July 28, 2013

ಇಂತಪ್ಪ ಒಬ್ಬ ಕಂಡಕ್ಟರಪ್ಪ- ಮತ್ತು ಒಂದು ಲಹರಿ

ಬಸ್ಸ್ ನಲ್ಲಿ ಹೋಗುವಾಗ ನನ್ನ ಬಳಿ ಯಾವತ್ತೂ ಪುಸ್ತಕ ಇರುತ್ತದೆಂದು ಹೇಳಿದ್ದೇನಷ್ಟೆ (ಮುಂಚಿನ ಹಲವಾರು ಪೋಸ್ಟ್ ಗಳಲ್ಲಿ). ಯಾರೊಂದಿಗೂ ಮಾತು ಬೇಡವಾದಾಗ ನಾನು ಸಹಜವಾಗಿ ಪುಸ್ತಕದ ಮೊರೆ ಹೋಗುತ್ತೇನೆ. ಆದರೆ ಈ 'ಕಂಡಕ್ಟರ್' ಬಸ್ ನಲ್ಲಿದ್ದರೆ ನನ್ನ ಪುಸ್ತಕ ನೆಪಮಾತ್ರಕ್ಕೆ ತೆರೆದಿರುತ್ತದೆ.
ನಮ್ಮ ಬಳಿ ಬಂದು "ಪಾಸ್ ಆ ಕಾಸ್ ಆ"? ಪಾಸ್ ಇದ್ರೆ ಪಾಸ್ ತೋರಿಸಿ ಇಲ್ಲದಿದ್ದರೆ ಕಾಸ್ ತೋರಿಸಿ ಅಂತಾನೆ
ಮೊಬೈಲ್ ನಲ್ಲಿ ಮಾತಾನಾಡುವುದರಲ್ಲಿ ಯಾರಾದರೂ ತಲ್ಲೀನರಾಗಿದ್ದರೆ " ಎಲೈ ಮೊಬೈಲ್ ಸುಂದರಿ, ಮೊದಲಿಗೆ ಕಾಸ್ ಆ ಪಾಸ್ ಆ ಹೇಳಿ ಆಮೇಲೆ ನಿನ್ನ ಸಂಭಾಷಣೆಯನ್ನು ಮುಂದುವರೆಸು"
ಅಥವಾ:
ದೊಡ್ಡ ಬ್ಯಾಕ್ ಪ್ಯಾಕ್ ಇದ್ದ ಹುಡುಗಿಯರಿದ್ದರೆ "ಅಮ್ಮಾ ವಿದ್ಯಾಲಕ್ಷ್ಮಿ ಪಾಟೀ ಚೀಲ ಸ್ವಲ್ಪ ಆ ಕಡೆ ಇಟ್ಟುಕೋ, ಬರೋ ಹೋಗೋರಿಗೆ ತೊಂದರೆಯಾಗುತ್ತೆ" ಅಂತಲೋ
ಸಡನ್ ಆಗಿ ಅನಂತಾಪದ್ಮನಾಭನ ಶ್ಲೋಕ ಉಚ್ಚರಿಸುತ್ತಾ ಇದ್ದಾಗ ಮರಿಯಪ್ಪನಪಾಳ್ಯ ಸ್ಟಾಪ್ ಬಂದಾಗ " ಬಾರಪ್ಪ ಅನಂತಪದ್ಮನಾಭಾ ಬೇಗ ಬಾ" ಅಂತ ಪ್ಯಾಸೆಂಜರ್ ಅನ್ನು ಕರೆಯುತ್ತಾನೆ.
ಫೂಟ್ ಬೋರ್ಡ್ ಮೇಲೆ ತೂಗಾಡುವ ಹುಡುಗನಿಗೆ " ಮಗಾ ಏಕಲವ್ಯನ ಬಾಣದ ತರಾ ಸೀದ ಬಸ್ ನ ಹಿಂಭಾಗಕ್ಕೆ ಹೋಯ್ತಾ ಇರಬೇಕು" ಅಥವಾ "ಹೋ ವಿದ್ಯಾವಾಚಸ್ಪತಿ ಚೀಟಿ ಪಡಕೊಂಡ್ಯಾ ತಮ್ಮಾ? ಅಂತಲೋ ಕೇಳ್ತಾ ಮುಂದುವರೆಯುತ್ತಾನೆ. ಹರಿಶ್ಚಂದ್ರ ಘಾಟ್ ಬಂದಾಗ 'ರೀ ಯಾರಿಗ್ರೀ ಅದು ಮೋಕ್ಷ ಸಿಗಬೇಕಿದ್ದು, ಘಾಟ್ ಬಂತು ನೋಡ್ರಿ, ಇಳೀರಿ ರಿ" ಅಂತ ಕೂಗು ಹಾಕ್ತಾನೆ. 
ನವರಂಗ್ ಟಾಕೀಸ್ ನಲ್ಲಿ ಯಾವ ಫಿಲ್ಮ್ ಇರುತ್ತೋ ಅದರ ಮೇಲೆ ಒಂದು ಸಣ್ಣ ಲೆಕ್ಚರ್..ನಾನು ಕೇಳಿಸಿಕೊಂಡಿದ್ದು ಹ್ಯಾರಿ ಪೋಟರ್ (harry potter) ಸಿನಿಮಾ ಬಗ್ಗೆ ಹೀಗಿತ್ತು: "ನವರಂಗ್ ಚಿತ್ರಮಂದಿರದಲ್ಲಿ ಮೊದಲ ಬಾರಿ ಹರೀ ಪಟ್ಟರ್, ಥ್ರೀ ಡಿಯಲ್ಲಿ, ಹೋಗಿ ನೋಡಿ ಹರಿ ಪೋಟ್ ನ ಮಾಯಾಲೋಕದಲ್ಲಿ ಮರೆಯಾಗಿ" ಇನ್ನೊಮ್ಮೆ 'ಈ ಶುಕ್ರವಾರದಿಂದ ತೂಗೂದೀಪ ಅವರ ಮಗ ದರ್ಶನ್ ನಟಿಸಿರುವ ಸಿನಿಮಾ 'ಸಾರಥಿ', ಅದರ ಬಗ್ಗೆ ಹೇಳುವಾಗಲಂತೂ  ಪತ್ನೀ ಮೇಲೆ ಹಲ್ಲೆ ನಡಿಸಿ ಜೈಲ್ ಸೇರಿ ಬಿಡುಗಡೆ ಹೊಂದಿದ್ದು, ಕಂಡಕ್ಟರ್ ಆ ಸಿನಿಮಾ ನೋಡಿದ್ದು , ಅದನ್ನು ಇಷ್ಟಪಟ್ಟಿದ್ದು, ಸಿನಿಮಾದ ಡೈಲೋಗ್ಸು, ಮಾತ್ರವಲ್ಲ ನಿರ್ದೇಶಕರ, ನಿರ್ಮಾಪಕರು, ತಾರಗಣದಲ್ಲಿರುವವರು, ಪದ್ಯ ಬರೆದವರು ..ಹೀಗೆ ಪಟ್ ಪಟಾ ಅಂತ ಅವರ ಹೆಸರುಗಳನ್ನು ಉದುರಿಸ್ತಾರೆ.
ಕೆಲವೊಮ್ಮೆ ಕನ್ನಡ ಇಂಗ್ಲೀಷ್ ಹಿಂದಿಯಲ್ಲೂ ಮಾತನಾಡುವುದಿದೆ
ಚೀಟಿ ಪಾಸ್ ಕೇಳಿ ಪಡೆದುಕೊಳ್ಳಿ,  ಆಸ್ಕ್ ಎಂಡ್ ಟೇಕ್ ಟಿಕೆಟ್, ಟಿಕೆಟ್ ಪೂಚ್ ಕೆ ಲೀಜೀಯೆ' ವಗೈರೆ!!
ಧಡೂತಿ ಹೆಂಗಸಿನ ಕಡೆ ಬಟ್ಟು ಮಾಡಿ: ಹೆಂಗಸರಂದ್ರೆ ಚಿಟ್ಟೆ - ಚಿಟ್ಟೆ ತರ ಇರ್ಬೆಕು. ಇವರು ನೋಡಿ ಚಿಟ್ಟೆನೂ ಅಲ್ಲ ಬಿಟ್ಟೆನೂ ಅಲ್ಲ ಅಂದಾಗ ಮಾತ್ರ ಸ್ವಲ್ಪ ಓವರ್ ಆಯ್ತು ಈಯಪ್ಪಂದು ಅಂತ ಅನ್ನಿಸ್ತು. ಬಹುಶ: ಆ ಹೆಂಗಸಿಗೆ ಕನ್ನಡ ಬರುತ್ತಿರಲಿಲ್ಲವೇನೋ ಅದಕ್ಕೆ ಆತನಿಗೆ ಆ ಧೈರ್ಯ ಅಂದುಕೊಂಡೆ.
ನನ್ನನ್ನೂ ಅಣಕಿಸುತ್ತಾರೆ "ಸೋದರಿ ಎಲ್ಲಿಗೆ ಅಂದ್ರೆ" ನಾನು 'ಒಂದು ಮೆಜಿಸ್ಟಿಕ್'ಅಂದಾಗ ನನ್ನ ತರಹನೇ ಉಚ್ಚಾರ ಮಾಡುತ್ತ : 'ಸೋದರಿಗೊಂದು ಮೆಜೆಸ್ಟಿಕ್' ಅಂತ ಚೀಟಿ ಕೊಡುತ್ತಾನೆ. ಇಳಿಯುವಾಗ ಮೋದಿ ಹಾಸ್ಪಿಟಲ್ ಸ್ಟಾಪ್ ಬಂದಾಗ "ಯಾರ್ರೀ ಕಣ್ಣಿನ ಆಸ್ಪತ್ರೆ ಬಂತು ನೋಡಿ" ಅಂತ ಆವಾಜ್ ಹಾಕ್ತಾರೆ.
ಅವನು ಉದುರಿಸುವ ನನ್ನ ಫೇವರಿಟ್ ಡಯಲೋಗ್ " ಏ ಬುಲ್ ಬುಲ್ ಮಾತಾಡಕಿಲ್ಲ್ವಾ" ಇದು ಇಯರ್ ಫೋನ್ ಹಾಕಿಕೊಂಡಿರುವ ಹುಡುಗಿಯರಿಗೆ ಮೀಸಲು
KBS to KBS ಬಸ್ ಸಂಖ್ಯೆ 96 ಎ ನಲ್ಲಿ ಕಾಣಸಿಗುತ್ತಾರೆ. ಹೆಸರಿನ ಬ್ಯಾಚ್ ಹಾಕಿ ಕೊಳ್ಳುವುದಿಲ್ಲದ್ದರಿಂದ ಅವರ ಹೆಸರು ಗೊತ್ತಿಲ್ಲ.ನೀವು ಈ ರೂಟ್ ನಲ್ಲಿ ಟ್ರಾವೆಲ್ ಮಾಡಿದ್ರೆ ನಿಮಗೆ ಅವರ ಪರಿಚಯ ಇರಬಹುದು.
ನಿಮ್ಮ ಸ್ಟಾಪ್ ಬಂದಿದ್ದೆ ಅರಿವಾಗುವುದಿಲ್ಲ.
ಜಗಳ ಆಡಿ ಮಾತಿಗೆ ಮಾತು ಬೆಳೆಸುವ ಕಂಡಕ್ಟರ್ ಗಿಂತ ಇಂತಹವರು ಲೇಸು

episode -2

ನನ್ನ ಆಫೀಸ್ ಜಯನಗರ ನಾಲ್ಕನೆ ಬಡವಾಣೆಯಲ್ಲಿತ್ತು ಆಗ. ಮಹಾಲಕ್ಷ್ಮೀ ಪುರಂ ನಿಂದ ಮೊದಲು ಮೆಜಿಸ್ಟಿಕ್ ಆಮೇಲೆ ಜಯನಗರ ಬಸ್ ಹಿಡಿಬೇಕಿತ್ತು. ಜಯನಗರಕ್ಕೆ ಹೋಗುವಾಗಿನ ಘಟನೆ. ನನ್ನ ಎದುರಿಗೆ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಬಂದು ಕುಳಿತರು. ಕಂಡಕ್ಟರ್ ಟಿಕೆಟ್ ಅಂತ ಅವಳ ಬಳಿ ಸಾರಿದಾಗ ಆಕೆ 100 ರ ನೋಟ್ ಕೊಟ್ಟಳು. ಎಲ್ಲಿತ್ತೊ ಸಿಟ್ಟು ಕಂಡಕ್ಟರ್ ಬಳಿ. ಸಿಕ್ಕಾಪಟ್ಟೆ ಒದರಾಡಿದ. ಬಸ್ , ನಿಲ್ದಾಣದಿಂದ ಸುಮಾರು ದೂರ ಸಾಗಿತ್ತು. ಬೆಳಿಗ್ಗೆ ಬೆಳಿಗ್ಗೆ ಚಿಲ್ಲರೆ ಕೊಡದೆ ಸತಾಯಿಸ್ತೀರಾ. ನನ್ನ ಬಳಿ ಚಿಲ್ಲರೆ ಇಲ್ಲ ಅಂತೆಲ್ಲ. ಆಕೆ ತನ್ನ ಪರ್ಸ್ ತೆರೆದು ತೋರಿಸಿದಳು ಎಲ್ಲ ನೂರರ ನೋಟ್ ಗಳು. 'ನನ್ನ ಬಳಿ ಕೂಡ ಚಿಲ್ಲರೆ ಇಲ್ಲ' ಅಂತ ಹೇಳಿದಳು. ಏನ್ ಮಾಡಕಾಗಲ್ಲ ಇಳೀರಿ ಮ್ಯಾಡಂ ಅಂದ. ಆಕೆ ಪ್ಲೀಸ್ ಆಫೀಸ್ ಗೆ ಈಗಾಗಲೇ ಲೇಟ್ ಆಗಿದೆ. ಮುಖ್ಯವಾದ ಮೀಟಿಂಗ್ ಇದೆ ಅಂತ ಚೆನ್ನಾಗಿಯೇ ಹೇಳಿದಳು. ಆದರು ಅವನು ಡ್ರೈವರ್ ಗೆ 'ರೀ ನಿಲ್ಲಿಸರಿ. ಬಂದ್ಬಿಡತಾರೆ ಬೆಳಿಗ್ಗೆ ಬೆಳಿಗ್ಗೆ' ಅಂತ. ಡ್ರೈವರ್ ಬಸ್ ನಿಲ್ಲಿಸಿದ. ಆಕೆ ಸುಮ್ಮನೆ ಇಳಿಲಿಕ್ಕೆ ಹೋದರು. ಆದರೆ ನಾನು ಕಂಡಕ್ಟರ್ ಬಳಿ ಬೆರಳಿಗೆ ಹಾಕಿಕೊಂಡ 10 ರ ಸುಮಾರು ನೋಟುಗಳನ್ನು ನೋಡಿದ್ದೆ. ಅರೇ ಅನ್ಸಿ "ಮ್ಯಾಡಂ, ನಾನು ಕೊಡ್ತೇನೆ ಕೂತುಕೊಳ್ಳಿ ಅಂತ 8 ರೂ ಕೊಟ್ಟೆ. 5 ರೂ ನ ನೋಟ ಮತ್ತು ನನ್ನ ಪುಟಣಿ ಬ್ಯಾಗ್ ನಿಂದ ಸ್ಟೈಲ್ ಆಗಿ (ಮನೆಯಲ್ಲಿದ್ದರೆ ಅದಕ್ಕೆ ಟೆಂಟಡೆಂ ಅಂತ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಹೊರಡಿಸ್ತೇನೆ) 1 ರೂ ನ ಮೂರು coin. ಅವನು ಆಕೆಗೆ ಟಿಕೆಟ್ ಕೊಟ್ಟು ನನ್ನ ಬಳಿ 100 ನೋಟ್ ಕೊಟ್ಟು ಚಿಲ್ಲರೆ ಕಾಸು ನನಗೆ ಕೊಡಿ ಅಂತ ಹೇಳಿದ. ನನಗೆ ಬೆಳಿಗ್ಗೆ ಬೆಳಿಗ್ಗೆ ಜಗಳ ಎಲ್ಲ ಆಡೋರನ್ನು ಅದೂ ಏನೂ ಬಲವಾದ ಕಾರಣ ಇಲ್ಲದೆ ಬಾಯಿ ಜೋರು ಮಾಡುವವರನ್ನು ಕಂಡರೆ ಆಗಲ್ಲ. ನಾನು ನನ್ನ ಬ್ಯಾಗ್ ನಿಂದ ಪುಸ್ತಕ ತೆಗೆದು ಕಂಡಕ್ಟರ್ ನ ಮಾತು ಕೇಳಿಸಿಕೊಳ್ಳದವಳ ಹಾಗೆ ಓದಲು ಶುರು ಮಾಡಿದೆ.ೆರಡು ಮೂರು ಸಲ ನನ್ನನ್ನು ಮಾತನಾಡಿಸಿದ್ರೂ ನಾನು ignore ಮಾಡಿದೆ. ಇನ್ನೂ ನನ್ನ ಮುಂದೆನೇ ನಿಂತುಕೊಂಡಿದ್ದ, ಆಗ ನಾನು ಅವನಿಗೆ ಹೇಳಿದೆ 'ಮೊದಲು ಮಾತನಾಡುವ ರೀತಿ ಕಲೀರಿ. ನಾನು ನಿಮಗೆ ನನ್ನ ಬಳಿಯಿರುವ ಕಾಸು ಕೊಡಲ್ಲ' ಅಂತ ಆಮೇಲೆ ಅವನು ಬಸ್ ನ ಹಿಂದಕ್ಕೆ ಹೋದ.
ಇಳಿಯುವಾಗ ಆ ಹೆಂಗಸು ಪುನ: ನನಗೆ ಥ್ಯಾಂಕ್ಸ್ ಅಂದು, ನನ್ನ ಆಫಿಸ್ ಎಲ್ಲಾಗುತ್ತೆ ಅಂತ ಕೇಳಿದಳು. ಹೇಳಿದೆ. ಅರೇ ನನ್ನ ಆಫಿಸ್ ನಿಮ್ಮ ಆಫಿಸ್ ಮೇಲೆನೆ ಬರುತ್ತೆ.
"ಹೌದಾ? ನಾನು ನಿಮ್ಮನ್ನು ನೋಡಲೇ ಇಲ್ಲ"
"ಹೌದು, ನಾನು ಟೂ ವ್ಹೀಲರ್ ನಲ್ಲಿ ಬರೋದು. ಬೇಸ್ ಮೆಂಟ್ ನಲ್ಲಿ ಪಾರ್ಕ್ ಮಾಡಿ ಸೀದಾ ನನ್ನ ಮಹಡಿಗೆ ಲಿಫ್ಟ್ ನಲ್ಲಿ ಹೋಗೋದು"
ಆಕೆಯ ಹೆಸರು ಶೋಭಾ. ನಮ್ಮ ಆಫಿಸ್ ನ ಮೇಲಿರುವ ಹೌಸಿಂಗ್ ಫೈನಾನ್ಸ್ ನಲ್ಲಿ ಕೆಲಸ. ಆ ದಿನ ಅರ್ಧ ದಾರಿಯಲ್ಲಿ ಸ್ಕೂಟರ್ ಹಾಳಾಗಿ ಇಷ್ಟೆಲ್ಲ ಅವಾಂತರ. ನನ್ನ ಹೆಸರು ಹೇಳಿದ ಮೇಲೆ ಆಕೆ 'ಮಾಲತಿ ನನ್ನ ಬಳಿ ಚೆಂಜ್ ಇದ್ದದ್ದು ಮಕ್ಕಳು ಎತ್ತಿಕೊಂಡು ಹೋಗ್ತಾರೆ ಅದಕ್ಕೆ ಯಾವತ್ತೂ ನನ್ನ ಪರ್ಸ್ ನಲ್ಲಿ ಚಿಲ್ಲರೆ ಕಾಸು ಇರಲ್ಲ ಅಂದ್ರು
ಹೀಗೆ ಪರಿಚಯ ಬೇಳಿತು. ಆಕೆ ನನಗೆ ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ ಹೊರಗೆ ಆಹ್ವಾನಿಸುತ್ತಿದ್ದಳು. ಮತ್ತು ಅವಳ ಟಿಫನ್ ನಮ್ಮ ಜತೆ ನಮ್ಮ ಆಫಿಸ್ ನಲ್ಲಿ ತಿಂದು ಶೇರ್ ಮಾಡುತ್ತಿದ್ದಳು.
ನಾನು ಒಂದು ಸಲ ಕೇಳಿದ್ದೆ. ಇಷ್ಟು ಟಿಪ್ ಟಾಪ್ ಆಗಿ ಮ್ಯಾಂಚಿಂಗ್, ಮೇಕ್ ಅಪ್  ಎಲ್ಲ ಮಾಡಕ್ಕೆ ನಿಮಗೆ ಸಮಯ ಸಿಗುತ್ತ ಅಂತ?
"ಹೌದು ರಾತ್ರಿ ಮಲಗುವ ಮುಂಚೆ ನಾನು ಎಲ್ಲ ರೆಡಿ ಮಾಡಿ ಮಲಗುತ್ತೇನೆ. ಮತ್ತೆ ಮನೆಯಲ್ಲಿ ನನಗೆ ಅಡಿಗೆಯವಳು, ಮನೆ ಕೆಲಸಕ್ಕೆಲ್ಲ ಇದ್ದಾರೆ ಅಂತ. ನನಗೇನೂ ದುಡೀ ಬೇಕಂತ ಇಲ್ಲ. ಆದರೆ ನನಗೆ ಮನೆಯಲ್ಲಿ ಸುಮ್ಮನೆ ಕೂರಲಿಕ್ಕೆ ಆಗಲ್ಲ"
ನಾನು ಜಯನಗರದ ಆಫಿಸ್ ನಲ್ಲಿರುವ ತನಕ ನಮ್ಮ ಒಡನಾಟ ಹೀಗೆ ಮುಂದುವರೆದಿತ್ತು. ಅವರ ಆಫಿಸ್ ಸ್ಟಾಫ್ ಬಗ್ಗೆ ಅಲ್ಲಿಗೆ ಬರುವ ಕ್ಲಯಂಟ್ಸ್ ಬಗ್ಗೆ ಎಲ್ಲ ಮಜವಾಗಿ ನಗುತ್ತ ನಗುತ್ತ ಹೇಳುವವಳು. ನಮ್ಮ ಆಫಿಸ್ ಎಲ್ಲ ಈ ಕಡೆ ಶಿಫ್ಟ್ ಆಗುವಾಗ ಅವರು ಕುಟುಂಬದ ಜತೆ ಹೊರದೇಶಕ್ಕೆ ಪ್ರವಾಸ ಹೋಗಿದ್ದಳು. ಬೈ ಹೇಳಲಿಕ್ಕೆ ಆಗಿರಲಿಲ್ಲ. ಇತ್ತೀಚಿಗೆ ತಂಗಿ ಜತೆ ಶಾಪಿಂಗ್ ಹೋದಾಗ ಮಾಲ್ ಒಂದರಲ್ಲಿ ಸಿಕ್ಕಿದಳು ಶೋಭಾ. ಹಾಗೆ ಟಿಪ್ ಟಾಪ್ ಸ್ಮಾರ್ಟ್ ,ಪಟ ಪಟ ಮಾತು. ನನ್ನ ತಂಗಿ ಕೂಡ ಸಕತ್ ಇಂಪ್ರೆಸ್ ಆದ್ಲು. ಅವರು ಅದೇ ಆಫಿಸ್ ನಲ್ಲಿದ್ದಾಳಂತೆ. ಈಗಂತೂ ಸೆಲ್ ಫೋನ್ ಇದೆಯಲ್ಲವಾ? ನಂಬರ್ ವಿನಿಮಯ ಮಾಡಿಕೊಂಡು ಈಗ ನಮ್ಮ ಒಡನಾಟ ಮೊಬೈಲ್ ನಲ್ಲಿ. ಈಗಲೂ ಗಮ್ಮತ್ತು ಮಾತು ಕತೆ...
ಅಂತರಮುಖಿಯಾದ ನನಗೆ ಅವರ ಪರಿಚಯ ಆದದ್ದು ಒಂದು breath of fresh air. ನಾನು ಮಾತಾಡಬೇಕಂತ್ಲೇ ಇಲ್ಲ. ಎಲ್ಲ ಶೋಭಾ ನೆ ಮಾಡ್ತಾಳೆ.ಕೇಳಿಸಿಕೊಳ್ಳುವುದು ಮಾತ್ರ ನನ್ನ ಕೆಲಸ. ಅವಳ ಪರಿಚಯ ಆಗಿದ್ದಕ್ಕೆ ಜಗಳಗಂಟ ಕಂಡಕ್ಟರ್ ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು.
ಅಷ್ಟೆ
:-)


July 21, 2013

ಮಳೆಗಾಲದ ಸಂಜೆಗೆ ಕಟ್ ಲೆಟ್

ಬೆಂಗಳೂರಿನಲ್ಲಿ ಮಳೆ and ಚಳಿ. ವೀಕ್ ಎಂಡ್ ಗೆ ಬಿಸಿ ಬಿಸಿ ಕಟ್ಲೆಟ್ ಮಾಡಿ, ನಮ್ಮ ಹಾಗೆ ಕಂಪ್ಯೂಟರ್ ಮುಂದೆ ಫಿಲ್ಮ್ ನೋಡ್ತಾ ತಿನ್ನಿ
ಬೇಕಾಗುವ ಪದಾರ್ಥ
ನಾಲ್ಕು ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಕ್ಯಾರೆಟ್ ಮತ್ತು ಬಟಾಣಿ

ನೀರುಳ್ಳಿ, ಬೆಳ್ಳುಳ್ಳಿ, ಎರಡು ಬ್ರೆಡ್ ಸ್ಲೈಸ್, ಬ್ರೆಡ್ ಕ್ರಂಬ್ಸ್
ಆಲೂಗಡ್ಡೆಯಸಿಪ್ಪೆ ತೆಗೆದು ಮ್ಯಾಶ್ ಮಾಡಿ ಇದಕ್ಕೆ ಬೇಯಿಸಿದ ಬಟಾಣಿ ಕ್ಯಾರೆಟ್ ಮಿಕ್ಸ್ ಮಾಡಿ. ಎರಡು ಬ್ರೆಡ್ ಸ್ಲೈಸ್ ಅನ್ನು ನೀರಲ್ಲಿ ಅದ್ದಿ ಗಟ್ಟಿಯಾಗಿ ಹಿಂಡಿ ಆಲೂಗಡ್ಡೆ ಮಿಶ್ರಣಕ್ಕೆ ಬೆರೆಸಿ

ಎಣ್ಣೆ ಬಿಸಿ ಮಾಡಿ ಸ್ವಲ್ಪ ಜೀರಿಗೆ, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ+ ಬೆಳ್ಳುಳ್ಳು ಹಾಕಿ ನೀರುಳ್ಳಿ ಕಂದು ಬಣ್ಣ ಬರುವ ತನಕ ಕೈಯಾಡಿಸಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ಮೆಣಸಿನ ಪುಡಿ, ಗರಂ ಮಾಸಲೆ ಪುಡಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ. ತಣ್ಣಗಾದ ಮೇಲೆ ಆಲೂಗಡ್ಡೆ ಮಿಶ್ರಣಕ್ಕೆ ಬೆರೆಸಿ. ರುಚಿಗೆ ಉಪ್ಪು ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿಡಿ.


ಮಿಶ್ರಣದ ಚಿಕ್ಕ ಚಿಕ್ಕ ಉಂಡೆ ಮಾಡಿ ಅದನ್ನು ಚಪ್ಪಟೆ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಮುಳುಗಿಸಿ ಕಾವಲಿ ಮೇಲೆ ಕೆಂಪಾಗುವ crisp ಆಗುವ ತನಕ ಎರಡೂ ಬದಿ ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿ. ಟೊಮ್ಯಾಟೋ ಸಾಸ್ ಜತೆ ಸರ್ವ್ ಮಾಡಿ.


ಟಿಪ್ಸ್: ಬ್ರೆಡ್ ಕ್ರಂಬ್ಸ್ ಹೊರಗಡೆ ಲಭ್ಯ. ಇಲ್ಲದ್ದಿದ್ದಲ್ಲಿ ಮೈಕ್ರೋವೇವ್ ನಲ್ಲಿ ಬ್ರೆಡ್ ಅನ್ನು ಬಿಸಿ ಮಾಡಿ, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಿ. ಮೈಕ್ರೋವೇವ್ ಇಲ್ಲದಿದ್ದರೆ ಕಾವಲಿ ಮೇಲಿಟ್ಟು ಅದನ್ನು ನಿಮ್ಮ ಗ್ಯಾಸ್ ಶೆಗಡಿಯ ಕೆಳಗಿಡಿ. ನಿಮ್ಮ ಅಡಿಗೆಯೆಲ್ಲ ಮುಗಿಯುವ ತನಕ ಅದು ಕಟಕ್ ಆಗಿರುತ್ತದೆ ಆಮೇಲೆ ಮಿಕ್ಸಿಯಲ್ಲಿ ಹಾಕಿ. ಇನ್ನೊಂದು ಆಪ್ಷನ್ ಕಾವಲಿಯ ಮೇಲೆ ಸಣ್ಣ ಉರಿಯಲ್ಲಿಡಿ ಬ್ರೆಡ್ ಗಟ್ಟಿಯಾದೊಡನೆ ತೆಗೆದು ಆರಲು ಬಿಡಿ. ಆಮೇಲೆ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಡಿ.
ಅಥವಾ
ನಾನು ಇವತ್ತು ಬೇಕರಿಯಿಂದ ಟೋಸ್ಟ್ ತಂದು ಅದನ್ನು ಮಿಕ್ಸಿಯಲ್ಲಿ ಹಾಕಿ ಕ್ರಂಬ್ಸ್ ಮಾಡಿಕೊಂಡಿದ್ದೇನೆ
ಆಲೂಗಡ್ಡೆ ಮಿಶ್ರಣವನ್ನು ಫ್ರಿಜ್ ನಲ್ಲಿ ಎರಡು ಮೂರು ದಿನ ಇಡಬಹುದು. ಸಡನ್ ಆಗಿ ಫ್ರೆಂಡ್ಸ್ ಬಂದರೆ ಮಾಡಿಕೊಡಬಹುದು.
ಫೋಟೊಗೋಸ್ಕರ ಮಾತ್ರ ಮೇಲಿನ ಮೂರು ಕಟ್ ಲೆಟ್ ರೆಡಿ ಮಾಡಿದ್ದೇನೆ. ಉಳಿದದ್ದನ್ನು ಆಮೇಲೆ Land and Freedom ಸಿನಿಮಾ ನೋಡ್ತಾ ತಿನ್ನೋದು. ಹೊರಗಡೆ ಕಪ್ಪು ಮೋಡಗಳು.ಹಾಗಾಗಿ ಹೊರಗೆ ಎಲ್ಲೂ ಹೋಗುವ ಕಾರ್ಯಕ್ರಮ ಇಲ್ಲ.  heavy rains will add charm to our cut let eating programme. rain or otherwise our eating prog is fixed. ನೀವು ಇವತ್ತು ಟ್ರೈ ಮಾಡಬಹುದು ಅಥವಾ ನೆಕ್ಸ್ಟ್ ವೀಕ್...ಎಂಜಾಯ್...
:-)

July 19, 2013

ಚುಟುಕತೆ

ಅವನಿಗೆ ಅಂತರ್ ರಾಷ್ಟ್ರೀಯ ಬ್ಯಾಂಕ್ ಒಂದರಲ್ಲಿ ಕೆಲಸ. ಹೊಸದಾಗಿ ಮದುವೆಯಾದಾಗ ತನ್ನ ಹೆಂಡತಿಗೆ ಆಫಿಸ್ ಪಾರ್ಟಿಗೆ ಕರೆದುಕೊಂಡು ಹೋಗಿದಾಗ ಅವನ ಲೇಡಿ ಕಲೀಗ್ಸ್ ಅವನ್ ಹೆಂಡತಿಯ ಚೆಂದದ ಡ್ರೆಸ್ ಸೆನ್ಸ್ ಬಗ್ಗೆ ಮಾತಾಡಿಕೊಂಡು ಆಕೆ ತನ್ನ ಬ್ಲೌಸ್ ಎಲ್ಲಿ ಹೊಲಿಸಿಕೊಳ್ಳೋದು ಅಂತ ಆಕೆಯನ್ನು ಕೇಳಿದರು. ಆಕೆ 'ನನ್ನ ಬಟ್ಟೆ ನಾನೇ ಹೊಲಿದು ಕೊಳ್ಳೋದು' ಅಂತ ಉತ್ತರಿಸಿದಳು
pastel
 ನಿಧಾನವಾಗಿ ಆಫಿಸ್ ನ ಹೆಂಗಸರು ತಮ್ಮ ಚೂಡಿದಾರ ಕುರ್ತಾ, ಬ್ಲೌಸ್ ಅವಳ ಬಳಿ ಹೊಲಿಸಲಿಕ್ಕೆ ಹತ್ತಿದರು.
ಅಷ್ಟರಲ್ಲಿ ಅವನಿಗೆ ಬೇರೆ ಊರಿಗೆ ವರ್ಗವಾಯಿತು. ಹೊಸ ಬ್ರಾಂಚ್ ನಲ್ಲಿ ಹೊಸದಾಗಿ ಬಂದ ಇವನಿಗೆ ಪಾರ್ಟಿ ಇಟ್ಟಿದ್ದರು. ಹೆಂಡತಿ ರೆಡಿ ಆಗ್ತಿದ್ದ ಹಾಗೆ ಅವನು "ಒಂದು ಮಾತು ಹೇಳಲಾ"?
"ಹೇಳಿ"
"ನಿನ್ನ ಬಟ್ಟೆಗಳನ್ನು ನೀನೆ ಹೊಲೀತಿಯಾ ಅಂತ ದಯವಿಟ್ಟು ಹೇಳಬೇಡಾ"
ಆಕೆ ಆಶ್ಚರ್ಯದಿಂದ, "ಯಾಕೆ"?
"ಯಾಕಂದರೆ ಅವರು ನನಗೆ 'ನನ್ನ ಬ್ಲೌಸ್ ರೆಡಿಯಾಯ್ತ? ರೆಡಿಯಾಗಿದ್ರೆ ಆಫಿಸ್ ಗೆ ತಂದು ಕೊಡಿ, ಅಥವಾ ಎದೆ ಬಳಿ , ಕುಂಕುಳ ಬಳಿ ಟೈಟ್ ಆಗುತ್ತೆ ಅಂತ ಹೇಳಿ'  ಅಂತೆಲ್ಲ ಆಫಿಸ್ ನಲ್ಲಿ ಗಟ್ಟಿ ದನಿಯಿಂದ ನನ್ನ ಬಳಿ ಮಾತಾಡ್ತಾರೆ. ನನಗೆ ಟೈಲರ್ ಳ ಗಂಡ ಅನ್ನಿಸಿಕೊಳ್ಳೋಕೆ ಮುಜುಗರ ಆಗುತ್ತೆ"
ಅವಳು ನಕ್ಕು 'ಸರಿ' ಅಂದ್ಲು.
ಅಷ್ಟರಲ್ಲೆ ಅವಳು ತನ್ನದೇ ಬೂಟಿಕ್ ಒಂದನ್ನು ಶುರು ಮಾಡಿ ಅದು ತುಂಬಾ ಚೆನ್ನಾಗಿ ನಡೆಯುತ್ತಿತ್ತು ಕೂಡ
ಹೋಟಲ್ ನಲ್ಲಿ ಊಟಕ್ಕೆ ಕಾಯ್ತಾ ಫೇಸ್ ಟಿಶ್ಯೂ ನಲ್ಲಿ ಮಾಲವಿಕಳ ಡೂಡಲ್

ಅವನ ಆಫಿಸ್ ಅನ್ನು ಬೇರೆ ದೊಡ್ಡ ವಿದೇಶಿ ಬ್ಯಾಂಕ್ ಒಂದು ಟೇಕ್ ಓವರ್ ಮಾಡಿದ್ದರಿಂದ ಇವನಿಗೆ ಒಂದು ಕೆಳಗಿನ ಹುದ್ದೆ ಸಿಕ್ಕಿತು. ಅವನಿಗೆ ಕಿರಿ ಕಿರಿ ಕೋಪ ಬಂದು ಕೆಲಸ ಬಿಟ್ಟು ಬಿಟ್ಟ. ಬೇರೆ ಕೆಲಸ ಹುಡುಕುತ್ತ ಅವನು ಬೂಟಿಕ್ ನ ಕೆಲಸಗಳನ್ನು ನೋಡಿಕೊಳ್ಳಲಾರಂಭಿಸಿದ.
soft pastel: art by Malavika

ಈಗ ಅವನು ಅವಳ ಬೂಟಿಕ್ ನ ಎಕೌಂಟ್ಸ್ ಮ್ಯಾನೇಜ್ ಮಾಡ್ತಾನೆ. ಬೂಟಿಕ್ ಈಗ ಹೊರದೇಶಗಳಲ್ಲೂ ಶಾಖೆಗಳನ್ನು ಹೊಂದಿದೆ. ಈಗ ಆತ ಡ್ರೆಸ್ ಡಿಸೈನರ್ ಳ ಗಂಡ ಅನ್ನಿಸಿಕೊಳ್ಳೋದಕ್ಕೆ ಮುಜುಗರ ಪಡ್ತಾ ಇಲ್ಲ.
Anonymous ji diet change ನ ಪ್ರಭಾವ ಹೆಂಗಿದೆ??
(ಸ್ವಲ್ಪ ನಿಜ ಸ್ವಲ್ಪ ಕಪೋಲಕಲ್ಪಿತ....ಕಪೋಲಕಲ್ಪಿತ ನಾ ಕಲಿತ ಹೊಸ ಪದ)
:-)

July 15, 2013

ಕಟ್ಟು ಕತೆ ಅಲ್ಲ

ಮಾಲವಿಕ art

ಒಂದೂರಲ್ಲಿ ಒಬ್ಬ ಇದ್ದ. ಕಾಡಿನ ಬಳಿಯಲ್ಲಿದ ನದೀ ತೀರದಲ್ಲಿ ಅವನ ಮನೆ. ಒಂದಿನ ರಾತ್ರಿ ಅವನ ಮನೆ ಬಾಗಿಲು ಸದ್ದು ಮಾಡಿತು. ಕಿಂಡಿಯಿಂದ ಇಣುಕಿದ. ಏನೂ ಕಾಣಲಿಲ್ಲ. ಪುನ: ಹೋಗಿ ಮಲಗಿದ. ಪುನ: ಬಾಗಿಲು ಗೀರಿದ ಸದ್ದಾಯಿತು. ಈಗ ಅವನು ಎದ್ದು ನಿಧಾನವಾಗಿ ಬಾಗಿಲು ತೆರೆದ. ಏನೂ ಕಾಣಲಿಲ್ಲ. ಬಾಗಿದ. ಅಲ್ಲೊಂದು ಪುಟ್ಟ ಬೆಕ್ಕಿನ ಮರಿ ಇತ್ತು. ಇನ್ನಷ್ಟು ಬಾಗಿ ನೋಡಿದ. ಅರೇ ಅದು ಬೆಕ್ಕಿನ ಮರಿಯಾಗಿರಲಿಲ್ಲ. ಅದು ಒಂದು ಮರಿ ಸಿಂಹ. ಆಗಷ್ಟೆ ಹುಟ್ಟಿದ್ದು. ಕಣ್ಣು ಸರಿ ತೆರೆದಿರಲಿಲ್ಲ. ಅವನು ಆ ಸಿಂಹದ ಮರಿಯನ್ನು ಜೋಪಾನವಾಗಿ ಎತ್ತಿ ಹಿಡಿದು ಮನೆಯೊಳಗೆ ಕರೆ ತಂದ. ಹಸಿವಿನಿಂದ ಅದು ಸದ್ದು ಮಾಡುತ್ತಿತ್ತು. ಒಂದು ಹತ್ತಿಯನ್ನು ಹಾಲಲ್ಲಿ ಮುಳುಗಿಸಿ ಅದಕ್ಕೆ ಕುಡಿಸಿದ. ಮರಿ ಸುಮ್ಮನಾಯಿತು. ಒಂದು ಬುಟ್ಟಿಯಲ್ಲಿ ಮೆತ್ತನೆಯ ಹಾಸನ್ನು ಹಾಸಿ ಮರಿಯನ್ನು ಅದರಲ್ಲಿ ಮಲಗಿಸಿದ. ಮರಿ ದೊಡ್ಡ ದಾಗ್ತಾ ಅದಕ್ಕೆ ಬಾಟಲಿಯಲ್ಲಿ ಹಾಲು ಕುಡಿಸಲು ಶುರು ಮಾಡಿದ. ಹೀಗೆ ಇನ್ನೊಂದು ವರ್ಷ ಉರುಳಿತು. ಅವನು ಶುದ್ದ ಸಸ್ಯಾಹಾರಿ ಹಾಗಾಗಿ ಸಿಂಹದ ಮರಿಗೂ ಸಸ್ಯಾಹಾರಿ ಊಟದ ಅಭ್ಯಾಸ ಆಯಿತು. ಹಾಗೂ ಅದು ಅವನ ಅಂಗಳದಲ್ಲಿ ಹಾಯಾಗಿ ಓಡಾಡಿಕೊಂಡಿತ್ತು. ಹೀಗೆ ಜೀವನ ಸಾಗಿತ್ತು.
ಒಂದು ಸಲ ಅವನಿಗೆ ಮೂರು ನಾಲ್ಕು ದಿನಗಳ ಕಾಲ ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಹೋಗಬೇಕಾಯಿತು. ಅವನು ಬಂದ ಮೇಲೆ ಸಿಂಹದ ಮರಿಯನ್ನು ಹುಡುಕುತ್ತಾನೆ. ಮರಿ ಕಾಣಲಿಲ್ಲ. ಎರಡು ದಿನ ಅತ್ತು, ಊಟ ಬಿಟ್ಟು ತುಂಬಾ ಬೇಜಾರಿನಲ್ಲಿ ಕಳೆದ.

ಹೀಗೆ ವರ್ಷಗಳು ಉರುಳಿದವು. ಅವನಿಗೆ ಮದುವೆ ಆಯಿತು, ಮಕ್ಕಳಾದವು. ಒಂದು ಸಲ ಹೀಗೆ ಟೂರ್ ಅಂತ ಪರದೇಶಕ್ಕೆ ಹೋದ. ಅಲ್ಲಿ ಒಂದು ಮೃಗಾಲಯಕ್ಕೆ ಭೇಟಿ ನೀಡಿದ ಕುಟುಂಬ ಸಮೇತ. ಸಡನ್ ಆಗಿ ಅವನಿಗೆ ಗರ್ಜನೆ ಕೇಳಿಸಿತು. ಅವನು ಕೇಜ್ ಹತ್ತಿರ ಹೋಗಿ ನೋಡಿದ. ಒಂದು ಸಿಂಹ ಅವನನ್ನೇ ನೋಡುತ್ತಿತ್ತು. ಅವನಿಗೆ ಹೃದಯದಲ್ಲಿ ಏನೇನೋ ಆಯಿತು. ಅವನು ನೋಡುತ್ತಿದ್ದ ಹಾಗೆ ಆ ಸಿಂಹ ಇವನ ಬಳಿ ಬಂತು. ಅದರ ಮೂಗಿನ ಮೇಲಿನ ಮಚ್ಚೆಯಿಂದ ಗುರುತು ಹಿಡಿದು, ಅದು ಸಣ್ಣಕ್ಕಿದ್ದಾಗ ಅವನೇ ಸಾಕಿದ ಸಿಂಹದ ಮರಿ ಎಂದು ಗುರುತು ಹಿಡಿದ. ಪ್ರೀತಿಯಿಂದ ಪಾರದರ್ಷಕ ಬೋನಿನ ಬಾಗಿಲಿನ ಮೇಲೆ ಕೈಯಾಡಿಸಿದ. ಏನಾಶ್ಚರ್ಯ ಸಿಂಹ ಕೂಡ ತನ್ನ ಪಂಜನ್ನೆತ್ತಿ ಅವನ ಕೈ ಮೇಲೆ ಬೋನಿನ ಆ ಕಡೆಯಿಂದ ನೇವರಿಸಿತು. ಸಿಕ್ಕಾಪಟ್ಟೆ ಇಮೋಷನಲ್ ಆಗಿ ಹೆಂಡತಿ ಮಕ್ಕಳಿಗೆ ಅದರ ಕತೆ ಅದರ ಬಾಲ ಲೀಲೆಗಳನ್ನು ಹಂಚಿಕೊಂಡ. ಸಿಂಹದ ಕಣ್ಣಲ್ಲೂ ನೀರು. ಇನ್ನು ಅವನಿಗೆ ತಡಕೊಳ್ಳಲಾಗಲಿಲ್ಲ. ಅವನು ಮೃಗಾಲಯದ ನಿರ್ವಹಣಾಕಾರರ ಬಳಿ ಹೋಗಿ ತನ್ನ ಹಾಗೂ ಸಿಂಹದ ಬಾಂಧವ್ಯದ ಕತೆ ಹೇಳಿ ಒಂದು ಸಲ ಅದರ ಬೋನಿಗೆ ಹೊಕ್ಕಲು ಅವಕಾಶಮಾಡಿಕೊಡಬೇಕೆಂದು ಕೇಳಿಕೊಂಡ. ನಿರ್ವಹಣಾಧಿಕಾರಿ ಒಪ್ಪಿಕೊಂಡ.
ಇವನು ಬೋನನ್ನು ಹೊಕ್ಕಿದ್ದೆ ಸೈ

ಸಿಂಹ ಅವನ ಮೇಲೆ ದಾಳಿ ಮಾಡಿ ಅವನನ್ನು ಕೊಂದು ಹಾಕಿತು.
.
.
.
.
.
.
..
.
.
.
.
ಇದನ್ನು ಓದಿ ನೀವೆಲ್ಲ ಅಳಬೇಡಿ ಮತ್ತೆ. ಎನೋ misunderstanding ನಡೆದೈತಿ.....ಆ ಸಿಂಹದ ಮರಿ ಬ್ಯಾರೆ ಇದ್ದಿತೇನೋ.....ನನ್ನ ತಂಗಿಗೆ ಈ ಕತೆ ಹೇಳಿ shock ಹೊಡೆಸಿ ಆಮೇಲೆ ಅವಳ ಕೈಯಲ್ಲಿ ಬೈಯಿಸಿಕೊಂಡೆ..ಹಿ ಹಿ ಹಿ (ನಿಮ್ಮ ಜತೆನೂ ಶೇರ್ (ಶೇರ್‍ ಇನ್ ಹಿಂದಿ ಮೀನ್ಸ್ ಲಯನ್....ಈ ಪನ್ ಕೂಡ ಅವಳ ಮೇಲೆ ಪ್ರಯೋಗಿಸಿ ಛೀ ಥೂ ಅನ್ನಿಸಿಕೊಂಡೆ) ಮಾಡುವ ಅಂತ
:-) :-)
(ಮೇಲಿನ ಮೂರು ಚಿತ್ರಗಳು ಮಾಲವಿಕಾ ಮಾಡಿದ್ದು)

July 9, 2013

ಅನುವಾದಿತ ಕತೆ : ತಮಾಷೆ

Women writing in India ದಲ್ಲಿನ ಕತೆಯನ್ನು ಅನುವಾದಿಸುವ ಪ್ರಯತ್ನ. ಪಂಜು e-magazine ಗೆ ಕಳಿಸಿದ್ದೆ ಅವರು ಅವರ ವೆಬ್ ಸೈಟ್ ನಲ್ಲಿ ಹಾಕಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳುತ್ತ.....
ನೀವು ಕೆಳಗಿನ ಕೊಂಡಿಯಲ್ಲಿ ಅದನ್ನು ಓದಿ ನಿಮ್ಮ honest opinion ಕೊಡಬೇಕಾಗಿ ವಿನಂತಿ.

http://www.panjumagazine.com/?p=3129

ಧನ್ಯವಾದಗಳು

July 4, 2013

ಬದನೆಕಾಯಿ ಬಜ್ಜಿ

ಕೆಂಡದಲ್ಲಿ ಸುಟ್ಟ ಬದನೆಕಾಯಿ -2 Nos

(ಅಥವಾ ನನ್ನ ಹೊಸ ಸ್ಟೈಲ್ ಮೈಕ್ರೋವೇವ್ ನಲ್ಲಿ ಐದು ನಿಮಿಷ ಬದನೆಕಾಯಿಗಳನ್ನು cook/start menu option ನಲ್ಲಿ 5 ನಿಮಿಷ ಇಟ್ಟು ಎರಡು ನಿಮಿಷ ಗ್ಯಾಸ್ ನ ಬೆಂಕಿ ಮೇಲೆ ಸುಡೋದು for that smoky aroma



2-3 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಉಪ್ಪು, ಕೊತ್ತಂಬ್ರಿ ಸೊಪ್ಪು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಸ್ವಲ್ಪ ಮೊಸರು.

ಸುಟ್ಟ ಬದನೆಕಾಯಿಯನ್ನು ಬಿಸಿ ಇರುವಾಗಲೇ ಪ್ಲೇಟ್ ಗೆ ಶಿಫ್ಟ್ ಮಾಡಿ ಅದರ ಮೇಲೆ ಒಂದು ದೊಡ್ಡ ಪಾತ್ರೆ ಉಲ್ಟಾ ಇಡಿ. ಐದು ನಿಮಿಷ, ಅಂದ್ರೆ ಬದನೆಕಾಯಿ ಒಳಗಡೆ ಪೂರ್ತಿ ಬೇಯುತ್ತೆ. ಸ್ವಲ್ಪ ತಣ್ಣಗಾದ ಮೇಲೆ ಮೇಲಿನ ಸಿಪ್ಪೆ ತೆಗೆದುಬಿಡಿ. ಇನ್ನು ಸಿಪ್ಪೆ ಉಳಿದಿದ್ದ್ರೆ ನಿಧಾನವಾಗಿ ತೊಳೆದು ಬಿಡಿ. ಆಮೇಲೆ ಅದನ್ನು ಸ್ಪೂನ್ ನಿಂದ ಮ್ಯಾಶ್ ಮಾಡಿ, ಉಳಿದ ಪದಾರ್ಥ ಬೆರೆಸಿ ಬಿಸಿ ಅನ್ನದೊಂದಿಗೆ ವೆರಿ ವೆರಿ ಟೇಸ್ಟೀ

ಅಥವಾ

ಮ್ಯಾಶ್ ಮಾಡಿದ ಬದನೆಕಾಯಿಗೆ ಹಿಂಗು ನೀರು, ಉಪ್ಪು, ಬಿಸಿ ಮಾಡಿದ ತೆಂಗಿನ ಎಣ್ಣೆ ಸುರುವಿ ಮಿಕ್ಸ್ ಮಾಡಿ..ಇದಂತೂ ತಯಾರಾಗುವಾಗ ಘಮ ಘಮ ಅನ್ನುತ್ತೆ. ಬಿಸಿ ಅನ್ನದ ಜತೆ ಕಲಿಸಿಕೊಂಡು ಎರಡು ತುತ್ತು ಹೆಚ್ಚಿಗೆ ಊಟ ಮಾಡಿ ಮರುದಿನ ಒಂದು ರೌಂಡ್ extra ವಾಕ್ ಹೋಗಿ :-) ನನ್ನ ಆಶೀರ್ವಾದ ಸದಾ ನಿಮ್ಮೊಂದಿಗೆ...ಮಾತೆ ಮಾಲತಿ ಅಂತ ಸುಮ್ಮನೇನಾ ಮತ್ತೆ?

ಅಥವಾ ನಾರ್ಥ್ ಇಂಡಿಯನ್ ಸ್ಟೈಲ್ (will add the picture when i prepare this)

ಬೆಳ್ಳುಳ್ಳಿ-ಶುಂಠಿ ಪೇಸ್ಟ್, ನೀರುಳ್ಳಿ, ಟೊಮೇಟೊ ಅಥವಾ ಮೊಸರು, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ, red chilly powder, turmeric powder

ಮೊದಲಿಗೆ ಬಿಸಿ ಎಣ್ಣೆಯಲ್ಲಿ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಕೆಂಪಗೆ ಹುರಿಯಿರಿ ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಹಾಕಿ ಪಿಂಕ್ ಆಗುವ ತನಕ ಹುರಿಯಿರಿ. ಸ್ವಲ್ಪ ಅರಿಶಿನ ಪುಡಿ ಹಾಕಿ, ಇದಕ್ಕೆ ಟೊಮೇಟೊ ಅಥ್ವಾ ಮೊಸರು ಬೆರೆಸಿ, ಮೆಣಸಿನ ಪುಡಿ, ಗರಂ ಮಸಾಲೆ ಬೆರೆಸಿ ಎರಡು ನಿಮಿಷ ಕೈಯಾಡಿಸಿ, ಕೊನೆಯಲ್ಲಿ ಮ್ಯಾಶ್ಡ ಬದನೆಕಾಯಿ ಬೆರೆಸಿ ಎರಡು ನಿಮಿಷ  ಒಲೆ ಮೇಲಿರಲಿ..ಅಮೇಲೆ ಚಪಾತಿ/ಫುಲ್ಕಾ ಜತೆ ಸರ್ವ್ ಮಾಡಿ..
ನಮ್ಮನೇಲಿ ಮೂರು ವರ್ಶನ್ ಇನ್ನೂ ಚಾಲ್ತಿಯಲ್ಲಿದೆ.
ನನ್ನ ತಂಗಿಗೋಸ್ಕರ ಮಾಡಿದ್ದು.....ನೀವು ನೋಡಿ ಎಂಜಾಯ್ ಮಾಡಿ
:-)