September 6, 2013

ಕಣಿಲೆ ಪ್ರಿಯ ಕೊಂಕಣೀಯರು ನಾವು

ಕೊಂಕಣಿಗಳಿಗೂ ಕಣಿಲೆಗೂ ಅವಿನಾಭಾವ ಸಂಬಂಧ. ವಾಸನೆ ಅನ್ನುವವರು ಪರಿಮಳ ಎನ್ನುವವರೂ ಇದ್ದಾರೆ. ಮಳೆಗಾಲದ  ಆಹಾರವಾದ ಮರಕೆಸುವಿನ ಎಲೆ , ತಗಟೆ ಸೊಪ್ಪು ಇದರ ಜೊತೆ ಎಳೆ ಬಿದಿರು ಅಥವಾ ಕಣಿಲೆಗೆ ಮುಖ್ಯ ಸ್ಥಾನ.
ನಮ್ಮ ತೋಟದ ಬಿದಿರ ಹಿಂಡು ಚಿತ್ರದಲ್ಲಿರುವವರು ಶ್ರೀಕಾಂತರ ಅಣ್ಣ, ನಾಗರಾಜ ಶೆಣೈ


ಕಣಿಲೆಯನ್ನು ಅದರ ಗಟ್ಟಿಯಾದ (ಕಪ್ಪು ಮಿಶ್ರಿತ ನೇರಳೆ ಬಣ್ಣದ) ಹೊರ ಕವಚದಿಂದ ಬಿಡಿಸಿ ಕೆಳಗಿನ ಚಿತ್ರದಲ್ಲಿನ ತರಹ ಚೂರುಗಳನ್ನಾಗಿ ಮಾಡಿ ನೀರಲ್ಲಿ ಹಾಕಿಡಬೇಕು. ಮೂರು ದಿನ ನೀರನ್ನು ಬದಲಾಯಿಸಿ ಬದಲಾಯಿಸಿ ಆದ ಮೇಲೆ ನಾಲ್ಕನೆ ದಿನ ಅದನ್ನು ಅಡಿಗೆಯಲ್ಲಿ ಬಳಸ ಬಹುದು. ನನ್ನ ಅಜ್ಜಿ ಹೇಳುವ ಪ್ರಕಾರ ಅವರು ಕಣಿಲೆಯನ್ನು ತೊಳೆದು, ಮಲ್ಲ್ ಬಟ್ಟೆಯಲ್ಲಿ ಅದನ್ನು ಕಟ್ಟಿ, ಅದನ್ನು ಹಗ್ಗದ ಸಹಾಯದಿಂದ ಬಾವಿಯೊಳಗೆ ಬಿಡುತ್ತಿದ್ದರಂತೆ. ಮೂರು ದಿನದ ಬಳಿಕವೇ ಅದನ್ನು ಹೊರಗೆ ತೆಗೆದು ಅಡಿಗೆಯಲ್ಲಿ ಬಳಸುತ್ತಿದ್ದರಂತೆ. ಹರಿಯುವ ನದಿ ಇದ್ದಲ್ಲಿ ಈ ಐಡಿಯ ಪ್ರಶಸ್ತವಾದುದು. ಕಣಿಲೆ ಅಮ್ಟೆಕಾಯಿ ಉಪ್ಪಿನಕಾಯಿಯಂತೂ ನಮ್ಮಲ್ಲಿ ಫೇಮಸ್. ಬಿಸಿ ಬಿಸಿ ಒತ್ತು ಶ್ಯಾವಿಗೆ ಜತೆ ಸಖತ್ ಟೇಸ್ಟಿ combination. :-)


1. ನಾವು ಕಾಳುಗಳೊಂದಿಗೆ ಕಣಿಲೆಯನ್ನು ಬಳಸಿ ಪದಾರ್ಥಗಳನ್ನು ಮಾಡುತ್ತೇವೆ. ಕೆಳಗಡೆ ತಿಂಗಳವರೆ ಮತ್ತು ಕಣಿಲೆಯ ಘಶಿ. ತಿಂಗಳವರೆ ಕಾಳನ್ನು ಹಿಂದಿನ ರಾತ್ರಿ ನೀರಲ್ಲಿ ನೆನೆಸಿಟ್ಟು ಬೆಳಿಗ್ಗೆ ಕಣಿಲೆಯೊಂದಿಗೆ ಬೇಯಿಸುವುದು. ಆಮೇಲೆ ತೆಂಗಿನ ತುರಿ, ಕೆಂಪು ಮೆಣಸು, ಹುಣಸೆ ಹಣ್ಣಿನ ಮಸಾಲೆ ರುಬ್ಬಿ ಬೆಂದ ಕಾಳಿಗೆ ಬೆರೆಸಿ, ಉಪ್ಪು ಹಾಕಿ, ಕುದಿ ಬಂದ ಮೇಲೆ ಬೆಳ್ಳುಳ್ಳಿ ಒಗ್ಗರಣೆ ಕೊಡುವುದು. ತಿಂಗಳವರೆ ಮಾತ್ರವಲ್ಲ ಅಲಸಂದೆ ಕಾಳು, ತೊಗರಿಕಾಳು, ಮೊಳಕೆ ಬರಿಸಿದ ಹೆಸರು ಕಾಳು ಮತ್ತು ಅವರೆಕಾಳಿನ ಜತೆ ಕೂಡ ಕಣಿಲೆ ಸೆಟ್ ಆಗುತ್ತೆ.
ವಿವೇಕ ಶಾನಭಾಗರ ಈ ಕಾದಂಬರಿ ಓದಲಿಕ್ಕೆ ಪ್ರಯತ್ನ ಪಟ್ಟೆ. i think i like his short stories better :-) ಅರ್ಧ ಓದಿ ಅಲ್ಲಿಟ್ಟಿದ್ದೆ ನಿಹಾಳ ಕ್ಲಿಕ್ ಇದು. 

2. ತೊಗರಿ ಬೆಳೆಗೆ ಕಣಿಲೆ ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಆಂಬಟ್ ಮಾಡುತ್ತೇವೆ . ಮಸಾಲೆ ಮೇಲಿನ ತರಹ ನೇ ಆದರೆ ಒಗ್ಗರಣೆ ಸಾಸಿವೆ ಕರಿಬೇವು. ಬೇಕಿದ್ದಲ್ಲಿ ಒಂದು ಚೂರು ಬೆಲ್ಲ ಸೇರಿಸಬಹುದು

3. ಕಣಿಲೆಯ ಎಳೆ ಭಾಗಗಳನ್ನು (ಇದಕ್ಕೆ ನೀಲೀ ಅಂತಲೂ ಹೇಳುತ್ತೇವೆ) ಚಿಕ್ಕದಾಗಿ ತುಂಡರಿಸಿ ಅದರ ಜತೆ ಹಲಸಿನ ಬೀಜ ಹಾಕಿ ಸುಕ್ಕೆ ಮಾಡುತ್ತೇವೆ ಇದಕ್ಕೆ ಒಂಚೂರು ಬೆಲ್ಲ ಹಾಕ ಬೇಕು . ಮತ್ತು ಡ್ರೈ ಪದಾರ್ಥ. ಮಸಾಲೆ ಮೇಲಿನಂತೆಯೇ. ಇದಕ್ಕೆ ಸ್ವಲ್ಪ ಎಣ್ಣೆಯಲ್ಲಿ ಹುರಿದ ಅರ್ಧ ಟೀ ಸ್ಪೂನ್ ಕೊತ್ತಂಬರಿ ಬೀಜ + ಕಾಲು ಚಾ ಚಮಚ ಉದ್ದಿನ ಬೇಳೆ ಹಾಕಿ  ಮಸಾಲೆಯೊಂದಿಗೆ ರುಬ್ಬಬೇಕು. ಒಗ್ಗರಣೆಗೆ ಸಾಸಿವೆ ಕರಿಬೇವು.
the tip of the bamboo shoot is soft and delicate to the palate. Abundantly used in Chinese cuisine

(ಮೇಲಿನ ಎಲ್ಲ ಪದಾರ್ಥಕ್ಕೂ ಹುಣಸೆಹುಳಿ ಬದಲಿಗೆ ಜಜ್ಜಿದ ಆಮ್ಟೆಕಾಯಿಯನ್ನು ಸೇರಿಸಬಹುದು)

4. ಇದು ನನ್ನ ಹೊಸ ಪ್ರಯೋಗ. ಚಿಕ್ಕದಾಗಿ ಕತ್ತರಿಸಿದ ಕಣಿಲೆ + ಕಡಲೆ ಹಿಟ್ಟು, ಪುಡಿ ಹಿಂಗು, ಅಕ್ಕಿ ಹಿಟ್ಟು, ಉಪ್ಪು ಮಿಶ್ರಣಮಾಡಿ ಹತ್ತು ನಿಮಿಷ ಇಟ್ಟು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿದ್ದೆ . ಒಳ್ಳೆ ಪಕೋಡಾ ತರಹ ಕುರುಂ ಆಗಿತ್ತು. :-)

ಶ್ರೀಕಾಂತ ಗೆ ಈ ಚುಕ್ಕು ಬುಕ್ಕುವಿನ ಡೆಸ್ಕ್ ಟಾಪ್ ಕ್ಯಾಲೆಂಡರ್ appointment ಫಿಕ್ಸ್ ಮಾಡಲಿಕ್ಕೆ ತುಂಬಾ ಸಹಾಯಕ. ಮನೆಯಲ್ಲಿದ್ದಾಗ ಆಂಬೋಡೆಯ ಪ್ಲೇಟ್ ಜಾಗದಲ್ಲಿ  ಶ್ರೀಕಾಂತರ ಲ್ಯಾಪ್ ಟಾಪ್ ಇರುತ್ತೆ ಅದಕ್ಕೆ ಡೆಸ್ಕ್ ಟಾಪ್ ಕ್ಯಾಲೆಂಡರ್ ಕೂಡ ಫೋಟೊದಲ್ಲಿ ಇಣುಕಿದೆ. ನನ್ನ ಕ್ಲಿಕ್

ಮತ್ತು ಉಪ್ಪಿಗೆ ಹಾಕಿಟ್ಟ ಕಣಿಲೆಯಂತೂ..ಕ್ಯಾ ಬಾತ್ ಹೈ..........

ಉಪ್ಪಿಗೆ ಹಾಕಿಡುವ ವಿಧಾನ.ಉಪ್ಪಿಗೆ only ಬಲಿತ ಭಾಗಗಳನ್ನು ಹಾಕಬೇಕು. ಮೊದಲು ಒಂದು ಲೇಯರ್ ಹರಳುಪ್ಪು ಅದರಮೇಲೆ ಒಂದು ಮುಷ್ಠಿಯಷ್ಟು ಕಣಿಲೆ ಅದರ ಮೇಲೆ  spread maaDi. ಪುನ: ಉಪ್ಪು. ಮಧ್ಯ ಮಧ್ಯ ಗಟ್ಟಿಯಾಗಿ ಒತ್ತ ಬೇಕು. ಹೀಗೆ ಪೂರ್ತಿ ಕಣಿಲೆಯ ಚೂರುಗಳನ್ನು ಯೂಸ್ ಮಾಡಿದ ಮೇಲೆ ಕೊನೆಯಲ್ಲಿ ಎರಡು ಲೇಯರ್ ಉಪ್ಪು ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿ. ಎರಡು ಮೂರು ದಿನದಲ್ಲಿ ಉಪ್ಪು ದ್ರವರೂಪ ಪಡೆದುಕೊಂಡುರಿತ್ತೆ. ಇದು ಮೂರು ನಾಲ್ಕು ವರ್ಷ ಇಡಬಹುದು. ಉಪಯೋಗ ಮಾಡುವಾಗ ಸ್ವಚ್ಛ ನೀರಲ್ಲಿ ಹಾಕಿ ಚೆನ್ನಾಗಿ ತೊಳೆದು, ಬಳಸಿ. ನಾನು ಉಪ್ಪಿಗೆ ಹಾಕಿಟ್ಟ ಕಣಿಲೆಯನ್ನು ಮೂರು ನಾಲ್ಕು ಗಂಟೆ ನೀರಿನಲ್ಲಿ ಇಟ್ಟು ಉಪಯೋಗಿಸುತ್ತೇನೆ. ರುಚಿ ನೋಡಿ ಉಪ್ಪು ಬೆರೆಸಿ.

ಇದನ್ನು ನಾವು ಜಜ್ಜಿ ನೀರಲ್ಲಿ ಹಾಕಿಟ್ಟು, ಇಂಗು, ಮೆಣಸಿನಪುಡಿ ಹಚ್ಚಿಟ್ಟು ಕರಿಯುವ ಟೈಮ್ ಗೆ ಅಕ್ಕಿ ಹಿಟ್ಟಲ್ಲಿ ಹೊರಳಾಡಿಸುತ್ತೇವೆ. ಮತ್ತು ಸಾನ್ನಾ ಪೋಳೊ ಎಂಬ ಖಾರದ ದೋಸೆ ಕೂಡ ಮಾಡುತ್ತೇವೆ. ಅಕ್ಕಿ ಯನ್ನು ಅರ್ಧ ಗಂಟೆ ನೆನೆಹಾಕಿ. ಕಾಯಿ ತುರಿ, ಕೆಂಪು ಮೆಣಸು, ಹುಣಸೆ ಹುಳಿ, ಇಂಗನ್ನು ನುಣ್ಣಗೆ ರುಬ್ಬಿ ಇದಕ್ಕೆ ನೆನೆಸಿದ ಅಕ್ಕಿಯನ್ನು ಹಾಕಿ ತರಿತರಿಯಾಗಿ ರುಬ್ಬಿ. ಇದಕ್ಕೆ ಸಣ್ಣಕ್ಕೆ ಕೊಚ್ಚಿದ ಕಣಿಲೆಯನ್ನು ಹಾಕಿ, ದೋಸೆ ಕಾವಲಿಯ ಮೇಲೆ ತಟ್ಟಿ ಅಥವಾ ದೋಸೆ ಹುಯ್ಯಿರಿ. ದಾಲಿ ತೊವ್ವೆ ಜತೆ ಸಖತ್deadly  ಕಾಂಬಿನೇಷನ್, ಮಾಲವಿಕಳ ಪ್ರಕಾರ

ಕಣಿಲೆಯಲ್ಲಿ ಪೌಷ್ಟಿಕಾಂಶ ಇದೆಯಾ ಗೊತ್ತಿಲ್ಲ. ಸಯಾನಿನ್ ಎಂಬ ವಿಷ ಪದಾರ್ಥ ಇರುವುದರಿಂದ ಮತ್ತು ಇದರಿಂದ ಅದಕ್ಕೆ ಕಹಿ ರುಚಿ ಬರುವುದರಿಂದ, ಅದನ್ನು ಮೂರು ದಿನ ನೀರಲ್ಲಿ ಹಾಕಿಡಲೇ ಬೇಕು. (ಆಹ್ the stuffs we Konkanis eat!!!) ದಿನಾ ನೀರು ಬದಲಾಯಿಸಬೇಕು. ಮೂರು ದಿನಗಳನಂತರ, ಗಟ್ಟಿ ಮುಚ್ಚಳದ ಡಬ್ಬಿಯಲ್ಲಿ ಹಾಕಿಟ್ಟು ಫ್ರಿಜ್ ನಲ್ಲಿ ಸಹಾ ಇಡಬಹುದು. ಸಧ್ಯಕ್ಕಂತೂ ಮನೆಯಲ್ಲಿ ಮಾಡುತ್ತೇನೆ. ಬಹುಶ: ನನ್ನ ಜತೆ ಇದು ಕೊನೆಗೊಳ್ಳುತ್ತದೆ ಅನ್ನಿಸುತ್ತೆ. ಮಕ್ಕಳಿಗಿದಿಷ್ಟ ಆದರೂ ಮನೆಯಲ್ಲಿ ಮಾಡಿ ತಿನ್ನುವುದು ನನಗೆ doubtu ಮಾರಾಯ್ರೆ..:-) ವಾಸನೆ ವಾಸನೆ ಎನ್ನುತ್ತಲೇ ಗುಳುಂ ಮಾಡುತ್ತಾರೆ. ನಮ್ಮ ಅಮ್ಮ ಹಾಗೂ ನನ್ನ ತಮ್ಮ ಪಾಂಡುವಿನ ಹೆಂಡತಿ ಪದ್ಮಳಿಗೆ ಇದು ಇಷ್ಟ. ಬೆಳಗಾವಿಯಲ್ಲಂತೂ ರಾಶಿ ಕಣಿಲೆ ಮಾರುವವರನ್ನು ಮಾರುಕಟ್ಟೆಯಲ್ಲಿ ನೋಡಬಹುದು. ಆದರೆ ಮನೆಗೆ ತಂದರೆ ಅವನು ಮತ್ತು ನನ್ನ ತಂದೆ ವಾಸನೆ ವಾಸನೆ ಎಂದು ಅದನ್ನು ಮನೆಗೆ ತರಲು ಬಿಡುವುದಿಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ esp ಮಂಗಳೂರು ಸ್ಟೊರ್ಸ್ ನಲ್ಲಿ ರೆಡಿ ಟು ಈಟ್ ಪದಾರ್ಥಗಳು ದೊರೆಯುತ್ತವೆ.

ನಿಜ ಹೇಳಬೇಕೆಂದರೆ ಇದು extinct ಆಗ್ತಾ ಇರುವ forest produce ಅಂತ ಪರಿಗಣಿಸಿ ಇದರ ಕಟಾವು ನಿಷೇಧಿಸಲಾಗಿದೆ. ಆದರೂ ಮಾರುಕಟ್ಟೆಯಲ್ಲಿ ಇದು ಧಾರಾಳವಾಗಿ ಲಭ್ಯ ಮತ್ತು what are konkanis without ಕಣಿಲೆ, ಐ ಸೇ???:-) ತೀರ್ಥಹಳ್ಳಿ ಯಲ್ಲಿ ಸೈಕಲ್ ಮೇಲೆ ರಾಶಿ ರಾಶಿ ಕಣಿಲೆಗಳನ್ನು ಹೇರಿ ಮಾರಲಿಕ್ಕೆ ಕೊಂಡು ಹೋಗುವುದನ್ನು ಕಂಡಿದ್ದೇನೆ.

ಕಣಿಲೆ ಗೆ ಕಳಲೆ ಅಂತಲೂ ಹೇಳುತ್ತಾರೆ. ನನ್ನ ಪ್ರೆಂಡ್ (ದಿ) ವಿನಿತಾ tender bamboo shoots and jack-fruit seed curry ಅಂತ ಫೆಮಿನಾ ಮ್ಯಾಗಝಿನ್ ಗೆ ಕಳುಹಿಸಿ ಅದು ಪ್ರಕಟವಾಗಿ ಅವಳ ಗಂಡ ಅವಳನ್ನು ತಮಾಷೆ ಮಾಡಿ ಗೋಳು ಹೊಯ್ದುಕೊಂಡದ್ದು ಈಗಲೂ ನಿನ್ನೆ ಮೊನ್ನೆಯ ತರಹ ನೆನಪು. ಆಕೆ ದೈವಾಧೀನಳಾಗಿ 23 ವರ್ಷಗಳೇ ಕಳೆದುಹೋದವು. ಈಗಲೂ ಕಣಿಲೆ ಪದಾರ್ಥ ಮಾಡಿದಾಗಲೆಲ್ಲ ಆಕೆಯನ್ನು ನೆನಸಿಕೊಳ್ಳುತ್ತೇನೆ.

from the cradle to the cremation Bamboo is an intrinsic part of our lives. ತೊಟ್ಟಿಲು, ಸೌದೆ, ಗೃಹೋಪಯೋಗಿ ವಸ್ತುಗಳು, ಮನೆ ನಿರ್ಮಾಣದಲ್ಲಿ, ಅಲಂಕಾರಿಕ ಸಾಮಗ್ರಿ, ಕೊನೆಗೆ ಚಟ್ಟಕ್ಕೂ -ಬಹುಪಯೋಗಿ ಈ ಬಿದಿರು.

ಒಂದು ಪುಟ್ಟ ಕೊಂಕಣಿ ಕತೆ ನನ್ನ ಅಜ್ಜಿ (ತಂದೆಯ ತಾಯಿ) ಹೇಳಿದ್ದು
ಒಮ್ಮೆ ಅಜ್ಜಿ ತನ್ನ ಮೊಮ್ಮಗನಿಗೆ ಬಿಸಿ ಬಿಸಿ ಗಂಜಿ ಉಣ್ಣಲಿಕ್ಕೆ ಇಕ್ಕಿದಳಂತೆ. ಮೊಮ್ಮಗ ಬಿಸಿ ಗಂಜಿಗೆ ಕೈ ಹಾಕಿ, ಕೈ ಸುಟ್ಟು 'ಹಾ! ಅಜ್ಜಿ ಇಷ್ಟು ಬಿಸಿ ಗಂಜಿಊಟ ಬಡಸಿದರೆ ನಾನು ಬೇಗ ಬೇಗ ಉಂಡು ತೋಟಕ್ಕೆ ಹೋಗುವುದು ಹೇಗೆ ಅಂತ ಸಿಟ್ಟಾದನಂತೆ. ಈ ಮೊಮ್ಮಗ ಮಹಾರಾಜನಿಗೆ ಕಣಿಲೆ ಎಂದ್ರೆ ವಿಶೇಷ ಪ್ರೀತಿ. ಅಜ್ಜಿ ಆತನಿಗೆ 'ಪುತ್ತಾ (ಮಗಾ) ನೀನು ಬಿದಿರಿನ ಹಿಂಡಿನಿಂದ ಕಣಿಲೆಯನ್ನು ಹೇಗೆ ತರುತ್ತಿಯಾ ಅಂತ ಕೇಳಿದಳು? ಅದಕ್ಕೆ ಮೊಮ್ಮಗ 'ಅಜ್ಜಿ, ಮೊದಲಿಗೆ ಬಿದಿರಿನ ಅಕ್ಕ ಪಕ್ಕ ಸುತ್ತಲಿರುವ ಮುಳ್ಳನ್ನು ನಿಧಾನವಾಗಿ ಸವರಿ ಆಮೇಲೆ ಕೈ ಹಾಕಿ ಕಣಿಲೆಯನ್ನು ಅಗೆದು ತೆಗೆಯುತ್ತೇನೆ ಅಂದನಂತೆ. ಅದಕ್ಕೆ ಅಜ್ಜಿ 'ಹಾಗೆಯೇ ಪುತ್ತಾ, ಬಿಸಿ ಗಂಜಿಯನ್ನು ತಟ್ಟೆಯಲ್ಲಿ ಹಾಕಿದಾಗ ನೀನು ನಿಧಾನವಾಗಿ ತಟ್ಟೆಯ ಬದಿಗಿರುವ ಗಂಜಿಯನ್ನು ಮೊದಲು ಊಟ ಮಾಡಬೇಕು' ಅಂದರಂತೆ. ಒಳ್ಳೆ ಅಂತೆ ಕಂತೆ ಗಳ ಸಂತೆ........

ಇತ್ತೀಚಿಗೆ ಸಾವು ಸಂಭವಿಸಿದ ಮನೆಗೆ ಹೋಗಿದ್ದೆ. ಅಲ್ಲಿನ ಸಂಭಾಷಣೆ ಹೀಗಿತ್ತು,ಸೊಸೆ:  'ಮಾಯಿ, ನೀವು ಕೊಟ್ಟ ಕಣಿಲೆ ತಿಂದೆsss ತೀರಿಕೊಂಡರು'. ಮಾಯಿಗೆ ಶಾಕ್!! (ಮಾಯಿ = ಮಾಮಿ/Aunt) can u guess what she was trying to say?? ನಾನಂತೂ ಜೋರಾಗಿ ನಕ್ಕುಬಿಟ್ಟೆ. ಸಾರಿ. ಸೊಸೆಗೆ ತನ್ನ ಮಾತಿನಲ್ಲಿದ್ದ ತಪ್ಪಿನ ಅರಿವಾಯ್ತು ಸೊಸೆಯ ಮಾತಿನ ಅರ್ಥ ಏನಿತ್ತೆಂದರೆ,' ಸಾಯೋ ಎರಡು ದಿನ ಮುಂಚೆ, ಈ ಸಲ ಕಣಿಲೆ ತಿನ್ನಲೇ ಇಲ್ಲ ಅಂತ ಹೇಳಿದ್ದಳು ಆಕೆ ಯ 75 ರ ಅತ್ತೆ' ಈ ಮಾಯಿ ತಂದ ಕಣಿಲೆ ತಿಂದು , ಎಂಜಾಯಿಸಿ, ಸಂತೃಪ್ತರಾಗಿ ಮರುದಿನ ಹೃದಯಘಾತಕ್ಕೆ ಒಳಗಾಗಿ ತೀರಿಕೊಂಡಿದ್ದರು ಅತ್ತೆ. ಸಾಯುವ ಮುನ್ನ ಅವರ ಕೊನೆಯ ಆಸೆಯಾದ ಕಣಿಲೆ ತಿನ್ನಲು ಸಿಕ್ಕಿದ್ದು ಸಂತಸ ಅಂತ ಹೇಳ ಹೊರಟಿದ್ದು ಈ ಮೀನಿಂಗ್ ಬಂತು ಅಷ್ಟೆ.........:-)

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಮರಕೆಸುವಿನ ಎಲೆಯ ಫೋಡಿ in the following link
http://malathisanchiyinda.blogspot.in/2011/07/blog-post_15.html

:-)


6 comments:

  1. Wow malathi! Kanileyashte ruchigattaada lekhana.. after a long long time, got to read your writeups. Nice! Yeh dil maange more.. neevu maadida kanile padartha + articles!! Jai Ho!

    ReplyDelete
  2. Very very complex recipes Malathi!

    ReplyDelete
  3. Mal Kalale tinnokke nanu nimmallige bega hajaragtini. Enjoyed reading. Veda

    ReplyDelete
  4. ಶಿವಮೂರ್ತಿ, ಬೆಂಗಳೂರುSeptember 16, 2013 at 5:29 PM

    ಕಳಲೆ ವೈವಿಧ್ಯಗಳನ್ನು ನೋಡಿ ಅಚ್ಚರಿಯಾಯಿತು. ಒಂದೇ ಬೇಜಾರು ಅಂದ್ರೆ ಇಷ್ಟೆಲ್ಲಾ ನಿಮ್ಮ ಜ್ನಾನ, ಅನುಭವ, ಆಸಕ್ತಿಗಳನ್ನು ಅಮ್ಮಂದಿರು ನಿಮ್ಮ ಮುಂದಿನ ತಲೆಮಾರಿಗೆ ದಾಟಿಸುತ್ತೀರೋ ಇಲ್ಲವೋ ಅಂತ! ಹೆಚ್ಚಿನ ಕಡೆ ಅದು ಇಲ್ಲಿಗೇ ಕೊನೆ ಆಗುತ್ತದೆ. ನಾ ಏನು ಹೇಳುತ್ತಿದ್ದೇನೆ ಅಂತ ಗೊತ್ತಾಯಿತಲ್ಲ ?

    ReplyDelete
  5. This comment has been removed by the author.

    ReplyDelete
  6. Once u get the hang of preparing the kanile dishes you would not find it complex, Radhika.......
    thanks Jyothi, Veda
    Shivamurthy yavare houdu gottaytu. hEgoo eega readymade/ athvaa ready to use zamaana....irlee iddaShTu samaya enjoy maaDodu tale kedisikoLLade..:-)
    thank you for reading and commenting
    malathi S

    ReplyDelete