March 26, 2016

ಬೆಳ್ಳಿಯ ಕಾಲ್ಗೆಜ್ಜೆ - ಕನ್ನಡ ಪ್ರಭ ದಲ್ಲಿ ನನ್ನದೊಂದು ಪುಟ್ಟ ಲೇಖನ

ಫೇಸ್ ಬುಕ್ ಮಿತ್ರರು ಹಾಗು ಕನ್ನಡ ಪ್ರಭಾದಲ್ಲಿರುವ ಸಹ್ಯಾದ್ರಿ ನಾಗರಾಜ 'ಮನಸಾರೆ' ಗೆ ಏನಾದ್ರೂ ಬರೆದು ಕಳಿಸಿ ಮೇಡಂ ಅಂದಿದ್ರು. ನಾವು ತೀರ್ಥಹಳ್ಳಿಗೆ ಎಳ್ಳಮವಾಸ್ಯೆ ಜಾತ್ರೆಗೆ ಹೋಗಿ ಬಂದ ಮೇಲೆ ಫೆಸ್ ಬುಕ್ ಪುಟದಲ್ಲಿ ಯಾರೋ ಶೇರ್ ಮಾಡಿದ ಮನಸಾರೆ ಓದಲು ಸಿಕ್ಕಿತು. ಯಾಕೆ ಬರೆಯಬಾರದೆಂದು ...... ಏನು ಎತ್ತ ಅಂದರೆ ಪದ ಮಿತಿ ಬಗೆ ಕೇಳದೆ ಎತ್ತಿನ ಮೂತ್ರದಂತೆ (ಕೊಂ  ಕಣಿಯ ಒಂದು ಹೇಳಿಕೆ ಕನ್ನಡೀಕರಿಸಿದ್ದೇನೆ) ಬರೆದು ಕಳಿಸಿಬಿಟ್ಟೆ. ಆದ್ದರಿಂದ ಅವರು ಕತ್ತರಿ ಪ್ರಯೋಗ ಮಾಡಿ ಅಂಕಣಕ್ಕೆ ತಕ್ಕುದಾಗಿ ಹಾಕಿದ್ದಾರೆ. 
ಪೂರ್ಣ ಪ್ರಮಾಣ ಇಲ್ಲಿದೆ. 

ಅಮ್ಮ ’ಆನಂದಭಾಷ್ಪ’ ಅಂದರೇನಮ್ಮ ಅಂತ ಕೇಳಿದಳು ಮಗಳು. ಅವಳಿಗೆ ಅವಾಗಾವಾಗ ಕನ್ನಡದಿಂದ ಆಂಗ್ಲಕ್ಕೆ ತರ್ಜುಮೆ ಮಾಡುವ ಕೆಲಸ ಸಿಗುತ್ತದೆ. ನಾನು ’ಟೀಯರ್ಸ್ ಆಫ್ ಜಾಯ್’ ಕಣೆ’ ಅಂದೆ. ಆ ತರಹದ್ದು ನಿಜವಾಗಿ ಇರುತ್ತ ಅಂತ ನಕ್ಕಳು. ನನ್ನ ಮನಸ್ಸು ಹಲವಾರು ವರ್ಷ ಹಿಂದಕ್ಕೆ ಓಡಿತು. ಬೇಸಿಗೆಯ ರಜಕ್ಕೆ ನಾವು ಊರಲ್ಲಿ ಸೇರುತ್ತಿದ್ದೆವು. ಹಲವಾರು ಮಕ್ಕಳು. ದೊಡ್ಡ ಹಿತ್ತಲಲ್ಲಿ ಒಂದು ಕಡೆ ಅಜ್ಜನ ಮನೆಯಾದರೆ ಇನ್ನೊಂದು ಬದಿಯಲ್ಲಿ ಮಾಮನ ಮನೆ. ಎಲ್ಲ ಮಕ್ಕಳೂ ಆ ಮನೆ  ಈ ಮನೆ ಅಂತ ಓಡಾಡಿ ಕೊಂಡಿದ್ದೆವು. ರಾತ್ರಿಯೂ ಹಾಗೆ ಯಾವುದಾದರೊಂದು ಮನೆಯಲ್ಲಿ ಕತೆ ಕೇಳುತ್ತ, ಹೇಳುತ್ತಾ, ನಮ್ಮ ನಮ್ಮ ಊರಿನ ಆಗು ಹೋಗು ಗಳ ಬಗ್ಗೆ ಮಾತನಾಡುವುದು- ಮಲಗೋದು ಎಲ್ಲ ಮಾಡುತ್ತಿದ್ದೆವು. ನನಗಾಗ ೬-೭ ವರ್ಷ. ನಮ್ಮ ಮಾಮನವರಿಗೂ ತಂದೆಯವರಿಗೂ ಯಾವುದೋ ವಿಷಯಕ್ಕೆ ಮನಸ್ತಾಪ. ಆದ್ದರಿಂದ ಮಾಮ ನನ್ನ ಜತೆ ಮಾತು ಆಡುತ್ತಿರಲಿಲ್ಲ. ಬೇರೆ ಮಕ್ಕಳ ಜತೆ ತಮಾಷೆ, ನಗು ಮಾತು ಕತೆ ಆಡುವಾಗ, ನನ್ನ ಜತೆ ಅವರು ಯಾಕಾಗಿ ಹಾಗೆ ಸಿಟ್ಟು ಮಾಡಿಕೊಂಡು ಇರುತ್ತಾರೆಂದು ನನಗೆ ತಿಳಿಯುತ್ತಿರಲಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವಷ್ಟೂ ಬುದ್ದಿಯಿರಲಿಲ್ಲ. ಚಾಕಲೇಟು ತಂದರೆ, ಬಟ್ಟೆ ಬರೆ, ಚೆಂದದ ರಿಬ್ಬನ್, ಬಣ್ಣದ ಚಾಕ್ ಪೀಸ್ ಎಲ್ಲ ತಂದು ಎಲ್ಲ ಮಕ್ಕಳಿಗೂ ಹಂಚುತ್ತಿದ್ದರು ನನ್ನೊಬ್ಬಳನ್ನು ಬಿಟ್ಟು. ಈ ವಿಷಯವನ್ನು ನಾನು ಹಿರಿಯರಿಗೆ ಅಂದರೆ ನನ್ನ ಅಜ್ಜ ಅಜ್ಜಿಗೆ, ತಂದೆ ತಾಯಂದರಿಗೆ ಯಾವತ್ತೂ ಹೇಳಿದ್ದಿಲ್ಲ. ಸ್ವಲ್ಪ ಹೊತ್ತು ಬೇಜಾರೇನೋ ಆಗುತ್ತಿತ್ತು. ಮುಂದಿನ ಕ್ಷಣಕ್ಕೆ ಅದೆಲ್ಲ ಮರೆತು, ನಮ್ಮ ಆಟದಲ್ಲಿ ತಲ್ಲೀನ. ಹಪ್ಪಳ ಸಂಡಿಗೆ ಮಾಡುವುದರಲ್ಲಿ ಸಹಾಯ ಮಾಡುವುದಕ್ಕಿಂತ, ಹಿಟ್ಟಿನ ಅರ್ಧದಷ್ಟು ನಾವೇ ಗುಳುಂ ಮಾಡುತ್ತಿದ್ದದ್ದು, ಹಿತ್ತಲಲ್ಲಿ ತಿರುಗಾಡಿ ಬಿದ್ದ ಮಾವಿನ ಹಣ್ಣು, ದಿವಿಹಲಸಿನಕಾಯಿಗಳನ್ನು ಹೆಕ್ಕಿ ಮನೆಗೆ ತಂದು ಕೊಡುವುದು, ದನಗಳಿಗೆ ಅಂತ ದೀವಿಹಲಸಿನ ಹಣ್ಣಾಗಿ ಬಿದ್ದ ಎಲೆಗಳನ್ನು ಹೆಕ್ಕಿ ಕೊಟ್ಟಿಗೆ ಬಳಿ ಪೇರಿಸಿವುದು, ಸಂಜೆ ಅಜ್ಜಿ ತೆಂಗಿನ ಮಡಲಿನಿಂದ ಕಡ್ಡಿಗಳನ್ನು ತೆಗೆದು ಅದರ ಹಿಡಿಸುಡಿ ಮಾಡುವುದರಲ್ಲಿ ,ಅಜ್ಜಿ ಹೇಳುವ ಕತೆ ಕೇಳುತ್ತಾ ಸಹಾಯ ಮಾಡುವುದು ಇತ್ಯಾದಿ. 
ಹೀಗೆ ಒಂದು ಸಲ ಮಾಮ ಮನೆಯ ಹೆಣ್ಣು ಮಕ್ಕಳಿಗೆಲ್ಲ ಬೆಳ್ಳಿಯ ಕಾಲ್ಗೆಜ್ಜೆ ತಂದಿದ್ದರು. ತರತರಹದ ಲಕ ಲಕನೆ ಹೊಳೆಯುವ ಕಾಲ್ಗೆಜ್ಜೆ ಗಳನ್ನು ನೋಡಿ ನನ್ನ ಕಣ್ಣುಗಳಲ್ಲೂ ಮಿಂಚು. ಎಲ್ಲರ ಕಾಲಿಗೂ ಬೆಳ್ಳಿಯ, ಗಿಲಿ ಗಿಲಿ ಸದ್ದು ಮಾಡುವ ಕಾಲ್ಗೆಜ್ಜೆ. ನನಗೆ ಮಾತ್ರ ಇಲ್ಲ. ಮೊದಲನೆ ಸಲ ಬಾಯ್ಬಿಟ್ಟು, ಮಾಮಾ ನನಗೆ? ಅಂತ ಕೇಳಿದೆ. ನಿನ್ನಪ್ಪನಿಗೆ ಹೇಳು ಎಂದು ಮುಖದ ಮೇಲೆ ಹೊಡೆದ ಹಾಗೆ ಹೇಳಿದರು. ಅವತ್ತೇ ಕೊನೆ ..ಈಗಲೂ ಸಹ ಯಾರಲ್ಲೂ ಏನೂ ಕೇಳುವುದು ಒಂದು ತರಹ ಮುಜುಗರ, ಹೆದರಿಕೆ. 
ಮರುದಿನ ಯಥಾವತ್ತು ನಮ್ಮ ಆಟ, ಕೀಟಲೆ, ಗಮ್ಮತ್ತು. ಇದೆಲ್ಲ ಆಗಿ ಒಂದು ವಾರ ಆಗಿರ ಬಹುದು. ನನ್ನ ಅಜ್ಜ ನನ್ನನ್ನು ಕರೆದುಕೊಂಡು ಪೇಟೆಗೆ ಬಂದರು. ನನಗೆ ಐಸ್ ಕ್ರೀಮ್ ಕೊಡಿಸಿದರು. ಆಮೇಲೆ ಬಂಗಾರದ ಅಂಗಡಿಗೆ ಕರೆದುಕೊಂಡು ಹೋಗಿ , ನಾನು ನೋಡ ನೋಡುತ್ತಿದ್ದಂತೆ ನನ್ನ ಕಾಲಿಗೆ ಅಂಗಡಿಯವನು ಚೆಂದದ ಕಾಲ್ಗೆಜ್ಜೆ ಸಿಕ್ಕಿಸಿದ. ಸಣ್ಣ ಸಣ್ಣ ಎಲೆಗಳಿಂದ ಕೂಡಿದ. ಕೊಂಡಿಯ ಬಳಿ ಮಾತ್ರ ಒಂದು ಗೆಜ್ಜೆ ಗೊಂಚಲು ಇರುವ ಗೆಜ್ಜೆ. ಸಣ್ಣಕ್ಕೆ ಇಂಪಾಗಿ ಸದ್ದು ಮಾಡುವ ಕಾಲ್ಗೆಜ್ಜೆ. ನನ್ನ ಬಿಸಿಲಿಗೆ ಒಡ್ಡಿದ ಕಪ್ಪಾದ ಕಾಲಿಗೆ ಝಗಝಗಸಿವ ಕಾಲ್ಗೆಜ್ಜೆ.
ಸ್ವಲ್ಪ ಹೊತ್ತಿಗೆ ಅಜ್ಜ, ಯಾಕೆ ಮಗಳೆ ಅಳುತ್ತಿದ್ದಿ’ ಅಂತ ಕೇಳಿದಾಗಲೇ ನನಗೆ ಗೊತ್ತಾಗಿದ್ದು, ನನ್ನ ಕಣ್ಣುಗಳಿಂದ ಬಳಬಳನೆ, ನನಗೂ ಗೊತ್ತಿಲ್ಲದ ಹಾಗೆ ಕಣ್ಣುಗಳಿಂದ ನೀರು ತೊಟ್ಟಿಕ್ಕುತ್ತಿದ್ದುದು. ಅದೇ ’ಆನಂದಭಾಷ್ಪ’ ಅಂತ ಗೊತ್ತಾಗಿದ್ದು ಸುಮಾರು ದೊಡ್ಡವಳಾದ ಮೇಲೆ.
ಆಮೇಲಾಮೇಲೆ ದೊಡ್ಡ ಕ್ಲಾಸು, ಓದು ರಜೆಯಲ್ಲಿ ಎಲ್ಲರೂ ಮುಂಬೈನ ನಮ್ಮ ಮನೆಗೇ ರಜೆಗೆ ಬರುತ್ತಿದ್ದರಿಂದ,  ಬೇಸಿಗೆ ರಜೆಯಲ್ಲಿ ಊರಲ್ಲಿ ಸೇರುವುದು ಕಡಿಮೆಯಾಯಿತು. ಮದುವೆ ಮುಂಜಿಗಳಿದ್ದಾಗ , ಅದೂ ರಜೆಯಲ್ಲಿದ್ದಾಗ ಹೋಗಿ ಬೇಗ ಬಂದು ಬಿಡುತ್ತಿದ್ದೆವು. ಹಲವಾರು ವರ್ಷಗಳ ನಂತರ , ನನ್ನ ಮದುವೆಯಾಗಿ, ನನಗೆ ಮಗುವಾದ ಮೇಲೆ, ಅಜ್ಜಿಗೆ ಜೋರು ಕಾಯಿಲೆ, ಆಗ ನನ್ನ ಅಜ್ಜಿಗೆ 93 ರ ವಯಸ್ಸು, ನನ್ನನ್ನು ನೋಡಲೇ ಬೇಕು ಅಂದಿದ್ದರಿಂದ ನಾನು ಹೋಗಿದ್ದೆ. ಮಾಮ ಕೂಡ ಇದ್ದರು. ಹೇ ಮಾಲತಿ ಬಂದಿದ್ದಾಳೆ, ಅವಳಿಗೋಸ್ಕರ ಅವಳ ಇಷ್ಟದ ಅಡಿಗೆ ಮಾಡು ಅಂತ ಮಾಮಿಗೆ ಆರ್ಡರ್. ಊಟ ಮಾಡುವಾಗ ’ಇವತ್ತು ಅಡುಗೆಗೆ ಏನು ರುಚಿ!! ಪ್ರೀತಿಪಾತ್ರರು ಬಂದಾಗ ಹಾಗೇ ಅಲ್ಲವೆ??!!’ ಅಂತ ಒತ್ತಾಯ ಪೂರ್ವಕ ಬಡಿಸಿ ಬಾಯಿ ತುಂಬಾ ಪ್ರೀತಿಯ ಮಾತು. ಸಂಜೆ ವಾಪಸ್ಸು ಹೊರಟು ಬರುವಾಗ, ನನ್ನ ಕೈಯಲ್ಲಿ ಒಂದು ಗುಲಾಬಿ ಬಣ್ಣದ ಕಾಗದದ ಪೊಟ್ಟಣ ಇತ್ತು, ’ನಿನ್ನ ಮಗಳಿಗೆ’ ಅಂದರು. ಬಿಡಿಸಿ ನೋಡಿದರೆ ನನ್ನ ಮಗಳ ಪುಟಾಣಿ ಕಾಲ್ಗಳಿಗೆ ತಕ್ಕ ಚೆಂದದ ಬೆಳ್ಳಿಯ ಕಾಲ್ಗೆಜ್ಜೆ. ಇದೆಲ್ಲ ಯಾಕೆ ಅಂದೆ. ಅದಕ್ಕೆ ಅವರು ನೀನು ಚಿಕ್ಕವಳಿದ್ದಾಗ ಕೈಯೆತ್ತಿ ನಿನಗೆ ಏನೂ ಕೊಟ್ಟಿರಲಿಲ್ಲ, ಮನಸ್ಸಿಗೆ ತುಂಬಾ ಕಾಡುತ್ತೆ, ಬೇಡ ಅನ್ನ ಬೇಡ ಅಂದರು. ನಾನು ಹೆಚ್ಚಿಗೆ ಮಾತಾಡದೆ, ಅದನ್ನು ಪಡೆದು, ಎಲ್ಲರ ಕಾಲಿಗೆ ಅಡ್ಡ ಬಿದ್ದು ಅಲ್ಲಿಂದ ಹೊರಟೆ. 
ಈಗ ಅಜ್ಜಿ, ಮಾಮಾ ಮಾಮಿ ಎಲ್ಲ ಕಾಲವಾಗಿದ್ದರೆ. ನೆನಪು ಮಾತ್ರ ಹಸಿ ಹಸಿ.

March 23, 2016

ಒಂದು ವಾಕ್ ಪ್ರಹಸನ

ದಿನಾ ಬೆಳಿಗ್ಗೆ ನಾನು ೪ ಗಂಟೆಗೆ ಏಳುತ್ತೇನೆ, ಸ್ವಲ್ಪ ಬ್ರೇಕ್ಫಾಸ್ಟ್ ಮತ್ತು ಮಧ್ಯಾಹ್ನದ ಅಡುಗೆಗೆ ತಯಾರಿ ನಡೆಸಿ, ೫ ಗಂಟೆಗೆ ವಾಕ್ ಹೊರಡುತ್ತೇನೆ. ನಮ್ಮ ಮನೆಯ ಬಳಿಯ ಪಾರ್ಕ್ ಏನೋ ನಾಲಕ್ಕು ಗಂಟೆಗೆ ಓಪನ್ ಮಾಡುತ್ತಾರೆ, ಆದರೆ ನನಗೆ ಹೆದರಿಕೆ. ೪.೪೫ ಗೆ ಆನಂದ ಭವನದಲ್ಲಿ ಚಟುವಟಿಕೆ ಆರಂಭ. ಆದ್ದರಿಂದ ಅವರು ಅವರ ಹಿಂದುಗಡೆಯ ಬಾಗಿಲಿಗೆ ಲೈಟ್ ಹಾಕ್ತಾರೆ. ಬೀದಿಯಲ್ಲಿ ಬೆಳಕು ಬೀಳುತ್ತೆ. ಆಗ ನಾನು ಹೊರಡುತ್ತೇನೆ. ಆನಂದ ಭವನ ದಾಟುವಾಗ ಘಂ ಎನ್ನುವ ಸಾಂಬಾರ ಪರಿಮಳಕ್ಕೆ ನನ್ನ ಹೊಟ್ಟೆಯಲ್ಲಿ ತಾಳ ಮದ್ದಲೆ ಶುರು. ನನಗೆ ಹಸಿವೆ ಯಾವತ್ತೂ ಬೇಗ ನೆ ಆಗುತೆ. ಅದಕ್ಕೆ ಶುಗರ್ ಎಲ್ಲಾ ಟೆಸ್ಟ್ ಆಯ್ತು. ಏನೂ ಇಲ್ಲ. ಡಾಕ್ಟರ್ ಬಳಿ ಹೇಳಿದ್ರೆ ಅವರು ನಕ್ಕು ಹಸಿವೆಯಾರೆ ತಿನ್ನಿ ಮೇಡಂ ಅಂತಾರೆ :-)

 ನಮ್ಮ  ಮನೆಯ  ಬಳಿ ಹಲವಾರು ಪಾರ್ಕ್ ಗಳಿದ್ದಾವೆ. ಮಾಳವಿಕಾ ಬರುವುದಾದರೆ  ಎಕ್ಸರ್   ಮಿಶಿನ್ ಇರುವ ಪಾರ್ಕ್ ಗೆ ಹೋಗ್ತೇವೆ.  ಕೆಲವೊಮ್ಮೆ ಅವಳ ಬಿಸ್ಕೂಟ್ ಫ್ಯಾಕ್ಟರಿ ಬೆಳಿಗ್ಗೆನೆ ಶುರು ಆಗುತ್ತೆ.  ಆಗ ನನೊಬ್ಬಳೆ ಸಾದಾ ಪಾರ್ಕ್ ಗೆ ಹೋಗುತ್ತೇನೆ. ಬೆಸ್ಕಾಂ  ಪಾರ್ಕ್ ವಾಕ್ ಹೋಗಲು ಚೆನ್ನಾಗಿರುತ್ತವೆ. ಬೆಳಿಗ್ಗೆ ಒಂದಷ್ಟು ಟೈಮ್ ತೆರೆದಿರುತ್ತದೆ. ಆಮೇಲೆ  ಬೀಗ ಹಾಕಿ  ಆವರಣದಲ್ಲಿರುವ ಮಾಲಿ  ಕುಟುಂಬ ಪಾರ್ಕ್ ಕ್ಲೀನ್ ಆಗಿಡುವುದರಲಿ ಶ್ರಮಿಸುತ್ತಾರೆ. 

ರಾತ್ರಿ ಇಡಿ ಸೆಕೆಯಾದ್ರೂ ಬೆಳಗ್ಗೆ ಪಾರ್ಕ್ ನಲ್ಲಿ ಸ್ವಲ್ಪ ಹಿತವಾದ ವಾತಾಅರಣ. ಸಣ್ಣಕ್ಕೆ ಗಾಳಿ ಬಂದರೂ ಹೊಂಗೆ ಮರದಿಂದ ಹಿಮ  ಬೀಳುವ ಮಾದರಿಯಲ್ಲಿ ಕೆಳಗೆ ಬೀಳುವ ಹೊಂಗೆ ಮರದ ಹೂ ಹಾಗೂ ಹೂ ಗಳಿಂದ ಏರ್ಪಡುವ  ನೆಲಹಾಸು. 

ರಾತ್ರಿ ಎಅರಡು ಗಮ್ತೆಯಿಂದಲೇ ಎಚ್ಚರ. ಬಾಲಕನಿಗೆ ಬಂತು ಹೋಳಿ ಹುಣ್ಣಿಮೆಯ ಚಂದ್ರನಿಗೊಂದು ಹಾಯ್  ಹೇಳಿ, ಸ್ವಲ ಹೊತ್ತು ಫೆಸ್ ಬುಕ್ ನಲ್ಲಿ ಸಂಚರಿಸಿದೆ. ಇವತ್ತು ಶ್ರೀಕಾಂತ ಕೂಡ ಬೇಗನೆ ಎದ್ದಿದ್ದರಿಂದ ಮಡಿವಾಳ ಕೆರೆ ಬಳಿ ವಾಕ್ ಹೋಗುವ ಪ್ರಸ್ತಾವನೆ ಇಟ್ಟರು. ಮಕ್ಕಳಿಗೆ ಎಬ್ಬಿಸಿ ಬರುತ್ತೀರಾ ಅಂತ ಕೇಳಿದೆ. ಅವರೂ ಹೂಂ ಅಂತ ಹೊರಟರು. ಕತ್ತಲೆ ರಸ್ತೆ. ನಿಧಾನವಾಗಿ ಸಾಗ ಬೇಕಾಯಿತು. ಅಲ್ಲಲ್ಲಿ ಹೊಂಡ, ಕನ್ಸ್ಟ್ರಕ್ಷನ್ ಸಾಮಾನುಗಳು , ನೀರು ಬಿದ್ದು  ಕೊಚ್ಚೆ ಎದ್ದ ರಸ್ತೆ, ಮತ್ತು ದೀಪಗಳಿಲ್ಲದ  ರಸ್ತೆ. 

೫೩೦ ಗೆ ನಾವು ಲೇಕ್ ಬಳಿ ಇದ್ವಿ. ನಾಲ್ಕೈದೆ ಜನ. ಸಣ್ಣ್ ಕುಳಿರ್ಗಾಳಿ. ವಾಕ್ ಮುಗಿಸಿ ಬೆಳಗಾಗುವುದನ್ನು ನೋಡಿದೆವು. ತರಹೇವಾರಿ ಹಕ್ಕಿಗಳು, ತಣ್ಣಗೆ ಕುಳಿತಿರುವ ನಾಯಿಗಳು, ಆಗಲೇ ತೆಪ್ಪದಲ್ಲಿ ಮೀನು ಹಿಡಿಯುವವರು, ಒಂದಿಬ್ಬರು ಗಾಳ ಹಾಕಿಕೊಂಡು ಕೂತಿದ್ದರು. ನೀರ ಮೇಲೆ ಗಾಳಿಯ ಸಂಚಲನದಿಂದ ಹುಟ್ಟಿದ ತೆರೆಗಳು, ನಿಹಾ ಮಾಳವಿಕಾ ರ ಚೇಷ್ಟೆಯಿಂದ ನಮ್ಮಲ್ಲಿ ಎದ್ದ ನಗು...... ಹೀಗೆ ಎಷ್ಟು ಚೆಂದದ ಬೆಳಗಿನ ವಾಕ್. 

ಹಾಗೆ ಇವತ್ತು ಹೋಳಿ ಹಬ್ಬ. ಹೋಳಿ ಹಬ್ಬ ಕ್ಕೆ ಬಿಸ್ಕೂಟ್ ಫ್ಯಾಕ್ಟರಿಯಿಂದ ಹೋದ ಕೇಕ್. ಥಂಡಾಯ್ ಕೇಕ್ , ಅವರಿಗೆ ಕೃತಕ ಬಣ್ಣ ಬೇಡ ಎಂದು ಈ ತರಹ ಗುಲಾಬಿ ಪಕಳೆಗಳಿಂದ ಅಲಂಕಾರ. 



ಇದೂ ಥಂಡೈ ಕೇಕ್. ಕಲಯಂಟ್ಸ್ ಗೆ ಹೀಗೆ ಬೇಕಿತ್ತು . ಅವರು ಪ್ರಜಾವಾಣಿ ಪತ್ರಿಕೆಯ ಓದುಗರು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ಬರಹಗಾರರು. 

ಇನ್ನಷ್ಟು ಚೆಂದದ ಕೇಕ್ ಗಳನ್ನು ನೋಡಲು ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ. 


:-) 

March 15, 2016

ಜೀವನದ ಪಾಠ

ಒಂದು ಸಲ ಮಗಳು ತನ್ನ ತಂದೆಗೆ , ತನ್ನ ಜೀವನ ಬೇಸರದಿಂದ ಕೂಡಿದೆ ಮತ್ತು ಅದನ್ನು ಹೇಗೆ ನಿಭಾಯಿಸಬೇಕು ಅಂತ ನನಗೆ ಗೊತ್ತಾ ಗದೆ ಪರದಾಡ್ತಾ ಇದ್ದೇನೆ.  'ನನಗೆ ಇವೆಲ್ಲವನ್ನೂ ಎದುರಿಸಲು ಆಗ್ತಾ ಇಲ್ಲ. ಒಂದು ಸಮಸ್ಯೆ ಮುಗಿಯಿತು ಅನ್ನುವಾಗಲೇ ಹೊಸದೊಂದು ಸಮಸ್ಯೆ ಶುರು' ಅಂತ ದೂರುತ್ತಿದ್ದಳು. 

ಅವಳ ತಂದೆ ಬಾಣಸಿಗ/ ಶೆಫ್ . ಅವಳನ್ನು ಅಡಿಗೆಮನೆಗೆ ಕರೆದುಕೊಂಡು ಹೋದ. ಅಲ್ಲಿ ಮೂರು ಪಾತ್ರೆಗಳಲ್ಲಿ  ನೀರನ್ನು ತುಂಬಿ ಮೂರೂ ಪಾತ್ರೆಗಳನ್ನು ಓಲೆಯ  ಮೇಲಿಟ್ಟ. ನೀರು ಕುದಿಯುತ್ತಿದ್ದಾಗ, ಒಂದರಲ್ಲಿ ಆಲೂಗಡ್ಡೆ, ಎರಡನೆ ಪಾತ್ರೆಯಲ್ಲಿ  ಮೊಟ್ಟೆ ಹಾಗೂ ಮೂರನೆ ಪಾತ್ರೆಯಲ್ಲಿ ಕಾಫಿಪುಡಿಯನ್ನು  ಹಾಕಿದ. ಅವೆಲ್ಲ ಕುದಿಯುತ್ತಿರುವಾಗ ಮಗಳೊಂದಿಗೆ ಒಂದೂ ಮಾತನ್ನು ಆಡದೆ ಸುಮ್ಮನೆ ಕುಳಿತ.  ಇಪ್ಪತ್ತು ನಿಮಿಷ ಕಳೆದ ನಂತರ ಎಲ್ಲ ಪಾತ್ರೆಗಳನ್ನು ಓಲೆಯ ಮೇಲಿಂದ ತೆಗದು ಕೆಳಗಿಟ್ಟ. ಆಲೂಗಡ್ಡೆಯನ್ನು ತೆಗೆದು ಒಂದು  ತಟ್ಟೆಯಲ್ಲಿ ಇಟ್ಟ. ಮೊಟ್ಟೆಯನ್ನು ಇನ್ನೊಂದು ತಟ್ಟೆಗೆ  , ಕಾಫೀಪುಡಿ  ಹಾಕಿದ ನೀರನ್ನು ಒಂದು ಲೋಟಕ್ಕೆ ರವಾನಿಸಿದ. 

ಮಗಳ ಕಡೆ ತಿರುಗಿ ಈಗ ನಿನ್ನ ಎದುರಿಗೆ ಏನು ಕಾಣಿಸುತ್ತಿವೆ' ಕೇಳಿದ . ಆಲೂಗಡ್ಡೆ, ಮೊಟ್ಟೆ, ಕಾಫಿ ಅಂತ ಮಗಳು ತಟ್ಟಂತ  ಉತ್ತರಿಸಿದಳು. 

ಊಹೂಂ ಸರಿಯಾಗಿ ನೋಡು , ಆಲೂಗಡ್ಡೆಯನ್ನು ಮುಟ್ಟಿ ನೋಡು, ಈಗ ಹೇಳು. ಹೇಳಿದಂತೆ ಮಾಡಿದಳು. ಆಲೂಗಡ್ಡೆ ಮುಟ್ಟಲಿಕ್ಕೆ ಮೆತ್ತಗಿತ್ತು. 

ಈಗ ಮೊಟ್ಟೆಯನ್ನು ಸುಲಿ. ಸುಲಿದಾಗ ಸಿಪ್ಪೆಯಿಂದ  ಚಂದನೆಯ ಬೇಯಿಸಿದ ಮೊಟ್ಟೆ.... 

ಕಾಫಿಯನ್ನು ಕುಡಿದು ನೋಡು. ಅದರ ಪರಿಮಳ ಅವಳಲ್ಲಿ ಮಂದಹಾಸ ಮೂಡಿಸಿತು. 

ಹೌದು ಅಪ್ಪ. ಏನಿದರ ಅರ್ಥ??

ಆಗ ಅಪ್ಪ ಉತ್ತರಿಸಿದ: ನೋಡು ಮಗಳೆ ಮೂರೂ ಸಾಮಗ್ರಿಯನ್ನು ಒಂದೆ ಕಷ್ಟಕ್ಕೆ  ಗುರಿಪಡಿಸಿದೆ ಅಂದ್ರೆ  ಬಿಸಿ ನೀರಿಗೆ ಹಾಕಿದೆ. ಆಲೂಗಡ್ಡೆ ಗಟ್ಟಿಯಿತ್ತು, ಬಿಸಿ ನೀರಿನಲ್ಲಿ ಹೇಗೆ ಮೆತ್ತಗೆ  ಬೆಂದಿದೆ ನೋಡು. ಅದೇ ಮೊಟ್ಟೆ ಒಳಹೋಗುವಾಗ ದ್ರಾವಣದ ರೂಪ, ಬೇಯಿಸಿದ ಮೇಲೆ?? ಆದರೆ ಕಾಫಿ ಬೀಜ ಮಾತ್ರ ಅನನ್ಯ. ಬಿಸಿ ನೀರನ್ನೆ ಪರಿಮಳಯುಕ್ತವಾಗಿ ಬದಲಾಯಿಸಲಿಲ್ಲವೇ? 
ಈಗ ಹೇಳು ಇದರಲ್ಲಿ ನೀನೇನಾಗಲು ಬಯಸುವೆ? ಕಷ್ಟ ಬಾಗಿಲು ತಟ್ಟಿದಾಗ ನೀನು ಹೇಗೆ ನಿಭಾಯಿಸುವೆ? ನೀನು ಆಲೂಗಡ್ಡೆ, ಮೊಟ್ಟೆ ಅಥವಾ ಕಾಫಿ ಬೀಜನಾ  ??
.ಜೀವನದಲ್ಲಿ ಹಲವಾರು ಸಮಸ್ಯೆಗಳಿರುತ್ತವೆ. ಇದರಲ್ಲಿ ಮುಖ್ಯ  ಏನೆಂದರೆ ನೀನೂ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತೀಯಾ ಮತ್ತು ಆ  ಪರಿಸ್ಥಿತಿ ಯಲ್ಲಿ  ಏನು ಮಾಡುತ್ತೀಯಾ  ಅಂತಾ? ಜೀವನ ಅಂದ್ರೆ ಕಲಿಕೆ,ಹೊಂದಾಣಿಕೆ , ಮತ್ತು ದು:ಖ ಗಳನ್ನು ಸಮಸ್ಯೆ ಗಳನ್ನು  ಸಕಾರಾತ್ಮಕವಾಗಿ ಸಾರ್ಥಕವಾಗಿ  ಬದಲಿಸಿಕೊಳ್ಳುವುದು

ಇದು ವಾಟ್ಸ್ಯಾಪ್ , ಮೇಲ್ ಗಳಲ್ಲಿ ಪದೇ ಪದೇ ಬರುತ್ತಿಯಾ ಒಂದು ವಿಷಯ. ಯಾಕೋ ಟ್ರಾನ್ಸ್ಲೇಟ್    ಮಾಡ್ಬೇಕು ಅನ್ನಿಸ್ತು 
:-) 

March 11, 2016

ಟೊಮೇಟೊ ಚಟ್ನಿ / ಗೊಜ್ಜು

ಟಿಂಬಕ್ಟು ಕಲೆಕ್ಟಿವ್ಸ್ ಅಂತೊಂದು ಏನ್ ಜಿ ಓ ಇದೆ. ಅಲ್ಲಿ ತೋರಿಸಿದ ವಿಡಿಯೋ ನಲ್ಲಿತ್ತು ಈ ಚಟ್ನಿ ಅಥವಾ ಗೊಜ್ಜು ಮಾಡುವ ಬಗೆ 
ಬೇಕಾಗುವ ಸಾಮಾನು : ಮೂರು ಹದ ಗಾತ್ರದ ಟೊಮೇಟೋ , 4-5 ಅಥವಾ ಎಷ್ಟು ಖಾರ ಬೇಕೋ ಅಷ್ಟು ಹಸಿಮೆಣಸಿನಕಾಯಿ. ಜೀರಿಗೆ, ಬೆಳ್ಳುಳ್ಳಿ , ಸ್ವಲ್ಪ -ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ. 



ಅವರು ಟೊಮೆಟೋ ಮತ್ತು ಹಸಿಮೆಣಸಿನ ಕಾಯಿಗಳನ್ನು ಕೆಂಡದಲ್ಲಿ ಸುಟ್ಟಿಟ್ಟುಕೊಂಡಿದ್ದರು. ನಾನು ಹೀಗೆ, ನನ್ನ ಬಳಿಯಿರುವ ಫುಲ್ಕಾ  ಬೇಯಿಸುವ ಗ್ರಿಲ್ ಮೇಲೆ ಮಾಡಿದೆ. 



ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಕಂದು ಬಣ್ಣಕ್ಕೆ ಬಂದೊಡನೆ ಅದನ್ನು ಗ್ಯಾಸ್ ಮೇಲಿಂದ ಇಳಿಸಿ, ಪ್ಲೇಟ್ ಮೇಲಿಟ್ಟು ಅವನ್ನು ದೊಡ್ಡ ಪಾತ್ರೆಯೊಂದರಿಂದ ಮುಚ್ಚಿಡಿ. ಟೊಮೇಟೊ ಇದರಿಂದ ಇನ್ನಷ್ಟು ಬೇಯುತ್ತೆ. ತಣ್ಣಗಾದ ಮೇಲೆ ಟೊಮೇಟೊ ಸಿಪ್ಪೆ ತೆಗೆದು , ಹಸಿಮೆಣಸಿನಕಾಯಿಯೊಂದಿಗೆ ಮ್ಯಾಶ್ ಮಾಡಿದಿ. 
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ . ಇದಕ್ಕೆ ಜೀರಿಗೆ ಒಗ್ಗರಣೆಗೆ ಹಾಕಿ. ಜಜ್ಜಿದ ಬೆಳ್ಳುಳ್ಳಿ ಹಾಕಿ , ಕೊನೆಗೆ ಮ್ಯಾಶ್ ಮಾಡಿದ ಮಿಕ್ಷಚರ್ ಬೆರೆಸಿ. ಉಪ್ಪು , ಚಿಟಿಕೆ ಸಕ್ಕರೆ ಬೆರೆಸಿ. ಕೊನೆಗೆ ಹಸಿ ಇರುಳ್ಳಿ(ಬೇಕಿದ್ದಲ್ಲಿ ಇದನ್ನೂ ಲೈಟ್ ಆಗಿ ಫ್ರೈ ಮಾಡಿಕೊಳ್ಳಬಹುದು)  ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ. 
ರಾಗಿ ರೊಟ್ಟಿ ಅಥವಾ ಪರಾಟಾ  /ಫುಲ್ಕಾ ಜತೆ ರುಚಿಕರವಾದ ಗೊಜ್ಜು /ಚಟ್ನಿ ರೆಡಿ. 

:-)