January 29, 2014

...................ಸುಮ್ ಸುಮ್ನೆ!


ಮೊನ್ನೆ ಬೈ ಯಾಂಡ್ ಸೇವ್ (buy&save) ಗೆ ಹೋಗಿದ್ದೆ ಮನೆಯ Grocery ಸಾಮಾನಿನ ಲಿಸ್ಟ್ ಕೊಡಲು. ಅದರಲ್ಲಿ ಅಕ್ಕಿ ಯಾವುದು ಬೇಕು ಅಂತ ನಮೂದಿಸಿರಲಿಲ್ಲವಾದ್ದರಿಂದ ಅದನ್ನು ಹೇಳಲು ಕಾಯ್ತಾ ಇದ್ದೆ. ಆಗ ಅಂಗಡಿ ಮೇಲೆಯೇ ಇರುವ ಪೇಯಿಂಗ್ ಗೆಸ್ಟ್ ನಲ್ಲಿರುವ ಹುಡುಗಿ ಎರಡು ಪ್ಲ್ಯ್ಲಾಸ್ಟಿಕ್ ಕಟ್ಟು ಹಿಡಿದುಕೊಂಡು ಬಂದಳು. ಕೆಲಸಕ್ಕೆ ಹೋಗುತ್ತಾಳೆ ಆ ಹುಡುಗಿ. ವಾರ್ಯಾಂತಕ್ಕೆ ಫ್ರೆಂಡ್ಸ್ ಗೆ ಪಾರ್ಟಿ ಗೆ ಕರೆದಿದ್ದಳು. ಆದರೆ ತೊಗರಿ ಬೇಳೆ. ಕಡಲೆ ಬೇಳೆಯ confusion ಅಂತೆ ಆಕೆಗೆ. ಅಂಕಲ್ ಇದರಲ್ಲಿ ಕಡ್ಲೇ ಬೇಳೆ, ತೊಗರಿ ಬೇಳೆ ಯಾವುದೆಂದು ಕೇಳಿ ಮಾರ್ಕರ್ ಪೆನ್ ನಿಂದ ಒಂದು packet ಮೇಲೆ dal fry daal ಅಂತ ಬರೆದೊಕೊಂಡು ಹೋದಳು. ಅಷ್ಟರಲ್ಲೇ ಸುಮಾರೆಲ್ಲ ಮಾತನ್ನು ಹೇಳಿ ಹೋದಳು. ಅವಳು ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸವಂತೆ. ಅಮ್ಮ ನ ಜತೆ ಇದ್ದಾಗ ಅಮ್ಮ ಅವಳಿಗೆ ಅಡಿಗೆ ಕಲಿಸಲು ಮುಂದಾದಾಗ 'ನನಗೆ ಇಂಟರೆಸ್ಟ್ ಇಲ್ಲ ಅಡಿಗೆ ಮಾಡಲು, ಮತ್ತು ಹೇಗು ನೀ ಇದ್ದಿಯಾ, ನಾ ಯಾಕೆ ಕಲೀ ಬೇಕು ಅಂದಳಂತೆ, ಅಷ್ಟೆ ಅಲ್ಲ, 'ನಾನಂತು ಅಡಿಗೆ ಗಿಡಿಗೆ ಮಾಡಿ ನನ್ನ ಟೈಮ್ ವೇಸ್ಟ್ ಮಾಡಲ್ಲ, ಮಧ್ಯಾಹ್ನ ಹೇಗೂ ಕ್ಯಾಂಟೀನ್ ನಲ್ಲೇ ಒಳ್ಳೆಯ ಊಟ ಸಿಗ್ಗುತೆ, ಸಬ್ಸಿಡೈಸ್ಡ್ ರೇಟ್ ನಲ್ಲಿ, (ಅವರ ಸಂಬಳದಿಂದಲೇ ಕಟ್ ಆಗುತ್ತಂತೆ), ಮತ್ತೆ ರಾತ್ರಿಗೆ ಹಣ್ಣು ತಿನ್ನುತ್ತೇನೆ ಅಥವಾ ಹೋಟಲ್ ನಿಂದ ತರಿಸಿ ತಿನ್ನುತ್ತೇನೆ ಅಂತ ಅಮ್ಮನ ಬಾಯಿ ಮುಚ್ಚಿಸಿದಳಂತೆ. ಅದಕ್ಕೆ ಅಂಗಡಿಯವ 'ಹಾಗೇ ಮಾಡಬೇಕಿತ್ತು ಹೋಟಲ್ ನಿಂದ ತಂದು ಪಾರ್ಟಿ ಮಾಡಬಹುದಿತ್ತಲ್ಲಮ್ಮ' ಅಂದಿದ್ದಕ್ಕೆ ಇಲ್ಲ ಅಂಕಲ್ ಈಗೀಗ ಹೆಲ್ತ್ ತುಂಬ ಅಪ್ಸೆಟ್ ಆಗಿ, ಡಾಕ್ಟರ್ ಅವರು ಮನೆಯಲ್ಲೆ ಸಿಂಪಲ್ ಅಡಿಗೆ ಮಾಡಿ ತಿನ್ನಿ ಅಂದಿದ್ದಾರೆ' ಅಂತ ಒಂದು ಲೆಕ್ಚರ್ ಕೊಟ್ಟಳು. ನಾನು ನನಗೆ ಬೇಕಾಗಿರುವ ಅಕ್ಕಿ ಯಾವುದೆಂದು ಹೇಳಿ ಅಲ್ಲಿಂದ ಬ್ಯಾಂಕ್ ಕಡೆ ಹೊರಟೆ. 
ಅಲ್ಲಿಗೆ ಹೋದಾಗ ಫ್ಲ್ಯಾಶ್ ಆಯ್ತು, 'ಅರೇ, ಮಕ್ಕಳಿಗೆ ಬ್ಯಾಂಕಿಂಗ್ ನ ವಿಷಯ ಏನೇನೂ ಗೊತ್ತಿಲ್ಲವಲ್ಲ' ಅಂತ. ಮಾಲವಿಕ ಕೆಲಸಕ್ಕೆ ಹೋಗುತ್ತಿದ್ದಾಗ, ಬ್ಯಾಂಕ್ ನವರು ಖುದ್ದು ಅವಳು ಕೆಲಸ ಮಾಡುವಲ್ಲಿ ಬಂದು ಅವಳ ಖಾತೆ ಎಲ್ಲ ಅವರೇ ಮಾಡಿ, ಪಾಸ್ ಬುಕ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅವಳ ಕೈಗೆ ತಂದು ಕೊಟ್ಟಿದ್ದರು ಆದ್ದರಿಂದ ಅವಳಿಗೆ ಖಾತೆ ತೆರೆಯುವ ಫಾರ್ಮ್ ಮೇಲೆ ಸೈನ್  ಹಾಕುವ ಕೆಲಸ ಮಾತ್ರ ಇತ್ತು.
ಆದರೆ ಈ ವರ್ಷ ನಿಹಾರಿಕಾಗೆ ಕಾಲೇಜ್ ನ ವಿವಿಧ competition ಮತ್ತು ಒಳ್ಳ್ಳೆಯ ಮಾರ್ಕ್ಸ್ ಪಡೆದಿದಕ್ಕಾಗಿ  ಬಹಳಷ್ಟು ಕ್ಯಾಶ್ ಬಹುಮಾನ ಸಿಕ್ಕಿದೆ, . ಅದನ್ನು ಅವಳಿಗೆ ಬ್ಯಾಂಕ್ ಖಾತೆ ತೆರೆದು ಅದರಲ್ಲಿ ಹಾಕಲು ಹೇಳಿದ್ದೆ. ಅವಳೂ ಹೂಂ ಅಂದಿದ್ದಳು ಆದರೆ ಟೈಮ್ ಆಗಿರಲಿಲ್ಲ. ಒಂದು ದಿನ ಅವಳಿಗೆ ಕಾಲೇಜ್ ಲೇಟ್ ಇತ್ತು, ನಾನು ಫಾರ್ಮ್ ಮೊದಲೇ ತಂದು ಇಟ್ಟಿದ್ದೆ. ಅದನ್ನು ಅವಳು ತುಂಬಿ, ಅವಳಿಗೆ ಹೇಳಿದೆ, 'ನಾನು ಬರುತ್ತೇನೆ ನಿನ್ನ ಜತೆ, ಆದರೆ ನೀನೆ ಕೇಳಿ ಎಲ್ಲ ಮಾಡಬೇಕು' ಅಂತ. ಅರ್ಥ ಆಗದಿದ್ದಲ್ಲಿ ನಾನು ಹೆಲ್ಪ್ ಮಾಡುತ್ತೇನೆ'. ಅಲ್ಲಿ ಹೋದಾಗ ನನ್ನ ತರಹ ಇನ್ನೊಬ್ಬ ಅಮ್ಮ ತಮ್ಮ ದೊಡ್ಡ ಮಗನೊಂದಿಗೆ ಬಂದು ಅವನಿಗೆ ಕಲಿಸಿದ್ದು ಅರ್ಥಾ ಆಗದಿದ್ದಾಗ ಅವನ ಮೇಲೆ ಸಿಡುಕುತ್ತ ಇದ್ದದ್ದನ್ನು ನೋಡಿ ನಾನು ನಗುತ್ತ ಇದ್ದೆ. ನಿಹಾ ಅಲ್ಲೇ ಎಲ್ಲ ಕೇಳಿಕೊಂಡು ಅವಳ ಖಾತೆ ತೆರೆಸಿ ಪಾಸ್ ಬುಕ್ ಕೂಡ ಪಡೆದು ಕೊಂಡು, 'ಯೆಸ್ ಐ ಡಿಡ್ ಇಟ್' ಅಂತ ಅವಳ ಕಾಲೇಜ್ ಕಡೆ ಹೋದಳು ನಾನು ಮನೆಗೆ ವಾಪಸ್ ಆದೆ.
ಇವತ್ತು ಬೆಳಿಗ್ಗೆ ರಾಯರಿಗೆ ಅವರ ಫೇವ್ ಲಿನೆನ್ ಶರ್ಟ್ ಬೇಕಿತ್ತು. ಆದರೆ ಇಸ್ತ್ರಿಗೆ ಕೊಟ್ಟಗಲೋ ಏನೋ ಅದರ ಎರಡು ಗುಂಡಿ ಮಾಯ. ಆ ತರಹದ ಗುಂಡಿ ನನಗೆ ಸಿಕ್ಕಿರಲಿಲ್ಲ. ಅದಕ್ಕೆ ನಿನ್ನೆ ಸಂಜೆ ಅದಕ್ಕೆ ಮ್ಯಾಚ್ ಆಗುವ ಬೇರೆ ತರಹದ ಗುಂಡಿಗಳನ್ನು  ತ್ತಂದ್ಗು, ಆ ಶರ್ಟ್ ಗಿರುವ ಹಳೆಯ ಗುಂಡಿಗಳನ್ನು ತೆಗೆದುಹಾಕಿ, ಹೊಸ ಗುಂಡಿ ಹಚ್ಚಿದೆ. ನಿಹಾ ನೋಡ್ತಾ, 'ಅರೇ ನನಗೆ ಬಟನ್ ಹೊಲೀಲಿಕ್ಕೆ ಬರಲ್ಲ' ಅಂತ ಹೇಳಿದಳು. ಹೌದಲ್ಲವಾ ಈಗೀನ ಮಕ್ಕಳಿಗೆ ಗುಂಡಿ, ಹುಕ್ಕ್ ಹೊಲೆಯುವುದು ಮುಂತಾದ್ದು ಬರುವುದೇ ಇಲ್ಲವಲ್ಲ? ಬಟ್ಟೆ ಹರಿದರೆ, ಹಳೆಯದಾದರೆ, ಗುಂಡಿ ಕಿತ್ತು ಹೋದರೆ ಅದನ್ನು ಬಿಸಾಕುವುದೆ. (ನಮ್ಮ ಮನೆಯಲ್ಲಿ ನನಗೆ ಮಾತ್ರವಲ್ಲ ನನ್ನ ತಮ್ಮಂದಿರಿಗೂ, ಶ್ರೀಕಾಂತ ಗೂ ಹೊಲಿಗೆ ಹಾಕುವುದು, ಅಡಿಗೆ ಮಾಡುವುದು ಎಲ್ಲ ಬರುತ್ತೆ.)
ಮನೆಯೆದುರಿಗೆ ರಂಗೋಲಿ ಕೂಡ ಅಮ್ಮಂದಿರೇ ಹಾಕುತ್ತಾರೆ ವಿನ: ಯಾವುದೇ ಕಾಲೇಜು ಹುಡುಗಿ ಬೆಳಿಗ್ಗೆ ಎದ್ದು ರಂಗೋಲಿ ಹಾಕುವುದನ್ನು ನಾನು ಇದುವರೆಗೆ ನೋಡಿಲ್ಲ at least ನಾವಿರುವ ಕಡೆ. ಮತ್ತೆ ನಮ್ಮ ಮನೆಯ ಬಳಿ ಹಲವಾರು ಮನೆಗಳಲ್ಲಿ ಮನೆ ಕೆಲಸಕ್ಕೆ ಬರುವವಳೆ ರಂಗೋಲಿ ಹಾಕುತ್ತಾರೆ. :-) ಹಾಗೆ ಹೂ ಮಾಲೆ ಕಟ್ಟುವುದು, ಹಳೇ ಕಾಲದ ತಿಂಡಿ, ಅಡುಗೆ ಮಾಡುವುದು ಮುಂತಾದ್ದು ಕೂಡ. ದುಡ್ಡು ಕೊಟ್ಟರೆ ಎಲ್ಲ ಹೊರಗಿನಿಂದಲೇ ಸಿಗುತ್ತದೆ. ಇತ್ತೀಚಿಗಂತು ಹಬ್ಬದ ಅಡುಗೆ ಕೂಡ ಮೊದಲೇ ಬುಕ್ ಮಾಡಿ , ಮನೆಗೆ ತರಿಸಿಕೊಳ್ಳುವವರೂ ಇದ್ದಾರೆ.  ಸಮಯ ಹೇಗೆ ಬದಲಾಗ್ತಾ ಇದೆ ಅಲ್ಲವಾ??
ಓದಿನ ಜತೆ ದೈನಂದಿನ ಜೀವನಕ್ಕೆ ಬೇಕಾದ ಅಗತ್ಯ ಲೈಫ್ ಸ್ಕಿಲ್ಸ್ ಕೂಡ ಕಲಿಸಬೇಕೆಂದು/ತಿಳಿದಿರಬೇಕು ಅಂತ ನನ್ನ ಅನಿಸಿಕೆ...ಕಾರ್ಪೆಂಟರಿ, ಪ್ಲಂಬಿಂಗ್, ಎಲೆಕ್ಟಿಕಲ್ಸ್ ,pottery ವಗೈರೆ...

:-)

January 21, 2014

ಹಲಸು ಪುರಾಣ


("ಇವತ್ತು ಅಡುಗೆ ಯಾವುದರದು?" ಕೇಳಿದರು ಬಾಟನಿ ಪ್ರೊಫೆಸರರು.


"ಆರ್ಟೊಕಾರ್ಪಸ್ ಆಲ್ಟಿಲಿಸ್‌ನ ಹುಳಿ ಮಾಡಿದ್ದೇನೆ. ಜೊತೆಗೆ ನಂಚಿಕೊಳ್ಳಲಿಕ್ಕೇಂತ ಆರ್ಟೊಕಾರ್ಪಸ್ ಆಲ್ಟಿಲಿಸ್‌ದೇ ಪೋಡಿ(ಬಜ್ಜಿ) ಸಹ ಮಾಡಿದ್ದೇನೆ" ಎಂದರು ಬಾಟನಿ ಪ್ರೊಫೆಸರರ ಪತ್ನಿ, ತನ್ನ ಎಂದಿನ ಸ್ಟೈಲ್‌ನಲ್ಲಿ!



ಅವರ ಮನೆಯಲ್ಲಿ ದೈನಂದಿನ ಮಾತುಕತೆಯಲ್ಲಿ ಸಸ್ಯ/ಪ್ರಾಣಿಗಳ ಪ್ರಸ್ತಾಪ ಬಂದಾಗಲೆಲ್ಲ ಅದನ್ನು ಸಸ್ಯಶಾಸ್ತ್ರೀಯ/ಪ್ರಾಣಿಶಾಸ್ತ್ರೀಯ ಹೆಸರುಗಳನ್ನು ಬಳಸಿಯೇ ಹೇಳುವ ರೂಢಿ. ಹಾಗಾಗಿ ಪ್ರೊಫೆಸರರ ಪತ್ನಿ ಹೇಳಿದ "ಆರ್ಟೊಕಾರ್ಪಸ್ ಆಲ್ಟಿಲಿಸ್‌ (Artocarpus Altilis) ಬೇರೇನಲ್ಲ, ಬೇರುಹಲಸು ಅಂತಲೂ ಕರ್ನಾಟಕದ ಕೆಲವೆಡೆ ಕರೆಯಲ್ಪಡುವ "ದಿವಿ ಹಲಸು"! 

ಕರಾವಳಿ ಮತ್ತು ಮಲೆನಾಡಿನ ಜನರಿಗೆ ಅತ್ಯಂತ ಪರಿಚಿತವೂ ಪ್ರಿಯವೂ ಆದ ತರಕಾರಿ. ಹಿಂದೆಲ್ಲ ಮದುವೆ-ಮುಂಜಿ ಮುಂತಾದ ಸಮಾರಂಭಗಳು ಮನೆಗಳಲ್ಲೇ ನಡೆಯುತ್ತಿದ್ದ ಕಾಲದಲ್ಲಿ ಔತಣಕ್ಕೆ ದಿವಿಹಲಸಿನ ಹುಳಿ ಮಾಡಿದರೆ ಮದುವೆಯೂಟದ ಘನತೆ ಒಂದು ಲೆವೆಲ್ ಹೆಚ್ಚು ಎನ್ನುವಷ್ಟರ ಮಟ್ಟಿಗೆ ದಿವಿಹಲಸಿಗೆ ವಿಶೇಷ ಮಾನ್ಯತೆ ಇರುತ್ತಿತ್ತು. ಅಷ್ಟಾಗಿ ಆ ದಿವಿಹಲಸು ಮದುವೆಮನೆಯದೇ ಅಥವಾ ನೆರೆಕೆರೆಯವರ ಹಿತ್ತಿಲಲ್ಲಿ ಬೆಳೆದದ್ದೇ ಆಗಿರುತ್ತಿತ್ತು. ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಹುಟ್ಟಿಬೆಳೆದವರು ಈಗ ಪ್ರಪಂಚದ ಯಾವ ಮೂಲೆಯಲ್ಲಿದ್ದರೂ [ಭೂಮಿ ಗೋಲಾಕಾರವಾಗಿದ್ದರೆ ’ಮೂಲೆ’ ಎಲ್ಲಿಂದ ಎನ್ನುವುದೊಂದು ಜಿಜ್ಞಾಸೆ. ಆ ತರ್ಕ ಸದ್ಯಕ್ಕೆ ಇಲ್ಲಿ ಬೇಡಾ :-)] ತಂತಮ್ಮ ಬೇರುಗಳನ್ನು ನೆನಪಿಸಿಕೊಳ್ಳುವಾಗ ಬೇರುಹಲಸು (ದಿವಿಹಲಸು) ತನ್ನ ಮಾನ್ಯತೆಯನ್ನು ಒಂಚೂರೂ ಕಳಕೊಂಡಿರುವುದಿಲ್ಲ.

ನಿನ್ನೆ ಇಲ್ಲಿ ವಾಷಿಂಗ್ಟನ್‌ನ ಉಪನಗರದಲ್ಲಿರುವ "ಗ್ರ್ಯಾಂಡ್ ಮಾರ್ಟ್" ಕೊರಿಯನ್ ಗ್ರೋಸರಿ ಸ್ಟೋರ್‌ನಲ್ಲಿ "Bread fruit. Special sale. $1.49 per pound" ಬೋರ್ಡ್‌ನ ಪಕ್ಕದಲ್ಲಿ ಹಚ್ಚಹಸುರು ಬಣ್ಣದ ದಿವಿಹಲಸನ್ನು ನೋಡಿದಾಗ ಅದಕ್ಕೆ ಮಾನ್ಯತೆ ಕೊಟ್ಟು ಒಂದು ದಿವಿಹಲಸನ್ನು ನಾನು ಕೊಂಡುತಂದದ್ದಾದರೂ ಮೇಲೆ ವಿವರಿಸಿದ ಮಾನ್ಯತೆಯಿಂದಲೇ. ಕರ್ನಾಟಕದ ಕರಾವಳಿಯಲ್ಲಿ ಹುಟ್ಟಿಬೆಳೆದ ನನಗೂ ದಿವಿಹಲಸು ಎಂದರೆ ದಿವ್ಯವಾದ ತರಕಾರಿ. ಇಲ್ಲಿ ಅಮೆರಿಕದಲ್ಲಿ ಅದರ ಹೆಸರು Bread fruit ಎಂದು. ಇದೇ ಮೊದಲೇನಲ್ಲ ಬ್ರೆಡ್ ಫ್ರುಟ್‌ಅನ್ನು ಇಲ್ಲಿನ ಕೋರಿಯನ್ ಗ್ರೋಸರಿಯಂಗಡಿಯಲ್ಲಿ ನಾನು ಗಮನಿಸಿದ್ದು. ಆದರೆ ಪ್ರತಿಸಲವೂ ಅದು ಬಾಡಿಹೋಗಿ ಕಂದುಬಣ್ಣಕ್ಕೆ ತಿರುಗಿ ಕೊಳೆತುಹೋಗಿದೆಯೋ ಎಂಬಂಥ ರೂಪದಲ್ಲೇ ಇರುತ್ತಿತ್ತಾದ್ದರಿಂದ ಮತ್ತು ತುಂಬಾಹಿಂದೆ ಒಮ್ಮೆ ತಕ್ಕೊಂಡುತಂದಿದ್ದು ಕಡಿದುನೋಡುವಾಗ ಒಳಗೆ ಮೆದುಮೆದು ಪಿಷ್ಟದಂತಾದ್ದು ವಾಕರಿಕೆ ತರುವಂತಿದ್ದದ್ದರಿಂದ ಆಮೇಲೆ ಯಾವತ್ತೂ ಬ್ರೆಡ್‌ಫ್ರುಟ್‌ನ ಉಸಾಬರಿಗೆ ಹೋಗಿರಲಿಲ್ಲ. ಹಾಗಿರಲು ನಿನ್ನೆ "ನಿತ್ಯಹರಿದ್ವರ್ಣವನದ ತೇಗಗಂಧತರುಗಳಲ್ಲಿ" ಎಂಬಂತೆ ಹಚ್ಚಹಸುರು ಬಣ್ಣದಿಂದ ನಳನಳಿಸುತ್ತಿದ್ದ ಬ್ರೆಡ್‌ಫ್ರುಟ್ ಮನಸೆಳೆಯಿತು. "ಇದು ನಿಜವಾಗಿಯೂ ನಮ್ಮೂರಿನ ದಿವಿಹಲಸಿನಂತೆಯೇ ಇದೆ!" ಎಂಬ ಸ್ವ-ಶಿಫಾರಸಿನಲ್ಲಿ ತೇರ್ಗಡೆಯಾಯ್ತು. ಶಾಪಿಂಗ್‌ಕಾರ್ಟ್‌ನಲ್ಲಿ ಸೇರಿಕೊಂಡಿತು. ಅಡುಗೆಯೂ ಆಯ್ತು. ವಿಶೇಷ ಅಡುಗೆ ಎಂದಮೇಲೆ ಫೇಸ್‌ಬುಕ್ ಗೋಡೆಗೂ ರುಚಿ ಗೊತ್ತಾಗಲೇಬೇಕಲ್ವಾ, ಅದಕ್ಕೋಸ್ಕರ ಫೇಸ್‌ಬುಕ್ ಗೋಡೆಗೂ ಹೋಯಿತು! Smile with tongue out)



ಕಂಸದಲ್ಲಿರುವ ಪೋಸ್ಟ್ ಶ್ರೀವತ್ಸ ಜೋಶಿಯವರದ್ದು

ಮೇಲಿನ ಪ್ರೊಫೆಸರ್ ರ ರಂತೆ ನಮ್ಮ ರಾಯರಿಗೆ ತರಕಾರಿ, ಗಿಡ ಮರಗಳ scientific ಹೆಸರು ಉದುರಿಸುವ ಚಟ ಇದೆ(after all MSc Agri ನೋಡಿ). ಆದ್ದರಿಂದ ಆರ್ಟ್ ಸ್ ಓದಿರುವ ನನಗೂ ಕೆಲವು ಅಂದ್ರೆ ಮನೆಯಲ್ಲಿ ಬಳಕೆ ಮಾಡುವ ಹೆಚ್ಚಿನ ತರಕಾರಿ, ಹಣ್ಣು ಗಳ ವೈಜ್ಞಾನಿಕ ಹೆಸರುಗಳು ಗೊತ್ತು.
ದೀವಿ ಹಲಸು/ ಜೀ ಗುಜ್ಜೆ/  bread Fruit, (ಕೋಂಕಣಿಯಲ್ಲಿ ಜೀವೆ ಕಡ್ಗಿ) ನಾವು ಮುಂಬೈನಲ್ಲಿದ್ದಾಗ ಬಳಸಿಯೇ ಇರಲಿಲ್ಲ. ಮದುವೆಯಾದ ಬಳಿಕ ತೀರ್ಥಹಳ್ಳಿಯಲ್ಲ್ಲಿ, ಮಂಗಳೂರಿನಲ್ಲಿ, ಕೆಲವು ಸಮಾರಂಭಗಳಲ್ಲಿ ತಿಂದು ಇಷ್ಟ ಪಟ್ಟಿದ್ದಿದ್ದೆ. ಆಮೇಲೆ ನನ್ನ ಬ್ರೆಡ್ ಫ್ರುಟ್ ಪ್ರೀತಿ ಬೆಳ್ತಂಗಡಿಗೆ ಹೋದ ಮೇಲೆ. ಅಲ್ಲಿ ತರಕಾರಿ ಅಂಗಡಿಯಲ್ಲಿ ಯಾವಾಗಲೂ ಸಿಗುತ್ತಿತ್ತು. ಒಂದು ಸಲ ನಾನು ಹೀಗೆ ದೊಡ್ಡದೊಂದು ಜೀ ಗುಜ್ಜೆ ಕೈ ನಲ್ಲಿ ಹಿಡಿದುಕೊಂಡು ಬರಬೇಕಾದ್ರೆ, ನಮ್ಮ ಮನೆಯ ಮಾಲೀಕಳಾದ ಸಿಂಥಿಯಾ, 'ಮಾಲ್ತಿ ಕಿತ್ಯಾಕ್ ಮಾರ್ಕೆಟ್ ತೂನ ಹಾಡಿಲೇ? (ಯಾಕೆ ಮಾರುಕಟ್ಟೆಯಿಂದ ತಂದಿದ್ದು?) ನಮ್ಮ ಮನೆಯ ಹಿಂದುಗಡೆ ಎಷ್ಟು ದೊಡ್ಡ ಮರ ಇದೆ? ಸುಮ್ಮನೆ ಬಿದ್ದು ಹಾಳಾಗಿ ಹೋಗ್ತಾ ಇವೆ ಜೀ ಗ್ಗುಜ್ಜೆ. ನನಗೆ ಅದನ್ನು ತಿಂದರೆ ಕಾಲು ಗಂಟು ನೋವು ಶುರು ಆಗುತ್ತೆ ಅದಕ್ಕೆ ನಾವು ಅದನ್ನು ಬಳಸುವುದಿಲ್ಲ' ಅಂತ ಹೇಳಿದರು. ಈ ಮೊದಲೇ ನಾನು ಆ ಮರ ನೋಡಿದ್ದೆನಾದರು ನನಗೆ ಅವರನ್ನು ಕೇಳಿ ಅದನ್ನು ತೆಗೆದುಕೊಳ್ಳಲು ಮುಜುಗರ. ಅವರೇ ಒತ್ತಾಯ ಮಾಡಿ ಹೇಳಿದ ಮೇಲೆ ವಾರಕ್ಕೆ ಮೂರು ನಾಲ್ಕು ಸಲ, ಅಲ್ಲದೇ ಮನೆಗೆ ಬರುವ ಶ್ರೀಕಾಂತ ಕಲ್ಲೀಗ್ಸ್ ಗೆಲ್ಲ ಜೀ ಗುಜ್ಜೆ ವೈವಿಧ್ಯಮಯ ಪ್ರಿಪರೇಶನ್  ಮಾಡಿ ಬಡಿಸಿದ್ದಿದೆ. :-) ಡೀಪ್ ಫ್ರ್ರೈ, ತವಾ ಫ್ರೈ, ರವಾ ಫ್ರೈ ಅಲ್ಲದೆ ನಾವು ಬಳಸುವ ಕಾಳಿನ ಜತೆ ಘಶಿ, ಹಿಂಗು ನೀರಿನ ಘಶಿ ಸಕತ್ತ್ ಆಗುತ್ತೆ.

ಬೆಳ್ತಂಗಡಿ ನಂತರ ಉಜಿರೆಯ ಕೆ.ಟಿ ಗಟ್ಟಿ ಮಾಮನ ಮನೆಯ ಮೇಲೆ ಬಾಡಿಗೆಗೆ ಇದ್ದೆವು. ಅವರ ತೋಟದಲ್ಲೂ ದೊಡ್ಡ ಜೀ ಗುಜ್ಜೆ ಮರ. ಅವರಂತೂ ನಾನ್ ವೆಜ್ ಬದಲಿಗೆ ನಾಜ್ ವೆಜ್ ನ ಮಸಾಲೆ ಬಳಸಿ (ಬೇರೆ ಬೇರೆ ಕಡೆ ಓದುವ ಮಕ್ಕಳು ಮನೆಗೆ ರಜೆಯಲ್ಲಿ ಬಂದಾಗ ಮಾತ್ರ ಅವರ ಮನೆಯಲ್ಲಿ ನಾನ್ ವೆಜ್ ಅಡಿಗೆ ಮಾಡುತ್ತಿದ್ದರು), ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಗಮ್ಮೆನುವ ಪರಿಮಳದೊಂದಿಗೆ ಅವರ ಜೀ ಗುಜ್ಜೆ ಪದಾರ್ಥ ರೆಡಿಯಾಗಿ, 12.30 ಗೆ ಅವರ ಊಟ. ಗಟ್ಟಿ ಮಾಮ ಬೆಳಿಗ್ಗೆ ಬೇಗ ಎದ್ದು ಸ್ವಲ್ಪ ಬರವಣಿಗೆ ಮಾಡಿ, ಆಮೇಲೆ ಬ್ರೆಕ್ ಫಾಸ್ಟ್ ನಂತರ ಅವರ ತೋಟದಲ್ಲಿರುವ ಅನಾನಸು, ತೆಂಗು, ಹಲಸು ಅದಲ್ಲದೇ ವಿವಿಧ ಹೂಗಿಡಗಳನ್ನು tend ಮಾಡುತ್ತಿದ್ದರು. (ಕೆಲದಿನಗಳ ಹಿಂದೆ ಫೋನ್ ಮಾಡಿದ್ದರು: 'ಮಾಲತಿ ಹೇಗಿದ್ದೀರಿ ಎಲ್ಲರೂ? ಯಾಕೋ ಇವತ್ತು ನಿಮ್ಮನ್ನು ತುಂಬಾ ನೆನೆಸಿಕೊಂಡೆ' ಅಂತ ಆಮೇಲೆ ಸುಮಾರು ಹೊತ್ತು ಶ್ರೀಕಾಂತ ಬಳಿ ಮಾತಾಡಿದ್ರು. ಶ್ರೀಕಾಂತ ಸ್ಪೀಕರ್ ಫೋನ್ ನಲ್ಲಿ ನನಗೂ ಅವರು ಮಾತು ಕೇಳಿಸಿವಂತೆ ಮಾಡಿದ್ರು; ಅವರ ಸ್ಟ್ರೋಕ್ ನಿಂದಾಗಿ ಈಗ ಕಂಟಿನ್ಯುಅಸ್ ಆಗಿ ಬರೆಯಾಲಾಗದಿರುವುದು, ಅವರು ಮಗಳ ಬಳಿ ಯು ಎಸ್ ಗೆ ಹೋಗಿ ಹಲವು ದಿನ ಹುಷಾರಿಲ್ಲದೆ ಇದ್ದದ್ದು, ಈ ವರ್ಷ ಕಾಳು ಮೆಣಸಿಗೆ ಬಂಪರ್ ರೇಟ್ ಬಂದಿದ್ದು, ಹಲವು ಮರಗಳನ್ನು ಅದರ ದೇಖಿ ರೇಖಿ ಮಾಡಲಾಗದೆ ಅವನ್ನು ಕತ್ತರಿಸಿ ಮಾರಿದ್ದು..ಇತ್ಯಾದಿ...miss you K T Gatti mama) ಮಧ್ಯಾಹ್ನದ ಊಟದ ನಂತರ ಮೂರು ಗಂಟೆಯ ತನಕ ವಿಶ್ರಾಂತಿ. ಸಂಜೆ ನಮ್ಮ ಮನೆಯೆದುರಿನ ಬಿಸಿಲು ಮಚ್ಚಿನ ಮೇಲೆ ಪಟ್ಟಾಂಗ. ನಾನು ಆಲೂ ಬೋಂಡ, ಜೀ ಗುಜ್ಜೆ ಬೋಂಡ, ನೇಂದ್ರ ಬಾಳೆಹಣ್ಣಿನ ಬೋಂಡಾ, ಮುಂಬೈ ನ ಸ್ಪೆಷಲ್ ಪಾವ್ ಭಾಜಿ ಮುಂತಾದ್ದನ್ನು ಮಾಡಿ, ಮಸಾಲೆ ಟೀಯೊಂದಿಗೆ ಅವರ ಜತೆ ನಾವು ಎಂಜಾಯಿಸುತ್ತಿದ್ದೆವು. ಅವರು ಇಥಿಯೋಪಿಯದಲ್ಲಿದ್ದಾಗಿನ ಕತೆ, ಅಲ್ಲಿನ ಬುಡಕಟ್ಟು ಜನಾಂಗದವರ ಆಹಾರ-ವಿಹಾರ, ಆಚಾರ-ವಿಚಾರ-ಬಗ್ಗೆ ಹಂಚಿಕೊಂಡು, ಅವರ ಉಚ್ಚಾರಗಳನ್ನು ಮಾಡಿ ತೋರಿಸುತ್ತಿದ್ದರು. ಅವರು ಚಿಕ್ಕಂದಿನಲ್ಲಿ ಬಡತನದಿಂದಾಗಿ ಪಟ್ಟ ಪಾಡು, ಅವರು ಜೀವನದಲ್ಲಿ ರೂಢಿಸಿಕೊಂಡ ತತ್ವಗಳು ಇದರ ಬಗ್ಗೆಯೆಲ್ಲ ಹೇಳುವವರು. ನಾನು ಅತೀ ಹೆಚ್ಚು ಆಂಗ್ಲ ಪುಸ್ತಕಗಳನ್ನು ಅವರ ಮನೆಯಿಂದ ಪಡೆದುಕೊಂಡು ಓದಿದರೆ,(ಅವರು ಬರೆದ  ಪುಸ್ತಕ ಆಗ ಒಂದೂ ಓದಿರಲಿಲ್ಲ) :-) ಅವರು ನಮ್ಮ ಮನೆಯಲ್ಲಿನ ಪುಸ್ತಕದ ರಾಶಿ ಕಂಡು ದಂಗು ಬಡಿದಿದ್ದರು. ನಾವು ಅಲ್ಲಿಂದ ಟ್ರಾನ್ಸ್ಫರ್ ಆಗಿ ಬರುವಾಗ ನಮ್ಮಲ್ಲಿನ ಹಲವು ಪುಸ್ತಕ ಅವರಿಗೆ ಕೊಟ್ಟು ಬಂದಿದ್ದೇವೆ. ಎರಡುವರೆ ವರ್ಷ ಅಲ್ಲಿ ಕಳೆದಿದ್ದೇ ಗೊತ್ತಾಗಲಿಲ್ಲ. ಯಶೋದಾ ಆಂಟಿ- ಗಟ್ಟಿ ಮಾಮನ ಹೆಂಡತಿ(ಅವರ ಪುಸ್ತಕದ ಕರಡು ಪ್ರತಿ ಅಚ್ಚುಕಟ್ಟಾಗಿ ಟೈಪಿಸಿ, ಸ್ಪೆಲ್ ಚೆಕ್ ಎಲ್ಲ ಅವರದ್ದೆ) ಮಾಡುವ ಜೀ ಗುಜ್ಜೆ ಮಸಾಲೆ ತುಂಬಾ ರುಚಿಯಾಗಿರುತ್ತಿತ್ತು. ಒಂದೇ ಟೇಸ್ಟ್ ಯಾವಾಗಲೂ. ನಾನೂ ಟ್ರೈ ಮಾಡಿದೆ, ಆದರೆ ಆ ರುಚಿ ನನ್ನ ಪದಾರ್ಥಕ್ಕೆ ಬರಲೇ ಇಲ್ಲ.

ಬೆಳಗಾವಿಯಲ್ಲಿ ಅಮ್ಮ ಮೊದಲಿಗಿದ್ದ ಬಾಡಿಗೆ ಮನೆಯ ಮೇಲೆ ಮೀರಾ ಆಂತಿ ಇದ್ದರು. ಅವರು ಕೆ.ಟಿ ಗಟ್ಟಿಯವರ ಬರಹದ ಕಟ್ಟಾ ಅಭಿಮಾನಿ. ಅವರು ಬರೆದ ಎಲ್ಲ ಪುಸ್ತಕಗಳೂ ಅವರಲ್ಲಿದೆ. ನಾನು ಉಜಿರೆಯಲ್ಲಿ ಕೆ.ಟಿ ಗಟ್ಟಿ ಮಾಮನ ಮನೆಯಲ್ಲಿ ಬಾಡಿಗೆಗಿದ್ದೆನೆಂದು ನನ್ನ ಮೇಲೆ ಸ್ಪೆಷಲ್ ಅಭಿಮಾನ. ಪ್ರತಿ ಸಲ ಅಮ್ಮನ ಮನೆಗೆ ಹೋದಾಗ ಅವರು "ಗಟ್ಟಿಯವರು ಹೊಸ ಪುಸ್ತಕ ಬರೆದಿದ್ದಾರಾ' ಅಂತ ಕೇಳುತ್ತಿದ್ದರು. :-)

ಅಪ್ಪ ಅಮ್ಮ ತಮ್ಮ ತಂಗಿ ನಮ್ಮಲ್ಲಿಗೆ ಬಂದಾಗಲೆಲ್ಲ ಅವರಿಗೂ ಜೀ ಗುಜ್ಜೆಯ ರುಚಿ ಹತ್ತಿಸಿದ್ದೆ. ತಂಗಿ ಈಗ ಯು ಎಸ್ ನಲ್ಲಿರೋದು ಅವಳಿಗೆ Indian Store ನಲ್ಲಿ ಜೀ ಗುಜ್ಜೆ ಸಿಗುತ್ತಂತೆ. ಇತ್ತೀಚಿಗೆ ಅವಳು ಜಮೈಕಾ ಗೆ ಹೋಗಿದ್ದಳು ಸಮ್ಮರ್ ವೆಕೇಶನ್ ಗೆ. ಅಲ್ಲಿ ಅವಳು ಹಣ್ಣಾದ್ದ ಜೀ ಗುಜ್ಜೆ ನೋಡಿ, ಅಲ್ಲಿನ ಜನರರಿಗೆ ಅದನ್ನು ಬಳಸುವ ರೀತಿ ಕೇಳಿದ್ದಳಂತೆ. ಅವರು ಹಣ್ಣಾದ ಜೀ ಗುಜ್ಜೆಯನ್ನು ಕೆಂಡದಲ್ಲಿ ಬಾಡಿಸಿ, ಅದರ ಸಿಪ್ಪೆ ತೆಗೆದು ಅದನ್ನು ಮ್ಯಾಶ್ (mash) ಮಾಡಿ ಜೇನು ತುಪ್ಪದೊಂದಿಗೆ ತಿನ್ನುವುದಂತೆ.

ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಎರಡು ವರ್ಷದ ಹಿಂದೆ ಜೀ ಗುಜ್ಜೆಯ ಗಿಡಗಳನ್ನು ನೆಟ್ಟಿದ್ದೇವೆ.

ಶ್ರೀಕಾಂತ ಹಿಂದಿನ ವರ್ಷ ಇಂಡೋನೇಶಿಯಾ ಗೆ ಹೋದಾಗ ಅಲ್ಲಿಂದ ಜೀ ಗುಜ್ಜೆಯ ಚಿಪ್ಸ್ ತಂದಿದ್ದರು. ತುಂಬಾ ರುಚಿಯಾಗಿತ್ತು. ನಾನೂ ಒಂದು ಸಲ ಟ್ರೈ ಮಾಡಬೇಕು.

ಮಿತ್ರ ಶ್ರೀವತ್ಸ ಜೋಶಿ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಮೇಲಿನ ಪೋಸ್ಟ್ ಮೈಲ್ ನಲ್ಲಿ ಕಳುಹಿಸಿದ್ದರು. ಅದನ್ನು ಓದಿ ನನಗೆ ಇದು ಬರೆಯಬೇಕು ಅನ್ನಿಸಿತು. 
:-)

January 15, 2014

ಸಂಕ್ರಾಂತಿ - 2014

ಎಲ್ಲರಿಗೂ ಹಬ್ಬದ ಶುಭಾಶಯಗಳು

ನನ್ನ windows phone ನಲ್ಲಿ ಮಾಡಿದ ಗ್ರೀಟಿಂಗ್ ಕಾರ್ಡ್.

ಈ ವರ್ಷ ಪೊಂಗಲ್ with a ಸಣ್ಣ twist. ಅಕ್ಕಿಯ ಬದಲು ನವಣೆ (Foxtail millet) ಯೂಸ್ ಮಾಡಿದ್ದೇನೆ.
ಚಿತ್ರದಲ್ಲಿ: ಸಿಹಿ ಪೊಂಗಲ್, ಖಾರದ ಪೊಂಗಲ್, ತಿಳ್ ಗುಳ್, ಕೊಬ್ಬರಿ+ಬೆಲ್ಲ+ ಸಕ್ಕರೆ ಅಚ್ಚು+ ಪುಟಾಣಿ ಮಿಕ್ಸ್, ಕಪ್ಪು ಎಳ್ಳುಂಡೆ (good for health :-))

ಮಾಡುವ ವಿಧಾನಕ್ಕೆ ನನ್ನ ಅಡುಗೆ ಬ್ಲಾಗ್ ಗೆ ಭೇಟಿ ನೀಡಿ

http://malathihatescooking.blogspot.in/
ಹೇಗಿದೆ planಉ??

:-)

January 8, 2014

ಕಿತ್ತೂರು-ಧಾರವಾಡ-ಹುಬ್ಬಳ್ಳಿ

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಟ್ರೈನ್ ರಿಸರ್ವ್ ಆಗಿತ್ತು. ನಾವು ಬೆಳಗಾವಿಯಿಂದ ಹುಬ್ಬಳ್ಳಿ ತನಕ ಗಾಡಿ hire ಮಾಡಿಕೊಂಡಿದ್ವಿ. ಹಾಗಾಗಿ ಕಿತ್ತೂರು, ಧಾರವಾಡ ಹುಬ್ಬಳ್ಳಿಯಲ್ಲಿ ಕೆಲವು ಸ್ಥಳಗಳನ್ನು ನೋಡುತ್ತ ಬಂದ್ವಿ. :-)

ಮೊದಲಿಗೆ ಕಿತ್ತೂರು. ಪರವಾಗಿಲ್ಲ ! ಕೋಟೆಯನ್ನು ಅದರ ಪರಿಸರವನ್ನು ಚೆನ್ನಾಗಿ maintain ಮಾಡಿದ್ದಾರೆ.


ಕಿತ್ತೂರು ಕೋಟೆಯ ಬಗೆಗಿನ ಮಾಹಿತಿ ಓದುತ್ತಿರುವ ರಾಯರು


ಗಟ್ಟಿ ದನಿಯ ಪುಟ್ಟ ಹಕ್ಕಿ








ನಂತರದ ನಮ್ಮ ಸ್ಟಾಪ್ ಧಾರವಾಡದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ . ಅಲ್ಲಿ ಒಳಗಡೆ ಬೇಂದ್ರೆಯವರ ಹಲವಾರು ಕಪ್ಪು ಬಿಳುಪು ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಫೋಟೊ ತೆಗೆಯುವುದು ನಿಷೇಧಿಸಿ ಬೋರ್ಡ್ ಹಾಕಿದ್ದರು. ನಾವು ಚಿತ್ರಗಳನ್ನು ವೀಕ್ಷಿಸುತ್ತಿದ್ದಹಾಗೆ ಹಿನ್ನೆಲೆಯಲ್ಲಿ ಮಂದವಾಗಿ ಬೇಂದ್ರೆ ಯವರ ಕವನಗಳಿಗೆ ರಾಗ ಸಂಯೋಜನೆ ಮಾಡಿದ ಹಾಡುಗಳು ಹೊಮ್ಮುತ್ತಿದ್ದವು. ಅವರ ಕವನಗಳನ್ನು ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಅನುವಾದಿಸಿ ಹಾಕಲಾಗಿತ್ತು.
ನನ್ನ ಕವಿ ಮಿತ್ರರೊಬ್ಬರ ಇಷ್ಟದ ಕವಿ ಬೇಂದ್ರೆಯವರು. ಅವರ ಹಲವು ಪದ್ಯಗಳು ಅವರಿಗೆ ಬಾಯಿಪಾಠ. ಫೋನ್ ಮಾಡಿದಾಗಲೆಲ್ಲ ಕೆಲವು ಸಾಲುಗಳನ್ನು ನನಗೆ ಹೇಳದಿದ್ದರೆ ನನ್ನ ಅವರ ಮಾತುಗಳು ಅಪೂರ್ಣ ಎನಿಸುವಷ್ಟು. ಅವರು ಕೆಳಗಿನ ಸಾಲುಗಳನ್ನು ನನಗೊಮ್ಮೆ ಹೇಳಿದಾಗ, ಶ್ರೀಕಾಂತರ ಲೈಬ್ರರಿಗೆ ದಾಳಿ ಮಾಡಿ ಬೇಂದ್ರೆಯವರ, ಅವರ ಬಗ್ಗೆ, ಅವರ ಕವನಗಳ ಪುಸ್ತಕ ಹೊರಗೆ ತೆಗೆದು ಸ್ವಲ್ಪ ಸ್ವಲ್ಪವಾಗಿ ಓದಿದೆ. ಇಗೋ ಈ ಸಾಲುಗಳು (ನಾನು ಬಡವಿ : ನಾದಲೀಲೆ) ನಿಮಗಾಗಿ. ನಿಮಗಿಷ್ಟವಾದ ಸಲುಗಳೇನಾದರೂ ಇದ್ರೆ  ನನ್ನ ಜತೆ ಶೇರ್‍ ಮಾಡಿ ಪ್ಲೀಸ್: 

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬಟ್ಟೆ


ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬ ಮುತ್ತು.
ಎಷ್ಟು ಚೆನ್ನಾಗಿದೆಯಲ್ಲವಾ?? :-)


 ಬೇಂದ್ರೆ ತಾತನೊಂದಿಗೆ ನಾನು. 
ನಮ್ಮ ಧಾರವಾಡದ ಆಫಿಸ್ ನ ಕಲೀಗ್ಸ್ ಅಲ್ಲಿಗೇ ಬಂದಿದ್ದರಿಂದ ಸುಮಾರು ಸಮಯ ಬೇಂದ್ರೆಯವರ ಮನೆಯ ಮುಂದೆ ನಿಂತಿದ್ದೆವು. ನನಗೇನಾದರು ಕವನ ಬರೆಯುವ inspiration ಸಿಗಬಹುದಾ ಅಂತ ಕಾದೆ. ಕಾದು ಕಾದು perspiration ಬಂತೇ ವಿನ: ಕವನ ಹುಟ್ಟಲಿಲ್ಲ. :-) ಶ್ರೀಕಾಂತ ಹಲವಾರು ಪುಸ್ತಕಗಳನ್ನು ಖರೀದಿಸಿದರು.
ಆ ಮೇಲೆ ಪಾಟೀಲ್ ಸರ್ ಮನೆಯಲ್ಲಿ ಉಪ್ಪಿಟ್ಟು+ಚಟ್ನಿ ಪುಡಿ, ಅವಲಕ್ಕಿ+ ಮೊಸರಿನ ಪೊಗದಸ್ತಾದ ಬ್ರಂಚ್ (ಬ್ರೇಕ್ ಫಾಸ್ಟ್ ಕಮ್ ಲಂಚ್) ಅಲ್ಲಿಂದ ಹೊರಡುವಾಗ ಸ್ವಲ್ಪ ವಿಳಂಬವಾದ ಕಾರಣ ಒಂದು flying visit ಹುಬ್ಬಳ್ಳಿಯ ಉಣಕಲ್ ನ ಗಂಗೂಬಾಯಿ ಸ್ಕೂಲ್ ಆಫ್ ಮ್ಯುಸಿಕ್ ಗೆ. ಅಲ್ಲಿ ಗುರುಕುಲ ಮಾದರಿಯಲ್ಲಿ ಸಂಗೀತವನ್ನು ಹೇಳಿಕೊಡಲಾಗುತ್ತದೆ. ಒಟ್ಟಿಗೆ 20 ವಿದ್ಯಾರ್ಥಿಗಳು ಮತ್ತು ಐದು faculty. ಅವರಲ್ಲಿ ನಮಗೆ ಗಣಪತಿ ಭಟ್ಟ ಹಾಸಣಗಿ ಸಿಕ್ಕಿದರು. ಅವರ ಮೂಲಕ ಡಾ. ಎನ್ ರಾಜಂ ಕೂಡ ಅಲ್ಲಿ ಕಲಿಸುತ್ತಾರೆಂದು ಖುಶಿ ಆಯಿತು. ಪೂರ್ತಿ ಗುರುಕುಲ ನೋಡಲು ಇನ್ನ್ನೊಮ್ಮೆ ಬರುತ್ತೇವೆಂದು ಅಲ್ಲಿಂದ ಹೊರಟೆವು.



ರೇಖಾಚಿತ್ರಗಳು

 ಶ್ರೀ ಗಣಪತಿ ಭಟ್ ಹಾಸಣಗಿ


ಅಲ್ಲಿಗೆ ಭೇಟಿ ನೀಡಿದ್ದಾಗ ನಿಹಾರಿಕಾ 'ನಮ್ಮ ಕಾಲೇಜಿಗೆ ಮನು ಸರ್ ಅವರನ್ನು ಹುಡುಕಿಕೊಂಡು ದೀಪಾ ಗಣೇಶ ಮತ್ತು ಅವರ ಹಸ್ಬೆಂಡ್ ಬಂದಿದ್ದರಮ್ಮ. ಮನು ಸರ್ ಅವರನ್ನು ಹುಡುಕಿ ಕರೆಯಲು ನನಗೆ ಹೇಳಿದ್ದರು. ದೀಪಾ ಅವರು ಗಂಗೂಬಾಯಿ ಹಾನಗಲ್ ಅವರ ಜೀವನ ಚರಿತ್ರೆ ಬರೆದಿದ್ದಾರೆ. ಅದನ್ನು ಮನು ಸರ್ ಗೆ ಕೊಡಲು ತಂದಿದ್ದರು. ನಾನು ಸುಮ್ಮನೆ ಪುಸ್ತಕದಲ್ಲಿ ಕಣ್ಣು ಹಾಯಿಸಿದೆ. ತುಂಬಾ ಚೆನ್ನಾಗಿ ಬರೆದಿದ್ದಾರೆ. ಆ ಪುಸ್ತಕ ಕೊಳ್ಳಲೇಬೇಕು' ಅಂತ ಹೇಳಿದ್ದಳು. ಶ್ರೀಕಾಂತ ದೆಹಲಿಗೆ ಹೊರಟಿದ್ದಾರೆ. ಆ ಪುಸ್ತಕದ ಹೆಸರು ಕಳಿಸಿದ್ದೇನೆ. ತುಂಬಾ ಕಾತುರದಿಂದ ಕಾಯ್ತಾ ಇದ್ದೀನಿ ಆ ಪುಸ್ತಕ ಓದಲು.
ದೀಪಾ ಗಣೇಶ ನನಗೆ 'ದ ಹಿಂದು'ದಲ್ಲಿ ಅವರ ಬರಹದ ಮೂಲಕ ಪರಿಚಯ.ಯಾವುದಾದರು ಸಂಗೀತ ಕಾರ್ಯಕ್ರಮ ಮಿಸ್ ಆದಾಗಲೆಲ್ಲ ದೀಪಾ ಅವರ ಬರಹಗಳಿಗೆ ಕಾಯುತ್ತೇನೆ. ಕಾರ್ಯಕ್ರಮ ಎಟೆಂಡ್ ಆಗಿದ್ದಷ್ಟು ತೃಪ್ತಿಯಾಗುತ್ತೆ ಅವರು ಬರೆದ್ದನ್ನು ಓದಿದರೆ. :-). 

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
http://www.threeessays.com/books/a-life-in-three-octaves/
ಎಲ್ಲಾ ಚಿತ್ರಗಳು ನನ್ನ ಸೆಲ್ ಫೋನ್ ನಲ್ಲಿ ತೆಗೆದದ್ದು
:-)


January 1, 2014

ಹೊಸ ವರುಷಕ್ಕೊಂದು ಪೋಸ್ಟ್

(ತಂದೆಯವರ ವೈಕುಂಠ ಸಮಾರಾಧನೆಯೆಲ್ಲ ಮುಗಿಸಿ ಬೆಂಗಳೂರಿಗೆ ವಾಪಸ್ ಆದೆವು. ಬ್ಲಾಗ್ ಓಪನ್ ಮಾಡಿ ಓದಿದಾಗ ಯಾಕೋ ನನ್ನ ಬರಹಗಳ ಬಗ್ಗೆ ನನಗೇ ಬೇಸರ ಮೂಡಿ, ನನ್ನ ಅಡಿಗೆ ಬ್ಲಾಗ್ ಒಂದು ಹಾಗೇ ಬಿಟ್ಟು ನೆನಪಿನ ಸಂಚಿ ಡಿಲೀಟ್ ಮಾಡಿ ಬಿಟ್ಟೆ.
ಆದರೆ ಮರುದಿನದಿಂದ ಹಲವಾರು ಮೈಲ್ ಎಸ್ ಎಮ್ ಎಸ್ ಗಳ ಸರಮಾಲೆ ಶುರು ಆದವು. honestly i did not think anybody would miss it.
" ಪ್ಲೀಸ್ ನಿಮಗೆ ನಿಮ್ಮ ಬರಹಗಳ ಬಗ್ಗೆ ಏನೇ ಅಭಿಪ್ರಾಯ ಇರಲಿ, ನಮಗೆ ಓದಲು ಇಷ್ಟವಾಗುತ್ತೆ"
" ನನಗೆ ಬೇಸರ ಬಂದಾಗಲೆಲ್ಲ ನಿಮ್ಮ ಬ್ಲಾಗ್ ಬರಹಗಳಿಗೆ ಮೊರೆ ಹೋಗುತ್ತೇನೆ, ಬರೀರಿ. ಇಲ್ಲದಿದ್ದರೆ ನನಗೆ ತುಂಬಾ ಕಷ್ಟವಾಗುತ್ತೆ"
ಒಬ್ಬರಂತೂ, 'ನನ್ನ ಕತೆಗಳಿಗೆ ನಿಮ್ಮ ಬರಹ ಸ್ಪೂರ್ತಿ, ಕೆಲವು ಟಾಪಿಕ್ ಅನ್ನು ನಿಮ್ಮ ಬ್ಲಾಗ್ ನಿಂದ ಕದ್ದಿದ್ದೇನೆ ಅಂತ ಇತ್ತು. ಇದು ತುಂಬಾ far fetched ಅನ್ನಿಸಿದ್ರೂ ಓದಿ ನಕ್ಕು ಬಿಟ್ಟೆ. ಅದನ್ನು ಮಕ್ಕಳಿಗೂ ತೋರಿಸಿ ' ಒಹೋ ಮಾಲತಿ ಶೆಣೈ famous blogger ಅಂತ ಕಾಲೆಳೆಸಿಕೊಂಡೆ.
ಒಬ್ಬರು, "ಡಿಲೀಟ್ ಯಾಕೆ ಮಾಡಿದ್ರಿ?? ಹೊಸ ಪೋಸ್ಟ್ ಅಲ್ಲದಿದ್ದರೆ ಹಳೇದನ್ನು ಓದುತ್ತಿದ್ದೆವು' ಅಂದು ಬಿಟ್ರು. ನನಗೂ ಹೌದಲ್ಲವಾ ಅನ್ನಿಸಿತು. ನಿಮ್ಮೆಲ್ಲರ ಪ್ರೀತಿ ನನಗೆ ಖುಶಿಯಾಗಿದೆ.
ಮತ್ತೊಬ್ಬ ಕಿರಿಯ ಸ್ನೇಹಿತ ಅದನ್ನು ಹೇಗೆ ಅನ್ ಡೀಲೀಟ್ ಮಾಡೋದು ಅಂತ ಕೂಡ ತಿಳಿಸಿದ್ದಾರೆ. ಥ್ಯಾಂಕ್ಯೂ ಪುಟ್ಟು.
'ಓದುತ್ತಾರೆ' ಅಂತ ನನಗೆ ಗೊತ್ತಿಲ್ಲದವರೂ ಈ ತರಹ ಮೈಲ್ ಹಾಕಿದ್ದಾಗ ನನಗೆ ಆಶ್ಚರ್ಯ ಆಗಿದೆ."ಓದಿ ಎಂಜಾಯ್ ಮಾಡುತ್ತೇವೆ ಆದರೆ ಕಮೆಂಟ್ ಮಾಡಲ್ಲ ಅಷ್ಟೆ"( ನಾನು ಕಮೆಂಟ್ ಗಳಿಗೆ ಯಾವತ್ತೂ ಪ್ರಾಧಾನ್ಯತೆ ಕೊಟ್ಟಿಲ್ಲ) ಇನ್ನು ಬ್ಲಾಗ್ ಅನ್ನು ರಿವೈವ್ ಮಾಡದಿದ್ದರೆ ಅದು ಅಹಂಕಾರ ಅಂತಾಗುತ್ತದೆ. if you enjoy my ramblings what gives?? ನೀವೇ 'ಇನ್ನು ಬರೆಯುವುದನ್ನು ನಿಲ್ಲಿಸಿ ಮಾಲತಿ ಮೇಡಂ ಅನ್ನುವ ತನಕ ಬರೀತೇನೆ.

ಈ ಪೋಸ್ಟ್ ರಾಧಿಕಾ ಅವರಿಗೆ. Happy 2014 Radhika.)
(ಹೊಸ ವರ್ಷದ ಮೊದಲ ಪೋಸ್ಟ್ ಸ್ವಲ್ಪ ಗ'ಮ್ಮತ್ತಿ' (ಆ 'ಮತ್ತು' ಅಲ್ಲ ಮತ್ತೆ)ನದು. ನನ್ನ ತಮ್ಮನ ಮಗಳು 5 ವರ್ಷದ ಸಮೀಧಾ ಮತ್ತು ಯು.ಎಸ್ ತಂಗಿಯ ಮಗಳು, 9 ವರ್ಷದ ಶ್ರೇಯಾ ಅತ್ಯಂತ punny ಗಳು. whatsapp ನಲ್ಲಿ ಅವರ ಜತೆ pun (ಶ್ರೀವತ್ಸ ಜೋಶಿ pun ಗೆ ಕನ್ನಡ ಪದ ಕೊಟ್ಟಿದ್ದಾರೆ ಶ್ಲೇಷೆ ಅಂತ) ತುಂಬಾ ಎಂಜಾಯ್ ಮಾಡ್ತೇನೆ)
Co-incidence
ಬೆಂಗಳೂರಿಗೆ ಬರುವ ಮುಂಚೆ ಶ್ರೀಕಾಂತ ಗೆ ಮಣಿಪಾಲ್ ನಲ್ಲಿ ಪೋಸ್ಟಿಂಗ್ ಆಗಿತ್ತು. ಬ್ಯಾಂಕ್ ನ ಒಂದು ಹೊಸ ಉಳಿತಾಯ ಯೋಜನೆಗೆ ಒಂದು advertisement ತಯಾರಿಸಬೇಕಿತ್ತು. ಹೆಡ್ ಆಫಿಸ್ ಆದ್ದರಿಂದ ಈ ಜಾಹಿರಾತು ಹಿಂದಿ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಆಗಬೇಕಿತ್ತು.. ಕನ್ನಡ ಇಂಗ್ಲಿಷ್ ಶ್ರೀಕಾಂತ ವಹಿಸಿಕೊಂಡಿದ್ದರೆ, ಹಿಂದಿಯ ಜಾಹಿರಾತು ಬೋಳುವಾರ ಮೊಹಮ್ಮದ ಕುಂಯಿ ಮಾಮನವರದ್ದು. ನನಗೂ ಹೆಲ್ಪ್ ಮಾಡಲಿಕ್ಕೆ ಹೇಳಿದ್ದರು. ಕೆಲಸ ಮಾಡಿದ್ದಕ್ಕಿಂತ ನಾವು ನಕ್ಕಿದ್ದೆ ಹೆಚ್ಚು. ರಾತ್ರಿಯೆಲ್ಲ ಕೂತು ಮಾಡುತ್ತಿದ್ದ ನೆನಪು. ಆಮೇಲೆ ಅದು ದೊಡ್ಡ ದೊಡ್ಡ ಹೋರ್ಡಿಂಗ್ ಮೇಲೆ ಪ್ರದರ್ಶನ ಗೊಂಡಾಗ ನನಗಾದ ಹೆಮ್ಮೆ ಅಷ್ಟಿಷ್ಟಲ್ಲ. ಇಂಗ್ಲಿಷ್ ನಲ್ಲಿ 'Little Drops of Water....' ಅಂತ ಶುರು ಆಗುವ ವಾಕ್ಯ ಇತ್ತು. ಕೆಲವೆ ದಿನಗಳಲ್ಲಿ ದೀಪಾ ಮೆಹತಾ ಅವರ water ಸಿನಿಮಾ ಬಿಡುಗಡೆಯಾಗಿ ಬ್ಯಾನ್ ಆಯ್ತು. ನಮ್ಮ ಸ್ಲೋಗನ್ 'ವಾಟರ್' ಸಿನಿಮಾದ promo ಅಂತ ತಿಳಿದುಕೊಳ್ಳುವ ಭಯದಿಂದಾಗಿ ಅದನ್ನು scrap ಮಾಡಲಾಯಿತು. ಆಮೇಲೆ ನಮ್ಮ ಜೀವನದಲ್ಲಿ ಹಲವು ಹೊಸ ತಿರುವುಗಳು. ಬ್ಯಾಂಕ್ ನ golden hand shake scheme ಬಂದಾಗ ಶ್ರೀಕಾಂತ್ ಮತ್ತು ಕೆಲ ಆಪ್ತ ಗೆಳೆಯರು ಬ್ಯಾಂಕ್ ನಿಂದ ಸ್ವಯಂ ನಿವೃತ್ತಿ ಪಡೆದರು.
ಆಮೇಲೆ ನಮ್ಮ ಬೋರಿಯಾ ಬಿಸ್ತರ್ ಎಲ್ಲ ಬೆಂಗಳೂರಿಗೆ . ನಿಜ ಹೇಳಬೇಕೆಂದರೆ ಬ್ಯಾಂಕ್ ನ ಆ ಸ್ಕೀಮ್ ಬರುವ ಮುಂಚೆನೆ ಶ್ರೀಕಾಂತ್ ಗೆ ಬೇರೆ ಬೇರೆ ಕಡೆಯಿಂದ ಅವರ organisation ಸೇರಲು ಫೀಲರ್ಸ್ ಬರ್ತಾ ಇದ್ದವು. ನಮ್ಮ ಕುಟುಂಬ ವರ್ಗ ದವರಿಗೆಲ್ಲ ಶಾಕ್. ಒಳ್ಳೆ ನಿಶ್ಚಿತ ಸಂಬಳ, ಮುಂದೆ ಪ್ರೋಮೋಶನ್ ಗಳ ಖಾತರಿ ಇದ್ದದ್ದನ್ನು ಬಿಟ್ಟು ಕೆಲಸ ಬಿಡುತ್ತಾರೆಂದು ತುಂಬಾ ಸಂಕಟ ಪಟ್ಟಿದ್ದಾರೆ. ಅಮ್ಮ ಅಂತು ಅತ್ತು ಬಿಟ್ಟರು. ಅವರಿಗೆ ಸಮಾಧಾನ ಮಾಡಬೇಕಾದರೆ ಸಾಕುಬೇಕಾಯಿತು. ಕೆಲವು ಮಿತ್ರರು ಅಂದುಕೊಂಡವರು ದೂರ ಸರಿದುಬಿಟ್ಟರು. :-) ಇನ್ನು ಕೆಲವರು ಹುಚ್ಚರು ಅಂದರು. ಆದರೆ ಬ್ಯಾಂಕ್ ಬಿಡುವ ಆರು ದಿನಗಳ ಮುಂಚೆನೆ ನಮಗೊಂದು ಹೊಸ ಪ್ರಾಜೆಕ್ಟ್ ಸಿಕ್ಕಾಗಿತ್ತು. :-) ಈಗ ನೋಡಿದರೆ ಬ್ಯಾಂಕ್ ಕೆಲಸ ಗಿಂತ ಸಮಾಧಾನ, ಸಂತೋಷ, ಗಂಜಿ ಉಪ್ಪು ತುಪ್ಪಗಳಿಗೆ ಕೊರತೆಯಿಲ್ಲದಷ್ಟು ಸಂಪಾದನೆ. ಮುಖ್ಯ ಅಂದರೆ ನಾವು ಆಯ್ದುಕೊಂಡ ಕಸುಬಿನಿಂದ ನಮಗೆ ರಾತ್ರಿ ಸಮಾಧಾನದಿಂದ ನಿದ್ರೆ ಮಾಡುವ ಸುಖ.ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ ನಮ್ಮ ಸಂಸ್ಥೆ. 
ಬೆಂಗಳೂರಿಗೆ ಬಂದ ಮೇಲೆ ನಾವು ತುಂಬಾ ವ್ಯಸ್ತವಾಗಿದ್ದೆವು. ಮನೆ, ಆಫಿಸು, ಮಕ್ಕಳ ಶಾಲೆ ಹುಡುಕುವ ಕೆಲಸಗಳು. ಸಿಕ್ಕ ಪ್ರಾಜೆಕ್ಟ್ ಅನ್ನು ಶುರು ಮಾಡುವ ತರಾತುರಿ. ಸುಮಾರು ಸಮಯದ ನಂತರ ಒಂದು ಕ್ಲಬ್ ನ ಪಾರ್ಟಿಯಲ್ಲಿ ಶ್ರೀಕಾಂತ ಗೆ ಬೋಳುವಾರ ಮಾಮ ಸಿಕ್ಕಿದರು.ಈ ಮಧ್ಯೆ ಅವರಿಗೆ ಬೆಂಗಳೂರಿಗೆ ವರ್ಗವಾಗಿತ್ತು. ಮಾತಾಡ್ತಾ ಅವರ ಮಾತು ವಸುಧೇಂದ್ರರ ಕಡೆ ಹೊರಳಿತು, ಅವರ ಬರಹದ ಬಗ್ಗೆ ಹೇಳಿದ್ದರಂತೆ. 'ಈ ಹುಡುಗ ತುಂಬ ಮೇಲೆ ಬರುತ್ತಾನೆvery promising writer ' ಅಂತ ಅಂದಿದ್ದರಂತೆ. ಆಮೇಲೆ ಒಂದು ದಿನ ಪೇಪರ್ ನಲ್ಲಿ ಅವರ ಕತೆ ಬಂದಿದ್ದನ್ನು ಶ್ರೀಕಾಂತ್ ಗೆ ಅವರು ತಿಳಿಸಿ, ಶ್ರೀಕಾಂತ ಅದನ್ನು ಓದಿ, ನನಗೋಸ್ಕರ ಇಟ್ಟಿದ್ದು, ಅದು ರದ್ದಿಯಲ್ಲಿ ಹೋಗಿ (ಆಗ ನನಗೆ ಕನ್ನಡ ಓದುವ ರೂಢಿ ಅಷ್ಟಿರಲಿಲ್ಲ), ವಸುಧೇಂದ್ರರ ನಂಬರ್ ಕೊಟ್ಟರಂತೆ 'ಮಾತಾಡಿ' ಅಂತ. ಶ್ರೀಕಾಂತ್ ಆ ನಂಬರ್ ಅನ್ನು ಫೋನ್ ಪಕ್ಕ ಇದ್ದ ಶೀಟ್ ನಲ್ಲಿ ಬರೆದಿಟ್ಟು ಕೊಂಡರು. ಅದರಲ್ಲಿ ಹೆಸರು ಎಲ್ಲೋ, ನಂಬರ್ ಎಲ್ಲೋ....ಇದೆಲ್ಲ ನಾನು ಆಫಿಸ್ ನಿಂದ ಮರಳುವ ಮುಂಚಿನ ಕತೆ. ಅಷ್ಟರಲ್ಲೆ ನನ್ನ ಮುಂಬೈಯ ನ ಆಪ್ತ, ಜೀವದ ಗೆಳತಿ ಬೆಂಗಳೂರಿನಲ್ಲೇ ಇದ್ದದ್ದು ನನ್ನ ನಂಬರ್ ಎಲ್ಲಿಂದಲೋ ಪಡೆದು ಮನೆಗೆ ಫೋನ್ ಮಾಡಿ ಶ್ರೀಕಾಂತ ಆ ಕಾಗದಲ್ಲೇ ಬರೆದರು. ನಾನು ಬಂದ ಮೇಲೆ ಆ ಸ್ನೇಹಿತೆಯು ಫೋನ್ ಮಾಡಿದ್ದನ್ನು ಹೇಳಿದರು, ನನಗೆ ಖುಶಿಯಿಂದ ಕುಣಿದಾಡುವಷ್ಟು ಸಂತೋಷ. ನಾನು ಪ್ರೆಂಡ್ ಶಿಪ್ ಎಲ್ಲ ಮಾಡುವುದರಲ್ಲಿ ಕಳ್ಳಿ. ನಾನಾಯ್ತು, ನಾವು ನಾಲ್ಕು ಜನರಾಯ್ತು. ಈಗೀಗ ಕೆಲವು ಆಪ್ತ ಮಿತ್ರರಿದ್ದಾರೆ. ಆ ನಂಬರ್ ಅನ್ನು ಬರೆದಿಟ್ಟುಕೊಂಡೆ. ಪುರುಸೊತ್ತಲ್ಲಿ ಫೋನ್ ಮಾಡಿದರಾಯ್ತು ಅಂದುಕೊಂಡಿದ್ದೆ. ಬೆಳಿಗ್ಗೆ ಆಫಿಸ್ ಗೆ ಹೋಗುವ ಗಡಿಬಿಡಿ, ಸಂಜೆ ಮನೆಗೆ ಬಂದ ಮೇಲೆ ಉಳಿದ ಮನೆಯ, ಆಫಿಸ್ ನ  ಕೆಲಸಗಳನ್ನು ಮುಗಿಸುವ ತರಾತುರಿಯಿಂದ ಫೋನ್ ಮಾಡಲಾಗಲಿಲ್ಲ. ಒಂದು ದಿನ ರಜೆಯಿತ್ತು. ಆ ದಿನ ಅವಳಿಗೊಂದು ಮೆಸೆಜ್ ಬಿಟ್ಟೆ. ಉತ್ತರ ಬರುವಾಗ ಮಾತ್ರ ಅದರಲ್ಲಿ ವಸುಧೇಂದ್ರ ಅತ್ತ ಮೆಸೆಜ್ ಕೊನೆಯಲ್ಲಿತ್ತು. ಶ್ರೀಕಾಂತ ಅವರ ಬಗ್ಗೆ ಹೇಳಿದ್ದರಿಂದ 'famous writer Vasudhendra'? ಅಂತ ಮರು ರಿಪ್ಲೈ ಕಳುಹಿಸಿದೆ. ಅದನ್ನು ನೋಡಿ ಅವರು ಫೋನ್ ಮಾಡಿಬಿಡೋದಾ? ನಾನು ಫೋನ್ ಎತ್ತಲಿಲ್ಲ ಯಾಕಂದ್ರೆ ನಾನು ಅವರ ಒಂದೂ ಪುಸ್ತಕ ಓದಿರಲಿಲ್ಲ, ಅವರ ಪರಿಚಯ ಕೂಡ ಇರಲಿಲ್ಲ. :-) ಈಗ ಬಿಡಿ ಅವರನ್ನು ತುಂಬಾ ಸತಾಯಿಸುತ್ತೇನೆ. ವಸುಧೇಂದ್ರರ ಬಳಿ ಮಾತಾಡಿದಾಗಲೆಲ್ಲ ಈ ವಿಷಯ ಹೇಳಲು ಮರೆತಿದ್ದೇನೆ. ಇದರ ಲಿಂಕ್ ಅವರಿಗೂ ಕಳಿಸುತ್ತೇನೆ. :-)
ಹಾಗಾದ್ರೆ ಗಮ್ಮತ್ತಿನ ವಿಷಯ ಏನಂತ ಹೇಳಲಾ?? ನನ್ನ ಆಪ್ತ ಸ್ನೇಹಿತೆ ಹಾಗೂ ವಸುಧೇಂದ್ರರ ನಂಬರ್ ಮಿಕ್ಸ್ ಅಪ್ ಆಗಿರಬಹುದು ಆದರೆ ಅವರಿಬ್ಬರೂ ಇರೋದು ಒಂದೇ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ. :-) ಚೆನ್ನಾಗಿದೆಯಾ ಕಾಕತಾಳೀಯದ ಕತೆ?
ವಸುಧೇಂದ್ರರ ಹೊಸ ಪುಸ್ತಕ 'ಮೋಹನಸ್ವಾಮಿ' ಬಂದಿದೆ. ಓದಿದ್ರಾ??
(ಮೋಹನಸ್ವಾಮಿಯ ಕವರ್ ಚಿತ್ರ ತುಂಬಾ ಇಷ್ಟ ಆಯ್ತು. ಹಾಗೆ ಚುಕ್ಕುಬುಕ್ಕುವಿನ ಹೊಸ ವರ್ಷದ ಡೆಸ್ಕ್ ಟಾಪ್ ಕ್ಯಾಲೆಂಡರ್ ಕೂಡ ಚೆನ್ನಾಗಿದೆ. ಬೇಕಿದಲ್ಲಿ ಅವರನ್ನು ಸಂಪರ್ಕಿಸಿ)
ಬಹುಶ: ನಾನು ನನ್ನ ಬ್ಲಾಗ್ ಅನ್ನು ರೆಗುಲರ್ ಆಗಿ ಅಪ್ ಡೇಟ್ ಮಾಡಲ್ಲ ಅನ್ನಿಸುತ್ತೆ. ಬರೀಲಿಕ್ಕೆ/ಕೋರಿಲಿಕ್ಕೆ 5 ವರ್ಷಕ್ಕಾಗುವಷ್ಟು ಸರಕು ಇದೆ ನನ್ನ ಬಳಿ.  ಆದ್ರೆ ಈಗ ನನಗೆ ಸಿಕ್ಕ ಸಮಯದಲ್ಲಿ ನಾನು ಮೊಬೈಲ್ ಗೇಮ್ಸ್  ಗೆ/ whatsapp ಗೆ addict ಆಗಿದ್ದೇನೆ. 
(ಮೊನ್ನೆ ಹುಬ್ಬಳ್ಳಿಯಿಂದ ಟ್ರೈನ್ ನಲ್ಲಿ ಬೆಂಗಳೂರಿಗೆ ವಾಪಸ್ ಆದ್ವಿ. ಜನಶತಾಬ್ದಿಯಲ್ಲಿ. ಇಲ್ಲಿ ಮನೆಯಲ್ಲಿ Wi-Fi (ವೈಫಿ) ಇದೆ ಅಲ್ಲಿ ಅಮ್ಮನ ಮನೆಯಲ್ಲೂ ವೈಫಿ ಇದೆ. ನನ್ನ ಸೆಲ್ ಫೋನ್ ನ ಮೊಬೈಲ್ ನೆಟ್ ವರ್ಕ್ 'on' ಮಾಡಿದೆ. ಆದರೆ ನೆಟ್ ಕನೆಕ್ಟ್ ಆಗಲಿಲ್ಲ. ಓದಲು ತಂದ ಪುಸ್ತಕ ಸೂಟ್ ಕೇಸ್ ಒಳಗೆ ಹೋಗಿತ್ತು. ಆಟ ಆಡುವ ಅಂದ್ರೆ ನೆಟ್ ಇಲ್ಲ. ನನಗೆ AC ನಲ್ಲಿ ಬರೋದು ಅಂದ್ರೆ ಆಗಲ್ಲ. ಮತ್ತು ವಿಂಡೋ ಸೀಟ್ ಕೂಡ ಸಿಕ್ಕಿರಲಿಲ್ಲ. ತುಂಬ ಕಿರಿ ಕಿರಿ ಅನ್ನಿಸ್ತ್ತು. ಸುಮ್ನೆ ಕಿತ್ತಳೆ ಹಣ್ಣು ತಿನ್ನುತ್ತ, ಬಂದಿರುವ ಎಸ್ ಎಮ್ ಎಸ್ ಗಳನ್ನೆಲ್ಲ ನೋಡ್ತಾ ಉತ್ತರ ಹಾಕ್ತಾ ಇದ್ದೆ. ಅಷ್ಟರಲ್ಲಿ wifi is available would you like to connect' ಅನ್ನುವ ಮೆಸೆಜ್ ಸೆಲ್ ಫೋನ್ ಸ್ಕ್ರೀನ್ ನಲ್ಲಿ ಫ್ಲ್ಯಾಶ್ ಆಯ್ತು. ಕೂಡಲೆ ಓಕೆ ಕೊಟ್ಟು ಆಡಲಿಕ್ಕೆ ಶುರು ಮಾಡಿದೆ. ಎಷ್ಟೊಂದು ಜನರಿದ್ರು ಗೊತ್ತಾ ಆಡುವವರು?/ ನನ್ನ ಪಕ್ಕದಲ್ಲಿ ಕೂತವರ ಬಳಿ ಹೈ ಫಂಡಾ apple tablet ಇತ್ತು. ಅದರಲ್ಲಿ ಅವರು Temple run ಆಟ ಶುರು ಹಚ್ಚಿಕೊಂಡ್ರು. ಒಂದು ಪುಟ್ಟ ಹುಡುಗ ಸಾಧಾರಣ 5 ವರ್ಷ ವಯಸ್ಸು ಇರಬಹುದು, ನಾಯಿಯ ಆಟ ಆಡ್ತಾ ಅದು ಗಳಿಗೆಗೊಂದು ಸಲ ವಾಂಯ್ ವಾಂಯ್ ಅನ್ನುತ್ತಾ ಇತ್ತು. ಅವನ ಅಮ್ಮನಿಗೆ 'ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿ' ಅಂತ ರಿಕ್ವೆಸ್ಟ್ ಮಾಡಿದೆ. ಮಾಡಿದರು ಪಾಪ. ಆಮೇಲೆ ಬೆಂಗಳೂರು ತಲುಪಿದ್ದೆ ಗೊತ್ತಾಗಲಿಲ್ಲ.)
Facebook ಚಟ ಆಯ್ತು ಅಂತ ಅದರಿಂದ ಹೊರಗೆ ಬಂದೆ ಈಗ ಇದು. ಮೊಬೈಲ್ ಚಾರ್ಜ್ ಗೆ ಇಟ್ಟಿದಾಗ ಅಥವಾ ಮಕ್ಕಳು ಅದರಲ್ಲಿ ಆಟ ಆಡುವಾಗ ಸಿನಿಮಾ ನೋಡುತ್ತೇನೆ. ಮಿತ್ರರು ಫಿಲ್ಮ್ ಫೆಸ್ಟಿವಲ್ ಗೆ ಹೋಗಲಿಲ್ಲವಾ ಅಂತ ಕೇಳಿದಾಗ 'ಈ ಸಲ ನನ್ನದು ಮನೆಯಲ್ಲೇ ಬೆಂಗಾಲಿ ಫಿಲ್ಮ್ ಫೆಸ್ಟಿವಲ್ ನಡೀತಾ ಇದೆ ಅಂದೆ. ಮಿತ್ರ ರೊಬ್ಬರು ಹಲವಾರು ಬೆಂಗಾಲಿ ಸಿನಿಮಾ  ಕೊಟ್ಟಿದ್ದಾರೆ ಹಾಗೂ ನಿಹಾಳ ಕಾಲೇಜಿನ ಮನು ಸರ್ ಮರಾಠಿ ಸಿನಿಮಾ ಕಳುಹಿಸಲಿದ್ದಾರೆ.
ಒಟ್ಟಾರೆ i am gonna enjoy myself.
ನೀವು??
ಎಲ್ಲರಿಗೂ 2014 ಚೆನ್ನಾಗಿರಲಿ ಎಂದು ಹಾರೈಸುತ್ತ...
:-)
my cooking posts go here
http://malathihatescooking.blogspot.in/