June 10, 2015

ಮಿತ್ರ ರಂಜಿತ್ ಸತ್ಯರಾಜ್ - ಒಂದು ಸುಂದರ ನೆನಪು

ಏಪ್ರಿಲ್ 8, 2015, ರಾತ್ರಿ ಸಿನಿಮಾ ನೋಡಿ ಮಲಗುವಾಗ 1 ಗಂಟೆ. ಎಲ್ಲರೂ ಮಲಗಿದ್ದರು. ನಾನು ಮಲಗುವ ಮುನ್ನ ಸೆಲ್ ಫೋನ್ ಚೆಕ್ ಮಾಡಿದಾಗ ಮೈಲ್ ಇವೆಯೆಂಬ ಐಕನ್ ಕಾಣ್ತಾ ಇತ್ತು. ಬೆಳಿಗ್ಗೆ ಚೆಕ್ ಮಾಡಿದರಾಯಿತು ಅಂತ ಸುಮ್ಮನಿದ್ದೆ.  ನಿದ್ದೆ ಬರುವ ತನಕ ವರ್ಡಾಮೆಂಟ್ ಆದ್ರೂ ಆಡುವ ಅಂತ ಆಡ್ತಾ ಇದ್ದೆ. ಬೋರ್ ಆಯಿತು. ಸರಿ ಮೈಲ್ ಚೆಕ್ ಮಾಡುವ ಅಂತ ಜಿ ಮೈಲ್ ಗೆ ಹೋದೆ. ಅದರಲ್ಲಿ ಮೊದಲಿನ ಮೈಲ್ ಮಿತ್ರ ರಂಜಿತ್ ಅವರದ್ದು. ಏನಾದರೂ ಜೋಕ್ ಅಥವ ಕೀಟಲೆ ಮೆಸೆಜ್ ಇರುತ್ತೆ ಅಂತ ಕ್ಲಿಕ್ ಮಾಡಿದ್ರೆ. ಅವರ ಮೈಲ್ ಐ ಡಿ ಯಿಂದ ಅವರು ದೈವಾಧೀನ ರಾಗಿರುವ ವಿಷಯ. ಸರ್ರ್ ಅಂತ ಸಿಟ್ಟು ಬಂತು. ತಮಾಷೆಗೂ ಒಂದು ಲಿಮಿಟ್ ಇರುತ್ತೆ ಅಂತ.  ಬೆಳಿಗ್ಗೆ ಫೋನ್ ಮಾಡಿ ಅವರನ್ನು ತರಾಟೆಗೆ ತಗೊಳುವವಳಿದ್ದೆ. ಪುನ: ಮೈಲ್ ಚೆಕ್ ಮಾಡಿದಾಗ ರೆಸ್ಟ್ ಇನ್ ಪೀಸ್ ರಂಜಿತ್ ಅಂತೆಲ್ಲ, ಅವರ ಜತೆ ಒಡನಾಡಿದ ಮಿತ್ರರ ಗಳ ನೆನಪುಗಳು ಪೂರ್ತಿ 122 ಮೈಲ್ ಫೊರ್ವಡ್ ಗಳು. ಕಿರಿ ಕಿರಿ ಅನ್ನಿಸ್ತು. ಆ ಅಪರಾತ್ರಿಯಲ್ಲಿ ಯಾರನ್ನೂ ಎಬ್ಬಿಸುವುದು ಬೇಡ ಅಂತ ಸುಮ್ಮನಾದೆ. ಹಾಗೂ ಹೀಗೂ ಬೆಳಗಾಯಿತು. ಶ್ರೀಕಾಂತ್ ಏಳುವುದನ್ನೇ ಕಾಯುತ್ತ ಇದ್ದೆ. ರಂಜಿತ್ ಹೆಂಡತಿ ಸೂಸಿ ನನ್ನ ಆತ್ಮೀಯ ಗೆಳತಿ. ಅವರಿಗೆ ಫೋನ್ ಹಚ್ಚುವ ಅಂದ್ರೆ ಯಾಕೋ ಧೈರ್ಯವೇ ಬರಲಿಲ್ಲ. ಅಕ್ಕ ಎದ್ದ ಕೂಡಲೆ ಅವಳಿಗೆ ಮೈಲ್ ಓದಲು ಕೊಟ್ಟು, ನಿನಗೆ ಏನನ್ನಿಸುತ್ತೆ ಅಂದೆ. ಅವಳು "ಅಂಕಲ್ ತಮಾಷೆ ಮಾಡ್ತಿದ್ದಾರೆ. ಆದರೆ ನೀನ್ಯಾಕೆ ಸೂಸಿ ಆಂಟಿಗೆ ಫೋನ್ ಮಾಡಬಾರದು" ಅಂದ್ಲು.

ಶ್ರೀಕಾಂತ ಎದ್ದ ಕೂಡಲೆ ಅವರಿಗೆ ಮೊಬೈಲ್ ಕೊಟ್ಟು ಸೂಸಿ ಗೆ ಫೋನ್ ಮಾಡಿ. ವಿಷಯ ಹೀಗೆ ಹೀಗೆ ಅಂದೆ. ಅವರು ಸೂಸಿ ಗೆ ಫೋನ್ ಮಾದುವುದು ಬಿಟ್ಟು ರಂಜಿತ್ ನಂಬರ್ ಗೆ ಫೋನ್ ಮಾಡಿದ್ರು. ಕಾಲ್ ರಿಸೀವ್ ಮಾಡಿದ್ದು ಸೂಸಿ. ಶ್ರೀಕಾಂತ್ ಗೆ ಫೋನ್ ಯಾವಾಗಲೂ ಸ್ಪೀಕರ್ ಫೋನ್ ನಲ್ಲಿ ಹಾಕೋದು ಅಭ್ಯಾಸ. ಅಲ್ಲಿಂದ ಕೇಳಿಸ್ತು "ಶ್ರೀಕಾಂದ್ ರಂಜಿತ್ ಪಾಸ್ಡ್ ಎವೇ ಯೆಸ್ಟರ್ಡೆ ಇವನಿಂಗ್ ಎರೌಂಡ್ ಫೈವ್ ಒ ಕ್ಲೋಕ್’ ವಿ ಆರ್ ಇನ್ ಬೆಂಗಳೂರ್ ನೌ’ ಅಂತ. ರಾತ್ರಿ ಇಡಿ ಎಂಬುಲೆನ್ಸ್ ನಲ್ಲಿ ಟ್ರವೆಲ್ ಮಾಡಿ ರಂಜಿತ್ ರ ಶರೀರದೊಂದಿಗೆ ಬೆಂಗಳೂರಿಗೆ ಬಂದಿದ್ದರು. ಸರ್ವಿಸ್ ಎಷ್ಟು ಗಂಟೆಗೆ- ಎಲ್ಲಿ ಅಂತ ಆಮೇಲೆ ತಿಳಿಸ್ತೇನೆ ಅಂದರು. ಸ್ವಲ್ಪ ಹೊತ್ತು ಬಿಟ್ಟು ಸೂಸಿ ನನಗೆ ಫೋನ್ ಮಾಡಿದರು. ’ದ್ಯಾಟ್ ನೊಟಿ (naughty) ಫೆಲ್ಲೊ ಲೆಫ್ಟ್ ಅಸ್ ಮಾಲದಿ’ ಅಂದ್ರು. ತುಂಬಾ ಕೂಲ್ ಆಗಿದ್ದರು. ನನ್ನ ಎದೆ ಮಾತ್ರ ಡವ ಡವ ಎನ್ನುತ್ತಿತ್ತು. ಹೌ ಆರ್ ಯು ಸೂಸಿ ಅಂದ್ರೆ ಐ ಯಾಮ್ ಫೈನ್. ಇಟ್ ಹ್ಯಾಡ್ ಟು ಹ್ಯಾಪನ್, ಹಿಸ್ ಹಾರ್ಟ್ ವಾಸ್ ವೀಕ್ ಅಂದ್ರು

ಹೌದು ಐದು ವರ್ಷದ ಹಿಂದೆ ರಂಜಿತ್ ಗೆ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ತುರ್ತು ಹಾರ್ಟ್ Trasnplant ಮಾಡಿಸಬೇಕಿತ್ತು. ಇಲ್ಲದಿದ್ದರೆ ಆರೇ ತಿಂಗಳು ಅವರ ಜೀವಿತಾವಧಿ ಅಂತ ಡಾಕ್ಟರ್ ಶರಾ ಬರೆದಿದ್ದರು. ಛೆ ನನಗೆ Transplant ಬೇಡ ಏನೂ ಬೇಡ ಇದ್ದಷ್ಟು ಸಮಯ ಚೆನ್ನಾಗಿಯೇ ಇದ್ದು ಸಾಯುತ್ತೇನೆ ಅಂದಿದ್ದವರು, ವೈದ್ಯಕೀಯ ಜಗತ್ತು ಬೆರಗುಗೊಳ್ಳುವಂತೆ ಇನ್ನೈದು ವರ್ಷ ಕಾಲ ಕಳೆದದ್ದು ಮಾತ್ರವಲ್ಲ ಈ ನಡುವೆ ಒಬ್ಬರೆ ಕ್ಯಾಲಿಫೋರ್ನಿಯ ಗೆ ಅವರ ರೇಕೀ ಗುರುವನ್ನು ಕಾಣಲು ಹೋಗಿ ಮೂರು ತಿಂಗಳು ಅಲ್ಲಿದ್ದು ಬಂದಿದ್ದರು.

ನಮ್ಮ ಮನೆ ಗೃಹಪ್ರವೇಶ ಸಮಾರಂಭಕ್ಕೆ ಅವರು ಇಲ್ಲಿರಲಿಲ್ಲ. ಅದರ ಮರು ತಿಂಗಳು ಬಂದಿದ್ದರು. ಅವರ ಡಿವೈನಿಂಗ್ ರಾಡ್ ಹಿಡಿದುಕೊಂಡು. ’ಮಾಲ್ತಿ ಯುವರ್ ಹೌಸ್ ಹ್ಯಾಸ್ ಪೊಸಿಟಿವ್ ವೈಬ್ಸ್’ ಅಂದಿದ್ದರು, ನನಗೂ ಖುಶಿಯಾಗಿತ್ತು. ಖಾದಿ ಧೋತಿ, ಹಾಫ್ ಕುರ್ತಾ, ಕಿವಿಗಳಿಗೆ ಚೆಂದದ ಕೆಂಪು ಕಲ್ಲಿನ ಓಲೆ, ಚೆಂದದ ಗಟ್ಟಿ ನಗು (ಎಂಥವರ ಮುಖದಲ್ಲೂ ಅವರ ನಗೆ ಪ್ರತಿಬಿಂಬಿಸುತಿತ್ತು), ತುಂಟತನದಿಂದ ತುಳುಕುವ ಕಣ್ಣುಗಳು ಅವರ ಹಾಸ್ಯ ಪ್ರಜ್ಝೆ, ಅವರ ಅಗಾಧ ಜ್ಝಾನ ಇವೆಲ್ಲವೂ ಅಚ್ಚರಿ ಮೂಡಿಸುವಂತಿರುವ ಅವರ ವ್ಯಕ್ತಿತ್ವ.
ಸಂಜೆ ಸೈಂಟ್ ಜಾನ್ ಚರ್ಚ್ ನಲ್ಲಿ ಅವರ ಅಂತಿಮ ದರ್ಶನಕ್ಕೆ ಅನುವು ಮಾಡಲಾಗಿತ್ತು. ಪ್ರೇಯರ್ ಹಿಮ್ನ್, ಆರ್ಗನ್ ಮ್ಯೂಸಿಕ್ ನಡುವೆ ಒಂದು ಸುಂದರವಾದ ಸರ್ವಿಸ್. ಅವರನ್ನು ಹತ್ತಿರದಿಂದ ನೋಡಿದ, ಅವರ ಕುಟುಂಬದವರ, ಸಹೋದ್ಯೋಗಿಗಳ ಮನದುಂಬುವ ಮಾತುಗಳು... ಕಾಫಿನ್ ನ ಮುಚ್ಚಳ ತೆಗೆದಿತ್ತು. ಹತ್ತಿರ ಹೋಗಿ ನೋಡಿದರೆ. ಅದೇ ನಗು ಮುಖ. ಮುಟ್ಟಿದರೆ ಎಚ್ಚ ರವಾಗಬಹುದೇನೋ ಎಂಬಂತಹ ಮುಖಚರ್ಯೆ. ನಾನು ಮುಟ್ಟಿ ನೋಡಿದೆ. ಸೂಸಿ ಬಳಿ ಬಂದಾಗ ಅವರು ಕೂಲ್ ಆಗೇ ಇದ್ದರು. ಅವರನ್ನು ತಬ್ಬಿ ಅತ್ತಿದ್ದು ನಾನು ಮತ್ತು ನಿಹಾ. ರಂಜಿತ್ ರ 91 ವಯಸ್ಸಿನ ಅಮ್ಮನ ಅಳು ನೋಡಲಾಗಲಿಲ್ಲ. ಅಲ್ಲಿ ಸೇರಿದ್ದ ಹಲವಾರು ಜನ ಬೈಬಲ್ ಓದುತ್ತ ಅಳುತ್ತಿದ್ದರು. ಮಧ್ಯಾಹ್ನ ನಾಲ್ಕರ ಸಮಯ , ಅದೂ ಗಡಿಬಿಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸೇರಿದ್ದ ಜನರು ಹಲವರು. ಅವರನ್ನು ನೋಡಿ ದಂಗು ಮಾತ್ರವಲ್ಲ ಸ್ವಲ್ಪ ಅಸೂಯೇ ಕೂಡ. ನಾನಲ್ಲದೇ ಇಷ್ಟೊಂದು ಜನ ಮಿತ್ರರಾ ಅವರಿಗೆ ಅಂತ.

ಇಲ್ಲಿದೆ ರಂಜಿತ್ ಬಗ್ಗೆ ಒಂದು ಸಣ್ಣ ವಿಡಿಯೋ ತುಣುಕು. ಅವರು ಜೀವನ ನಡೆಸಿದ ಬಗ್ಗೆ ಒಂದು ಪುಟ್ಟ ಝಲಕ್. ಅದರ ಕೆಳಗಡೆ ಇವತ್ತು ಡೆಕ್ಕನ್ ಹೆರಾಲ್ಡ್ ನಲ್ಲಿ ಅವರ ಬಗೆಗಿನ ಪುಟ್ಟ ಬರಹ. ರಂಜಿತ್ ನಮ್ಮೊಂದಿಗಿಲ್ಲ ಅನ್ನಲಾಗುವುದೇ ಇಲ್ಲ. ಅವರ ನೆನಪು ಅವರ ಜೋಕ್ ಗಳು ಯಾವತ್ತೂ ಮಂದಹಾಸ ಮೂಡಿಸುತ್ತದೆ. ಅವರು ದೈವಾಧೀನ ರಾಗುವ ನಾಲ್ಕು ದಿನದ ಹಿಂದೆ ಒಂದು ರಾತ್ರಿ ಮೆಸೆಜ್ ಬಂದಿತ್ತು. ’ವ್ಹೆನ್ ಆರ್ ಯು ವಿಸಿಟಂಗ್ ಅಸ್ ಮಾಲ್ತಿ’ ಅಂತ. ಐ ವಿಲ್ ಬಿ ದೇರ್ ಡ್ಯೂರಿಂಗ್ ದ ಮನ್ಸೂನ್ಸ್. ಮೆ ಐ ಬ್ರಿಂಗ್ ಅ ಫ್ರೆಂಡ್ ವಿದ್ ಮಿ’ ಅಂತ ಕೇಳಿದ್ರೆ..you and any friend of yours is always welcome' ಅಂದಿದ್ರು. ರೂಮಿ quotes ತುಂಬಾ ಇಷ್ಟ ಪಡುತ್ತಿದ್ದರು ಮತ್ತು ನಮ್ಮೆಲ್ಲರ ಜತೆ ಶೇರ್ ಮಾಡುತ್ತಿದ್ದರು. ಇ ಮೈಲ್ , ಎಸ್ ಎಮ್ ಎಸ್ ಗಳಿಗೆ ’ಮೂರ್ಖ’ ಅಂತ ಸೈನ್ ಆಫ್ ಮಾಡುತ್ತಿದ್ದರು.
ಹತ್ತನೆ ದಿನ ಪುನ: ಒಂದು ಸರ್ವಿಸ್ ಇಟ್ಟುಕೊಂಡಿದ್ದರು ಚರ್ಚ್ ನ ಹಾಲ್ ನಲ್ಲಿ . ಅವರ ನೆನಪುಗಳನ್ನು ಶೇರ್ ಮಾಡಿಕೊಂಡು ಎಲ್ಲರೂ ನಕ್ಕಿದ್ದೆ. ಅವರು ಈಗ ದೇವರನ್ನು ಎಂಟರ್ ಟೈನ್ ಮಾಡುತ್ತಿದ್ದಾರೆ ಅಂತ ಒಬ್ಬರು ಹೇಳಿದರು. :-) ದೇಶ ವಿದೇಶದಿಂದ, ಕೇವಲ್ ಮೈಲ್ ಸಂಪರ್ಕ್ ಮಾತ್ರ ಇದ್ದವರು ಕೂಡ ಬಂದು ಭಾಗವಹಿಸಿದ್ದು ಅತ್ಯಂತ ಸುಂದರ ಕ್ಷಣ. ಗೆಳತಿ ಸೂಸಿ ಅವರ ಬಗ್ಗೆ ಬರೆದ ಒಂದು ಚೆಂದದ ಪದ್ಯ  ಓದಿದರು.


ಮೇಲಿನ ಲಿಂಕ್ ನಲ್ಲಿ ನಂದೊಂದು ಪುಟ್ಟ ಬರಹ. ಅದಾದ ಮೇಲೆ ಆ ವಿಡಿಯೋ. ಬರಹ ಓದದಿದ್ದರೆ ಅಡ್ದಿಯಿಲ್ಲ ಆದರೆ ವಿಡಿಯೋ ತುಣುಕನ್ನು ಖಂಡಿತ ನೋಡಿ


No comments:

Post a Comment