September 23, 2015

ಎಂಥಾ ಸಾವು

ಅವರು ತುಂಬಾ ಜನಪ್ರಿಯ ವೈದ್ಯ. ಅನಾಥರು. ಕೆಲವರ ಮಧ್ಯಸ್ಥಿಕೆಯಿಂದ ಮದುವೆಯೇನೋ ಆಯ್ತು. ಹಲವು ವರ್ಷಗಳಾದರೂ ಮಕ್ಕಳಾಗಲಿಲ್ಲದ ಬೇಸರ, ಒಂಟಿತನ, ಗಂಡ ತಮ್ಮ ಡಾಕ್ಟರಿಕೆ, ಓದು ಇದರಲ್ಲೆ ಕಳೆದುಹೋದುದರಿಂದ ಖಿನ್ನತೆಯಿಂದ ನರಳಿ ಅವರ ಹೆಂಡತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಒಳ್ಳೆಯ ಕೈಗುಣ ಉಳ್ಳ ಡಾಕ್ಟರ್ ಅಂತ ಅವರನ್ನು ಪರ ಊರು ದೂರದ ಊರಿನಿಂದ ಹುಡುಕಿಕೊಂಡು ಬರುವ ರೋಗಿಗಳು ಹಲವಾರು. ಬಡವರಿಂದ ದುಡ್ಡು ಪಡೆದುಕೊಳ್ಳುತ್ತಿರಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಕ್ಲಿಷ್ಟಕರವಾದ ಸರ್ಜರಿಗಳು ಇದ್ದಾಗ ಇವರಿಗೇ ಕರೆ ಹೋಗುತ್ತಿತ್ತು.

ಪತ್ನಿಯ ಸಾವಿನ ನಂತರ ಊಟ ಮಾಡಿದರ ಮಾಡಿದರು, ಬಟ್ಟೆ ಬದಲಾಯಿಸಿದರೆ ಬದಲಾಯಿಸಿದರು, ಯಾವುದರ ಪರಿವೆಯೂ ಇಲ್ಲದೆ ತಮ್ಮ ಸೇವೆಯನ್ನು ಮಾತ್ರ ನಿಷ್ಠೆಯಿಂದ ನೆರವೇರಿಸಿದವರು. 

ಅವರು ತೀರಿಕೊಂಡು ಮೂರು ದಿನದ ನಂತರ ಅವರ ಸಾವಿನ ಬಗ್ಗೆ ಗೊತ್ತಾಯಿತು. ಅದೂ ವಾರಕ್ಕೊಮ್ಮೆ ಬರುವ ಮಾಲಿಯಿಂದ. ಬಾಗಿಲು ಬಡಿದರೂ ತೆರೆಯಲಿಲ್ಲವೆಂದು, ಸ್ವಲ್ಪವೇ ತೆರೆದಿರುವ ಕಿಟಕಿಯಿಂದ ಒಳ ಇಣುಕಿದಾಗ ಕೊಳೆತ ವಾಸನೆಗೆ ಎಚ್ಚೆತ್ತು ಅಕ್ಕ ಪಕ್ಕದವರನ್ನು ಕರೆದು, ಬಾಗಿಲು ಮುರಿದು ಒಳಗೆ ಹೋದಾಗ ಕಂಡಿದ್ದು, ಅವರು ಓದುತ್ತಾ ಹಾಗೇ ಟೇಬಲ್ ಮೇಲೆ ಒರಗಿ ಹಾಗೇ ಸಾವಿಗೀಡಾಗಿದ್ದರು.....ನೋವಿಲ್ಲದ/ಕಷ್ಟಕರವಲ್ಲದ ಸಾವು ಅವರದ್ದಾಗಿರಲಿ ಎಂದು ಮನಸ್ಸು ಒಂದು ಕ್ಷಣ ಅವರಿಗಾಗಿ ಹಾರೈಸಿತ್ತು...ಅಂತ್ಯಕ್ರಿಯೆಗೆ ಬಂದ ಜನರ ಹಿಂಡು ಹಿಂಡು.....ಅವರ ಮನೆಯನ್ನು ಈಗ ಆಸ್ಪತ್ರೆಯಾಗಿ ಬದಲಾಯಿಸಿದ್ದಾರೆ.

:-(

No comments:

Post a Comment