October 19, 2011

ಒಂದು ಸಾವಿನ ಸುತ್ತ

ಆಫಿಸ್ ಗೆ ಆ ದಿನ ಸ್ವಲ್ಪ ಲೇಟ್ ಆಗಿ ಹೊರಟಿದ್ದೆ. ರಾಜಾಜಿನಗರದಿಂದ ಜಯನಗರ ಆಫಿಸ್ ಗೆ ಕೆಲವು ಮುಖ್ಯ ಫೈಲ್ ಗಳನ್ನು ಒಯ್ಯಲಿಕಿತ್ತು. ಡಿಸೆಂಬರ್ ತಿಂಗಳ ಒಂದು ಶುಕ್ರವಾರ. ಮೆಜಿಸ್ಟಿಕ್ ನಿಂದ ಜಯನಗರದ ಬಸ್ ನಲ್ಲಿ ನನಗೆ ಸೀಟ್ ಸಿಕ್ಕಿತು. ಬಸ್ ಹೊರಡ್ತಿರಬೇಕಾದ್ರೆ ಒಬ್ಬ ಹೆಂಗಸು ಓಡಿ ಬಂದು ಹತ್ತಿದಳು. ಶುಕ್ರವಾರದ ಪೂಜೆ ಮುಗಿಸಿ ಕೆನ್ನೆಗೆ ಧಾರಾಳವಾಗಿ ಹಚ್ಚಿದ ಅರಿಸಿನ, ತಲೆಗೆ ಮುಡಿದ ಮಲ್ಲಿಗೆ ಹಾರ, ಉಟ್ಟಿಕೊಂಡ ಸಿಲ್ಕ್-ಕೊಟನ್ ಸಿರೆ. ಅದರ ಬಣ್ಣ ನನಗೆ ತುಂಬ ಇಷ್ಟ ಆಗಿತ್ತು. ಬಸ್ಸು ಹೊರಟ ಮೇಲೆ ನನ್ನ ಪಕ್ಕದಲ್ಲಿದ ಹೆಂಗಸು ಕಿಟಕಿ ಬಾಗಿಲು ಹಾಕ್ಕೊಂಡಳು. ನನಗೆ ಚಳಿ-ಮಳೆ ಸೆಖೆ ಹೇಗಿದ್ದರೂ ಕಿಟಕಿಯಿಂದ ಗಾಳಿ ಬರಬೇಕು. ಪಕ್ಕದ ಸಹಯಾತ್ರಿ ಕಿವಿಯಲ್ಲಿ ಹತ್ತಿ ಹಾಕಿಕೊಂಡು ಆ ಮೇಲೆ ಸ್ಕಾರ್ಫ್ ಕೂಡ ಕಟ್ಟಿಕೊಂಡರು. ಕೊರ್ಪೋರೇಶನ್ ಸಿಗ್ನಲ್ ಸ್ಟಾಪ್ ನಲ್ಲಿ ಕೆನ್ನೆಗೆ ಢಾಳಾಗಿ ಅರಿಸಿನ ಹಚ್ಚಿದ ಹೆಂಗಸು ಇಳಿದು ಬೇರೆ ಬಸ್ ಸ್ಟಾಪ್ ಗೆ ಹೋಗಲು ಸಿಗ್ನಲ್ ಬಳಿ ನಿಂತರು. ಹಿಂದು ಗಡೆ ಸೀರೆ ಉಟ್ಟಿದ್ದು ಸ್ವಲ್ಪ ಮೇಲಾಗಿ ಒಳ ಲಂಗ ಕಾಣಿಸುತ್ತಿತ್ತು. ಸವೆದ ಹೋದ ಚಪ್ಪಲಿ,  ಕಾಲಿನ ಬೆರಳುಗಳಿಗೆ ಹಚ್ಚಿದ ಮರೂನ್ ಕಲರ್  ಬಣ್ಣ, ಕಪ್ಪಾಗಿದ್ದ ಕಾಲುಂಗುರ, ವ್ಯಾನಿಟಿ ಬ್ಯಾಗ್ ನ ಒಂದು ಹ್ಯಾಂಡಲ್ ತುಂಡಾಗಲಿಕ್ಕೆ ಬಂದಿದ್ದು, ಅದಕ್ಕೆ ಹಾಕಿದ ಸೇಪ್ಟೀ ಪಿನ್, ನೀರಿನ ಬಾಟಲಿ, ಊಟದ ಡಬ್ಬಿಯಿಂದ ಉಬ್ಬಿದ ಬ್ಯಾಗ ನೋಡುತ್ತಿದ ಹಾಗೆ, ರಸ್ತೆ ಖಾಲಿಇದ್ದುದರಿಂದ, ಹಾಗೂ ರಸ್ತೆಯಲ್ಲಿನ ತಿರುವಿನಿಂದ ಆ ಕಡೆಯಿಂದ ಬರುವ ಬಸ್/ವಾಹನಗಳ ಬಗ್ಗೆ ಗಮನ ನೀಡದೆ ಆಕೆ ರಸ್ತೆ ಕ್ರಾಸ್ ಮಾಡಿದರು. ರಸ್ತೆ ಆ ಅಂಚು ತಲುಪುವಷ್ಟರಲ್ಲಿ ರಭಸದಿಂದ ಬಂದ ಬಸ್ ಆಕೆಯ ಪಕ್ಕೆಗೆ ಬಡಿದ ರಭ್ಸಕ್ಕೆ ಆಕೆ ಅಷ್ಟು ದೂರ ಹಾರಿ ಆಕೆಯ ತಲೆ ಪೇವ್ ಮೆಂಟ್ ಗೆ ಬಡಿದು, ಆಕೆಯ ತಲೆ ತಿರುಚಿಕೊಂಡ ರೀತಿಯಲ್ಲೆ ಆಕೆಯ ಪ್ರಾಣಪಕ್ಷಿ ಹಾರಿದ್ದು ಗೊತ್ತಾಗುತ್ತಿತ್ತು. ಒಂದು ಕ್ಷಣದಲ್ಲಿ ಅಷ್ಟು ನಡೆದು, ಪ್ರತಿಕ್ರಿಯುಸುವುದಕ್ಕೂ ಶಾಕ್ .ಈ ದೃಶ್ಯ ನೋಡಿದ ಬಸ್ಸ ನಲ್ಲಿರುವವರೆಲ್ಲರೂ , ’ತ್ಚು ತ್ಚು, ಏನನ್ಯಾಯ, ಸ್ವಲ್ಪ ನೋಡಿ ಕೊಂಡು ಹೋಗಬಹುದಿತ್ತು’, ಪಾಪ , ಚಿಕ್ಕ ಪ್ರಾಯ, ’ಮುತ್ತೈದೆ ಸಾವು’ ಮುಂತಾದ ಮಾತುಗಳು ಕೇಳಿಸಿದವು.  ’ಸಿಗ್ನಲ್ ಸ್ಟಾಪ್ ನಲ್ಲಿ ಬಾಗಿಲು ಯಾಕಾದರೂ ಓಪನ್ ಮಾಡ್ತಾರೋ’ ’ಪಾಪ, ಯಾರ ಮನೆ ಹೆಣ್ಣು ಮಗಳೋ’ ಅಂದದ್ದು ಕೇಳಿಸಿತು. ನಾನು ಕಿಟಕಿಯಿಂದ ಇನ್ನೂ ಆ ಹೆಂಗಸನ್ನೆ ನೋಡುತ್ತಿದ್ದೆ...ಚಿಲ್ಲಾಪಿಲ್ಲಿಯಾಗಿ ಬಿದ್ದ ಆಕೆಯ ಬ್ಯಾಗ್, ಕಳಚಿಹೋದ ಆಕೆಯ ಚಪ್ಪಲಿ, ಪೋಲಿಸ್ ಬಂದು, ವಾಕಿ-ಟಾಕಿಯಲ್ಲಿ ಮಾತಾಡಿದ್ದು, ಅಲ್ಲೆ ಇದ್ದ ಜನ ಅಲ್ಲಿ ಸುತ್ತು ವರೆದಿದ್ದು, ರಸ್ತೆ ಮೇಲಿನಿಂದ ಆಕೆಯ ಕಾಲನ್ನು ಪೇವ್ ಮೆಂಟ ಮೇಲೆ ಇಟ್ಟಿದ್ದು, ಯಾರೋ ಒಬ್ಬರು ನೀರು ಸಿಂಪಡಿಸಿದ್ದು ನೋಡ್ತಿದ್ದ ಹಾಗೆ ನಮ್ಮ ಬಸ್ ಮುಂದಕ್ಕೋಡಿತು. ನನ್ನ ಕೈ ನಲ್ಲಿ ತಣ್ಣಗಿನ ಕೈ ಯೊಂದು ಸೇರಿಕೊಂಡಾಗ ಎಚ್ಚೆತ್ತೆ. ಪಕ್ಕದ ಹೆಂಗಸು ಶಾಕ್ ಆಗಿ ಮಾತು ಬರದೆ, ಕಣ್ಣಲಿ ಗಾಬರಿ ಕಣ್ಣೀರು , ಆಗಲೆ ನಾನು ಪೂರ್ತಿ ಅವರ ಕಡೆ ಗಮನ ಕೊಟ್ಟಿದ್ದು. ಬಸುರಿ ಹೆಂಗಸು. ’its oks its ok ಅಂತ ಆಕೆಯ ಕೈ ಯನ್ನು ಅದುಮಿ ನನ್ನ ಕೈ ನಲ್ಲೇ ಇರಲು ಬಿಟ್ಟೆ.
ಪುನ: ನನ್ನ ಮನಸ್ಸು ಕ್ರಾಸ್ ಮಾಡಿದ ಹೆಂಗಸನ್ನು ನೆನಸಿಲಿಕ್ಕೆ ಶುರು ಮಾಡಿತು
ಬೆಳಿಗ್ಗೆ ಎದ್ದು ಗಂಡನಿಗೆ , ’ರೀ, ಹಾಲು ತರುವಾಗ ಎರಡು ಮೊಳ ಮಲ್ಲಿಗೆ ಹೂ ತನ್ನಿ, ಇವತ್ತು ಶುಕ್ರವಾರ’ ಅಂದಿರ ಬಹುದೆ? ಅಥವ ತಲೆ ಕೆರೆದುಕೊಳ್ಳುತ್ತ ಹಾಲು ತಂದು, ಹೂ ತರಲು ಮರೆತ ಗಂಡನಿಗೆ, ’ಥೂ ಒಂದು ಕೆಲಸ ನೆಟ್ಟಗೆ ಮಾಡಕ್ಕೆ ಬರಲ್ಲ ಅಂತ ಸಿಟ್ಟು ಮಾಡಿಕೊಂಡಿದ್ದು, ಆತ ಪುನ: ಹೋಗಿ ಹೂ ತೆಗೆದುಕೊಂಡು ಬಂದಿರ ಬಹುದೆ? ಅಥವ ಬೆಳಿಗ್ಗೆ ಮನೆ ಯೆದುರಿಗೆ ನೀರು ಹಾಕಿ ರಂಗೋಲಿ ಬಿಡಿಸು ವಾಗ ಹೂವಿನವನಿಂದ ಹೂ ತೆಗೆದುಕೊಂಡಿರಬಹುದೆ? ಪೂಜೆ ಎಲ್ಲ ಮುಗಿಸಿ, ತಿಂಡಿ-ಟಿಫನ್ ಕೆರಿಯರ್ ರೆಡಿ ಮಾಡಿ, ಮಗನಿಗೆ ಶಾಲೆಗೆ ಹೊರಡಿಸಿ ಬರುವಾಗ ಆಫಿಸ್ ಗೆ ಲೇಟಾಗಿರ ಬಹುದೆ?
ಆ ಸೀರೆ ಗೌರಿ ಹಬ್ಬಕ್ಕೆ ಅಮ್ಮ ಕೊಡಿಸಿದ್ದು. ಮೊದಲು ಸಲ ಉಟ್ಟಿಕೊಂಡು ಆಫಿಸ್ ಗೆ ಹೋದಾಗ, ಗೆಳತಿಯರು ’ಈ ಸೀರೆ ನಿನಗೆ ತುಂಬ ಒಪ್ಪುತ್ತೆ’ ಅಂದಿರ ಬಹುದೆ?
ಗಂಡ ಹೆಂಡತಿ ಮಧ್ಯ ಜಗಳವಾಗಿ, ಇಬ್ಬರೂ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿ ಇಟ್ಟುಕೊಂಡಿದ್ದರೆ, ಆಕೆಯ ಐಡೆಂಟಿಫಿಕೇಶನ್ ಸಿಗದೆ ಸುಮ್ಮನೆ ಆಕೆ ಶವಾಗಾರದಲ್ಲಿ, ಬೆಳಿಗ್ಗೆ ಯಾರದ್ದೋ ಹೆಂಡತಿ, ಅಮ್ಮ, ಅಕ್ಕ, ತಂಗಿ, ಸ್ನೇಹಿತೆಯಾದವಳು ಈಗ ಕೇವಲ ’ಬಾಡಿ’ (body) ಯಾಗಿ ಉಳಿಯುವವಳೆ.
ಅಮ್ಮ ಸಂಜೆ ಮನೆಗೆ ಬರದೆ ಇದ್ದು, ಆಕೆಯನ್ನು ಕಾಯುತ್ತ ಆಕೆಯ ಮಗ ’ನಿನ್ನೆ ಅಮ್ಮ ನಿಗೆ ನಾನು ಬೇಗ ಬೇಗ ಹೋಮ್ ವರ್ಕ್ ಮಾಡದೆ, ಸಿಟ್ಟು ಬರಿಸಿದ್ದರಿಂದ’ ಅಮ್ಮ ನನ್ನ ಮೇಲೆ ಸಿಟ್ಟು ಮಾಡಿಕೊಂಡು ಇನ್ನೂ ಬಂದಿಲ್ಲವೇ ಅಂದು ಕೊಳ್ಳಬಹುದೇ?
’ಇವಳ ಸಿಟ್ಟು ಯಾಕೋ ದಿನೇ ದಿನೇ ಹೆಚ್ಚಾಗಿ, ಯಾವತ್ತಿನ ಹಾಗೆ ತವರು ಮನೆಗೆ ಹೋಗಿ ಇದ್ದು ಬಿಟ್ಟಿದ್ದಾಳೆ’ ಅಂತ ಗಂಡ ಸುಮ್ಮನಾಗಿ ಬಿಟ್ಟರೆ?? ಅಥವ ’ಪಾಪ ನನ್ನ ಹಾಗೆ ದುಡಿಯುವ ಜೀವ, ಸ್ವಲ್ಪ ಕೋಪ ಮಾಡಿಕೊಂಡರೆ ಏನಡ್ಡಿಯಿಲ್ಲ’ ಇವತ್ತು ಶಾಂತಿಸಾಗರ ದಿಂದ ಆಕೆಯ ಇಷ್ಟದ ಕಾಶ್ಮೀರಿ ಪಾಲಾವ್ ತಂಡಿಟ್ಟು ಸರ್ ಪ್ರೈಸ್ ಕೊಡಲು ಕಾಯುತ್ತಿರಬಹುದೇ
ಆಕೆ ಮೊನ್ನೆ ಭಾನುವಾರ ನನ್ನ ತರಹ ನೆಲದ ಮೇಲೆ , ಮಂಡಿ ಬಗ್ಗಿಸಿ ಕೂತು, ಅದರ ಮೇಲೆ ಗದ್ದ ಇಟ್ಟು, ಕಾಲಿನ ಉಗುರುಗಳಿಗೆ ನೈಲ್ ಪಾಲಿಷ್ ಹಚ್ಚಿ ಅಲ್ಲೇ ಕೂತು ನೋಡುತ್ತಿದ್ದ ಮಗ ನನ್ನು ನೋಡಿ ’ಏ ಫೂ ಅಂತ ಗಾಳಿ ಹಾಕೋ, ಬೇಗ ಒಣಗುತ್ತೆ ಅಂದಿರ ಬಹುದೇ?
ಅಥವ ಮಧ್ಯಾಹ್ನದ ಊಟದ ನಂತರ ಮನೆಯವರೆಲ್ಲ ಮಲಗಿದ ಮೇಲೆ ಹೊರಗಡೆ ರೂಮಿನ ಟೀ ಪಾಯ್ ಮೇಲೆ ಕಾಲು ಚಾಚಿ ಉಗುರಿಗೆ ಬಣ್ಣ ಹಚ್ಚಿ ಅದು ಒಣಗುವಾಗ ಸುಧಾ ಅಥವ ತರಂಗ ಓದಿರಬಹುದೇ
ಹಾಸ್ಟಲ್ ನಲ್ಲಿರುವ ತಮ್ಮನಿಗೆ ’ಏ ಲವ್ ಗಿವ್ ಅಂತ ತಲೆ ಕೆಡಿಸ್ಕೋ, ಬೇಡ, ಪ್ರೀತಿ ಮಾಡಿದವರು ಯಾರೂ ಉದ್ದಾರವಾಗಿಲ್ಲ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸಿಕೋ, ಅಂತ ಪ್ರೀತಿಯಿಂದ ಬೈದಿರಬಹುದಾ?
ಬೆಂಗಳೂರಿನಲ್ಲೇ ಇರುವ ತಂಗಿಗೆ, ಹೇ ಸಂಡೆ ಮನೆಗೆ ಬಾ, ಇಲ್ಲೇ ಊಟ ಮಾಡಿ, ಶಿವರಾಜಕುಮಾರ್ ಫಿಲ್ಮ್ ನೋಡುವ, ಬಾ’ ಅಂತ ಆಮಂತ್ರಿಸಿರಬಹುದಾ?
ಅಥವ ಪರ ಊರಿನಲ್ಲಿರುವ ಅಣ್ಣನಿಗೆ ’ಹೋ ಮಹಾ ಹೆಂಡ್ತಿ ಗುಲಾಮ, ಅಮ್ಮ ನ ಬಳಿ ರೂಡ್ ಆಗಿ ಮಾತಾಡಿದ್ದಿಯಂತೆ’ ಅಂತ ಸಿಟ್ಟಿನಿಂದ ಫೋನ್ ಕುಕ್ಕಿರಬಹುದಾ?
’ನನ್ನ ಸೊಸೆ ಸ್ವಲ್ಪ ಮುಂಗೋಪಿ, ಆದರೂ ಒಳ್ಳೆಯವಳು, ಈ  ಭಾನುವಾರ ಆಕೆಯ ತಲೆಗೆ ಬಿಸಿ ಎಣ್ನೆ ಹಚ್ಚಿ ಅಕೆಗೆ ಎಣ್ಣೆನೀರು ಹಾಕಬೇಕು’ ಅಂತ ಆಕೆಯ ಅತ್ತೆ ಅವಳನ್ನು ನೆನೆಸಿಕೊಂಡಿರಬಹುದೇ?
ಬರುವ ಭಾನುವಾರ ಫ್ರೆಂಡ್ಸ್ ಜತೆ ಶಾಪಿಂಗ್ ಹೋಗಿ ಹೊಸ ವ್ಯಾನಿಟಿ ಬ್ಯಾಗ್ ತರುವ ಪ್ಲ್ಯಾನ್ ಹಾಕಿಕೊಂಡಿರಬಹುದಾ??
’ಸ್ವಲ್ಪ ದಾರಿ ಬಿಡಿ ನಾನು ಇಳಿಯುವ ಸ್ಟಾಪ್ ಬಂತು, ಅಂತಪಕ್ಕದಲ್ಲಿ ಕೂತಿರುವ ಹೆಂಗಸು ಹೇಳಿದಾಗ ನನ್ನ ಯೋಚನೆಗಳಿಗೆ ಬ್ರೇಕ್.’ ಅಕೆಯೆ ಪುನ: ನಿಮ್ಮ ಕೈ ತುಂಬ ಬಿಸಿಯಿದೆ’ ಜ್ವರ ಬಂದಿದೆಯ ಅಂತ ಕೇಳಿದಾಗ ’ಇಲ್ಲ, ನಾನಿರುವುದೇ’ ಹಾಗೆ ಅಂದೆ, ತಕ್ಷಣ ನಿಹಾರಿಕಳ ಬೆಳಿಗ್ಗೆ ಹೇಳಿದ್ದ ಮಾತು ನೆನೆಪಾಯಿತು. ನಿಹಾರಿಕ ನಿಗೆ ಟಚ್ ಥಿರೆಪಿ ಬೇಕು, ಅಂದರೆ hug ಮಾಡುವುದು, ಸುಮ್ಮನೆ ಮೈ ಮೇಲೆ ಬೀಳುವುದು ಇಂತಹುದನ್ನು ಮಾಡುತ್ತಿರುತ್ತಾಳೆ.ಆ ದಿನ ನಾನು ದೋಸೆ ಹುಯ್ಯುತ್ತಿರುವಾಗ ಹಿಂದಿನಿಂದ ಅಪ್ಪಿಕೊಂಡು ’ಐ ಲವ್ ಯು ಮೊಮಿ’ ಅಂದು ಎಷ್ಟು ಬಿಸಿಯಾಗಿದಿಯಾ, ನಿನ್ನ ಹೊಟ್ಟೆಗೆ ಜಿಪ್ ಇದ್ದರೆ ನಾನು ನಿನ್ನ ಹೊಟ್ಟೆಯೊಳಗೆ ಹೋಗಿ ಕೂರುತ್ತಿದ್ದೆ, ಈ ಚಳಿಗಾಲದಲ್ಲಿ ,ಅಂದಾಗ ನಾನು ಕ್ಯಾಂ ಗರು (kangaroo) ನೆನಪಾಗಿ ನಕ್ಕಿದ್ದು ನೆನಪಿಗೆ ಬಂತು.
ಮುಂದಿನ ಸ್ಟಾಪ್ ನಂದೇ. ಆಫಿಸ್ ತಲುಪಿದ ಮೇಲೆ ಪುರುಸೊತ್ತಿಲ್ಲದ ಕೆಲಸಗಳು. ಸಂಜೆ ವಾಪಸು ಮನೆಗೆ ಬರುವಾಗ ಆ ಕ್ರಾಸ್ ಬಳಿ ಒಂದು ಕ್ಷಣ ಆಕೆಯ ನೆನಪಾಗಿ ಅಲ್ಲಿ ನೋಡಿದರೆ ಅಲ್ಲಿ ಬೆಳಿಗ್ಗೆ ನಡೆದ ಆಕ್ಸಿಡೆಂಟ್ ನ ಯಾವ ಕುರುಹೂ ಇರಲಿಲ್ಲ, ನಗುತ್ತ ಹೋಗುವ ಕಾಲೇಜು ಹುಡುಗರ ತಂಡವೊಂದು ಅಲ್ಲಿಂದ ಹಾದುಹೋಗುತ್ತಿತ್ತು. life just goes on...ಅಲ್ವಾ?


4 comments:

  1. ಮಾಲ್ತಕ್ಕಾ..

    ನೀವು "Life Just Goes On" ಅಂತ ಬರೆದಿದ್ರೂ.. ಓದಿ ತುಂಬಾ ಬೇಜಾರಾಗಾಯ್ತು. :(

    ನಿಹಾ ಅವರ ಹಗ್ಗಿಂಗ್ ಬಗ್ಗೆ ಬರೆದು ಬರಹದ ಮ್ಲಾನತೆ ಕಡಿಮೆ ಮಾಡಿದಕ್ಕೆ ಥ್ಯಾಂಕ್ಸ್.

    ಪ್ರೀತಿಯಿಂದ
    ಸಿಂಧು

    ReplyDelete
  2. ಗಡಿಬಿಡಿಯ ನಗರಗಳಲ್ಲಿ ಆಕ್ಸಿಡೆ೦ಟ್ ಗಳು ಸಾಮಾನ್ಯವಿರಬಹುದು ಆದರೂ.....ಎಷ್ಟು ಭಯ೦ಕರ ಅಲ್ವ? ಬೆಳಿಗ್ಗೆ ಮನೆಯಿ೦ದ ಹೋದವರು ಹಿ೦ತಿರುಗುವ ಖಾತ್ರಿಯೆ ಇಲ್ಲದ ಅನಿಶ್ಚಿತ ಬದುಕು.

    ReplyDelete