February 5, 2013

ಆ ಕಾಡುವ ಕಣ್ಣುಗಳು

BTM ಲೇಔಟ್ ಕಡೆ ಹೊರಟಿದ್ವಿ. ಬಸ್ ಸ್ಟಾಪ್ ನಲ್ಲಿ ಖಾಲಿಯಿದ್ದ ಬಸ್ ಸಿಕ್ತು. ಅಮ್ಮ ಮಗು ಕೂತಿದ್ದ ಸೀಟ್ ಪಕ್ಕದ ಸೀಟ್ ನಲ್ಲಿ ನಾನು ಕೂತೆ. ಗುಂಗರು ಕೂದಲಿನ ಮಗುವಿನ ಹಿಂಭಾಗ ಮಾತ್ರ ಕಾಣ್ತಾ ಇತ್ತು. ಬಸ್ಸ್ ಹೊರಟ ಸ್ವಲ್ಪ ಸಮಯಕ್ಕೆ ಮಗು ಅಮ್ಮನನ್ನು ತಟ್ಟಿತು. ಅಮ್ಮ ಸಿಪ್ಪಿ ಕಪ್ ನಿಂದ ಅದಕ್ಕೆ ನೀರು ಕುಡಿಸಿದಳು. ನಾನು ಕಿಟಕಿಯ ಹೊರಗಿನ ನೋಟದಲ್ಲಿ ಲೀನಳಾದೆ. ಯಾವಾಗ ಆ ಮಗು ತನ್ನ ಅಮ್ಮನ ಕಾಲಮೇಲಿಂದ ನಬ್ಬಿಬ್ಬರ ಮಧ್ಯ ಕೂತುಕೊಂಡಿತು ನನಗೆ ತಿಳಿಯಲಿಲ್ಲ.ಅಮ್ಮನ ಬಳಿ ಕಣ್ಣು ಹಾಯಿಸಿದ್ರೆ ಆಕೆ ಅನ್ಯಮನಸ್ಕಳಾಗಿ ತಲೆಯನ್ನು ಕಿಟಕಿಗೆ ಆನಿಸಿಕೊಂಡು ಸುಮ್ಮನೆ ಕೂತಿದ್ದಳು. ತಲೆನೋವೋ, motion sickness ಏನೂ ಅಂದುಕೊಂಡೆ. ನನ್ನ ಸೈಜ್ ಸ್ವಲ್ಪ ದೊಡ್ಡದೆ. ಆದ್ದರಿಂದ ಮಗು ಬೀಳದ ಹಾಗೆ ಬೆಚ್ಚಗೆ ನಮ್ಮಿಬ್ಬರ ಮಧ್ಯ ಕೂತಿತು. ನಾನೂ ನನ್ನದೇ ಆದ ಆಲೊಚನೆಗಳಲ್ಲಿ ಹುದುಗಿ ಹೋಗಿದ್ದೆ. ಮಗು ಮಿಸುಕಾಡಿ ತನ್ನ ಇರುವನ್ನು ಸಾರಿತು. ಪುನ: ಅಮ್ಮನನ್ನು ತಟ್ಟಲು, ಆಕೆ ಮಗುವನ್ನು ಕಾಲ ಮೇಲೆ ಕೂರಿಸಿಕೊಂಡು, ಕಾಲಬಳಿಯಿದ್ದ ಬ್ಯಾಗ್ ನಿಂದ ಡಬ್ಬಿ ತೆಗೆದು, ಸ್ಪೂನ್ ನಿಂದ ಊಟ ಮಾಡಿಸಲು ಶುರು ಮಾಡಿದಳು. ಆದರೆ ಆಕೆಯ ಮನಸ್ಸು ಅದರಲ್ಲಿರಲಿಲ್ಲ ಅಂತ ತಿಳಿಯಿತು. ಸ್ಪೂನ ಬಾಯಿಗೆ ಹೋಗುವುದಕ್ಕಿಂತ ಜಾಸ್ತಿ ಗಲ್ಲ ಗದ್ದದ ಕಡೆ ಹೋಗಿ ಮುಖ ಎಲ್ಲ ಎಂಜಲುಮಯ. ಎದುರುಬದುರು ಸೀಟ ಇತ್ತು ಆ ಬಸ್ ನಲ್ಲಿ. ಎದುರಿಗೆ ಕೂತ ಹುಡುಗಿ, ಆ ಅಮ್ಮನಿಂದ ಡಬ್ಬಿಯನ್ನು ಕಿತ್ತುಕೊಂಡು, 'ಚಿಕ್ಕಿ ಊಟ ಮಾಡಿಸ್ತಾಳೆ' ಅಂತ  ಮಗುವಿಗೆ ತನ್ನ ಬಳಿ ಕರೆದು, ಕಾಲ ಮೇಲೆ ಕೂರಿಸಿ, ಮುದ್ದುಗರೆಯುತ್ತ ಊಟ ಮಾಡಿಸಿದಳು. ಚಿಕ್ಕಿಗೆ ಚಂದದ ಮುಗುಳ್ನಗು ಇತ್ತು. ನಮ್ಮ ಕಣ್ಣುಗಳು ಸಂಧಿಸಿದಾಗಲೆಲ್ಲ ಅವಳು ಸಣ್ಣಗೆ ನಗುತ್ತಿದ್ದಳು. ಊಟ ಮಾಡಿ, ನೀರು ಕುಡಿದು ಆ ಮಗು ಪುನ: ನಮ್ಮ ಸೀಟಿನ ಮಧ್ಯದ ಜಾಗದಲ್ಲಿ ಕೂತುಕೊಂಡಿತು. ಈ ಸಲ ನಿಧಾನಕ್ಕೆ ಅದರ ಪುಟ್ಟ ಕೈ ನನ್ನ ಎಡಗೈನ್ ಚಿಕ್ಕ ಬೆರಳನ್ನು ಹಿಡಿದುಕೊಂಡು ಬಿಟ್ಟಿತು. ನಾನೂ ಆ ಬೆಚ್ಚಗಿನ ಹಿಡಿತವನ್ನು, ನಮ್ಮಿಬ್ಬರ ನಾಡಿ ಮಿಡಿತ ಒಂದಾಗಿ ಹಿತವಾಗಿ ಬಡಿಯುತ್ತಿತ್ತು, ಅದನ್ನು ಅನುಭವಿಸುತ್ತಲೇ ಕಿಟಕಿ ಹೊರಗಡೆ ನೋಡ್ತಾ ಇದ್ದೆ. ಬಸ್ ಡ್ರೈವರ್ ಅಚಾನಕ್ಕಾಗಿ ಬ್ರೇಕ್ ಹಾಕಿದ ರಭಸಕ್ಕೆ ನಾನು ಮಗು ಜಾರಿದೆವು. ಸಾವರಿಸಿ ಕೂತು ಕೊಂಡೆವು. ಬ್ರೇಕ್ ಹೊಡೆದಾಗ ನಬ್ಬಿಬ್ಬರ ಕೈ ಬಿಡುಗಡೆಯಾಗಿ ಆ ಬೆಚ್ಚಗಿನ ಫೀಲ್ ಹೋದ್ದರಿಂದ ಏನೋ ಇರುಸುಮುರುಸು ಅನ್ನುವಷ್ಟರಲ್ಲಿ ಪುನ: ಆ ಪುಟ್ಟ ಕೈಗಳು ನನ್ನ ಚಿಕ್ಕ ಬೆರಳನ್ನು ಅರಸಿ ಬಂದು ಹಿಡಿದುಕೊಂಡಿತು.
ರಿಫ್ಲೆಕ್ಸ್ ನಿಂದ ನಾನೂ ಆ ಮಗು ಮೊದಲ ಬಾರಿಗೆ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು. ನನಗೆ ತಕ್ಷಣಕ್ಕೆ ಕಂಡಿದ್ದು ಅದರ ಮುದ್ದು ಮುಖದಲ್ಲಿ ಚಂದದ ಬಣ್ಣದ ಕಂಗಳು. ಯಾವುದೇ ಭಾರತೀಯ ಮಕ್ಕಳಲ್ಲಿ ನಾ ಆ ತರಹದ ಕಣ್ಣನ್ನು ನೋಡಿಲ್ಲ.

ನೀಲಿ ಬೂದು ಮಿಶ್ರ ಅದ್ಭುತ ದೊಡ್ಡ ದೊಡ್ಡ ಕಣ್ಣುಗಳು. ನಾವಿಬ್ಬರೂ ಒಬ್ಬರನ್ನೊಬ್ಬರು ಬರೋಬ್ಬರಿ 5 ನಿಮಿಷಕ್ಕಿಂತ ಹೆಚ್ಚೆ ನೋಡುತ್ತ ಇದ್ದೆವು. ಆದರೆ ಆ ಚಂದದ ಮುಖದಲ್ಲಿ ಒಂದು ಚೂರು ನಗು ಇರಲಿಲ್ಲ. ಎಷ್ಟು ಗಂಭೀರ ಮುಖ ಮುದ್ರೆ ಅಂದ್ರೆ ನನಗೂ ಅದನ್ನು ಮಂಗಚೇಷ್ಟೆ ಮಾಡಿ ನಗಿಸ ಬೇಕು ಅನ್ನಿಸಲಿಲ್ಲ. ಸುಮಾರು ಒಂದು ಮುಕ್ಕಾಲು ಗಂಟೆಯ ಪಯಣದಲ್ಲಿ ನನ್ನ ಬೆರಳನ್ನು ಅದರ ಮುಷ್ಠಿಯಲ್ಲೇ ಹಿಡಿದು ಕೊಂಡಿತ್ತು. ನಮ್ಮ ಎದುರಿನ ಸೀಟಿನಲ್ಲಿ ಹಲವಾರು ಪ್ಯಾಸೆಂಜರ್ಸ್ ಬದಲಾದರು. ಅವರೆಲ್ಲ ಮಗುವನ್ನು ನಗಿಸುವ ಪ್ರಯತ್ನದಲ್ಲಿ ಸೋತರು. ಚಿಕ್ಕಿ ಗೆ ಯಾರದ್ದೋ ಫೋನ್ ಬಂದಾಗ, ಆಲಿಸದಿದ್ದರು ಕಿವಿಗಳಿಗೆ ಬೀಳುವ ಸಂಭಾಷಣೆಯಲ್ಲಿ ಕೇಳ ಸಿಕ್ಕಿದ್ದು ಇವಿಷ್ಟು, 'ತಲೆಗೆ ಪೆಟ್ಟು, ಸಿರಿಯಸ್, ಮತ್ತು NIMHANS. ಪುನ: ಆ ಮಗುವಿನ ಅಮ್ಮನ ಕಡೆ ನೋಡಿದ. ಯಥಾಪ್ರಕಾರ ಯಾವುದೇ ಪ್ರತಿಕ್ರಿಯೆ ಇಲ್ಲದೆ ಕಿಟಕಿಗೆ ತಲೆಯಾನಿಸಿ ಕೂತ ಭಂಗಿ. ಯಾವುದಕ್ಕೂ ಅವರಿಗೆ ಒಳ್ಳೆಯದಾಗಲಿ ಎಂದು ಮನಸ್ಸು ಹಾರೈಸಿತು.
ನಾವು ಇಳಿಯುವ ಸ್ಟಾಪ್ ಮೊದಲಿಗೆ ಬಂತು. ನಿಧಾನಕ್ಕೆ ನನ್ನ ಬೆರಳನ್ನು ಬಿಡಿಸಿ' ನಾ ಇಳಿತೆನೆ ಪುಟ್ಟ ಅಂತ ಹೇಳಿ, ಚಿಕ್ಕಿ ಗೆ ಒಂದು ಸ್ಮೈಲ್ ಕೊಟ್ಟು ನಾನು ಶ್ರೀಕಾಂತ ಇಳಿದೆವು.
ಇಳಿದ ಮೇಲೆ ಶ್ರೀಕಾಂತ ಹೇಳಿದ್ದು, ನೀವು ಒಬ್ಬರಿಗೊಬ್ಬರು ನೋಡ್ತಾ ಇದ್ದಿದ್ದು ಎಷ್ಟು ಚೆನ್ನಾಗಿತ್ತು ಆ moment ಗೊತ್ತಾ?? ಸೆಲ್ ಫೋನ್ ನಿಂದ ಫೋಟೊ ತೆಗೆಯುವ ಅನ್ನ್ಸಿಸಿತ್ತು ಅಂದರು. ಶ್ರೀಕಾಂತ್ ನನಗಭಿಮುಖವಾಗಿ ಇನ್ನೊಂದು ಬದಿಯ adjacent ಸೀಟ್ ನಲ್ಲಿ ಕೂತಿದ್ದರು.
ಈಗಲೂ ಯಾವುಯಾವುದೋ ಸಮಯದಲ್ಲಿ ಆ ಸುಂದರ ಕಣ್ಣುಗಳು ನನ್ನನ್ನು ಕಾಡುತ್ತವೆ. ನಾನು ಮುಗುಳ್ನಕ್ಕು ಆ ಮಗುವನ್ನು  ನಾ ಇದ್ದಲ್ಲಿಂದಲೇ 'ಎಲ್ಲ ಒಳ್ಳೆಯದೇ ಆಗಿರಲಿ' ಅಂತ ಹರೈಸುತ್ತೇನೆ. ನನ್ನ ಚಿಕ್ಕ ಬೆರಳನ್ನು ಗಲ್ಲಕ್ಕೆ ನೇವರಿಸುತ್ತೇನೆ.
this is my 222 nth post..(showing off)


:-)

4 comments:

  1. ಲಾಲಿ...ಚಿತ್ರದ ಹಾಡು ನೆನಪಿಗೆ ಬಂತು ನಿಮ್ಮ ಲೇಖನ ಓದಿ..."ಚಂದನ ಕಂಪ ಲಾಲಿ ಲಾಲಿ".. ಮಕ್ಕಳ ಬೆಸುಗೆ ಬೇಗ ಬೆಸೆದು ಬಿಡುತ್ತವೆ...ಅವು ಹೇಗಿದ್ದರೂ ಚಂದವೇ...ತಮ್ಮ ಲೋಕದೊಳಗೆ ತೇಲಾಡುವ ಆ ಮುಗ್ಧ ನಗೆ, ಮನಸ್ಸು ಎಷ್ಟು ಅನುಭವಿಸಿದರೂ ಮರೆಯಲಾಗೋಲ್ಲ..ಒಂದು ಚಿಕ್ಕ ಸಂಗತಿ ಕೂಡ ಮನಸಿಗೆ ತಟ್ಟುತ್ತೆ ಅನ್ನುವುದಕ್ಕೆ ನಿಮ್ಮ Triplet (222) ಬರಹ ಸಾಕ್ಷಿ...ಅಮ್ಮನಲ್ಲಿ ಇರುವ ನೋವು..ಬಹುಶಃ ಕಂದನಿಗೂ ಅರಿವಾಗಿತ್ತೋ ಏನೋ...ಅದಕ್ಕೆ ನಗುವ ಪ್ರಯತ್ನ ಕೂಡ ಮಾಡದೆ ಸುಮ್ಮನ್ನಿತ್ತು ಅನ್ನಿಸುತ್ತೆ..ಕಣ್ಣಿಗೆ ಅರಿವಾಗದ್ದು ಕರುಳಿಗೆ ಅರಿವಾಗುತ್ತೆ ಎನ್ನುವ ಮಾತು ಎಷ್ಟು ನಿಜ..ಸುಂದರ ಬರಹ...Madam

    ReplyDelete
  2. Congratulations Malathi! Keep going :-)

    ReplyDelete
  3. ಒಳ್ಳೆಯ ಬರಹ. 222ನೆ ಲೇಖನಕ್ಕೆ ಅಭಿನಂದನೆಗಳು

    ReplyDelete
  4. Hey, so sweet narration and congrats on 222nd post. ಮೊನ್ನೆಯಷ್ಟೇ ೨೦೦ ರಲ್ಲಿ ಇದ್ರಿ, ಅದೆಷ್ಟು ಬೇಗ ೨೨ add ಆಯ್ತು... :))

    ReplyDelete