಿದ ಕೂಡಲೇ ನನಗೆ ಫೋನ್ ಮಾಡಿದ್ದಾಗ..’ಈಗ ಹೆಣ್ಣು ಮಗು ಹುಟ್ಟಿದೆಯಲ್ಲವ’, ’ಏನು ಮಾಡುವುದು’ ಅಂದಾಗ..ಅದರಲ್ಲೇನು ಮಹಾ, ’ಸ’ ತೆಗೆದು ಬಿಟ್ಟು ಶ್ರೇಯಾ (Shreya) ಮಾಡುವ ಅಂದೆ. ಈ ವರ್ಷ ಶ್ರೇಯಳ ಐದನೇ ಹುಟ್ಟಿದ ಹಬ್ಬದ ಸಡಗರ. ನಾನು ಇದನ್ನು ಪೋಸ್ಟ್ ಮಾಡುವಾಗ ಶ್ರೇಯಾ ಅಲ್ಲಿ ಹುಟ್ಟು ಹಬ್ಬ ಆಚರಿಸ್ತಾ ಇದ್ದಾಳೆ.
ಇತ್ತೀಚಿಗೆ ಕೆ.ಟಿ. ಗಟ್ಟಿ ಯವರ ಪುಸ್ತಕ ’ನಿನ್ನೆ, ಇಂದು,ನಾಳೆ’ ಬಿಡುಗಡೆ ಆಯ್ತು. ಸಮಾರಂಭಕ್ಕೆ ನಾನು ಹೋಗಿದ್ದೆ. ಕೆ.ಟಿ. ಗಟ್ಟಿ ಯವರ ಮತ್ತು ನಮ್ಮ ಕುಟುಂಬದ ಪರಿಚಯ ತುಂಬ ಹಳೇಯದು. ನಾನು ಹೋಗುವಾಗಲೇ ಸಭೆ ಯೆಲ್ಲ ಕಿಕ್ಕಿರಿದು ತುಂಬಿತ್ತು. ಕೂರಲು ಜಾಗ ಇರಲಿಲ್ಲ. ನಾನು, ಅವರ ಮಗ ಸತ್ಯಜಿತ್, ಹೊರಗಡೆ ನಿಂತಿದ್ದೆವು. ಆಗ ಇಬ್ಬರು ಹೆಣ್ಣುಮಕ್ಕಳು ಹೊರಗೆ ಬಂದರು. ಸತ್ಯಜಿತ್ ಅವರನ್ನು ಬಳಿಗೆ ಕರೆದು, apart from the fact that u three are ladies there is one more thing common among you' ಅಂತ ಹೇಳಿದರು. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಏನೂ ಹೊಳೆಯಲಿಲ್ಲ. ಅಮೇಲೆ ಅವರೇ ನಗುತ್ತ malathi meet malathi and malathi ಅಂದು ಬಿಟ್ಟರು. ನಮ್ಮ ಮೂವರ ಹೆಸರು ಮಾಲತಿ ಅಂತ ಕೇಳಿ ಖುಶಿಯಾಯ್ತು. ಅವರಿಬ್ಬರು ಜರ್ನಲಿಸ್ಟ್.
ಕಾಕತಾಳೀಯವೆಂಬಂತೆ ಪುಸ್ತಕದಲ್ಲಿ ಕಂಡು ಬರುವ ಒಂದು ಪಾತ್ರದ ಹೆಸರು ’ಮಾಲತಿ’.

4 comments:

  1. ಮಹಾಲಸಾ ನಾರಾಯಣಿಯವರೆ,
    ಚೆನ್ನಾಗಿತ್ತು ಹೆಸರುಗಳ ಸರಣಿ..., ನನಗೆ ೨-೩ ಹೆಸರು ಇದೆ ಅಷ್ಟೆ...ನನ್ನಾಕೆಗೆ ನಾಲ್ಕೈದು ಇದೆ......ಮಗನಿಗೂ ನಾವು ಹೆಸರಿನಿಂದ ಕರೆಯೊದೆ ಕಡಿಮೆ...ಈಗೀಗ ಎನಾಗಿದೆ ಅಂದ್ರೆ ನಿಜ ಹೆಸರಿನಿಂದ ನಾವು ಕರೆದರೆ funny ಅನ್ನಿಸುತ್ತೆ...ಅಡ್ಡಹೆಸರುಗಳು ಅಷ್ಟು ಪ್ರಭಾವ ಬೀರಿದೆ....
    ಚೆನ್ನಾಗಿತ್ತು ಬರಹ...
    ಶ್ರೇಯಗೆ ಹುಟ್ಟು ಹಬ್ಬದ ಶುಭಾಶಯಗಳು...

    ReplyDelete
  2. ಕೃಷ್ಣೆಗೆ..ಬಾಲ್ಯದ ನೆನಪು, ಬೆಳೆದ ನೆನಪು ಮತ್ತು ಹರಿಶಿಣ ಹಚ್ಚಿ ಹಸಿ ಮೈಯ ಮದುಮಗಳಾದ ನೆನಪು..ಓಹ್...ಎಲ್ಲಾ ನೆನಪಿದೆಯಲ್ಲ...!!??
    ನಿಮ್ಮಂತಹುದೇ ಗೊಂದಲ ನನ್ನ ಮಗಳಿಗೆ (ಸುರೈಯಾ ಅವಳನ್ನು ನಾವು ಸುರು ಎನ್ನುವುದು). ನಾನೇ ಹಿರಿಯ ನಮ್ಮ ಏಳು ಮಂದಿ ಸಹೋದರ ಸಹೋದರಿಯರಲ್ಲಿ. ನಾಲ್ವರು ತಮ್ಮಂದಿರು..ಸುರು ಕರೆಯುವುದು..ಬಡೇ ಚಾಚು (ದೊಡ್ಡ ಚಿಕ್ಕಪ್ಪ), ಟೀಚರ್ ಚಾಚು, ಚಾಚು (ಮನೆಯಲ್ಲೇ ವ್ಯಾಪಾರದಲ್ಲಿ ಇರುವ ತಮ್ಮ) ಮತ್ತು ಡಾಕ್ಟರ್ ಚಾಚು (ಅವನು ಡಾಕ್ಟರ್ ಆದ್ದರಿಂದ) ಹೀಗೆ.. ತಂಗಿರನ್ನ ಕರೆಯಲು ಕನ್ಫ್ಯೂಶನ್ ಇಲ್ಲ..ಚಿಕ್ಕತ್ತೆ..ದೊಡ್ಡತ್ತೆ...!!!
    ಅಂದಹಾಗೆ ನನ್ನ ಒಬ್ಬಳೇ ಮಗಳು ಹುಟ್ಟಿದಾಗ (ಆಸ್ಪತ್ರೆಯಲ್ಲಿ) ನನ್ನಮ್ಮಂಗೂ ನಿಮ್ಮತಾಯಿಯ ತರಹದ ಶಂಕೆ ಇತ್ತು ಅಂದರೆ ನಂಬುತ್ತೀರಾ...??

    ReplyDelete
  3. ಸವಿಗನಸು
    ಜಲನಯನ
    thanks for sharing

    :-)

    ms

    ReplyDelete