February 14, 2017

fig & honey cake making & decoration

fig & honey cake making & decoration from #BiscootFactory. click on the link below and do share your experience if you try making them

Simple Fig & Honey whole wheat cake


Kindly visit the Face Book Page and 'like' it. thank you all. 

February 3, 2017

ಪ್ರಯಾಣ - ಪುಸ್ತಕ

ನಾನು ನಿಹಾ ಒಂದು ಸಣ್ಣ ಪ್ರಯಾಣ ಕೈಗೊಂಡಿದ್ದೇವೆ. ಎಲ್ಲಿ ಎತ್ತ ಯಾಕೆ ಇದೆಲ್ಲ ಬಂದ ಮೇಲೆ !! ಪುಸ್ತಕ ವಿಲ್ಲದ ಪ್ರಯಾಣ? ಸಾಧ್ಯವೇ ಇಲ್ಲ . ಆದರೆ ಪ್ರಯಾಣ ಹೊರಡುವಾಗ ಮಾತ್ರ ನಾನು ನನ್ನದೇ ಕಲೆಕ್ಷನ್ ನಲ್ಲರುವ ಪುಸ್ತಕ ತೆಗೆದುಕೊಂಡು ಹೋಗುತ್ತೇನೆ. ಮನೆಯಲ್ಲಿ ನಾನು ಬ್ರಿಟಿಷ್ ಲೈಬ್ರರಿಯಿಂದ ಎರವಲು ತಂದಿರುವ ಪುಸ್ತಕ ಓದುವುದು. ಕೈ ಕಾಲುಗಳಲ್ಲಿ ಶಕ್ತಿ ಇರುವ ತನಕ ನಾನು ಗ್ರಂಥಾಲಯದಿಂದ ತಂದ ಪುಸ್ತಕ ಓದುತ್ತೇನೆ , ತುಂಬಾ ವಯಸ್ಸಾದ ಮೇಲೆ ನನ್ನ ಸ್ವ೦ತದ ಕಲೆಕ್ಷನ್ ನಲ್ಲಿರುವ ಪುಸ್ತಕ. ಯಾಕೆ ಅಂತ ಕೆಳದಿದ್ರೂ ಹೇಳೇ ಬಿಡ್ತೇನೆ. :-) ನನ್ನ ಅಜ್ಜಿಯಂದಿರು ಇಬ್ಬರು ಆರೋಗ್ಯಕರವಾಗಿದ್ದು ೯೦+ ವರ್ಷಗಳು ಜೀವಿಸಿದ್ದಾರೆ. ನಾನು ಹಾಗೆ ಹಲವಾರು ವರ್ಷ ಜೀವಿಸುತ್ತೇನೆ  ಅಂತ ವಿಶ್ವಾಸ ನನ್ನಲ್ಲಿದೆ. 
ನನ್ನ ಅಜ್ಜಿಯ ಕತೆ ಮೊದಲು ಹೇಳ್ತೇನೆ. ಆನಂತರ ಪುಸ್ತಕದ ಬಗ್ಗೆ 
ನನ್ನ ಅಜ್ಜ ಬಡ ಸ್ಕೂಲ್ ಮಾಸ್ತರರಾಗಿದ್ದರು. ಮನೆಯಲ್ಲಿ ಹಲವಾರು ಮಕ್ಕಳು. ಎಲ್ಲರನ್ನು ಚೆನ್ನಾಗಿ ಸಾಕುವಷ್ಟು ಆದಾಯ ಅಜ್ಜನಿಗೆ ಇರಲಿಲ್ಲ. ನಮ್ಮ ಅಜ್ಜಿ ಸ್ವಲ್ಪ ಅನುಕೂಲಸ್ಥ ಮನೆಯವರು. ಮದುವೆ  ಸಮಯದಲ್ಲಿ ಸಾಕಷ್ಟು ಬಂಗಾರದ ಆಭರಣಗಳನ್ನು ಅವರ ತವರು ಮನೆಯಿಂದ ಹಾಕಿದ್ದರು. ಅಜ್ಜನ ಮನೆಯ ಪಕ್ಕದಲ್ಲಿನ ತೋಟ ಮಾರಾಟಕ್ಕಿದ್ದಾಗ ಅಜ್ಜಿ ತಮ್ಮ ಒಡವೆಗಳನ್ನು ಒಬ್ಬ ಲಾಯರ್ ಬಳಿ  ಅಡವಿಟ್ಟು ಆ ಹಣದಿಂದ ೨ ಎಕರೆ ತೋಟ ಕೊಂಡರು. ಮೊದಲಿಗೆ ಅಲ್ಲೊಂದು ಪುಟ್ಟ ಮನೆ ಕಟ್ಟಿದರು. ಆಮೇಲೆ ನಿಧಾನಕ್ಕೆ ೧೦೦ ತೆಂಗಿನ ಸಸಿಗಳನ್ನು ನೆತ್ತರು. ನನಗೆ ೪ ವರ್ಷ ಆದಾಗ ನಾನು ಅಜ್ಜಿ ಬಳಿ ಇರುತ್ತಿದ್ದೆ. ನನಗೆ ಅರ್ಥವಾಗುವ ವಯಸ್ಸಿನಿಂದ ನೋಡ್ತಾ ಬಂದಿದ್ದೇನೆ-  ಅಜ್ಜಿ ತೆಂಗಿನ ಬುಡ ಅಗೆದು ಅದಕ್ಕೆ ಉಪ್ಪು, ಸಾರ ಹಾಕುವುದನ್ನು ನೋಡಿದ್ದೇನೆ. ಬಾವಿಯಿಂದ ನೀರು ಸೇದಿ  ತೆಂಗಿನ ಮರಗಳಿಗೆ ಹಾಕುತ್ತಿದ್ದರು. ಮಧ್ಯಾಹ್ನ ಊಟದ ಬಳಿಕ ಸ್ವಲ್ಪ ವಿಶ್ರಾ೦ತಿ . ಸ೦ಜೆ ಯಾಥಾವತ್ತು ತೋಟದ ಕೆಲಸಗಳೇ. ತೆಂಗಿನ ಮರಗಳ ಮಧ್ಯ ಮಧ್ಯ ಹೆಬ್ಬಲಸು, ನಕ್ಶತ್ರ ಹಣ್ಣು, ದಿವಿ ಹಲಸು, ಮಾವು, ಹಲಸು ಮುಂತಾದ ಮರಗಳು, ಸೌತೆಕಾಯಿ, ತೊಗರಿಕಾಯಿ, ಮೆಣಸಿನ ಕಾಯಿ, ಬಸಳೆ ಮುಂತಾದ ದಿನ ನಿತ್ಯ ಬಳಸುವ ತರಕಾರಿಗಳು, ಅಬ್ಬಲಿಗೆ, ಮಲ್ಲಿಗೆ, ಗೊರಟೆ ಮುಂತಾದ ಹೂಗಳು ಇವನ್ನೆಲ್ಲ ಬೆಳೆಸಿದ್ದರು. ಸಂಜೆ ಹೂವನ್ನು ಚೆಂದ  ಮಾಡಿ ಬಗೆ ಬಗೆಯ ರೀತಿಯಲ್ಲಿ ಪೋಣಿಸುತ್ತಿದ್ದರು. ತುಂಬಾ ಶ್ರಮ ಜೀವಿ. ನಮ್ಮ ತಂದೆ ಸೇರಿದಂತೆ ಅಜ್ಜಿಗೆ ೭ ಜನ ಮಕ್ಕಳು. ನಾನು ಹುಟ್ಟುವ ಮೊದಲೇ ಅಜ್ಜ ತೀರಿಕೊಂಡರು. ಇಬ್ಬರು ಮಗಳಿಗೆ ಮದುವೆ ಮಾಡಿದರು, ಗಂಡು ಮಕ್ಕಳ ವಿದ್ಯಾಭ್ಯಾಸ ಇವೆಲ್ಲ ಅಜ್ಜಿಯ ತೆಂಗಿನಕಾಯಿ ಮಾರಾಟ ಮಾಡಿದ  ಆದಾಯದ  ಮೇಲೆ ನಡೆಯುತ್ತಿತ್ತು.  ಬೆಳಿಗ್ಗೆ ನಾಲ್ಕಕ್ಕೆ ಎದ್ದರೆ ರಾತ್ರಿ ದೀಪ ಹಚ್ಚುವ ತನಕ ಕೆಲಸ. ದೀಪ ಹಚ್ಚಿದ ಮೇಲೆ ಭಜನೆ, ಊಟ ನಂತರ ನಿದ್ರೆ. ರಾತ್ರಿ ಊಟದ ಪಾತ್ರೆ ಬೆಳಿಗ್ಗೆ ಚಿಮಣಿ ದೀಪದಲ್ಲಿ ಮನೆಯ ಹೊರಗಡೆ ತೆ೦ಗಿನ  ಕಟ್ಟೆಯಲ್ಲ್ಲಿ  ತೊಳೆಯುವ ರೂಢಿ. ಆಮೇಲೆ ಬಾವಿಯಿಂದ ನೀರು ಸೇದಿ ಸ್ನಾನದ ತೊಟ್ಟಿಯಲ್ಲಿ ನಿರಿ ತುಂಬಿಸಿ , ಒಲೆಗೆ ಬೆಂಕಿ ಹಾಕಿ...  ಆಮೇಲೆ ಬೆಳಿಗ್ಗೆಗೆ  ಬೇಕಾದ ತಿಂಡಿಗೆ ಚಟ್ನಿ, ಅಡಿಗೆಗೆ ಮಸಾಲೆ ಎಲ್ಲ  ರುಬ್ಬುತ್ತಿದ್ದರು. ಬೇಸಿಗೆಯಲ್ಲಿ ಹಪ್ಪಳ ಸಂಡಿಗೆ, ಉಪ್ಪಿನಕಾಯಿ ಕೆಲಸಗಳು. ಯಾವತ್ತೂ ಹುಷಾರಿಲ್ಲದೆ ಮಲಗಿದ್ದೆ ಗೊತ್ತಿಲ್ಲ. ಸಾವು ಕೂಡ ಹಾಗ್ ರಾತ್ರಿ ಮಲಗಿದ್ದವರು ಬೆಳಿಗ್ಗೆ ಇರಲಿಲ್ಲ. ಅಷ್ಟೇ. ನನಗೆ ಅವರ ಚುರುಕುತನ ಬಂದಿಲ್ಲ ಆದರೆ ಆರೋಗ್ಯ ಮಾತ್ರ ಧಂಡಿಯಾಗೆ ಬಳುವಳಿ ಬಂದಿದೆ. :-) ಹಾಗಾಗಿ ಕೈ ಕಾಲು ಸರಿಯಿದ್ದಾಗ ಗ್ರಂಥಾಲಯ ದ  ಪುಸ್ತಕ. ನಂತರ ಹೇಗೂ ನನ್ನ ಸ್ವ೦ತದ ಪುಸ್ತಕ ಆರಾಮಾಗಿ ಓದ ಬಹುದು.

ಮತ್ತೆ ಪ್ರಯಾಣಕ್ಕೆ ಯಾಕೆ ನಾನು ಲೈಬ್ರರಿ ಪುಸ್ತಕ ಕೊಂಡೊಯ್ಯುವುದಿಲ್ಲ ಅಂತ ಹೇಳ್ತೇನೆ..ಕೇಳಿ.. 
ನಮಗೆ ಶಾಲೆಯಲ್ಲಿ ಗ್ರಂಥಾಲಯ ಪಿರಿಯಡ್ ಒಂದು ಇರುತ್ತಿತ್ತು ಶನಿವಾರ ಬೆಳಿಗ್ಗೆ. ತುಂಬಾ ಒಳ್ಳೊಳ್ಳೆಯ ಪತ್ತೇದಾರಿ ಇಂಗ್ಲೀಷ ಪುಸ್ತಕಗಳು- Nancy drew, dana girl, hardy boys, bobsey twins, secret seven, famous five, kelavu science fiction - ಇರುತ್ತಿದ್ದವು. ಆದರೆ ನಮಗೆ sirname  first ರೋಲ್ ಕಾಲ್ ಇರುತ್ತಿತ್ತು. ಹಾಗಾಗಿ ನನ್ನದು ಪೈ ಮಾಲತಿ  ಆಗಿತ್ತು. ಕ್ಲಾಸಲ್ಲಿ ೩೦ ಜನ ಹೆಣ್ಮಕ್ಕಳು ನಾವು. ನನ್ನ ಸರದಿ ಬರುವಾಗ ಎಲ್ಲ ನನಗೆ ಬೇಕಿರುವ ಪುಸ್ತಕಗಳು ಬೇರೆಯವರ ಪಾಲಾಗಿರುತ್ತಿತ್ತು. ಅಷ್ಟೇ ಅಲ್ಲ ಅವರೆಲ್ಲ ನಿಧಾನಕ್ಕೆ ಪುಸ್ತಕ ಆರಿಸಿಕೊಳ್ಳುವಾಗ ನನ್ನ ಸರದಿ ಬರುವಾಗ ಬೆಲ್ ಹೊಡೆಯುವ ಸಮಯ ಕೂಡ ಆಗಿರುತ್ತಿತ್ತು. ಕೈಗೆ ಸಿಕ್ಕ ಪುಸ್ತಕ ತೆಗೊಂಡು ಬರುತ್ತಿದ್ದೆ. ಆದೊಂದು ದಿನ ಹೇಗೋ  ನನಗೆ ನ್ಯಾನ್ಸಿ ಡ್ರೂ  ಪುಸ್ತಕ ಅದು ಹೊಸತು ಸಿಕ್ಕೇ ಬಿಡ್ತು. ಖುಷಿಇಂದ ಬೀಗಿದ್ದೆ ಬೀಗಿದ್ದು. ಇದನ್ನು ನೋಡ್ದ ಕೆಲವು ಸಹಪಾಠಿಗಳು ' ನಿನ್ನ ಓದು ಮುಗಿದ ಮೇಲೆ ನನ್ನ ಜತೆ ಎಕ್ಸ್ಚೇಂಜ್ ಮಾಡು ಅಂದರು. ನಾನು ಸರಿ ಅಂತ ಓದು ಮುಗಿಸಿ ಒಬ್ಬಳಿಗೆ ಕೊಟ್ಟೆ. , ಅವಳು ಓದಿ ನನಗೆ ಹೇಳದೆ ಇನ್ನೊಬ್ಬಳಿಗೆ ಕೊಟ್ಟಳು. ಇದಾಗಿದ್ದು ಹತ್ತನೇ ತರಗತಿಯಲ್ಲಿ. ಕೊನೆಗೆ ಮುಂದಿನ ಲೈಬ್ರರಿ ಪಿರಿಯಡ್ ಬಂದಾಗ ನನ್ನ ಪುಸ್ತಕ ಯಾರು ಎರವಲು ಪಡೆದಿದ್ದು ಅಂತ ಗೊತ್ತಾಗಲೇ ಇಲ್ಲ. ಅಷ್ಟರೊಳಗೆ ನಮಗೆ ೧೦ ಕ್ಲಾಸಿನ ಪರೀಕ್ಷೆಯ ಹಾಳ್ ಟಿಕಟ್ ಕೊಡಲು ಆರಂಭಿಸಿದರು. ನನಗೆ ಮಾತ್ರ ಆಫಿಸ್ ರಮ್ ಗೆ ಕಳುಹಿಸಿದರು. ಅಲ್ಲಿ ಹೆಡ್ ಮಿಸ್ 'ನೀನು ಲೈಬ್ರರಿ ಪುಸ್ತಕ ವಾಪಸ್ ಮಾಡಿಲ್ಲ , ೧೫೦ ರು ಆ ಪುಸ್ತಕದ ಮುಖಬೆಲೆ  ಫೈನ್ ಕಟ್ಟ ಬೇಕು' ಅಂದರು. ನಾನು ಮನೆಗೆ ಬಂದು ಅಮ್ಮನಿಗೆ ಹೀಗಹೀಗೆ ಆಯಿತು ಅಮ್ಮ ಅಂದೆ. ಅಮ್ಮ ಅಪ್ಪನಿಗೆ ಹೇಳಿದರು. ನಾನು ಅಪ್ಪನ ಬಳಿ ಮಾತಾಡುತ್ತಿದ್ದುದ್ದೇ ಕಮ್ಮಿ. ಅಪ್ಪ 'ಪರೀಕ್ಷೆಗೆ ಕೂರೋದೇ ಬೇಡ, ಯಾಕೆ ಲೈಬ್ರರಿಯಿ ಪುಸ್ತಕ ಓದಬೇಕಿತ್ತು  ?' ಅಂತ ಹೇಳಿ ಬಿಟ್ಟರು. ಅಪ್ಪನಿಗೆ ನಾವ್ಯಾರು ಮಕ್ಕಳು ಕಥೆ ಪುಸ್ತಕ ಓದುತ್ತಿದ್ದುದ್ದು ಹಿಡಿಸುತ್ತಿರಲಿಲ್ಲ. ಅಪ್ಪ ಸ್ವತಃ: ತುಂಬಾ ಪುಸ್ತಕ ನಾವೆಲ್ ಗಳನ್ನೂ ಓದುತಿದ್ದರು. ಒಳ್ಳೆಯ ಕಲೆಕ್ಷನ್ ಕೂಡ ಇತ್ತು.   ಆದರೂ...  ನಾನು ತುಂಬಾ ಸಂಕಟ ಪಟ್ಟೆ  , ಏನಪ್ಪಾ ಮಾಡೋದು ಅಂತ.  ಸುಮ್ಮನಾದೆ. ದಿನ ನಿತ್ಯದಂತೆ ಶಾಲೆ ಹೋಗಿ ಬರುತ್ತಿದ್ದೆ, ಫೈನ್ ಬಗ್ಗೆ ಸೊಲ್ಲೆತ್ತುತ್ತಿರಲಿಲ್ಲ. ಕೊನೆಗೆ ಶಾಲೆಯಿಂದ ಅಪ್ಪನಿಗೆ ಲೆಟರ್ ಹೋಗಿದ್ದು ಮಾತ್ರವಲ್ಲ, ಶಾಲೆಯಿಂದ ಒಂದು ದಿನ ಅರ್ಧದಲ್ಲೇ ಮನೆಗೆ ಕಳುಹಿಸಿಬಿಟ್ಟರು.  ಅಪ್ಪ ನಿಗೆ ಕೆಂಡಾಮಂಡಲ ಸಿಟ್ಟು ಬಂದು, ಅಮ್ಮನ ಕೈಗೆ ದುಡ್ದು  ಕೊಟ್ಟು, ಅಮ್ಮ ಅದನ್ನು ನನಗೆ ರವಾನಿಸುವಾಗ ತಲೆಗೆ ನೋವಾಗುವಂತೆ ಮೊಟಕಿದ್ದು ನೆನಪಿಸಿಕೊಂಡರೆ   ಈಗಲೂ ಮೈ ಮೇಲೆ ಗುಳ್ಳೆ ಬರುತ್ತೆ. ಆದರೂ ನನಗೆ ಬೇಜಾರು ಒಂದೇ ವಿಷಯದ್ದು ಯಾವ ಸಹಪಾಠಿಗೆ ನಾನು ಪುಸ್ತಕ ಕೊಟ್ಟಿದ್ದೇನೋ ಅವಳು ಅದನ್ನು ನನಗೆ ಕೊಡಬೇಕಿತ್ತು . ಶಾಲೆಯಲ್ಲೂ ನನಗೆ ಸ್ನೇಹಿತರು ಅಂತ ಯಾರು ಇರಲಿಲ್ಲ, ಯಾರ ಸುದ್ದಿಗೂ ನಾನು ಹೋಗುತ್ತಿರಲಿಲ್ಲ, ಚೆನ್ನಾಗಿ ಸಿಹಿ ಮಾತಾಡಿ ಪುಸ್ತಕ ತೆಗೊಂಡು ವಾಪಸ್ ಕೊಡಲೇ ಇಲ್ಲ ಆ ಮುದ್ದು ಮುಖದ ಚೆಂದದ ಹುಡುಗಿ. 'ನನ್ನಿಂದ ಆ ಪುಸ್ತಕ ಕಳೆದು ಹೋಯ್ತು ' ಅಂತ ಆಕೆ ನಿಜ ಹೇಳಿದ್ದರು ನನಗೆ ಸಾಕಿತ್ತು. ನಾನು ೧೦ ಕ್ಲಾಸ್ ನ ಪರೀಕ್ಷೆ ಬರೆಯುವುದು ಅಷ್ಟು ಮುಖ್ಯ ಅನಿಸಲೇ ಇಲ್ಲ.
ಈಗಲೂ ಎರವಲು ಪಡೆದ ಪುಸ್ತಕ ವಾಪಸ್ ಕೊಡುವ ತನಕ ನನಗೆ ಹಿಂಸೆಯಾಗುತ್ತೆ.